ಭಾನುವಾರ, ಆಗಸ್ಟ್ 31, 2025

ಧಾರ್ಮಿಕರ ಸೇವಕರ ದಿನ : ಧರ್ಮಗುರು ರೋಮನ್ ಪಿಂಟೋಗೆ ಸನ್ಮಾನ

ಭದ್ರಾವತಿ ಗಾಂಧಿನಗರದ ವೇಲಾಂಗಣಿ ಆರೋಗ್ಯ ಮಾತೆ ದೇವಾಲಯದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ೯ ದಿನಗಳ ಭಕ್ತಿ ಕಾರ್ಯದಲ್ಲಿ ಭಾನುವಾರ ಧಾರ್ಮಿಕ ಸೇವಕರ ದಿನದ ಅಂಗವಾಗಿ ಕಬಳೆ ಧರ್ಮ ಕೇಂದ್ರದ ಧರ್ಮ ಗುರುಗಳಾದ ಫಾದರ್ ರೋಮನ್ ಪಿಂಟೋರವರನ್ನು ಸನ್ಮಾನಿಸಿ, ಗೌರವಿಸಲಾಯಿತು.  
    ಭದ್ರಾವತಿ: ಗಾಂಧಿನಗರದ ವೇಲಾಂಗಣಿ ಆರೋಗ್ಯ ಮಾತೆ ದೇವಾಲಯದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ೯ ದಿನಗಳ ಭಕ್ತಿ ಕಾರ್ಯದಲ್ಲಿ ಭಾನುವಾರ ಧಾರ್ಮಿಕ ಸೇವಕರ ದಿನವನ್ನಾಗಿ ಆಚರಿಸಲಾಯಿತು. 
    ಕಳೆದ ೨೩ ವರ್ಷಗಳಿಂದ ಸತತವಾಗಿ ಧಾರ್ಮಿಕ ಸೇವೆ ಸಲ್ಲಿಸುತ್ತಿರುವ ಕಬಳೆ ಧರ್ಮ ಕೇಂದ್ರದ ಧರ್ಮ ಗುರುಗಳಾದ ಫಾದರ್ ರೋಮನ್ ಪಿಂಟೋ ರವರಿಗೆ ಧರ್ಮ ಕೇಂದ್ರದ ಪರವಾಗಿ ಧರ್ಮ ಕೇಂದ್ರದ ಗುರುಗಳಾದ ಫಾದರ್ ಸ್ಟೀವನ್ ಡೇಸಾ,  ಸಿಸ್ಟರ್ ವಿನ್ಸಿ , ಸಿಸ್ಟರ್ ಶೋಭನ ರವರು ಸನ್ಮಾನಿಸಿ, ಗೌರವಿಸಿದರು. ಧರ್ಮಭಗಿನಿಯರು, ಭಕ್ತಾಧಿಗಳು ಪಾಲ್ಗೊಂಡಿದ್ದರು.

ದೇವಸ್ಥಾನ ನಿರ್ಮಾಣದ ಜೊತೆಗೆ ವಿನಾಯಕ ಮಹೋತ್ಸವ : ೧೭ನೇ ವರ್ಷದ ಮೂರ್ತಿ ವಿಸರ್ಜನೆ

ಭದ್ರಾವತಿ ನಗರಸಭೆ ವಾರ್ಡ್ ನಂ.೯ ಮತ್ತು ೧೦ರ ವ್ಯಾಪ್ತಿಯ ತಾಲೂಕು ಶ್ರೀ ವೈಷ್ಣವ ಸಂಸ್ಥಾಪಕರು ದೇವಸ್ಥಾನ, ಶ್ರೀ ಮಹಾವಿಷ್ಣು ಮೃತ್ಯುಂಜಯ ಮತ್ತು ಅಭಯ ಹಸ್ತ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನ ಸೇವಾ ಟ್ರಸ್ಟ್ ವತಿಯಿಂದ ಕಳೆದ ಸುಮಾರು ೧೭ ವರ್ಷಗಳಿಂದ ವಿನಾಯಕ ಮಹೋತ್ಸವ ಆಚರಿಸಿಕೊಂಡು ಬರಲಾಗುತ್ತಿದ್ದು, ಭಾನುವಾರ ಸಂಜೆ ಮೂರ್ತಿ ವಿಸರ್ಜನೆ ನಡೆಸಲಾಯಿತು.   
    ಭದ್ರಾವತಿ: ನಗರಸಭೆ ವಾರ್ಡ್ ನಂ.೯ ಮತ್ತು ೧೦ರ ವ್ಯಾಪ್ತಿಯ ವಿಜಯನಗರದ ತಾಲೂಕು ಶ್ರೀ ವೈಷ್ಣವ ಸಂಸ್ಥಾಪಕರು ದೇವಸ್ಥಾನ, ಶ್ರೀ ಮಹಾವಿಷ್ಣು ಮೃತ್ಯುಂಜಯ ಮತ್ತು ಅಭಯ ಹಸ್ತ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನ ಸೇವಾ ಟ್ರಸ್ಟ್ ವತಿಯಿಂದ ಕಳೆದ ಸುಮಾರು ೧೭ ವರ್ಷಗಳಿಂದ ವಿನಾಯಕ ಮಹೋತ್ಸವ ಆಚರಿಸಿಕೊಂಡು ಬರಲಾಗುತ್ತಿದ್ದು, ಭಾನುವಾರ ಸಂಜೆ ಮೂರ್ತಿ ವಿಸರ್ಜನೆ ನಡೆಸಲಾಯಿತು. 
    ದೇವಸ್ಥಾನದ ಪ್ರಧಾನ ಅರ್ಚಕರಾದ ನಗರದ ವಿಐಎಸ್‌ಎಲ್ ಕಾರ್ಖಾನೆ ನಿವೃತ್ತ ನೌಕರ ಎನ್. ಗೋವಿಂದರಾಜುರವರು ತಮ್ಮ ಸ್ವಂತ ಜಾಗದಲ್ಲಿ ಕಳೆದ ಸುಮಾರು ೧೩ ವರ್ಷಗಳಿಂದ ಹಂತ ಹಂತವಾಗಿ ದೇವಸ್ಥಾನ ನಿರ್ಮಿಸುತ್ತಿದ್ದು, ಟ್ರಸ್ಟ್ ರಚಿಸಿಕೊಂಡು ಜಾಗ ಹಸ್ತಾಂತರಿಸುವ ಜೊತೆಗೆ ತಮ್ಮದೇ ಸುಮಾರು ೧೦ ಲಕ್ಷಕ್ಕೂ ಹೆಚ್ಚಿನ ಹಣ ದೇವಸ್ಥಾನದ ನಿರ್ಮಾಣ ಕಾರ್ಯಕ್ಕೆ ವ್ಯಯ ಮಾಡಿದ್ದಾರೆ. ಈ ನಡುವೆ ಜನಪ್ರತಿನಿಧಿ, ಸ್ಥಳೀಯ ಸಂಸ್ಥೆಗಳು ಹಾಗು ದಾನಿಗಳಿಂದ ಸಹಾಯ ಹಸ್ತ ನಿರೀಕ್ಷಿಸುತ್ತಿದ್ದಾರೆ. ಈ ಅವರ ನಿರೀಕ್ಷೆಗೆ ತಕ್ಕಂತೆ ನೆರವು ಬಂದಲ್ಲಿ ಶೀಘ್ರದಲ್ಲಿಯೇ ದೇವಸ್ಥಾನ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ. 
    ಈ ನಡುವೆ ವಿನಾಯಕ ಮಹೋತ್ಸವ, ಶ್ರೀ ರಾಮ ನವಮಿ, ವೈಕುಂಠ ಏಕಾದಶಿ ಸೇರಿದಂತೆ ಇನ್ನಿತರ ಹಬ್ಬ, ಉತ್ಸವಗಳನ್ನು ಸಹ ಅದ್ದೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ವಿನಾಯಕ ಮೋಹತ್ಸವ ಅದ್ದೂರಿಯಾಗಿ ನಡೆಸುವ ಮೂಲಕ ಹೊಸಮನೆ ಅಶ್ವತ್ಥನಗರ ಭೂತಪ್ಪ ದೇವಸ್ಥಾನದ ಬಳಿ ಗೊಂದಿ ಕಾಲುವೆಯಲ್ಲಿ ಮೂರ್ತಿ ವಿಸರ್ಜನೆಯೊಂದಿಗೆ ಮುಕ್ತಾಯಗೊಳಿಸಲಾಗಿದೆ. 
    ಟ್ರಸ್ಟ್ ಅಧ್ಯಕ್ಷರಾದ ಪ್ರಧಾನ ಅರ್ಚಕ ಎನ್. ಗೋವಿಂದರಾಜು, ವ್ಯವಸ್ಥಾಪಕಿ ಡಿ. ಮಂಜುಳ ಗೋವಿಂದರಾಜು, ಪತ್ರಿಕಾ ವಿತರಕ ಕೃಷ್ಣಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಲಕ್ಷಾಂತರ ರು. ಮೌಲ್ಯದ ಮಾಂಗಲ್ಯ ಸರ ಕಳ್ಳತನ : ಇಬ್ಬರ ಸೆರೆ

ಮನೆಯ ಬೀರುವಿನಲ್ಲಿದ್ದ ಲಕ್ಷಾಂತರ ರು. ಮೌಲ್ಯದ ಮಾಂಗಲ್ಯ ಸರ ಕಳ್ಳತನ ಮಾಡಿದ್ದ ಇಬ್ಬರನ್ನು ಭದ್ರಾವತಿ ಪೇಪರ್‌ಟೌನ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿರುವ ಘಟನೆ ನಡೆದಿದೆ. 
    ಭದ್ರಾವತಿ : ಮನೆಯ ಬೀರುವಿನಲ್ಲಿದ್ದ ಲಕ್ಷಾಂತರ ರು. ಮೌಲ್ಯದ ಮಾಂಗಲ್ಯ ಸರ ಕಳ್ಳತನ ಮಾಡಿದ್ದ ಇಬ್ಬರನ್ನು ಪೇಪರ್‌ಟೌನ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿರುವ ಘಟನೆ ನಡೆದಿದೆ. 
    ಬೆಂಗಳೂರಿನ ಕೆಂಗೇರಿ ನಿವಾಸಿಗಳಾದ ಆರ್. ಮಂಜುಳಾ(೨೧) ಮತ್ತು ಸುಜೈನ್ ಖಾನ್(೨೪) ಎಂಬುವರನ್ನು ಬಂಧಿಸಲಾಗಿದೆ. ಇಬ್ಬರು ದಂಪತಿಯಾಗಿದ್ದು, ಕಳ್ಳತನ ಮಾಡಿದ್ದ ಸುಮಾರು ೭,೮೨,೦೦೦ ರು. ಮೌಲ್ಯದ ೮೩ ಗ್ರಾಂ ತೂಕದ ಮಾಂಗಲ್ಯ ಸರ ವಶಪಡಿಸಿಕೊಳ್ಳಲಾಗಿದೆ. 
    ಘಟನೆ ವಿವರ : 
    ಆ.೧೮ ರಂದು ಕಾಗದನಗರದ ೫ನೇ ವಾರ್ಡ್ ನಿವಾಸಿ ಚಂದ್ರಮ್ಮ ಎಂಬುವರ ಮನೆಯ ಬೀರುವಿನಲ್ಲಿದ್ದ ೯೫ ಗ್ರಾಂ ತೂಕದ ಬಂಗಾರದ ಆಭರಣಗಳು ಕಳ್ಳತನವಾಗಿರುವ ಸಂಬಂಧ ದೂರು ದಾಖಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಪತ್ತೆ ಕಾರ್ಯಾಚರಣೆಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ಜಿ.ಕೆ ಮಿಥುನ್ ಕುಮಾರ್ ಮತ್ತು ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಎ.ಜಿ ಕಾರಿಯಪ್ಪ ಹಾಗು ಎಸ್. ರಮೇಶ್ ಕುಮಾರ್‌ರವರ ಮಾರ್ಗದರ್ಶನದಲ್ಲಿ ಹಾಗೂ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಕೆ.ಆರ್ ನಾಗರಾಜರವರ ಮೇಲ್ವಿಚಾರಣೆಯಲ್ಲಿ, ಠಾಣಾ ಪೊಲೀಸ್ ನಿರೀಕ್ಷಕಿ ಕೆ. ನಾಗಮ್ಮರವರ ನೇತೃತ್ವದಲ್ಲಿ ಠಾಣೆಯ ಸಿಬ್ಬಂದಿಗಳಾದ ಸಹಾಯಕ ಠಾಣಾ ನಿರೀಕ್ಷಕ ರತ್ನಾಕರ್, ಪ್ರಕಾಶ, ಅರುಣ್, ನಾಗರಾಜ, ಹನುಮಂತ, ಆಸ್ಮಾ, ಸ್ವೀಕೃತ ಮತ್ತು ಅನುರೂಪ ಅವರುಗಳನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿತ್ತು. 
    ಆರ್. ಮಂಜುಳಾ ಮತ್ತು ಸುಜೈನ್ ಖಾನ್ ಇಬ್ಬರು ಚಂದ್ರಮ್ಮನವರ ಸಂಬಂಧಿಗಳಾಗಿದ್ದು, ಮನೆಯಲ್ಲಿ ಯಾರು ಇಲ್ಲದಿರುವಾಗ ಬೀರುವಿನಲ್ಲಿದ್ದ ಮಾಂಗಲ್ಯ ಸರ ಕಳ್ಳತನ ಮಾಡಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ. 
    ಜಿಲ್ಲಾ ಪೊಲೀಸ್ ಅಧೀಕ್ಷಕ ಜಿ.ಕೆ ಮಿಥುನ್ ಕುಮಾರ್ ಮತ್ತು ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಎ.ಜಿ ಕಾರಿಯಪ್ಪ ಹಾಗು ಎಸ್. ರಮೇಶ್ ಕುಮಾರ್‌ರವರು ತನಿಖಾ ತಂಡದ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ. 
 

ಭದ್ರಾವತಿ ಪೇಪರ್‌ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಲಕ್ಷಾಂತರ ರು. ಮಾಂಗಲ್ಯ ಸರ ಕಳ್ಳತನ ಮಾಡಿದ್ದ ಬೆಂಗಳೂರಿನ ದಂಪತಿ ಆರ್. ಮಂಜುಳಾ-ಸುಜೈನ್ ಖಾನ್. 

ಶ್ರೀ ಕೃಷ್ಣ ದೇವರಾಯ ರಸ್ತೆ ಉದ್ಘಾಟನೆ

ಭದ್ರಾವತಿ ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣ ಹಾಗು ಸಂಗೊಳ್ಳಿ ರಾಯಣ್ಣ ಖಾಸಗಿ ಬಸ್ ನಿಲ್ದಾಣದಿಂದ ರಂಗಪ್ಪ ವೃತ್ತ ಸಂಪರ್ಕಿಸುವ ಹೊಸಸೇತುವೆ ಮಾರ್ಗದ ರಸ್ತೆ ಇದೀಗ ಶ್ರೀ ಕೃಷ್ಣ ದೇವರಾಯ ರಸ್ತೆಯಾಗಿ ನಾಮಕರಣಗೊಂಡು ಭಾನುವಾರ ಉದ್ಘಾಟನೆಗೊಂಡಿತು. 
    ಭದ್ರಾವತಿ: ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣ ಹಾಗು ಸಂಗೊಳ್ಳಿ ರಾಯಣ್ಣ ಖಾಸಗಿ ಬಸ್ ನಿಲ್ದಾಣದಿಂದ ರಂಗಪ್ಪ ವೃತ್ತ ಸಂಪರ್ಕಿಸುವ ಹೊಸಸೇತುವೆ ಮಾರ್ಗದ ರಸ್ತೆ ಇದೀಗ ಶ್ರೀ ಕೃಷ್ಣ ದೇವರಾಯ ರಸ್ತೆಯಾಗಿ ನಾಮಕರಣಗೊಂಡು ಭಾನುವಾರ ಉದ್ಘಾಟನೆಗೊಂಡಿತು. 
    ಮಾಜಿ ಸಚಿವ, ವಿಧಾನಪರಿಷತ್ ಸದಸ್ಯ ಎಂ.ಆರ್ ಸೀತಾರಾಮು ಹಾಗು ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಬಳಿ ಅಳವಡಿಸಲಾಗಿರುವ ನಾಮಫಲಕ ಅನಾವರಣಗೊಳಿಸುವ ಮೂಲಕ ಶ್ರೀ ಕೃಷ್ಣ ದೇವರಾಯ ರಸ್ತೆ ಉದ್ಘಾಟಿಸಿದರು. 


    ಬಲಿಜ ಸಮುದಾಯದವರ ಕೋರಿಕೆ ಮೇರೆಗೆ ಈ ಹಿಂದೆ ಶ್ರೀ ಕೃಷ್ಣ ದೇವರಾಯ ರಸ್ತೆ ಹೆಸರು ನಾಮಕರಣಗೊಳಿಸುವ ಸಂಬಂಧ ನಗರಸಭೆಯಲ್ಲಿ ಸಲ್ಲಿಕೆಯಾಗಿದ್ದ ಪ್ರಸ್ತಾವನೆಗೆ ನಗರಸಭೆ ಎಲ್ಲಾ ಸದಸ್ಯರು ಪಕ್ಷ ಬೇಧ ಮರೆತು ಒಮ್ಮತ ಸೂಚಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಸರ್ಕಾರದಿಂದ ಅನುಮೋದನೆಗೊಂಡಿದೆ. 
    ನಗರಸಭೆ ಉಪಾಧ್ಯಕ್ಷ ಮಣಿ ಎಎನ್‌ಎಸ್, ಸದಸ್ಯರಾದ ಬಿ.ಟಿ ನಾಗರಾಜ್, ಬಸವರಾಜ ಬಿ. ಆನೇಕೊಪ್ಪ, ಅನುಸುಧ ಮೋಹನ್ ಪಳನಿ, ಕೆ. ಸುದೀಪ್ ಕುಮಾರ್, ಬಲಿಜ ಸಮಾಜದ ತಾಲೂಕು ಅಧ್ಯಕ್ಷ ಎಚ್.ಆರ್ ರಂಗನಾಥ್, ಉಪಾಧ್ಯಕ್ಷರಾದ ಪದ್ಮ ಹನುಮಂತಪ್ಪ, ಎಸ್.ಬಿ ಜಂಗಮಪ್ಪ, ಪ್ರಧಾನ ಕಾರ್ಯದರ್ಶಿ ಪಿ. ಸತೀಶ್, ಸಹ ಕಾರ್ಯದರ್ಶಿ ಟಿ. ರಮೇಶ್, ಮುಖಂಡರಾದ ಬಿ. ಗಂಗಾಧರ್, ಟಿ.ಡಿ ಶಶಿಕುಮಾರ್, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್ ಸೇರಿದಂತೆ  ಇನ್ನಿತರರು ಉಪಸ್ಥಿತರಿದ್ದರು. 

ಶನಿವಾರ, ಆಗಸ್ಟ್ 30, 2025

೨ನೇ ವರ್ಷದ ವಿನಾಯಕ ಮಹೋತ್ಸವ : ೩೧ರಂದು ವಿಸರ್ಜನೆ

ಭದ್ರಾವತಿ ನಗರದ ಭಾವಸಾರ ಯುವಕ ಮಂಡಳಿ ವತಿಯಿಂದ ೨ನೇ ವರ್ಷದ ವಿನಾಯಕ ಮಹೋತ್ಸವ ಆಚರಿಸಲಾಗುತ್ತಿದ್ದು, ಆ.೩೧ರ ಭಾನುವಾರ ವಿನಾಯಕ ಮೂರ್ತಿ ವಿಸರ್ಜನೆ ನಡೆಯಲಿದೆ. 
    ಭದ್ರಾವತಿ: ನಗರದ ಭಾವಸಾರ ಯುವಕ ಮಂಡಳಿ ವತಿಯಿಂದ ೨ನೇ ವರ್ಷದ ವಿನಾಯಕ ಮಹೋತ್ಸವ ಆಚರಿಸಲಾಗುತ್ತಿದ್ದು, ಆ.೩೧ರ ಭಾನುವಾರ ವಿನಾಯಕ ಮೂರ್ತಿ ವಿಸರ್ಜನೆ ನಡೆಯಲಿದೆ. 
    ಭೂತಗುಡಿಯ ಶ್ರೀ ಕೃಷ್ಣ ರುಕ್ಮಿಣಿ ದೇವಸ್ಥಾನದಲ್ಲಿ ಸುಮಾರು ೫ ಅಡಿ ಎತ್ತರದ ಆಕರ್ಷಕವಾದ ಗೋಕುಲ ಕೃಷ್ಣ ಗಣಪತಿ ಪ್ರತಿಷ್ಠಾಪಿಸಲಾಗಿದೆ. ಯುವಕ ಮಂಡಳಿ ಕಳೆದ ಬಾರಿ ಮೊದಲನೇ ವರ್ಷದ ವಿನಾಯಕ ಮಹೋತ್ಸವ ಅದ್ದೂರಿಯಾಗಿ ಆಚರಿಸಿದ್ದು, ಈ ಬಾರಿ ಸಹ ಅದ್ದೂರಿ ಆಚರಣೆ ನಡೆಯುತ್ತಿದ್ದು, ವಿಸರ್ಜನೆಗೂ ಮೊದಲು ಬೆಳಿಗ್ಗೆ ಗಣಹೋಮ, ಮಧ್ಯಾಹ್ನ ಅನ್ನಸಂತರ್ಪಣೆ ನಂತರ ಕಲಾ ತಂಡಗಳೊಂದಿಗೆ ರಾಜಬೀದಿ ಉತ್ಸವ ನಡೆಯಲಿದೆ. ಸಂಜೆ ಭದ್ರಾ ನದಿಯಲ್ಲಿ ಮೂರ್ತಿ ವಿಸರ್ಜನೆ ನಡೆಯಲಿದೆ. ಭಕ್ತದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಕೋರಲಾಗಿದೆ. 

ಬಿ. ಮಂಜುನಾಥ್ ನಿಧನ

ಬಿ. ಮಂಜುನಾಥ್
    ಭದ್ರಾವತಿ : ಬೆಂಗಳೂರಿನ ಕರಣ್ ಎಚ್.ಆರ್ ಅಕಾಡೆಮಿ ತರಬೇತಿ ಕೇಂದ್ರದ ತರಬೇತಿದಾರ, ಮೂಲತಃ ನಗರದ ಬಿ. ಮಂಜುನಾಥ್(೪೩) ನಿಧನ ಹೊಂದಿದರು. 
    ಪತ್ನಿ, ಪುತ್ರ ಹಾಗು ಪುತ್ರಿ ಇದ್ದಾರೆ. ಇವರ ಅಂತ್ಯಕ್ರಿಯೆ ನಗರದ ಬೈಪಸ್ ರಸ್ತೆ ಮಿಲ್ಟ್ರಿಕ್ಯಾಂಪ್ ಹಿಂದೂ ರುದ್ರಭೂಮಿಯಲ್ಲಿ ಶನಿವಾರ ಸಂಜೆ ನೆರವೇರಿತು. 
    ಮಂಜುನಾಥ್‌ರವರು ಬೆಂಗಳೂರಿನಲ್ಲಿ ಕರಣ್ ಎಚ್.ಆರ್ ಅಕಾಡೆಮಿ ತರಬೇತಿ ಆರಂಭಿಸುವ ಮೂಲಕ ಸಾವಿರಾರು ಮಂದಿ ನಿರುದ್ಯೋಗಿಗಳಿಗೆ ಅವರ ವಿದ್ಯಾಭ್ಯಾಸಕ್ಕೆ ತಕ್ಕಂತೆ ತರಬೇತಿ ನೀಡಿ ಅವರಿಗೆ ಉದ್ಯೋಗ ಕಲ್ಪಿಸಿಕೊಡುವಲ್ಲಿ ಯಶಸ್ವಿಯಾಗಿದ್ದರು. 
    ಮಂಜುನಾಥ್ ನಗರದ ವಿದ್ಯಾಮಂದಿರ ಶಾಲೆ ನಿವೃತ್ತ ಶಿಕ್ಷಕ ದಿವಂಗತ ಹುಲಿಗೆಮ್ಮನವರ ಪುತ್ರರಾಗಿದ್ದು, ಅಲ್ಲದೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಾಜಿ ಸೈನಿಕ ಶ್ರೀನಿವಾಸ್‌ರವರ ಸಹೋದರ(ತಮ್ಮ)ರಾಗಿದ್ದಾರೆ. ಇವರ ನಿಧನಕ್ಕೆ ಕಾರ್ಮಿಕ ಮುಖಂಡ ಐಸಾಕ್ ಲಿಂಕನ್, ಸಂಚಾರಿ ಪೊಲೀಸ್ ಠಾಣೆ ಅಧಿಕಾರಿಗಳು ಹಾಗು ಸಿಬ್ಬಂದಿಗಳು ಸೇರಿದಂತೆ ನಗರದ ಗಣ್ಯರು ಸಂತಾಪ ಸೂಚಿಸಿದ್ದಾರೆ. 

೫೫ನೇ ವರ್ಷದ ವಿನಾಯಕ ಮಹೋತ್ಸವ : ಸತ್ಯನಾರಾಯಣ ಪೂಜೆ, ಹೋಮ, ಅನ್ನಸಂತರ್ಪಣೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ಜನ್ನಾಪುರ ಗಣೇಶ್ ಕಾಲೋನಿ ಜಿ.ಸಿ ಬಾಯ್ಸ್ ಯುವಕರ ಸಂಘದ ವತಿಯಿಂದ ೫೫ನೇ ವರ್ಷದ ವಿನಾಯಕ ಮಹೋತ್ಸವ ಆಚರಿಸಲಾಗುತ್ತಿದ್ದು, ಶನಿವಾರ ಬೆಳಿಗ್ಗೆ ಸತ್ಯನಾರಾಯಣ ಪೂಜೆ, ಹೋಮ ಮತ್ತು ಮಧ್ಯಾಹ್ನ ಅನ್ನಸಂತರ್ಪಣೆ ಕಾರ್ಯಕ್ರಮ ನೆರವೇರಿತು. 
    ಭದ್ರಾವತಿ: ನಗರಸಭೆ ವ್ಯಾಪ್ತಿಯ ಜನ್ನಾಪುರ ಗಣೇಶ್ ಕಾಲೋನಿ ಜಿ.ಸಿ ಬಾಯ್ಸ್ ಯುವಕರ ಸಂಘದ ವತಿಯಿಂದ ೫೫ನೇ ವರ್ಷದ ವಿನಾಯಕ ಮಹೋತ್ಸವ ಆಚರಿಸಲಾಗುತ್ತಿದ್ದು, ಶನಿವಾರ ಬೆಳಿಗ್ಗೆ ಸತ್ಯನಾರಾಯಣ ಪೂಜೆ, ಹೋಮ ಮತ್ತು ಮಧ್ಯಾಹ್ನ ಅನ್ನಸಂತರ್ಪಣೆ ಕಾರ್ಯಕ್ರಮ ನೆರವೇರಿತು. 
    ನ್ಯಾಯಬೆಲೆ ಅಂಗಡಿ ವಿತರಕರಾದ ಸಚ್ಚಿದಾನಂದ-ಎ.ಎಸ್ ಪದ್ಮಾವತಿ ದಂಪತಿ ಸತ್ಯನಾರಾಯಣ ಪೂಜೆ, ಹೋಮ ಧಾರ್ಮಿಕ ಆಚರಣೆ ನೆರವೇರಿಸಿದರು. ಗಣೇಶ್ ಕಾಲೋನಿ, ವಿದ್ಯಾಮಂದಿರ, ಹಾಲಪ್ಪ ಶೆಡ್, ಕಿತ್ತೂರುರಾಣಿ ಚನ್ನಮ್ಮ ಬಡಾವಣೆ(ಕೆ.ಸಿ ಬ್ಲಾಕ್), ಎನ್‌ಟಿಬಿ ಬಡಾವಣೆ ಸೇರಿದಂತೆ ಜನ್ನಾಪುರ ಸುತ್ತಮುತ್ತಲಿನ ನಿವಾಸಿಗಳು ಪಾಲ್ಗೊಂಡಿದ್ದರು.  ಸ್ಥಳೀಯ ಯುವಕರು ಒಗ್ಗಟ್ಟಾಗಿ ನಿರಂತರವಾಗಿ ವಿನಾಯಕ ಮಹೋತ್ಸವ ಆಚರಿಸಿಕೊಂಡು ಬರುತ್ತಿದ್ದು, ೩೧ರ ಭಾನುವಾರ ವಿವಿಧ ಕಲಾತಂಡಗಳೊಂದಿಗೆ ಉತ್ಸವ ಮೆರವಣಿಗೆ ಮೂಲಕ ವಿನಾಯಕ ಮೂರ್ತಿ ವಿಸರ್ಜನೆ ನಡೆಯಲಿದೆ.