ಮಂಗಳವಾರ, ಜುಲೈ 15, 2025

ಗಣೇಶ್‌ಗೆ ಸರ್ಕಾರಿ ನೌಕರರಿಂದ ಅಭಿನಂದನೆ

ಕರ್ನಾಟಕ ಸರ್ಕಾರದ ೫ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಭದ್ರಾವತಿ ತಾಲೂಕು ಅಧ್ಯಕ್ಷರಾಗಿ ನೂತನವಾಗಿ ನೇಮಕಗೊಂಡಿರುವ ಬಿ.ಎಸ್ ಗಣೇಶ್‌ರವರನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮತ್ತು ವಿಶ್ವೇಶ್ವರಾಯ ವಿದ್ಯಾಸಂಸ್ಥೆ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು. 
    ಭದ್ರಾವತಿ: ಕರ್ನಾಟಕ ಸರ್ಕಾರದ ೫ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷರಾಗಿ ನೂತನವಾಗಿ ನೇಮಕಗೊಂಡಿರುವ ಬಿ.ಎಸ್ ಗಣೇಶ್‌ರವರನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮತ್ತು ವಿಶ್ವೇಶ್ವರಾಯ ವಿದ್ಯಾಸಂಸ್ಥೆ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು. 
    ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪರವರ ನೇತೃತ್ವದಲ್ಲಿ ಗಣೇಶ್‌ರವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಸಂಘದ ಕಾರ್ಯಾಧ್ಯಕ್ಷ ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಎಸ್.ಕೆ ಮೋಹನ್, ಖಚಾಂಚಿ ಪ್ರಶಾಂತ್, ಪ್ರಮುಖರಾದ ಟಿ. ಪೃಥ್ವಿರಾಜ್ ರಂಗನಾಥ್, ರಾಜಕುಮಾರ್, ರಮೇಶ್, ಪ್ರಕಾಶ್, ವಿಶ್ವೇಶ್ವರಾಯ ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಡಾ. ಎಸ್.ಪಿ ರಾಕೇಶ್, ದೈಹಿಕ ಶಿಕ್ಷಣ ನಿರ್ದೇಶಕ ಶಿವಲಿಂಗೇಗೌಡ. ಮತ್ತು ಶ್ರೀಧರ್ ಗೌಡ, ರಾಜನಾಯ್ಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಅಭಿವೃದ್ದಿ ಕಾರ್ಯಗಳಿಗೆ ಸದ್ಯದಲ್ಲಿಯೇ ಚಾಲನೆ : ಕದಿರೇಶ್

ಭದ್ರಾವತಿ ಗಾಂಧಿನಗರದ ಗಾಂಧಿ ಉದ್ಯಾನವನದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ನೂತನ ಅಧ್ಯಕ್ಷ ಬಿ.ಎಸ್ ಗಣೇಶ್‌ರವರನ್ನು ಸ್ಥಳೀಯ ನಾಗರಿಕರು ಸನ್ಮಾನಿಸಿ ಅಭಿನಂದಿಸಿದರು. 
    ಭದ್ರಾವತಿ: ನಗರಸಭೆ ವ್ಯಾಪ್ತಿಯ ೧೬ನೇ ವಾರ್ಡಿನ ಅಭಿವೃದ್ದಿಗೆ ಸರ್ಕಾರದಿಂದ ಶಾಸಕರು ಕೋಟ್ಯಾಂತರ ರೂ ಅನುದಾನ ಬಿಡುಗಡೆ ಮಾಡಿಸಿಕೊಟ್ಟಿದ್ದು,   ಸದ್ಯದಲ್ಲಿಯೇ ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು ಕಾಮಗಾರಿಗಳ ಆರಂಭಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆಂದು  ನಗರಸಭೆ ಹಿರಿಯ ಸದಸ್ಯ ವಿ.ಕದಿರೇಶ್ ಹೇಳಿದರು.
    ಅವರು ಗಾಂಧಿನಗರದ ಗಾಂಧಿ ಉದ್ಯಾನವನದಲ್ಲಿ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಮೃತ್ ಯೋಜನೆಯಡಿ ಮಹಿಳಾ ಸ್ವಸಹಾಯ ಸಂಘಗಳಿಂದ ೧೬ ಮತ್ತು ೧೭ನೇ ವಾರ್ಡ್ ವ್ಯಾಪ್ತಿಯ ೬ ಉದ್ಯಾನವನಗಳ ನಿರ್ವಹಣೆ ಕಾರ್ಯಾರಂಭ ಕಾರ್ಯಕ್ರಮದಲ್ಲಿ ಮಾತನಾಡಿ, ಕ್ಷೇತ್ರದಲ್ಲಿ ಶಾಸಕರು ಯಾರು ಸಹ ನಿರೀಕ್ಷಿಸಲಾಗದಷ್ಟರಮಟ್ಟಿಗೆ ಅಭಿವೃದ್ದಿ ಕಾರ್ಯಗಳಿಗೆ ಒತ್ತು ನೀಡುತ್ತಿದ್ದಾರೆ ಎಂದರು. 
    ೫ ಉದ್ಯಾನವನಗಳ ನಿರ್ವಹಣೆಗೆ ೨೦ ಲಕ್ಷ ರು., ರಸ್ತೆ ದೀಪಗಳಿಗೆ ೪೦ ಲಕ್ಷ ರು., ಗಾಂಧಿನಗರದ ಗಣಪತಿ ದೇವಾಲಯದ ಅಭಿವೃದ್ಧಿಗೆ ೨೦ ಲಕ್ಷ ರು., ಸೇಂಟ್ ಜೋಸೆಫ್ ಕಾಲೇಜು ರಸ್ತೆಗೆ ೧೮ ಲಕ್ಷ ರು., ಫುಟ್‌ಪಾತ್ ನಿರ್ಮಾಣಕ್ಕೆ ೩೦ ಲಕ್ಷ ರು. ಕೆರಕೋಡಮ್ಮ ದೇವಾಲಯ ಬಳಿಯ ಕೆರೆ ಅಭಿವೃದ್ದಿಗೆ ೧.೫೦ ಕೋಟಿ ರು., ಕೇಶವಪುರ ಬಡಾವಣೆ ಫುಟ್‌ಪಾತ್ ಟೈಲ್ಸ್ ಹಾಕಲು ೩೦ ಲಕ್ಷ ರು., ಹಿಂದೂ ಮಹಾಸಭಾ ಗಣಪತಿ ದೇವಾಲಯ ಬಳಿಯ ನಾಲ್ಕು ಕನ್ಸರ್‌ವೆನ್ಸಿ ಅಭಿವೃದ್ದಿಗೆ ೧೮ ಲಕ್ಷ ರು., ತಡೆಗೋಡೆಗೆ ೫೦ ಕೋಟಿ ರು. ಅನುದಾನ ಬಿಡುಗಡೆ ಮಾಡಿಸಿದ್ದಾರೆ. ಇದೇ ರೀತಿ ನಗರಸಭೆ ಅಧ್ಯಕ್ಷರು ಕುಡಿಯುವ ನೀರಿನ ಟ್ಯಾಂಕುಗಳ ಅಭಿವೃದ್ದಿಗೆ ೬ ಲಕ್ಷ ರು. ಅನುದಾನ ಬಿಡುಗಡೆ ಮಾಡಿದ್ದಾರೆ ನೀಡಿದ್ದಾರೆಂದರು.
    ನಾಗರೀಕ ಸನ್ಮಾನ ಸ್ವೀಕರಿಸಿ ಮಾತನಾಡಿದ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಬಿ.ಎಸ್ ಗಣೇಶ್,  ಜನರ ಸೇವೆ ಮಾಡಲು ನನ್ನನ್ನು ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಸಮಿತಿಗೆ ನೇಮಿಸಿದ್ದಾರೆ. ಕ್ಷೇತ್ರದಲ್ಲಿ ೫೦ ರಿಂದ ೬೦ ಸಾವಿರ ಜನರು ಸರ್ಕಾರದ ಗ್ಯಾರಂಟಿ ಯೋಜನೆಗಳ ಸದುಪಯೋಗ ಪಡೆಯುತ್ತಿದ್ದಾರೆ. ಕ್ಷೇತ್ರದಲ್ಲಿ ೪ ಬಾರಿ ಶಾಸಕರನ್ನಾಗಿ ನಮ್ಮ ತಂದೆಯವರನ್ನು ಆಯ್ಕೆ ಮಾಡಿದ್ದೀರಿ ಆ ರುಣವನ್ನು ನಾವೆಂದೂ ಮರೆಯದೆ ನಿಮ್ಮ ರುಣವನ್ನು ತೀರಿಸಲು ಹಗಲಿರುಳು ಶ್ರಮಿಸುತ್ತಿದ್ದೇವೆಂದರು.
    ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾರಾಜಕುಮಾರ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎಸ್. ಕುಮಾರ್, ಗಾಂಧಿನಗರದ ಹಿರಿಯ ನಾಗರೀಕರಾದ ಡಾ: ನರೇಂದ್ರಭಟ್, ಮೆಸ್ಕಾಂ ಗ್ರಾಹಕರ ಸಲಹಾ ಸಮಿತಿ ತಾಲೂಕು ಅಧ್ಯಕ್ಷ ಬಿ. ಬಸವಂತಪ್ಪ ಮಾತನಾಡಿದರು. 
    ನಗರಸಭೆ ಮಾಜಿ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಪೌರಾಯುಕ್ತ ಪ್ರಕಾಶ್ ಎಂ.ಚೆನ್ನಪ್ಪನವರ್, ಪರಿಸರ ಅಭಿಯಂತರ ಪ್ರಭಾಕರ್, ಅಭಿಯಂತರ ಸಂತೋಷ್ ಪಾಟೀಲ್, ಮುಖಂಡರಾದ ಸುರೇಶ್ ವರ್ಮಾ, ನಾಗೇಶ್, ತಿಪ್ಪೇಸ್ವಾಮಿ, ಚಲುವರಾಜ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಉಪಸ್ಥಿತರಿದ್ದರು. 
    ನಗರಸಭೆ ಸಮುದಾಯ ಸಂಘಟನಾ ಅಧಿಕಾರಿ ಸುಹಾಸಿನಿ ಪ್ರಾಸ್ತಾವಿಕ ನುಡಿಗಳನ್ನಾಡಿ ಕಾರ್ಯಕ್ರಮ ನಿರೂಪಿಸಿದರು.

ಸೋಮವಾರ, ಜುಲೈ 14, 2025

ದಾಸ್ಯದ ಮನೋಭಾವನೆಯಿಂದ ಹೊರಬಂದು ದೇಶಾಭಿಮಾನ ಬೆಳೆಸಿಕೊಳ್ಳಿ : ಗೋವಿಂದಜೀ

 ಭದ್ರಾವತಿಯಲ್ಲಿ ಆರ್‌ಎಸ್‌ಎಸ್ ಮಹಾರಾಣಾ ಪ್ರತಾಪ್ ಶಾಖೆ ವತಿಯಿಂದ ಹೊಸಮನೆ ಹಿಂದೂ ಮಹಾಸಭಾ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದ್ದ ಗುರು ಪೂಜಾ ಉತ್ಸವದಲ್ಲಿ ಆರ್‌ಎಸ್‌ಎಸ್ ದಕ್ಷಿಣ ಪ್ರಾಂತ್ಯ ಸಹ ಬೌಧ್ಧಿಕ್ ಪ್ರಮುಖ್ ಗೋವಿಂದಜೀ ಪಾಲ್ಗೊಂಡು ಮಾತನಾಡಿದರು.
    ಭದ್ರಾವತಿ: ದೇಶಕ್ಕೆ ಸ್ವಾತಂತ್ರ್ಯ ಬಂದು ೭೫ ವರ್ಷಗಳು ಕಳೆದಿದ್ದರೂ ನಮ್ಮಲ್ಲಿನ ಮಾನಸಿಕ ದಾಸ್ಯದ ಮನೋಭಾವ ಹೋಗಿಲ್ಲ. ಮೊದಲು ಈ ದಾಸ್ಯದ ಮನೋಭಾವನೆಯಿಂದ ಹೊರ ಬರಬೇಕು. ದೇಶದ ಬಗ್ಗೆ ವಿಶ್ವವೇ ಹೆಮ್ಮೆಪಡುವಂತಹ, ಗೌರವ ನೀಡುವಂತಹ ವಾತಾವರಣವನ್ನು ಎಲ್ಲರೂ ಸೇರಿ ನಿರ್ಮಾಣ ಮಾಡಬೇಕೆಂದು ಆರ್‌ಎಸ್‌ಎಸ್ ದಕ್ಷಿಣ ಪ್ರಾಂತ್ಯ ಸಹ ಬೌಧ್ಧಿಕ್ ಪ್ರಮುಖ್ ಗೋವಿಂದಜೀ ಕರೆ ನೀಡಿದರು.
    ಅವರು ಆರ್‌ಎಸ್‌ಎಸ್ ಮಹಾರಾಣಾ ಪ್ರತಾಪ್ ಶಾಖೆ ವತಿಯಿಂದ ಹೊಸಮನೆ ಹಿಂದೂ ಮಹಾಸಭಾ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದ್ದ ಗುರು ಪೂಜಾ ಉತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.
    ಈ ದೇಶದಲ್ಲಿ ನಮ್ಮ ಜೀವನ ಪದ್ದತಿ, ಆಹಾರ, ಆಚಾರ-ವಿಚಾರ, ಸಂಸ್ಕೃತಿ, ಸಂಪ್ರದಾಯಗಳು, ಧಾರ್ಮಿಕ ಅಚರಣೆಗಳ ಬಗ್ಗೆ ತಿಳಿದಿರಬೇಕು. ಅವುಗಳ ಬಗ್ಗೆ ಹೆಮ್ಮೆ ಇರುಬೇಕು ಹೊರತು ದಾಸ್ಯ ಮನೋಭಾವನೆಗೆ ಒಳಗಾಗಿ ಆಧುನಿಕ ಬದುಕಿನಲ್ಲಿ ಉದಾಸೀನತೆ ಬೆಳೆಸಿಕೊಳ್ಳಬಾರದು ಎಂದರು. 
       ವ್ಯಾಸ ಮಹರ್ಷಿಗಳು ಜನ್ಮತಾಳಿದ ದಿನ ಗುರು ಪೂರ್ಣಿಮೆ. ಈ ದಿನವನ್ನು ಆರ್‌ಎಸ್‌ಎಸ್ ಗುರು ಪೂಜಾ ಉತ್ಸವ ಎಂಬ ಹೆಸರಿನಲ್ಲಿ ಅಚರಿಸಿಕೊಂಡು ಬರುತ್ತಿದೆ. ಗುರು ಶಿಷ್ಯರ ಸಂಬಂಧದ ರೀತಿಯಲ್ಲಿ ಭಗವಾ ಧ್ವಜವೇ ಗುರುವಾಗಿ ಸ್ವೀಕರಿಸಿ ಗೌರವಿಸಿ ಅರ್ಪಣೆ ಮಾಡಲಾಗುತ್ತಿದೆ.  ಗುರು ಎಂದರೆ ಕೇವಲ ವಿದ್ಯೆಯನ್ನು ಮಾತ್ರ ಕಲಿಸುವುದಲ್ಲ.  ಆತ ಶಿಷ್ಯನ ಜೊತೆಗೆ ಉತ್ತಮ ಬಾಂಧ್ಯವನ್ನು ಹೊಂದಿ ಆತನನ್ನು  ಸರ್ವಾಂಗೀಣ ಅಭಿವೃಧ್ಧಿ ವ್ಯಕ್ತಿಯನ್ನಾಗಿ ಮಾಡಿ, ಸಮಾಜದ ಎಲ್ಲಾ ರಂಗಗಳಲ್ಲಿ ಯಶಸ್ವಿಯಾಗಿ ಉತ್ತಮ ಕಾರ್ಯಗಳನ್ನು ನಿರ್ವಹಿಸುವಂತೆ ಮಾಡುವ ಶಕ್ತಿಯೇ ಗುರು. ಇಂತಹ ಶಿಷ್ಯರನ್ನು ಆರ್‌ಎಸ್‌ಎಸ್ ತನ್ನ ನಿತ್ಯ ಶಾಖೆಯಲ್ಲಿ ತಯಾರು ಮಾಡುತ್ತದೆ ಎಂದರು.
    ದೇಹದಲ್ಲಿ ಉತ್ಸಾಹ, ಶಾರೀರಿಕವಾಗಿ, ಬೌಧ್ಧಿಕವಾಗಿ ಮತ್ತು ಮಾನಸಿಕವಾಗಿ ಉತ್ತಮ ಜ್ಞಾನವನ್ನು ಆರ್‌ಎಸ್‌ಎಸ್ ಶಾಖೆಗಳಲ್ಲಿ ತಿಳಿಸಲಾಗುತ್ತದೆ. ಸಂಸ್ಕಾರ ಇದ್ದರೆ ಯಾವುದೇ ಕೆಲಸ ಕಾರ್ಯಗಳನ್ನು ಸಂಘಟಿತವಾಗಿ, ಶಿಸ್ತುಬದ್ದವಾಗಿ ಯಶಸ್ವಿಯಾಗಿ ನಿರ್ವಹಿಸಲು ಸಾಧ್ಯ ಎಂದರು.      
       ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಎಂ. ವಾಗೀಶ್ ಕೋಠಿ ಮಾತನಾಡಿ, ಇಂದಿನ ಯುವಕರೇ ದೇಶದ ಭವಿಷ್ಯದ ಪ್ರಜೆಗಳು, ನಾಯಕರುಗಳು, ಆರ್‌ಎಸ್‌ಎಸ್ ಶಾಖೆಗಳಲ್ಲಿ ಕಲಿತ ಸಂಸ್ಕಾರದಿಂದ ಜೀವನದಲ್ಲಿ ಎಂತಹ ಸಮಸ್ಯೆಗಳು ಬಂದರೂ ಅದನ್ನು ಯಶಸ್ವಿಯಾಗಿ ಎದುರಿಸುವ. ಎಂತಹ ಘಟನೆಗಳು ನಡೆದರೂ ಅವುಗಳನ್ನು ಸರಿಯಾಗಿ ನಿಭಾಯಿಸುವ ಧೈರ್ಯ ಬರುತ್ತದೆ ಎಂದರು.
    ದೇಶದಲ್ಲಿ ಆರ್‌ಎಸ್‌ಎಸ್ ಅಸ್ತಿತ್ವದಲ್ಲಿರುವ ಕಾರಣ ಭಾರತ ಬಗ್ಗೆ ಇಂದು ವಿಶ್ವವೇ ವಿಶೇಷ ರೀತಿಯಲ್ಲಿ ಗುರುವಿನ ಸ್ಥಾನದಲ್ಲಿ ಭಲಾಢ್ಯ ರಾಷ್ಟ್ರವನ್ನಾಗಿ ನೋಡುತ್ತಿದೆ. ಈ ಹಿನ್ನಲೆಯಲ್ಲಿ ಹೆಚ್ಚಿನ ಯುವಕರು ಕಡ್ಡಾಯವಾಗಿ ನಿತ್ಯ ಆರ್‌ಎಸ್‌ಎಸ್ ಶಾಖೆಗಳಿಗೆ ಹೋಗಿ ಶಿಕ್ಷಣ ಪಡೆಯಬೇಕೆಂದರು. ತಾಲೂಕು ಸಂಘ ಚಾಲಕ್ ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು.

೫೦೦ ಕೋಟಿ ದಾಟಿದ ಶಕ್ತಿ ಯೋಜನೆಯಡಿ ಉಚಿತ ಮಹಿಳಾ ಪ್ರಯಾಣಿಕರ ಸಂಖ್ಯೆ

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಸಿಹಿ ವಿತರಿಸಿ ಸಂಭ್ರಮಿಸಿದ ಬಿ.ಎಸ್ ಗಣೇಶ್ 

ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆಯಡಿ ಉಚಿತ ಮಹಿಳಾ ಪ್ರಯಾಣಿಕರ ಸಂಖ್ಯೆ ೫೦೦ ಕೋಟಿ ದಾಟಿರುವ ಹಿನ್ನಲೆಯಲ್ಲಿ ಸೋಮವಾರ ಭದ್ರಾವತಿ ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಲ್ಲಿ ಬಸ್‌ಗೆ ವಿಶೇಷ ಪೂಜೆ ಸಲ್ಲಿಸಿ ಸಿಹಿ ವಿತರಿಸಲಾಯಿತು. 
    ಭದ್ರಾವತಿ : ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆಯಡಿ ಉಚಿತ ಮಹಿಳಾ ಪ್ರಯಾಣಿಕರ ಸಂಖ್ಯೆ ೫೦೦ ಕೋಟಿ ದಾಟಿರುವ ಹಿನ್ನಲೆಯಲ್ಲಿ ಸೋಮವಾರ ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಲ್ಲಿ ಬಸ್‌ಗೆ ವಿಶೇಷ ಪೂಜೆ ಸಲ್ಲಿಸಿ ಸಿಹಿ ವಿತರಿಸಲಾಯಿತು. 
    ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ನೂತನ ತಾಲೂಕು ಅಧ್ಯಕ್ಷ ಬಿ.ಎಸ್ ಗಣೇಶ್ ಬಸ್‌ಗೆ ವಿಶೇಷ ಪೂಜೆ ಸಲ್ಲಿಸಿ ಸಿಹಿ ವಿತರಿಸುವ ಮೂಲಕ ಸಂಭ್ರಮ ಹಂಚಿಕೊಂಡರು. 
    ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎಸ್. ಕುಮಾರ್, ಗ್ರಾಮಾಂತರ ಘಟಕದ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ, ನಗರಸಭೆ ಹಿರಿಯ ಸದಸ್ಯ ವಿ. ಕದಿರೇಶ್, ಭದ್ರಾವತಿ ಕೆಎಸ್‌ಆರ್‌ಟಿಸಿ ಬಸ್ ಘಟಕದ ವ್ಯವಸ್ಥಾಪಕರು, ನಿಲ್ದಾಣದ ನಿಯಂತ್ರಣಾಧಿಕಾರಿಗಳು ಸೇರಿದಂತೆ ಚಾಲಕರು, ನಿರ್ವಾಹಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಭಾನುವಾರ, ಜುಲೈ 13, 2025

ಬಿ.ಎಸ್ ಗಣೇಶ್ ಭವಿಷ್ಯದ ರಾಜಕಾರಣದ ಯುವ ನಾಯಕ

ಬ್ಲಾಕ್ ಕಾಂಗ್ರೆಸ್‌ನಿಂದ ಅಭಿನಂದನಾ ಕಾರ್ಯಕ್ರಮ 

ಸರ್ಕಾರ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಭದ್ರಾವತಿ ತಾಲೂಕು ಅಧ್ಯಕ್ಷರಾಗಿ ನೂತನವಾಗಿ ನೇಮಕಗೊಂಡಿರುವ ಯುವ ಮುಖಂಡ ಬಿ.ಎಸ್ ಗಣೇಶ್ ಅವರನ್ನು ಭಾನುವಾರ ಬ್ಲಾಕ್ ಕಾಂಗ್ರೆಸ್ ನಗರ ಮತ್ತು ಗ್ರಾಮಾಂತರ ಘಟಕಗಳಿಂದ ಅಭಿನಂದಿಸಲಾಯಿತು. 
    ಭದ್ರಾವತಿ : ಸರ್ಕಾರ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷರಾಗಿ ನೂತನವಾಗಿ ನೇಮಕಗೊಂಡಿರುವ ಯುವ ಮುಖಂಡ ಬಿ.ಎಸ್ ಗಣೇಶ್ ಅವರನ್ನು ಭಾನುವಾರ ಬ್ಲಾಕ್ ಕಾಂಗ್ರೆಸ್ ನಗರ ಮತ್ತು ಗ್ರಾಮಾಂತರ ಘಟಕಗಳಿಂದ ಅಭಿನಂದಿಸಲಾಯಿತು. 
    ಭಾನುವಾರ ಸಂಜೆ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಗಣೇಶ್‌ರವನ್ನು ಅಭಿನಂದಿಸಿ ಮಾತನಾಡಿದ ನಗರ ಘಟಕದ ಅಧ್ಯಕ್ಷ ಎಸ್. ಕುಮಾರ್ ಮತ್ತು ಗ್ರಾಮಾಂತರ ಘಟಕದ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ ಅವರು, ಯುವ ಮುಖಂಡರಾದ ಗಣೇಶ್‌ರವರು ಕ್ಷೇತ್ರದ ಭವಿಷ್ಯದ ರಾಜಕಾರಣದ ಯುವ ನಾಯಕರಾಗಿದ್ದಾರೆ. ಇವರಿಗೆ ಭವಿಷ್ಯದಲ್ಲಿ ಇನ್ನೂ ಉತ್ತಮ ಅವಕಾಶಗಳು ಲಭಿಸುವ ಮೂಲಕ ಉನ್ನತ ಸ್ಥಾನಕ್ಕೇರುವಂತಾಗಲಿ ಎಂದು ಆಶಿಸಿದರು. 
    ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಉಪಸ್ಥಿತರಿದ್ದರು. 

ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ಸೇವೆಗಾಗಿ `ನಮ್ಮ ಕ್ಲಿನಿಕ್' ಆರಂಭ

ಸದ್ಬಳಕೆ ಮಾಡಿಕೊಳ್ಳಲು ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು ಕರೆ 

ಭದ್ರಾವತಿ ನ್ಯೂಟೌನ್ ಆಂಜನೇಯ ಅಗ್ರಹಾರ, ಕೂಲಿಬ್ಲಾಕ್ ಶೆಡ್‌ನಲ್ಲಿ  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆಡಳಿತ ಮತ್ತು ತಾಲೂಕು ಪಂಚಾಯಿತಿ, ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿ ಮತ್ತು ನಗರಭೆ ವತಿಯಿಂದ ನೂತನವಾಗಿ ಆರಂಭಿಸಲಾಗಿರುವ `ನಮ್ಮ ಕ್ಲಿನಿಕ್' ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು ಉದ್ಘಾಟಿಸಿ ಮಾತನಾಡಿದರು. 
    ಭದ್ರಾವತಿ: ಸರ್ಕಾರಿ ಆಸ್ಪತ್ರೆ ಎಂಬ ಮನೋಭಾವನೆಯಿಂದ ಹೊರಬಂದು ಪ್ರತಿಯೊಬ್ಬರು `ನಮ್ಮ ಕ್ಲಿನಿಕ್' ಸೇವೆಯನ್ನು ಪಡೆಯುವ ಮೂಲಕ ಸದ್ಬಳಕೆ ಮಾಡಿಕೊಳ್ಳುವಂತೆ ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು ಹೇಳಿದರು. 
    ಅವರು ಭಾನುವಾರ ನ್ಯೂಟೌನ್, ಆಂಜನೇಯ ಅಗ್ರಹಾರ, ಕೂಲಿಬ್ಲಾಕ್ ಶೆಡ್‌ನಲ್ಲಿ  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆಡಳಿತ ಮತ್ತು ತಾಲೂಕು ಪಂಚಾಯಿತಿ, ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿ ಮತ್ತು ನಗರಭೆ ವತಿಯಿಂದ ನೂತನವಾಗಿ ಆರಂಭಿಸಲಾಗಿರುವ `ನಮ್ಮ ಕ್ಲಿನಿಕ್' ಉದ್ಘಾಟಿಸಿ ಮಾತನಾಡಿದರು. 
    ರಾಜ್ಯ ಸರ್ಕಾರ ರಾಜ್ಯದಲ್ಲಿರುವ ಪ್ರತಿಯೊಬ್ಬರಿಗೂ ಉತ್ತಮ ಮೂಲ ಸೌಕರ್ಯ, ಉತ್ತಮ ಆಹಾರ ಮತ್ತು ಉತ್ತಮ ಆರೋಗ್ಯ ನೀಡುವ ನಿಟ್ಟಿನಲ್ಲಿ ಮುಂದಾಗಿದೆ. ರಾಜ್ಯ ಸರ್ಕಾರ ಕೈಗೊಳ್ಳುತ್ತಿರುವ ಪ್ರತಿಯೊಂದು ಯೋಜನೆಗಳು ಇಂದು ಇಡೀ ದೇಶಕ್ಕೆ ಮಾದರಿಯಾಗುತ್ತಿವೆ. ಪ್ರತಿಯೊಬ್ಬರ ಮನೆಬಾಗಿಲಿಗೆ ಆರೋಗ್ಯ ಸೇವೆ ಒದಗಿಸುವ ಗುರಿಯೊಂದಿಗೆ ಕಡುಬಡವರು, ಕೂಲಿಕಾರ್ಮಿಕರು ಹೆಚ್ಚಾಗಿ ವಾಸಿಸುತ್ತಿರುವ ನಗರಸಭೆ ವ್ಯಾಪ್ತಿಯ ಹೊಸಮನೆ ಹನುಮಂತ ನಗರ ಮತ್ತು ಆಂಜನೇಯ ಅಗ್ರಹಾರ, ಕೂಲಿಬ್ಲಾಕ್ ಶೆಡ್‌ನಲ್ಲಿ ಎರಡು ಕಡೆ `ನಮ್ಮ ಕ್ಲಿನಿಕ್' ಆರಂಭಿಸುವಂತೆ ಶಾಸಕರು ಸರ್ಕಾರಕ್ಕೆ ಕೋರಿದ್ದರು. ಅದರಂತೆ ಇದೀಗ ಕ್ಲಿನಿಕ್ ಆರಂಭಿಸಲಾಗುತ್ತಿದೆ ಎಂದರು. 
    ವೈದ್ಯರು, ಸಿಬ್ಬಂದಿಗಳು ಕ್ಲಿನಿಕ್‌ನಲ್ಲಿ ಕಾರ್ಯ ನಿರ್ವಹಿಸಲಿದ್ದು, ಪ್ರಾಥಮಿಕ ಚಿಕಿತ್ಸೆ ಪಡೆದುಕೊಳ್ಳಲು ಅಗತ್ಯವಿರುವ ಎಲ್ಲಾ ಸೇವೆಗಳನ್ನು ಒದಗಿಸಲಾಗುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳಿ ಎಂದರು. 
    ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ಸದಸ್ಯರಾದ ಸರ್ವಮಂಗಳ, ರೂಪಾವತಿ, ಬಸವರಾಜ್ ಬಿ. ಆನೇಕೊಪ್ಪ, ಐ.ವಿ ಸಂತೋಷ್ ಕುಮಾರ್, ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಬಿ.ಎಸ್ ಗಣೇಶ್, ಮುಖಂಡರಾದ ಬಿ.ಕೆ ಜಗನ್ನಾಥ್, ಎಸ್.ಎಸ್ ಭೈರಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಟರಾಜ್, ಜಿಲ್ಲಾ ಆರೋಗ್ಯ ಅಧಿಕಾರಿ ಓ. ಮಲ್ಲಪ್ಪ, ಹಿರಿಯ ಆರೋಗ್ಯ ಸಹಾಯಕರಾದ ನಿಲೇಶ್ ರಾಜ್, ಆನಂದ ಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ ಅಶೋಕ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಗರಸಭೆ ಸದಸ್ಯ ಚನ್ನಪ್ಪ ಸ್ವಾಗತಿಸಿದರು. 

ನ್ಯಾಯಾಲಯದ ಲೋಕ ಅದಾಲತ್‌ನಲ್ಲಿ ೨೦೨೩ ಪ್ರಕರಣಗಳು ಇತ್ಯರ್ಥ

ಭದ್ರಾವತಿ ೪ನೇ ಹೆಚ್ಚುವರಿ ಜಿಲ್ಲಾ ಸತ್ರನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್  ಹಾಗೂ ವಕೀಲರು ಮತ್ತು ಕಕ್ಷೀದಾರರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. 
    ಭದ್ರಾವತಿ: ನಗರದ ನ್ಯಾಯಾಲಯದಲ್ಲಿ ಜರುಗಿದ ಬೃಹತ್ ಲೋಕ ಅದಾಲತ್‌ನಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ಸೇರಿದಂತೆ ವಿವಿಧ ರೀತಿಯ ೨೦೨೩ ವ್ಯಾಜ್ಯ ಪ್ರಕರಣಗಳು ಇತ್ಯರ್ಥಗೊಂಡಿದ್ದು, ನಿರೀಕ್ಷೆಯಂತೆ ಲೋಕ ಅದಾಲತ್ ಬಹುತೇಕ ಯಶಸ್ವಿಯಾಗಿದೆ. 
    ವಿವಿಧ ಶ್ರೇಣಿಯ ನ್ಯಾಯಾಲಯಗಳಲ್ಲಿ ವಿಲೇವಾರಿಗೆ ಬಾಕಿ ಉಳಿದಿದ್ದ ಸಿವಿಲ್ ಮತ್ತು ಕ್ರಿಮಿನಲ್ ಸೇರಿದಂತೆ ವಿವಿಧ ರೀತಿಯ ೨೦೨೩ ವ್ಯಾಜ್ಯ ಪ್ರಕರಣಗಳು ರಾಜಿಸಂಧಾನದ ಮೂಲಕ ಇತ್ಯರ್ಥಗೊಳಿಸಲಾಯಿತು. ಈ ಪೈಕಿ ಹಣಕಾಸಿನ ಸಂಬಂಧದ ಪ್ರಕರಣಗಳಲ್ಲಿ ೫,೪೨,೮೨,೭೯೦ ರು. ಪಾವತಿಸಲಾಯಿತು.
    ಲೋಕ ಅದಾಲತ್ ವಿವರ:
    ೪ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್‌ರವರು ೧೯ ಪ್ರಕರಣಗಳನ್ನು ರಾಜಿಸಂಧಾನದ ಮೂಲಕ ಇತ್ಯರ್ಥಗೊಳಿಸಿ ೨೩,೪೬,೨೩೯ ರು. ಹಾಗು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ೧೯ ಪ್ರಕರಣಗಳು ರಾಜಿಸಂಧಾನದ ಮೂಲಕ ಇತ್ಯರ್ಥಗೊಳಿಸಿ ೧,೪೭,೩೦,೬೪೦ ರು. ಮತ್ತು ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ರಾಘವೇಂದ್ರರವರ ಸಮ್ಮುಖದಲ್ಲಿ ೨೮೧ ಪ್ರಕರಣಗಳು ರಾಜಿಸಂಧಾನದ ಮೂಲಕ ಇತ್ಯರ್ಥಗೊಳಿಸಿ ೧,೪೭,೬೩,೪೯೮ ರು. ಪಾವತಿಸಲಾಯಿತು. 
    ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್.ಸಿ ನ್ಯಾಯಾಲಯದಲ್ಲಿ ನ್ಯಾಯಾಧೀಶರಾದ ರವಿಕುಮಾರ್‌ರವರ ಸಮ್ಮುಖದಲ್ಲಿ ೫೨೦ ಪ್ರಕರಣಗಳು ರಾಜಿಸಂಧಾನದ ಮೂಲಕ ಇತ್ಯರ್ಥಗೊಳಿಸಿ ೨೩,೯೨,೮೪೯ ರು. ಹಾಗು ೧ನೇ ಹೆಚ್ಚುವರಿ ಸಿವಿಲ್‌ಜಡ್ಜ್ ಮತ್ತು ಜೆಎಂಎಫ್.ಸಿ ನ್ಯಾಯಾಲಯದಲ್ಲಿ ನ್ಯಾಯಾಧೀಶರಾದ ರವಿಕುಮಾರ್‌ರವರು ೫೩೫ ಪ್ರಕರಣಗಳು ರಾಜಿಸಂಧಾನದ ಮೂಲಕ ಇತ್ಯರ್ಥಗೊಳಿಸಿ, ೪೩,೬೫,೧೫೨ ರು. ಪಾವತಿಸಲಾಯಿತು. 
    ೨ನೇ ಹೆಚ್ಚುವರಿ ಸಿವಿಲ್‌ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನ್ಯಾಯಾಧೀಶರಾದ ಶೃತಿರವರ ಸಮ್ಮುಖದಲ್ಲಿ ೫೮೦ ಪ್ರಕರಣಗಳು ರಾಜಿಸಂಧಾನದ ಮೂಲಕ ಇತ್ಯರ್ಥಗೊಳಿಸಿ, ೬೪,೦೮,೦೧೫ ರು. ಹಾಗು ೩ನೇ ಹೆಚ್ಚುವರಿ ಸಿವಿಲ್‌ಜಡ್ಜ್ ಮತ್ತು ಜೆಎಂಎಫ್.ಸಿ ನ್ಯಾಯಾಲಯದಲ್ಲಿ ನ್ಯಾಯಾಧೀಶರಾದ ಶೃತಿರವರ ಸಮ್ಮುಖದಲ್ಲಿ ೪೭೯ಪ್ರಕರಣಗಳು ರಾಜಿಸಂಧಾನದ ಮೂಲಕ ಇತ್ಯರ್ಥಗೊಳಿಸಿ ೨೯,೫೮,೭೩೪ ರು. ಮತ್ತು ೪ನೇ ಹೆಚ್ಚುವರಿ ಸಿವಿಲ್‌ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನ್ಯಾಯಾಧೀಶರಾದ ಗಿರಿಜಾರವರ ಸಮ್ಮುಖದಲ್ಲಿ ೪೭೦ ಪ್ರಕರಣಗಳು ರಾಜಿಸಂಧಾನದ ಮೂಲಕ ಇತ್ಯರ್ಥಗೊಳಿಸಿ ೬೩,೧೭,೬೬೩ ರು. ಪಾವತಿಸಲಾಯಿತು.