Sunday, May 18, 2025

ಜಮೀನಿನಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ `ವಿಮಾನ ಪ್ರಯಾಣ'

ದುಡಿಸಿಕೊಳ್ಳುವವರಿಗೆ ಮಾದರಿಯಾದ ಕೂಡ್ಲಿಗೆರೆ ಹಾಲೇಶ್ 

ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಗ್ರಾಮದ ನಿವಾಸಿ, ಪ್ರಗತಿಪರ ರೈತ, ಜಮಿನ್ದಾರ್ ಕೂಡ್ಲಿಗೆರೆ ಹಾಲೇಶ್‌ರವರು ತಮ್ಮ ಜಮೀನಿನಲ್ಲಿ ಕೆಲಸ ಮಾಡುವ ೧೦ ಜನ ಕೂಲಿ ಕಾರ್ಮಿಕರನ್ನು ಶನಿವಾರ ವಿಮಾನದಲ್ಲಿ ಪ್ರವಾಸಕ್ಕೆ ಕರೆದುಕೊಂಡು ಹೋಗುವ ಮೂಲಕ ಗಮನ ಸೆಳೆದರು. 
    ಭದ್ರಾವತಿ : ಈ ಭೂಮಿ ಮೇಲೆ ದುಡಿಯುವವರಿಂದ ದುಡಿಸಿಕೊಳ್ಳುವ ಬಹಳಷ್ಟು ಮಂದಿಗೆ ದುಡಿಯುವವರ ನೋವು, ನಲಿವುಗಳು ಅರ್ಥವಾಗುವುದೇ ಇಲ್ಲ. ಅವರು ಸಾಯುವವರಿಗೂ ದುಡಿಯುತ್ತಿರಬೇಕು. ನಾವು ದುಡಿಸಿಕೊಳ್ಳುತ್ತಿರಬೇಕು ಎಂಬ ಮನೋಭಾವನೆಯೇ ಹೆಚ್ಚು. ಇಂತಹ ದುಡಿಸಿಕೊಳ್ಳುವ ಜನರ ನಡುವೆ ದುಡಿಯುವವರು ನಮ್ಮ ಕುಟುಂಬದವರಂತೆ, ಅವರ ನೋವು, ನಲಿವುಗಳು ನಮ್ಮ ನೋವು, ನಲಿವುಗಳು, ಅವರನ್ನು ಪ್ರೀತಿಸಬೇಕು, ಗೌರವಿಸಬೇಕು ಎಂಬ ಭಾವನೆ ಹೊಂದಿರುವವರು ವಿರಳ. ಇಂತಹ ವಿರಳ ವ್ಯಕ್ತಿಗಳಲ್ಲಿ ತಾಲೂಕಿನ ಕೂಡ್ಲಿಗೆರೆ ಗ್ರಾಮದ ನಿವಾಸಿ, ಪ್ರಗತಿಪರ ರೈತ, ಜಮಿನ್ದಾರ್ ಕೂಡ್ಲಿಗೆರೆ ಹಾಲೇಶ್‌ರವರು ಸಹ ಒಬ್ಬರಾಗಿದ್ದಾರೆ. 
    ಕೂಡ್ಲಿಗೆರೆ ಹಾಲೇಶ್‌ರವರು ತಮ್ಮ ಜಮೀನಿನಲ್ಲಿ ಕೆಲಸ ಮಾಡುವ ೧೦ ಜನ ಕೂಲಿ ಕಾರ್ಮಿಕರನ್ನು ತಮ್ಮ ಕುಟುಂಬದವರಂತೆ ನೋಡುವ ಜೊತೆಗೆ ಅವರ ನೋವು, ನಲಿವುಗಳಲ್ಲಿ ಸದಾ ಭಾಗಿಯಾಗುವ ಮೂಲಕ ಗಮನ ಸೆಳೆದಿದ್ದಾರೆ. ಇದೀಗ ಅವರು ತಮ್ಮ ಸ್ವಂತ ಖರ್ಚಿನಲ್ಲಿ ೧೦ ಜನ ಕೂಲಿ ಕಾರ್ಮಿಕರನ್ನು ಮೇ.೧೭ರ ಶನಿವಾರ ತಮ್ಮ ಜೊತೆಗೆ ಗೋವಾ ಪ್ರವಾಸಕ್ಕೆ ಕರೆದು ಕೊಂಡು ಹೋಗಿದ್ದಾರೆ. ಒಟ್ಟು ೩ ರಾತ್ರಿ, ೪ ಹಗಲು ಪ್ರವಾಸ ಇದಾಗಿದ್ದು, ವಿಶೇಷ ಎಂದರೆ ಕೂಲಿ ಕಾರ್ಮಿಕರನ್ನು ವಿಮಾನದಲ್ಲಿ ಪ್ರವಾಸಕ್ಕೆ ಕರೆದುಕೊಂಡು ಹೋಗಿರುವುದು. ವಿಮಾನ ಪ್ರಯಾಣ ಎಂದರೆ ಗಗನ ಕುಸುಮವಾಗಿದ್ದು, ಅದರಲ್ಲೂ ವಿಮಾನ ಪ್ರಯಾಣದ ಕಲ್ಪನೆಯನ್ನೂ ಮಾಡಿಕೊಳ್ಳದ ಕೂಲಿ ಕಾರ್ಮಿಕರಿಗೆ ವಿಮಾನ ಪ್ರಯಾಣ ಮಾಡಿಸುವ ಮೂಲಕ ದುಡಿಸಿಕೊಳ್ಳುವವರಿಗೆ ಮಾದರಿಯಾಗಿದ್ದಾರೆ. 
    ಪ್ರವಾಸೋದ್ಯಮಿ ಮ್ಯಾಂಗೋಲೀಪ್ ಹಾಲಿಡೇಸ್ ಮಂಜುನಾಥ್‌ರವರ ನೇತೃತ್ವದಲ್ಲಿ ಈ ಪ್ರವಾಸ ಹಮ್ಮಿಕೊಳ್ಳಲಾಗಿದ್ದು, ಶಿವಮೊಗ್ಗ ವಿಮಾನದಿಂದ ಪ್ರಯಾಣ ಬೆಳೆಸಿರುವ ಕೂಡ್ಲಿಗೆರೆ ಹಾಲೇಶ್ ಮತ್ತು ಅವರ ಜಮೀನಿನ ೧೦ಜನ ಕೂಲಿ ಕಾರ್ಮಿಕರು ಗೋವಾದಲ್ಲಿ ಬೀಚುಗಳು, ಪ್ರವಾಸಿ ಕ್ಷೇತ್ರಗಳು, ದೇವಸ್ಥಾನ, ಚರ್ಚ್‌ಗಳನ್ನು ವೀಕ್ಷಿಸಲಿದ್ದಾರೆ. ಇವರು ಉಳಿದುಕೊಳ್ಳಲು ಉತ್ತಮ ವ್ಯವಸ್ಥೆಯನ್ನು ಮಾಡಲಾಗಿದೆ. 
    ಈ ಕುರಿತು ಪತ್ರಿಕಗೆ ಮಾಹಿತಿ ನೀಡಿರುವ ಕೂಡ್ಲಿಗೆರೆ ಹಾಲೇಶ್‌ರವರು ವರ್ಷವಿಡಿ ಜಮೀನಿನಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೂ ಆಸೆ, ಆಕಾಂಕ್ಷೆಗಳಿರುತ್ತವೆ. ಅವರ ದುಡಿಮೆ ಒತ್ತಡ ಕಡಿಮೆ ಮಾಡಿ, ಕೆಲವು ದಿನ ಮಾನಸಿಕ ನೆಮ್ಮದಿ ಕಂಡು ಕೊಳ್ಳುವ ಮೂಲಕ ಅವರ ಕಾರ್ಯ ಕ್ಷಮತೆ ಹೆಚ್ಚಿಸುವುದು ಇದರ ಉದ್ದೇಶವಾಗಿದೆ. ಅಲ್ಲದೆ ಅವರಿಗೆ ಹೊರಗಿನ ಪರಿಸರ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು. 
    ಕೂಡ್ಲಿಗೆರೆ ಹಾಲೇಶ್‌ರವರು ಕೂಡ್ಲಿಗೆರೆ ಭಾಗದಲ್ಲಿ ಮಾತ್ರವಲ್ಲದೆ ತಾಲೂಕಿನಾದ್ಯಂತ ಗುರುತಿಸಿಕೊಂಡಿರುವ ವ್ಯಕ್ತಿಯಾಗಿದ್ದು, ರಾಜಕೀಯವಾಗಿ, ಧಾರ್ಮಿಕವಾಗಿ ಮಾತ್ರವಲ್ಲದೆ ವಿವಿಧ ಸೇವಾ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಗಮನ ಸೆಳೆದಿದ್ದಾರೆ.   

Saturday, May 17, 2025

ಹಾಲಿನ ದರ ಹೆಚ್ಚಳ ಮಾಡುವ ಮೂಲಕ ರೈತರಿಗೆ ಆರ್ಥಿಕ ಬಲ ಹೆಚ್ಚಳ : ಕೆ. ವೆಂಕಟೇಶ್

ಭದ್ರಾವತಿ ರಂಗಪ್ಪ ವೃತ್ತ ಸಮೀಪದ ಪಶು ಆಸ್ಪತ್ರೆ ಆವರಣದಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಮತ್ತು ನಗರಸಭೆ ವತಿಯಿಂದ ಆರ್‌ಐಡಿಎಫ್ ಟ್ರಾಂಚ್ ೩೦ ಯೋಜನೆಯಡಿ ನೂತನ ಪಶು ಆಸ್ಪತ್ರೆ ಕಟ್ಟಡಕ್ಕೆ ಶನಿವಾರ ಪಶುಪಾಲನಾ ಮತ್ತು ಪಶುವೈದ್ಯ  ಸೇವಾ ಇಲಾಖೆ ಹಾಗು ರೇಷ್ಮೆ ಇಲಾಖೆ ಸಚಿವ ಕೆ. ವೆಂಕಟೇಶ್ ಶಂಕಸ್ಥಾಪನೆ ನೆರವೇರಿಸಿದರು. 
    ಭದ್ರಾವತಿ : ಹಾಲಿನ ದರ ಹೆಚ್ಚಳ ಮಾಡುವ ಮೂಲಕ ರೈತರನ್ನು ಆರ್ಥಿಕವಾಗಿ ಬಲಪಡಿಸಲಾಗಿದ್ದು, ಆದರೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯ  ಸೇವಾ ಇಲಾಖೆ ಹಾಗು ರೇಷ್ಮೆ ಇಲಾಖೆ ಸಚಿವ ಕೆ. ವೆಂಕಟೇಶ್ ಹೇಳಿದರು. 
    ಅವರು ಶನಿವಾರ ನಗರದ ರಂಗಪ್ಪ ವೃತ್ತ ಸಮೀಪದ ಪಶು ಆಸ್ಪತ್ರೆ ಆವರಣದಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಮತ್ತು ನಗರಸಭೆ ವತಿಯಿಂದ ಆರ್‌ಐಡಿಎಫ್ ಟ್ರಾಂಚ್ ೩೦ ಯೋಜನೆಯಡಿ ನೂತನ ಪಶು ಆಸ್ಪತ್ರೆ ಕಟ್ಟಡಕ್ಕೆ ಶಂಕಸ್ಥಾಪನೆ ನೆರವೇರಿಸಿ ಮಾತನಾಡಿದರು. 
    ಹಾಲಿನ ದರ ೫ ರು. ಹೆಚ್ಚಿಸುವ ಉದ್ದೇಶ ಹೊಂದಲಾಗಿತ್ತು.  ಆದರೆ ವಿರೋಧ ಪಕ್ಷಗಳಿಂದ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗುವ ಉದ್ದೇಶದಿಂದ ೪ ರು. ಮಾತ್ರ ಹೆಚ್ಚಿಸಲಾಗಿದೆ. ಈ ಹಣ ರೈತರಿಗೆ ನೀಡಲಾಗುತ್ತಿದೆ. ಸರ್ಕಾರ ಪಾಪರ್ ಆಗಿದೆ ಎಂದು ವಿರೋಧ ಪಕ್ಷಗಳು ಬಾಯಿ ಬಡಿದುಕೊಳ್ಳುತ್ತಿವೆ. ಹಾಗಾದರೆ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಣ ಎಲ್ಲಿಂದ ಬರುತ್ತಿದೆ ಎಂದು ಪ್ರಶ್ನಿಸಿದರು. ಸರ್ಕಾರ ರೈತರ ಪರವಾಗಿದ್ದು, ರೈತರಿಗೆ ಇನ್ನೂ ಹೆಚ್ಚಿನ ಅನುಕೂಲಗಳನ್ನು ಮಾಡಿಕೊಡಲಿದೆ ಎಂದರು. 
    ಪ್ರಸ್ತುತ ಶಂಕುಸ್ಥಾಪನೆ ನೆರವೇರಿಸಿರುವ ಆಸ್ಪತ್ರೆ ಕಟ್ಟಡ ಕಾಮಗಾರಿ ತಕ್ಷಣ ಆರಂಭಗೊಳ್ಳಲಿದ್ದು, ಕೇವಲ ಕಟ್ಟಡ ನಿರ್ಮಾಣಗೊಂಡರೆ ಸಾಲದು ಅದಕ್ಕೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸುವುದು ಮುಖ್ಯ. ಈ ನಿಟ್ಟಿನಲ್ಲಿ ಈಗಾಗಲೇ ಹೊಸ ಕಟ್ಟಡಕ್ಕೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಶಾಸಕರು ತಾಲೂಕಿನ ಕಲ್ಲಹಳ್ಳಿ ಮತ್ತು ದೊಡ್ಡೇರಿ ಗ್ರಾಮಗಳಲ್ಲಿ ೨ ಆಸ್ಪತ್ರೆಗಳಿಗೆ ಬೇಡಿಕೆ ಸಲ್ಲಿಸಿದ್ದಾರೆ. ಸರ್ಕಾರದ ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.  
    ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆವಹಿಸಿ ಮಾತನಾಡಿ, ಸಚಿವರು ನನ್ನ ಮನವಿಗೆ ಸ್ಪಂದಿಸಿ ಆಸ್ಪತ್ರೆ ಮಂಜೂರಾತಿ ಮಾಡುವ ಜೊತೆಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಅವರಿಗೆ ಕ್ಷೇತ್ರದ ಜನತೆ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ. ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಸಿದ್ದರಾಮಯ್ಯರವರು ಆರ್ಥಿಕ ತಜ್ಞರಾಗಿದ್ದು, ಹೆಚ್ಚು ಬಾರಿ ಬಜೆಟ್ ಮಂಡಿಸಿರುವ ಏಕೈಕ ಜನಪ್ರತಿನಿಧಿಯಾಗಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಪಕ್ಷದವರು ವಿನಾಕಾರಣ ಆರೋಪಗಳನ್ನು ಮಾಡುವ ಜೊತೆಗೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಜನರು ಕಿವಿ ಕೊಡಬಾರದು ಎಂದರು. 
    ಶಿಮುಲ್ ನಿರ್ದೇಶಕ ಎಸ್. ಕುಮಾರ್ ಮಾತನಾಡಿ, ಪಶುಪಾಲನಾ ಕ್ಷೇತ್ರ ವಿಸ್ತಾರವಾಗಿದೆ. ಈ ಭಾಗದಲ್ಲಿ ಪಶುಪಾಲನಾ ಆಸ್ಪತ್ರೆ ಅಗತ್ಯವಿದ್ದು, ಇದರಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದರು. 
    ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್ ಮಾತನಾಡಿ, ರೈತರು ಚಿಕಿತ್ಸೆ ಸೇರಿದಂತೆ ಹೆಚ್ಚಿನ ಸೌಲಭ್ಯಗಳನ್ನುಪಡೆಯಲು ಬೇರೆ ಸ್ಥಳಗಳಿಗೆ ಹೋಗುವುದು ತಪ್ಪುತ್ತದೆ. ಇದರ ಸದುಪಯೋಗ ಪಡೆದುಕೊಂಡು ಪಶುಪಾಲನಾ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುವಂತೆ ಮನವಿ ಮಾಡಿದರು. 
    ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಸಯ್ಯದ್ ರಿಯಾಜ್, ಸದಸ್ಯರಾದ ಅನುಸುಧಾ ಮೋಹನ್ ಪಳನಿ, ಚನ್ನಪ್ಪ, ಎಸ್. ಮಣಿಶೇಖರ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ಶಿಮುಲ್ ನಿರ್ದೇಶಕ ಎಸ್. ಕುಮಾರ್, ಜಿ.ಪಂ. ಮಾಜಿ ಸದಸ್ಯ ಎಚ್.ಎಲ್ ಷಡಾಕ್ಷರಿ, ದಶರಥಗಿರಿ ಹಾಗು ಇಲಾಖೆ ಉಪ ನಿರ್ದೇಶಕ ಡಾ. ಎ. ಬಾಬುರತ್ನ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಜಾಗದ ಮೂಲ ದಾನಿಗಳಾದ ದಿವಂಗತ ಭೂಪಾಳಂ ರುಕ್ಮಯ್ಯ ಕುಟುಂಬಸ್ಥರನ್ನು ಸನ್ಮಾನಿಸಿ ಗೌರವಿಸಲಾಯಿತು. ಮುಖ್ಯ ಪಶು ವೈದ್ಯಾಧಿಕಾರಿ ಡಾ. ಡಿ.ಬಿ ಶಿವರಾಜ್ ಪ್ರಾಸ್ತಾವಿಕ ನುಡಿಗಳನ್ನಾಡಿ, ಡಾ. ರಾಜ್‌ಶೇಖರ್ ಸ್ವಾಗತಿಸಿದರು. 

Friday, May 16, 2025

ನೂತನ ಪಶು ಆಸ್ಪತ್ರೆಗೆ ಮೇ.೧೭ರಂದು ಶಂಕುಸ್ಥಾಪನೆ


    ಭದ್ರಾವತಿ : ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಮತ್ತು ನಗರಸಭೆ ವತಿಯಿಂದ ಆರ್‌ಐಡಿಎಫ್ ಟ್ರಾಂಚ್ ೩೦ ಯೋಜನೆಯಡಿ ನಗರದಲ್ಲಿ ನೂತನ ಪಶು ಆಸ್ಪತ್ರೆ ನಿರ್ಮಾಣಗೊಳ್ಳುತ್ತಿದ್ದು, ಮೇ.೧೭ರಂದು ಬೆಳಿಗ್ಗೆ ೧೧ ಗಂಟೆಗೆ ರಂಗಪ್ಪ ವೃತ್ತ ಸಮೀಪದ ಪಶು ಆಸ್ಪತ್ರೆ ಆವರಣದಲ್ಲಿ ಪಶುಪಾಲನಾ ಮತ್ತು ಪಶುವೈದ್ಯ  ಸೇವಾ ಇಲಾಖೆ ಹಾಗು ರೇಷ್ಮೆ ಇಲಾಖೆ ಸಚಿವ ಕೆ. ವೆಂಕಟೇಶ್ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 
    ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಉಪಸ್ಥಿತರಿರುವರು. ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಲಿದ್ದು, ಸಂಸದ ಬಿ.ವೈ ರಾಘವೇಂದ್ರ, ಶಾಸಕರಾದ ಗೋಪಾಲಕೃಷ್ಣ ಬೇಳೂರು, ಶಾರದ ಪೂರ್‍ಯಾನಾಯ್ಕ,  ಎಸ್.ಎಲ್ ಭೋಜೆಗೌಡ, ಭಾರತಿ ಶೆಟ್ಟಿ, ಡಿ.ಎಸ್ ಅರುಣ್, ಬಲ್ಕೀಶ್ ಬಾನು, ಡಾ. ಧನಂಜಯ ಸರ್ಜಿ, ನಿಗಮ ಮಂಡಳಿಗಳ ಅಧ್ಯಕ್ಷರಾದ ಜಿ. ಪಲ್ಲವಿ, ರವಿಕುಮಾರ್, ಎಚ್.ಎಸ್ ಸುಂದರೇಶ್, ಆರ್.ಎಂ ಮಂಜುನಾಥಗೌಡ, ಡಾ. ಅಂಶುಮಂತ್, ಎಸ್. ಚಂದ್ರಭೂಪಾಲ, ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಮಣಿ ಎಎನ್‌ಎಸ್, ಸದಸ್ಯೆ ಅನುಸುಧಾ ಮೋಹನ್ ಪಳನಿ, ಎಸ್. ಮಣಿಶೇಖರ್ ಸೇರಿದಂತೆ ಇನ್ನಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. 

ಮೇ.೧೭ರಂದು ವಿದ್ಯುತ್ ವ್ಯತ್ಯಯ



    ಭದ್ರಾವತಿ : ನಗರದ ಬೈಪಾಸ್ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ಹಿನ್ನಲೆಯಲ್ಲಿ  ಮೆಸ್ಕಾಂ ಘಟಕ-೩ರ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ಮಾರ್ಗಗಳ ತೆರವು ಕಾರ್ಯ ಹಮ್ಮಿಕೊಂಡಿರುವುದರಿಂದ ಮೇ.೧೭ರ ಶನಿವಾರ ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೬ ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 
    ಹೊಸ ಸಿದ್ದಾಪುರ, ಬೈಪಾಸ್ ರಸ್ತೆ, ನೀರು ಸರಬರಾಜು ಘಟಕ(ಪಂಪ್ ಹೌಸ್), ಎನ್‌ಟಿಬಿ ಬಡಾವಣೆ, ಸರ್.ಎಂ.ವಿ ಬಡಾವಣೆ, ಹಳೇ ಸಿದ್ದಾಪುರ, ತಾಂಡ್ಯ, ಹೊಸೂರು, ಸಂಕ್ಲಿಪುರ ಸೇರಿದಂತೆ ಇತ್ಯಾದಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕರಿಸುವಂತೆ ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ.  

ಉಚಿತ ನಾಟಕ ತರಬೇತಿ

    ಭದ್ರಾವತಿ: ನಗರದ ಮಿತ್ರ ಕಲಾ ಮಂಡಳಿ ಆಶ್ರಯದಲ್ಲಿ ಮೊದಲ ಬಾರಿಗೆ ನಾಟಕ ಕಲಿಯಲು ಬಯಸುವ ಯುವ ಸಮುದಾಯದವರಿಗೆ ರಂಗಭೂಮಿ ಕಲಾವಿದ, ನಿರ್ದೇಶಕ  ಅಪರಂಜಿ ಶಿವರಾಜ್ ನಿರ್ದೇಶನದಲ್ಲಿ ಉಚಿತ ತರಬೇತಿ ನೀಡಲಾಗುವುದು. 
    ಈಗಾಗಲೇ ಯುವ ಸಮುದಾಯದ ಸಾಕಷ್ಟು ಮಂದಿಗೆ ತರಭೇತಿ ನೀಡಲಾಗಿದ್ದು, ಅಲ್ಲದೆ ತರಬೇತಿ ಪಡೆದವರಿಂದ ಹಲವು ವೇದಿಕೆಗಳಲ್ಲಿ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. ಆಸಕ್ತ ಯುವಕ/ಯುವತಿಯರು ರಂಗ ತರಬೇತಿ ಪಡೆಯಲು ಹಾಗು ಹೆಚ್ಚಿನ ಮಾಹಿತಿಗೆ ಮೊ: ೭೯೭೫೦೪೨೧೩೦ ಅಥವಾ ೯೯೮೦೫೩೪೪೦೬ ಸಂಖ್ಯೆಗೆ ಕರೆ ಮಾಡಬಹುದಾಗಿದೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೋರಲಾಗಿದೆ. 

Thursday, May 15, 2025

ಹೋರಾಟಗಳ ನಡುವೆ ಮೇ.25ರಂದು ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಸಂಘದ ಚುನಾವಣೆ

ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ 
    ಭದ್ರಾವತಿ:  ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಗುತ್ತಿಗೆ ಕಾರ್ಮಿಕ ಸಂಘ(ವಿಐಎಸ್‌ಪಿ ಕಾಂಟ್ರಾಕ್ಟ್ ವರ್ಕರ್ಸ್ ಯೂನಿಯನ್)ದ 3 ವರ್ಷಗಳ ಅವಧಿಗೆ ಮೇ.25ರಂದು ಚುನಾವಣೆ ನಡೆಯುತ್ತಿದ್ದು, ಹಲವು ಸಂಕಷ್ಟಗಳ ನಡುವೆ ಗುತ್ತಿಗೆ ಕಾರ್ಮಿಕರು ಬಲಿಷ್ಠ ಸಂಘಟನೆಗಾಗಿ ತಮ್ಮ ನಾಯಕರ ಆಯ್ಕೆಯಲ್ಲಿ ತೊಡಗಿರುವುದು ಗಮನ ಸೆಳೆಯುತ್ತಿದೆ. 
    ಸುಮಾರು 30 ತಿಂಗಳಿನಿಂದ ಕಾರ್ಖಾನೆ ಮುಚ್ಚುವ ಪ್ರಕ್ರಿಯೆ ಹಿಂಪಡೆಯುವಂತೆ, ಅಗತ್ಯವಿರುವ ಬಂಡವಾಳ ತೊಡಗಿಸುವಂತೆ, ಗುತ್ತಿಗೆ ಕಾರ್ಮಿಕರಿಗೆ ಪೂರ್ಣಾವಧಿ ಉದ್ಯೋಗ ಕಲ್ಪಿಸಿಕೊಡುವಂತೆ ಹಾಗು ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಾರ್ಖಾನೆ ಮುಂಭಾಗದಲ್ಲಿ ನಿರಂತರವಾಗಿ ಹೋರಾಟದಲ್ಲಿ ತೊಡಗಿರುವ ಗುತ್ತಿಗೆ ಕಾರ್ಮಿಕರು ಇದೀಗ ತಮ್ಮ ಹೊಸ ನಾಯಕರನ್ನು ಆಯ್ಕೆ ಮಾಡಿಕೊಳ್ಳುವ ಕಾರ್ಯದಲ್ಲಿ ನಿರತರಾಗಿದ್ದಾರೆ. 
    ಒಟ್ಟು ಕಾರ್ಖಾನೆಯಲ್ಲಿ 1300ಕ್ಕೂ ಅಧಿಕ ಗುತ್ತಿಗೆ ಕಾರ್ಮಿಕರಿದ್ದು, ಈ ಪೈಕಿ ಸಂಘದಲ್ಲಿ 1044 ಮಂದಿ ಸದಸ್ಯರಿದ್ದಾರೆ. ಉಳಿದಂತೆ ಗುತ್ತಿಗೆ ಕಾರ್ಮಿಕರು ಎಐಟಿಯುಸಿ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ತಮ್ಮ 3 ವರ್ಷಗಳ ಅಧಿಕಾರಾವಧಿಯಲ್ಲಿ ಬಹುತೇಕ ಅವಧಿ ಹೋರಾಟದಲ್ಲಿಯೇ ಕಳೆದಿದ್ದಾರೆ. ಆದರೆ ಕಾರ್ಖಾನೆ ಪರಿಸ್ಥಿತಿ ಮಾತ್ರ ಬದಲಾಗಿಲ್ಲ. ಆಡಳಿತ ನಡೆಸುತ್ತಿರುವ ಸರ್ಕಾರಗಳಿಂದ ಕೇವಲ ಭರವಸೆಗಳ ಮಹಾಪೂರವೇ ಹರಿದು ಬಂದಿದೆ ಹೊರತು ಯಾವುದೇ ಭರವಸೆ ಇದುವರೆಗೂ ಈಡೇರಿಲ್ಲ ಎಂಬುದು ವಿಪರ್ಯಾಸದ ಸಂಗತಿಯಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಪುನಃ ಹೊಸ ನಾಯಕರ ಆಯ್ಕೆಯಲ್ಲಿ ಗುತ್ತಿಗೆ ಕಾರ್ಮಿಕರು ತೊಡಗಿಸಿಕೊಂಡಿರುವುದು ಕ್ಷೇತ್ರದಲ್ಲಿ ಇದೀಗ ಗಮನ ಸೆಳೆಯುತ್ತಿದೆ. 
    ಗುರುವಾರ ರಾತ್ರಿ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆಯಾಗಿದ್ದು, ಮೇ.25ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೂ ನ್ಯೂಟೌನ್ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆ (ಜೆಟಿಎಸ್)ಯಲ್ಲಿ ಮತದಾನ ನಡೆಯಲಿದ್ದು, ನಂತರ ಮತ ಎಣಿಕೆ ನಡೆಯಲಿದೆ. ಸಹಪ್ರಾಧ್ಯಾಪಕ ಡಾ. ಎಸ್. ಸುಮಂತ್ ಕುಮಾರ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 
    ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಸುರೇಶ್ ಮತ್ತು. ಬಿ.ಆರ್ ಸುನಿಲ್ ಕುಮಾರ್ ಸ್ಪರ್ಧಿಸಿದ್ದು, 2 ಉಪಾಧ್ಯಕ್ಷ ಸ್ಥಾನಕ್ಕೆ ವಿನೋದ್ ಕುಮಾರ್, ಮಂಜುನಾಥ್, ಎನ್. ಶ್ರೀನಿವಾಸ್, ಶ್ರೀಧರ್, ನವೀನ್ ಕುಮಾರ್, ಸಂಪತ್ ಕುಮಾರ್, ವೆಂಕಟೇಶ್ ಮತ್ತು ವಿಕ್ಟರ್ ಸೇರಿದಂತೆ ಒಟ್ಟು 8 ಜನ ಹಾಗು ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಕೇಶ್ ಮತ್ತು ಸತೀಶ್ ಕೆ.ಎಸ್  ಸ್ಪರ್ಧಿಸಿದ್ದಾರೆ.
    ಉಳಿದಂತೆ ಖಜಾಂಚಿ ಸ್ಥಾನಕ್ಕೆ ಆನಂದ ಮತ್ತು ಶ್ರೀನಿವಾಸ್  ಎಚ್.ಪಿ ಹಾಗೂ ದೇವರಾಜ್ ಒಟ್ಟು 3 ಜನ  ಸ್ಪರ್ಧಿಸಿದ್ದಾರೆ. ೩ ಸಹಕಾರ್ಯದರ್ಶಿ ಸ್ಥಾನಗಳಿಗೆ , ಅಂತೋಣಿ ದಾಸ್, ವಾಸುದೇವ ಬಿ.ಟಿ, ಯೋಗಾನಂದ, ಪರಶುರಾಮ್,  ಮಂಜುನಾಥ್ ಎನ್.ಬಿ, ತ್ಯಾಗರಾಜ್ ಎಚ್.ಡಿ, ಪ್ರಸನ್ನ ಬಾಬು, ಸಂತೋಷ್ ಕುಮಾರ್, ಕಾಸಿಂವಲಿ ಮತ್ತು ಶೇಷಪ್ಪಗೌಡ ಸೇರಿದಂತೆ ಒಟ್ಟು 10 ಜನ ಹಾಗು 12 ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಕ್ಕೆ ಅಕ್ಷಯ್ ಮತ್ತು ನವೀನ್ ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದಂತೆ 22 ಜನ ಸ್ಪರ್ಧಿಸಿದ್ದಾರೆ.   

ಚಿಕ್ಕಜಾಜೂರುವರೆಗೆ ನೂತನ ರೈಲ್ವೆ ಮಾರ್ಗದ ಅಂತಿಮ ಸರ್ವೆಗೆ ಆದೇಶ

ಉಕ್ಕಿನ ನಗರದ ವೈಭವ ಪುನಃ ಮರಳಿ ಬರುವ ಆಶಾ ಭಾವನೆ 



ಭದ್ರಾವತಿ ರೈಲ್ವೆ ನಿಲ್ದಾಣ

* ಅನಂತಕುಮಾರ್ 
    ಭದ್ರಾವತಿ: ನಗರದ ರೈಲ್ವೆ ನಿಲ್ದಾಣದಿಂದ ಚಿತ್ರದುರ್ಗ ಜಿಲ್ಲೆಯ ಚಿಕ್ಕಜಾಜೂರುವರೆಗೆ ನೂತನ ರೈಲ್ವೆ ಮಾರ್ಗದ ಕಾಮಗಾರಿಯನ್ನು ಶೀಘ್ರವೇ ಆರಂಭಿಸುವ ದೃಷ್ಠಿಯಿಂದ, ಈ ರೈಲ್ವೆ ಮಾರ್ಗದ ಅಂತಿಮ ಸರ್ವೆ ಮಾಡಲು ಕೇಂದ್ರ ರೈಲ್ವೆ ಸಚಿವಾಲಯ ಆದೇಶ ಹೊರಡಿಸಿದೆ. ಹೊಸ ರೈಲು ಮಾರ್ಗದಿಂದ ಕಳೆದು ಹೋಗಿರುವ ಉಕ್ಕಿನ ನಗರದ ವೈಭವ ಪುನಃ ಮರಳಿ ಬರುವ ಆಶಾ ಭಾವನೆ ಇಲ್ಲಿನ ನಿವಾಸಿಗಳಲ್ಲಿ ವ್ಯಕ್ತವಾಗುತ್ತಿದೆ. 
    ಈ ಹೊಸ ರೈಲು ಮಾರ್ಗ ಸ್ಥಾಪಿತವಾದ ನಂತರ ಮಲೆನಾಡು ಭಾಗಕ್ಕೆ ಬಯಲು ಸೀಮೆ ಹಾಗೂ ಅರೆ ಮಲೆನಾಡು ಭಾಗಗಳ ಸಂಪರ್ಕ ಸಾಧ್ಯತೆಯಿಂದ ವ್ಯಾಪಾರ, ವ್ಯವಹಾರ, ಪ್ರವಾಸೋದ್ಯಮ, ಕೈಗಾರಿಕೆ ಹಾಗೂ ವಾಣಿಜ್ಯೋದ್ಯಮಕ್ಕೆ ಹೆಚ್ಚಿನ ಬಲ ದೊರೆಯುತ್ತದೆ. ಇದರೊಂದಿಗೆ ಮಲೆನಾಡಿನ ಆರ್ಥಿಕ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಾಣವಾಗುತ್ತದೆ.
    ಜೊತೆಗೆ ಮಲೆನಾಡಿಗೆ ರಾಜ್ಯದ ಎಲ್ಲಾ ಮೂಲೆಗಳಿಗೆ ಉತ್ತಮ ಸಂಪರ್ಕ ದೊರೆಯುವ ಮೂಲಕ ಜನಸಾಮಾನ್ಯರ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಪೂರಕವಾಗುತ್ತದೆ. ಬಂಡವಾಳ ಹೂಡಿಕೆಗೆ ಉತ್ತಮ ವಾತಾವರಣ ಕೂಡ ನಿರ್ಮಾಣವಾಗುತ್ತದೆ.
    ಈ ಹಿಂದೆ ನಗರದಲ್ಲಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಹಾಗು ಮೈಸೂರು ಕಾಗದ ಕಾರ್ಖಾನೆಗಳು ಆರಂಭಗೊಂಡ ಸಂದರ್ಭದಲ್ಲಿ ಅಂದಿನ ಮೈಸೂರು ಸಂಸ್ಥಾನ ಎರಡು ಕಾರ್ಖಾನೆಗಳಿಗೆ ಕಬ್ಬಿಣದ ಅದಿರು, ಸುಣ್ಣದ ಕಲ್ಲು, ಕಲ್ಲಿದ್ದಲು, ಬಿದಿರು ಸೇರಿದಂತೆ ಇನ್ನಿತರ ಕಚ್ಛಾ ಸಾಮ್ರಗಿಗಳನ್ನು ಪೂರೈಸಲು ರೈಲ್ವೆ ಸಂಪರ್ಕಗಳನ್ನು ಕಲ್ಪಿಸಿಕೊಟ್ಟಿತ್ತು. ನಂತರದ ದಿನಗಳಲ್ಲಿ ಈ ಸಂಪರ್ಕಗಳು ಕಣ್ಮರೆಯಾಗಿದ್ದು, ಇದರೊಂದಿಗೆ ಎರಡು ಕಾರ್ಖಾನೆಗಳ ಅವನತಿ ಸಹ ಆರಂಭಗೊಂಡಿತು. ಇದೀಗ ನಗರದಲ್ಲಿ ಹೊಸ ಕೈಗಾರಿಕೆಗಳಿಗೆ ಪೂರಕವಾಗುವಂತೆ ಹೊಸ ರೈಲ್ವೆ ಸಂಪರ್ಕಗಳಿಗೆ ಎದುರು ನೋಡುತ್ತಿದ್ದ ಇಲ್ಲಿನ ಕೈಗಾರಿಕೋದ್ಯಮಿಗಳಲ್ಲಿ ಭವಿಷ್ಯದ ಭರವಸೆಗಳನ್ನು ಮೂಡಿಸಿದೆ. 
    ಬಜೆಟ್‌ನಲ್ಲಿ ಘೋಷಣೆ : 
    ನಗರದಿಂದ ಚಿಕ್ಕಜಾಜೂರುವರೆಗೆ ನೂತನ ರೈಲ್ವೆ ಮಾರ್ಗ ಆರಂಭಿಸುವ ಕುರಿತು ಈ ಬಾರಿ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಘೋಷಿಸಿತ್ತು. ಸುಮಾರು ೧,೮೨೫ ಕೋ. ರು. ವೆಚ್ಚದ ೭೩ ಕಿ.ಮೀ ಉದ್ದದ ರೈಲ್ವೆ ಸಂಪರ್ಕಕ್ಕೆ ಅನುಮೋದನೆ ನೀಡಿತ್ತು. ಇದೀಗ ಕಾಮಗಾರಿ ಆರಂಭಿಸಲು ಅಂತಿಮ ಹಂತದ ಸರ್ವೆ ಕಾರ್ಯ ಕೈಗೊಳ್ಳಲು ಆದೇಶಲಾಗಿದೆ. 
    ಮಲೆನಾಡು ಭಾಗಕ್ಕೆ ಬಯಲು ಸೀಮೆ ಹಾಗೂ ಅರೆ ಮಲೆನಾಡು ಭಾಗಗಳ ಸಂಪರ್ಕ ಕಲ್ಪಿಸಲು ಪ್ರಸ್ತುತ ಯಾವುದೇ ರೈಲ್ವೆ ಮಾರ್ಗವಿಲ್ಲ. ಈ ಹಿನ್ನಲೆಯಲ್ಲಿ ಸಂಸದ ಬಿ.ವೈ ರಾಘವೇಂದ್ರರವರು ಹೊಸ ರೈಲ್ವೆ ಮಾರ್ಗ ಅನ್ವೇಷಣೆ ಕೈಗೊಂಡು ಸಂಪರ್ಕ ಕಲ್ಪಿಸುವಂತೆ ಹಲವು ಬಾರಿ ರೈಲ್ವೆ ಸಚಿವರು ಹಾಗು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದರು. ಇದರ ಪರಿಣಾಮ ಹೊಸ ರೈಲ್ವೆ ಮಾರ್ಗ ಆರಂಭಗೊಳ್ಳುತ್ತಿದೆ. 

ಸಂಸದ ಬಿ.ವೈ ರಾಘವೇಂದ್ರ 

    ಸಂಸದರಿಂದ ಕೃತಜ್ಞತೆ : 
    ರೈಲ್ವೆ ಮಾರ್ಗದ ಅಂತಿಮ ಸರ್ವೆ ಮಾಡಲು ಕೇಂದ್ರ ರೈಲ್ವೆ ಸಚಿವಾಲಯ ಆದೇಶ ಹೊರಡಿಸಿರುವ ಹಿನ್ನಲೆಯಲ್ಲಿ ಸಂಸದ ಬಿ.ವೈ ರಾಘವೇಂದ್ರ ಅವರು, ದೂರದೃಷ್ಟಿ ಇಟ್ಟುಕೊಂಡು ರಾಜ್ಯದಲ್ಲಿ ರೈಲ್ವೆ ಮೂಲಸೌಕರ್ಯಗಳ ಹೆಚ್ಚಳ ಹಾಗೂ ನೂತನ ರೈಲ್ವೆ ಮಾರ್ಗಗಳ ನಿರ್ಮಾಣಕ್ಕೆ ಬೆಂಬಲವಾಗಿ ನಿಂತಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆಗಳ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಶಿವಮೊಗ್ಗ ಜಿಲ್ಲೆಯ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ. 
 
 

ಮಂಗೋಟೆ ರುದ್ರೇಶ್ 

ಸಂಸದ ಬಿ.ವೈ ರಾಘವೇಂದ್ರರವರು ಭದ್ರಾವತಿ ನಗರದ ಭವಿಷ್ಯದ ಬೆಳವಣಿಗೆ ಗಮನದಲ್ಲಿಟ್ಟುಕೊಂಡು ಈ ಹೊಸ ರೈಲ್ವೆ ಮಾರ್ಗಕ್ಕೆ ಪ್ರಯತ್ನಿಸಿದ್ದರು. ಇದೀಗ ಅವರ ಪ್ರಯತ್ನ ಯಶಸ್ವಿಯಾಗುತ್ತಿದ್ದು, ಹೊಸ ರೈಲ್ವೆ ಮಾರ್ಗದ ಬಹುಮುಖ್ಯವಾದ ಮೊದಲನೇ ಉದ್ದೇಶ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗೆ ಅದಿರು ಪೂರೈಕೆ ಮಾಡಿಕೊಳ್ಳುವುದಾಗಿದೆ. ಉಳಿದಂತೆ ಎರಡನೇ ಉದ್ದೇಶ ಮಲೆನಾಡು ಭಾಗಕ್ಕೆ ಬಯಲು ಸೀಮೆ ಹಾಗೂ ಅರೆ ಮಲೆನಾಡು ಭಾಗಗಳ ಸಂಪರ್ಕ ಕಲ್ಪಿಸುವುದಾಗಿದೆ. ಕೈಗಾರಿಕೆಗಳ ಬೆಳವಣಿಗೆ ಸೇರಿದಂತೆ ಸರ್ವತೋರ್ಮುಖ ಅಭಿವೃದ್ಧಿಗೆ ಈ ಹೊಸ ರೈಲ್ವೆ ಮಾರ್ಗ ಸಹಕಾರಿಯಾಗಿದೆ.  ಈ ಹಿನ್ನಲೆಯಲ್ಲಿ ಪ್ರಧಾನ ಮಂತ್ರಿಗಳು, ಕೇಂದ್ರ ರೈಲ್ವೆ ಸಚಿವರು, ರಾಜ್ಯ ಖಾತೆ ಸಚಿವರು ಹಾಗು ಸಂಸದರಿಗೆ, ರೈಲ್ವೆ ಅಧಿಕಾರಿಗಳಿಗೆ ಮತ್ತು ಈ ನಿಟ್ಟಿನಲ್ಲಿ ಶ್ರಮಿಸಿರುವ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುತ್ತೇನೆ.  
 - ಮಂಗೋಟೆ ರುದ್ರೇಶ್, ಯುವ ಮುಖಂಡರು, ಭದ್ರಾವತಿ