Thursday, October 15, 2020

ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಅಕ್ಕಿ ವಶ : ಪ್ರಕರಣ ದಾಖಲು

ಭದ್ರಾವತಿ, ಅ. ೧೫:  ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಅಕ್ಕಿಯನ್ನು ಹೊಸಮನೆ ಶಿವಾಜಿ ಸರ್ಕಲ್ ಠಾಣೆ ಪೊಲೀಸರು ಗುರುವಾರ ವಶಪಡಿಸಿಕೊಂಡಿರುವ ಘಟನೆ ನಡೆದಿದೆ.
     ನಗರದ ಹೊಸಮನೆ ವ್ಯಾಪ್ತಿಯ ಮೊದಲನೇ ತಿರುವಿನ ಮನೆಯೊಂದರಲ್ಲಿ ಸಂಗ್ರಹಿಸಲಾಗಿದ್ದ ಅಕ್ಕಿಯನ್ನು ಬೇರೆಡೆಗೆ ಸಾಗಿಸಲು ಲಾರಿಗೆ ತುಂಬುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದು, ಸುಮಾರು ೧.೮೦ ಲಕ್ಷ ರು. ಮೌಲ್ಯದ ಸುಮಾರು ೬೦ ಕ್ವಿಂಟಲ್ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ.
     ಸ್ಥಳಕ್ಕೆ ಠಾಣಾಧಿಕಾರಿ ಜಯಣ್ಣ, ಆಹಾರ ಇಲಾಖೆ ಅಧಿಕಾರಿ ಗಾಯತ್ರಿ ಸೇರಿದಂತೆ ಇನ್ನಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


ಮಹಾತ್ಮಗಾಂಧಿ ಕನಸು, ನನಸು ಮಾಡುವ ನಿಟ್ಟಿನಲ್ಲಿ ಗ್ರಾಮಾಭಿವೃದ್ಧಿ ಯೋಜನೆ

ಗಾಂಧಿಸ್ಮೃತಿ ಕಾರ್ಯಕ್ರಮದಲ್ಲಿ ಜಿಲ್ಲಾ ನಿರ್ದೇಶಕಿ ಗೀತಾ

ಭದ್ರಾವತಿ ಹಳೇನಗರದ ಬಲಿಜ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಜಿಲ್ಲಾ ಜನಜಾಗೃತಿ ವೇದಿಕೆ ಮತ್ತು ನವಜೀವನ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗಾಂಧಿಸ್ಮೃತಿ ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕಿ ಗೀತಾ ಪಾಲ್ಗೊಂಡು ಮಾತನಾಡಿದರು.
ಭದ್ರಾವತಿ, ಅ. ೧೫: ಮಹಾತ್ಮಗಾಂಧಿಯವರು ಕಂಡ ಕನಸು ನನಸು ಮಾಡುವ ನಿಟ್ಟಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಂದಾಗಿದೆ ಎಂದು ಯೋಜನೆ ಜಿಲ್ಲಾ ನಿರ್ದೇಶಕಿ ಗೀತಾ ತಿಳಿಸಿದರು.
      ಅವರು ಗುರುವಾರ ಹಳೇನಗರದ ಬಲಿಜ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಜಿಲ್ಲಾ ಜನಜಾಗೃತಿ ವೇದಿಕೆ ಮತ್ತು ನವಜೀವನ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗಾಂಧಿಸ್ಮೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
      ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಬದುಕು ನಮ್ಮೆಲ್ಲರಿಗೂ ಪ್ರೇರಣೆಯಾಗಿದ್ದು, ಅವರು ಕಂಡ ಬಹುಮುಖ್ಯವಾದ ೩ ಕನಸುಗಳಲ್ಲಿ ಸ್ವಚ್ಛ ಭಾರತ್ ಮತ್ತು ರಾಮರಾಜ್ಯದ ಪರಿಕಲ್ಪನೆ ಸಾಕಾರಗೊಳ್ಳುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗಡೆಯವರು ಗ್ರಾಮಾಭಿವೃದ್ಧಿ ಯೋಜನೆಯನ್ನು ಅಸ್ತಿತ್ವಕ್ಕೆ ತಂದರು. ಇದರ ಮೂಲಕ ಸ್ವಚ್ಛ ಗ್ರಾಮಗಳ ನಿರ್ಮಾಣ, ಗ್ರಾಮಗಳಲ್ಲಿ ಸ್ವ ಉದ್ಯೋಗಕ್ಕೆ ಹೆಚ್ಚಿನ ಆದ್ಯತೆ ನೀಡುವ ಜೊತೆಗೆ ಗುಡಿ ಕೈಗಾರಿಕೆ, ಹೈನುಗಾರಿಕೆ, ಕೃಷಿ ಸೇರಿದಂತೆ ಇನ್ನಿತರ ಚಟುವಟಿಕೆಗಳಲ್ಲಿ ಗ್ರಾಮೀಣ ಜನರು ತೊಡಗಿಸಿಕೊಳ್ಳುವಂತೆ ಮಾಡುತ್ತಿದೆ. ಅಲ್ಲದೆ ಮದ್ಯವರ್ಜನ ಶಿಬಿರಗಳನ್ನು ಆಯೋಜಿಸುವ ಮೂಲಕ ಮದ್ಯಪಾನ ನಿರ್ಮೂಲನೆ ಜೊತೆಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿ ಕೊಂಡಿದೆ ಎಂದರು.
     ಪ್ರಸ್ತುತ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಯೋಜನೆ ತನ್ನ ಕಾರ್ಯಕ್ರಮಗಳನ್ನು ಸೀಮಿತ ಚೌಕಟ್ಟಿನಲ್ಲಿ ಆಯೋಜಿಸಿಕೊಂಡು ಬರುತ್ತಿದ್ದು,  ಪ್ರತಿವರ್ಷದಂತೆ ಈ ಬಾರಿ ಮಹಾತ್ಮಗಾಂಧಿಯವರನ್ನು ಸ್ಮರಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಕಾರ್ಯಕ್ರಮ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
     ಹಿರಿಯ ನಗರಸಭಾ ಸದಸ್ಯ, ಜಿಲ್ಲಾ ಜನಜಾಗೃತಿ ವೇದಿಕೆಯ ಆರ್. ಕರುಣಾಮೂರ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಭವಿಷ್ಯದ  ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಹಲವು ಸಮಾಜಮುಖಿ ಕಾರ್ಯಗಳೊಂದಿಗೆ ಮುನ್ನಡೆಯುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಪ್ರತಿಯೊಬ್ಬರು ಯೋಜನೆಯ ಆಶಯಗಳನ್ನು ಅರಿತುಕೊಳ್ಳಬೇಕೆಂದರು.
    ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಪಾಲಕ್ಷಪ್ಪ, ತಾ.ಪಂ. ಮಾಜಿ ಸದಸ್ಯ ಹಾಜ್ಯನಾಯ್ಕ, ಹಿರಿಯ ನಗರಸಭಾ ಸದಸ್ಯ ಕೆ.ಎನ್ ಭೈರಪ್ಪಗೌಡ, ಗೊಂದಿ ಜಯರಾಂ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ತಾಲೂಕು ಯೋಜನಾಧಿಕಾರಿ ಕೆ. ಪ್ರಸಾದ್ ಸ್ವಾಗತಿಸಿದರು. ಕೃಷಿ ಅಧಿಕಾರಿ ಗೋವಿಂದಪ್ಪ ನಿರೂಪಿಸಿದರು. ಕಾರ್ಯಕ್ರಮದಲ್ಲಿ ನವ ಜೀವನ ಸಮಿತಿ ಸದಸ್ಯರು, ಯೋಜನೆಯ ಅಧಿಕಾರಿಗಳು, ಒಕ್ಕೂಟಗಳ ಪ್ರಮುಖರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಮದ್ಯದಂಗಡಿಗಳಲ್ಲಿ ಹೆಚ್ಚಿನ ದರ, ಮೈಕ್ರೋ ಫೈನಾನ್ಸ್‌ಗಳಿಂದ ಕಿರುಕುಳ : ಜೆಡಿಯು ಅಹೋರಾತ್ರಿ ಹೋರಾಟ

ಭದ್ರಾವತಿ ತಾಲೂಕಿನ ಮದ್ಯದಂಗಡಿಗಳಲ್ಲಿ ಹೆಚ್ಚಿನ ದರಕ್ಕೆ ಮದ್ಯ ಮಾರಾಟ ಮಾಡುತ್ತಿದ್ದರೂ ಸಹ ಯಾವುದೇ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಹಾಗು ಬಡ ಮಹಿಳೆಯರಿಗೆ ಕಿರುಕುಳ ನೀಡುತ್ತಿರುವ ಮೈಕ್ರೋ ಪೈನಾನ್ಸ್‌ಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜನಾತದಳ(ಸಂಯುಕ್ತ) ವತಿಯಿಂದ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ ನೇತೃತ್ವದಲ್ಲಿ ಗುರುವಾರ ತಾಲೂಕು ಕಛೇರಿ ಮಿನಿವಿಧಾನಸೌಧದ ಮುಂಭಾಗ ಅಹೋರಾತ್ರಿ ಹೋರಾಟ ಆರಂಭಿಸಲಾಯಿತು.
ಭದ್ರಾವತಿ, ಅ. ೧೫: ತಾಲೂಕಿನ ಮದ್ಯದಂಗಡಿಗಳಲ್ಲಿ ಹೆಚ್ಚಿನ ದರಕ್ಕೆ ಮದ್ಯ ಮಾರಾಟ ಮಾಡುತ್ತಿದ್ದರೂ ಸಹ ಯಾವುದೇ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಹಾಗು ಬಡ ಮಹಿಳೆಯರಿಗೆ ಕಿರುಕುಳ ನೀಡುತ್ತಿರುವ ಮೈಕ್ರೋ ಪೈನಾನ್ಸ್‌ಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜನಾತದಳ(ಸಂಯುಕ್ತ) ವತಿಯಿಂದ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ ನೇತೃತ್ವದಲ್ಲಿ ಗುರುವಾರ ತಾಲೂಕು ಕಛೇರಿ ಮಿನಿವಿಧಾನಸೌಧದ ಮುಂಭಾಗ ಅಹೋರಾತ್ರಿ ಹೋರಾಟ ಆರಂಭಿಸಲಾಯಿತು.
        ತಾಲೂಕಿನ ಸಿಎಲ್ ೨ ಮದ್ಯದಂಗಡಿ ಮತ್ತು ಎಂಎಸ್‌ಐಎಲ್ ಮದ್ಯದಂಗಡಿಗಳಲ್ಲಿ ಸರ್ಕಾರ ನಿಗದಿಪಡಿಸಿರುವ ಎಂಆರ್‌ಪಿ ದರ ಪಡೆಯದೆ ಹೆಚ್ಚಿನ ದರ ಪಡೆಯಲಾಗುತ್ತಿದೆ. ಈ ಸಂಬಂಧ ಹಲವಾರು ಬಾರಿ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ. ಅಲ್ಲದೆ ಉಜ್ಜನಿಪುರ ಆನೆಕೊಪ್ಪದಲ್ಲಿರುವ ಎಂಎಸ್‌ಐಎಲ್ ಮದ್ಯದಂಗಡಿಯಿಂದ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗುತ್ತಿದ್ದು, ಈ ಮದ್ಯದಂಗಡಿ ಸ್ಥಳಾಂತರಿಸುವಂತೆ ಒತ್ತಾಯಿಸಲಾಗಿದೆ. ಅಲ್ಲದೆ ನಿವಾಸಿಗಳು ಅರ್ನಿಷ್ಟಾವಧಿ ಧರಣಿ ಸತ್ಯಾಗ್ರಹ ಸಹ ನಡೆಸಿರುತ್ತಾರೆ. ಆದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಶಶಿಕುಮಾರ್ ಎಸ್. ಗೌಡ ದೂರಿದರು.
      ಇದೆ ರೀತಿ ಮೈಕ್ರೋ ಫೈನಾನ್ಸ್‌ಗಳು ಸಾಲ ಪಡೆದಿರುವ ಬಡ ಮಹಿಳೆಯರಿಗೆ ತೊಂದರೆ ಕೊಡುತ್ತಿದ್ದು, ಕೊರೋನಾ ಸಂಕಷ್ಟದ ಸಮಯದಲ್ಲಿ ಒಂದೆಡೆ ಉದ್ಯೋಗವಿಲ್ಲದೆ, ಮತ್ತೊಂದೆಡೆ ಆರ್ಥಿಕ ವ್ಯವಸ್ಥೆ ಸಂಪೂರ್ಣ ಕುಸಿದು ಬಿದ್ದಿರುವ ಸಂದರ್ಭದಲ್ಲಿ ಸರ್ಕಾರದ ಆದೇಶವಿದ್ದರೂ ಸಹ ಬಲವಂತವಾಗಿ ಕಂತು ಪಾವತಿಸಿಕೊಳ್ಳಲಾಗುತ್ತಿದೆ. ಈ ಸಂಬಂಧ ಸಹ ಹಳೇನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ.  ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
      ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿ ಬಣ) ತಾಲೂಕು ಅಧ್ಯಕ್ಷ ಬಿ.ವಿ ಗಿರೀಶ್, ಮುಖಂಡರಾದ ಚಂದ್ರಶೇಖರ್, ಸಂಘಟನಾ ಕಾರ್ಯದರ್ಶಿ ಬಾಬು ದೀಪಕ್ ಕುಮಾರ್ ಸೇರಿದಂತೆ ಇನ್ನಿತರರು ಹೋರಾಟದಲ್ಲಿ ಪಾಲ್ಗೊಂಡಿದ್ದರು.

ಸಿಲಿಂಡರ್ ಸೋರಿಕೆ : ಬೆಂಕಿ ನಂದಿಸಿದ ಅಗ್ನಿಶಾಮಕ ಸಿಬ್ಬಂದಿ

ಭದ್ರಾವತಿ ಹೊಸಮನೆ ಭೋವಿ ಕಾಲೋನಿ ೬ನೇ ಕ್ರಾಸ್ ಮನೆಯೊಂದರಲ್ಲಿ ಅಡುಗೆ ಅನಿಲ ಸೋರಿಕೆಯಾದ ಪರಿಣಾಮ ಬೆಂಕಿ ಕಾಣಿಸಿಕೊಂಡಿರುವ ಘಟನೆ ನಡೆದಿದೆ.
ಭದ್ರಾವತಿ, ಅ. ೧೫: ನಗರದ ಹೊಸಮನೆ ಭೋವಿ ಕಾಲೋನಿ ೬ನೇ ಕ್ರಾಸ್ ಮನೆಯೊಂದರಲ್ಲಿ ಅಡುಗೆ ಅನಿಲ ಸೋರಿಕೆಯಾದ ಪರಿಣಾಮ ಬೆಂಕಿ ಕಾಣಿಸಿಕೊಂಡಿರುವ ಘಟನೆ ನಡೆದಿದೆ.
      ಭಾಗ್ಯ ಎಂಬುವರ ಮನೆಯಲ್ಲಿ ಅಡುಗೆ ಅನಿಲ ಸೋರಿಕೆಯಾಗಿದ್ದು, ಬೆಂಕಿ ಕಾಣಿಸಿಕೊಂಡ ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿದ ಆಗ್ನಿಶಾಮಕ ಇಲಾಖೆ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
     ಅಗ್ನಿಶಾಮಕ ಠಾಣಾಧಿಕಾರಿ ಎನ್. ವಸಂತಕುಮಾರ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಅಶೋಕ್ ಕುಮಾರ್, ಎಚ್.ಎಂ ಹರೀಶ್, ಕೆ.ಎಚ್ ರಾಜಾನಾಯ್ಕ್ ಮತ್ತು ಚಾಲಕರಾದ ಎಸ್.ಎಚ್ ಕುಮಾರ್,  ಸುರೇಶಾಚಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಹೆಚ್ಚಿನ ಅನಾಹುತ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

Wednesday, October 14, 2020

ಅ.೧೫ರಿಂದ ಅಹೋರಾತ್ರಿ ಹೋರಾಟಕ್ಕೆ ಸಹಕರಿಸಲು ಜೆಡಿಯು ಮನವಿ

 

ಭದ್ರಾವತಿ: ತಾಲೂಕಿನ ಮದ್ಯದಂಗಡಿಗಳಲ್ಲಿ ಹೆಚ್ಚಿನ ದರಕ್ಕೆ ಮದ್ಯ ಮಾರಾಟ ಮಾಡುತ್ತಿದ್ದರೂ ಸಹ ಯಾವುದೇ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಹಾಗು ಬಡ ಮಹಿಳೆಯರಿಗೆ ಕಿರುಕುಳ ನೀಡುತ್ತಿರುವ ಮೈಕ್ರೋ ಪೈನಾನ್ಸ್‌ಗಳ ವಿರುದ್ಧ ಹೋರಾಟ ನಡೆಸುವುದು ಅನಿವಾರ್ಯವಾಗಿದ್ದು, ಹೋರಾಟಕ್ಕೆ ತಾಲೂಕು ಆಡಳಿತ ಪೂರಕವಾಗಿ ಸ್ಪಂದಿಸಬೇಕೆಂದು ಜನಾತದಳ(ಸಂಯುಕ್ತ) ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ ಮತ್ತು ಸಂಘಟನಾ ಕಾರ್ಯದರ್ಶಿ ಬಾಬು ದೀಪಕ್ ಕುಮಾರ್ ಮನವಿ ಮಾಡಿದ್ದಾರೆ.
      ತಾಲೂಕಿನ ಸಿಎಲ್ ೨ ಮದ್ಯದಂಗಡಿ ಮತ್ತು ಎಂಎಸ್‌ಐಎಲ್ ಮದ್ಯದಂಗಡಿಗಳಲ್ಲಿ ಸರ್ಕಾರ ನಿಗದಿಪಡಿಸಿರುವ ಎಂಆರ್‌ಪಿ ದರ ಪಡೆಯದೆ ಹೆಚ್ಚಿನ ದರ ಪಡೆಯಲಾಗುತ್ತಿದೆ. ಈ ಸಂಬಂಧ ಹಲವಾರು ಬಾರಿ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ. ಅಲ್ಲದೆ ಉಜ್ಜನಿಪುರ ಆನೆಕೊಪ್ಪದಲ್ಲಿರುವ ಎಂಎಸ್‌ಐಎಲ್ ಮದ್ಯದಂಗಡಿಯಿಂದ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗುತ್ತಿದ್ದು, ಈ ಮದ್ಯದಂಗಡಿ ಸ್ಥಳಾಂತರಿಸುವಂತೆ ಒತ್ತಾಯಿಸಲಾಗಿದೆ. ಅಲ್ಲದೆ ನಿವಾಸಿಗಳು ಅರ್ನಿಷ್ಟಾವಧಿ ಧರಣಿ ಸತ್ಯಾಗ್ರಹ ಸಹ ನಡೆಸಿರುತ್ತಾರೆ. ಆದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.
        ಇದೆ ರೀತಿ ಮೈಕ್ರೋ ಫೈನಾನ್ಸ್‌ಗಳು ಸಾಲ ಪಡೆದಿರುವ ಬಡ ಮಹಿಳೆಯರಿಗೆ ತೊಂದರೆ ಕೊಡುತ್ತಿದ್ದು, ಕೊರೋನಾ ಸಂಕಷ್ಟದ ಸಮಯದಲ್ಲಿ ಒಂದೆಡೆ ಉದ್ಯೋಗವಿಲ್ಲದೆ, ಮತ್ತೊಂದೆಡೆ ಆರ್ಥಿಕ ವ್ಯವಸ್ಥೆ ಸಂಪೂರ್ಣ ಕುಸಿದು ಬಿದ್ದಿರುವ ಸಂದರ್ಭದಲ್ಲಿ ಸರ್ಕಾರದ ಆದೇಶವಿದ್ದರೂ ಸಹ ಬಲವಂತವಾಗಿ ಕಂತು ಪಾವತಿಸಿಕೊಳ್ಳಲಾಗುತ್ತಿದೆ. ಈ ಸಂಬಂಧ ಸಹ ಹಳೇನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ.
        ಜನರ ಹಿತದೃಷ್ಟಿಯಿಂದ ಹೋರಾಟ ನಡೆಸುವುದು ಅನಿವಾರ್ಯವಾಗಿದ್ದು, ತಾಲೂಕು ಕಛೇರಿ ಮುಂಭಾಗ ಅ.೧೫ರಿಂದ ಹಮ್ಮಿಕೊಳ್ಳಲಾಗಿರುವ ಅಹೋರಾತ್ರಿ ಹೋರಾಟಕ್ಕೆ ತಹಸೀಲ್ದಾರ್‌ರವರು ಪೂರಕವಾಗಿ ಸ್ಪಂದಿಸಬೇಕು. ಇದೆ ರೀತಿ ಪೊಲೀಸ್ ನಗರ ವೃತ್ತ ನಿರೀಕ್ಷಕರು ಸಹ ಹೋರಾಟಕ್ಕೆ ಹೆಚ್ಚಿನ ಸಹಕಾರ ನೀಡಬೇಕೆಂದು ಕೋರಲಾಗಿದೆ.

ದಸರಾ ಈ ಬಾರಿ ಜನ ಜಾಗೃತಿ ಹಬ್ಬ : ಪೌರಾಯುಕ್ತ ಮನೋಹರ್


ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಮಂಗಳವಾರ ನಾಡಹಬ್ಬ ದಸರಾ ಅಂಗವಾಗಿ ಆಯೋಜಿಸಲಾಗಿದ್ದ ಸಭೆಯಲ್ಲಿ ಪೌರಾಯುಕ್ತ ಮನೋಹರ್ ಮಾತನಾಡಿದರು.
ಭದ್ರಾವತಿ: ವಿಶ್ವದಾದ್ಯಂತ ಕೋವಿಡ್-೧೯ ವ್ಯಾಪಿಸುವ ಮೂಲಕ ಶ್ರೀಸಾಮಾನ್ಯರ ಬದುಕನ್ನು ದುಸ್ತರಗೊಳಿಸಿದ್ದು, ಈ ನಡುವೆ ಎಲ್ಲಾ ಸಂಕಷ್ಟಗಳಿಂದ ನಮ್ಮನ್ನು ದೂರ ಮಾಡುವಂತಾಗಲಿ ಎಂಬ ಆಶಯದೊಂದಿಗೆ ಈ ಬಾರಿ ನಗರಸಭೆ ಆಡಳಿತದಿಂದ ಅತ್ಯಂತ ಸರಳವಾಗಿ ೯ ದಿನಗಳ ಕಾಲ ನಾಡಹಬ್ಬ ದಸರಾ ಆಚರಿಸಲಾಗುತ್ತಿದೆ ಎಂದು ಪೌರಾಯುಕ್ತ ಮನೋಹರ್ ತಿಳಿಸಿದರು. 

        ನಾಡಹಬ್ಬ ದಸರಾ ಹಿನ್ನಲೆಯಲ್ಲಿ ಮಂಗಳವಾರ ನಗರಸಭೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಮಾತನಾಡಿದ ಪೌರಾಯುಕ್ತರು ಈ ಬಾರಿ ನಾಡಹಬ್ಬವನ್ನು ಜನ ಜಾಗೃತಿ ಹಬ್ಬವಾಗಿ ಆಚರಿಸಲಿದ್ದು, ಇದಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳಲಾಗಿದೆ. ಅ.೧೭ರಂದು ಬೆಳಿಗ್ಗೆ ೧೦.೩೦ಕ್ಕೆ ಗ್ರಾಮ ದೇವತೆ ಶ್ರೀ ಹಳದಮ್ಮ ದೇವಸ್ಥಾನದ ಪ್ರಾಂಗಣದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಶಾಸಕ ಬಿ.ಕೆ ಸಂಗಮೇಶ್ವರ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದರು.
       ಅ.೧೮ರಂದು ಬೆಳಿಗ್ಗೆ ೧೦ ಗಂಟೆಗೆ ಕೊರೋನಾ ಜಾಗೃತಿ ನಡಿಗೆ ಆಯೋಜಿಸಲಾಗಿದ್ದು, ಅ.೧೯ರಂದು ಸಂಜೆ ೪ ಗಂಟೆಗೆ ಕೊರೋನಾ ಬಾಧಕ ಕುರಿತ ಅನುಭವ, ಅನಿಸಿಕೆ, ಅಭಿಪ್ರಾಯಗಳನ್ನೊಳಗೊಂಡ ಕವನಗಳನ್ನು ಸ್ಥಳದಲ್ಲಿಯೇ ಸ್ವರಚಿಸಿ ವಾಚನ ಮಾಡುವ ಸ್ಪರ್ಧೆ ನಡೆಯಲಿದೆ. ಪ್ರಥಮ ೩ ಮಂದಿಗೆ ಬಹುಮಾನಗಳನ್ನು ನೀಡಲಿದ್ದು, ಗರಿಷ್ಠ ೧೦೦ ಮಂದಿ ಮಾತ್ರ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿ ಹಾಗು ಹೆಸರು ನೋಂದಾಯಿಸಲು ಈಶ್ವರಪ್ಪ, ಮೊ: ೯೮೮೦೧೯೦೪೪೧ ಸಂಖ್ಯೆಗೆ ಕರೆ ಮಾಡಬಹುದಾಗಿದೆ ಎಂದರು.
        ಅ.೨೦ರಂದು ಬೆಳಿಗ್ಗೆ ೧೧ ಗಂಟೆಗೆ ರಂಗೋಲಿ ಮೂಲಕ ಜನಾರೋಗ್ಯ ಸಂದೇಶ ಸಾರುವ ನಿಟ್ಟಿನಲ್ಲಿ 'ದಸರೆಯ ಸ್ವಚ್ಛ ಸುಂದರ  ರಂಗೋಲಿ' ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಗರಿಷ್ಠ ೫೦ ಮಂದಿ ಮಾತ್ರ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿ ಹಾಗು ಹಿಸರು ನೋಂದಾಯಿಸಲು ಶಾಂತಕುಮಾರಿ, ಮೊ: ೯೫೩೫೩೨೬೨೮೪ ಸಂಖ್ಯೆಗೆ ಕರೆ ಮಾಡಬಹುದಾಗಿದೆ ಎಂದರು.
             ಅ.೨೧ರಂದು ಬೆಳಿಗ್ಗೆ ೧೧ ಗಂಟೆಗೆ ಜನಾರೋಗ್ಯ ಕಾಡುವಂತಹ ಆಹಾರ ತಯಾರಿಕೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ 'ಅಡುಗೆ-ಆರೋಗ್ಯ' ಸ್ಪರ್ಧೆಯನ್ನು ನ್ಯೂಟೌನ್ ಬಂಟರ ಭವನದಲ್ಲಿ ಆಯೋಜಿಸಲಾಗಿದ್ದು, ಗರಿಷ್ಠ ೫೦ ಮಂದಿ ಮಾತ್ರ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿ ಹಾಗು ಹೆಸರು ನೋಂದಾಯಿಸಲು ಸುವಾಸಿನಿ, ಮೊ: ೯೪೮೧೦೬೩೩೯೨ ಸಂಖ್ಯೆಗೆ ಹಾಗು ಅ.೨೨ರಂದು ಮಧ್ಯಾಹ್ನ ೩ ಗಂಟೆಗೆ ಹಳೇನಗರದ ಬಲಿಜ ಸಮುದಾಯ ಭವನದಲ್ಲಿ ಕೊರೋನಾ ಜಾಗೃತಿ ಮೂಡಿಸುವ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ. ಗರಿಷ್ಠ ೫೦ ಮಂದಿ ಮಾತ್ರ ಭಾಗವಹಿಸಬಹುದಾಗಿದ್ದು, ಹೆಚ್ಚಿನ ಮಾಹಿತಿ ಹಾಗು ಹೆಸರು ನೋಂದಾಯಿಸಲು ನರಸಿಂಹಮೂರ್ತಿ, ಮೊ: ೯೪೪೯೧೨೪೮೮೮  ಕರೆ ಮಾಡಬಹುದಾಗಿದೆ ಎಂದರು.


        ಅ.೨೩ರಂದು ಮಧ್ಯಾಹ್ನ ೩ ಗಂಟೆಗೆ ನ್ಯೂಟೌನ್ ಬಂಟರ ಭವನದಲ್ಲಿ ಭಾಷಣ ಸ್ಪರ್ಧೆ ಆಯೋಜಿಸಲಾಗಿದ್ದು, ಗರಿಷ್ಠ ೫೦ ಮಂದಿ ಮಾತ್ರ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿ ಹಾಗು ಹೆಸರು ನೋಂದಾಯಿಸಲು ಮೊ: ೯೦೩೬೭೫೧೬೯೯ ಸಂಖ್ಯೆಗೆ ಕರೆ ಮಾಡಬಹುದಾಗಿದ್ದು, ಅ.೨೪ರಂದು ಮಧ್ಯಾಹ್ನ ೩ ಗಂಟಗೆ ನಗರಸಭೆ ಸಭಾಂಗಣದಲ್ಲಿ ಕಳೆದ ೬ ತಿಂಗಳಿನಿಂದ ಕರ್ತವ್ಯ ನಿರ್ವಹಿಸುತ್ತಿರುವ ಕೊರೋನಾ ವಾರಿರ್ಯಸ್‌ಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.  ಉಳಿದಂತೆ ಅ.೨೫ ರಂದು ಆಯುಧ ಪೂಜೆ, ೨೬ರಂದು ಶಮಿಪೂಜೆ ಪ್ರತಿವರ್ಷದಂತೆ ಈ ಬಾರಿ ಸಹ ನಡೆಯಲಿವೆ. ಆದರೆ ಯಾವುದೇ ರೀತಿ ವೈಭವದ ಆಚರಣೆಗಳಿರುವುದಿಲ್ಲ ಎಂದು ಪೌರಾಯುಕ್ತರು ಸ್ಪಷ್ಟಪಡಿಸಿದರು.
        ಸಭೆಯಲ್ಲಿ ಕಂದಾಯಾಧಿಕಾರಿ ರಾಜ್‌ಕುಮಾರ್, ಇಂಜಿನಿಯರ್ ರಂಗರಾಜಪುರೆ, ಲೆಕ್ಕಾಧಿಕಾರಿ ಸೈಯದ್ ಮೆಹಬೂಬ್ ಆಲಿ ಸೇರಿದಂತೆ ವಿವಿಧ ವಿಭಾಗಗಳ ಅಧಿಕಾರಿಗಳು, ಅಗ್ನಿಶಾಮಕ ಇಲಾಖೆ ಠಾಣಾಧಿಕಾರಿ ವಸಂತ್‌ಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.



Sunday, October 11, 2020

ವಿದ್ಯುತ್ ತಗುಲಿ ಯುವತಿ ಸಾವು

     ಸಿಂಧೂ
ಭದ್ರಾವತಿ, ಅ. ೧೧: ಆಕಸ್ಮಿಕವಾಗಿ ವಿದ್ಯುತ್ ತಗುಲಿದ ಪರಿಣಾಮ ಯುವತಿಯೋರ್ವಳು ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ.
    ತಳ್ಳಿಕಟ್ಟೆ ಗ್ರಾಮದ ವಸಂತ್ ಎಂಬುವರ ಪುತ್ರಿ ಸಿಂಧೂ ಮೃತಪಟ್ಟಿದ್ದು, ಮನೆಯಲ್ಲಿ ಆಕಸ್ಮಿಕವಾಗಿ ವಿದ್ಯುತ್ ತಗುಲಿದೆ ಎನ್ನಲಾಗಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.