ಸೋಮವಾರ, ಆಗಸ್ಟ್ 18, 2025

ಪತ್ನಿ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದ ವ್ಯಕ್ತಿಯಿಂದ ಹಲ್ಲೆ ಪ್ರಕರಣ

ಆರೋಪಿಗೆ ೧೦ ವರ್ಷ ಕಾರಾಗೃಹ ಶಿಕ್ಷೆ, ೨೬ ಸಾವಿರ ರು. ದಂಡ 

ಕಿರಣ ಅಲಿಯಾಸ್ ಅಭಿ
    ಭದ್ರಾವತಿ : ಸುಮಾರು ೩ ವರ್ಷಗಳ ಹಿಂದೆ ಕಾಗದ ಕತ್ತರಿಸುವ ಸಣ್ಣ ಕತ್ತರಿಯಿಂದ ವ್ಯಕ್ತಿಯೋರ್ವನ ಮೇಲೆ ಹಲ್ಲೆ ನಡೆಸಿದ್ದ ಆರೋಪಿಗೆ ೪ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಇಂದಿರ ಮೈಲಸ್ವಾಮಿ ಚೆಟ್ಟಿಯಾರ್‌ರವರು ೧೦ ವರ್ಷ ಕಾರಾಗೃಹ ಶಿಕ್ಷೆ ಹಾಗು ೨೬ ಸಾವಿರ ರು. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. 
    ಶಿವಮೊಗ್ಗ ಯಲವಟ್ಟಿ ಗ್ರಾಮದ ನಿವಾಸಿ ಕಿರಣ ಅಲಿಯಾಸ್ ಅಭಿ ಶಿಕ್ಷೆಗೊಳಗಾದ ಆರೋಪಿಯಾಗಿದ್ದು, ಇದೆ ಗ್ರಾಮದ ಕುಮಾರನಾಯ್ಕ ಹಲ್ಲೆಗೊಳಗಾಗಿದ್ದ ವ್ಯಕ್ತಿ ಎಂದು ಗುರುತಿಸಲಾಗಿದೆ. ಈ ಸಂಬಂಧ ೨೦೨೨ರಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಕೈಗೊಂಡು ಕಿರಣನನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. 
    ಪ್ರಕರಣ ವಿವರ:
    ಕುಮಾರನಾಯ್ಕ ತಾಲೂಕಿನ ರಾಮನಕೊಪ್ಪ ಗ್ರಾಮದ ನಿವಾಸಿ ಚಂದ್ರನಾಯ್ಕರವರ ಪುತ್ರಿ ಕಾವ್ಯ ಅಲಿಯಾಸ್ ಗಿರಿಜಬಾಯಿ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. ಇಬ್ಬರು ಯಲವಟ್ಟಿ ಗ್ರಾಮದಲ್ಲಿ ವಾಸವಾಗಿದ್ದರು. ಇವರಿಗೆ ಇಬ್ಬರು ಗಂಡು ಮಕ್ಕಳು ಸಹ ಇದ್ದಾರೆ. ಕುಮಾರನಾಯ್ಕನ ಪತ್ನಿ ಕಾವ್ಯ ಕಿರಣನ ಜೊತೆ ಸಂಬಂಧ ಬೆಳೆಸಿ ಅವನ ಜೊತೆ ಓಡಿ ಹೋಗಿದ್ದು, ಈ ಸಂಬಂಧ ಪೇಪರ್‌ಟೌನ್ ಪೊಲೀಸ್ ಠಾಣೆಯಲ್ಲಿ ಮನುಷ್ಯ ಕಾಣೆ ಪ್ರಕರಣ ದಾಖಲಾಗಿತ್ತು. ನಂತರ ಇಬ್ಬರು ಪತ್ತೆಯಾಗುವ ಮೂಲಕ ಪ್ರಕರಣ ಮುಕ್ತಾಯಗೊಂಡಿತ್ತು. 
    ಈ ನಡುವೆ ಹಿರಿಯರು ಮಾತುಕತೆ ನಡೆಸಿ ಕುಮಾರನಾಯ್ಕ ಮತ್ತು ಕಾವ್ಯ ಇಬ್ಬರಿಗೂ ಬುದ್ದಿವಾದ ಹೇಳಿ ಒಟ್ಟಿಗೆ ಜೀವನ ನಡೆಸುವಂತೆ ತಿಳಿಸಿದ್ದರು. ಅದರಂತೆ ಕಾವ್ಯ ತನ್ನ ಮಕ್ಕಳು ಹಾಗು  ಪತಿ ಜೊತೆ ತವರು ಮನೆಗೆ ಬಂದು ವಾಸವಾಗಿದ್ದು, ಈ ನಡುವೆ ಮೇ.೧೫, ೨೦೨೨ರಂದು ಮಧ್ಯ ರಾತ್ರಿ ಕುಮಾರನಾಯ್ಕ ಮನೆಯಲ್ಲಿ ಮಲಗಿದ್ದಾಗ ಕಿರಣ ಹಲ್ಲೆ ನಡೆಸಿ ಪರಾರಿಯಾಗಿದ್ದನು. 
    ಪ್ರಕರಣ ದಾಖಲಿಸಿಕೊಂಡಿದ್ದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಹಾಯಕ ಉಪ ಠಾಣಾ ನಿರೀಕ್ಷಕ ಅರುಣ್‌ಕುಮಾರ್ ತನಿಖಾಧಿಕಾರಿಯಾಗಿ ಹಾಗು ಮುಖ್ಯ ಕಾನ್‌ಸ್ಟೇಬಲ್ ಮೋಹನ್ ಕುಮಾರ್ ಸಹಾಯಕ ತನಿಖಾಧಿಕಾರಿ ನಿಯೋಜನೆಗೊಂಡು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ರೋಷಾರೋಪಣ ಪಟ್ಟಿ ಸಲ್ಲಿಸಿದ್ದರು.  ಸರ್ಕಾರಿ ಅಭಿಯೋಜಕಿ ರತ್ನಮ್ಮ ವಾದ ಮಂಡಿಸಿದ್ದರು. 

ಬೆರಳಚ್ಚುಗಾರ ಮಂಜುನಾಥ್ ನಿಧನ

ಮಂಜುನಾಥ್ 
    ಭದ್ರಾವತಿ: ನಗರದ ರಂಗಪ್ಪ ವೃತ್ತ, ಜೆಎಂಎಫ್‌ಸಿ ನ್ಯಾಯಾಲಯ ಸಮೀಪದ ಬೆರಳಚ್ಚುಗಾರ(ಟೈಪಿಸ್ಟ್) ಮಂಜುನಾಥ್(೭೩) ಸೋಮವಾರ ಬೆಳಿಗ್ಗೆ ನಿಧನ ಹೊಂದಿದರು. 
    ಪತ್ನಿ, ಇಬ್ಬರು ಗಂಡು ಮಕ್ಕಳು ಹಾಗು ಸಹೋದರರು ಇದ್ದಾರೆ. ಹೊಸಮನೆ ಕುವೆಂಪು ನಗರದಲ್ಲಿ ವಾಸವಾಗಿದ್ದರು. ಇವರ ಅಂತ್ಯಕ್ರಿಯೆ ಮಂಗಳವಾರ ನಗರದ ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ. ಮಂಜುನಾಥ್‌ರವರು ಹಲವಾರು ವರ್ಷಗಳಿಂದ ಬೆರಳಚ್ಚುಗಾರ ವೃತ್ತಿಯಲ್ಲಿ ತೊಡಗಿಸಿಕೊಂಡು ಚಿರಪರಿಚಿತರಾಗಿದ್ದರು. ಇವರ ನಿಧನಕ್ಕೆ ನಗರದ ಬೆರಳಚ್ಚುಗಾರರು, ಗಣ್ಯರು ಸಂತಾಪ ಸೂಚಿಸಿದ್ದಾರೆ. 

ಭಾನುವಾರ, ಆಗಸ್ಟ್ 17, 2025

ಅರಕೆರೆ ವಿರಕ್ತಮಠದ ಶ್ರೀ ಕರಿಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯ

ಅರಕೆರೆ ವಿರಕ್ತಮಠದ ಶ್ರೀ ಕರಿಸಿದ್ದೇಶ್ವರ ಮಹಾಸ್ವಾಮಿಗಳು
    ಭದ್ರಾವತಿ: ತಾಲೂಕಿನ ಅರಕೆರೆ ಗ್ರಾಮದ ಶ್ರೀ ಚನ್ನವೀರ ಮಹಾಸ್ವಾಮಿಗಳ ವಿರಕ್ತ ಮಠದ ಗುರುಗಳಾದ ಶ್ರೀ ಕರಿಸಿದ್ದೇಶ್ವರ ಮಹಾಸ್ವಾಮಿಗಳು(೬೯) ಭಾನುವಾರ ಲಿಂಗೈಕ್ಯರಾಗಿದ್ದಾರೆ. 
    ಪತ್ನಿ, ಓರ್ವ ಪುತ್ರ ಇದ್ದಾರೆ. ಶ್ರೀಗಳ ಅಂತ್ಯಕ್ರಿಯೆ ಸೋಮವಾರ ವಿರಕ್ತ ಮಠದಲ್ಲಿ ನಡೆಯಲಿದೆ. ಶ್ರೀ ಕರಿಸಿದ್ದೇಶ್ವರ ಮಹಾಸ್ವಾಮಿಗಳು ಹಿಂದೂ ಧರ್ಮ ಹಾಗು ಸಂಸ್ಕಾರಗಳ ಕುರಿತು ಹೆಚ್ಚಿನ ಪಾಂಡಿತ್ಯ ಹೊಂದಿದ್ದರು. ಹಲವು ಸಭೆ ಸಮಾರಂಭಗಳಲ್ಲಿ ಭಾಗವಹಿಸಿ ಈ ಕುರಿತು ಜಾಗೃತಿ ಮೂಡಿಸಿದ್ದರು. ಮಹಾಮಾರಿ ಕೊರೋನಾ ಸಂದರ್ಭದಲ್ಲಿ ಸ್ವತಃ ತಾವೇ ಮಾಸ್ಕ್‌ಗಳನ್ನು ಸಿದ್ದಪಡಿಸಿ ಉಚಿತವಾಗಿ ವಿತರಿಸಿದ್ದರು. 
    ಶ್ರೀ ಚನ್ನವೀರ ಮಹಾಸ್ವಾಮಿಗಳ ವಿರಕ್ತ ಮಠದ ವಂಶಪಾರಂಪರೆ ಮಠವಾಗಿದ್ದು, ಇವರ ತಂದೆಯ ನಿಧನ ನಂತರ ಶ್ರೀ ಮಠದ ಪೀಠಾಧಿಪತಿಗಳಾಗಿ ಕಾರ್ಯನಿರ್ವಹಿಸುತ್ತಿದ್ದರು. 
    ಲಿಂಗೈಕ್ಯರಾಗಿರುವ ಶ್ರೀಗಳಿಗೆ ಸಂತಾಪ: 
    ಲಿಂಗೈಕೈರಾಗಿರುವ ಶ್ರೀ ಕರಿಸಿದ್ದೇಶ್ವರ ಮಹಾಸ್ವಾಮಿಗಳಿಗೆ ತಾಲೂಕಿನ ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಶಾಸಕ ಬಿ.ಕೆ ಸಂಗಮೇಶ್ವರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗ್ರಾಮದ ಮುಖಂಡ ಎಚ್.ಎಲ್ ಷಡಾಕ್ಷರಿ, ಅರಕರೆ ಗ್ರಾಮಸ್ಥರು ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ. 

ಸಂತೋಷ್ ಎನ್ ಶೆಟ್ಟಿ ಸಾಹಿತ್ಯದ ಮೊದಲ ೩ ಹಾಡುಗಳು ಬೆಂಗಳೂರಿನಲ್ಲಿ ಬಿಡುಗಡೆ

ಶಾಮಿಯಾನ ಕೆಲಸದಿಂದ ಸಾಹಿತ್ಯದ ಕಡೆ ಪಯಣ 

ಭದ್ರಾವತಿ ನಗರದ ಉಜ್ಜನಿಪುರ ಸಂತೋಷ್ ಶಾಮಿಯಾನ ಮಾಲೀಕ ಸಂತೋಷ್ ಎನ್ ಶೆಟ್ಟಿ ಕನ್ನಡ ಚಲನಚಿತ್ರ ರಂಗಕ್ಕೆ ಚಿತ್ರ ಸಾಹಿತಿಯಾಗಿ ಪ್ರವೇಶಿಸಿದ್ದಾರೆ. ಈ ನಿಟ್ಟಿನಲ್ಲಿ ಅವರ ಸಾಹಿತ್ಯದ ೩ ಹಾಡುಗಳು(ಆಲ್ಬಮ್ ಸಾಂಗ್)  ಬೆಂಗಳೂರಿನ ಮಾಗಡಿ ರೋಡ್, ಜಿಟಿ ಮಾಲ್‌ನಲ್ಲಿ ಶುಕ್ರವಾರ ಬಿಡುಗಡೆಗೊಂಡಿವೆ. ಈ ಸಂಬಂಧ ಜರುಗಿದ ಕಾರ್ಯಕ್ರಮವನ್ನು ಚಲನಚಿತ್ರ ಸಾಹಿತಿಗಳು, ಸಂಗೀತ ನಿರ್ದೇಶಕರು, ನಿರ್ಮಾಪಕರು ಹಾಗು ಕುಟುಂಬ ವರ್ಗದವರು ಉದ್ಘಾಟಿದರು. 
    ಭದ್ರಾವತಿ : ಶಾಮಿಯಾನ ಕೆಲಸದಿಂದ ಇದೀಗ ಸಾಹಿತ್ಯದ ಕಡೆಗೆ ಒಲವು ತೋರಿಸಿರುವ ನಗರದ ಉಜ್ಜನಿಪುರ ಸಂತೋಷ್ ಶಾಮಿಯಾನ ಮಾಲೀಕ ಸಂತೋಷ್ ಎನ್ ಶೆಟ್ಟಿ ಕನ್ನಡ ಚಲನಚಿತ್ರ ರಂಗಕ್ಕೆ ಚಿತ್ರ ಸಾಹಿತಿಯಾಗಿ ಪ್ರವೇಶಿಸಿದ್ದಾರೆ. ಈ ನಿಟ್ಟಿನಲ್ಲಿ ಅವರ ಸಾಹಿತ್ಯದ ೩ ಹಾಡುಗಳು(ಆಲ್ಬಮ್ ಸಾಂಗ್) ಶುಕ್ರವಾರ ಬಿಡುಗಡೆಗೊಂಡಿವೆ. 
    ಬೆಂಗಳೂರಿನ ಮಾಗಡಿ ರೋಡ್, ಜಿಟಿ ಮಾಲ್‌ನಲ್ಲಿ ಹಾಡುಗಳ ಬಿಡುಗಡೆ ಕಾರ್ಯಕ್ರಮ ನಡೆಯಿತು.  ಪ್ರಪ್ರಥಮ ಬಾರಿಗೆ ಬಿಡುಗಡೆಗೊಂಡಿತ್ತಿರುವ ಹಾಡುಗಳಿಗೆ ಎಲ್ಲರ ಮೆಚ್ಚುಗೆ ಕಂಡು ಬಂದಿತು.  
    ವಸಂತ ಮಾಧವ ಭದ್ರಾವತಿಯವರ ಸಂಗೀತ ಮತ್ತು ಗಾಯನದಲ್ಲಿ ಮೊದಲ ಹಾಡು `ತುತ್ತು ನೀಡುವ ಹೆತ್ತ ತಾಯಿಯು', ಬೆಂಗಳೂರಿನ ಎ.ಟಿ ರವೀಶ್ ಸಂಗೀತದಲ್ಲಿ ಎರಡನೇ ಹಾಡು `ಗಣೇಶ ಡಿಜೆ ಹಾಡು' ಮತ್ತು  ಮೂರನೇ ಹಾಡು `ಪೋಲ್ಸ್ ಪೆಂಡಾಲ್, ಪೈಪ್ ಪೆಂಡಾಲ್' ಸಂತೋಷ್ ಎನ್. ಶೆಟ್ಟಿ ಸಾಹಿತ್ಯ ಹಾಗು ನಿರ್ಮಾಣದಲ್ಲಿ ಬಿಡುಗಡೆಗೊಂಡಿರುವ ಹಾಡುಗಳಾಗಿವೆ. 
ಸಮಾರಂಭದಲ್ಲಿ ಚಿತ್ರರಂಗದ ಹೆಸರಾಂತ ಚಿತ್ರ ಸಾಹಿತಿಗಳು, ಸಂಗೀತ ನಿರ್ದೇಶಕರು, ನಿರ್ಮಾಪಕರು, ಕುಟುಂಬ ವರ್ಗದವರು, ಹಿತೈಷಿಗಳು ಪಾಲ್ಗೊಂಡು ಸಂಭ್ರಮ ಹಂಚಿಕೊಂಡರು.
    ಕಳೆದ ಸುಮಾರು ಒಂದೂವರೆ ವರ್ಷದಲ್ಲಿ ಸಂತೋಷ್ ಎನ್ ಶೆಟ್ಟಿ ಶಾಮಿಯಾನ ಕೆಲಸದೊಂದಿಗೆ ಸಾಹಿತ್ಯದ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದು, ಈಗಾಗಲೇ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಕುರಿತು ಭಕ್ತಿ ಗೀತೆಗಳ ಧ್ವನಿಸುರಳಿ ಸಹ ಬಿಡುಗಡೆಗೊಳಿಸಿದ್ದಾರೆ. ಶ್ರೀ ಕ್ಷೇತ್ರದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯರಾದ ಡಾ. ಡಿ. ವೀರೇಂದ್ರ ಹೆಗಡೆಯವರು ಧ್ವನಿಸುರಳಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 
    ಇದೀಗ ಕನ್ನಡ ಚಲನಚಿತ್ರ ರಂಗಕ್ಕೆ ಚಿತ್ರ ಸಾಹಿತಿಯಾಗಿ ಪ್ರವೇಶಿಸಿದ್ದು, ಉತ್ತಮ ಅವಕಾಶಗಳನ್ನು ಎದುರು ನೋಡುತ್ತಿದ್ದಾರೆ. ಈಗಾಗಲೇ ಕನ್ನಡ ಚಲನಚಿತ್ರ ರಂಗದ ಪ್ರಸಿದ್ದ ಸಾಹಿತಿಗಳನ್ನು ಸಂಪರ್ಕಿಸಿ ಮಾರ್ಗದರ್ಶನ ಪಡೆದುಕೊಂಡಿದ್ದು, ಎಲ್ಲಕ್ಕಿಂತ ಮುಖ್ಯವಾಗಿ ನಾಡಿನ ಕನ್ನಡಿಗರ  ಮೆಚ್ಚುಗೆ, ಅಭಿಮಾನ, ಪ್ರೋತ್ಸಾಹ ಎದುರು ನೋಡುತ್ತಿದ್ದಾರೆ. 

ಅಂಬೇಡ್ಕರ್‌ರವರ ವಿಚಾರಧಾರೆ ಎಲ್ಲರೂ ಪರಿಪೂರ್ಣವಾಗಿ ಅರ್ಥಮಾಡಿಕೊಂಡಾಗ ಮಾತ್ರ ಪರಿವರ್ತನೆ ಸಾಧ್ಯ : ಅಹಿಂಸಾ ಚೇತನ್

ಭದ್ರಾವತಿ ನಗರದ ಮಿಲ್ಟ್ರಿಕ್ಯಾಂಪ್ ಲೋಕೋಪಯೋಗಿ ಇಲಾಖೆ ಅತಿಥಿ ಗೃಹದಲ್ಲಿ ಏರ್ಪಡಿಸಲಾಗಿದ್ದ ಪ್ರಗತಿಪರ ಸಂಘಟನೆಗಳ ಮುಖಂಡರ ಸಭೆಯಲ್ಲಿ ಚಲನಚಿತ್ರ ನಟ ಅಹಿಂಸಾ ಚೇತನ್ ಪಾಲ್ಗೊಂಡು ಮಾತನಾಡಿದರು.
    ಭದ್ರಾವತಿ: ಈ ದೇಶದ ಜನರು ಅಂಬೇಡ್ಕರ್‌ರವರ ವಿಚಾರಧಾರೆಗಳನ್ನು ಪರಿಪೂರ್ಣವಾಗಿ ಅರ್ಥಮಾಡಿಕೊಳ್ಳುವವರೆಗೂ ದೇಶದಲ್ಲಿ ಪರಿವರ್ತನೆ ತರಲು ಸಾಧ್ಯವಿಲ್ಲ ಎಂದು ಚಲನಚಿತ್ರ ನಟ ಅಹಿಂಸಾ ಚೇತನ್ ಹೇಳಿದರು. 
    ಅವರು ನಗರದ ಮಿಲ್ಟ್ರಿಕ್ಯಾಂಪ್ ಲೋಕೋಪಯೋಗಿ ಇಲಾಖೆ ಅತಿಥಿ ಗೃಹದಲ್ಲಿ ಏರ್ಪಡಿಸಲಾಗಿದ್ದ ಪ್ರಗತಿಪರ ಸಂಘಟನೆಗಳ ಮುಖಂಡರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. 
    ಡಾ. ಬಿ.ಆರ್ ಅಂಬೇಡ್ಕರ್‌ರವರು ದೇಶದ ಸಂವಿಧಾನ ರಚಿಸುವಾಗ ಬಲ ಮತ್ತು ಎಡ ಪಂಥಿಯರು ಹಾಗು ಮನುವಾದಿಗಳು ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ನಡುವೆ ಕಾಂಗ್ರೆಸ್ ಪಕ್ಷ ಸಹ ಅಂಬೇಡ್ಕರ್‌ರವರಿಗೆ ಪೂರ್ಣಪ್ರಮಾಣದಲ್ಲಿ ಬೆಂಬಲ ನೀಡಲಿಲ್ಲ. ಈಗಿರುವಾಗ ನಾವು ಕಾಂಗ್ರೆಸ್ ಪಕ್ಷದ ಮೇಲೆ ನಂಬಿಕೆ ಹೊಂದುವುದು ಸರಿಯಲ್ಲ. ಅಂಬೇಡ್ಕರ್‌ರವರ ವಿಚಾರಧಾರೆಗಳನ್ನು ಈ ದೇಶದ ಪ್ರತಿಯೊಬ್ಬರು ಅರ್ಥಮಾಡಿಕೊಳ್ಳಬೇಕು. ಆಗ ಮಾತ್ರ ಏನಾದರೂ ಪರಿವರ್ತನೆ ತರಲು ಸಾಧ್ಯ ಎಂದರು. 
    ಸಭೆಯಲ್ಲಿ ಪ್ರಗತಿಪರ ಸಂಘಟನೆಗಳ ಮುಖಂಡರಾದ ಸುರೇಶ್, ಶಿವಬಸಪ್ಪ, ಸತ್ಯ ಭದ್ರಾವತಿ, ಚಿನ್ನಯ್ಯ, ಡಿ. ರಾಜು, ವಿ. ವಿನೋದ್, ಕೃಷ್ಣನಾಯ್ಕ, ಪುಟ್ಟರಾಜ್, ಆರ್. ಅರುಣ್, ಮಂಜುನಾಥ್, ಯು. ಮಹಾದೇವಪ್ಪ, ಶರವಣ, ಲೋಕೇಶ್, ಸುಕನ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಶನಿವಾರ, ಆಗಸ್ಟ್ 16, 2025

ದೇವಸ್ಥಾನ ಶಾಲೆಗಳಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ : ವಿವಿಧ ಧಾರ್ಮಿಕ ಆಚರಣೆ, ಶ್ರೀ ಕೃಷ್ಣ-ರಾಧೆ ವೇಷ ಪ್ರದರ್ಶನ

ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪದ ಶ್ರೀ ಕೃಷ್ಣ ದೇವಸ್ಥಾನದಲ್ಲಿ ತಾಲೂಕು ಗೊಲ್ಲ-ಯಾದವ ಸಂಘದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ವಿವಿಧ ಧಾರ್ಮಿಕ ಆಚರಣೆಗಳು ಜರುಗಿದವು.
    ಭದ್ರಾವತಿ : ನಗರದ ವಿವಿಧೆಡೆ ದೇವಸ್ಥಾನ ಹಾಗು ಶಾಲೆಗಳಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಶನಿವಾರ ವಿಜೃಂಭಣೆಯಿಂದ ಆಚರಿಸಲಾಯಿತು. ವಿವಿಧ ಕ್ರೀಡೆಗಳು ಹಾಗು ಶ್ರೀ ಕೃಷ್ಣ-ರಾಧೆ ವೇಷ ಪ್ರದರ್ಶನಗಳನ್ನು ಆಯೋಜಿಸಲಾಗಿತ್ತು. 
    ನಗರದ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪದ ಶ್ರೀ ಕೃಷ್ಣ ದೇವಸ್ಥಾನದಲ್ಲಿ ತಾಲೂಕು ಗೊಲ್ಲ-ಯಾದವ ಸಂಘದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ವಿವಿಧ ಧಾರ್ಮಿಕ ಆಚರಣೆಗಳು ಜರುಗಿದವು. ಕ್ರೀರಾಭಿಷೇಕ, ಗೋದಾನ ಮತ್ತು ಉಯ್ಯಾಲೆ ಸೇವೆ ಸೇರಿದಂತೆ ವಿಶೇಷ ಸೇವೆಗಳನ್ನು ನೆರವೇರಿಸಲಾಯಿತು. 
    ಶ್ರೀ ಕೃಷ್ಣನ ಮೂಲ ವಿಗ್ರಹಕ್ಕೆ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು. ಬೆಳಿಗ್ಗೆ ೮ ಗಂಟೆಯಿಂದ ರಾತ್ರಿ ೯ ಗಂಟೆವರೆಗೆ ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿತ್ತು. ಅಲ್ಲದೆ ಭಕ್ತರು ಲಾಡು ಪ್ರಸಾದ ವಿತರಿಸಲಾಯಿತು.   
    ಅನನ್ಯ ಶಿಕ್ಷಣ ಸಂಸ್ಥೆಯಲ್ಲಿ ಶ್ರೀ ಕೃಷ್ಣ-ರಾಧೆ ವೇಷ ಪ್ರದರ್ಶನ : 
    ನಗರದ ಅಪ್ಪರ್ ಹುತ್ತಾ, ಅನನ್ಯ ವಿದ್ಯಾಸಂಸ್ಥೆಯ ಅನನ್ಯ ಹ್ಯಾಪಿ ಹಾರ್ಟ್ಸ್‌ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ವಿಶಿಷ್ಟವಾಗಿ ಹಾಗು ಶ್ರೀ ಕೃಷ್ಣನ ಕುರಿತ ಭಾಷಣ, ಹಾಡು ಹಾಗು ನೃತ್ಯ ಮತ್ತು ವೇಷ ಪ್ರದರ್ಶನದ ಮೂಲಕ ಅರ್ಥಗರ್ಭಿತವಾಗಿ ಆಚರಿಸಲಾಯಿತು. 


ಭದ್ರಾವತಿ ನಗರದ ಅಪ್ಪರ್ ಹುತ್ತಾ, ಅನನ್ಯ ವಿದ್ಯಾಸಂಸ್ಥೆಯ ಅನನ್ಯ ಹ್ಯಾಪಿ ಹಾರ್ಟ್ಸ್‌ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ವಿಶಿಷ್ಟವಾಗಿ ಹಾಗು ಶ್ರೀ ಕೃಷ್ಣನ ಕುರಿತ ಭಾಷಣ, ಹಾಡು ಹಾಗು ನೃತ್ಯ ಮತ್ತು ವೇಷ ಪ್ರದರ್ಶನದ ಮೂಲಕ ಅರ್ಥಗರ್ಭಿತವಾಗಿ ಆಚರಿಸಲಾಯಿತು. 
    ಕಾರ್ಯಕ್ರಮದಲ್ಲಿ ಪ್ಲೇ ಹೋಮ್, ನರ್ಸರಿ, ಎಲ್.ಕೆ.ಜಿ ಹಾಗೂ ಯು.ಕೆ.ಜಿ ವಿದ್ಯಾರ್ಥಿಗಳು ಕೃಷ್ಣ-ರಾಧೆ ವೇಷಧಾರಿಯೊಂದಿಗೆ ಕಣ್ಮನ ಸೆಳೆದರು. ಮಕ್ಕಳಿಂದ ಭಾಷಣ, ಹಾಡು ಹಾಗೂ ನೃತ್ಯ ಪದರ್ಶನ ಜರುಗಿದವು. ಸಹ ಶಿಕ್ಷಕಿ ಲತಾ ದ್ರೋಣ, ಭೀಷ್ಮ ಮತ್ತು ಕರ್ಣನಿಗೆ  ಶ್ರೀ ಕೃಷ್ಣನು ನೀಡಿದ ಸಂದೇಶದ ಬಗ್ಗೆ ವಿವರಿಸಿದರು. 
    ಅನನ್ಯ ವಿದ್ಯಾಸಂಸ್ಥೆ ಕಾರ್ಯದರ್ಶಿ ಬಿ.ಎಸ್ ಅನಿಲ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಆಡಳಿತಾಧಿಕಾರಿ ವೇಣುಗೋಪಾಲ್,  ಮುಖ್ಯೋಪಾಧ್ಯಾಯ ಕೆ. ಕಲ್ಲೇಶ್ ಕುಮಾರ್, ಉಪ ಮುಖ್ಯ ಶಿಕ್ಷಕಿ ಆರ್. ಸುನಿತ ಹಾಗೂ ಅನನ್ಯ ಹ್ಯಾಪಿ ಹಾರ್ಟ್ಸ್ ಮುಖ್ಯ ಶಿಕ್ಷಕಿ ತನುಜಾ ಅನಿಲ್  ಶಿಕ್ಷಕರು ಹಾಗೂ ಶಿಕ್ಷಕೇತರ ವರ್ಗದವರು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.
  ಸಹ ಶಿಕ್ಷಕಿಯರಾದ ಶರ್ಮಿಳಾ ನಿರೂಪಿಸಿ,  ರಮ್ಯ ಸ್ವಾಗತಿಸಿ,  ರೇಣುಕ ಪ್ರಸಾದ್ ವಂದಿಸಿದರು.

ಸಂಸದ ಬಿ.ವೈ ರಾಘವೇಂದ್ರ ಹುಟ್ಟುಹಬ್ಬ : ವಿಶೇಷ ಪೂಜೆ, ಸಾಮಾಜಿಕ ಸೇವಾ ಕಾರ್ಯಗಳು

ಅಭಿವೃದ್ಧಿಯ ಹರಿಕಾರ, ಯುವಕರ ಕಣ್ಮಣಿ, ಜಿಲ್ಲೆಯ ನೆಚ್ಚಿನ ಸಂಸದ ಬಿ.ವೈ ರಾಘವೇಂದ್ರರವರ ಹುಟ್ಟುಹಬ್ಬ ಭದ್ರಾವತಿ ವಿಧಾನಸಭಾ ಕ್ಷೇತ್ರದ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಾಗು ಸಾಮಾಜಿಕ ಸೇವಾ ಕಾರ್ಯಗಳೊಂದಿಗೆ ಬಿ.ವೈ ರಾಘವೇಂದ್ರ ಅಭಿಮಾನಿಗಳ ಬಳಗದ ವತಿಯಿಂದ ಶನಿವಾರ ಅದ್ದೂರಿಯಾಗಿ ಜರುಗಿತು. ಹೊಸಮನೆ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಸಂಸದ ಬಿ. ವೈ. ರಾಘವೇಂದ್ರ ರವರ ೫೩ನೇ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಪೂಜೆ ನೆರವೇರಿಸಲಾಯಿತು
    ಭದ್ರಾವತಿ : ಅಭಿವೃದ್ಧಿಯ ಹರಿಕಾರ, ಯುವಕರ ಕಣ್ಮಣಿ, ಜಿಲ್ಲೆಯ ನೆಚ್ಚಿನ ಸಂಸದ ಬಿ.ವೈ ರಾಘವೇಂದ್ರರವರ ಹುಟ್ಟುಹಬ್ಬ ವಿಧಾನಸಭಾ ಕ್ಷೇತ್ರದ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಾಗು ಸಾಮಾಜಿಕ ಸೇವಾ ಕಾರ್ಯಗಳೊಂದಿಗೆ ಬಿ.ವೈ ರಾಘವೇಂದ್ರ ಅಭಿಮಾನಿಗಳ ಬಳಗದ ವತಿಯಿಂದ ಶನಿವಾರ ಅದ್ದೂರಿಯಾಗಿ ಜರುಗಿತು. 
    ಬಳಗದ ಸಂಚಾಲಕ, ಆನಂದ ಸಾಮಾಜಿಕ ಸೇವಾ ಸಂಸ್ಥೆ ಅಧ್ಯಕ್ಷ ಜಿ. ಆನಂದ ಕುಮಾರ್ ನೇತೃತ್ವದಲ್ಲಿ ಬೆಳಿಗ್ಗೆ ಹೊಸಮನೆ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಸಂಸದ ಬಿ. ವೈ. ರಾಘವೇಂದ್ರ ರವರ ೫೩ನೇ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಪೂಜೆ ನೆರವೇರಿಸಲಾಯಿತು. 
    ಬಿಜೆಪಿ ಪಕ್ಷದ ಮಂಡಲ ನಗರ ಘಟಕದ ಅಧ್ಯಕ್ಷ ಜಿ. ಧರ್ಮ ಪ್ರಸಾದ್, ಗ್ರಾಮಾಂತರ ಘಟಕದ ಅಧ್ಯಕ್ಷ ಕೆ.ಎಚ್ ತೀರ್ಥಯ್ಯ, ಪಕ್ಷದ ಮುಖಂಡರಾದ ಕೂಡ್ಲಿಗೆರೆ ಹಾಲೇಶ್, ಮಂಗೋಟೆ ರುದ್ರೇಶ್, ಎಂ. ಮಂಜುನಾಥ್, ಮಹಿಳಾ ಅಧ್ಯಕ್ಷೆ  ಸರಸ್ವತಮ್ಮ, ಪ್ರಧಾನ ಕಾರ್ಯದರ್ಶಿಗಳಾದ ಚನ್ನೇಶ್, ರಘುರಾವ್,  ಅಣ್ಣಪ್ಪ,  ಹನುಮಂತನಾಯ್ಕ, ಎಚ್.ಎಸ್ ಸುಬ್ರಹ್ಮಣ್ಯ,  ಕೃಷ್ಣ ಛಲವಾದಿ,  ರವಿಕುಮಾರ್, ನರೇಂದ್ರ,  ರಾಜು ರೇವಣಕರ್, ಕಾ. ರಾ. ನಾಗರಾಜ್, ಓಬಿಸಿ ರಾಜ ಮೆಡಿಕಲ್, ಮೋಹನ್, ಕಲ್ಲು ಮಂಜು,  ಭವಾನಿ, ಯೋಗಿ(ಗ್ಯಾಸ್), ಅರುಣ ಬಾದ್ರಿ, ತಿಪ್ಪಣ್ಣ, ದೊಡ್ಡಮನೆ ನಾರಾಯಣ, ಎಂ.ಎಸ್ ಸುರೇಶಪ್ಪ, ಯೋಗಿ(ಲಾರಿ), ಕೊಮಾರನಹಳ್ಳಿ ರವಿಕುಮಾರ್, ನಂಜಪ್ಪ ಗೌಡ್ರು, ಪ್ರಕಾಶಣ್ಣ, ಹರೀಶ್ ತರುಣ ಭಾರತಿ, ರಾಮಚಂದ್ರ ಹಾಗೂ ಪಕ್ಷದ ಕಾರ್ಯಕರ್ತರು ಮತ್ತು ದೇವಸ್ಥಾನದ  ಸಮಿತಿ  ಸದಸ್ಯರಾದ  ಸತ್ಯವತಿ, ಅಕ್ಕಿ ಬಾಬು, ಶೇಖರಪ್ಪ, ನಾಗರಾಜ್, ವೆಂಕಟೇಶ್, ಮುರುಗನ್, ಸಂತೋಷ ಹಾಗೂ ಭಕ್ತರು ಉಪಸ್ಥಿತರಿದ್ದರು. ದೇವಸ್ಥಾನದ ಅರ್ಚಕ ಸಂತೋಷ್‌ರವರ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳೊಂದಿಗೆ ವಿಶೇಷ ಪೂಜಾ ಕಾರ್ಯಕ್ರಮ ಜರುಗಿತು.