ಸೋಮವಾರ, ಜುಲೈ 21, 2025

ದ್ವಿಚಕ್ರ ವಾಹನ ಅಪಘಾತ : ಅರ್ಚಕ ಸಾವು

ಭದ್ರಾವತಿ: ದೇವಸ್ಥಾನದಿಂದ ಪೂಜೆ ಮುಗಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಮನೆಗೆ ಬರುತ್ತಿದ್ದ ನಗರಸಭೆ ವ್ಯಾಪ್ತಿಯ ಹನುಮಂತಪ್ಪ ಕಾಲೋನಿಯ ಅರ್ಚಕರೊಬ್ಬರು ಅಪಘಾತದಲ್ಲಿ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ.   
ಬಿ.ಕೆ ಲಕ್ಷ್ಮೀಕಾಂತ(೫೦) ಮೃತಪಟ್ಟ ಅರ್ಚಕರಾಗಿದ್ದು, ಇವರು ಪ್ರತಿ ದಿನ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪದ ಶ್ರೀ ಕೃಷ್ಣ ದೇವಸ್ಥಾನ ಹಾಗು ಹುಣಸೇಕಟ್ಟೆ ಜಂಕ್ಷನ್, ರಂಗನಾಥಪುರ ಬಿ.ಬಿ ಮೈನ್ಸ್ ಹತ್ತಿರದ ಶ್ರೀ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಅರ್ಚಕ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು. ಇವರು ಜು.೧೯ರಂದು ಮಧ್ಯಾಹ್ನ ೨.೩೦ರ ಸಮಯದಲ್ಲಿ ಪೂಜೆ ಮುಗಿಸಿಕೊಂಡು ತಮ್ಮ ದ್ವಿಚಕ್ರ ವಾಹನದಲ್ಲಿ ಮನೆಗೆ ಬರುತ್ತಿದ್ದಾಗ ರಾಮಿನಕೊಪ್ಪ ಕ್ರಾಸ್ ಮತ್ತು ರಂಗನಾಥಪುರ ಮಧ್ಯೆ ಶಿವಮೊಗ್ಗ ಮಾರ್ಗದಿಂದ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದ್ದು, ಲಕ್ಷ್ಮೀಕಾಂತ್‌ರವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಸಂಬಂಧ ಲಕ್ಷ್ಮೀಕಾಂತ್‌ರವರ ಸಹೋದರ ರಂಗನಾಥ್‌ರವರು ಕಾರು ಚಾಲಕನ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

ಭಾನುವಾರ, ಜುಲೈ 20, 2025

ವಿಶೇಷ ಚೇತನ ಮಕ್ಕಳ ಸೇವೆ ಪುಣ್ಯದ ಕೆಲಸ : ಎ.ಕೆ ನಾಗೇಂದ್ರಪ್ಪ

ಭದ್ರಾವತಿ ಮಾಚೇನಹಳ್ಳಿ ಡೈರಿ ಸಮೀಪದ ಮದರ್ ತೆರೇಸಾ ವಸತಿ ಶಾಲೆಯ ೧ ರಿಂದ ೧೦ನೇ ತರಗತಿ ಶ್ರವಣ ನ್ಯೂನ್ಯತೆಯುಳ್ಳ ವಿಶೇಷ ಚೇತನ ಮಕ್ಕಳಿಗೆ ಹಾಸಿಗೆ ಹೊದಿಕೆ(ಬೆಡ್ ಶೀಟ್), ಛತ್ರಿ ಹಾಗು ಬ್ಯಾಗ್ ವಿತರಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. 
    ಭದ್ರಾವತಿ: ವಿಶೇಷ ಚೇತನ ಮಕ್ಕಳ ಸೇವೆ ಮಾಡುವುದು ಪುಣ್ಯದ ಕೆಲಸವಾಗಿದ್ದು, ಇಂತಹ ಮಕ್ಕಳ ಬೆಳವಣಿಗೆಗೆ ಸಮಾಜದ ಪ್ರತಿಯೊಬ್ಬರು ಕೈಜೋಡಿಸಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಹೇಳಿದರು. 
    ಅವರು ಮಾಚೇನಹಳ್ಳಿ ಡೈರಿ ಸಮೀಪದ ಮದರ್ ತೆರೇಸಾ ವಸತಿ ಶಾಲೆಯ ೧ ರಿಂದ ೧೦ನೇ ತರಗತಿ ಶ್ರವಣ ನ್ಯೂನ್ಯತೆಯುಳ್ಳ ವಿಶೇಷ ಚೇತನ ಮಕ್ಕಳಿಗೆ ಹಾಸಿಗೆ ಹೊದಿಕೆ(ಬೆಡ್ ಶೀಟ್), ಛತ್ರಿ ಹಾಗು ಬ್ಯಾಗ್ ವಿತರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. 
    ವಿಶೇಷ ಚೇತನ ಮಕ್ಕಳ ಶ್ರೇಯೋಭಿವೃದ್ಧಿಗೆ ಪ್ರತಿಯೊಬ್ಬರು ಕೈಜೋಡಿಸುವ ಮೂಲಕ ಅವರು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವಂತೆ ಮಾಡಬೇಕೆಂದರು. 
    ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಜೋಸ್ ಮ್ಯಾಥೋ ಮಾತನಾಡಿ, ವಿಶೇಷ ಚೇತನ ಮಕ್ಕಳನ್ನು ಗುರುತಿಸಿ ಅವರ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾಗುವಂತೆ ನೆರವಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
      ಬೆಂಗಳೂರಿನ ದಾನಿಗಳಾದ ಪಲ್ಲವಿ-ಸಾಗರ್ ದಂಪತಿ ಮತ್ತು ಅಮೂಲ್ಯ ಮಕ್ಕಳಿಗೆ ಹಾಸಿಗೆ ಹೊದಿಕೆ (ಬೆಡ್ ಶೀಟ್), ಛತ್ರಿ ಮತ್ತು ಬ್ಯಾಗ್ ವಿತರಿಸಿದರು. ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿ ವಿ.ಎಚ್ ಪಂಚಾಕ್ಷರಿ, ಶಾಲೆಯ ಅಧ್ಯಕ್ಷರಾದ ಫಾದರ್ ಎನ್.ಎಸ್ ಜೋಸೆಫ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನೀತ ಸ್ವಾಗತಿಸಿ ನಿಶಾ ವಂದಿಸಿದರು. ಮಕ್ಕಳ ಪಟ್ಟಿಯನ್ನು ರೂಪ ವಾಚಿಸಿದರು. 

ರಸಪ್ರಶ್ನೆ ಸ್ಪರ್ಧೆ : ೧೬ ಮಹಿಳಾ ತಂಡಗಳು ಭಾಗಿ

ಭದ್ರಾವತಿ ಸಿದ್ದಾರೂಢ ನಗರದ ಶಾಶ್ವತಿ ಮಹಿಳಾ ಸಮಾಜದವತಿಯಿಂದ ಧರ್ಮಶ್ರೀ ಸಭಾಭವನದಲ್ಲಿ ಸ್ನೇಹ ಮಿಲನ ಹೆಸರಿನಲ್ಲಿ ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮ ನಗರದ ವಿವಿಧ ಮಹಿಳಾ ಸಮಾಜದ ಸದಸ್ಯರುಗಳಿಗೆ ಆಯೋಜಿಸಲಾಗಿತ್ತು. 
    ಭದ್ರಾವತಿ : ಸಿದ್ದಾರೂಢ ನಗರದ ಶಾಶ್ವತಿ ಮಹಿಳಾ ಸಮಾಜದವತಿಯಿಂದ ಧರ್ಮಶ್ರೀ ಸಭಾಭವನದಲ್ಲಿ ಸ್ನೇಹ ಮಿಲನ ಹೆಸರಿನಲ್ಲಿ ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮ ನಗರದ ವಿವಿಧ ಮಹಿಳಾ ಸಮಾಜದ ಸದಸ್ಯರುಗಳಿಗೆ ಆಯೋಜಿಸಲಾಗಿತ್ತು. 
    ಸ್ಪರ್ಧೆಯಲ್ಲಿ ಒಟ್ಟು ೮ ಸುತ್ತುಗಳಿದ್ದು, ಅದರಲ್ಲಿ ಥಟ್ ಅಂತ ಹೇಳಿ, ಭಾವಯಾನ ಭಾವಗೀತೆಗಳು, ಮಹಾಭಾರತ, ರಾಮಾಯಣ, ಚಲನಚಿತ್ರ ಗೀತೆಗಳ ಪಲ್ಲವಿ, ನಾವು ನಮ್ಮೂರು ಭದ್ರಾವತಿ ಇತಿಹಾಸ, ವಿಶೇಷತೆಗಳ ಬಗ್ಗೆ ಪ್ರಶ್ನೆಗಳು ಒಳಗೊಂಡಿದ್ದವು.  
    ನಾಗರತ್ನ ಮಲ್ಲಿಕಾರ್ಜುನ್, ಯಶೋಧ ಡಾ.ವೀರಭದ್ರಪ್ಪ, ರೂಪಾರಾವ್, ಶಾರದಾ ಶ್ರೀನಿವಾಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ಒಟ್ಟು ೧೬ ತಂಡಗಳು ಭಾಗವಹಿಸಿದ್ದವು.  ಕದಳಿ ವೇದಿಕೆ ಪ್ರಥಮ, ಲಾಟರಿ ಮೂಲಕ ವೀರಶೈವ ಲಿಂಗಾಯಿತ ಮಹಿಳಾ ಸಮಾಜ ದ್ವೀತಿಯ, ಭದ್ರಾ ಸುಗಮ ಸಂಗೀತ ವೇದಿಕೆ ತೃತೀಯ ಬಹುಮಾನ ಪಡೆದರು,
    ಸಮಾಧಾನಕರ ಬಹುಮಾನಕ್ಕೆ ೪ ತಂಡಗಳು ಆಯ್ಕೆಯಾಗಿದ್ದು, ಲಾಟರಿ ಮೂಲಕ ರೋಟರಿ ಆನ್ಸ್ ತಂಡ ಆಯ್ಕೆಯಾಯಿತು.  ಕುಸುಮಾ ತೀರ್ಥಯ್ಯ ಪ್ರಾರ್ಥಿಸಿ, ನಾಗರತ್ನ ಮಲ್ಲಿಕಾರ್ಜುನ್ ಸ್ವಾಗತಿಸಿದರು. ಮಮತ ಗೀರೀಶ್ ಕಾರ್ಯಕ್ರಮ ನಿರೂಪಿಸಿ, ಲಕ್ಷ್ಮೀ ಶ್ರೀಧರ್ ವಂದಿಸಿದರು. 

ಪೇಪರ್‌ಟೌನ್ ಆಂಗ್ಲ ಶಾಲೆಯಲ್ಲಿ ಅಂತರಾಷ್ಟ್ರೀಯಾ ಚೆಸ್ ದಿನ

ಭದ್ರಾವತಿ ನಗರದ ಲಯನ್ಸ್ ಕ್ಲಬ್ ಶುಗರ್‌ಟೌನ್ ವತಿಯಿಂದ ಪೇಪರ್‌ಟೌನ್ ಆಂಗ್ಲ ಶಾಲೆಯಲ್ಲಿ ಭಾನುವಾರ ಅಂತರಾಷ್ಟ್ರೀಯ ಚೆಸ್ ದಿನ ಆಚರಿಸಲಾಯಿತು. 
    ಭದ್ರಾವತಿ: ನಗರದ ಲಯನ್ಸ್ ಕ್ಲಬ್ ಶುಗರ್‌ಟೌನ್ ವತಿಯಿಂದ ಪೇಪರ್‌ಟೌನ್ ಆಂಗ್ಲ ಶಾಲೆಯಲ್ಲಿ ಭಾನುವಾರ ಅಂತರಾಷ್ಟ್ರೀಯ ಚೆಸ್ ದಿನ ಆಚರಿಸಲಾಯಿತು. 
    ಲಯನ್ ತಮ್ಮೆಗೌಡ ಚೆಸ್ ಆಟವಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.  ಶಾಲೆಯ ಮುಖ್ಯ ಶಿಕ್ಷಕ ನಾಗರಾಜ್ ಮಾತನಾಡಿ, ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಚೆಸ್ ಕಲಿಕೆಯು ಪೂರಕವಾಗುತ್ತದೆ. ಮಕ್ಕಳಲ್ಲಿ ಏಕಾಗ್ರತೆ, ತಾಳ್ಮೆ, ಚುರುಕುತನ, ನೆನಪಿನ ಶಕ್ತಿ ವೃದ್ಧಿಯಾಗುದಲ್ಲದೆ ಓದಿನ ಕಡೆ ಹೆಚ್ಚು ಆಸಕ್ತಿಯನ್ನು ಹೊಂದಲು ಅನುಕೂಲವಾಗುತ್ತದೆ ಎಂದರು. 
ನಗರಸಭೆ ಸದಸ್ಯ ಚನ್ನಪ್ಪ, ಲಯನ್ಸ್ ಕ್ಲಬ್ ಶುಗರ್‌ಟೌನ್ ಪ್ರಮುಖರಾದ ಉಮೇಶ್, ಮಧು ಹಾಗು ರವಿಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಪರಿಣಿತ ಮತ್ತು ಪಾವನ ಪ್ರಾರ್ಥಿಸಿದರು. ಮಕ್ಕಳಿಗೆ ನೋಟ್ ಬುಕ್, ಪೆನ್ನು ಹಾಗು ಸಿಹಿಹಂಚಿಕೆ ಮಾಡಿ ಅಂತರಾಷ್ಟ್ರೀಯ ಚೆಸ್ ದಿನಾಚಾರಣೆ ಶುಭಾಶಯ ತಿಳಿಸಲಾಯಿತು. 

ಕನ್ನಡ ಸಾಹಿತ್ಯ ಲೋಕಕ್ಕೆ ಡಾ.ಎಚ್.ಎಸ್.ವಿ ಕೊಡುಗೆ ಅನನ್ಯ : ಡಿ.ಮಂಜುನಾಥ್



ಭದ್ರಾವತಿ ಹಳೇನಗರದ ಶ್ರೀ ವೀರಭದ್ರೇಶ್ವರಸ್ವಾಮಿ ಸಮುದಾಯ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ವತಿಯಿಂದ ಡಾ. ಎಚ್.ಎಸ್ ವೆಂಕಟೇಶ್‌ಮೂರ್ತಿರವರ ಸ್ಮರಣಾರ್ಥ ಏರ್ಪಡಿಸಲಾಗಿದ್ದ "ಭಾವ ಗೀತೆಗಳ ಗೀತ ಗಾಯನ" ಕಾರ್ಯಕ್ರಮ ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಉದ್ಘಾಟಿಸಿದರು. 
    ಭದ್ರಾವತಿ: ಹಿರಿಯ ಸಾಹಿತಿ, ಲೇಖಕ, ಕಾದಂಬರಿಗಾರ ದಿವಂಗತ ಡಾ. ಎಚ್.ಎಸ್ ವೆಂಕಟೇಶ್‌ಮೂರ್ತಿಯವರು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿರುವ ಕೊಡುಗೆ ಅನನ್ಯವಾಗಿದ್ದು, ಕನ್ನಡ ಆಸ್ಮಿತೆಯನ್ನು ಜಗತ್ತಿಗೆ ತೋರಿಸಿಕೊಟ್ಟ ಒಬ್ಬ ಧೀಮಂತ ವ್ಯಕ್ತಿ ಎಂದು ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಬಣ್ಣಿಸಿದರು. 
    ಅವರು ಹಳೇನಗರದ ಶ್ರೀ ವೀರಭದ್ರೇಶ್ವರಸ್ವಾಮಿ ಸಮುದಾಯ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ವತಿಯಿಂದ ಡಾ. ಎಚ್.ಎಸ್ ವೆಂಕಟೇಶ್‌ಮೂರ್ತಿರವರ ಸ್ಮರಣಾರ್ಥ ಏರ್ಪಡಿಸಲಾಗಿದ್ದ "ಭಾವ ಗೀತೆಗಳ ಗೀತ ಗಾಯನ" ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 
    ಕನ್ನಡ ಕೆಲಸ ಮಾಡಲು ಪ್ರೇರೇಪಿಸಿದ, ಆತ್ಮೀಯರೊಂದಿಗೆ ಭಾವನಾತ್ಮಕವಾಗಿ ಬೆರೆಯುವ ವ್ಯಕ್ತಿ ಎಂಬುದು ವಿಶೇಷ. ಸ್ವಾತಂತ್ರ್ಯ ಚಳುವಳಿಯ ಸಮಯದಲ್ಲಿನ ಭಾವನೆಗಳನ್ನು ತಮ್ಮ ಕವಿತೆಗಳಲ್ಲಿ ಛಾಪು ಮೂಡಿಸಿ ಜಾತೀಯತೆ ಶೋಷಣೆಯ ವಿರುದ್ದ ಹೋರಾಟ ಮಾಡಿದ್ದ ಕವಿ ಎಂದರು.
    ನಾವೆಲ್ಲಾ ಭಾರತೀಯರು ಎಂದು ಹೇಳುವ ಸಮಯದಲ್ಲಿ ಜಾತಿ, ಮತ, ಭಾಷೆ, ಮೇಲು, ಕೀಳು, ಸ್ಪೃಶ್ಯ, ಆಸ್ಪೃಶ್ಯ, ಅಸೂಯೆ, ಈರ್ಷೆಗಳನ್ನು ಹೊಂದಿರುವ ಆಶಾಂತಿಯ ವಾತಾವರಣದಲ್ಲಿ ಜೀವಸುತ್ತಿದ್ದೇವೆ. ಇಂತಹ ಸಂದರ್ಭಧಲ್ಲಿ ಸರ್ವಜನಾಂಗದ ಶಾಂತಿಯ ತೋಟ ಹೇಗೆ ನಿರ್ಮಾಣ ಆಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. 
    ಶಾಲಾ ಕಾಲೇಜುಗಳಲ್ಲಿ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಬೇಕು. ಆ ಮೂಲಕ ಕನ್ನಡ ಭಾಷೆಯ ಬೆಳವಣಿಗೆಯ ಆಸಕ್ತಿ ಮೂಡುವಂತಾಗುತ್ತದೆ. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಕನ್ನಡ ಭಾಷೆಯ ಕಮ್ಮಟಗಳನ್ನು, ಕಾರ್ಯಗಾರವನ್ನು ಹಮ್ಮಿಕೊಳ್ಳುವ ಯೋಜನೆ ಇದೆ. ಆ ಮೂಲಕ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳ ವಾತಾವರಣವನ್ನು ನಿರ್ಮಾಣ ಮಾಡಲಾಗುವುದು. ಇಂದಿನ ಯುವ ಜನಾಂಗ ಸಂವಿಧಾನ, ಅಂಬೇಡ್ಕರ್, ಸ್ವಾತಂತ್ರ್ಯ ಚಳುವಳಿಗಳ ಮಹತ್ವವನ್ನು ಅರಿಯಲಿ ಎಂಬ ಉದ್ದೇಶದಿಂದ ಶಾಲಾ-ಕಾಲೇಜುಗಳಲ್ಲಿ ರಸ ಪ್ರಶ್ನೆ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಜಾಗೃತಿಯನ್ನು ಉಂಟು ಮಾಡಬೇಕು ಎಂದು ಕಾರ್ಯಕ್ರಮಗಳನ್ನು ಆಯೋಜಿಸಿದರೆ ಅದರ ವಿರುದ್ದ ಕಾರ್ಯಕ್ರಮ ನಡೆಯದಂತೆ ಸರ್ಕಾರ ಆದೇಶವನ್ನು ಹೊರಡಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಈ ರೀತಿ ಆದೇಶವನ್ನು ಹೊರಡಿಸಲು ಯಾವ ಅಧಿಕಾರಿ ಕಾರಣ ಎಂಬುದು ಬಹಿರಂಗ ಆಗಬೇಕು. ಈ ಸಂಬಂಧ ಶಿಕ್ಷಣ ಸಚಿವರಿಗೆ ಪತ್ರ ಬರೆಯಲಾಗಿದೆ ಎಂದರು.
    ಪರಿಷತ್ ತಾಲೂಕು ಅಧ್ಯಕ್ಷ ಎಚ್. ತಿಮ್ಮಪ್ಪ ಅಧ್ಯಕ್ಷತೆ ವಹಿಸಿದ್ದರು. ಜನ್ನಾಪುರ ಸಂಗೀತ ಶಿಕ್ಷಕಿ ಗಾಯಿತ್ರಿ, ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಎಂ.ಆರ್ ರೇವಣಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು. 
    ನಿವೃತ್ತ ಪ್ರಾಂಶುಪಾಲ ಡಾ. ಕೆ. ನಿತ್ಯಾನಂದ ಉಪನ್ಯಾಸ ನೀಡಿದರು. ಸುಮತಿ ಕಾರಂತ್, ಕಮಲಾ ಕುಮಾರಿ, ಆರ್.ಜಿ ಭಾರ್ಗವಿ, ಎನ್.ಎಂ ಸುನಂದ, ಎಚ್.ಸಿ ಸುನಂದ, ನಗರಸಭಾ ಸದಸ್ಯೆ ಅನುಪಮ ಚನ್ನೇಶ್, ವಾಣಿಶ್ರೀ ನಾಗರಾಜ್, ಶ್ಯಾಮಲ, ಸುಚಿತ್ರ, ದಿವಾಕರ್, ಡಿ.ಆರ್.ಹರೀಶ್ ಮತ್ತು ರುದ್ರೇಶ್ ಗಾಯನ ಪ್ರಸ್ತುತ ಪಡಿಸಿದರು.
    ಸುಮತಿ ತಂಡದವರು ನಾಡ ಗೀತೆ ಹಾಡಿದರು. ಕಮಲಾಕರ್ ಸ್ವಾಗತಿಸಿ, ಬಿ.ಎಲ್ ಮೋಹನ್ ಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನ್ಯಾಯವಾದಿ ಬಿ.ಎಚ್ ಪ್ರಶಾಂತ್ ವಂದಿಸಿ,ನಾಗೋಜಿರಾವ್ ಕಾರ್ಯಕ್ರಮ ನಿರೂಪಿಸಿದರು.

ಶನಿವಾರ, ಜುಲೈ 19, 2025

ಜು.೨೩ರಂದು ನಗರಕ್ಕೆ ನಿಖಿಲ್ ಕುಮಾರಸ್ವಾಮಿ

    ಭದ್ರಾವತಿ: ಕರ್ನಾಟಕ ಪ್ರದೇಶ ಜನತಾದಳ(ಜಾತ್ಯಾತೀತ) ವತಿಯಿಂದ ರಾಜ್ಯಾದ್ಯಂತ ಹಮ್ಮಿಕೊಂಡಿರುವ `ಜನರೊಂದಿಗೆ ಜನತಾದಳ' ಕಾರ್ಯಕ್ರಮದ ಅಂಗವಾಗಿ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಜು.೨೩ರಂದು ನಗರಕ್ಕೆ ಆಗಮಿಸಲಿದ್ದಾರೆ. 
    ಶಿವಮೊಗ್ಗ ಜಿಲ್ಲಾ ಪ್ರವಾಸ ಕೈಗೊಂಡಿರುವ ನಿಖಿಲ್ ಕುಮಾರಸ್ವಾಮಿಯವರು ಸಂಜೆ ೬ ಗಂಟೆಗೆ ನಗರದ ಬಿ.ಎಚ್ ರಸ್ತೆ, ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿರುವ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. 
    ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದ ಅಪ್ಪಾಜಿ ಕೋರಿದ್ದಾರೆ. 

ಜು.೨೦ ಡಾ.ಎಚ್.ಎಸ್.ವಿ ಸಂಸ್ಮರಣೆ

    ಭದ್ರಾವತಿ: ನಗರದ ಕನ್ನಡ ನಾಡು ನಡೆ-ನುಡಿ ಬಿಂಬಿಸುವ ವೇದಿಕೆ ಭೂಮಿಕಾ ವತಿಯಿಂದ ಜು.೨೦ರ ಭಾನುವಾರ ಭಾವ-ಗಾನ-ಗೌರವ ಡಾ. ಎಚ್.ಎಸ್.ವಿ ಸಂಸ್ಮರಣೆ ಕಾರ್ಯಕ್ರಮದ ಅಂಗವಾಗಿ ಆಯ್ದ ಗೀತೆಗಳ ಗಾಯನ ಆಯೋಜಿಸಲಾಗಿದೆ. 
    ಹಳೇನಗರ ಶ್ರೀ ರಾಮೇಶ್ವರ ದೇವಸ್ಥಾನ ಹಿಂಭಾಗದ ಶ್ರೀ ಗಾಯಿತ್ರಿ ಧರ್ಮ ಶಾಲಾ ಭವನದಲ್ಲಿ ಆಯೋಜಿಸಲಾಗಿದೆ. ಭೂಮಿಕಾ ವೇದಿಕೆ ಅಧ್ಯಕ್ಷ, ವೈದ್ಯ ಡಾ. ಕೃಷ್ಣ ಎಸ್. ಭಟ್ ಅಧ್ಯಕ್ಷತೆ ವಹಿಸಲಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ.