ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗೆ ಶುಕ್ರವಾರ ಭೇಟಿ ನೀಡಿದ ಪ್ರಾಧಿಕಾರದ ಅಧ್ಯಕ್ಷರಾದ ಅಮರೇಂದು ಪ್ರಕಾಶ್ ಮತ್ತು ಕೇಂದ್ರ ಉಕ್ಕು ಕಾರ್ಯದರ್ಶಿ ಸಂದೀಪ್ ಪೌಂಡ್ರಿಕ್ ಅವರನ್ನು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್(ಪಿಎಲ್‌ಡಿ ಬ್ಯಾಂಕ್) ಅಧ್ಯಕ್ಷ ಬಿ.ಕೆ ಶಿವಕುಮಾರ್ ಭೇಟಿ ಮಾಡಿ ಸನ್ಮಾನಿಸಿ ಗೌರವಿಸಿದರು.
ಭದ್ರಾವತಿ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗೆ ಶುಕ್ರವಾರ ಭೇಟಿ ನೀಡಿದ ಪ್ರಾಧಿಕಾರದ ಅಧ್ಯಕ್ಷರಾದ ಅಮರೇಂದು ಪ್ರಕಾಶ್ ಮತ್ತು ಕೇಂದ್ರ ಉಕ್ಕು ಕಾರ್ಯದರ್ಶಿ ಸಂದೀಪ್ ಪೌಂಡ್ರಿಕ್ ಅವರನ್ನು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್(ಪಿಎಲ್‌ಡಿ ಬ್ಯಾಂಕ್) ಅಧ್ಯಕ್ಷ ಬಿ.ಕೆ ಶಿವಕುಮಾರ್ ಭೇಟಿ ಮಾಡಿ ಸನ್ಮಾನಿಸಿ ಗೌರವಿಸಿದರು.
ಇತ್ತೀಚೆಗೆ ಮೇ.೨೪ರಂದು ದೆಹಲಿಯಲ್ಲಿ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆ ಸಚಿವ ಎಚ್.ಡಿ ಕುಮಾರಸ್ವಾಮಿಯವರು ಕಾರ್ಖಾನೆಯನ್ನು ಸಂಪೂರ್ಣವಾಗಿ ಹೊಸದಾಗಿ ಮರು ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದು, ೧೦ ಸಾವಿರ ಕೋ.ರು ಬಂಡವಾಳ ತೊಡಗಿಸುವುದಾಗಿ ತಿಳಿಸಿದ್ದರು. ಈ ಸಂಬಂಧ ೨ ತಿಂಗಳಲ್ಲಿ ವಿಸ್ತೃತ ಯೋಜನಾ ವರದಿ(ಡಿಪಿಆರ್) ಸಿದ್ದಪಡಿಸುವುದಾಗಿ ಹಾಗು ವರ್ಷಾಂತ್ಯಕ್ಕೆ ಯೋಜನೆಯ ಅನುಷ್ಠಾನಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಅಡಿಗಲ್ಲು ಹಾಕುವುದಾಗಿ ಮಾಹಿತಿ ನೀಡಿದ್ದರು.
ಇದಕ್ಕೆ ಪೂರಕವೆಂಬಂತೆ ಉಕ್ಕು ಪ್ರಾಧಿಕಾರದ ಅಧ್ಯಕ್ಷರಾದ ಅಮರೇಂದು ಪ್ರಕಾಶ್ ಮತ್ತು ಕೇಂದ್ರ ಉಕ್ಕು ಕಾರ್ಯದರ್ಶಿ ಸಂದೀಪ್ ಪೌಂಡ್ರಿಕ್ ಕಾರ್ಖಾನೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ. ಆದರೆ ಈ ಕುರಿತು ಕಾರ್ಖಾನೆ ಆಡಳಿತ ಮಂಡಳಿಯಾಗಲಿ, ಕಾಯಂ ಹಾಗು ಗುತ್ತಿಗೆ ಕಾರ್ಮಿಕರ ಸಂಘಟನೆಗಳಾಗಲಿ ಯಾರು ಸಹ ಅಧಿಕೃತ ಮಾಹಿತಿ ಮಾಧ್ಯಮಗಳಿಗೆ ತಿಳಿಸಿಲ್ಲ. ಆದರೆ ಕಾರ್ಖಾನೆ ಬಳಿ ಈ ಸಂಬಂಧ ಬೃಹತ್ ಫ್ಲೆಕ್ಸ್‌ಗಳನ್ನು ಅಳವಡಿಸಿ ಈ ಇಬ್ಬರು ಅಧಿಕಾರಿಗಳಿಗೆ ಸ್ವಾಗತ ಕೋರಲಾಗಿದೆ.
ಈ ಮಾಹಿತಿ ತಿಳಿದು ಶಾಸಕರ ಸಹೋದರ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್ ಕಾರ್ಖಾನೆಯ ಅತಿಥಿ ಗೃಹದಲ್ಲಿ ಈ ಇಬ್ಬರು ಅಧಿಕಾರಿಗಳನ್ನು ಭೇಟಿ ಮಾಡಿ ಕ್ಷೇತ್ರದ ಜನರ ಪರವಾಗಿ ಸನ್ಮಾನಿಸಿ ಗೌರವಿಸಿದರು.
ವಿಐಎಸ್‌ಎಲ್ ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ, ಮೆಸ್ಕಾಂ ಗ್ರಾಹಕರ ಸಲಹಾ ಸಮಿತಿ ತಾಲೂಕು ಅಧ್ಯಕ್ಷ, ಕಾರ್ಖಾನೆಯ ನಿವೃತ್ತ ನೌಕರ ಬಸವಂತಪ್ಪ, ಮುಖಂಡ ಎಂ.ಎಸ್ ರವಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.