ಶನಿವಾರ, ಆಗಸ್ಟ್ 2, 2025

ನಗರಸಭೆ ನೂತನ ಪೌರಾಯುಕ್ತರಾಗಿ ಕೆ.ಎನ್ ಹೇಮಂತ್ ಅಧಿಕಾರ ಸ್ವೀಕಾರ

ಭದ್ರಾವತಿ ನಗರಸಭೆ ನೂತನ ಪೌರಾಯುಕ್ತ ಕೆ.ಎನ್ ಹೇಮಂತ್ 
    ಭದ್ರಾವತಿ : ನಗರಸಭೆ ನೂತನ ಪೌರಾಯುಕ್ತರಾಗಿ ಕೆಎಂಎಸ್ ಗ್ರೇಡ್-೨ ಅಧಿಕಾರಿ, ಶಿರಾಳಕೊಪ್ಪ ಪುರಸಭೆ ಮುಖ್ಯಾಧಿಕಾರಿ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆ.ಎನ್ ಹೇಮಂತ್ ಶನಿವಾರ ಅಧಿಕಾರ ಸ್ವೀಕರಿಸಿದರು. 
    ಹೇಮಂತ್‌ರವರನ್ನು ಸರ್ಕಾರ ಪೌರಾಯುಕ್ತರ ಹುದ್ದೆಗೆ ಮುಂಬಡ್ತಿ ನೀಡಿ ವರ್ಗಾವಣೆಗೊಳಿಸಿದೆ. ಈ ಮೊದಲು ಇವರನ್ನು ಬಳ್ಳಾರಿ ಮಹಾನಗರಪಾಲಿಕೆ ಸಾರ್ವಜನಿಕ ಸಂಪರ್ಕಾಧಿಕಾರಿ ಹುದ್ದೆಗೆ ನಿಯೋಜನೆಗೊಳಿಸುವ ಉದ್ದೇಶ ಸರ್ಕಾರ ಕೈಗೊಂಡಿತ್ತು. ಪುನಃ ಅದನ್ನು ಮಾರ್ಪಡಿಸಿ ಇಲ್ಲಿನ ನಗರಸಭೆಗೆ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ ಎಂದು ತಿಳಿದು ಬಂದಿದೆ. 
    ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ನೂತನ ಪೌರಾಯುಕ್ತ ಹೇಮಂತ್‌ರವರಿಗೆ ಅಧಿಕಾರ ಹಸ್ತಾಂತರಿಸಿದರು. ನಗರಸಭೆ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. 

ಹಸು ಕಳ್ಳತನ : ಪೊಲೀಸರಿಗೆ ದೂರು



    ಭದ್ರಾವತಿ : ತಪ್ಪಿಸಿಕೊಂಡಿದ್ದ ಹಸು ಕಳ್ಳತನ ಮಾಡಲಾಗಿದ್ದು, ಕಳುವು ಮಾಡಿರುವವರನ್ನು ತಕ್ಷಣ ಪತ್ತೆಮಾಡಿ ಹಸು ಮರಳಿಸುವಂತೆ ಹಳೇನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
    ನಗರದ ಬಿ.ಎಚ್ ರಸ್ತೆ ನಿವಾಸಿ, ಸುಮಾರು ೬೨ ವರ್ಷ ವಯಸ್ಸಿನ ಸುಬ್ರಮಣಿ ಎಂಬುವರು ಜು. ೨೯ರಂದು ತಮ್ಮ ೩ ಹಸುಗಳನ್ನು ಮೇಯಿಸಿಕೊಂಡು ವಾಪಸ್ ಮನೆಗೆ ಹೋಗುವಾಗ ಒಂದು ಹಸು ತಪ್ಪಿಸಿಕೊಂಡಿದೆ. ಎಲ್ಲಾ ಕಡೆ ಹುಡುಕಿದರೂ ಹಸು ಸಿಕ್ಕಿರುವುದಿಲ್ಲ. ಜು.೩೦ರಂದು ಚಾಮೇಗೌಡ ಏರಿಯಾದಲ್ಲಿ  ಯಾರೋ ಕಳ್ಳರು ಹಸು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ಸುಬ್ರಮಣಿಯವರಿಗೆ ಮಾಹಿತಿ ಬಂದಿದೆ. ಈ ಹಿನ್ನಲೆಯಲ್ಲಿ ಆ.೧ರಂದು ಪೊಲೀಸರಿಗೆ ದೂರು ನೀಡಿದ್ದು,  ಕಳ್ಳತನ ಮಾಡಲಾಗಿರುವ ಸುಮಾರು ೪೦ ಸಾವಿರ ರು. ಮೌಲ್ಯದ ಹಸು ಪತ್ತೆ ಮಾಡಿಕೊಡುವಂತೆ ಕೋರಲಾಗಿದೆ. 

sಅಂತರಗಂಗೆ ಭದ್ರಾ ಕಾಲುವೆಯಲ್ಲಿ ೩ ದಿನಗಳ ಹಿಂದೆ ಮುಳುಗಿದ್ದ ಕಾರು ಮೇಲೆತ್ತುವಲ್ಲಿ ಯಶಸ್ವಿ

ಅಪಘಾತ ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡು ಕಳೆದ ೩ ದಿನಗಳ ಹಿಂದೆ ಭದ್ರಾವತಿ ತಾಲೂಕಿನ ಅಂತರಗಂಗೆ ಗ್ರಾಮದ ಭದ್ರಾ ಕಾಲುವೆಗೆ ಬಿದ್ದಿದ್ದ ಕಾರನ್ನು ಈಜು ಮುಳುಗು ತಜ್ಞರು ಹಾಗು ಗ್ರಾಮಸ್ಥರು  ಕ್ರೇನ್ ನೆರವಿನೊಂದಿಗೆ ಮೇಲೆತ್ತಿರುವ ಘಟನೆ ಶನಿವಾರ ನಡೆದಿದೆ. 
    ಭದ್ರಾವತಿ : ಅಪಘಾತ ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡು ಕಳೆದ ೩ ದಿನಗಳ ಹಿಂದೆ ಭದ್ರಾ ಕಾಲುವೆಗೆ ಬಿದ್ದಿದ್ದ ಕಾರನ್ನು ಈಜು ಮುಳುಗು ತಜ್ಞರು ಹಾಗು ಗ್ರಾಮಸ್ಥರು  ಕ್ರೇನ್ ನೆರವಿನೊಂದಿಗೆ ಮೇಲೆತ್ತಿರುವ ಘಟನೆ ಶನಿವಾರ ನಡೆದಿದೆ. 
  ಕಳೆದ ಮೂರು ದಿನಗಳ ಹಿಂದೆ ಸಿದ್ದಾರೂಢನಗರದ ನಿವಾಸಿ ಶಶಾಂಕ್ ಜಾಧವ್ ಎಂಬುವರು ಅಂತರಗಂಗೆ ಗ್ರಾಮದ ಸಂಬಂಧಿಕರ ಮನೆಗೆ ಹೊಗಿ ರಾತ್ರಿ ವೇಳೆಯಲ್ಲಿ ಬರುವಾಗ ರಸ್ತೆಗೆ ಅಡ್ಡಲಾಗಿ ನಾಯಿಯೊಂದು ಬಂದ ಪರಿಣಾಮ ಕಾರು ನಿಯಂತ್ರಣ ಕಳೆದುಕೊಂಡು ಭದ್ರಾ ನದಿಯ ಗ್ರಾಮದ ದೊಡ್ಡ ಕಾಲುವೆಯಲ್ಲಿ ಬಿದ್ದಿದೆ. ಶಶಾಂಕ್ ಪಡಾಡಸದೃಶವಾಗಿ ಬದುಕಿ ಮೇಲೆ ಬಂದಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿರಲಿಲ್ಲ.  


    ನೀರಿನಲ್ಲಿ ಮುಳುಗಿದ ಕಾರು ಮೇಲೆತ್ತಲು ಮಲ್ಪೆಯಿಂದ ಮುಳುಗು ತಜ್ಞ ಮಲ್ಪೆ ಈಶ್ವರ್ ಮತ್ತು ತಂಡದವರು ಆಗಮಿಸಿ ಗ್ರಾಮಸ್ಥರು, ಪೊಲೀಸರು ಹಾಗು ಕ್ರೇನ್ ನೆರವಿನೊಂದಿಗೆ ಕಾರು ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದಾರೆ.  
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಬಗರ್ ಹುಕುಂ ಸಮಿತಿ ತಾಲೂಕು ಅಧ್ಯಕ್ಷ ಎಸ್. ಮಣಿಶೇಖರ್, ಗ್ರಾಮಾಂತರ ವೃತ್ತ ನಿರೀಕ್ಷಕ  ಜಗದೀಶ್ ಹಂಚಿನಾಳ ಮತ್ತು ಉಕ್ಕುಂದ ರತ್ನಾಪುರ ಗ್ರಾಮದ ಈಜು ತಜ್ಞ ವರದೇಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಶುಕ್ರವಾರ, ಆಗಸ್ಟ್ 1, 2025

ಕಂಬದಲ್ಲಿ ಅಳವಡಿಸಲಾಗಿದ್ದ ಸುಮಾರು ೯೦ ಸಾವಿರ ರು. ಮೌಲ್ಯದ ವಿದ್ಯುತ್ ತಂತಿ ಕಳವು





    ಭದ್ರಾವತಿ: ಜಲ ವಿದ್ಯುತ್ ಉತ್ಪಾದನಾ ಕೇಂದ್ರದಿಂದ ಕಂಬದಲ್ಲಿ ಅಳವಡಿಸಲಾಗಿದ್ದ ಸುಮಾರು ೪೫೦ ಮೀಟರ್ ಉದ್ದದ ವಿದ್ಯುತ್ ತಂತಿಯನ್ನು ಕಳವು ಮಾಡಿರುವ ಘಟನೆ ನಡೆದಿದೆ. 
    ನವದೆಹಲಿಯ ಕುಂದನ್ ಹೈಡೋಗ್ಯಾಂಗ್ ಟಾಕ್ ಪ್ರೈವೇಟ್ ಲಿಮಿಟೆಡ್ ಕಂಪನಿ ತಾಲೂಕಿನ ಚಿಕ್ಕಗೊಪ್ಪೇನಹಳ್ಳಿ ಗ್ರಾಮದಲ್ಲಿ ೩ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಸಲುವಾಗಿ ಜಲ ವಿದ್ಯುತ್ ಉತ್ಪಾದನಾ ಕೇಂದ್ರವನ್ನು ಸ್ಥಾಪಿಸಿದ್ದು, ಇಲ್ಲಿ ವಿದ್ಯುತ್ ಉತ್ಪಾದಿಸಿ ಜೆಪಿಎಸ್ ಕಾಲೋನಿಯಲ್ಲಿರುವ ಮೆಸ್ಕಾಂ ಉಪ ವಿತರಣಾ ಕೇಂದ್ರಕ್ಕೆ ವಿದ್ಯುತ್ ಪ್ರಸಾರ ಮಾಡುವ ಸಲುವಾಗಿ ೩೩ ಕಿಲೋ ವ್ಯಾಟ್ ೩ ವಿದ್ಯುತ್ ತಂತಿ(ಕಂಡೆಕ್ಟರ್)ಗಳನ್ನು ಉತ್ಪಾದನಾ ಕೇಂದ್ರ ಚಿಕ್ಕಗೊಪ್ಪೇನಹಳ್ಳಿಯಿಂದ  ಕಂಬದ ಮೂಲಕ ಎಳೆಯುವ ಕೆಲಸ ಪ್ರಗತಿಯಲ್ಲಿರುತ್ತದೆ. ಚಿಕ್ಕಗೊಪ್ಪೇನಹಳ್ಳಿಯಿಂದ ಗೊಂದಿ, ಅರಳಿಕೊಪ್ಪ, ತಾರಿಕಟ್ಟೆ, ಹಳೇ ಹಿರಿಯೂರು, ತಿಮ್ಲಾಪುರ, ಬುಳ್ಳಾಪುರದ ಕಾರ್ಮಿಕರ ಸಮುದಾಯ ಭವನದವರೆಗೆ ಪ್ರಸ್ತುತ ಕಾಮಗಾರಿ ಮುಗಿದಿದ್ದು, ಜು. ೨೨ರಂದು ಸಂಜೆ ಕಂಪನಿಯ ಕೆಲಸಗಾರ ಉಮೇಶ್ ರವರು ಪರಿಶೀಲನೆಯಲ್ಲಿದ್ದಾಗ ಬುಳ್ಳಾಪುರದ ಕಾರ್ಮಿಕರ ಸಮುದಾಯ ಭವನದ ಕಾಂಪೌಂಡ್ ಪಕ್ಕದಲ್ಲಿ ಹಾದುಹೋಗಿರುವ ಕಂಬಗಳಲ್ಲಿ ಒಟ್ಟು ೫ ಕಂಬಗಳಲ್ಲಿ ಅಳವಡಿಸಲಾಗಿದ್ದ ವಿದ್ಯುತ್ ತಂತಿ ಕಳುವಾಗಿರುವುದು ಕಂಡು ಬಂದಿದೆ. 
    ೧೫೦ ಮೀಟರ್ ಉದ್ದದ ೩ ಎಳೆಯ ವಿದ್ಯುತ್ ತಂತಿಗಳು ಒಟ್ಟು ೪೫೦ ಮೀಟರ್ ವಿದ್ಯುತ್ ತಂತಿ ಸುಮಾರು  ೯೦,೦೦೦ ರು. ಮೌಲ್ಯದ ತಂತಿ ಕಳವು ಮಾಡಲಾಗಿದೆ. ಈ ಸಂಬಂಧ ಕಂಪನಿಯ ಲೈಸೆನ್ ಅಧಿಕಾರಿ ಕುಂದನ್ ಪೇಪರ್‌ಟೌನ್ ಪೊಲೀಸ್ ಠಾಣೆಯಲ್ಲಿ ಜು.೩೦ರಂದು ಪ್ರಕರಣ ದಾಖಲಿಸಿದ್ದಾರೆ. 

ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯ ಸಿ.ಎಸ್ ನಾಗರಾಜು : ದಂಪತಿಗೆ ಹಳೇವಿದ್ಯಾರ್ಥಿಗಳು, ಸ್ಥಳೀಯರಿಂದ ಸನ್ಮಾನ

ಭದ್ರಾವತಿ ನಗರಸಭೆ ವ್ಯಾಪ್ತಿಯ ಭದ್ರಾ ಕಾಲೋನಿ ಭದ್ರಾ ಪ್ರೌಢ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಹಿನ್ನಲೆಯಲ್ಲಿ ಸಿ.ಎಸ್ ನಾಗರಾಜು ದಂಪತಿ ಸನ್ಮಾನಿಸಿ ಗೌರವಿಸಲಾಯಿತು. 
    ಭದ್ರಾವತಿ : ನಗರಸಭೆ ವ್ಯಾಪ್ತಿಯ ಭದ್ರಾ ಕಾಲೋನಿ ಭದ್ರಾ ಪ್ರೌಢ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಹಿನ್ನಲೆಯಲ್ಲಿ ಸಿ.ಎಸ್ ನಾಗರಾಜು ದಂಪತಿ ಸನ್ಮಾನಿಸಿ ಗೌರವಿಸಲಾಯಿತು. 
    ಮುಖ್ಯೋಪಾಧ್ಯಾಯರಾಗಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುವ ನಾಗರಾಜು ಅವರನ್ನು ಮೈಸೂರಿನ ಉದ್ಯಮಿ ಕಾಂತರಾಜ್, ವಿ. ರಮೇಶ್, ದೇವೇಂದ್ರಪ್ಪ ಸೇರಿದಂತೆ ಸುಮಾರು ೬೦ ರಿಂದ ೭೦ ಹಳೇಯ ವಿದ್ಯಾರ್ಥಿಗಳು ಹಾಗು ಸ್ಥಳೀಯರು ಶಾಲೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಿದರು. 
ಸನ್ಮಾನಿಸ ಸ್ವೀಕರಿಸಿದ ನಾಗರಾಜುರವರು ತಮ್ಮ ವೃತ್ತಿ ಜೀವನದ ಕೆಲವು ಘಟನೆಗಳನ್ನು ಸ್ಮರಿಸಿ ಕರ್ತವ್ಯದ ಅವಧಿಯಲ್ಲಿ ಸಹಕರಿಸಿದ ಶಿಕ್ಷಕ ವೃಂದ, ಸಿಬ್ಬಂದಿ ವರ್ಗ, ಶಾಲಾ ಆಡಳಿತ ಮಂಡಳಿ, ಸ್ಥಳೀಯ ನಿವಾಸಿಗಳು, ಜನಪ್ರತಿನಿಧಿ ಸೇರಿದಂತೆ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದರು. 

ಲೈಂಗಿಕ ದೌರ್ಜನ್ಯ ಪ್ರಕರಣ : ೨೦ ವರ್ಷ ಕಾರವಾಸ ಗೃಹ ಶಿಕ್ಷೆ


    ಭದ್ರಾವತಿ:  ೨೦೨೪ನೇ ಸಾಲಿನಲ್ಲಿ ದಾಖಲಾಗಿದ್ದ ತಾಲೂಕಿನ ೧೫ ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರಿಗೆ ೨೦ ವರ್ಷ ಕಾರವಾಸ ಗೃಹ ಶಿಕ್ಷೆ ವಿಧಿಸಿ ನ್ಯಾಯಾಧೀಶರಾದ ನಿಂಗನ ಗೌಡ ಪಾಟೀಲ್ ತೀರ್ಪು ನೀಡಿದ್ದಾರೆ.
    ಲೈಂಗಿಕ ದೌರ್ಜನ್ಯಕ್ಕೊಳಗಾದ ನೊಂದ ಬಾಲಕಿಯ ದೂರಿನ ಮೇರೆಗೆ ನಗರದ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಕಲಂ ೪೪೮ ೩೭೬(೨) (ಎನ್), ೩೭೬ (೨)(ಎಫ್) ಐಪಿಸಿ ಮತ್ತು ಕಲಂ ೫ (ಜೆ)(೨) ೫(ಎಲ್), ೬  ಪೋಕ್ಸೋ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಲಾಗಿತ್ತು.
    ಪ್ರಕರಣದ ತನಿಖಾಧಿಕಾರಿ ನಗರ ವೃತ್ತ ನಿರೀಕ್ಷಕ ಶ್ರೀಶೈಲ ಕುಮಾರ್ ಪ್ರಕರಣದ ತನಿಖೆ ಪೂರೈಸಿ ನ್ಯಾಯಾಲಯಕ್ಕೆ ಆರೋಪಿಯ ವಿರುದ್ಧ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.
    ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಎಚ್.ಆರ್ ಶ್ರೀಧರ್ ವಾದ ಮಂಡಿಸಿದ್ದರು.  ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್‌ಟಿಎಸ್‌ಸಿ-೧, ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆಸಿದ್ದು, ಆರೋಪಿಯ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ನಿಂಗನ ಗೌಡ ಪಾಟೀಲ್‌ರವರು ಪ್ರಕರಣದ ಆರೋಪಿತನಿಗೆ ೨೦ ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು ರು. ೧,೬೧,೦೦೦ ದಂಡ, ದಂಡ ಕಟ್ಟಲು ವಿಫಲನಾದಲ್ಲಿ ೨ ವರ್ಷ ಹೆಚ್ಚುವರಿ ಸಾದಾ ಕಾರಾವಾಸ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.  

ಶಾಂತಿಭಂಗ, ಕೊಲೆಯತ್ನ ಆರೋಪಿಗೆ ೧೦ ವರ್ಷ ಶಿಕ್ಷೆ

ತಾವರಾನಾಯ್ಕ 
    ಭದ್ರಾವತಿ : ಸುಮಾರು ೧೦ ವರ್ಷಗಳ ಹಿಂದಿನ ಕೊಲೆಯತ್ನ ಹಾಗು ಶಾಂತಿಭಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರಿಗೆ ನ್ಯಾಯಾಲಯ ೧೦ ವರ್ಷಗಳ ಶಿಕ್ಷೆ ವಿಧಿಸಿ ಶುಕ್ರವಾರ ತೀರ್ಪು ನೀಡಿದೆ.
    ತಾಲೂಕಿನ ಕೋಮಾರನಹಳ್ಳಿ ತಾಂಡ ನಿವಾಸಿ ತಾವರಾನಾಯ್ಕ(೫೮) ಶಿಕ್ಷೆಗೊಳಗಾಗಿದ್ದು, ಗ್ರಾಮಾಂತರ ಪೊಲೀಸ್ ಠಾಣೆ ಗುನ್ನೆ ನಂಬರ್ ೬೩/೨೧ ಕಲಂ ೫೦೪. ೩೦೭ ಐಪಿಸಿ ದಂಡ ಸಂಹಿತೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.  
    ಅಂದಿನ ತನಿಖಾಧಿಕಾರಿ ಸಹಾಯಕ ಪೊಲೀಸ್ ಠಾಣಾ ನಿರೀಕ್ಷಕ ಮಂಜೇಶ್ ಹಾಗು ಸಹಾಯಕ ತನಿಖಾಧಿಕಾರಿ ಟಿ.ಪಿ ಮಂಜಪ್ಪರವರು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ೪ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಇಂದಿರ ಮೈಲಸ್ವಾಮಿ ಚೆಟ್ಟಿಯಾರ್ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕಿ ಪಿ. ರತ್ನಮ್ಮ ವಾದ ಮಂಡಿಸಿದ್ದರು.