Monday, June 30, 2025

ಪ್ರಧಾನ ಮಂತ್ರಿ ಅವಾಸ್ ಯೋಜನೆ ೨.೦ ಯೋಜನೆಯಡಿ ಅರ್ಜಿ ಆಹ್ವಾನ

ನಗರ ವ್ಯಾಪ್ತಿಯ ಕಂಪ್ಯೂಟರ್ ಸಿಬ್ಬಂದಿಗಳಿಗೆ ಮಾಹಿತಿ 

ಪ್ರಧಾನ ಮಂತ್ರಿ ಅವಾಸ್ ಯೋಜನೆ ೨.೦ ಯೋಜನೆಯಡಿ ಭದ್ರಾವತಿ ನಗರಸಭೆ ವ್ಯಾಪ್ತಿಯ ವಸತಿ ರಹಿತ ಹಾಗು ನಿವೇಶನ ರಹಿತ ಕುಟುಂಬಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಈ ಸಂಬಂಧ ಸೋಮವಾರ ನಗರಸಭೆ ಸಭಾಂಗಣದಲ್ಲಿ ಕಂಪ್ಯೂಟರ್ ಸೆಂಟರ್ ಸಿಬ್ಬಂದಿಗಳ ಜೊತೆ ಸಭೆ ನಡೆಸಲಾಯಿತು.
    ಭದ್ರಾವತಿ: ಪ್ರಧಾನ ಮಂತ್ರಿ ಅವಾಸ್ ಯೋಜನೆ ೨.೦ ಯೋಜನೆಯಡಿ ನಗರಸಭೆ ವ್ಯಾಪ್ತಿಯ ವಸತಿ ರಹಿತ ಹಾಗು ನಿವೇಶನ ರಹಿತ ಕುಟುಂಬಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಈ ಸಂಬಂಧ ಸೋಮವಾರ ನಗರಸಭೆ ಸಭಾಂಗಣದಲ್ಲಿ ಕಂಪ್ಯೂಟರ್ ಸೆಂಟರ್ ಸಿಬ್ಬಂದಿಗಳ ಜೊತೆ ಸಭೆ ನಡೆಸಲಾಯಿತು. 
    ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಅವಾಸ್ ೨.೦ ಯೋಜನೆಯನ್ನು ರಾಜ್ಯ ಸರ್ಕಾರದ ನಗರ ವಸತಿ ಯೋಜನೆಗಳೊಂದಿಗೆ ಸಂಯೋಜನೆಗೊಳಿಸಿ ಅನುಷ್ಠಾನಗೊಳಿಸುತ್ತಿದ್ದು, ನಗರಸಭೆ ವ್ಯಾಪ್ತಿಯ ವಸತಿ ರಹಿತ(ಕಚ್ಚಾ ಮನೆ ಹೊಂದಿರುವ) ಮತ್ತು ನಿವೇಶನ ರಹಿತ ಕುಟುಂಬಗಳಿಗೆ ವಸತಿ ಸೌಲಭ್ಯ ಕಲ್ಪಿಸಲು ಕೇಂದ್ರ ಸರ್ಕಾರ ಯೂನಿಫೈಡ್ ವೆಬ್ ಪೋರ್ಟಲ್ (Unified Web Portal )  ನಲ್ಲಿ ಅರ್ಜಿ ಆಹ್ವಾನಿಸಿದೆ. 
    ನಗರ ವ್ಯಾಪ್ತಿಯ ಯಾವುದೇ ಕಂಪ್ಯೂಟರ್ ಸೆಂಟರ್‌ಗಳಲ್ಲಿ ದಿನಾಂಕ ಜು.೧೭, ೨೦೨೫ರೊಳಗಾಗಿ ಕೇಂದ್ರ ಸರ್ಕಾರದ https//pmay.urban.gov.in  ಈ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಈ ಹಿನ್ನಲೆಯಲ್ಲಿ ಅರ್ಜಿ ಸಲ್ಲಿಸಲು ಕಂಪ್ಯೂಟರ್ ಸೆಂಟರ್‌ಗಳಿಗೆ ಬರುವ ಸಾರ್ವಜನಿಕರಿಗೆ ಸೂಕ್ತ ಮಾಹಿತಿ ನೀಡುವ ಮೂಲಕ ಅರ್ಜಿ ಸಲ್ಲಿಸಲು ನೆರವಾಗುವಂತೆ ಕಂಪ್ಯೂಟರ್ ಸೆಂಟರ್ ಸಿಬ್ಬಂದಿಗಳಿಗೆ ಮಾಹಿತಿ ನೀಡಲಾಯಿತು. 
ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್ ಮತ್ತು ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್, ನಗರ ವಸತಿ ಆಶ್ರಯ ಸಮಿತಿ ಅಧ್ಯಕ್ಷ ಗೋಪಾಲ್, ಸಮುದಾಯ ಸಂಘಟನಾ ಅಧಿಕಾರಿ ಸುವಾಸಿನಿ ಉಪಸ್ಥಿತರಿದ್ದರು. 

೧೧ ವರ್ಷ ಅಧಿಕಾರಾವಧಿಯಲ್ಲಿ ಸಂಸದರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಸರ್ವತೋಮುಖ ಅಭಿವೃದ್ಧಿ ಕಾರ್ಯಗಳು

ಭದ್ರಾವತಿಯಲ್ಲಿ ಬಿಜೆಪಿ ಪಕ್ಷದ ನಗರ ಮಂಡಲದ ಹುತ್ತ  ಹಾಗೂ ಜನ್ನಾಪುರ ಮಹಾಶಕ್ತಿ ಕೇಂದ್ರಗಳ ವತಿಯಿಂದ ಬಿ.ಎಚ್ ರಸ್ತೆ ಶ್ರೀ ಭದ್ರೇಶ್ವರ ಸ್ವಾಮಿ ದೇವಸ್ಥಾನದ ಸಮುದಾಯ ಭವನದಲ್ಲಿ ವಿಕಸಿತ ಭಾರತ ಸಾಧನ ಸಮಾವೇಶ ಜರುಗಿತು. 
    ಭದ್ರಾವತಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ೧೧ ವರ್ಷ ಅಧಿಕಾರಾವಧಿ ಯಶಸ್ವಿಯಾಗಿ ಪೂರೈಸಿದ್ದು,  ಜಿಲ್ಲೆಯಲ್ಲಿ ಸಂಸದ ಬಿ.ವೈ ರಾಘವೇಂದ್ರರವರು ಕೈಗೊಂಡಿರುವ ಹಲವಾರು ಅಭಿವೃದ್ಧಿ ಕಾರ್ಯಗಳು ಕೇಂದ್ರ ಸರ್ಕಾರದ ಸಾಧನೆಗೆ ಸಾಕ್ಷಿ ಎಂಬಂತೆ ಕಂಡು ಬರುತ್ತಿವೆ ಎಂದು ಪಕ್ಷದ ಜಿಲ್ಲಾ ಮುಖಂಡರು ಹೇಳಿದರು.  
    ಪಕ್ಷದ ನಗರ ಮಂಡಲದ ಹುತ್ತ  ಹಾಗೂ ಜನ್ನಾಪುರ ಮಹಾಶಕ್ತಿ ಕೇಂದ್ರಗಳ ವತಿಯಿಂದ ಬಿ.ಎಚ್ ರಸ್ತೆ ಶ್ರೀ ಭದ್ರೇಶ್ವರ ಸ್ವಾಮಿ ದೇವಸ್ಥಾನದ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಕಸಿತ ಭಾರತ ಸಾಧನ ಸಮಾವೇಶದಲ್ಲಿ ಮಾತನಾಡಿದ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಲತೇಶ್, ಜಿಲ್ಲಾ ಖಜಾಂಚಿ ರಾಮಣ್ಣ ಮತ್ತು ಶಿವಮೊಗ್ಗ ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ದೀನ್ ದಯಾಳುರವರು, ಜಿಲ್ಲೆಯಲ್ಲಿ ಸಂಸದ ಬಿ.ವೈ ರಾಘವೇಂದ್ರರವರ ನೇತೃತ್ವದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಬಹುಮುಖ್ಯವಾಗಿ ವಿಮಾನ ನಿಲ್ದಾಣ, ಹೆದ್ದಾರಿ, ರೈಲ್ವೆ ಅಭಿವೃದ್ಧಿ ಕಾರ್ಯಗಳು, ಸಿಗಂದೂರು ಸೇತುವೆ ನಿರ್ಮಾಣ ಸೇರಿದಂತೆ ಮೂಲ ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಲಾಗಿದೆ ಎಂದರು. 
    ಕೇಂದ್ರ ಸರ್ಕಾರದ ಹಲವಾರು ಯೋಜನೆಗಳು ರೈತರು, ಕಾರ್ಮಿಕರು, ಬಡವರು, ಮಕ್ಕಳು-ಮಹಿಳೆಯರು, ವಿದ್ಯಾರ್ಥಿಗಳು ಸೇರಿದಂತೆ ಸರ್ವರ ಅಭಿವೃದ್ಧಿಗೆ ಪೂರಕವಾಗಿವೆ ಎಂದರು. 
      ಮಹಾಶಕ್ತಿ ಕೇಂದ್ರಗಳ  ಅಧ್ಯಕ್ಷರಾದ ಸತೀಶ್ ಕುಮಾರ್ ಹಾಗೂ ರಘುರಾವ್ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ಆಪರೇಷನ್ ಸಿಂಧೂರದ ಯಶಸ್ವಿಗೆ ಕಾರಣಕರ್ತರಾದ ಭಾರತೀಯ ವೀರಯೋಧರಿಗೆ ಗೌರವ ನಮನಗಳನ್ನು ಸಮರ್ಪಿಸಿ ದೇಶ ಸೇವೆ ಮಾಡಿದ ಮಾಜಿ ಸೈನಿಕರಿಗೆ ಗೌರವಿಸಿ ಸನ್ಮಾನಿಸಲಾಯಿತು. ಅಲ್ಲದೆ ವಿಕಸಿತ ಭಾರತದ ಅಮೃತಕಾಲದ ಸಂಕಲ್ಪ  ಮಾಡಲಾಯಿತು. 
    ನಗರ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಹಾಗೂ ಗ್ರಾಮಾಂತರ ಮಂಡಲ ಅಧ್ಯಕ್ಷ ಕೆ.ಎಚ್ ತೀರ್ಥಯ್ಯ, ಮಾಜಿ ಸೈನಿಕ ಸಂಘದ ತಾಲೂಕು ಅಧ್ಯಕ್ಷ ಸುಬೇದಾರ್ ಗುಲ್ಗುಲೆ, ಸುಬೇದಾರ್ ಶ್ರೀನಿವಾಸ್, ಕಮಾಂಡೋ ಗಿರೀಶ್, ಹವಲ್ದಾರ್‌ಗಳಧ ಸುರೇಶ್, ಧರ್ಮಕುಮಾರ್ ಮತ್ತು ಜಿ. ವಾಸುದೇವನ್,  ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಚನ್ನೇಶ್ ಹಾಗೂ ಮೊಸರಳ್ಳಿ ಅಣ್ಣಪ್ಪ,  ಪ್ರಮುಖರಾದ  ಜಿ. ರಾಮುಲಿಂಗಯ್ಯ, ಜಿಲ್ಲಾ ವಿಶೇಷ ಆಹ್ವಾನಿತ ಎಂ. ಮಂಜುನಾಥ್, ಪ್ರಮುಖರಾದ ಪ್ರೇಮ್ ಕುಮಾರ್, ಸುಲೋಚನಾ ಪ್ರಕಾಶ್, ಅನ್ನಪೂರ್ಣ, ರಾಜಶೇಖರ್ ಉಪ್ಪಾರ್, ಲತಾ ಪ್ರಭಾಕರ್, ರವಿಕುಮಾರ್, ಚಂದ್ರಪ್ಪ, ನಂಜಪ್ಪ, ಶೋಭಾ ಪಾಟೀಲ್, ಆಶಾ ಪುಟ್ಟಸ್ವಾಮಿ, ಆಟೋ ಮೂರ್ತಿ, ಮಂಜುಳ, ಉಮಾವತಿ, ಮಂಜುನಾಥ್, ದೀಪಕ್, ಧರ್ಮಣ್ಣ, ಮಂಜೇಗೌಡ, ಶ್ರೀನಿವಾಸ್ ಕಾರಂತ್, ಮಹಾಶಕ್ತಿ ಕೇಂದ್ರ ಹಾಗೂ ಬೂತ್ ಪ್ರಮುಖ ಕಾರ್ಯಕರ್ತರು ಪಾಲ್ಗೊಂಡಿದ್ದರು. 

ಫೈಲ್ವಾನ್ ಕೆಂಚಪ್ಪ ನಿಧನ

ಫೈಲ್ವಾನ್ ಕೆಂಚಪ್ಪ 
    ಭದ್ರಾವತಿ : ಹಳೇನಗರದ ಜಟ್‌ಪಟ್ ನಗರದ ನಿವಾಸಿ, ಕಂಚಿ ಗರಡಿ ಮನೆ ಹಿರಿಯ ಕುಸ್ತಿಪಟು, ಫೈಲ್ವಾನ್ ಕೆಂಚಪ್ಪ(೮೭) ಭಾನುವಾರ ನಿಧನ ಹೊಂದಿದರು. 
    ಇಬ್ಬರು ಪತ್ನಿಯರು, ಓರ್ವ ಪುತ್ರ, ಓರ್ವ ಪುತ್ರಿ ಇದ್ದಾರೆ. ಇವರ ಅಂತ್ಯಕ್ರಿಯೆ ಸೋಮವಾರ ಮಧ್ಯಾಹ್ನ ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. 
    ಕೆಂಚಪ್ಪ ನಗರದ ಪ್ರಸಿದ್ದ ಕುಸ್ತಿಪಟುಗಳಲ್ಲಿ ಒಬ್ಬರಾಗಿದ್ದು, ಇವರಿಂದ ಹಲವಾರು ಯುವಕರು ಕುಸ್ತಿ ತರಬೇತಿ ಪಡೆದು ಗುರುತಿಸಿಕೊಂಡಿದ್ದಾರೆ. ಕೆಂಚಪ್ಪ ಶಾಸಕ ಬಿ.ಕೆ ಸಂಗಮೇಶ್ವರ್ ಆಪ್ತರಲ್ಲಿ ಒಬ್ಬರಾಗಿದ್ದು, ಇವರ ನಿಧನಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್, ಇವರ ಸಹೋದರರಾದ ಬಿ.ಕೆ ಮೋಹನ್, ಬಿ.ಕೆ ಶಿವಕುಮಾರ್, ಯುವ ಮುಖಂಡ ಬಿ.ಎಸ್ ಗಣೇಶ್, ಸ್ಥಳೀಯ ಫೈಲ್ವಾನ್‌ಗಳು ಸಂತಾಪ ಸೂಚಿಸಿದ್ದಾರೆ. 

ಎಚ್. ಸಿದ್ದಲಿಂಗಸ್ವಾಮಿಗೆ ಪಿಎಚ್‌ಡಿ ಪದವಿ

ಎಚ್. ಸಿದ್ದಲಿಂಗಸ್ವಾಮಿ 
    ಭದ್ರಾವತಿ: ನಗರದ ಚಮನ್ ಷಾ ವಲಿ ಉರ್ದು ಪ್ರೌಢಶಾಲೆ ದೈಹಿಕ ಶಿಕ್ಷಣ ಶಿಕ್ಷಕ ಎಚ್. ಸಿದ್ದಲಿಂಗಸ್ವಾಮಿ ಅವರು ಶ್ರೀನಿವಾಸವನಮ್, ಕುಪ್ಪಮ್, ದ್ರಾವಿಡಿಯನ್ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ  ಪದವಿ ಪಡೆದುಕೊಂಡಿದ್ದಾರೆ. 
    ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಘಟನೋತ್ತರ ಪ್ರಾಂಶುಪಾಲ ಡಾ. ಕೆ.ಬಿ ಧನಂಜಯರವರ ಮಾರ್ಗದರ್ಶನಲ್ಲಿ `ಪ್ರಾಬ್ಲಮ್ಸ್ ಅಂಡ್ ಪ್ರಾಸ್ಪೆಕ್ಟಸ್ ಆಫ್ ಸ್ಮಾಲ್ ಇಂಡಸ್ಟ್ರೀಸ್ ಇನ್ ಕರ್ನಾಟಕ ವಿತ್ ಸ್ಪೆಷಲ್ ರೆಫೆರೆನ್ಸ್ ಆಫ್ ಶಿವಮೊಗ್ಗ ಡಿಸ್ಟ್ರಿಕ್ಟ್' ಎಂಬ ವಿಷಯ ಕುರಿತು ಅರ್ಥಶಾಸ್ತ್ರ ವಿಭಾಗದಲ್ಲಿ ಸಂಶೋಧನೆ ನಡೆಸಿ ವರದಿ ಮಂಡಿಸಿದ್ದರು. ಸಿದ್ದಲಿಂಗಸ್ವಾಮಿಯವರು ಮೂಲತಃ ಶಿವಮೊಗ್ಗ ಹರಿಗೆ ನಿವಾಸಿಯಾಗಿದ್ದು, ಹನುಮಂತಪ್ಪ-ಗೌರಮ್ಮ ದಂಪತಿ ಪುತ್ರರಾಗಿದ್ದಾರೆ. 

Sunday, June 29, 2025

ಮಾದಕ ವಸ್ತುಗಳಿಗೆ ಯುವ ಸಮೂಹ ಬಲಿ : ಆತಂಕ

ಆರ್‌ಎಎಫ್ ಬೆಟಾಲಿಯನ್‌ನಲ್ಲಿ ಮಾದಕ ವಸ್ತುಗಳ ವಿರೋಧಿ ದಿನ ಆಚರಣೆ 

ಭದ್ರಾವತಿ: ನಗರದ ಮಿಲ್ಟ್ರಿಕ್ಯಾಂಪ್ ಕ್ಷಿಪ್ರ ಕಾರ್ಯ ಪಡೆ (ಆರ್‌ಎಎಫ್) ೯೭ನೇ ಬೆಟಾಲಿಯನ್ ಆವರಣದಲ್ಲಿ ಅಂತರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನ ಹಾಗೂ ಜಾಗೃತಿ ಮೂಡಿಸುವ ಕಾರ್ಯಕ್ರಮ ಕಮಾಂಡರ್-೨ ಸಂತೋರವರು ಮಾತನಾಡಿದರು. 
    ಭದ್ರಾವತಿ: ನಗರದ ಮಿಲ್ಟ್ರಿಕ್ಯಾಂಪ್ ಕ್ಷಿಪ್ರ ಕಾರ್ಯ ಪಡೆ (ಆರ್‌ಎಎಫ್) ೯೭ನೇ ಬೆಟಾಲಿಯನ್ ಆವರಣದಲ್ಲಿ ಅಂತರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನ ಹಾಗೂ ಜಾಗೃತಿ ಮೂಡಿಸುವ ಕಾರ್ಯಕ್ರಮ ಆಚರಿಸಲಾಯಿತು.
    ಬೆಟಾಲಿಯನ್ ಕಮಾಂಡರ್-೨(ಪಿಪಿಎಂಜಿ) ಸಂತೋರವರು ಮಾದಕ ವಸ್ತು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳನ್ನು ವಿವರಿಸಿ, ಇತ್ತೀಚೆಗೆ ಯುವ ಸಮೂಹ ದುಶ್ಚಟಗಳಿಗೆ ಹೆಚ್ಚಾಗಿ ಬಲಿಯಾಗುತ್ತಿರುವ ಸುದ್ದಿಗಳು ಕೇಳಿ ಬರುತ್ತಿವೆ. ಇದರಿಂದಾಗಿ ದೇಶದ ಭವಿಷ್ಯದ ಪ್ರಜೆಗಳಾದ ಯುವಕರ ಬದುಕು ಹಾಗು ಕುಟುಂಬಗಳು ನಾಶವಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು. 
    ಯುವ ಸಮೂಹ ಮಾದಕ ವಸ್ತುಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿದಾಗ ಮಾತ್ರ ದೇಶ ಸುಭಿಕ್ಷೆಯಾಗುತ್ತದೆ. ಈ ದಿಸೆಯಲ್ಲಿ ಯುವ ಸಮೂಹ ಸೇರಿದಂತೆ ದೇಶದ ಭದ್ರತೆಗಾಗಿ ಪ್ರತಿಯೊಬ್ಬ ನಾಗರಿಕರು ಶ್ರಮವಹಿಸಿ ಮಾದಕ ವಸ್ತುಗಳನ್ನು ತೊಲಗಿಸಬೇಕಾಗಿದೆ ಎಂದು ಕರೆ ನೀಡಿದರು.
  ಕಮಾಂಡರ್-೨ ಸಚಿನ್ ಗಾಯಕ್ವಾಡ್, ಉಪ ಕಮಾಂಡರ್ ರಮೇಶ್ ಸಿಂಗ್, ಸಹಾಯಕ ಕಮಾಂಡರ್ ಅನಿಲ್‌ಕುಮಾರ್ ಮುಂತಾದವರು ಉಪಸ್ಥಿತದ್ದರು.

ದ್ವಿಚಕ್ರ ವಾಹನ ದುರಸ್ತಿಗಾರರ ಬದುಕು ಉತ್ತಮಗೊಳ್ಳಲಿ : ಬಿ.ಕೆ ಮೋಹನ್

ಭದ್ರಾವತಿ ಮಹಾತ್ಮಗಾಂಧಿ(ಟಿ.ಕೆ ರಸ್ತೆ)ಯ ಪಾಂಡುರಂಗ ಮಂದಿರದಲ್ಲಿ ಸರ್.ಎಂ ವಿಶ್ವೇಶ್ವರಯ್ಯ ದ್ವಿಚಕ್ರ ವಾಹನ ದುರಸ್ತಿಗಾರರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೩೭ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು. 
    ಭದ್ರಾವತಿ : ಕರ್ನಾಟಕ ರಾಜ್ಯ ಮೋಟಾರು ಸಾರಿಗೆ ಹಾಗು ಇತರೆ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಮಂಡಳಿ ವತಿಯಿಂದ ವಿವಿಧ ಸೌಲಭ್ಯಗಳನ್ನು ಸರ್ಕಾರ ದ್ವಿಚಕ್ರ ವಾಹನ ದುರಸ್ತಿಗಾರರಿಗೂ ಕಲ್ಪಿಸಿಕೊಟ್ಟಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಹೇಳಿದರು. 
    ಅವರು ಭಾನುವಾರ ನಗರದ ಮಹಾತ್ಮಗಾಂಧಿ(ಟಿ.ಕೆ ರಸ್ತೆ)ಯ ಪಾಂಡುರಂಗ ಮಂದಿರದಲ್ಲಿ ಸರ್.ಎಂ ವಿಶ್ವೇಶ್ವರಯ್ಯ ದ್ವಿಚಕ್ರ ವಾಹನ ದುರಸ್ತಿಗಾರರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೩೭ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. 
    ನಗರದಲ್ಲಿ ದ್ವಿಚಕ್ರ ವಾಹನ ದುರಸ್ತಿಗಾರರು ಬಹಳ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದು, ಇವರಿಗೂ ಉತ್ತಮ ಜೀವನ ನಿರ್ವಹಣೆಗೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕಾಗಿದೆ. ಸರ್ಕಾರ ವಿವಿಧ ಸೌಲಭ್ಯಗಳು ಇವರಿಗೂ ತಲುಪುವಂತಾಗಬೇಕು. ಈ ನಿಟ್ಟಿನಲ್ಲಿ ಸಂಘಟನೆ ನೇತೃತ್ವವಹಿಸಿರುವವರು ಗಮನ ಹರಿಸಬೇಕೆಂದರು. 
    ಸರ್ಕಾರದ ವಿವಿಧ ಯೋಜನೆಗಳಿಗೆ ಕಾರ್ಮಿಕ ಇಲಾಖೆ ಮೂಲಕ ಅರ್ಹರು ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದಾಗಿದೆ. ಈ ಹಿನ್ನಲೆಯಲ್ಲಿ ಸಂಬಂಧಿಸಿದ ಮಾಹಿತಿಯನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ಸಂಘಟನೆ ಇನ್ನೂ ಹೆಚ್ಚು ಬಲಗೊಳ್ಳಬೇಕು. ಆಗ ಮಾತ್ರ ನಮ್ಮ ಬೇಡಿಕೆಗಳು ಈಡೇರುತ್ತವೆ ಎಂದರು.  ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಎಸ್. ಮಣಿಶೇಖರ್ ಪಾಲ್ಗೊಂಡು ಮಾತನಾಡಿ, ಗ್ಯಾರಂಟಿ ಯೋಜನೆಯಡಿ ಅರ್ಹ ಕಾರ್ಮಿಕರು ಪಡೆದುಕೊಳ್ಳಬಹುದಾದ ಯೋಜನೆಗಳ ಕುರಿತು ಮಾಹಿತಿ ನೀಡಿದರು. 
    ಸಮಾರಂಭದಲ್ಲಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ಮೆಸ್ಕಾಂ ಸಲಹಾ ಸಮಿತಿ ತಾಲೂಕು ಅಧ್ಯಕ್ಷ ಬಸವಂತಪ್ಪ, ಅಖಲ ಕರ್ನಾಟಕ ಕಟ್ಟಡ ಹಾಗು ಅಸಂಘಟಿತ ಕಾರ್ಮಿಕರ ಒಕ್ಕೂಟದ ಸುಂದರ್ ಬಾಬು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಬಾಬು ಅಧ್ಯಕ್ಷತೆ ವಹಿಸಿದ್ದರು. ಸಂಘದ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು. ಸಮಾರಂಭದಲ್ಲಿ ದ್ವಿಚಕ್ರ ವಾಹನ ಬಿಡಿಭಾಗಗಳ ಪ್ರದರ್ಶನ ಮತ್ತು ಮಾರಾಟ ಆಯೋಜಿಸಲಾಗಿತ್ತು. 

Saturday, June 28, 2025

ಯಶಸ್ಸಿಗೆ ಕನಸು ಕಂಡರೆ ಸಾಲದು ದೃಢ ಸಂಕಲ್ಪ ಮುಖ್ಯ : ಡಿ. ಪ್ರಭಾಕರ್ ಬೀರಯ್ಯ

ಭದ್ರಾವತಿ ದೈವಜ್ಞ ಕಲ್ಯಾಣ ಮಂದಿರದಲ್ಲಿ ಗಾಂಧಿನಗರದ ಸೇಂಟ್ ಜೋಸೆಫ್ ಪಿಯು ಕಾಲೇಜ್ ಆಫ್ ಎಕ್ಸಲೆನ್ಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಸ್ವಾಗತಿಸುವ ಹಾಗೂ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನ್ಯೂಟೌನ್ ಪ್ರಶಾಂತಿ ಸೇವಾ ಟ್ರಸ್ಟ್ ಅಧ್ಯಕ್ಷ, ಶ್ರೀ ಸತ್ಯಸಾಯಿ ಬಾಬಾ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕ ಡಿ. ಪ್ರಭಾಕರ ಬೀರಯ್ಯ ಉದ್ಘಾಟಿಸಿ ಮಾತನಾಡಿದರು.
    ಭದ್ರಾವತಿ : ವಿದ್ಯಾರ್ಥಿಗಳು ಭವಿಷ್ಯದಲ್ಲಿ ಯಶಸ್ಸು ಕಾಣಲು ಕನಸು ಕಂಡರೆ ಸಾಲದು, ಛಲ ಹೊತ್ತು ದೃಢ ಸಂಕಲ್ಪದೊಂದಿಗೆ ಶ್ರಮವಹಿಸಿದಾಗ ಮಾತ್ರ ಕನಸು ನನಸಾಗಿಸಬಹುದೆಂದು ನಗರದ ನ್ಯೂಟೌನ್ ಪ್ರಶಾಂತಿ ಸೇವಾ ಟ್ರಸ್ಟ್ ಅಧ್ಯಕ್ಷ, ಶ್ರೀ ಸತ್ಯಸಾಯಿ ಬಾಬಾ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕ ಡಿ. ಪ್ರಭಾಕರ ಬೀರಯ್ಯ ಹೇಳಿದರು.
     ಅವರು ಶನಿವಾರ ನಗರದ ದೈವಜ್ಞ ಕಲ್ಯಾಣ ಮಂದಿರದಲ್ಲಿ ಗಾಂಧಿನಗರದ ಸೇಂಟ್ ಜೋಸೆಫ್ ಪಿಯು ಕಾಲೇಜ್ ಆಫ್ ಎಕ್ಸಲೆನ್ಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಸ್ವಾಗತಿಸುವ ಹಾಗೂ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 
    ಮಹಾತ್ಮಗಾಂಧಿ, ಸಚಿನ್ ತೆಂಡೋಲ್ಕರ್, ವಿಶ್ವನಾಥ್‌ಆನಂದ್, ಸ್ವಾಮಿ ವಿವೇಕಾನಂದ ಸೇರಿದಂತೆ ಇನ್ನೂ ಮುಂತಾದವರು ಛಲ ಮತ್ತು ದೃಢ ಸಂಕಲ್ಪದ ಹಾದಿಯಲ್ಲಿ ಸಾಗಿ ಸಾಕರಾಗಿದ್ದಾರೆ. ಇನ್‌ಫೋಸಿಸ್ ನಾರಾಯಣಮೂರ್ತಿ, ಸುಧಾಮೂರ್ತಿ ಅವರಿಗೆ ಟಾಟಾ ಕೊಡುಗೆ ನೀಡಿದ ನೂರು ರು. ಗಳಿಂದ ಇಂದು ಲಕ್ಷ ಲಕ್ಷ ಕೋಟಿ ರು. ಒಡೆಯರಾಗಿರುವುದು ಅವರ ದೃಢತೆ, ಗುರಿ, ಸಾಧನೆಯಿಂದ ಜಗತ್ತಿಗೆ ಹೆಸರಾಗಿದ್ದಾರೆ. 
    ವಿದ್ಯಾರ್ಥಿಗಳಲ್ಲಿ ಅನೇಕ ಚಿಂತನೆಗಳನ್ನು ಹೊತ್ತ ಚಂಚಲತೆಯ ಮನಸ್ಸನ್ನು ನಿಗ್ರಹಿದರೆ ಮಾತ್ರ ನಿಮ್ಮ ಆಲೋಚನೆಗಳು ಉಪಯೋಗಕ್ಕೆ ಬರುತ್ತವೆ. ಸಮಯ ಪ್ರಜ್ಞೆ, ಸಮಯ ನಿಗದಿಯನ್ನು ಮರೆಯಬಾರದು. ೫ ವರ್ಷದ ಅವಧಿಯಲ್ಲಿ ಪದವಿ ಪಡೆಯಲು ನಿಗದಿಯಂತೆ ಭವಿಷ್ಯದಲ್ಲೂ ಸಂಕಲ್ಪದ ನಿಗದಿ ಪಡಿಸಿಕೊಳ್ಳಬೇಕು. ಆಸೆ, ಆಕಾಂಕ್ಷೆಗಳಿಗೆ ಅಡಿಪಾಯವಿಲ್ಲವಾಗಿದೆ. ಪೋಷಕರು ಮಕ್ಕಳಿಗೆ ಸಂಸ್ಕೃತಿ, ನೀತಿ ಮಾರ್ಗಗಳ ವಿವೇಚನೆ ತೋರಬೆಕು. ಸನ್ನಡತೆಯಲ್ಲಿ ಸಾಗುವಂತೆ ಪ್ರೇರೇಪಿಸಬೇಕೆಂದರು.
    ಜ್ಞಾನ ಜ್ಯೋತಿ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಸಂಧ್ಯಾಬಾಯಿ ಮಾತನಾಡಿ, ವಿದ್ಯಾರ್ಥಿಗಳಿಗೆ ಯಶಸ್ಸು ಸುಮ್ಮನೆ ಬರಲ್ಲ. ಅದನ್ನು ಹುಡುಕಿ ಹೋಗಬೇಕು. ಭಕ್ತಿಯಿಂದ ಗುರಿ ಮುಟ್ಟಬಹುದು. ಕಷ್ಟ ಪಟ್ಟು ಶ್ರದ್ದೆಯಿಂದ ಗುರಿ ಮುಟ್ಟಿದಾಗ ಮಾತ್ರ ಸುಖ ಲಭಿಸುತ್ತದೆ ಎಂದರು. 


ಭದ್ರಾವತಿ ದ್ವಿತೀಯ ಪಿಯು ಫಲಿತಾಂಶದಲ್ಲಿ ರಾಜ್ಯ ಮಟ್ಟದಲ್ಲಿ ರ್‍ಯಾಂಕ್ ಗಳಿಸಿ ಕೀರ್ತಿ ತಂದ ಹೆಚ್.ವಾಣಿ ಮತ್ತು ಪೋಷಕರನ್ನು ಸನ್ಮಾನಿಸಿ ೫೦ ಸಾವಿರ ನಗದು ಬೆಳ್ಳಿ ನಾಣ್ಯ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು.      
    ಕಾಲೇಜಿನ ಪ್ರಾಂಶುಪಾಲರಾದ ಲತಾ ರಾಬರ್ಟ್ ಪ್ರಾಸ್ತಾವಿಕ ನುಡಿಗಳನ್ನಾಡಿ, ಮಕ್ಕಳಲ್ಲಿ ಸಂಸ್ಕಾರ, ವಿವೇಚನೆ, ಶ್ರದ್ದೆ, ನಯ-ವಿನಯ, ಹಿರಿಯರಿಗೆ ಗೌರವಿಸುವ ಅನೇಕ ಉತ್ತಮ ಮೌಲ್ಯಗಳನ್ನು ತಿಳಿಸಿಕೊಡುವ ವಿದ್ಯಾಸಂಸ್ಥೆ ನಮ್ಮದಾಗಿದೆ. ಇಂತಹ ವಿದ್ಯಾಸಂಸ್ಥೆಯಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳೇ ಧನ್ಯರು ಎಂದರು. 
    ಜ್ಞಾನ ಜ್ಯೋತಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಪುಷ್ಪರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ ಉಪಾಧ್ಯಕ್ಷ ವೆಂಕಟರಮಣ ಶೇಟ್, ಟ್ರಸ್ಟ್ ಖಜಾಂಚಿ ರಾಬರ್ಟ್ ಡಿಸೋಜಾ ಮಾತನಾಡಿದರು.
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿಯೇ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ ಕೀರ್ತಿ ತಂದಿರುವ ವಿದ್ಯಾರ್ಥಿನಿ ಎಚ್.ವಾಣಿ ಮತ್ತು ಪೋಷಕರನ್ನು ಸನ್ಮಾನಿಸಿ ೫೦ ಸಾವಿರ ನಗದು, ಬೆಳ್ಳಿ ನಾಣ್ಯ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. 
    ಅತಿಹೆಚ್ಚು ಅಂಕ ಪಡೆದು ಉತ್ತೀರ್ಣರಾದ ೬೮ ವಿದ್ಯಾರ್ಥಿಳಿಗೆ ಮತ್ತು ಅವರ ಪೋಷಕರಿಗೆ ಬೆಳ್ಳಿ ನಾಣ್ಯ ಮತ್ತು ಪ್ರಶಸ್ತಿ ಪತ್ರ ನೀಡಿ ಶಾಲು ಹೊದಿಸಿ ಸನ್ಮಾನಿಸಲಾಯಿತು. ಆರಂಭದಲ್ಲಿ ತೆರೇಸಾ ಡೆಲ್ಸಿ ಸ್ವಾಗತ ನೃತ್ಯ ಪ್ರದರ್ಶಿಸಿದರೆ, ಆದಿತಿ ಲೋಕೇಶ್, ಆರ್.ಪಿ.ವರ್ಷ ಪ್ರಾರ್ಥಿಸಿದರು. ಡಿ.ವರ್ಷ ಸ್ವಾಗತಿಸಿ, ವಸಂತ್ ಅತಿಥಿಗಳ ಪರಿಚಯಿಸಿದರು, ಬಿ.ಬಿ ಲಕ್ಷ್ಮಿಶ್ರೀ ವಂದಿಸಿದರೆ, ಆನಂ ನಶ್ರ, ಸುಹಾ ಕಮಲ್ ನಿರೂಪಿಸಿದರು.