ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿರುವ ಭದ್ರಾವತಿ ತಾಲೂಕಿನ ಕಸಬಾ ೧ನೇ ವೃತ್ತ, ಗ್ರಾಮದ ಸ.ನಂ. ೧೧೮/೧, ೧೧೮/೨ಎ, ೧೧೮/೨ನಿ, ೧೪೭ ಮತ್ತಿತರೆ ಒಟ್ಟು ೩೨ ಎಕರೆ ೨೧ ಪ್ರದೇಶದಲ್ಲಿ ಗುರುವಾರ ಗಡಿ ಗುರುತಿಸಿ ಫಲಕಗಳನ್ನು ಅಳವಡಿಸಲಾಯಿತು.
ಭದ್ರಾವತಿ: ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿರುವ ತಾಲೂಕಿನ ಕಸಬಾ ೧ನೇ ವೃತ್ತ, ಗ್ರಾಮದ ಸ.ನಂ. ೧೧೮/೧, ೧೧೮/೨ಎ, ೧೧೮/೨ನಿ, ೧೪೭ ಮತ್ತಿತರೆ ಒಟ್ಟು ೩೨ ಎಕರೆ ೨೧ ಪ್ರದೇಶದಲ್ಲಿ ಗುರುವಾರ ಗಡಿ ಗುರುತಿಸಿ ಫಲಕಗಳನ್ನು ಅಳವಡಿಸಲಾಯಿತು.
ನಗರಸಭೆ ವ್ಯಾಪ್ತಿಯ ಕೋಡಿಹಳ್ಳಿ ರಸ್ತೆಯ ದೈವಜ್ಞ ಮತ್ತು ಮಾಧವನಗರಕ್ಕೆ ಹೊಂದಿಕೊಂಡಿರುವ ಜಾಗವನ್ನು ಈಗಾಗಲೇ ಆಕ್ರಮಿಸಿಕೊಂಡು ಬಾಳೆ, ತೆಂಗು, ಅಡಕೆ ಮತ್ತು ಭತ್ತದ ಬೆಳೆಗಳನ್ನು ಬೆಳೆಯಲಾಗಿದೆ. ಬೆಳಿಗ್ಗೆ ಪ್ರಾಧಿಕಾರದ ಸದಸ್ಯ ಎಚ್. ರವಿಕುಮಾರ್ ನೇತೃತ್ವದಲ್ಲಿ ಅಧಿಕಾರಿ ಅಭಿಲಾಷ್ ಮತ್ತು ಸಿಬ್ಬಂದಿಗಳಾದ ಹರೀಶ್, ಅಮೃತ್ ಸೇರಿದಂತೆ ಇನ್ನಿರರನ್ನೊಳಗೊಂಡ ತಂಡ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆ ಉಪ ನಿರೀಕ್ಷಕ ಕೃಷ್ಣಕುಮಾರ್ ಮಾನೆ ನೇತೃತ್ವದ ಪೊಲೀಸ್ ತಂಡದ ಬಿಗಿ ಭದ್ರತೆಯಲ್ಲಿ ಗಡಿ ಗುರುತಿಸುವ ಮೂಲಕ ಫಲಕಗಳನ್ನು ಅಳವಡಿಸಿತು.
ಈ ನಡುವೆ ಈ ಜಾಗದಲ್ಲಿ ಬೆಳೆ ಬೆಳೆದಿರುವವರು ಪ್ರಾಧಿಕಾರದ ತಂಡವರೊಂದಿಗೆ ಕೆಲ ಸಮಯ ವಾಗ್ವಾದ ನಡೆಸಿದರು. ಅಲ್ಲದೆ ಸ್ಥಳದಲ್ಲಿಯೇ ಸಂಬಂಧಿಸಿದ ದಾಖಲೆಗಳನ್ನು ತೋರಿಸುವ ಮೂಲಕ ಅಧಿಕಾರಿಗಳು ಸಮರ್ಥನೆ ನೀಡಿದರು. ನಗರಸಭೆ ಸದಸ್ಯ ಚನ್ನಪ್ಪ ಬೆಳೆ ಬೆಳೆದಿರುವವರಿಗೆ ಪ್ರಾಧಿಕಾರದವರು ಪ್ರಸ್ತುತ ಫಲಕಗಳನ್ನು ಅಳವಡಿಸಲಿದ್ದು, ಯಾವುದೇ ರೀತಿ ಆತಂಕಪಡುವ ಅಗತ್ಯವಿಲ್ಲ. ಮುಂದಿನ ದಿನಗಳಲ್ಲಿ ಸಮಸ್ಯೆ ಚರ್ಚಿಸಿ ಬಗೆಹರಿಸಿಕೊಳ್ಳುವಂತೆ ಸಮಾಧಾನಪಡಿಸಿದರು.
ಸೂಡಾ ಸದಸ್ಯ ಎಚ್. ರವಿಕುಮಾರ್ ಪತ್ರಿಕೆಗೆ ಮಾಹಿತಿ ನೀಡಿ, ಪ್ರಾಧಿಕಾರಕ್ಕೆ ಸೇರಿರುವ ಜಾಗಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಅಧಿಕಾರಿಗಳ ಬಳಿ ಇವೆ. ಈ ಜಾಗದಲ್ಲಿ ಪ್ರಾಧಿಕಾರದಿಂದ ವಸತಿ ಯೋಜನೆಯಡಿ ನಿವೇಶನಗಳನ್ನು ನಿರ್ಮಿಸಿ ವಿತರಿಸಲಾಗುವುದು. ಸುಮಾರು ೧ ಸಾವಿರ ನಿವೇಶನಗಳನ್ನು ಈ ಜಾಗದಲ್ಲಿ ನಿರ್ಮಿಸಬಹುದಾಗಿದ್ದು, ಇದರಿಂದ ನಗರದಲ್ಲಿಯೇ ಅತಿ ದೊಡ್ಡ ಬಡಾವಣೆ ನಿರ್ಮಾಣಗೊಳ್ಳಲಿದೆ. ನಿವೇಶನರಹಿತರಿಗೆ ಅನುಕೂಲ ಮಾಡಿಕೊಡುವ ಉದ್ದೇಶ ಪ್ರಾಧಿಕಾರ ಹೊಂದಿದೆ ಎಂದರು.
ಪ್ರಸ್ತುತ ಬೆಳೆಬೆಳೆದಿರುವವರು ತಮ್ಮ ಬಳಿ ಯಾವುದಾದರೂ ಸೂಕ್ತ ದಾಖಲೆಗಳು ಇದ್ದಲ್ಲಿ ಪ್ರಾಧಿಕಾರದ ಅಧಿಕಾರಿಗಳ ಬಳಿ ಹಾಜರುಪಡಿಸಿ ಗೊಂದಲ ಬಗೆಹರಿಸಿಕೊಳ್ಳಬಹುದು. ಪ್ರಸ್ತುತ ಬೆಳೆದಿರುವ ಬೆಳೆಗಳಿಗೆ ಯಾವುದೇ ರೀತಿ ಹಾನಿ ಮಾಡುವುದಿಲ್ಲ ಎಂದರು.