ಮಳೆ ಸಂಬಂಧ ಅಧಿಕಾರಿಗಳ ಸಭೆ : ಸಹಾಯವಾಣಿ ಕೇಂದ್ರ ಆರಂಭ
ಭದ್ರಾವತಿಯಲ್ಲಿ ಸೋಮವಾರ ಬೆಳಿಗ್ಗೆ ಸುಮಾರು ಅರ್ಧ ತಾಸು ಜೋರು ಮಳೆಯಾಗಿದ್ದು, ಉಳಿದಂತೆ ಆಗಾಗ ತುಂತುರು ಮಳೆಯಾಗಿದೆ.
ಭದ್ರಾವತಿ: ಕಳೆದ ಕೆಲವು ದಿನಗಳಿಂದ ತಾಲೂಕಿನಾದ್ಯಂತ ವ್ಯಾಪಕ ಮಳೆಯಾಗುತ್ತಿದ್ದು, ಆದರೆ ಇದುವರೆಗೂ ಯಾವುದೇ ಹಾನಿ ಸಂಭವಿಸಿಲ್ಲ. ರೈತರು ಭತ್ತದ ಬೆಳೆ ಕೊಯ್ಲು ೩-೪ ದಿನ ಮುಂದೂಡುವಂತೆ ಕೃಷಿ ಇಲಾಖೆ ಅಧಿಕಾರಿಗಳು ಸಲಹೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿರುವ ಕೃಷಿ ಇಲಾಖೆಯ ಅಧಿಕಾರಿ ರಾಕೇಶ್, ತಾಲೂಕಿನಲ್ಲಿ ಭತ್ತ ಮತ್ತು ಅಡಕೆ ಬೆಳೆ ಪ್ರಮುಖವಾಗಿದ್ದು, ಪ್ರಸ್ತುತ ಭತ್ತ ಕೊಯ್ಲು ಹಂತ ತಲುಪಿದೆ. ರೈತರು ಕೊಯ್ಲು ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಮುಂದಿನ ೩-೪ ದಿನಗಳ ವರೆಗೆ ಕೊಯ್ಲು ಕಾರ್ಯ ಸ್ಥಗಿತಗೊಳಿಸುವುದು. ಒಂದು ವೇಳೆ ಮಳೆ ಮುಂದುವರೆದರೆ ಮಳೆ ನೀರಿನಿಂದ ಭತ್ತದ ಹುಲ್ಲು ಹಾನಿಯಾಗಲಿದೆ. ಇದನ್ನು ತಪ್ಪಿಸಲು ಸ್ಥಗಿತಗೊಳಿಸುವುದು ಸೂಕ್ತವಾಗಿದೆ ಎಂದರು.
ಪ್ರಸ್ತುತ ಸುರಿದಿರುವ ಮಳೆಯಿಂದ ಯಾವುದೇ ಹಾನಿಯಾಗಿಲ್ಲ. ಒಂದು ವೇಳೆ ದಪ್ಪ ಹನಿಯಿಂದ ಕೂಡಿರುವ ಮಳೆ ನಿರಂತರವಾಗಿ ಸುರಿದರೆ ಭತ್ತದ ಕಾಳು ಕೆಳಗೆ ಬಿದ್ದು ಹಾನಿ ಸಂಭವಿಸಲಿದೆ. ಉಳಿದಂತೆ ಅಡಕೆ ಬೆಳೆಗೆ ಪ್ರಸ್ತುತ ಸುರಿಯುತ್ತಿರುವ ಮಳೆ ಅನುಕೂಲವಾಗಿದ್ದು, ಬೇಸಿಗೆಯಿಂದ ನೀರಿಲ್ಲದೆ ಒಣಗಿರುವ ಅಡಕೆ ಗಿಡಗಳಿಗೆ ತೇವಾಂಶ ಹೆಚ್ಚಳವಾಗಲಿದ್ದು, ಅಲ್ಲದೆ ಅಡಕೆ ಬೆಳೆಗೆ ಗೊಬ್ಬರ ನೀಡಲು ಸೂಕ್ತ ಸಮಯವಾಗಿದೆ ಎಂದರು.
ಮಳೆಯಿಂದ ನಗರ ಹಾಗು ಗ್ರಾಮಾಂತರ ಪ್ರದೇಶದಲ್ಲಿ ಇದುವರೆಗೂ ಯಾವುದೇ ಹಾನಿಯಾಗಿಲ್ಲ. ಮಳೆಯಿಂದಾಗಿ ಶನಿವಾರ ಮತ್ತು ಭಾನುವಾರ ವ್ಯಾಪಾರ-ವಹಿವಾಟಿಗೆ ಸ್ವಲ್ಪ ಸಮಸ್ಯೆಯಾಗಿದೆ. ಸೋಮವಾರ ಬೆಳಿಗ್ಗೆ ಸುಮಾರು ಅರ್ಧ ತಾಸು ಜೋರು ಮಳೆಯಾಗಿದೆ.
ಸೋಮವಾರ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಮತ್ತು ನಗರಸಭೆ ವತಿಯಿಂದ ಮಳೆ ಸಂಬಂಧ ಸಭೆ ನಡೆಸಲಾಗಿದ್ದು, ಎಲ್ಲಾ ಇಲಾಖೆಗಳ ಮಾಹಿತಿ ಪಡೆದುಕೊಳ್ಳಲಾಗಿದೆ.
ತಾಲೂಕು ಕಛೇರಿ ಸಹಾಯವಾಣಿ ಕೇಂದ್ರ ಸ್ಥಾಪನೆ :
ತಾಲೂಕಿನಲ್ಲಿ ಅತಿ ಹೆಚ್ಚು ಮಳೆ ಬಿಳುತ್ತಿದ್ದು, ಯಾವುದೇ ಹಾನಿಯಾದಲ್ಲಿ, ತೊಂದರೆಯಾದಲ್ಲಿ ತಕ್ಷಣ ತಾಲೂಕು ಕಛೇರಿ ಸಹಾಯವಾಣಿ (ಹೆಲ್ಸ್ ಡೆಸ್ಕ್) ಕೇಂದ್ರ ದೂರವಾಣಿ ಸಂಖ್ಯೆ :೦೮೨೮೨-೨೬೩೪೬೬ ಕ್ಕೆ ಸಂಪರ್ಕಿಸಲು ಕೋರಲಾಗಿದೆ.
ತುರ್ತು ಸನ್ನಿವೇಶಗಳಲ್ಲಿ ಸಮೀಪದ ನೋಡಲ್ ಅಧಿಕಾರಿಗಳು ಹಾಗೂ ತಹಸೀಲ್ದಾರ್ ಅವರನ್ನು ಸಂಪರ್ಕಿಸಬಹುದಾಗಿದ್ದು, ತಹಸೀಲ್ದಾರ್, ಮೊ: ೮೮೬೭೪೩೨೯೫೨, ತಹಸೀಲ್ದಾರ್ ಗ್ರೇಡ್-೨, ಮೊ: ೯೯೪೫೩೭೭೪೬೨, ಶಿರಸ್ತೆದಾರ್, ಮೊ: ೭೭೯೫೨೩೫೦೫೫, ಉಪ ತಹಸೀಲ್ದಾರ್ ಕೂಡ್ಲಿಗೆರೆ ಮೊ: ೯೯೦೦೮೦೦೬೪೮, ಉಪ ತಹಶೀಲ್ದಾರ್ ಆನವೇರಿ ೯೪೮೦೪೬೭೧೯೮, ಉಪ ತಹಶೀಲ್ದಾರ್ ಕಲ್ಲಿಹಾಳ್ ಮತ್ತು ಹೊಳೆಹೊನ್ನೂರು ಮೊ: ೭೮೯೨೬೨೧೧೦೬, ರಾಜಸ್ವ ನಿರೀಕ್ಷಕರು ಕಸಬಾ ಹೋಬಳಿ ಮೊ: ೯೪೪೯೬೮೬೪೭೪, ರಾಜಸ್ವ ನಿರೀಕ್ಷಕರು ಕೂಡ್ಲಿಗೆರೆ ಹೋಬಳಿ ಮೊ: ೯೪೮೩೨೯೨೩೦೯ ಮತ್ತು ರಾಜಸ್ವ ನಿರೀಕ್ಷಕರು ಹೊಳೆಹೊನ್ನೂರು ಹೋಬಳಿ ಮೊ: ೭೮೯೨೬೨೧೧೧೦೬ ರವರಿಗೆ ಮಾಹಿತಿ ನೀಡಲು ಕೋರಲಾಗಿದೆ.