ಭದ್ರಾವತಿ ನಗರಸಭೆ ವ್ಯಾಪ್ತಿಯಲ್ಲಿ ಭಾನುವಾರ ಸೋಂಕು ಪತ್ತೆಯಾದ ಸ್ಥಳಗಳಿಗೆ ನಗರಸಭೆ ಪೌರಾಯುಕ್ತ ಮನೋಹರ್, ಹಿರಿಯ ಆರೋಗ್ಯ ಸಹಾಯಕ ನೀಲೇಶ್‌ರಾಜ್, ನಗರಸಭಾ ಸದಸ್ಯ ಆಂಜನಪ್ಪ ಸೇರಿದಂತೆ ಇನ್ನಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಭದ್ರಾವತಿ, ಜು. ೧೯: ಕಳೆದ ೪ ದಿನಗಳಿಂದ ನಗರದಲ್ಲಿ ಕೊರೋನಾ ಸೋಂಕು ಪ್ರಕರಣಗಳು ನಿರಂತರವಾಗಿ ಕಾಣಿಸಿಕೊಳ್ಳುತ್ತಿದ್ದು, ಭಾನುವಾರ ೨ ಪ್ರಕರಣಗಳು ಪತ್ತೆಯಾಗಿವೆ.
ಹೊಸಸೇತುವೆ ರಸ್ತೆ ಕನಕನಗರದಲ್ಲಿ ಈಗಾಗಲೇ ಸೀಲ್‌ಡೌನ್ ಮಾಡಲಾಗಿರುವ ಪ್ರದೇಶದ ವ್ಯಾಪ್ತಿಯಲ್ಲಿಯೇ ಮತ್ತೊಂದು ಪ್ರಕರಣ ಪತ್ತೆಯಾಗಿದ್ದು, ೬೨ ವರ್ಷದ ವೃದ್ಧೆ ಸೋಂಕಿಗೆ ಒಳಗಾಗಿದ್ದು, ಹಳೇಬುಳ್ಳಾಪುರದ ೨೩ ವರ್ಷದ ಯುವಕನಿಗೆ ಸೋಂಕು ತಗುಲಿದೆ.
ಸೋಂಕು ಪತ್ತೆಯಾದ ಸ್ಥಳಗಳಿಗೆ ನಗರಸಭೆ ಪೌರಾಯುಕ್ತ ಮನೋಹರ್, ಹಿರಿಯ ಆರೋಗ್ಯ ಸಹಾಯಕ ನೀಲೇಶ್‌ರಾಜ್, ನಗರಸಭಾ ಸದಸ್ಯ ಆಂಜನಪ್ಪ ಸೇರಿದಂತೆ ಇನ್ನಿತರರು ಭೇಟಿ ನೀಡಿ ಪರಿಶೀಲನೆ ನಡೆಸಿ ೧೦೦ ಹಾಗೂ ೨೦೦ ಮೀ. ವ್ಯಾಪ್ತಿಯನ್ನು ಕಂಟೈನ್ಮೆಂಟ್ ವಲಯವನ್ನಾಗಿಸಲಾಗಿದೆ.
ವಸತಿ ನಿಲಯದಲ್ಲಿ ೮೦ ಹಾಸಿಗೆ ವ್ಯವಸ್ಥೆ:
ಜಿಲ್ಲೆಯಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ನಿರ್ದೇಶನದ ಮೇರೆಗೆ ತಾಲೂಕಿನಲ್ಲಿ ೨ ಕಡೆ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಈಗಾಗಲೇ ವಿಐಎಸ್‌ಎಲ್ ಆಸ್ಪತ್ರೆ ಚಿಕಿತ್ಸೆಗೆ ಎಲ್ಲಾ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ. ಈ ನಡುವೆ ದೇವರ ನರಸೀಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲೂ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ.
ಸೋಂಕು ಪತ್ತೆಯಾದರೂ ಸಹ ಯಾವುದೇ ರೋಗ ಲಕ್ಷಣಗಳಿಲ್ಲದವರಿಗೆ ಚಿಕಿತ್ಸೆ ನೀಡಲು ೮೦ ಹಾಸಿಗೆ ವ್ಯವಸ್ಥೆ ಕೈಗೊಳ್ಳಲಾಗಿದ್ದು, ಈಗಾಗಲೇ ಎಲ್ಲಾ ಸಿದ್ದತೆಗಳು ಪೂರ್ಣಗೊಂಡಿವೆ ಎಂದು ತಹಸೀಲ್ದಾರ್ ಶಿವಕುಮಾರ್ ತಿಳಿಸಿದ್ದಾರೆ.