Tuesday, June 10, 2025

ನಿವೃತ್ತ ಪೊಲೀಸ್ ಸಿಬ್ಬಂದಿ ನಿಟ್ಟೂರು ರಾಜಶೇಖರ್ ನಿಧನ

ನಿಟ್ಟೂರು ರಾಜಶೇಖರ್ 
    ಭದ್ರಾವತಿ : ನಗರದ ಲೋಯರ್ ಹುತ್ತಾ ನಿವಾಸಿ, ನಿವೃತ್ತ ಪೊಲೀಸ್ ಸಿಬ್ಬಂದಿ ನಿಟ್ಟೂರು ರಾಜಶೇಖರ್(೭೨) ಮಂಗಳವಾರ ನಿಧನ ಹೊಂದಿದರು. 
    ಪತ್ನಿ, ಪುತ್ರ ಹಾಗು ಪುತ್ರಿ ಇದ್ದಾರೆ. ಹಿರಿಯ ಪತ್ರಕರ್ತ ದಿವಂಗತ ನಿಟ್ಟೂರು ಶ್ರೀರಾಮ್‌ರವರ ಸಹೋದರರಾದ ರಾಜಶೇಖರ್‌ರವರು ಮಾಚೇನಹಳ್ಳಿ ಸಶಸ್ತ್ರ ಮೀಸಲು ಪಡೆ (ಕೆಎಸ್‌ಆರ್‌ಪಿ)ಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ನಂತರ ನಗರದ ಪೊಲೀಸ್ ಉಪಾಧೀಕ್ಷಕರ ಕಛೇರಿಯಲ್ಲಿ ಸ್ಟೆನೋಗ್ರಾಫರ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದರು. 
    ರಾಜಶೇಖರ್ ಹಲವಾರು ವರ್ಷಗಳವರೆಗೆ ಪತ್ರಿಕಾ ವಿತರಕರಾಗಿ ಸಹ ಕಾರ್ಯ ನಿರ್ವಹಿಸಿದ್ದು,  ಇವರ ನಿಧನಕ್ಕೆ ನಗರದ ಗಣ್ಯರು ಸಂತಾಪ ಸೂಚಿಸಿದ್ದಾರೆ. 

Monday, June 9, 2025

ತೀರ್ಥಹಳ್ಳಿ ನ್ಯಾಯವಾದಿ ಮೇಲೆ ಹಲ್ಲೆ ಪ್ರಕರಣ ಖಂಡಿಸಿ ಪ್ರತಿಭಟನೆ

ತೀರ್ಥಹಳ್ಳಿ ನ್ಯಾಯವಾದಿ ಮಧುಕರ್ .ಆರ್ ಮಯ್ಯ ಅವರನ್ನು ಅಪರಿಚಿತರು ಅಡ್ಡಗಟ್ಟಿ ಮಾರಣಾಂತಿಕ ಹಲ್ಲೆ ನಡೆಸಿರುವುದನ್ನು ಖಂಡಿಸಿ ಭದ್ರಾವತಿ ತಾಲೂಕು ವಕೀಲರ ಸಂಘದಿಂದ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ :  ತೀರ್ಥಹಳ್ಳಿ ನ್ಯಾಯವಾದಿ ಮಧುಕರ್ .ಆರ್ ಮಯ್ಯ ಅವರನ್ನು ಅಪರಿಚಿತರು ಅಡ್ಡಗಟ್ಟಿ ಮಾರಣಾಂತಿಕ ಹಲ್ಲೆ ನಡೆಸಿರುವುದನ್ನು ಖಂಡಿಸಿ ತಾಲೂಕು ವಕೀಲರ ಸಂಘದಿಂದ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
    ಇದಕ್ಕೂ ಮೊದಲು ಸಂಘದ ಅಧ್ಯಕ್ಷ ಉಮೇಶ್‌ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನ್ಯಾಯವಾದಿಗಳಾದ ಕೆ.ಎನ್ ಶ್ರೀಹರ್ಷ, ವೆಂಕಟೇಶ್, ಕೇಶವಮೂರ್ತಿ, ಟಿ. ಚಂದ್ರೇಗೌಡ, ಜಯರಾಂ, ಪ್ರಶಾಂತ್ ಸೇರಿದಂತೆ ಇನ್ನಿತರರು ಮಾತನಾಡಿ, ಸಮಾಜ ಘಾತಕ ಶಕ್ತಿಗಳಿಂದ ಇತ್ತೀಚೆಗೆ ನ್ಯಾಯವಾದಿಗಳ ಮೇಲೆ ಹಲ್ಲೆ, ದಬ್ಬಾಳಿಕೆಗಳು ಹೆಚ್ಚಾಗುತ್ತಿವೆ. ಸರ್ಕಾರ ವಕೀಲರ ಹಿತರಕ್ಷಣಾ ಕಾಯಿದೆ ಸಮರ್ಪಕವಾಗಿ ಜಾರಿಗೆ ತರಬೇಕು. ನ್ಯಾಯವಾದಿಗಳಿಗೆ ಸೂಕ್ತ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಹಲವು ಬಾರಿ ಸರ್ಕಾರಕ್ಕೆ ಒತ್ತಾಯಿಸುತ್ತಾ ಬಂದಿದ್ದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದು ನ್ಯಾಯವಾದಿಗಳ ಮೇಲಿನ ಹಲ್ಲೆ ಪ್ರಕರಣಗಳು ಹೆಚ್ಚಾಗಲು ಕಾರಣವಾಗಿದೆ ಎಂದು ಆರೋಪಿಸಲಾಯಿತು. 
ಜೂ:೬ರಂದು ತೀರ್ಥಹಳ್ಳಿ ನ್ಯಾಯವಾದಿ ಮಧುಕರ್ .ಆರ್ ಮಯ್ಯರವರ ಮೇಲೆ ಅಪರಿಚಿತ ವ್ಯಕ್ತಿಗಳು ರಸ್ತೆಯಲ್ಲಿ ಅಡ್ಡಗಟ್ಟಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ತಪ್ಪಿತಸ್ಥರನ್ನು ಪೊಲೀಸರು ತಕ್ಷಣ ಪತ್ತೆಹಚ್ಚಿ ಬಂಧಿಸಬೇಕೆಂದು ಗೃಹ ಸಚಿವರಿಗೆ ಒತ್ತಾಯಿಸಲಾಯಿತು. 
    ಪ್ರತಿಭಟನಾ ಮೆರವಣಿಗೆ.-ಮನವಿ.
    ನ್ಯಾಯಾಲಯದ ಆವರಣದಿಂದ ತಾಲೂಕು ಕಚೇರಿವರೆಗೂ ಘೋಷಣೆಗಳನ್ನು ಕೂಗುತ್ತಾ ಸಾಗಿದ ನ್ಯಾಯವಾದಿಗಳು ಉಪತಹಸೀಲ್ದಾರ್ ಮಂಜಾನಾಯ್ಕರವರ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.  
    ಸಂಘದ ಉಪಾಧ್ಯಕ್ಷ ಬಿ.ಎಸ್ ನಾಗರಾಜ್, ಕಾರ್ಯದರ್ಶಿ ರಾಜೇಶ್, ಖಜಾಂಚಿ ಆಶಾ, ಪಾಧಿಕಾರಿಗಳಾದ ಆದರ್ಶ, ಪವನ್, ಹರೀಶ್‌ಬರ್ಗೆ, ರೇಖಾ, ಉಮಾಪತಿ, ಉದಯಕುಮಾರ್, ಪ್ರಕಾಶ್, ಕಾಂತರಾಜ್, ಪುಟ್ಟಸ್ವಾಮಿ, ಭರತ್, ರಾಜು, ಶ್ರೀನಿವಾಸ, ಉಮಾಶಂಕರ್, ಪಂಡರಿನಾಥ್, ಆಂಥೋಣಿ, ಕೃಷ್ಣೇಗೌಡ, ವಿನಾಯಕ್, ಲೋಕೇಶ್, ಸೋಮಶೇಖರ್, ಶಿವಕುಮಾರ್, ಎ.ಟಿ ರವಿ, ಮಹೆಶ್, ಕೂಡ್ಲಿಗೆರೆಮಂಜುನಾಥ್, ಮಹೆಶ್‌ಕುಮಾರ್, ಅನಿತ, ಮುಖ್ತಾಬಾಯಿ, ನರಸಿಂಹಮೂರ್ತಿ, ನಾರಾಯಣಸ್ವಾಮಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 

ಬಿಳಿಕಿ ಗ್ರಾಮ ಪಂಚಾಯಿತಿ ನ್ಯೂನ್ಯತೆ ಖಂಡಿಸಿ ಧರಣಿ ಸತ್ಯಾಗ್ರಹ


ಭದ್ರಾವತಿ ತಾಲೂಕಿನ ಬಿಳಿಕಿ ಗ್ರಾಮ ಪಂಚಾಯಿತಿಯ ಹಲವು ನ್ಯೂನ್ಯತೆಗಳನ್ನು ಖಂಡಿಸಿ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಸೋಮವಾರ ಪಂಚಾಯಿತಿ ಮುಂಭಾಗ ಧರಣಿ ಸತ್ಯಾಗ್ರಹ ನಡೆಸುವ ಮೂಲಕ ಪ್ರತಿಭಟಿಸಲಾಯಿತು. 
    ಭದ್ರಾವತಿ: ತಾಲೂಕಿನ ಬಿಳಿಕಿ ಗ್ರಾಮ ಪಂಚಾಯಿತಿಯ ಹಲವು ನ್ಯೂನ್ಯತೆಗಳನ್ನು ಖಂಡಿಸಿ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಸೋಮವಾರ ಪಂಚಾಯಿತಿ ಮುಂಭಾಗ ಧರಣಿ ಸತ್ಯಾಗ್ರಹ ನಡೆಸುವ ಮೂಲಕ ಪ್ರತಿಭಟಿಸಲಾಯಿತು. 
    ಗ್ರಾಮ ಪಂಚಾಯಿತಿಯಲ್ಲಿ ಹಲವು ವರ್ಷಗಳಿಂದ ಇ-ಸ್ವತ್ತು ಖಾತೆ ಮಾಡಿಕೊಡಲು ನಿರ್ಲಕ್ಷ್ಯವಹಿಸಿದ್ದು, ಗ್ರಾಮ ಸಭೆ ಮತ್ತು ವಾರ್ಡ್ ಸಭೆಗಳನ್ನು ಕಾನೂನಿನ ಪ್ರಕಾರ ನಡೆಸದೆ ಗ್ರಾಮಸ್ಥರಿಗೆ ಭಿತ್ತಿ ಪತ್ರದ ಮೂಲಕ ಪ್ರಚಾರಪಡಿಸಿ ತಿಳಿಸದೆ ಕೆಲವು ಗ್ರಾಮಸ್ಥರು ಮತ್ತು ಸದಸ್ಯರು ಹಾಗು ಅಧಿಕಾರಿಗಳು ತಮ್ಮಿಷ್ಟಕ್ಕನುಸಾರ ಸಭೆ ನಡೆಸಿದ್ದಾರೆಂದು ದೂರಲಾಯಿತು. 
    ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಪ್ರತಿ ಕುಟುಂಬಕ್ಕೆ ನೂರು ದಿನಗಳು ಕೆಲಸ ನೀಡಬೇಕೆಂಬ ಆದೇಶವಿದ್ದರು ಹಲವು ವರ್ಷಗಳಿಂದ ೧೦ ರಿಂದ ೨೦ ದಿನಗಳು ಮಾತ್ರ ಕೆಲಸ ನೀಡಲಾಗುತ್ತಿದೆ. ಈ ಮೂಲಕ ಬಡವರ್ಗದವರಿಗೆ ಅನ್ಯಾಯವೆಸಲಾಗುತ್ತಿದೆ ಎಂದು ಆರೋಪಿಸಲಾಯಿತು. 
    ಬಿಳಿಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಬಡಕುಟುಂಬದವರು ವಾಸವಿದ್ದು, ಮನೆ ಇಲ್ಲದೆ ಕುಟುಂಬಗಳು ಹಲವು ವರ್ಷಗಳಿಂದ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಪಂಚಾಯಿತಿ ವ್ಯಾಪ್ತಿಯ ಬಿಳಿಕಿ, ಮಜ್ಜಿಗೇನಹಳ್ಳಿ, ಬಿಳಿಕಿ ತಾಂಡ್ಯ, ಪದ್ಮೇನಹಳ್ಳಿ, ನವಲೆ ಬಸಾಪುರ, ನೇರಲೇಕೆರೆ ಸೇರಿದಂತೆ ಇತ್ಯಾದಿ ಗ್ರಾಮಗಳಲ್ಲಿ ವಾಸವಿರುವ ನಿವೇಶನ ರಹಿತರನ್ನು ಇದುವರೆಗೂ ಗುರುತಿಸದೆ, ರಾಜೀವ್ ಗಾಂಧಿ ವಸತಿ ನಿಗಮಕ್ಕೆ ನಿವೇಶನ ರಹಿತರ ಹೆಸರನ್ನು ಕಳುಹಿಸದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ದೂರಲಾಯಿತು. 
    ಪಂಚಾಯಿತಿ ಪಕ್ಕದಲ್ಲಿಯೇ ಇರುವ ಸರ್ಕಾರಿ ಪ್ರಾಥಮಿಕ ಶಾಲೆ ಕಟ್ಟಡ ಹಲವು ವರ್ಷಗಳಿಂದ ಶಿಥಿಲಗೊಂಡ ದುಸ್ಥಿತಿಗೆ ತಲುಪಿದೆ. ಈ ಸಂಬಂಧ ಹಲವಾರು ಮನವಿ ಸಲ್ಲಿಸಲಾಗಿದೆ. ಅಲ್ಲದೆ ಶಾಸಕ ಬಿ.ಕೆ ಸಂಗಮೇಶ್ವರ್ ಸಹ ಖುದ್ದಾಗಿ ಪರಿಶೀಲನೆ ನಡೆಸಿದ್ದಾರೆ. ಆದರೂ ಸಹ ಇದುವರೆಗೂ ಶಾಲಾ ಕಟ್ಟಡ ದುರಸ್ತಿಗೊಳಿಸದೆ ನಿರ್ಲಕ್ಷ್ಯವಹಿಸಿರುವುದು ವಿಪರ್ಯಾಸದ ಸಂಗತಿಯಾಗಿದೆ. 
    ಗ್ರಾಮ ಪಂಚಾಯಿತಿ ತಕ್ಷಣ ಎಲ್ಲಾ ನ್ಯೂನ್ಯತೆಗಳನ್ನು ಸರಿಪಡಿಸಿಕೊಳ್ಳಬೇಕು. ಸಂವಿಧಾನ ಬದ್ಧವಾಗಿ ಕಾರ್ಯನಿರ್ವಹಿಸುವ ಮೂಲಕ ಮಾನವ ಹಕ್ಕುಗಳು ಉಲ್ಲಂಘನೆಯಾಗದಂತೆ ಜಾಗೃತಿವಹಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಮನವಿ ಸಲ್ಲಿಸುವ ಮೂಲಕ ಎಚ್ಚರಿಸಲಾಯಿತು. 
    ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಧರಣಿ ಸತ್ಯಾಗ್ರಹ ನೇತೃತ್ವವಹಿಸಿದ್ದರು. ಎನ್. ಮಂಜುನಾಥ್, ಬಿ.ಜೆ ಪಾಲಾಕ್ಷ, ಶಂಕ್ರಪ್ಪ, ಆರ್. ಗಣೇಶ್, ವಿ. ಈರೇಶ್, ಜಯಮ್ಮ, ಲಕ್ಷ್ಮೀವೇಲು, ಸರೋಜ, ಲೋಕೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಪೊಲೀಸರ ನಿರ್ಲಕ್ಷ್ಯದಿಂದ ಗೋ ಹತ್ಯೆ : ದೇವರಾಜ್ ಹರಳಿಹಳ್ಳಿ ಆರೋಪ

ಗೋಹತ್ಯೆ ತಡೆಯುವಂತೆ ದೂರು ವಾಟ್ಸಫ್‌ನಲ್ಲಿ ಮಾಹಿತಿ ನೀಡಿರುವುದು. 
    ಭದ್ರಾವತಿ : ತಾಲೂಕಿನಲ್ಲಿ ಪ್ರತಿ ವರ್ಷ ಬಕ್ರೀದ್ ಹಬ್ಬದಂದು ಗೋ ಹತ್ಯೆ ನಡೆಯುತ್ತಿದ್ದು, ಈ ಬಾರಿ ಸಹ ಗೋ ಹತ್ಯೆ ನಡೆಸಲಾಗಿದೆ. ಗೋ ಹತ್ಯೆ ಕುರಿತು ಪೊಲೀಸರಿಗೆ ಮುಂಚಿತವಾಗಿ ಮಾಹಿತಿ ನೀಡಿದರೂ ಸಹ ರಾಜಕೀಯ ಒತ್ತಡಕ್ಕೆ ಮಣಿದು ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯತನ ವಹಿಸಿದ್ದಾರೆಂದು ಹಿಂದೂ ಜಾಗರಣ ವೇದಿಕೆ ಮುಖಂಡ, ಸಾಮಾಜಿಕ ಕಾರ್ಯಕರ್ತ ದೇವರಾಜ್ ಅರಳಿಹಳ್ಳಿ ಆರೋಪಿಸಿದ್ದಾರೆ. 
    ಯಾವುದೇ ಪರವಾನಗಿ ಇಲ್ಲದೆ, ರೈತರಲ್ಲದವರು ಹಬ್ಬದ ಹಿಂದಿನ ದಿನ ಹತ್ಯೆ ಮಾಡಲು ತಂದಿರುವ ಗೋವುಗಳನ್ನು ರಕ್ಷಿಸುವಂತೆ ಸಾಕ್ಷಿ ಸಮೇತ ದಾವಣಗೆರೆ ಪೂರ್ವ ವಲಯ ಪೊಲೀಸ್ ಮಹಾನಿರ್ದೇಶಕರಿಗೆ, ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಹಾಗು ನಗರದ ಪೊಲೀಸ್ ಉಪಾಧೀಕ್ಷಕರಿಗೆ ಮೊಬೈಲ್ ವಾಟ್ಸಫ್ ಮೂಲಕ ಮಾಹಿತಿ ನೀಡಲಾಗಿದೆ. ಆದರೆ ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿದು ಯಾವುದೇ ಕ್ರಮ ಕೈಗೊಂಡಿಲ್ಲ. ಪ್ರತಿ ವರ್ಷ ಬಕ್ರೀದ್ ಹಬ್ಬದಂದು ಗೋವುಗಳ ಹತ್ಯೆ ನಿರಂತರವಾಗಿ ನಡೆಯುತ್ತಿದ್ದು, ಈ ಸಂಬಂಧ ಮುಂದಿನ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
    ಕಾಗೇಹಳ್ಳದಲ್ಲಿ ತ್ಯಾಜ್ಯ ಪತ್ತೆ : 
    ಗೋವುಗಳನ್ನು ಹತ್ಯೆ ಮಾಡಿ ಅವುಗಳ ತ್ಯಾಜ್ಯ ಕಾಗೇಹಳ್ಳ ಭದ್ರಾ ನದಿ ಸೇತುವೆಗೆ ಎಸೆಯುತ್ತಿದ್ದು, ಈ ಬಾರಿ ಸಹ ತ್ಯಾಜ್ಯ ಪತ್ತೆಯಾಗಿದೆ. ಗೋವಿನ ತ್ಯಾಜ್ಯ ನದಿಗೆ ತಂದು ಎಸೆಯುವುದರಿಂದ ಪರಿಸರ ಹಾಳಾಗುತ್ತಿದೆ. ಅಲ್ಲದೆ ಭದ್ರಾ ನದಿ ನೀರು ಕಲುಷಿತಗೊಳ್ಳುತ್ತಿದ್ದು, ಈ ಹಿನ್ನಲೆಯಲ್ಲಿ ಗೋವಿನ ತ್ಯಾಜ್ಯ ನದಿಗೆ ಎಸೆಯದಂತೆ ಕ್ರಮ ಗೊಳ್ಳಬೇಕೆಂದು ದೇವರಾಜ್ ಆಗ್ರಹಿಸಿದ್ದಾರೆ.

Sunday, June 8, 2025

ಜಾನಪದ ಕಲೆ ಉಳಿಸಿ ಬೆಳೆಸಿ : ಡಾ. ಕೃಷ್ಣ ಎಸ್. ಭಟ್

ಭೂಮಿಕಾ ವೇದಿಕೆ ವತಿಯಿಂದ ಭದ್ರಾವತಿ ಮಹಾತ್ಮಗಾಂಧಿ ರಸ್ತೆ(ಟಿ.ಕೆ ರಸ್ತೆ)ಯಲ್ಲಿರುವ ನಯನ ಆಸ್ಪತ್ರೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಾನಪದ ವೈಭವ `ಚೌಡಿಕೆ ಗೊಂದಲಿಗರ ಪದ' ವಿಶೇಷ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. 
    ಭದ್ರಾವತಿ: ಜಾನಪದ ಜನರಿಂದ ಜನರಿಗಾಗಿ ಇರುವ ಕಲೆ. ಇದೊಂದು ಅದ್ಭುತ ಕಲೆಯಾಗಿದ್ದು, ಇದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ನಗರದ ಭೂಮಿಕಾ ವೇದಿಕೆ ಅಧ್ಯಕ್ಷ ಡಾ. ಕೃಷ್ಣ ಎಸ್. ಭಟ್ ಹೇಳಿದರು. 
    ಅವರು ಭೂಮಿಕಾ ವೇದಿಕೆ ವತಿಯಿಂದ ಮಹಾತ್ಮಗಾಂಧಿ ರಸ್ತೆ(ಟಿ.ಕೆ ರಸ್ತೆ)ಯಲ್ಲಿರುವ ನಯನ ಆಸ್ಪತ್ರೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಾನಪದ ವೈಭವ `ಚೌಡಿಕೆ ಗೊಂದಲಿಗರ ಪದ' ವಿಶೇಷ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. 
    ಜಾನಪದಕ್ಕೆ ತನ್ನದೇ ಆದ ಮಹತ್ವವಿದೆ. ಕನ್ನಡನಾಡಿನ ಶ್ರೀಮಂತ ಕಲೆಗಳಲ್ಲಿ ಒಂದಾಗಿದೆ. ಇಂದಿನ ಯುವ ಸಮುದಾಯಕ್ಕೆ ಜಾನಪದ ಮಹತ್ವ ತಿಳಿಸಿಕೊಡುವ ಅಗತ್ಯವಿದೆ ಎಂದರು. 
    ಚೌಡಿಕೆ ಕಲಾವಿದ ಲಕ್ಷ್ಮಣರಾವ್ ಭೋರತ್‌ರವರ ತಂಡದಿಂದ ನಡೆದ `ಚೌಡಿಕೆ ಗೊಂದಲಿಗರ ಪದ' ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. 
    ವೇದಿಕೆ ಪ್ರಧಾನ ಕಾರ್ಯದರ್ಶಿ ಅಪರಂಜಿ ಶಿವರಾಜ್, ಕೋಶಾಧ್ಯಕ್ಷ ಮುನಿರಾಜ್, ಪುಷ್ಪ ತಂಡದವರು ಪ್ರಾರ್ಥಿಸಿ, ಶೋಭಾ ಸ್ವಾಗತಿಸಿದರು. ರೂಪರಾವ್ ನಿರೂಪಿಸಿದರು. 
    ಕಾರ್ಯಕ್ರಮಕ್ಕೂ ಮೊದಲು ಇತ್ತೀಚೆಗೆ ನಿಧನರಾದ ಕವಿ, ಸಾಹಿತಿ ಡಾ. ಎಚ್.ಎಸ್ ವೆಂಕಟೇಶ್ ಮೂರ್ತಿ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು. 

ಜೂ.೯ರಂದು ಬಿಳಿಕಿ ಗ್ರಾಮ ಪಂಚಾಯಿತಿ ಮುಂಭಾಗ ಧರಣಿ ಸತ್ಯಾಗ್ರಹ


    ಭದ್ರಾವತಿ : ತಾಲೂಕಿನ ಬಿಳಿಕಿ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ವಿವಿಧ ಸಮಸ್ಯೆಗಳನ್ನು ಖಂಡಿಸಿ ಜೂ.೯ರಂದು ಬೆಳಿಗ್ಗೆ ೧೧ ಗಂಟೆಗೆ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. 
    ಬಿಳಿಕಿ ಗ್ರಾಮ ಪಂಚಾಯಿತಿ ಪಕ್ಕದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆ ಕಟ್ಟಡ ಶಿಥಿಲಗೊಂಡು ದುಸ್ಥಿತಿಗೆ ತಲುಪಿದ್ದು, ಅಲ್ಲದೆ ಈ-ಸ್ವತ್ತು, ಉದ್ಯೋಗ ಖಾತ್ರಿ ಸೇರಿದಂತೆ ಇನ್ನಿತರ ಯೋಜನೆಗಳು ಅವ್ಯವಸ್ಥೆಯಿಂದ ಕೂಡಿವೆ. ಇದರ ವಿರುದ್ಧ ಪ್ರತಿಭಟನಾ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ. 

Saturday, June 7, 2025

ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ೧೨೪ ಮಂದಿಗೆ ತಪಾಸಣೆ

ಭದ್ರಾವತಿಯಲ್ಲಿ ರೋಟರಿ ಕ್ಲಬ್ ಮತ್ತು ವೀರಶೈವ ಲಿಂಗಾಯಿತ ಮಹಿಳಾ ಸಮಾಜ, ಶಾಶ್ವತಿ ಮಹಿಳಾ ಸಮಾಜ ಹಾಗು ವೀರಶೈವ ಸೇವಾ ಸಮಿತಿ ಸಂಯುಕ್ತಾಶ್ರಯದಲ್ಲಿ ಶಿವಮೊಗ್ಗ ನಾರಾಯಣ ಹೃದಯಾಲಯ ಆಸ್ಪತ್ರೆ ವತಿಯಿಂದ ತಾಲೂಕು ಕಛೇರಿ ರಸ್ತೆಯಲ್ಲಿರುವ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು ಮೂಳೆ ಸಾಂದ್ರತಾ ಪರೀಕ್ಷೆ ಶಿಬಿರದಲ್ಲಿ ಪಾಲ್ಗೊಂಡಿದ್ದ ವೈದ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. 
    ಭದ್ರಾವತಿ : ನಗರದ ರೋಟರಿ ಕ್ಲಬ್ ಮತ್ತು ವೀರಶೈವ ಲಿಂಗಾಯಿತ ಮಹಿಳಾ ಸಮಾಜ, ಶಾಶ್ವತಿ ಮಹಿಳಾ ಸಮಾಜ ಹಾಗು ವೀರಶೈವ ಸೇವಾ ಸಮಿತಿ ಸಂಯುಕ್ತಾಶ್ರಯದಲ್ಲಿ ಶಿವಮೊಗ್ಗ ನಾರಾಯಣ ಹೃದಯಾಲಯ ಆಸ್ಪತ್ರೆ ವತಿಯಿಂದ ತಾಲೂಕು ಕಛೇರಿ ರಸ್ತೆಯಲ್ಲಿರುವ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು ಮೂಳೆ ಸಾಂದ್ರತಾ ಪರೀಕ್ಷೆ ಶಿಬಿರದಲ್ಲಿ ಸುಮಾರು ೧೨೪ ಮಂದಿ ಪಾಲ್ಗೊಂಡು ಸದುಪಯೋಗ ಪಡೆದುಕೊಂಡರು. 
    ಶಿಬಿರ ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೨ ಗಂಟೆಯವರೆಗೆ ನಡೆಯಿತು. ಬಿ.ಪಿ, ಶುಗರ್, ಇಸಿಜಿ, ಹೃದಯ ಸಂಬಂಧ ಪರೀಕ್ಷೆ ಹಾಗು ರಕ್ತ ಪರೀಕ್ಷೆ ಮತ್ತು ತಜ್ಞ ವೈದ್ಯರುಗಳಿಂದ ಸಮಾಲೋಚನೆ ನಡೆಯಿತು. 
    ಎನ್‌ಸಿಆರ್ ಹೆಲ್ತ್ ಕೇರ್ ಇಂಡಿಯಾದ ಕುಲಕರ್ಣಿಯವರು ಮೂಳೆ ಸಾಂದ್ರತೆ ಪರೀಕ್ಷೆ ನಡೆಸಿದರು. ಉಳಿದಂತೆ ನಾರಾಯಣ ಹೃದಯಾಲಯ ಆಸ್ಪತ್ರೆ ವೈದ್ಯರಾದ ಡಾ. ವಿವೇಕ್ ಮತ್ತು ಡಾ. ಯಶಸ್‌ರವರು ಹೃದಯ ಸಂಬಂಧಿ ಕಾಯಿಲೆಗಳ ಕುರಿತು ತಪಾಸಣೆ ನಡೆಸುವ ಮೂಲಕ ರೋಗಿಗಳೊಂದಿಗೆ ಸಮಾಲೋಚನೆ ನಡೆಸಿದರು. 
    ಆಸ್ಪತ್ರೆ ಮಾರುಕಟ್ಟೆ ವಿಭಾಗದ ಗಣೇಶ್, ನರ್ಸ್‌ಗಳಾದ ಚಂದ್ರಕಲಾ, ತಾಯಿಷಾ, ರೋಟರಿ ಕ್ಲಬ್ ಅಧ್ಯಕ್ಷ ರಾಘವೇಂದ್ರ ಉಪಾಧ್ಯಾಯ, ಎಮೆರಿಟಸ್ ಪ್ರಾಧ್ಯಾಪಕಿ ಡಾ. ವಿಜಯದೇವಿ, ವೀರಶೈವ ಲಿಂಗಾಯಿತ ಮಹಿಳಾ ಸಮಾಜದ ಅಧ್ಯಕ್ಷೆ ನಾಗರತ್ನ ಕೋಠಿ, ಗೌರವಾಧ್ಯಕ್ಷೆ ಆರ್.ಎಸ್ ಶೋಭಾ, ಉಪಾಧ್ಯಕ್ಷೆ ವಿಜಯ ಜಗನ್ನಾಥ್, ಶಾಶ್ವತಿ ಮಹಿಳಾ ಸಮಾಜದ ಅಧ್ಯಕ್ಷೆ ರೂಪಾರಾವ್, ಗೌರವಾಧ್ಯಕ್ಷೆ ಯಶೋಧವೀರಭದ್ರಪ್ಪ, ಪ್ರಮುಖರಾದ ವಾಗೀಶ್‌ಕೋಠಿ, ಅಖಿಲ ಭಾರತ ವೀರಶೈವ ಸಮಾಜದ ನಿರ್ದೇಶಕಿ ಉಷಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.