Tuesday, April 29, 2025

ಕೂಡ್ಲಿಗೆರೆ ಟಿವಿಎಸ್ ಫಾರಂನಲ್ಲಿ ಚಿರತೆ ಸಿಸಿ ಕ್ಯಾಮೆರಾದಲ್ಲಿ ಸೆರೆ

ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಗ್ರಾಮ ಸಮೀಪದ ಎಪಿಎಂಸಿ ಮಾಜಿ ಸದಸ್ಯೆ ಟಿ.ವಿ ಸುಜಾತರವರ ಟಿವಿಎಸ್ ಫಾರಂ ತೋಟದ ಮನೆಯಲ್ಲಿ ಚಿರತೆ ಪ್ರತ್ಯಕ್ಷವಾಗಿರುವ ದೃಶ್ಯ ಸೋಮವಾರ ರಾತ್ರಿ ಕಂಡು ಬಂದಿದೆ.
    ಭದ್ರಾವತಿ: ತಾಲೂಕಿನ ಕೂಡ್ಲಿಗೆರೆ ಗ್ರಾಮ ಸಮೀಪದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ) ಮಾಜಿ ಸದಸ್ಯೆ ಟಿ.ವಿ ಸುಜಾತ ಅವರ ಟಿವಿಎಸ್ ಫಾರಂ ತೋಟದ ಮನೆಯಲ್ಲಿ ಚಿರತೆ ಪ್ರತ್ಯಕ್ಷವಾಗಿರುವ ದೃಶ್ಯ ಸೋಮವಾರ ರಾತ್ರಿ ಕಂಡು ಬಂದಿದೆ.
    ರಾತ್ರಿ ೯.೩೦ರ ಸಮಯದಲ್ಲಿ ಅವರ ಸಾಕು ನಾಯಿಗಳು ಬೊಗಳಿದ ಕಾರಣ ಮನೆಯೊಳಗಿನಿಂದ ಬಾಗಿಲ ಬಳಿ ನಿಂತು ಗಮನಿಸಿದಾಗ ಮನೆಯ ಜಗಲಿಕಟ್ಟೆಯ ಮೇಲಿಂದ ಚಿರತೆ ಹಾದು ಹೋಗುವುದನ್ನು ಕಂಡು ಭಯಭೀತರಾಗಿದ್ದಾರೆ.      ಸುಜಾತರವರು ಕೋಡಿಹಳ್ಳಿ ಸತೀಶ್, ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜಣ್ಣ ಅವರಿಗೆ ಮಾಹಿತಿ ನೀಡಿ ಅವರನ್ನು ಕರೆಸಿ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಚಿರತೆ ನಾಯಿಗಳ ಬೇಟೆಗೆ ಮೂರ್‍ನಾಲ್ಕು ಬಾರಿ ಮನೆ ಸುತ್ತಾ ಓಡಾಡಿರುವ ದೃಶ್ಯ ಕಂಡು ಬಂದಿದೆ.
    ಅಲ್ಲದೆ ಕಳೆದ ಏ.೧೫ರ ಮಂಗಳವಾರ ಸಹ ಬಂದು ಹೋಗಿದೆ. ಎರಡು ನಾಯಿಗಳು ಮತ್ತು ಒಂದು ಬೆಕ್ಕು ನಾಪತ್ತೆಯಾಗಿದೆ. ಸಿಸಿ ಕ್ಯಾಮರಾದಲ್ಲಿ ನಾಯಿವೊಂದನ್ನು ಹಿಡಿದು ಓಡುವ ದೃಶ್ಯ ಕಂಡು ಬಂದಿದೆ. ವಿಷಯ ತಿಳಿದ ಅರಣ್ಯ ಇಲಾಖೆಯವರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಮನೆಯವರಿಗೆ ಚಿರತೆ ಸೆರೆ ಹಿಡಿಯಲು ಬೋನ್ ಇಡುವುದಾಗಿ ಹಾಗು ಯಾವುದಕ್ಕೂ ಮುಂಜಾಗ್ರತೆ ವಹಿಸುವಂತೆ ತಿಳಿಸಿದ್ದಾರೆಂದು ತಿಳಿದು ಬಂದಿದೆ. 

ಕನ್ನಡದ ತೇರು ಎಳೆಯಲು ಶಕ್ತಿಮೀರಿ ಶ್ರಮಿಸುವೆ

ತಾಲೂಕು ಕಸಾಪ ನೂತನ ಅಧ್ಯಕ್ಷರಾಗಿ ಎಂಪಿಎಂ ಹೆಚ್.ತಿಮ್ಮಪ್ಪ ಅಧಿಕಾರ ಸ್ವೀಕಾರ


ಭದ್ರಾವತಿ ತಾಲೂಕು ಕಸಾಪ ನೂತನ ಅಧ್ಯಕ್ಷರಾಗಿ ಎಂಪಿಎಂ ಹೆಚ್.ತಿಮ್ಮಪ್ಪ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಅಧ್ಯಕ್ಷ ಕೂಡ್ಲುಯಜ್ಞಯ್ಯ ಕಸಾಪ ಬಾವುಟ ಹಸ್ತಾಂತರಿಸಿದರು.
    ಭದ್ರಾವತಿ:  ಕನ್ನಡದ ತೇರು ಎಳೆಯಲು ಸದಾಕಾಲ ಶ್ರಮಿಸುತ್ತಿದ್ದು, ಪ್ರಸ್ತುತ ಜವಾಬ್ದಾರಿ ಹೆಚ್ಚಿರುವುದರಿಂದ ಮತ್ತಷ್ಟು ಆಸಕ್ತಿ ವಹಿಸಿ ಕನ್ನಡದ ಸೇವೆ ಮಾಡುವುದಾಗಿ ಎಂಪಿಎಂ ಕಾರ್ಖಾನೆ ನಿವೃತ್ತ ಕಾರ್ಮಿಕ ಮುಖಂಡ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷ ಎಚ್ ತಿಮ್ಮಪ್ಪ ಭರವಸೆ ವ್ಯಕ್ತಪಡಿಸಿದರು.  
    ಅವರು ನ್ಯೂಟೌನ್‌ನಲ್ಲಿರುವ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ನಡೆದ ಆಯವ್ಯಯ ಮಂಡನಾ ಸಭೆಯಲ್ಲಿ ನಿರ್ಗಮಿತ ಅಧ್ಯಕ್ಷ ಕೂಡ್ಲುಯಜ್ಞಯ್ಯ ಅವರಿಂದ ಅಧಿಕಾರ ಸ್ವೀಕರಿಸಿ ಮಾತನಾಡಿದರು.
  ೫ ವರ್ಷಗಳ ಅಧಿಕಾರದ ಅವಧಿಯನ್ನು ಒಡಂಬಡಿಕೆಯಂತೆ ಹಂಚಿಕೊಂಡಿದ್ದು, ೩ನೇ ಮತ್ತು ಕಡೇಯ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದೇನೆ. ಪರಿಷತ್‌ನಲ್ಲಿ ಹತ್ತಾರು ವರ್ಷಗಳಿಂದ ಸೇವೆ ಮಾಡಿಕೊಂಡು ಬಂದಿರುವ ನಾನು ಪ್ರಸ್ತುತ ಕಾರ್ಯದರ್ಶಿಯಾಗಿದ್ದು, ಇದೀಗ ಜಿಲ್ಲಾಧ್ಯಕ್ಷರು ನನ್ನನ್ನು ನೇಮಕಗೊಳಿಸಿದ್ದಾರೆ ಎಂದರು. 
    ಪ್ರಾಮಾಣಿಕವಾಗಿ ಯಾವುದೇ ಲೋಪದೋಷಗಳಿಲ್ಲದೆ ಎಲ್ಲರ ಸಹಕಾರ ಪಡೆದು ವಿಭಿನ್ನ ಕಾರ್ಯಕ್ರಮಗಳ ಮಾಡುವ ಮೂಲಕ ಮುಂದಿನ ದಿನಗಳಲ್ಲಿ ಪರಿಷತ್ ಕಾರ್ಯ ಚಟುವಟಿಕೆಗಳನ್ನು ಮತ್ತಷ್ಟು ಹೆಚ್ಚಿಸಲಾಗುವುದು. ಕನ್ನಡದ ಕೆಲಸಗಳಿಗೆ ಎಲ್ಲರ ಸಹಕಾರ ಬೇಕಾಗಿದೆ ಎಂದರು.
    ನಿರ್ಗಮಿತ ಅಧ್ಯಕ್ಷ ಕೂಡ್ಲುಯಜ್ಞಯ್ಯ ನೂತನ ಅಧ್ಯಕ್ಷರಿಗೆ ಕಸಾಪ ಬಾವುಟ ಹಸ್ತಾಂತರ ಮಾಡಿ ಮಾತನಾಡಿ, ನನ್ನ ಅಧಿಕಾರದ ಅವಧಿಯಲ್ಲಿ ಸರ್ವರೂ ನೀಡಿದ ಸಹಕಾರ ಅಮೂಲ್ಯವಾದದ್ದು. ಸದಾ ಕಾಲ ಪರಿಷತ್ ಕಾರ್ಯ ಚಟುವಟಿಕೆಗಳಿಗೆ ನನ್ನ ಬೆಂಬಲವಿರುತ್ತದೆ ಎಂದರು. 
    ಖಜಾಂಚಿ ಪ್ರಸನ್ನಕುಮಾರ್ ಲೆಕ್ಕಪತ್ರ ಮಂಡಿಸಿ ಅನುಮೋದನೆ ಪಡೆದರು. ತಿಮ್ಮಪ್ಪ ವರದಿ ಮಂಡಿಸಿದರು. ಸಭೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಸ್ವಾಮಿ, ಹೊಳೆಹೊನ್ನೂರು ಹೋಬಳಿ ಅಧ್ಯಕ್ಷ ಚೆನ್ನಪ್ಪ, ಮುಖಂಡರುಗಳಾದ ನಾಗೋಜಿರಾವ್, ಪ್ರಶಾಂತ್, ಕಮಲಾಕರ್, ಎಂ.ಎಸ್.ಸುಧಾಮಣಿ, ತಿಪ್ಪಮ್ಮ, ಪ್ರಕಾಶ್ ನೂತನ ಅಧ್ಯಕ್ಷರಿಗೆ ಶುಭ ಕೋರಿದರು. ಕಾರ್ಯದರ್ಶಿ ಎಂ.ಇ.ಜಗದೀಶ್ ನಿರೂಪಿಸಿ, ಪ್ರಸನ್ನಕುಮಾರ್ ಸ್ವಾಗತಿಸಿ, ಮೋಹನ್ ವಂದಿಸಿದರು.

ದೇವಸ್ಥಾನಗಳಿಗೆ ಮಹತ್ವದ ಸ್ಥಾನಮಾನಗಳಿವೆ, ಪುಣ್ಯದ ಕಾರ್ಯಗಳಲ್ಲಿ ಕೈಜೋಡಿಸಿ : ಶ್ರೀ ಸಾಯಿನಾಥ ಸ್ವಾಮೀಜಿ

ಭದ್ರಾವತಿ ನ್ಯೂ ಕಾಲೋನಿ (ಹುಡ್‌ಯಾರ್ಡ್ ಶೆಡ್) ಶ್ರೀ ಚೌಡೇಶ್ವರಿ ದೇವಿ ದೇವಸ್ಥಾನದ ನೂತನ ಗೋಪುರ ಉದ್ಘಾಟನೆ ಹಾಗು ಕಲಶ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಶಿವಮೊಗ್ಗ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸಾಯಿನಾಥ ಸ್ವಾಮೀಜಿ ಪಾಲ್ಗೊಂಡು ಭಕ್ತರಿಗೆ ಆಶೀರ್ವಚನ ನೀಡಿದರು. 
ಭದ್ರಾವತಿ : ವೈದಿಕರ ನೆರವಿನೊಂದಿಗೆ ಧಾರ್ಮಿಕ ಆಚರಣೆಗಳ ಮೂಲಕ ಭಕ್ತರು ತಮ್ಮ ಇಸ್ಟಾರ್ಥಗಳನ್ನು ದೇವರ ಬಳಿ ಪ್ರಾರ್ಥಿಸಲು ದೇವಾಲಯಗಳು ಸಹಕಾರಿಯಾಗಿವೆ. ಈ ಹಿನ್ನಲೆಯಲ್ಲಿ ದೇವಸ್ಥಾನಗಳಿಗೆ ಮಹತ್ವದ ಸ್ಥಾನಮಾನಗಳಿವೆ ಎಂದು ಶಿವಮೊಗ್ಗ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸಾಯಿನಾಥ ಸ್ವಾಮೀಜಿ ಹೇಳಿದರು. 
ಶ್ರೀಗಳು ಮಂಗಳವಾರ ನಗರದ ನ್ಯೂ ಕಾಲೋನಿ (ಹುಡ್‌ಯಾರ್ಡ್ ಶೆಡ್) ಶ್ರೀ ಚೌಡೇಶ್ವರಿ ದೇವಿ ದೇವಸ್ಥಾನದ ನೂತನ ಗೋಪುರ ಉದ್ಘಾಟನೆ ಹಾಗು ಕಲಶ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಕ್ತರಿಗೆ ಆಶೀರ್ವಚನ ನೀಡಿದರು. 
ದೇವಸ್ಥಾನಗಳು ಪುಣ್ಯದ ಸ್ಥಳ, ದೇವರ ಆರಾಧನೆಯ ಸ್ಥಳ. ಇದನ್ನು ನಾವುಗಳು ಅರಿತು ಪುಣ್ಯದ ಕಾರ್ಯಗಳಲ್ಲಿ ಕೈಜೋಡಿಸಬೇಕು. ಇಂತಹ ಧಾರ್ಮಿಕ ಆಚರಣೆಗಳು ಹೆಚ್ಚಾಗಿ ನಡೆಯಬೇಕು ಎಂದರು. 


ಭದ್ರಾವತಿ ನ್ಯೂ ಕಾಲೋನಿ (ಹುಡ್‌ಯಾರ್ಡ್ ಶೆಡ್) ಶ್ರೀ ಚೌಡೇಶ್ವರಿ ದೇವಿ ದೇವಸ್ಥಾನದ ನೂತನ ಗೋಪುರ ಉದ್ಘಾಟನೆ ಹಾಗು ಕಲಶ ಪ್ರತಿಷ್ಠಾಪನೆ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು. 
        ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಮುರುಗೇಶ್ ಸ್ವಾಮೀಜಿ ಉಪಸ್ಥಿತರಿದ್ದು, ಭಕ್ತರಿಗೆ ಆಶೀರ್ವದಿಸಿದರು. ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ ಪ್ರಾಂಶುಪಾಲರಾದ ಡಾ. ಹರಿಣಾಕ್ಷಿ, ದೇವಸ್ಥಾನ ಸೇವಾ ಸಮಿತಿ ಪದಾಧಿಕಾರಿಗಳು, ದಾನಿಗಳು, ಚುನಾಯಿತ ಪ್ರತಿನಿಧಿಗಳು, ಗಣ್ಯರು ಉಪಸ್ಥಿತರಿದ್ದರು.  
    ಗೋಪುರ ಉದ್ಘಾಟನೆ ಹಾಗು ಕಲಶ ಪ್ರತಿಷ್ಠಾಪನೆ ಅಂಗವಾಗಿ ಬೆಳಿಗ್ಗೆ ದೇವರಿಗೆ ಕಲಾತತ್ವ ಹೋಮ, ಅಭಿಷೇಕ, ಮಹಾಮಂಗಳಾರತಿ, ಶಿಖರ ಪ್ರತಿಷ್ಠೆ, ಅಧಿವಾಸ ಹೋಮ, ನವಕಲಶ ಸ್ಥಾಪನೆ ಕಾರ್ಯಕ್ರಮಗಳು ಜರುಗಿದವು.  
    ಸೇವಾಕರ್ತರು, ಸುರಗೀತೋಪು, ಜೆಪಿಎಸ್ ಕಾಲೋನಿ, ನ್ಯೂ ಕಾಲೋನಿ, ನ್ಯೂಟೌನ್, ಜನ್ನಾಪುರ, ಕಾಗದನಗರ, ಬಾಲಭಾರತಿ, ಬೆಣ್ಣೆಕೃಷ್ಣ ಸರ್ಕಲ್, ಆಂಜನೇಯ ಅಗ್ರಹಾರ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ ನಿವಾಸಿಗಳು ಪಾಲ್ಗೊಂಡಿದ್ದರು. 

Monday, April 28, 2025

ಲಯನ್ಸ್ ಪದಾಧಿಕಾರಿಗಳಿಗೆ ಜಿಲ್ಲಾ ಗವರ್ನರ್ ಅಭಿನಂದಿಸಿ ಸನ್ಮಾನ

ಭದ್ರಾವತಿ ಲಯನ್ಸ್ ಕ್ಲಬ್ ಪ್ರಸ್ತುತ ಪದಾಧಿಕಾರಿಗಳ ಅವಧಿ ಮುಕ್ತಾಯಗೊಳ್ಳತ್ತಿದ್ದು, ಈ ಹಿನ್ನಲೆಯಲ್ಲಿ ಲಯನ್ಸ್ ಜಿಲ್ಲಾ ಗವರ್ನರ್(೩೧೭-ಸಿ) ಮಹಮದ್ ಹನೀಫ್ ಪದಾಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಿದರು. 
    ಭದ್ರಾವತಿ : ನಗರದ ಲಯನ್ಸ್ ಕ್ಲಬ್ ಪ್ರಸ್ತುತ ಪದಾಧಿಕಾರಿಗಳ ಅವಧಿ ಮುಕ್ತಾಯಗೊಳ್ಳತ್ತಿದ್ದು, ಈ ಹಿನ್ನಲೆಯಲ್ಲಿ ಲಯನ್ಸ್ ಜಿಲ್ಲಾ ಗವರ್ನರ್(೩೧೭-ಸಿ) ಮಹಮದ್ ಹನೀಫ್ ಪದಾಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಿದರು. 
    ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಹಿನ್ನಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ರಾಮಮೂರ್ತಿ ನಾಯ್ಡು, ಕಾರ್ಯದರ್ಶಿ ಎನ್. ಶಿವಕುಮಾರ್ ಮತ್ತು ಖಜಾಂಚಿ ರಾಜ್‌ಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 
    ರಾಮಮೂರ್ತಿ ನಾಯ್ಡು ನೇತೃತ್ವದ ತಂಡ ಹಲವಾರು ಸೇವಾಕಾರ್ಯಗಳನ್ನು ಯಶಸ್ವಿಯಾಗಿ ನಡೆಸಿದ್ದು, ಎಲ್ಲರ ಮೆಚ್ಚಿಗೆಗೆ ಪಾತ್ರವಾಗಿದೆ. ಭವಿಷ್ಯದ ಕ್ಲಬ್ ಸದಸ್ಯರಿಗೆ ಮಾದರಿಯಾಗಿದೆ. 
    ಜಿಲ್ಲಾ ಗವರ್ನರ್ ಮಹಮದ್ ಹನೀಫ್, ಪ್ರಮುಖರಾದ ಬಿ. ದಿವಾಕರ ಶೆಟ್ಟಿ, ಬಿ.ಎಸ್ ಮಹೇಶ್ ಕುಮಾರ್, ಡಾ. ರವೀಂದ್ರನಾಥ ಕೋಠಿ, ಎಚ್.ಬಿ ನಾಗರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಪಹಲ್ಗಾಮ್ ಉಗ್ರರ ಕೃತ್ಯಕ್ಕೆ ಕ್ರೈಸ್ತರಿಂದ ಖಂಡನೆ : ಜಗದ್ಗುರು ಪೋಪ್ ಫ್ರಾನ್ಸಿಸ್, ಹತ್ಯೆಗೊಳಗಾದ ಪ್ರವಾಸಿಗರಿಗೆ ಸಂತಾಪ

ಭದ್ರಾವತಿಯಲ್ಲಿ ಅಖಿಲ ಭಾರತ ಕ್ರೈಸ್ತ ಮಹಾಸಭಾ ಹಾಗು ಸಂಯುಕ್ತ ಕ್ರೈಸ್ತ ಬಾಂಧವರಿಂದ ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ಕೃತ್ಯ ಖಂಡಿಸಿ ಹತ್ಯೆಗೊಳಗಾದ ಅಮಾಯಕ ಪ್ರವಾಸಿಗರಿಗೆ ಹಾಗೂ ನಿಧನ ಹೊಂದಿದ ಕ್ರೈಸ್ತ ಜಗದ್ಗುರುಗಳಾದ ಪೋಪ್ ಫ್ರಾನ್ಸಿಸ್‌ರವರಿಗೆ ಸಂತಾಪ ಸೂಚಿಸಲಾಯಿತು. 
    ಭದ್ರಾವತಿ: ಅಖಿಲ ಭಾರತ ಕ್ರೈಸ್ತ ಮಹಾಸಭಾ ಹಾಗು ಸಂಯುಕ್ತ ಕ್ರೈಸ್ತ ಬಾಂಧವರಿಂದ ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ಕೃತ್ಯ ಖಂಡಿಸಿ ಹತ್ಯೆಗೊಳಗಾದ ಅಮಾಯಕ ಪ್ರವಾಸಿಗರಿಗೆ ಹಾಗೂ ನಿಧನ ಹೊಂದಿದ ಕ್ರೈಸ್ತ ಜಗದ್ಗುರುಗಳಾದ ಪೋಪ್ ಫ್ರಾನ್ಸಿಸ್‌ರವರಿಗೆ ಸಂತಾಪ ಸೂಚಿಸಲಾಯಿತು. 
    ನಗರದ ಅಂಡರ್ ಬ್ರಿಡ್ಜ್, ಬಿ.ಎಚ್ ರಸ್ತೆ, ಡಾ. ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಕ್ರೈಸ್ತ ಬಾಂಧವರು ಮೇಣದ ಬತ್ತಿ ಹಚ್ಚಿ ಉಗ್ರರ ಕೃತ್ಯ ಖಂಡಿಸಿ ಹತ್ಯೆಗೊಳಗಾದ ಅಮಾಯಕ ಪ್ರವಾಸಿಗರಿಗೆ ಹಾಗೂ ನಿಧನ ಹೊಂದಿದ ಕ್ರೈಸ್ತ ಜಗದ್ಗುರುಗಳಾದ ಪೋಪ್ ಫ್ರಾನ್ಸಿಸ್‌ರವರಿಗೆ ಸಂತಾಪ ಸೂಚಿಸುವ ಮೂಲಕ ತಕ್ಷಣ ಸರ್ಕಾರ ಉಗ್ರರರನ್ನು ಪತ್ತೆ ಮಾಡಿ ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಸಿದರು. ಭವಿಷ್ಯದಲ್ಲಿ ಈ ರೀತಿಯ ಘಟನೆಗಳು ಮರುಕಳುಹಿಸದಂತೆ ಎಚ್ಚರವಹಿಸುವ ನಿಟ್ಟಿನಲ್ಲಿ ಗಡಿಯಲ್ಲಿ ಹೆಚ್ಚಿನ ಭದ್ರತೆ ಅಳವಡಿಸುಂತೆ ಆಗ್ರಹಿಸಿದರು. 
    ಸಂಯುಕ್ತ ಕ್ರೈಸ್ತ ಸಂಘದ ಅಧ್ಯಕ್ಷ ಸೆಲ್ವರಾಜ್, ಅಖಿಲ ಭಾರತ ಕ್ರೈಸ್ತ ಮಹಾಸಭಾ ಜಿಲ್ಲಾಧ್ಯಕ್ಷ ಸುರೇಶ್ ನಾಯ್ಕ, ರೈಮಂಡ್, ಜೋಸೆಫ್, ಸ್ಟೀಫನ್ ಕ್ರಿಸ್ಪೋಫರ್ ಸೇರಿದಂತೆ ಇನ್ನಿತರರು ಪಾಲ್ಗೊಂಡು ಮಾತನಾಡಿದರು. 

ಪಹಲ್ಗಾಮ್ ಕೃತ್ಯ ಖಂಡಿಸಿ ಭಾವಸಾರ ಕ್ಷತ್ರಿಯ ಸಮಾಜದಿಂದ ಪಂಜಿನ ಮೆರವಣಿಗೆ

ಭಾವಸಾರ ಕ್ಷತ್ರಿಯ ಸಮಾಜ ಹಾಗೂ ಅಂಗ ಸಂಸ್ಥೆಗಳ ಸಹಯೋಗದೊಂದಿಗೆ ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ಕೃತ್ಯ ಖಂಡಿಸಿ ಹಾಗು ಹತ್ಯೆಗೊಳಗಾದ ಅಮಾಯಕ ಪ್ರವಾಸಿಗರಿಗೆ ಸಂತಾಪ ಸೂಚಿಸಿ ಭದ್ರಾವತಿ ನಗರದಲ್ಲಿ ಪಂಜಿನ ಮೆರವಣಿಗೆ ನಡೆಸಲಾಯಿತು.  
    ಭದ್ರಾವತಿ; ಭಾವಸಾರ ಕ್ಷತ್ರಿಯ ಸಮಾಜ ಹಾಗೂ ಅಂಗ ಸಂಸ್ಥೆಗಳ ಸಹಯೋಗದೊಂದಿಗೆ ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ಕೃತ್ಯ ಖಂಡಿಸಿ ಹಾಗು ಹತ್ಯೆಗೊಳಗಾದ ಅಮಾಯಕ ಪ್ರವಾಸಿಗರಿಗೆ ಸಂತಾಪ ಸೂಚಿಸಿ ನಗರದಲ್ಲಿ ಪಂಜಿನ ಮೆರವಣಿಗೆ ನಡೆಸಲಾಯಿತು.  
    ಬಿ.ಎಚ್ ರಸ್ತೆ, ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಬಳಿ ಆರಂಭಗೊಂಡ ಮೆರವಣಿಗೆ ಹಾಲಪ್ಪ ವೃತ್ತ, ಮಾಧವಚಾರ್ ವೃತ್ತದ ಮೂಲಕ ರಂಗಪ್ಪ ವೃತ್ತ ತಲುಪಿತು. ಮೆರವಣಿಗೆಯಲ್ಲಿ ಉಗ್ರರ ಕೃತ್ಯವನ್ನು ಖಂಡಿಸಲಾಯಿತು.  
    ಸಮಾಜದ ಹಿರಿಯ ಮುಖಂಡ ಡಿ.ಟಿ ಶ್ರೀಧರ್, ಸಮಾಜದ ಅಧ್ಯಕ್ಷ ರಾಘವೇಂದ್ರರಾವ್,  ಎಚ್.ಎನ್ ಯೋಗೇಶ್ ಕುಮಾರ್,  ಡಿ.ಆರ್ ಕಿರಣ್, ಜಿ.ಎಸ್ ಯೋಗೇಶ್, ವಿಠಲನಾಥ್, ವಿಶ್ವನಾಥ್ ಮಾಸ್ಟರ್, ಭಾವಸಾರ ಯುವಕ ಸಂಘದ ಸದಸ್ಯರು, ಮಹಿಳಾ ಮಂಡಳಿ ಪ್ರಮುಖರಾದ ಕಲ್ಪನಾ, ಭಾವಸಾರ ವಿಜನ್ ಅಧ್ಯಕ್ಷೆ ಶಿಲ್ಪ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.  

ಅನಿರೀಕ್ಷಿತ ಮಳೆಗೆ ಕುಸಿದು ಬಿದ್ದ ಮನೆಯ ಗೋಡೆ

ಭದ್ರಾವತಿ ಹಳೇನಗರದ ಭೂತನಗುಡಿಯಲ್ಲಿ ಭಾನುವಾರ ರಾತ್ರಿ ಸುರಿದ ಮಳೆಗೆ ಮನೆಯೊಂದರ ಗೊಡೆ ಕುಸಿದು ಬಿದ್ದಿರುವುದು.
    ಭದ್ರಾವತಿ : ಕೆಲವು ದಿನಗಳಿಂದ ಅನಿರೀಕ್ಷಿತ ಗಾಳಿ ಮಳೆಗೆ ಒಂದೆಡೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿ ಬಿದ್ದಿರುವ ಘಟನೆಗಳು ನಡೆದಿವೆ. ಮತ್ತೊಂದೆಡೆ ಮನೆಯ ಗೋಡೆಗಳು ಕುಸಿದು ಬಿದ್ದಿದ್ದು, ಭಾನುವಾರ ರಾತ್ರಿ ಸುರಿದ ಮಳೆಗೆ ನಗರಸಭೆ ವ್ಯಾಪ್ತಿಯ ಭೂತನಗುಡಿಯಲ್ಲಿ ಮನೆಯೊಂದರ ಗೋಡೆ ಕುಸಿದು ಬಿದ್ದಿದೆ.  
    ನಗರಸಭೆ ಕಛೇರಿ ಹಿಂಭಾಗದ ವಾರ್ಡ್.೧೩ರ ಭೂತನಗುಡಿ ಶ್ರೀ ಶನೇಶ್ಷರ ಸ್ವಾಮಿ ದೇವಸ್ಥಾನದ ಪಕ್ಕದ ರಸ್ತೆಯಲ್ಲಿರುವ ಪ್ರಶಾಂತ್ ಎಂಬುವವರ ಮನೆ ಗೋಡೆ ಕುಸಿದು ಬಿದ್ದದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ರಾತ್ರಿ ಸುಮಾರು ೧ ತಾಸು ಸುರಿದ ಮಳೆಯಿಂದಾಗಿ ಮನೆಯ ಗೋಡೆ ಶಿಥಿಲಗೊಂಡು ಬಿದ್ದಿದೆ. 
    ಘಟನೆ ಸಂಬಂಧ ಮಾಹಿತಿ ನೀಡಿದರೂ ಸಹ ನಗರಸಭೆ ಅಧಿಕಾರಿಗಳಾಗಲಿ, ತಾಲೂಕು ಆಡಳಿತದ ಅಧಿಕಾರಿಗಳಾಗಲಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿಲ್ಲ. 
    ವಾರ್ಡ್ ಸದಸ್ಯೆ ಅನುಸುಧಾಮೋಹನ್ ಈ ವಿಚಾರ ಶಾಸಕರ ಗಮನಕ್ಕೂ ತಂದಿದ್ದಾರೆ. ಪ್ರಶಾಂತ್ ಟೈಲರ್ ವೃತ್ತಿ ನಡೆಸುತ್ತಿದ್ದು, ಈ ಮನೆಯಲ್ಲಿ ೩-೪ ಮಂದಿ ವಾಸವಿದ್ದಾರೆ. ಮನೆ ಗೋಡೆಯನ್ನು ತಕ್ಷಣ ದುರಸ್ತಿಗೊಳಿಸುವ ಕಾರ್ಯ ಕೈಗೊಳ್ಳಬೇಕಾಗಿದೆ.