ಭಾನುವಾರ, ಜುಲೈ 20, 2025

ಕನ್ನಡ ಸಾಹಿತ್ಯ ಲೋಕಕ್ಕೆ ಡಾ.ಎಚ್.ಎಸ್.ವಿ ಕೊಡುಗೆ ಅನನ್ಯ : ಡಿ.ಮಂಜುನಾಥ್



ಭದ್ರಾವತಿ ಹಳೇನಗರದ ಶ್ರೀ ವೀರಭದ್ರೇಶ್ವರಸ್ವಾಮಿ ಸಮುದಾಯ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ವತಿಯಿಂದ ಡಾ. ಎಚ್.ಎಸ್ ವೆಂಕಟೇಶ್‌ಮೂರ್ತಿರವರ ಸ್ಮರಣಾರ್ಥ ಏರ್ಪಡಿಸಲಾಗಿದ್ದ "ಭಾವ ಗೀತೆಗಳ ಗೀತ ಗಾಯನ" ಕಾರ್ಯಕ್ರಮ ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಉದ್ಘಾಟಿಸಿದರು. 
    ಭದ್ರಾವತಿ: ಹಿರಿಯ ಸಾಹಿತಿ, ಲೇಖಕ, ಕಾದಂಬರಿಗಾರ ದಿವಂಗತ ಡಾ. ಎಚ್.ಎಸ್ ವೆಂಕಟೇಶ್‌ಮೂರ್ತಿಯವರು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿರುವ ಕೊಡುಗೆ ಅನನ್ಯವಾಗಿದ್ದು, ಕನ್ನಡ ಆಸ್ಮಿತೆಯನ್ನು ಜಗತ್ತಿಗೆ ತೋರಿಸಿಕೊಟ್ಟ ಒಬ್ಬ ಧೀಮಂತ ವ್ಯಕ್ತಿ ಎಂದು ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಬಣ್ಣಿಸಿದರು. 
    ಅವರು ಹಳೇನಗರದ ಶ್ರೀ ವೀರಭದ್ರೇಶ್ವರಸ್ವಾಮಿ ಸಮುದಾಯ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ವತಿಯಿಂದ ಡಾ. ಎಚ್.ಎಸ್ ವೆಂಕಟೇಶ್‌ಮೂರ್ತಿರವರ ಸ್ಮರಣಾರ್ಥ ಏರ್ಪಡಿಸಲಾಗಿದ್ದ "ಭಾವ ಗೀತೆಗಳ ಗೀತ ಗಾಯನ" ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 
    ಕನ್ನಡ ಕೆಲಸ ಮಾಡಲು ಪ್ರೇರೇಪಿಸಿದ, ಆತ್ಮೀಯರೊಂದಿಗೆ ಭಾವನಾತ್ಮಕವಾಗಿ ಬೆರೆಯುವ ವ್ಯಕ್ತಿ ಎಂಬುದು ವಿಶೇಷ. ಸ್ವಾತಂತ್ರ್ಯ ಚಳುವಳಿಯ ಸಮಯದಲ್ಲಿನ ಭಾವನೆಗಳನ್ನು ತಮ್ಮ ಕವಿತೆಗಳಲ್ಲಿ ಛಾಪು ಮೂಡಿಸಿ ಜಾತೀಯತೆ ಶೋಷಣೆಯ ವಿರುದ್ದ ಹೋರಾಟ ಮಾಡಿದ್ದ ಕವಿ ಎಂದರು.
    ನಾವೆಲ್ಲಾ ಭಾರತೀಯರು ಎಂದು ಹೇಳುವ ಸಮಯದಲ್ಲಿ ಜಾತಿ, ಮತ, ಭಾಷೆ, ಮೇಲು, ಕೀಳು, ಸ್ಪೃಶ್ಯ, ಆಸ್ಪೃಶ್ಯ, ಅಸೂಯೆ, ಈರ್ಷೆಗಳನ್ನು ಹೊಂದಿರುವ ಆಶಾಂತಿಯ ವಾತಾವರಣದಲ್ಲಿ ಜೀವಸುತ್ತಿದ್ದೇವೆ. ಇಂತಹ ಸಂದರ್ಭಧಲ್ಲಿ ಸರ್ವಜನಾಂಗದ ಶಾಂತಿಯ ತೋಟ ಹೇಗೆ ನಿರ್ಮಾಣ ಆಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. 
    ಶಾಲಾ ಕಾಲೇಜುಗಳಲ್ಲಿ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಬೇಕು. ಆ ಮೂಲಕ ಕನ್ನಡ ಭಾಷೆಯ ಬೆಳವಣಿಗೆಯ ಆಸಕ್ತಿ ಮೂಡುವಂತಾಗುತ್ತದೆ. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಕನ್ನಡ ಭಾಷೆಯ ಕಮ್ಮಟಗಳನ್ನು, ಕಾರ್ಯಗಾರವನ್ನು ಹಮ್ಮಿಕೊಳ್ಳುವ ಯೋಜನೆ ಇದೆ. ಆ ಮೂಲಕ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳ ವಾತಾವರಣವನ್ನು ನಿರ್ಮಾಣ ಮಾಡಲಾಗುವುದು. ಇಂದಿನ ಯುವ ಜನಾಂಗ ಸಂವಿಧಾನ, ಅಂಬೇಡ್ಕರ್, ಸ್ವಾತಂತ್ರ್ಯ ಚಳುವಳಿಗಳ ಮಹತ್ವವನ್ನು ಅರಿಯಲಿ ಎಂಬ ಉದ್ದೇಶದಿಂದ ಶಾಲಾ-ಕಾಲೇಜುಗಳಲ್ಲಿ ರಸ ಪ್ರಶ್ನೆ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಜಾಗೃತಿಯನ್ನು ಉಂಟು ಮಾಡಬೇಕು ಎಂದು ಕಾರ್ಯಕ್ರಮಗಳನ್ನು ಆಯೋಜಿಸಿದರೆ ಅದರ ವಿರುದ್ದ ಕಾರ್ಯಕ್ರಮ ನಡೆಯದಂತೆ ಸರ್ಕಾರ ಆದೇಶವನ್ನು ಹೊರಡಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಈ ರೀತಿ ಆದೇಶವನ್ನು ಹೊರಡಿಸಲು ಯಾವ ಅಧಿಕಾರಿ ಕಾರಣ ಎಂಬುದು ಬಹಿರಂಗ ಆಗಬೇಕು. ಈ ಸಂಬಂಧ ಶಿಕ್ಷಣ ಸಚಿವರಿಗೆ ಪತ್ರ ಬರೆಯಲಾಗಿದೆ ಎಂದರು.
    ಪರಿಷತ್ ತಾಲೂಕು ಅಧ್ಯಕ್ಷ ಎಚ್. ತಿಮ್ಮಪ್ಪ ಅಧ್ಯಕ್ಷತೆ ವಹಿಸಿದ್ದರು. ಜನ್ನಾಪುರ ಸಂಗೀತ ಶಿಕ್ಷಕಿ ಗಾಯಿತ್ರಿ, ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಎಂ.ಆರ್ ರೇವಣಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು. 
    ನಿವೃತ್ತ ಪ್ರಾಂಶುಪಾಲ ಡಾ. ಕೆ. ನಿತ್ಯಾನಂದ ಉಪನ್ಯಾಸ ನೀಡಿದರು. ಸುಮತಿ ಕಾರಂತ್, ಕಮಲಾ ಕುಮಾರಿ, ಆರ್.ಜಿ ಭಾರ್ಗವಿ, ಎನ್.ಎಂ ಸುನಂದ, ಎಚ್.ಸಿ ಸುನಂದ, ನಗರಸಭಾ ಸದಸ್ಯೆ ಅನುಪಮ ಚನ್ನೇಶ್, ವಾಣಿಶ್ರೀ ನಾಗರಾಜ್, ಶ್ಯಾಮಲ, ಸುಚಿತ್ರ, ದಿವಾಕರ್, ಡಿ.ಆರ್.ಹರೀಶ್ ಮತ್ತು ರುದ್ರೇಶ್ ಗಾಯನ ಪ್ರಸ್ತುತ ಪಡಿಸಿದರು.
    ಸುಮತಿ ತಂಡದವರು ನಾಡ ಗೀತೆ ಹಾಡಿದರು. ಕಮಲಾಕರ್ ಸ್ವಾಗತಿಸಿ, ಬಿ.ಎಲ್ ಮೋಹನ್ ಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನ್ಯಾಯವಾದಿ ಬಿ.ಎಚ್ ಪ್ರಶಾಂತ್ ವಂದಿಸಿ,ನಾಗೋಜಿರಾವ್ ಕಾರ್ಯಕ್ರಮ ನಿರೂಪಿಸಿದರು.

ಶನಿವಾರ, ಜುಲೈ 19, 2025

ಜು.೨೩ರಂದು ನಗರಕ್ಕೆ ನಿಖಿಲ್ ಕುಮಾರಸ್ವಾಮಿ

    ಭದ್ರಾವತಿ: ಕರ್ನಾಟಕ ಪ್ರದೇಶ ಜನತಾದಳ(ಜಾತ್ಯಾತೀತ) ವತಿಯಿಂದ ರಾಜ್ಯಾದ್ಯಂತ ಹಮ್ಮಿಕೊಂಡಿರುವ `ಜನರೊಂದಿಗೆ ಜನತಾದಳ' ಕಾರ್ಯಕ್ರಮದ ಅಂಗವಾಗಿ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಜು.೨೩ರಂದು ನಗರಕ್ಕೆ ಆಗಮಿಸಲಿದ್ದಾರೆ. 
    ಶಿವಮೊಗ್ಗ ಜಿಲ್ಲಾ ಪ್ರವಾಸ ಕೈಗೊಂಡಿರುವ ನಿಖಿಲ್ ಕುಮಾರಸ್ವಾಮಿಯವರು ಸಂಜೆ ೬ ಗಂಟೆಗೆ ನಗರದ ಬಿ.ಎಚ್ ರಸ್ತೆ, ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿರುವ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. 
    ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದ ಅಪ್ಪಾಜಿ ಕೋರಿದ್ದಾರೆ. 

ಜು.೨೦ ಡಾ.ಎಚ್.ಎಸ್.ವಿ ಸಂಸ್ಮರಣೆ

    ಭದ್ರಾವತಿ: ನಗರದ ಕನ್ನಡ ನಾಡು ನಡೆ-ನುಡಿ ಬಿಂಬಿಸುವ ವೇದಿಕೆ ಭೂಮಿಕಾ ವತಿಯಿಂದ ಜು.೨೦ರ ಭಾನುವಾರ ಭಾವ-ಗಾನ-ಗೌರವ ಡಾ. ಎಚ್.ಎಸ್.ವಿ ಸಂಸ್ಮರಣೆ ಕಾರ್ಯಕ್ರಮದ ಅಂಗವಾಗಿ ಆಯ್ದ ಗೀತೆಗಳ ಗಾಯನ ಆಯೋಜಿಸಲಾಗಿದೆ. 
    ಹಳೇನಗರ ಶ್ರೀ ರಾಮೇಶ್ವರ ದೇವಸ್ಥಾನ ಹಿಂಭಾಗದ ಶ್ರೀ ಗಾಯಿತ್ರಿ ಧರ್ಮ ಶಾಲಾ ಭವನದಲ್ಲಿ ಆಯೋಜಿಸಲಾಗಿದೆ. ಭೂಮಿಕಾ ವೇದಿಕೆ ಅಧ್ಯಕ್ಷ, ವೈದ್ಯ ಡಾ. ಕೃಷ್ಣ ಎಸ್. ಭಟ್ ಅಧ್ಯಕ್ಷತೆ ವಹಿಸಲಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ. 

ಪಶು ವೈದ್ಯಕೀಯ ಪರೀಕ್ಷಕ ಡಿ.ಎಸ್ ರಾಜಪ್ಪ ನಿಧನ

ಡಿ.ಎಸ್ ರಾಜಪ್ಪ 
    ಭದ್ರಾವತಿ: ಹಳೇನಗರದ ಕೇಶವಪುರ ಬಡಾವಣೆ ನಿವಾಸಿ ಪಶು ಸಂಗೋಪನಾ ಇಲಾಖೆಯಲ್ಲಿ ಪಶು ವೈದ್ಯಕೀಯ ಪರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಡಿ.ಎಸ್ ರಾಜಪ್ಪ(೫೮) ಶುಕ್ರವಾರ ನಿಧನ ಹೊಂದಿದರು. 
    ಶಿಕ್ಷಕಿ, ಪತ್ನಿ ಜಿ.ಎಸ್ ಉಮಾ ಹಾಗು ಸಬ್‌ಇನ್ಸ್‌ಪೆಕ್ಟರ್, ಪುತ್ರ ಎಚ್.ಆರ್ ಅಭಿಷೇಕ್ ಮತ್ತು ಓರ್ವ ಪುತ್ರಿ ಇದ್ದಾರೆ. ಇವರ ಅಂತ್ಯಕ್ರಿಯೆ ಹೊಸದುರ್ಗಾ ತಾಲೂಕಿನ ಮತ್ತೋಡ್ ಬಳಿಯ ಹೊತ್ತರಗೊಂಡನಹಳ್ಳಿಯಲ್ಲಿ ನೆರವೇರಿತು. ಅನಾರೋಗ್ಯಕ್ಕೆ ಒಳಗಾಗಿದ್ದ ರಾಜಪ್ಪರವರು ಸುಮಾರು ೫-೬ ತಿಂಗಳುಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. 
    ಇವರು ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಯದ ವಿಶ್ವೇಶ್ವರಾಯ ವಿದ್ಯಾಸಂಸ್ಥೆ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ನೌಕರರ ಸಂಘದಲ್ಲಿ ಖಜಾಂಚಿಯಾಗಿ ಉತ್ತಮ ಸೇವೆ ಸಲ್ಲಿಸಿದ್ದರು. 
    ಸಂತಾಪ: ಶಾಸಕ ಬಿ.ಕೆ ಸಂಗಮೇಶ್ವರ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ಸರ್ಕಾರದ ೫ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಎಸ್.ಗಣೇಶ್, ಯುವ ಮುಖಂಡ ಬಿ.ಎಸ್ ಬಸವೇಶ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ, ಮಾಜಿ ಅಧ್ಯಕ್ಷ ಎನ್. ಕೃಷ್ಣಪ್ಪ, ವಿಶ್ವೇಶ್ವರಾಯ ವಿದ್ಯಾಸಂಸ್ಥೆ ಪ್ರಧಾನ ಕಾರ್ಯದರ್ಶಿ ಎಸ್.ಕೆ ಮೋಹನ್, ಆಡಳಿತಾಧಿಕಾರಿ ಡಾ.ಎಸ್.ಪಿ ರಾಕೇಶ್, ದೈಹಿಕ ಶಿಕ್ಷಣ ಶಿಕ್ಷಕ ಶಿವಲಿಂಗೇಗೌಡ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪೃಥ್ವಿರಾಜ್, ಪಶು ಸಂಗೋಪನಾ ವೈದ್ಯಕೀಯ ಇಲಾಖೆಯ ನಿವೃತ್ತ ಪರೀಕ್ಷಕ ಎನ್.ಎಸ್ ರಮೇಶ್ ಮುಂತಾದವರು ಡಿ.ಎಸ್.ರಾಜಪ್ಪ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. 

ಶುಕ್ರವಾರ, ಜುಲೈ 18, 2025

ದಲಿತರ ಭೂಮಿಯ ಹಕ್ಕಿಗಾಗಿ ತಹಶೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ : ಸರ್ಕಾರಕ್ಕೆ ಮನವಿ

ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ರಾಜ್ಯ ಸಮಿತಿ ಕರೆಯ ಮೇರೆಗೆ ಭದ್ರಾವತಿ ತಹಸೀಲ್ದಾರ್ ಕಚೇರಿ ಮುಂಭಾಗ ಶುಕ್ರವಾರ ತಾಲೂಕು ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ `ದಲಿತರ ಭೂಮಿಯ ಹಕ್ಕಿಗಾಗಿ ಪ್ರತಿಭಟನಾ ಧರಣಿ'ಯಲ್ಲಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. 
    ಭದ್ರಾವತಿ:  ತಾಲೂಕಿನಲ್ಲಿ ಪರಿಶಿಷ್ಟ ಜಾತಿ/ವರ್ಗದ ಸೂರಿಲ್ಲದ ಜನರಿಗೆ ಸೂರಿನ ವ್ಯವಸ್ಥೆ ಕಲ್ಪಿಸಬೇಕು ಮತ್ತು ಹಾಲಿ ವಾಸಿಸುವ ಮನೆಗಳಿಗೆ ಹಕ್ಕು ಪತ್ರಗಳನ್ನು ವಿತರಿಸಿ ಖಾತೆ ಮಾಡಿಕೊಡಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‌ವಾದ  ತಾಲೂಕು ಪ್ರಧಾನ ಸಂಚಾಲಕ ಬಿ.ಎಸ್ ಪುಟ್ಟರಾಜು ಆಗ್ರಹಿಸಿದರು. 
    ಅವರು ರಾಜ್ಯ ಸಮಿತಿ ಕರೆಯ ಮೇರೆಗೆ ತಹಸೀಲ್ದಾರ್ ಕಚೇರಿ ಮುಂಭಾಗ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ `ದಲಿತರ ಭೂಮಿಯ ಹಕ್ಕಿಗಾಗಿ ಪ್ರತಿಭಟನಾ ಧರಣಿ' ನೇತೃತ್ವವಹಿಸಿ ಮಾತನಾಡಿ, ಪರಿಶಿಷ್ಟರ ಪಿ.ಟಿ.ಸಿ.ಎಲ್ ಕಾಯ್ದೆಗೆ ರಾಜ್ಯ ಸರ್ಕಾರ ತಂದಿರುವ ತಿದ್ದುಪಡಿಯನ್ನು ಮಾನ್ಯ ಮಾಡದ ಕಂದಾಯ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
    ಉಚ್ಛ ನ್ಯಾಯಾಲಯದಲ್ಲಿ ಪಿ.ಟಿ.ಸಿ.ಎಲ್ ಪ್ರಕರಣಗಳು ವಜಾಗೊಳ್ಳುತಿದ್ದು, ಈ ಹಿನ್ನಲೆಯಲ್ಲಿ ನುರಿತ ಹಿರಿಯ ವಕೀಲರನ್ನು ನೇಮಿಸಿ ಈ ಪ್ರಕರಣಗಳಲ್ಲಿ ರಾಜ್ಯ ಸರ್ಕಾರ ಸರ್ವೋಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಬೇಕು. ಪರಿಶಿಷ್ಟ ಜಾತಿ/ವರ್ಗ ಹಾಗೂ ಭೂಹೀನ ತಳ ಸಮುದಾಯಗಳು ಉಳುಮೆ ಮಾಡುತ್ತಿರುವ ಬಗರ್ ಹುಕುಂ ಸಾಗುವಳಿ (ದರ ಖಾಸ್ತು ಮಂಜೂರಾತಿ ಸಕ್ರಮೀಕರಣ) ಇತ್ಯರ್ಥಗೊಳಿಸಬೇಕು. ವಿನಾಕಾರಣ ವಜಾಗೊಳಿಸಿರುವ ಬಗರ್‌ಹುಕುಂ ಸಾಗುವಳಿಯ ಅರ್ಜಿಗಳನ್ನು ಮರುಪರಿಶೀಲಿಸಬೇಕೆಂದು ಒತ್ತಾಯಿಸಿದರು.  
    ತಾಲೂಕು ಕಸಬಾ ಹೋಬಳಿ ಸರ್ವೆ ನಂಬರ್ ೧೩೯ ಖಾತೆದಾರರಾದ ಕಮಲಮ್ಮ ಕೋಂ ಬಿ.ಆರ್ ಕೃಷ್ಣಮೂರ್ತಿ ಇವರ ಪೌತಿ ನಂತರ ಜಂಟಿ ಖಾತೆ ೨ ಎಕರೆ ೨೬ ಗುಂಟೆ ಜಮೀನಿದ್ದು, ಈ ಜಮೀನಿನ ಮೇಲ್ಬಾಗದಲ್ಲಿ ಲಗತ್ತಾಗಿ ೦-೧೬ ಗುಂಟೆ ಖರಾಬು ಜಮೀನಿದೆ. ಇಲ್ಲಿ ಸುಮಾರು ೫೦ ವರ್ಷಗಳಿಂದಲೂ ಗುಡಿಸಲು ಕಟ್ಟಿಕೊಂಡು ಸಾಗುವಳಿ ಮಾಡುತ್ತಾ ಸ್ವಾಧೀನಾನುಭವದಲ್ಲಿರುತ್ತಾರೆ. ಈ ಹಿನ್ನಲೆಯಲ್ಲಿ ೦-೧೬ ಗುಂಟೆ ಜಮೀನು ಇವರ ಹೆಸರಿಗೆ ಮಂಜೂರು ಮಾಡಬೇಕು. ಅರಣ್ಯ ಭೂಮಿಯಲ್ಲಿ ೧೯೭೮ಕ್ಕಿಂತ ಹಿಂದಿನಿಂದ ಸಾಗುವಳಿ ನೀಡಿರುವ ಭೂಮಿಗೆ ಈಗ ಅರಣ್ಯ ಭೂಮಿ ಎಂದು ನೋಟಿಸ್ ನೀಡಿ ಖಾತೆ ವಜಾ ಮಾಡಲು ಹುನ್ನಾರ ನಡೆಸಲಾಗುತ್ತಿದ್ದು, ಸರ್ಕಾರ ಯಾವುದೇ ಕಾರಣಕ್ಕೂ ಖಾತೆ ವಜಾ ಮಾಡಬಾರದು. ಸಾಗುವಳಿದಾರರಿಗೆ ತೊಂದರೆಯಾಗದಂತೆ ಸರ್ಕಾರ ಕಾನೂನು ತಿದ್ದುಪಡಿ ಮಾಡಬೇಕು. ಭೂಹೀನ ದಲಿತರಿಗೆ ಮಂಜೂರಾದ ಭೂಮಿಯನ್ನು ಎಂಪಿಎಂ ಕಾರ್ಖಾನೆಯವರು ಅತಿಕ್ರಮಿಸಿ ದಲಿತರ ಮೇಲೆ ಸುಳ್ಳು ದೂರುಗಳನ್ನು ದಾಖಲಿಸಿರುವುದನ್ನು ಸರ್ಕಾರ ಕೂಡಲೇ ಹಿಂಪಡೆದು ಭೂಮಿಯನ್ನು ಮಂಜೂರುದಾರರಿಗೆ ಬಿಡಿಸಿ ಕೊಡಬೇಕೆಂದು ಆಗ್ರಹಿಸಿ, ಶಿವಮೊಗ್ಗ ಜಿಲ್ಲೆಯಲ್ಲಿ ಸರ್ಕಾರದ ಆದೇಶದನ್ವಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೇಮಕಾತಿಯಲ್ಲಿ ರೋಸ್ಟರ್ ಪದ್ಧತಿ ಜಾರಿಗೆ ತರಬೇಕೆಂದು ಒತ್ತಾಯಿಸಿದರು. 
    ಹೋರಾಟ ಬೆಂಬಲಿಸಿ ಮಾತನಾಡಿದ ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್, ಶಾಸಕರು, ತಹಸೀಲ್ದಾರ್ ಹಾಗೂ ಮುಖಂಡರುಗಳೊಂದಿಗೆ ಚರ್ಚಿಸಿ ಭದ್ರಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕವಾಗಿ ಪ್ರಯತ್ನ ಕೈಗೊಳ್ಳುವುದಾಗಿ ಭರವಸೆನೀಡಿದರು.  
    ತಾಲೂಕು ಸಮಿತಿ ವತಿಯಿಂದ ಗ್ರೇಡ್-೨ ತಹಸೀಲ್ದಾರ್ ಮಂಜಾನಾಯ್ಕರವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನಾ ಧರಣಿಯಲ್ಲಿ ನಗರ ಆಶ್ರಯ ಸಮಿತಿ ಅಧ್ಯಕ್ಷ ಗೋಪಾಲ್, ಜಿಲ್ಲಾ ಕೆಡಿಪಿ ಸದಸ್ಯ ಚಿರಾಗ್, ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ಗೋವಿಂದರಾಜ್, ಕೂಡ್ಲಿಗೆರೆ ಚಂದ್ರಪ್ಪ, ಹಿರಿಯೂರು ಎಚ್.ಎಲ್ ಅಣ್ಣಪ್ಪ, ಸಿಂಗನಮನೆ ಗಿರೀಶ್ ಮಾಳೇನಹಳ್ಳಿ, ತಾಲೂಕು ಸಂಘಟನಾ ಸಂಚಾಲಕ ರಾದ ಪ್ರಭಾಕರ್ ಹೆಬ್ಬಂಡಿ, ಮಹೇಶ್‌ಕುಮಾರ್ ಅತ್ತಿಗುಂದ, ರಾಮಯ್ಯ ಶಾಂತಿನಗರ, ಗೌರವ ಸಲಹೆಗಾರ ಗಾಂಧಿನಗರ ಪ್ರಭಾಕರ್ ಸೇರಿದಂತೆ ಗಿರೀಶ್ ಶಾಂತಿನಗರ, ವೀಣಾ, ಕಾವ್ಯ, ಅನ್ನಪೂರ್ಣ, ಲಕ್ಷ್ಮಮ್ಮ, ಮಹೇಶ್, ವಿಜಯ್, ಅಭಿ ಮುಂತಾದವರು ಪಾಲ್ಗೊಂಡಿದ್ದರು. 

ಕೆಸಿಇಟಿ/ಜೆಇಇ/ಎನ್‌ಇಇಟಿ ಕಾರ್ಯಾಗಾರಕ್ಕೆ ಚಾಲನೆ

ಭದ್ರಾವತಿ ನಗರದ ನ್ಯೂಟೌನ್ ಸೆಂಟ್ ಚಾರ್ಲ್ಸ್ ಸಂಯೋಜಿತ ಪಿಯು ಕಾಲೇಜು ವತಿಯಿಂದ ಮನೋಲ್ಲಾಸ ಎಜುಕೇಷನ್ ಸಹಯೋಗದೊಂದಿಗೆ ಆಯೋಜಿಸಲಾಗಿರುವ ಕೆಸಿಇಟಿ/ಜೆಇಇ/ಎನ್‌ಇಇಟಿ ತರಬೇತಿ ಕಾರ್ಯಾಗಾರ-೨೦೨೫/೨೬ ಕಾಲೇಜಿನ ಪ್ರಾಂಶುಪಾಲರಾದ ಸಿಸ್ಟರ್ ಫ್ಲವಿನಾ ಜ್ಯೋತಿ ಫರ್ನಾಂಡಿಸ್ ಉದ್ಘಾಟಿಸಿದರು.
    ಭದ್ರಾವತಿ : ನಗರದ ನ್ಯೂಟೌನ್ ಸೆಂಟ್ ಚಾರ್ಲ್ಸ್ ಸಂಯೋಜಿತ ಪಿಯು ಕಾಲೇಜು ವತಿಯಿಂದ ಮನೋಲ್ಲಾಸ ಎಜುಕೇಷನ್ ಸಹಯೋಗದೊಂದಿಗೆ ಆಯೋಜಿಸಲಾಗಿರುವ ಕೆಸಿಇಟಿ/ಜೆಇಇ/ಎನ್‌ಇಇಟಿ ತರಬೇತಿ ಕಾರ್ಯಾಗಾರ-೨೦೨೫/೨೬ ಕಾಲೇಜಿನ ಪ್ರಾಂಶುಪಾಲರಾದ ಸಿಸ್ಟರ್ ಫ್ಲವಿನಾ ಜ್ಯೋತಿ ಫರ್ನಾಂಡಿಸ್ ಉದ್ಘಾಟಿಸಿದರು.
    ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಗಣಿತಶಾಸ್ತ್ರ ಉಪನ್ಯಾಸಕ ಎಸ್.ವೈ ನಾಗೇಶ್ ಕೆಸಿಇಟಿ/ಜೆಇಇ/ಎನ್‌ಇಇಟಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅನುಸರಿಸಬಹುದಾದ ಸರಳ ವಿಧಾನಗಳ ಕುರಿತು ವಿವರಿಸಿದರು. ಮನೋಲ್ಲಾಸ ಎಜುಕೇಷನ್ ವ್ಯವಸ್ಥಾಪಕ ನಿರ್ದೇಶಕಿ ಚೈತ್ರಾ, ಸಂಸ್ಥೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಜುನಾಥ್ ಉಪಸ್ಥಿತರಿದ್ದರು. 
    ಉಪನ್ಯಾಸಕ ಪುನೀತ್ ಸ್ವಾಗತಿಸಿ, ಉಪನ್ಯಾಸಕಿ ಶಿಲ್ಪಾ ವಂದಿಸಿದರು. ವಿದ್ಯಾರ್ಥಿಗಳು, ಪೋಷಕರು ಪಾಲ್ಗೊಂಡಿದ್ದರು. ರಾಜ್ಯದ ಇತರೆ ಜಿಲ್ಲೆಗಳಿಂದ ಆಗಮಿಸುವ ಬಡ ಪ್ರತಿಭಾನ್ವಿತ ವಿಜ್ಞಾನ ವಿದ್ಯಾರ್ಥಿಗಳಿಗೆ ಅತ್ಯಂತ ರಿಯಾಯತಿ ದರದಲ್ಲಿ ೨ ವರ್ಷಗಳ ಕಾಲ ಉತ್ತಮ ತರಬೇತಿ, ಕ್ರ್ಯಾಶ್ ಕೋರ್ಸ್ ಹಾಗೂ ಉಚಿತವಾಗಿ ತರಬೇತಿಗೆ ಪೂರಕವಾದ ಪಠ್ಯಪುಸ್ತಕ, ಪರಿಕರಗಳನ್ನು ಕಲ್ಪಿಸಿಕೊಡುವ ಭರವಸೆ ಸಂಸ್ಥೆಯ ನಿರ್ದೇಶಕರು ವ್ಯಕ್ತಪಡಿಸಿದರು. ಹೆಚ್ಚಿನ ಮಾಹಿತಿಗೆ ಮೊ: ೯೬೬೩೮೭೫೩೭೮ ಅಥವಾ ೮೮೮೪೭೧೦೪೮೫ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ. 

ಜ್ಞಾನವಿಕಾಸ ಕಾರ್ಯಕ್ರಮಗಳು ಗ್ರಾಮೀಣ ಭಾಗದ ಮಹಿಳೆಯರ ಅಭಿವೃದ್ಧಿಗೆ ಸಹಕಾರಿ : ಯಶೋಧಮ್ಮ


ಭದ್ರಾವತಿ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ- ೧ರ ವ್ಯಾಪ್ತಿಯ ಅರಳಿಕೊಪ್ಪ ವಲಯದ ಗೋಣಿಬೀಡು ಕಾರ್ಯಕ್ಷೇತ್ರದ ವಿದ್ಯಾಶ್ರೀ ಜ್ಞಾನವಿಕಾಸ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ವಾರ್ಷಿಕೋತ್ಸವ ಕಾರ್ಯಕ್ರಮ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಯಶೋಧಮ್ಮ, ಮುರುಳಿಧರ ಶೆಟ್ಟಿ ಉದ್ಘಾಟಿಸಿದರು.  
    ಭದ್ರಾವತಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮಗಳು ಗ್ರಾಮೀಣ ಭಾಗದ ಮಹಿಳೆಯರು ಅಭಿವೃದ್ಧಿಗೊಳ್ಳಲು ಸಹಕಾರಿಯಾಗಿವೆ ಎಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಯಶೋಧಮ್ಮ ಹೇಳಿದರು.       ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ- ೧ರ ವ್ಯಾಪ್ತಿಯ ಅರಳಿಕೊಪ್ಪ ವಲಯದ ಗೋಣಿಬೀಡು ಕಾರ್ಯಕ್ಷೇತ್ರದ ವಿದ್ಯಾಶ್ರೀ ಜ್ಞಾನವಿಕಾಸ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 
    ಯೋಜನೆಯ ಹಲವು ಕಾರ್ಯಕ್ರಮಗಳು ಗ್ರಾಮೀಣ ಭಾಗದ ಮಹಿಳೆಯರಿಗೆ ಪರಿಪೂರ್ಣವಾಗಿ ತಲುಪುತ್ತಿದ್ದು, ಬಹಳಷ್ಟು ಮಹಿಳೆಯರು ಇವುಗಳ ಸದ್ಬಳಕೆ ಮಾಡಿಕೊಂಡು ಪ್ರಗತಿ ಸಾಧಿಸಿದ್ದಾರೆಂದರು. 
    ಜಿಲ್ಲಾ ಯೋಜನಾ ನಿರ್ದೇಶಕ ಮುರುಳಿಧರ ಶೆಟ್ಟಿ ಮಾತನಾಡಿ, ಜ್ಞಾನವಿಕಾಸ ಕಾರ್ಯಕ್ರಮಗಳು ಮಾತೃಶ್ರೀ ಅಮ್ಮನವರ ಮಾರ್ಗದರ್ಶನದಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ರೂಪುಗೊಂಡ ಕಾರ್ಯಕ್ರಮಗಳಾಗಿವೆ. ಸಾಧನೆ ಸಾಧಕನ ಸ್ವತ್ತಾಗಿದ್ದು, ಪ್ರತಿಯೊಬ್ಬ ಮಹಿಳೆ ಯಶಸ್ಸಿನ ದಾರಿಯಲ್ಲಿ ಸಾಗುವಂತಾಗಲಿ ಎಂದರು. 
    ತಾಲೂಕು ಯೋಜನಾಧಿಕಾರಿ ಪ್ರಕಾಶ ವೈ ವಿದ್ಯಾಶ್ರೀ ಜ್ಞಾನ ವಿಕಾಸ ಕೇಂದ್ರ ಮಾದರಿ ಕೇಂದ್ರವಾಗಬೇಕೆಂದು ಶುಭ ಹಾರೈಸಿದರು. ಕೇಂದ್ರದ ಸದಸ್ಯರು ಅನಿಸಿಕೆಯನ್ನು ವ್ಯಕ್ತಪಡಿಸಿದರು. ಆಟೋಟ ಸ್ಪರ್ಧೆಯಲ್ಲಿ ವಿಜೇತರಾದ ಸದಸ್ಯರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ನೇತ್ರಾವತಿ, ವಲಯ ಮೇಲ್ವಿಚಾರಕ ಮೋಹನ್, ಕೇಂದ್ರ ಸಂಯೋಜಕಿ ಕವಿತಾ ಉಪಸ್ಥಿತರಿದ್ದರು