ಮಂಗಳವಾರ, ಸೆಪ್ಟೆಂಬರ್ 22, 2020

ಮೊದಲ ಹಂತದ ‘ಕರ್ನಾಟಕದ ಕಲ್ಯಾಣ’ ಪಾದಯಾತ್ರೆ ಯಶಸ್ವಿ

ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಆಡಳಿತ ವೈಫಲ್ಯ ಹಾಗು ಜನ ವಿರೋಧಿ ಧೋರಣೆಗಳನ್ನು ಖಂಡಿಸಿ ಸಂಯುಕ್ತ ಜನತಾದಳ ಮತ್ತು ಜನತಾ ಪರಿವಾರದ ಸಹಭಾಗಿತ್ವದಲ್ಲಿ ಸೆ.೧೮ ರಿಂದ ೨೧ರ ವರೆಗೆ ಹಮ್ಮಿಕೊಳ್ಳಲಾಗಿದ್ದ ಮೊದಲ ಹಂತದ ಕೋಲಾರದಿಂದ ಬೆಂಗಳೂರುವರೆಗೂ 'ಕರ್ನಾಟಕದ ಕಲ್ಯಾಣ' ಪಾದ ಯಾತ್ರೆಗೆ  ಜೆಡಿಯು  ಪಕ್ಷದ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಮಹಿಮಾ ಜೆ. ಪಟೇಲ್  ಚಾಲನೆ ನೀಡಿದರು. 

ಭದ್ರಾವತಿ, ಸೆ. ೨೨: ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಆಡಳಿತ ವೈಫಲ್ಯ ಹಾಗು ಜನ ವಿರೋಧಿ ಧೋರಣೆಗಳನ್ನು ಖಂಡಿಸಿ ಸಂಯುಕ್ತ ಜನತಾದಳ ಮತ್ತು ಜನತಾ ಪರಿವಾರದ ಸಹಭಾಗಿತ್ವದಲ್ಲಿ ಸೆ.೧೮ ರಿಂದ ೨೧ರ ವರೆಗೆ ಹಮ್ಮಿಕೊಳ್ಳಲಾಗಿದ್ದ ಮೊದಲ ಹಂತದ ಕೋಲಾರದಿಂದ ಬೆಂಗಳೂರುವರೆಗೂ 'ಕರ್ನಾಟಕದ ಕಲ್ಯಾಣ' ಪಾದ ಯಾತ್ರೆ ಯಶಸ್ವಿಯಾಗಿ ಮುಕ್ತಾಯಗೊಂಡಿತು.
         ಯಾತ್ರೆಗೆ  ಜೆಡಿಯು  ಪಕ್ಷದ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಮಹಿಮಾ ಜೆ. ಪಟೇಲ್  ಚಾಲನೆ ನೀಡಿದರು.  ಪ್ರಸ್ತುತ ರಾಜ್ಯ ಸರ್ಕಾರ ರಾಜಕೀಯವಾಗಿ, ಅರ್ಥಿಕವಾಗಿ, ಔದ್ಯೋಗಿಕವಾಗಿ, ಶೈಕ್ಷಣಿಕವಾಗಿ, ಕೈಗಾರಿಕ ರಂಗದಲ್ಲಿ ಹಾಗು ರೈತರ ಹಿತ ಕಾಪಾಡುವಲ್ಲಿ ಸಾಕಷ್ಟು ಹಿನ್ನಡೆ ಅನುಭವಿಸಿದೆ. ಕೊರೋನಾ ಸೋಂಕಿನಿಂದ ಎಲ್ಲರೂ ಭಯಭೀತರಾಗಿದ್ದು, ಬದುಕು ಜರ್ಜಿರಿತಗೊಂಡಿದೆ. ಒಂದೆಡೆ ನೆರೆ ಹಾವಳಿಯಿಂದಾಗಿ ಉತ್ತರ ಕರ್ನಾಟಕದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಮತ್ತೊಂದೆಡೆ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿವೆ ಎಂದು ಆರೋಪಿಸಲಾಯಿತು.
       ಶಾಸಕ ಶರತ್ ಬಚ್ಚೆಗೌಡ,  ಜೆಡಿಯು ಪಕ್ಷದ  ವಿವಿಧ ಘಟಕಗಳ ಅಧ್ಯಕ್ಷರು, ಮುಖಂಡರು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು ಎಂದು ಭದ್ರಾವತಿ ನಗರದ ನಿವಾಸಿಗಳಾದ ರಾಜ್ಯ ಯುವ ಘಟಕದ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ ಹಾಗು ಕಾರ್ಯದರ್ಶಿ ಬಾಬು ದೀಪಕ್ ಕುಮಾರ್ ತಿಳಿಸಿದ್ದಾರೆ.

ಕೊರೋನಾ ವಾರಿಯರ್ಸ್‌ಗಳಾದ ಪೌರಕಾರ್ಮಿಕರ ಬದುಕು ಹಸನಾಗಲಿ

೧೫೦ಕ್ಕೂ ಹೆಚ್ಚು ಪೌರಕಾರ್ಮಿಕರ ಪೈಕಿ ಬಹುತೇಕರ ಬದುಕು ಹೇಳಿಕೊಳ್ಳುವಂತಿಲ್ಲ

ಕೊರೋನಾ ಸಂಕಷ್ಟಕ್ಕೆ ಒಳಗಾಗಿರುವ ಪೌರಕಾರ್ಮಿಕರನ್ನು ಗುರುತಿಸಿ ಮಹಿಳಾ ಸಂಘಟನೆಯೊಂದಿಗೆ ಆಹಾರ ಸಾಮಾಗ್ರಿಗಳನ್ನು ವಿತರಿಸಿ ಅವರ ನೆರವಿಗೆ ಮುಂದಾಗಿರುವುದು.
* ಅನಂತಕುಮಾರ್
ಭದ್ರಾವತಿ, ಸೆ. ೨೨: ಕಳೆದ ಸುಮಾರು ೬ ತಿಂಗಳುಗಳಿಂದ ಕೊರೋನಾ ಸಂಕಷ್ಟದ ನಡುವೆಯೂ ನಗರದ ಸ್ವಚ್ಛತೆಯೊಂದಿಗೆ ಸುಂದರ ಪರಿಸರಕ್ಕೆ ಕಾರಣಕರ್ತರಾಗಿರುವ ಪೌರಕಾರ್ಮಿಕರನ್ನು ನೆನಪು ಮಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ದೇಶದಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡ ನಂತರ ನಡೆದಿರುವ ಬೆಳವಣಿಗೆಗಳು ಪ್ರತಿಯೊಬ್ಬರು ತಮ್ಮ ಬದುಕಿನ ಕೊನೆಯವರೆಗೂ ಮರೆಯಲು ಸಾಧ್ಯವಿಲ್ಲ. ಸೋಂಕು ಇಂದಿಗೂ ಕಡಿಮೆಯಾಗಿಲ್ಲ. ಪ್ರತಿದಿನ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ಪ್ರತಿಷ್ಠಿತ ಗಣ್ಯ ವ್ಯಕ್ತಿಗಳು, ರಾಜಕಾರಣಿಗಳು, ವೈದ್ಯರು, ಪೊಲೀಸರು, ಶ್ರೀಸಾಮಾನ್ಯರು ಸೇರಿದಂತೆ ಎಲ್ಲರ ಸಾವು ನಮ್ಮೆದುರು ಕಂಡು ಬರುತ್ತಿದೆ.  ಮನೆಯಿಂದ ಹೊರಬರಲು ಅಸಾಧ್ಯವಾದ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಹಗಲಿರುಳು ಸ್ವಚ್ಛತೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಸುಂದರ ಪರಿಸರಕ್ಕೆ ಕಾರಣಕರ್ತರಾಗಿರುವವರು ಪೌರ ಕಾರ್ಮಿಕರು.  ಸರ್ಕಾರ ಇವರನ್ನು ನೆಪಮಾತ್ರಕ್ಕೆ ಕೊರೋನಾ ವಾರಿಯರ್ಸ್ ಎಂದು ಘೋಷಿಸಿ ಬಿಟ್ಟಿದೆ. ಆದರೆ ವಾಸ್ತವವಾಗಿ ಇವರ ಬದುಕು ಕೇಳಿವವರು ಯಾರು ಇಲ್ಲ.
         ಇಲ್ಲಿನ ನಗರಸಭೆಯಲ್ಲಿ ಸುಮಾರು ೨೫೦ಕ್ಕೂ ಹೆಚ್ಚು ಮಂದಿ ಪೌರಕಾರ್ಮಿಕರಿದ್ದು, ಈ ಪೈಕಿ ೯೫ ಕಾಯಂ, ೭೧ ಗುತ್ತಿಗೆ, ೨೮ ಶೌಚಾಲಯ ಕೆಲಸಗಾರರು, ೨೧ ಲೋಡರ್‍ಸ್, ೨೧ ಡ್ರೈವರ್ ಮತ್ತು ಕ್ಲೀನರ್ ಹಾಗು ೫೦ ಮನೆ ಮನೆ ಕಸ ಸಂಗ್ರಹಿಸುವವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬಹುತೇಕ ಪೌರಕಾರ್ಮಿಕರ  ಬದುಕು ಹೇಳಿಕೊಳ್ಳುವಂತಹ ಸ್ಥಿತಿಯಲ್ಲಿಲ್ಲ. ಈ ನಡುವೆ ನಗರಸಭೆಗೆ ಮನೋಹರ್ ಪೌರಾಯುಕ್ತರಾಗಿ ಬಂದ ನಂತರ ಕಳೆದ ೩-೪ ವರ್ಷಗಳಿಂದ ಪೌರಕಾರ್ಮಿಕರ ಸಮಸ್ಯೆಗಳು ಕಡಿಮೆಯಾಗಿವೆ ಎಂದರೆ ತಪ್ಪಾಗಲಾರದು. ಆದರೂ ಸಹ ಬಹುತೇಕ ಬೇಡಿಕೆಗಳು ಬಾಕಿ ಉಳಿದಿವೆ.
    ಪೌರಾಯುಕ್ತ ಮನೋಹರ್‌ರವರ ಪ್ರಯತ್ನದ ಫಲವಾಗಿ ನಗರದಲ್ಲಿ ಸೂರಿಲ್ಲದ ಪೌರಕಾರ್ಮಿಕರಿಗೆ ಸೂರು ಲಭಿಸುತ್ತಿದೆ. ಪೌರಕಾರ್ಮಿಕರ ವಸತಿ ಸಂಕೀರ್ಣ ರಂಗಪ್ಪ ವೃತ್ತ ಸಮೀಪದ ಜೈಭೀಮ ನಗರದಲ್ಲಿ ಇದೀಗ ಪ್ರಗತಿಯಲ್ಲಿದೆ. ನಿರಂತರ ಹೋರಾಟದ ಫಲವಾಗಿ ಪೌರಕಾರ್ಮಿಕರ ಕೆಲವೊಂದು ಬೇಡಿಕೆಗಳು ಈಡೇರಿವೆ. ವಾಸ್ತವ್ಯವಾಗಿ ಅವರ ಎಲ್ಲಾ ಬೇಡಿಕೆಗಳು ಈಡೇರಬೇಕಾಗಿದೆ.
       ಸಮಾಜದಲ್ಲಿ ಪೌರಕಾರ್ಮಿಕರ ಸೇವೆ ಅಮೂಲ್ಯ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಪೌರಕಾರ್ಮಿಕರಿಲ್ಲದ ಸಮಾಜ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಪೌರಕಾರ್ಮಿಕರು ಎಂದಿಗೂ ಇತರೆ ಸರ್ಕಾರಿ ನೌಕರರಂತೆ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಅವರಿಗೆ ಬರುವ ವೇತನ ತೀರ ಕಡಿಮೆ. ಈ ಹಿನ್ನಲೆಯಲ್ಲಿ ಅವರ ಎಲ್ಲಾ ಬೇಡಿಕೆಗಳು ಈಡೇರಬೇಕು.  ಪ್ರತಿಯೊಬ್ಬರು ಅವರ ಪರವಾಗಿ ನಿಲ್ಲಬೇಕಾಗಿದೆ. ಅದರಲ್ಲೂ ಪ್ರಸ್ತುತ ಪರಿಸ್ಥಿತಿಯಲ್ಲಿ ಪೌರಕಾರ್ಮಿಕರ ಸೇವೆ ಮತ್ತಷ್ಟು ಮಹತ್ವ ಪಡೆದುಕೊಂಡಿದೆ. ಜೀವದ ಹಂಗು ತೊರೆದು ಕೊರೋನಾ ವಾರಿಯರ್ಸ್‌ಗಳಾಗಿ ಕರ್ತವ್ಯದಲ್ಲಿ ತೊಡಗಿಸಿಕೊಂಡಿರುವ ಪೌರಕಾರ್ಮಿಕರಿಗೆ ನಮ್ಮೆಲ್ಲರ ಗೌರವಪೂರ್ವಕ ನಮನ ಸಲ್ಲಬೇಕಾಗಿದೆ.


ನಗರದಲ್ಲಿ ಎಲ್ಲಿಬೇಕೆಂದರಲ್ಲಿ ಕಸ ಎಸೆಯಂದತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡು ರಂಗೋಲಿ ಬಿಡಿಸಿ ಸುತ್ತಮುತ್ತಲಪರಿಸರ ಸುಂದಗೊಳಿಸಿರುವುದು.
      ಸೆ.೨೩ರಂದು ಪೌರಕಾರ್ಮಿಕರ ದಿನಾಚರಣೆ:
ಪ್ರತಿ ವರ್ಷದಂತೆ ಈ ಬಾರಿ ಸಹ ಪೌರಕಾರ್ಮಿಕರ ದಿನಾಚರಣೆ ಹಮ್ಮಿಕೊಳ್ಳಲಾಗಿದ್ದು, ಕೊರೋನಾ ಹಿನ್ನಲೆಯಲ್ಲಿ ಈ ಬಾರಿ ಸರಳವಾಗಿ ನಗರಸಭೆ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ನಗರಸಭೆ ಪೌರಾಯುಕ್ತ ಮನೋಹರ್, ಪೌರಕಾರ್ಮಿಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು  ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ.
    ಸ್ವಚ್ಛತಾ ಕಾರ್ಯ ಸ್ಥಗಿತ:
ಪೌರಕಾರ್ಮಿಕರ ದಿನಾಚರಣೆ ಹಿನ್ನಲೆಯಲ್ಲಿ ಪೌರಕಾರ್ಮಿಕರಿಗೆ ರಜೆ ಘೋಷಿಸಲಾಗಿದ್ದು, ಈ ಹಿನ್ನಲೆಯಲ್ಲಿ ನಗರದಲ್ಲಿ ಬುಧವಾರ ಸ್ವಚ್ಛತಾ ಕಾರ್ಯ ನಡೆಯುವುದಿಲ್ಲ. ಈ ಹಿನ್ನಲೆಯಲ್ಲಿ ಸಾರ್ವಜನಿಕರು ಸಹಕರಿಸುವಂತೆ ಪೌರಾಯುಕ್ತರು ಕೋರಿದ್ದಾರೆ.

ಕವಲಗುಂದಿ ತಗ್ಗು ಪ್ರದೇಶದ ನಿವಾಸಿಗಳಿಗೆ ಮನೆ ನಿರ್ಮಾಣ ಉನ್ನತ ಅಧಿಕಾರಿಗಳ ಗಮನಕ್ಕೆ

ಪೌರಾಯುಕ್ತ ಮನೋಹರ್ ಭರವಸೆ

ನದಿ ನೀರಿನಿಂದ ನಿರಾಶ್ರಿತಗೊಂಡಿರುವ ಭದ್ರಾವತಿ ಕವಲಗುಂದಿ ಗ್ರಾಮದ ತಗ್ಗು ಪ್ರದೇಶದ ನಿವಾಸಿಗಳು ತಕ್ಷಣ ಮನೆ ನಿರ್ಮಿಸಿ ಕೊಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.
ಭದ್ರಾವತಿ, ಸೆ. ೨೨: ಪ್ರತಿ ಬಾರಿ ಭದ್ರಾ ಜಲಾಶಯದಿಂದ ನದಿಗೆ ನೀರು ಬಿಟ್ಟ ಸಂದರ್ಭದಲ್ಲಿ ಮನೆಗಳು ಜಲಾವೃತಗೊಂಡು ನಿರಾಶ್ರಿತರಾಗುತ್ತಿರುವ ನಗರಸಭೆ ವ್ಯಾಪ್ತಿಯ ವಾರ್ಡ್ ನಂ. ೨ರ ಕವಲಗುಂದಿ ಗ್ರಾಮದ ತಗ್ಗು ಪ್ರದೇಶದ ಸುಮಾರು ೩೦ ಕುಟುಂಬಗಳಿಗೆ ಪುನರ್ ವಸತಿ ನಿರ್ಮಿಸಿಕೊಡುವ ಸಂಬಂಧ ನೆನೆಗುದಿಗೆ ಬಿದ್ದಿರುವ ವಿಚಾರವನ್ನು ಉನ್ನತ ಅಧಿಕಾರಿಗಳ ಗಮನಕ್ಕೆ ತರುವುದಾಗಿ ನಗರಸಭೆ ಪೌರಾಯುಕ್ತ ಮನೋಹರ್ ನಿವಾಸಿಗಳಿಗೆ ಭರವಸೆ ನೀಡಿದರು.
      ಕೆಲವು ತಿಂಗಳುಗಳ ಹಿಂದೆ ಆಶ್ರಯ ಸಮಿತಿ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕವಲಗುಂದಿ ಗ್ರಾಮದ ತಗ್ಗು ಪ್ರದೇಶದ ಸುಮಾರು ೩೦ ಕುಟುಂಬಗಳಿಗೆ ಆಶ್ರಯ ಯೋಜನೆಯಡಿ ನಿವೇಶನಗಳನ್ನು ನೀಡಲು ತೀರ್ಮಾನಿಸಿದ್ದು, ಜೇಡಿಕಟ್ಟೆ ಹೊಸೂರಿನಲ್ಲಿ ನಿವೇಶನಗಳನ್ನು ಗುರುತಿಸಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ವರದಿ ಸಲ್ಲಿಸಲಾಗಿದೆ. ಈ ವರದಿಗೆ ಸ್ಪಂದಿಸಿರುವ ಜಿಲ್ಲಾಧಿಕಾರಿಗಳು ರಾಜೀವ್ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಆದರೆ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಹಿನ್ನಲೆಯಲ್ಲಿ ಅಪ್ಪರ್ ಹುತ್ತಾ ತಾತ್ಕಾಲಿಕ ಗಂಜಿ ಕೇಂದ್ರದಲ್ಲಿರುವ ಅಲ್ಲಿನ ನಿವಾಸಿಗಳು ಪುನಃ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
      ನಿರಾಶ್ರಿತರ ಪರವಾಗಿ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿರುವ ಭಾರತರತ್ನ ಸರ್.ಎಂ. ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ ಮತ್ತು ಸುವರ್ಣ ಮಹಿಳಾ ವೇದಿಕೆ ವತಿಯಿಂದ ನಿರಾಶ್ರಿತರಿಗೆ ಬೆಂಬಲ ಸೂಚಿಸಿ ಚಹಾಕೂಟ ನಡೆಸಲಾಯಿತು. ತಕ್ಷಣ ಮನೆಗಳನ್ನು ನಿರ್ಮಿಸಿಕೊಡುವಂತೆ ಪೌರಾಯುಕ್ತರಿಗೆ ಒತ್ತಾಯಿಸಲಾಯಿತು.
    ನಿರಾಶ್ರಿತರಾದ ಮಾದೇಶ್ವರ, ರವಿಕುಮಾರ್, ಮಂಜಮ್ಮ, ಜಯಣ್ಣ, ಮಂಜುಳಾ, ನಾಗರತ್ನ, ರಘು, ಶೀಲಾ, ಕಸ್ತೂರಿ, ಆಲಮೇಲಮ್ಮ, ಕಾವ್ಯ, ಪೂಜಾಶ್ರೀ ಹಾಗೂ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್, ಪ್ರಮುಖರಾದ ರಮಾ ವೆಂಕಟೇಶ್, ಗೀತಾ ತಿರುಮಲೇಗೌಡ, ಆರ್. ತಮ್ಮಯ್ಯ ಮತ್ತು ಗ್ರಾಮ ಲೆಕ್ಕಾಧಿಕಾರಿ ಪ್ರೇಮ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ನದಿ ನೀರಿನಿಂದ ನಿರಾಶ್ರಿತಗೊಂಡಿರುವ ಭದ್ರಾವತಿ ಕವಲಗುಂದಿ ಗ್ರಾಮದ ತಗ್ಗು ಪ್ರದೇಶದ ನಿವಾಸಿಗಳನ್ನು ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ನೇತೃತ್ವದಲ್ಲಿ ನ್ಯೂ ಕಾಲೋನಿ ಬಿ.ಕೆ ಸಂಗಮೇಶ್ವರ್ ಅಭಿಮಾನಿಗಳು ಭೇಟಿ ಮಾಡಿ ದಿನ ಬಳಕೆ ವಸ್ತುಗಳನ್ನು ವಿತರಿಸಿದರು.
       ಬಿ.ಕೆ ಮೋಹನ್ ನಿರಾಶ್ರಿತರ ಭೇಟಿ:
   ಕೊರೋನಾ ಸೋಂಕಿಗೆ ಒಳಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿರುವ ಶಾಸಕ ಬಿ.ಕೆ ಸಂಗಮೇಶ್ವರ್ ಪರವಾಗಿ ಸಹೋದರ ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಗಂಜಿ ಕೇಂದ್ರಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿದರು.  ತಕ್ಷಣ ನಿವೇಶನಗಳನ್ನು ಹಂಚಿಕೆ ಮಾಡಿ ಮನೆ ನಿರ್ಮಾಣಕ್ಕೆ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿ ಆತಂಕಕ್ಕೆ ಒಳಗಾಗದಂತೆ ಮನವಿ ಮಾಡಿದರು.
         ಶಾಸಕ ಬಿ.ಕೆ ಸಂಗಮೇಶ್ವರ್ ನ್ಯೂಕಾಲೋನಿ ಅಭಿಮಾನಿಗಳು ನಿರಾಶ್ರಿತರಿಗೆ ಟಬಲ್, ಮಾಸ್ಕ್, ಸ್ಯಾನಿಟೈಜರ್, ಬ್ರೆಡ್, ಬಿಸ್ಕೇಟ್, ಜ್ಯೂಸ್ ಸೇರಿದಂತೆ ಇನ್ನಿತರ ಅಗತ್ಯ ವಸ್ತುಗಳನ್ನು ವಿತರಿಸಿದರು. ನಗರಸಭೆ ಮಾಜಿ ಸದಸ್ಯ ಮುಕುಂದಪ್ಪ, ಪೌರಾಯುಕ್ತ ಮನೋಹರ್ ಹಿರಿಯ ಮುಖಂಡ ಎಸ್.ಎಸ್ ಬೈರಪ್ಪ, ಪ್ರಾನ್ಸಿಸ್, ಸೆಲ್ವರಾಜ್, ಪ್ರಸನ್ನ, ಸುಬ್ಬು, ಸಂಪತ್, ರವಿ, ವಿಜಯ್ ಗಾಂಧಿ, ಮ್ಯಾಥ್ವ್ ರಾಖಿ, ಹನುಮಂತ, ಐಸಾಕ್, ಪಾಂಡು, ಪುಟ್ಟ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಪ್ರಧಾನ ಮಂತ್ರಿಗೆ ಮನವಿ

ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ತಾಲೂಕು ಶಾಖೆ ವತಿಯಿಂದ ಅಧ್ಯಕ್ಷೆ ಸುಶೀಲಬಾಯಿ ನೇತೃತ್ವದಲ್ಲಿ ವಿವಿದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸೋಮವಾರ ತಹಸೀಲ್ದಾರ್ ರಂಗಮ್ಮ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ: ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ತಾಲೂಕು ಶಾಖೆ ವತಿಯಿಂದ ಅಧ್ಯಕ್ಷೆ ಸುಶೀಲಬಾಯಿ ನೇತೃತ್ವದಲ್ಲಿ ವಿವಿದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸೋಮವಾರ ತಹಸೀಲ್ದಾರ್ ರಂಗಮ್ಮ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
       ಸರ್ಕಾರ ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್‌ಕೆಜಿ/ಯುಕೆಜಿ ತರಗತಿಗಳನ್ನು ಪ್ರಾರಂಭಿಸಬೇಕು ಮತ್ತು ಐಸಿಡಿಎಸ್ ಯೋಜನೆಯನ್ನು ಉಳಿಸಿಕೊಳ್ಳಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಪೂರೈಸಿದ ಮಕ್ಕಳಿಗೆ ಪ್ರಾಥಮಿಕ ಶಾಲೆಗೆ ದಾಖಲಿಸಲು ಅಂಗನವಾಡಿ ಕೇಂದ್ರಗಳಿಂದಲೇ ವರ್ಗಾವಣೆ ಪ್ರಮಾಣ ಪತ್ರ ನೀಡುವಂತೆ ಕ್ರಮ ಕೈಗೊಳ್ಳಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾಗಿ ಒಂದು ವರ್ಷ ಕಳೆದರೂ ಸಹ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಮಸ್ಯೆಗಳಿಗೆ ಸ್ಪಂದಿಸದ ಹಿನ್ನಲೆಯಲ್ಲಿ ಅವರನ್ನು ಸಚಿವ ಸ್ಥಾನದಿಂದ ಕೈಬಿಡಬೇಕೆಂದು ಒತ್ತಾಯಿಸಲಾಯಿತು.
      ರಾಜ್ಯದಲ್ಲಿ ಸುಮಾರು ೪೫ ವರ್ಷಗಳಿಂದ ಕಾರ್ಯಕರ್ತೆ ಮತ್ತು ಸಹಾಯಕಿಯರಾಗಿ ಕಾರ್ಯನಿರ್ವಹಿಸುತ್ತಿರುವವರನ್ನು ತಕ್ಷಣ ಕಾಯಂಗೊಳಿಸಬೇಕು. ನಿವೃತ್ತಿ ಹೊಂದಿರುವವರಿಗೆ ನಿವೃತ್ತಿ ವೇತನ ಜಾರಿಗೊಳಿಸಬೇಕು. ಎನ್‌ಪಿಎಸ್ ಯೋಜನೆಯ ಹಣ ತಕ್ಷಣ ನೀಡಬೇಕು. ಕೊರೋನಾ ವಾರಿಯರ್‍ಸ್‌ಗಳಾಗಿ ಸೇವೆ ಸಲ್ಲಿಸಿ ಮೃತಪಟ್ಟಿರುವ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಕುಟುಂಬಗಳಿಗೆ ತಕ್ಷಣ ಸರ್ಕಾರ ನಿಗದಿ ಪಡಿಸಿರುವಂತೆ ೩೦ ಲಕ್ಷ ರು. ಪರಿಹಾರ ನೀಡಬೇಕೆಂದು ಆಗ್ರಹಿಸಲಾಯಿತು.
      ಫೆಡರೇಷನ್ ಪ್ರಮುಖರಾದ ಸುಶೀಲಾ ಬದನೆಹಾಳ್, ಆರ್. ಭಾಗ್ಯಮಣಿ, ಕೆ.ಸಿ ವಿಶಾಲಾ, ಜಿ.ಕೆ ಸುಲೋಚನಾ ಮತ್ತು ಆರ್. ವೇದಾವತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕಾಮಕೇಳಿ ತಹಸೀಲ್ದಾರ್ ತಕ್ಷಣ ಸೇವೆಯಿಂದ ಅಮಾನತುಗೊಳಿಸಿ

ತಾಲೂಕು ಕಛೇರಿ ಮುಂಭಾಗ ಪ್ರತಿಭಟನಾ ಧರಣಿ : ಆಗ್ರಹ


ಪರಿಶಿಷ್ಟ ಜಾತಿ ಮಹಿಳೆಯನ್ನು ಲೌಂಗಿಕವಾಗಿ ಶೋಷಣೆ ಮಾಡಿರುವ ತಹಸೀಲ್ದಾರ್ ಎಚ್.ಸಿ ಶಿವಕುಮಾರ್‌ರವರನ್ನು ತಕ್ಷಣ ಸೇವೆಯಿಂದ ಅಮಾನತುಗೊಳಿಸಬೇಕೆಂದು ಆಗ್ರಹಿಸಿ ಸೋಮವಾರ ಭದ್ರಾವತಿ ತಾಲೂಕು ಕಛೇರಿ ಮುಂಭಾಗ ಪ್ರತಿಭಟನಾ ಧರಣಿ ನಡೆಸಲಾಯಿತು.
ಭದ್ರಾವತಿ: ಪರಿಶಿಷ್ಟ ಜಾತಿ ಮಹಿಳೆಯನ್ನು ಲೌಂಗಿಕವಾಗಿ ಶೋಷಣೆ ಮಾಡಿರುವ ತಹಸೀಲ್ದಾರ್ ಎಚ್.ಸಿ ಶಿವಕುಮಾರ್‌ರವರನ್ನು ತಕ್ಷಣ ಸೇವೆಯಿಂದ ಅಮಾನತುಗೊಳಿಸಬೇಕೆಂದು ಆಗ್ರಹಿಸಿ ಸೋಮವಾರ ತಾಲೂಕು ಕಛೇರಿ ಮುಂಭಾಗ ಪ್ರತಿಭಟನಾ ಧರಣಿ ನಡೆಸಲಾಯಿತು.
      ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ), ಎಂ.ಜೆ ಅಪ್ಪಾಜಿ ಅಭಿಮಾನಿಗಳ ಬಳಗ, ಪ್ರಗತಿಪರ ಸಂಘಟನೆಗಳು, ವಿವಿಧ ಸಮಾಜಗಳು, ಮಹಿಳಾ ಸಂಘಟನೆಗಳು, ರಾಜಕೀಯ ಪಕ್ಷಗಳ ಮುಖಂಡರ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಧರಣಿಯಲ್ಲಿ ತಹಸೀಲ್ದಾರ್ ಶಿವಕುಮಾರ್‌ರವರು ಮಾಡಿರುವ ತಪ್ಪಿಗೆ ಶಿಕ್ಷೆಯಾಗಲೇ ಬೇಕು. ಕೇವಲ ಕರ್ತವ್ಯದಿಂದ ಬಿಡುಗಡೆಗೊಳಿಸಿದರೆ ಸಾಲದು ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಸೇವೆಯಿಂದ ಅಮಾನತುಗೊಳಿಸಬೇಕು. ತಕ್ಷಣ ಅವರನ್ನು ಬಂಧಿಸಬೇಕೆಂದು ಆಗ್ರಹಿಸಲಾಯಿತು.
     ಟಿ.ಎಚ್ ಹಾಲೇಶಪ್ಪ, ಆರ್ ಕರುಣಾಮೂರ್ತಿ, ಎಚ್. ರವಿಕುಮಾರ್, ಬದರಿನಾರಾಯಣ್, ಎಸ್. ಮಂಜುನಾಥ್, ಕೆ. ಮಂಜುನಾಥ್, ಇಬ್ರಾಹಿಂ ಖಾನ್, ಬಸವರಾಜ ಆನೇಕೊಪ್ಪ, ಎಂ. ಕುಬೇಂದ್ರಪ್ಪ, ಉಮೇಶ್, ಎಂ. ಪಳನಿರಾಜ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಸೋಮವಾರ, ಸೆಪ್ಟೆಂಬರ್ 21, 2020

ಶಾಸಕ ಬಿ.ಕೆ ಸಂಗಮೇಶ್ವರ್ ಶೀಘ್ರ ಗುಣಮುಖರಾಗಲು ವಿಶೇಷ ಪೂಜೆ, ಪ್ರಾರ್ಥನೆ

ಶಾಸಕ ಬಿ.ಕೆ ಸಂಗಮೇಶ್ವರ್ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ಭದ್ರಾವತಿ ಹಳೇನಗರದ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
     ಭದ್ರಾವತಿ, ಸೆ. ೨೧: ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಕೊರೋನಾ ಸೋಂಕಿನ ಶೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ದೇವಸ್ಥಾನ, ದರ್ಗಾದಲ್ಲಿ ವಿಶೇಷ ಪೂಜೆ ಸೋಮವಾರ ಸಂಜೆ ನೆರವೇರಿಸಲಾಯಿತು.
      ಕೊರೋನಾ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಯಾವುದೇ ರೋಗ ಲಕ್ಷಣಗಳಿಲ್ಲದಿದ್ದರೂ ಸಹ ಭಾನುವಾರ ಸಂಜೆ ಶಾಸಕ ಬಿ.ಕೆ ಸಂಗಮೇಶ್ವರ್ ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲಾಗಿ ನಂತರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ರವರ ಸಲಹೆ ಮೇರೆಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ತೆರಳಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈ ನಡುವೆ ನಗರದಲ್ಲಿ ಕಾಂಗ್ರೆಸ್ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ದೇವರ ಪ್ರಾರ್ಥನೆಗೆ ಮೊರೆ ಹೋಗಿದ್ದಾರೆ.
     ಪಕ್ಷದ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಗ್ರಾಮಾಂತರ ಘಟಕದ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ ನೇತೃತ್ವದಲ್ಲಿ ಹಳೇನಗರದ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
    ಕೆಪಿಸಿಸಿ ಎಸ್.ಸಿ ಘಟಕದ ಸಂಚಾಲಕ ರಾಘವೇಂದ್ರ, ಮಹಿಳಾ ಘಟಕದ ಅಧ್ಯಕ್ಷೆ ಮಂಜುಳ ರಾಮಚಂದ್ರ, ರೇಣುಕಮ್ಮ, ಲೋಕೇಶ್, ಎಂ. ಶಿವಕುಮಾರ್, ಶೇಷಗಿರಿ, ರೂಪಾ ನಾರಾಯಣ, ಅಣ್ಣೋಜಿರಾವ್, ಶ್ರೀಧರ್, ಗೋಪಿ, ರಾಮಕೃಷ್ಣೇಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಶಾಸಕ ಬಿ.ಕೆ ಸಂಗಮೇಶ್ವರ್ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ಭದ್ರಾವತಿ ತರೀಕೆರೆ ರಸ್ತೆಯಲ್ಲಿರುವ ಸೈಯದ್ ಸಾದತ್ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.
     ಸೈಯದ್ ಸಾದತ್ ದರ್ಗಾದಲ್ಲಿ ಪ್ರಾರ್ಥನೆ:
    ನಗರದ ತರೀಕೆರೆ ರಸ್ತೆಯಲ್ಲಿರುವ ಸೈಯದ್ ಸಾದತ್ ದರ್ಗಾದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಶೀಘ್ರ ಗುಣಮುಖರಾಗಲಿ ಎಂದು ಮೌಲ್ವಿ ಆಸೀಪುಲ್ಲ ನೇತೃತ್ವದಲ್ಲಿ ಪ್ರಾರ್ಥಿಸಲಾಯಿತು.
      ಮುಖಂಡರಾದ ಜೆಬಿಟಿ ಬಾಬು, ಟಿಪ್ಪು ಸುಲ್ತಾನ್, ಸಮೀವುಲ್ಲಾ, ಅಬ್ದುಲ್ ಖಾದರ್, ಜಾವಿದ್, ಮುಸ್ವೀರ್ ಬಾಷಾ, ಎನ್‌ಎಕೆ ಇಮ್ರಾನ್ ಖಾನ್, ಬಷೀರ್ ಅಹಮದ್, ಇಮ್ರಾನ್ ಜುಲೆಬಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.





ಭಾನುವಾರ, ಸೆಪ್ಟೆಂಬರ್ 20, 2020

ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಕೊರೋನಾ ಸೋಂಕು : ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲು

ಬಿ.ಕೆ ಸಂಗಮೇಶ್ವರ್
ಭದ್ರಾವತಿ, ಸೆ. ೨೦: ಶಾಸಕ ಬಿ.ಕೆ ಸಂಗಮೇಶ್ವರ್‌ಗೂ ಕೊರೋನಾ ಸೋಂಕು ತಗುಲಿದ್ದು, ಭಾನುವಾರ ಸಂಜೆ ದಿಢೀರನೆ ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
     ಕಳೆದ ೨ ದಿನಗಳ ಹಿಂದೆ ಮನೆಯಲ್ಲಿ ಕೆಲಸ ಮಾಡುವ ೪ ಮಂದಿ ಕೆಲಸಗಾರರಲ್ಲಿ ಕೊರೋನಾ ಇರುವುದು ದೃಢಪಟ್ಟಿತ್ತು. ಈ ಹಿನ್ನಲೆಯಲ್ಲಿ ಸಂಗಮೇಶ್ವರ್ ಮತ್ತು ಸಹೋದರ್ ಬಿ.ಕೆ ಮೋಹನ್ ನಿವಾಸಗಳನ್ನು ಸೀಲ್‌ಡೌನ್ ಮಾಡಲಾಗಿತ್ತು.
     ಈ ನಡುವೆ ಕೊರೋನಾ ತಪಾಸಣೆ ವರದಿಯಲ್ಲಿ ಸಂಗಮೇಶ್ವರ್‌ಗೆ ಸೋಂಕು ಇರುವುದು ಪತ್ತೆಯಾಗಿದೆ. ಈ ಹಿನ್ನಲೆಯಲ್ಲಿ ಶಿವಮೊಗ್ಗ ನಾರಾಯಣ ಹೃದಯಾಲಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ.