Monday, May 5, 2025

ಜಾತಿಗಣತಿ ಸಮೀಕ್ಷೆ : ಮನೆ ಮನೆಗೆ ಭೇಟಿ ನೀಡಲು ನಿರ್ದೇಶನ ನೀಡಿ

ಸರ್ಕಾರಕ್ಕೆ ಜಂಗಮ ಸಮಾಜದಿಂದ ಮನವಿ 

ಪ್ರತಿ ಮನೆ ಮನೆಗೆ ತೆರಳಿ ಜಾತಿಗಣತಿ ಸಮೀಕ್ಷೆ ನಡೆಸುವಂತೆ ಸಮೀಕ್ಷೆ ನಡೆಸುವವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಶಿವಮೊಗ್ಗ ಜಿಲ್ಲಾ ಜಂಗಮ ಸಮಾಜ ಭದ್ರಾವತಿ  ತಾಲೂಕು ನಗರ ಘಟಕ ಸೋಮವಾರ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದೆ. 
    ಭದ್ರಾವತಿ : ಪ್ರತಿ ಮನೆ ಮನೆಗೆ ತೆರಳಿ ಜಾತಿಗಣತಿ ಸಮೀಕ್ಷೆ ನಡೆಸುವಂತೆ ಸಮೀಕ್ಷೆ ನಡೆಸುವವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಶಿವಮೊಗ್ಗ ಜಿಲ್ಲಾ ಜಂಗಮ ಸಮಾಜ ತಾಲೂಕು ನಗರ ಘಟಕ ಸೋಮವಾರ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದೆ. 
    ನಗರ ಘಟಕದ ಜಂಗಮ ಸಮಾಜದ ಅಧ್ಯಕ್ಷ ಎಸ್. ಅಡವೀಶಯ್ಯ ನೇತೃತ್ವದಲ್ಲಿ ಉಪತಹಸೀಲ್ದಾರ್ ಮಂಜಾನಾಯ್ಕರವರ ಮೂಲಕ ಮನವಿ ಸಲ್ಲಿಸಲಾಗಿದ್ದು, ನ್ಯಾಯಮೂರ್ತಿ ಎಚ್.ಎನ್ ನಾಗಮೋಹನ್‌ದಾಸ್‌ರವರ ಸದಸ್ಯ ಆಯೋಗದಿಂದ ನ್ಯಾಯಯುತವಾಗಿ ರಾಜ್ಯದ ೧೦೧ ಪರಿಶಿಷ್ಟ ಜಾತಿಗಳ ಸಮೀಕ್ಷೆ ನಡೆಸಿ ಆ ಜಾತಿಗಳಿಗೆ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ಮುಂದಾಗಿರುವುದು ಸಂತಸದ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ಮೇ.೫ರಿಂದ ಜಾತಿಗಣತಿ ಸಮೀಕ್ಷೆ ನಡೆಸುವರೆಂದು ತಿಳಿದು ಬಂದಿದೆ.  
    ಜಂಗಮ ಸಮಾಜ ಪರಿಶಿಷ್ಟ ಜಾತಿಗೆ ಸಂಬಂಧಿಸಿದ್ದು, ರಾಜ್ಯದ ಪರಿಶಿಷ್ಟ ಜಾತಿ ಪಟ್ಟಿ ಆ.ನಂ.೧೯(೧)ರಲ್ಲಿ ಬೇಡ ಜಂಗಮ ಎಂದು ನಮೂದಿಸಲಾಗಿದೆ. ಬೇಡ ಜಂಗಮರ ಕುಲಕಸುಬು ಧಾರ್ಮಿಕ ಭಿಕ್ಷಾಟನೆಯಾಗಿದ್ದು, ತಲತಲಾಂತರದಿಂದ ಈ ವೃತ್ತಿಯನ್ನು ಮಾಡುತ್ತಾ ಬಂದಿದ್ದಾರೆ. ಸಮೀಕ್ಷೆ ಸಮಯದಲ್ಲಿ ವೃತ್ತಿ ಧರ್ಮವನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಿದ್ದು, ಸಮೀಕ್ಷೆ ನಡೆಸುವವರಿಗೆ ಮನೆ, ಮನೆಗೆ ಭೇಟಿ ನೀಡಲು ಸೂಕ್ತ ನಿರ್ದೇಶನ ನೀಡುವಂತೆ ಮನವಿಯಲ್ಲಿ ಕೋರಲಾಗಿದೆ. 
ಜಂಗಮ ಸಮಾಜದ ನಗರ ಘಟಕದ ಪದಾಧಿಕಾರಿಗಳು, ಮುಖಂಡರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಹಿರಿಯ ಪತ್ರಕರ್ತ ಎಲ್. ಆನಂದರಾಮನ್ ನಿಧನ

ಎಲ್. ಆನಂದರಾಮನ್ 
    ಭದ್ರಾವತಿ : ಹಳೇನಗರದ ಪತ್ರಿಕಾ ಭವನ ಟ್ರಸ್ಟ್ ಅಜೀವ ಸದಸ್ಯರು, ಹಿರಿಯ ಪತ್ರಕರ್ತರಾದ ಎಲ್. ಆನಂದರಾಮನ್(೭೧) ಸೋಮವಾರ ಬೆಳಿಗ್ಗೆ ನಿಧನ ಹೊಂದಿದರು. 
    ಪತ್ನಿ ಮಂಜುಳಾ, ಪುತ್ರಿಯರಾದ ರಕ್ಷಾ ಮತ್ತು ರಶ್ಮಿ ಹಾಗು ಅಳಿಯಂದಿರು, ಮೊಕ್ಕಳು ಇದ್ದಾರೆ.  ಸುಮಾರು ೩ ದಶಕಗಳಿಗೂ ಹೆಚ್ಚು ಕಾಲ ಪತ್ರಿಕಾ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಕನ್ನಡಪ್ರಭ ಮತ್ತು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ದಿನ ಪತ್ರಿಕೆಗಳ ವಿತರಕರಾಗಿ, ವರದಿಗಾರರಾಗಿ ದೀರ್ಘಾವಧಿ ಸೇವೆಲ್ಲಿಸಿದ್ದರು. 
    ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಶಾಖೆಯ ಉಪಾಧ್ಯಕ್ಷರಾಗಿ ಹಾಗು ಪತ್ರಿಕಾ ಭವನ ಟ್ರಸ್ಟ್ ಅಜೀವ ಸದಸ್ಯರಾಗಿದ್ದು, ಖಜಾಂಚಿಯಾಗಿ ಸೇವೆ ಸಲ್ಲಿಸಿದ್ದರು.  
    ನಗರದ ಬಿ.ಎಚ್ ರಸ್ತೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಪ್ರಸಾದ್ ಸರ್ವಿಸ್ ಸ್ಟೇಷನ್ ಪೆಟ್ರೋಲ್ ಬಂಕ್ ಮಾಲೀಕರಾಗಿದ್ದರು. 
    ಅಲ್ಲದೆ ಆನಂದರಾಮನ್‌ರವರು ಕ್ರಿಕೆಟ್ ತರಬೇತಿದಾರರಾಗಿ ಸಹ ಗುರುತಿಸಿಕೊಳ್ಳುವ ಮೂಲಕ ಹಲವಾರು ಪಂದ್ಯಗಳಲ್ಲಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದರು. ಕೆಲವು ವರ್ಷಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿ ಚೇತರಿಸಿಕೊಂಡಿದ್ದರು. ನಂತರ ಬೆಂಗಳೂರಿನಲ್ಲಿ ವಾಸವಾಗಿದ್ದರು. 
    ಇವರ ನಿಧನಕ್ಕೆ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆ ಹಾಗು ತಾಲೂಕು ಶಾಖೆ ಪದಾಧಿಕಾರಿಗಳು ಹಾಗು ಸದಸ್ಯರು, ಪತ್ರಿಕಾ ಭವನ ಟ್ರಸ್ಟ್ ಪದಾಧಿಕಾರಿಗಳು ಮತ್ತು ಟ್ರಸ್ಟಿಗಳು ಸಂತಾಪ ಸೂಚಿಸಿದ್ದಾರೆ. 

Sunday, May 4, 2025

ಶ್ರೀ ಭಗೀರಥ ಮಹರ್ಷಿ ಜಯಂತಿ

ಭೂ ಲೋಕದ ಕಲ್ಯಾಣಕ್ಕಾಗಿ ಮಹಾ ತಪ್ಪಸ್ಸಿನೊಂದಿಗೆ ಗಂಗೆಯನ್ನು ಭೂಮಿಗೆ ಕರೆತಂದ ಶ್ರೀ ಭಗೀರಥ ಮಹರ್ಷಿ ಅವರ ಜಯಂತಿ ಭದ್ರಾವತಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಭಾನುವಾರ ಆಚರಿಸಲಾಯಿತು. 
    ಭದ್ರಾವತಿ : ಭೂ ಲೋಕದ ಕಲ್ಯಾಣಕ್ಕಾಗಿ ಮಹಾ ತಪ್ಪಸ್ಸಿನೊಂದಿಗೆ ಗಂಗೆಯನ್ನು ಭೂಮಿಗೆ ಕರೆತಂದ ಶ್ರೀ ಭಗೀರಥ ಮಹರ್ಷಿ ಅವರ ಜಯಂತಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಭಾನುವಾರ ಆಚರಿಸಲಾಯಿತು. 
    ತಾಲೂಕು ಕಛೇರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಭಗೀರಥ ಮಹರ್ಷಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸ್ಮರಿಸಲಾಯಿತು. ಉಪತಹಸೀಲ್ದಾರ್ ಮಂಜಾನಾಯ್ಕ ಅವರ ನೇತೃತ್ವದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಉಪತಹಸೀಲ್ದಾರ್ ನಾರಾಯಣ ಗೌಡ, ತಾಲೂಕು ಉಪ್ಪಾರ ಸಮಾಜದ ಪ್ರಮುಖರಾದ ಎಸ್ ರಾಜಶೇಖರ ಉಪ್ಪಾರ, ರವೀಶ್ ಕುಮಾರ್, ಅವಿನಾಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಎಸ್‌ಎಸ್‌ಎಲ್‌ಸಿ : ಪತ್ರಿಕಾ ವಿತರಕನ ಪುತ್ರಿಗೆ ೬೧೧ ಅಂಕ

ಕೀರ್ತನಾ  
    ಭದ್ರಾವತಿ : ನಗರದ ಆದಿಚುಂಚನಗಿರಿ ವಿದ್ಯಾಸಂಸ್ಥೆ ಪ್ರೌಢಶಾಲೆ ವಿದ್ಯಾರ್ಥಿನಿ ಕೀರ್ತನಾ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೬೨೫ಕ್ಕೆ ೬೧೧ ಅಂಕ ಪಡೆದು ಶೇ.೯೭.೭೬ ಫಲಿತಾಂಶದೊಂದಿಗೆ ಅತ್ಯನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 
    ವಿಶೇಷ ಎಂದರೆ ಕನ್ನಡದಲ್ಲಿ ೧೨೫ಕ್ಕೆ ೧೨೫ ಅಂಕ ಪಡೆದು ಕೀರ್ತನಾ ಗಮನ ಸೆಳೆದಿದ್ದು, ಇವರು ನಗರದ ಹುಡ್ಕೋ ಕಾಲೋನಿ ನಿವಾಸಿ, ದಿನ ಪತ್ರಿಕೆಗಳ ವಿತರಕ ಕೃಷ್ಣಮೂರ್ತಿ ಮತ್ತು ಸ್ವರ್ಣಾಂಬ ದಂಪತಿ ಪುತ್ರಿಯಾಗಿದ್ದಾರೆ. ಕೀರ್ತನಾ ಸಾಧನೆಗೆ ನಗರದ ಪತ್ರಕರ್ತರು, ಪತ್ರಿಕಾ ವಿತರಕರು, ಗಣ್ಯರು ಹಾಗು ಸ್ಥಳೀಯ ನಿವಾಸಿಗಳು ಅಭಿನಂದಿಸಿದ್ದಾರೆ.

Saturday, May 3, 2025

ಅಭಿವೃದ್ಧಿ ವೇದಿಕೆಯಿಂದ ಕಾರ್ಮಿಕರ ದಿನಾಚರಣೆ

ಭದ್ರಾವತಿ ನ್ಯೂಟೌನ್ ಜಯಶ್ರೀ ವೃತ್ತದ ಸಮೀಪದಲ್ಲಿರುವ ಕಾಂಗ್ರೆಸ್ ಕಛೇರಿಯಲ್ಲಿ ಭದ್ರಾವತಿ ಕ್ಷೇತ್ರ ಅಭಿವೃದ್ಧಿ ವೇದಿಕೆ ವತಿಯಿಂದ ಕಾರ್ಮಿಕರ ದಿನಾಚರಣೆ ಆಚರಿಸಲಾಯಿತು.  ಕಾರ್ಮಿಕ ಮುಖಂಡರಾದ ಶಿವಮೂರ್ತಿ, ಅಡವೀಶಯ್ಯ, ಜಿ.ಟಿ ಬಸವರಾಜ್ ಸೇರಿದಂತೆ ಇನ್ನಿತರರು ಕಾರ್ಯಕ್ರಮ ಉದ್ಘಾಟಿಸಿದರು.  
    ಭದ್ರಾವತಿ : ನಗರದ ನ್ಯೂಟೌನ್ ಜಯಶ್ರೀ ವೃತ್ತದ ಸಮೀಪದಲ್ಲಿರುವ ಕಾಂಗ್ರೆಸ್ ಕಛೇರಿಯಲ್ಲಿ ಭದ್ರಾವತಿ ಕ್ಷೇತ್ರ ಅಭಿವೃದ್ಧಿ ವೇದಿಕೆ ವತಿಯಿಂದ ಕಾರ್ಮಿಕರ ದಿನಾಚರಣೆ ಆಚರಿಸಲಾಯಿತು. 
    ಹಿರಿಯ ಸಹಕಾರಿ ಧುರೀಣ, ಅಭಿವೃದ್ಧಿ ವೇದಿಕೆ ಅಧ್ಯಕ್ಷ  ಜಿ.ಟಿ ಬಸವರಾಜ್ ಸಭೆ ಅಧ್ಯಕ್ಷತೆ ವಹಿಸಿದ್ದರು. ಎಂಪಿಎಂ ಕಾರ್ಮಿಕರ ಸಂಘದ ಮಾಜಿ ಅಧ್ಯಕ್ಷ ಶಿವಮೂರ್ತಿ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಹಾಗು ಕಾರ್ಖಾನೆಗಳ ಸ್ಥಿತಿಗತಿಗಳ ಕುರಿತು ವಿವರವಾಗಿ ತಿಳಿಸಿದರು.
    ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ಉಪಾಧ್ಯಕ್ಷ ಅಡವಿಶಯ್ಯ, ಕ್ಷೇತ್ರದಲ್ಲಿ ಕಾರ್ಮಿಕರು ಎದುರಿಸುತ್ತಿರುವ ಶೋಚನೀಯ ಸ್ಥಿತಿ ಹಾಗು ವಿಐಎಸ್‌ಎಲ್ ಕಾರ್ಖಾನೆಯ ವಸತಿ ಗೃಹಗಳ ಬಗ್ಗೆ, ಆಡಳಿತ ವರ್ಗ ಮನೆ ಬಾಡಿಗೆ ಹಣ ಹೆಚ್ಚು ಮಾಡುತ್ತಿರುವ ಕುರಿತು ಮಾತನಾಡಿದರು. ನಾಗೇಶ್ ಕಾರ್ಮಿಕರ ದಿನಾಚರಣೆ ಹಿನ್ನಲೆಯನ್ನು ವಿವರಿಸಿದರು. 
    ನಗರಸಭೆ ಸದಸ್ಯ ಕಾಂತರಾಜ್, ನ್ಯಾಯವಾದಿ ಎಂ. ಶಿವಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಕಲಾವಿದ ಜಂಬೂಸ್ವಾಮಿ ಪ್ರಾರ್ಥಿಸಿ, ಹಿರಿಯ ಕಾರ್ಮಿಕ ಮುಖಂಡ ಡಿ. ನರಸಿಂಹಮೂರ್ತಿ ಸ್ವಾಗತಿಸಿದರು. ಕೆ.ಜೆ ಹನುಮಂತಯ್ಯ ವಂದಿಸಿದರು. 

ಎಸ್‌ಎಸ್‌ಎಲ್‌ಸಿ ಫಲಿತಾಂಶ ತಾಲೂಕಿಗೆ ೬ನೇ ಸ್ಥಾನ : ೧೭ ಶಾಲೆಗಳಿಗೆ ಶೇ.೧೦೦ ಫಲಿತಾಂಶ

ವಸತಿ ಶಾಲೆಯ ಪಿ. ಸಿಂಚನ ೬೨೦, ಎ.ಪಿ ಅಭಿಷೇಕ್ ೬೧೯ ಅಂಕ : ಎ.ಕೆ ನಾಗೇಂದ್ರಪ್ಪ 

ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ 
    ಭದ್ರಾವತಿ : ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಒಟ್ಟು ೪,೦೩೮ ವಿದ್ಯಾರ್ಥಿಗಳು ಹಾಜರಿದ್ದು, ಈ ಪೈಕಿ ೩,೧೧೦ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ತಾಲೂಕಿಗೆ ಶೇ.೭೭.೦೨ ಫಲಿತಾಂಶ ಲಭಿಸಿದ್ದು, ಕಳೆದ ಬಾರಿಗಿಂತ ಉತ್ತಮ ಸಾಧನೆ ಮಾಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ತಿಳಿಸಿದ್ದಾರೆ. 
    ಕಳೆದ ಬಾರಿ ಜಿಲ್ಲೆಯಲ್ಲಿ ೭ನೇ ಸ್ಥಾನ ಪಡೆದುಕೊಳ್ಳಲಾಗಿದ್ದು, ಈ ಬಾರಿ ೬ನೇ ಸ್ಥಾನ ಲಭಿಸಿದೆ. ಈ ಬಾರಿ ಒಟ್ಟು ೯೨೮ ವಿದ್ಯಾರ್ಥಿಗಳು ಅನುತ್ತೀರ್ಣಗೊಂಡಿದ್ದಾರೆ. ತಾಲೂಕಿನಲ್ಲಿ ಒಟ್ಟು ೧೧೨ ವಿದ್ಯಾರ್ಥಿಗಳು ೬೦೦ಕ್ಕಿಂತ ಹೆಚ್ಚಿನ ಅಂಕ ಪಡೆದುಕೊಂಡಿದ್ದಾರೆ. 
    ನಗರಸಭೆ ವ್ಯಾಪ್ತಿಯ ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ ಪ್ರೌಢಶಾಲೆ ವಿದ್ಯಾರ್ಥಿನಿ ಸಿ. ಮಾನ್ಯ, ಲೋಯರ್ ಹುತ್ತಾ ಪೂರ್ಣಪ್ರಜ್ಞ ವಿದ್ಯಾಸಂಸ್ಥೆಯ ನೂರ್ ತೈಬಾ, ಪ್ರೇಕ್ಷಾ ಎಸ್. ಖಾಡ್ಗಡ್, ಸಾನಿಕಾ ಪಿ. ದೇವಾಂಗಮಠ್ ಮತ್ತು ಬಿ.ಎಸ್ ನಾಗಶ್ರೀ ೬೨೫ಕ್ಕೆ ೬೨೧ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾಗಿದ್ದಾರೆ. 
    ಪೂರ್ಣಪ್ರಜ್ಞ ವಿದ್ಯಾಂಸ್ಥೆಯ ಪ್ರತೀಶ್ ಬಡಿಗೇರ್ ಮತ್ತು ನಿಕ್ಷಿತ್ ಎನ್. ರಾಜ್  ೬೨೦ ಅಂಕ ಪಡೆದಿದ್ದು, ಉಳಿದಂತೆ ಸರ್ಕಾರಿ ಶಾಲೆಗಳ ಪೈಕಿ ತಾಲೂಕಿನ ಕನಸಿಕಟ್ಟೆ ಅಂಬೇಡ್ಕರ್ ವಸತಿ ಶಾಲೆಯ ಪಿ. ಸಿಂಚನ ೬೨೦ ಅಂಕ, ದೊಡ್ಡೇರಿ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಎ.ಪಿ ಅಭಿಷೇಕ ೬೧೯ ಅಂಕ, ಅರಳಿಹಳ್ಳಿ ಸರ್ಕಾರಿ ಪ್ರೌಢಶಾಲೆಯ ಪಿ. ಪ್ರತೀಕ್ಷಾ ೬೦೮ ಅಂಕ, ಸನ್ಯಾಸಿ ಕೋಡಮಗ್ಗಿ ಸರ್ಕಾರಿ ಪ್ರೌಢಶಾಲೆಯ ಡಿ.ಆರ್ ಕೃತಿಕ ೬೦೨ ಮತ್ತು ಅಂತರಗಂಗೆ ಕರ್ನಾಟಕ ಪಬ್ಲಿಕ್ ಶಾಲೆಯ ಕೆ.ಎಂ ರಕ್ಷಾ ೬೦೦ ಅಂಕ ಪಡೆದುಕೊಂಡಿದ್ದಾರೆ ಎಂದರು. 
    ಪ್ರತಿ ವಿಷಯದಲ್ಲಿ ಕನ್ನಡ ೯೩, ಸಂಸ್ಕೃತ ೮, ಆಂಗ್ಲ ೨೯, ಹಿಂದಿ ೧೩೮, ಗಣಿತ ೧೭, ವಿಜ್ಞಾನ ೧೭ ಮತ್ತು ಸಮಾಜ ವಿಜ್ಞಾನ ೪೩ ವಿದ್ಯಾರ್ಥಿ ಶೇ.೧೦೦ಕ್ಕೆ ೧೦೦ರಷ್ಟು ಫಲಿತಾಂಶ ಪಡೆದುಕೊಂಡಿದ್ದಾರೆ. ವಿಶೇಷ ಎಂದರೆ ಈ ಬಾರಿ ಜಿಲ್ಲೆಯಲ್ಲಿಯೇ ಪ್ರಥಮ ತಾಲೂಕಿನ ೧೭ ಪ್ರೌಢಶಾಲೆಗಳು ಶೇ.೧೦೦ಕ್ಕೆ ೧೦೦ರಷ್ಟು ಫಲಿತಾಂಶ ಪಡೆದುಕೊಂಡಿವೆ ಎಂದರು. 

ಅಪ್ಪನ ಧೈರ್ಯ, ಶಿಕ್ಷಕರ ಮಾರ್ಗದರ್ಶನ, ನಿರಂತರ ಪರಿಶ್ರಮ

ರೈತನ ಮಗನಿಗೆ ೬೨೫ಕ್ಕೆ ೬೧೫ ಅಂಕ 

೬೨೫ಕ್ಕೆ ೬೧೫ ಅಂಕ ಪಡೆದಿರುವ ಭದ್ರಾವತಿ ತಾಲೂಕಿನ ಹಂಚಿನ ಸಿದ್ದಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ನಿತಿನ್‌ಗೆ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕುಟುಂಬಸ್ಥರು, ಗ್ರಾಮಸ್ಥರು ನಿತಿನ್‌ಗೆ ಸಿಹಿ ತಿನಿಸಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದ್ದಾರೆ. 
    ಭದ್ರಾವತಿ : ಅಪ್ಪ ಕೊಟ್ಟ ಧೈರ್ಯ, ಶಿಕ್ಷಕರ ಮಾರ್ಗದರ್ಶನ, ನಿರಂತರ ಪರಿಶ್ರಮ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚಿನ ಅಂಕ ಪಡೆಯಲು ಸಾಧ್ಯವಾಯಿತು ಎಂದು ೬೨೫ಕ್ಕೆ ೬೧೫ ಅಂಕ ಪಡೆದಿರುವ ತಾಲೂಕಿನ ಹಂಚಿನ ಸಿದ್ದಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ನಿತಿನ್ ಫಲಿತಾಂಶ ಕುರಿತು ಪತ್ರಿಕೆಗೆ ಪ್ರತಿಕ್ರಿಯಿಸಿದ್ದು, ಈ ನಡುವೆ ರೈತನ ಮಗನ ಸಾಧನೆಗೆ ಪ್ರಶಂಸೆಗಳು ವ್ಯಕ್ತವಾಗುತ್ತಿವೆ. 
    ನಿತಿನ್ ತನ್ನ ಯಶಸ್ಸಿನ ಹಿಂದಿನ ರಹಸ್ಯ ಹಂಚಿಕೊಳ್ಳುತ್ತಾ ಪ್ರತಿದಿನ ಕನಿಷ್ಠ ೫ ರಿಂದ ೬ ಗಂಟೆ ಕಲಿಕೆಯಲ್ಲಿ ತೊಡಗಿಸಿಕೊಂಡಿದ್ದು, ಪಠ್ಯಪುಸ್ತಕಗಳ ಜೊತೆಗೆ ಹೆಚ್ಚುವರಿ ಪ್ರಶ್ನೆಪತ್ರಿಕೆಗಳು, ಶಿಕ್ಷಕರ ಮಾರ್ಗದರ್ಶನ ಹಾಗೂ ವಸತಿ ಶಾಲೆಯ ಶಾಂತಿಯುತ ಪರಿಸರ ಪ್ರತಿ ಬಾರಿ ಮಾಡುವ ಚಟುವಟಿಕೆಗೆ, ನನ್ನ ಸಾಧನೆಗೆ ಕಾರಣಗಳಾದವು. ವಿಶೇಷವಾಗಿ ಶಾಲಾ ಶಿಕ್ಷಕರ ಪ್ರೋತ್ಸಾಹ ಹಾಗೂ ಪೋಷಕರ ಬೆಂಬಲ ಅಪ್ಪನ ಧೈರ್ಯ ನನಗೆ ಪರೀಕ್ಷೆ ಸುಲಭವಾಗಿ ಎದುರಿಸಲು ಕಾರಣವಾಯಿತು. ಪರೀಕ್ಷೆಯ ಸಮಯದಲ್ಲಿ ಆತ್ಮವಿಶ್ವಾಸ ಕಳೆದುಕೊಂಡಿಲ್ಲ. ಅದರಲ್ಲೂ ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಕಲಿಕೆಯಲ್ಲಿ ಹಗಲು ರಾತ್ರಿ ಹೆಚ್ಚಿನ ಶ್ರಮವಹಿಸಿದ ಪರಿಣಾಮ ಹೆಚ್ಚಿನ ಪಡೆಯಲು ಸಾಧ್ಯವಾಯಿತು ಎಂದರು.   
    ನಿತಿನ್ ತಾಲೂಕಿನ ಕಲ್ಪನಹಳ್ಳಿ ತಾಂಡದ ರೈತ ಹಾಲೇಶ್ವರನಾಯ್ಕ ಮಗನಾಗಿದ್ದು, ಮಗನ ಸಾಧನೆಗೆ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕುಟುಂಬಸ್ಥರು, ಗ್ರಾಮಸ್ಥರು ನಿತಿನ್‌ಗೆ ಸಿಹಿ ತಿನಿಸಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದ್ದಾರೆ.