Friday, October 30, 2020

ನಾಯ್ಡು ಸಮಾಜದ ಸಮುದಾಯಭವನದ ಮುಂದುವರೆದ ಕಾಮಗಾರಿಗೆ ಭೂಮಿಪೂಜೆ

ಭದ್ರಾವತಿಯಲ್ಲಿ ನಾಯ್ಡು ಸಮಾಜದ ಸಮುದಾಯಭವನದ ಮುಂದುವರೆದ ಕಾಮಗಾರಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ಭೂಮಿಪೂಜೆ ನೆರವೇರಿಸಿದರು.
ಭದ್ರಾವತಿ, ಅ. ೩೦: ನಗರದ ಬಿ.ಹೆಚ್ ರಸ್ತೆ ಗೌಳಿಗರ ಬೀದಿ ಶ್ರೀರಾಮ ಮಂದಿರ ಆವರಣದಲ್ಲಿ ನಾಯ್ಡು ಸಮಾಜದ ವತಿಯಿಂದ ನಿರ್ಮಿಸಲಾಗುತ್ತಿರುವ ಸಮುದಾಯ ಭವನದ ಮುಂದುವರೆದ ಕಾಮಗಾರಿಗೆ ಶಿವಮೊಗ್ಗ ಲೋಕಸಭಾ ಸದಸ್ಯರ ನಿಧಿsಯಿಂದ ರು. ೨೫ ಲಕ್ಷ ಬಿಡುಗಡೆಯಾಗಿದ್ದು,  ಶಾಸಕ ಬಿ.ಕೆ. ಸಂಗಮೇಶ್ವರ್ ಭೂಮಿಪೂಜೆ ನೆರವೇರಿಸಿದರು.
     ಬಿಜೆಪಿ ಪಕ್ಷದ ಮುಖಂಡರಾದ ವಿ. ಕದಿರೇಶ್, ಟಿ. ವೆಂಕಟೇಶ್, ಆನಂದ್, ಮಂಗೋಟೆ ರುದ್ರೇಶ್, ನಾಯ್ಡು ಸಮಾಜದ ಗೌರವಾಧ್ಯಕ್ಷರಾದ ಎಸ್. ಮೋಹನ್‌ನಾಯ್ಡು, ಅಧ್ಯಕ್ಷ ವಿ. ಗೋವಿಂದ್‌ರಾಜ್, ಕಾರ್ಯದರ್ಶಿ ಬಿ.ವಿ ಗಿರಿನಾಯ್ಡು, ಉಪಾಧ್ಯಕ್ಷರಾದ ಪ್ರಭಾಕರ್. ಖಜಾಂಚಿ ಇಂದು ಶೇಖರ್, ಮೋಹನ್, ಜಯಕುಮಾರ್, ಚಲುವರಾಜ್, ವಾಸು, ಪಿ.ಎಸ್ ಬಾಬು, ಮುನಿಸ್ವಾಮಿ, ಬಾಲಚಂದ್ರ ಮುಂತಾದವರು ಉಪಸ್ಥಿತರಿದ್ದರು.


ನಗರಸಭೆ ಕಾರ್ಯಾಚರಣೆ : ಬೀದಿಬದಿ ಮೀನು ವ್ಯಾಪಾರಿಗಳ ತೆರವು

ಭದ್ರಾವತಿಯಲ್ಲಿ ಪ್ರಮುಖ ರಸ್ತೆಗಳ ಬೀದಿಬದಿ ಮೀನು ವ್ಯಾಪಾರಿಗಳನ್ನು ಶುಕ್ರವಾರ ನಗರಸಭೆ ವತಿಯಿಂದ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿರುವ ಘಟನೆ ನಡೆಯಿತು.
ಭದ್ರಾವತಿ, ಅ. ೩೦: ನಗರದ ಪ್ರಮುಖ ರಸ್ತೆಗಳ ಬೀದಿಬದಿ ಮೀನು ವ್ಯಾಪಾರಿಗಳನ್ನು ಶುಕ್ರವಾರ ನಗರಸಭೆ ವತಿಯಿಂದ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿರುವ ಘಟನೆ ನಡೆಯಿತು.
     ಮೀನುಗಾರರ ಬೀದಿ ಬಿ.ಎಚ್ ರಸ್ತೆ ದುರ್ಗಾ ನರ್ಸಿಂಗ್ ಹೋಂ ಬಳಿ ಹಾಗು  ಉಂಬ್ಳೆಬೈಲು ರಸ್ತೆ ಮೆಸ್ಕಾಂ ಕಛೇರಿ ಸಮೀಪದಲ್ಲಿ ಪ್ರತಿ ದಿನ ಬೀದಿ ಬದಿ ಹಸಿ ಮೀನು ಮಾರಾಟ ನಡೆಸಲಾಗುತ್ತಿತ್ತು. ಇದರಿಂದ ರಸ್ತೆಯಲ್ಲಿ ಸಂಚರಿಸುವವರು, ಸಮೀಪದ ಅಂಗಡಿ ಮುಂಗಟ್ಟುಗಳ ವ್ಯಾಪಾರಸ್ಥರು, ಮೆಸ್ಕಾಂ ಸಿಬ್ಬಂದಿಗಳು ಹಾಗು ಸಮೀಪದ ನಿವಾಸಿಗಳು ತೊಂದರೆ ಅನುಭವಿಸುವಂತಾಗಿತ್ತು. ಅಲ್ಲದೆ ಸುತ್ತಮುತ್ತಲ ಪರಿಸರದಲ್ಲಿ ಸ್ವಚ್ಛತೆ ಇಲ್ಲದೆ ಇರುವುದು ಕಂಡು ಬರುತ್ತಿತ್ತು. 


       ಈ ಹಿನ್ನಲೆಯಲ್ಲಿ ನಗರಸಭೆ ಇಂಜಿನಿಯರ್ ಪ್ರಸಾದ್, ಹಿರಿಯ ಆರೋಗ್ಯ ನಿರೀಕ್ಷಕ ಆರ್.ಬಿ ಸತೀಶ್ ಹಾಗು ಸೂಪರ್ ವೈಸರ್ ಎನ್. ಗೋವಿಂದ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ತೆರವುಗೊಳಿಸುವಲ್ಲಿ ಯಶಸ್ವಿಯಾಯಿತು.

ಈದ್ ಮಿಲಾದ್ : ಮುಸ್ಲಿಂ ಯುವಕರಿಂದ ಹಣ್ಣು-ಹಂಪಲು ವಿತರಣೆ

ಭದ್ರಾವತಿಯಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮುಸ್ಲಿಂ ಸಮುದಾಯದ ಯುವಕರ ತಂಡ ಶುಕ್ರವಾರ ನಗರದ ವಿವಿಧೆಡೆ ಹಣ್ಣು-ಹಂಪಲು ವಿತರಿಸಿತು.
ಭದ್ರಾವತಿ, ಅ. ೩೦: ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮುಸ್ಲಿಂ ಸಮುದಾಯದ ಯುವಕರ ತಂಡ ಶುಕ್ರವಾರ ನಗರದ ವಿವಿಧೆಡೆ ಹಣ್ಣು-ಹಂಪಲು ವಿತರಿಸಿತು.
   ನೌಜವಾನ್ ಕಮಿಟಿ ಪ್ರಮುಖರಾದ ಸೈಯದ್ ಫೈರೋಜ್, ನೂರು ಅಹಮದ್, ಖಲೀದ್ ರಜಾ, ಅದಿಲ್ ಮತ್ತು ರಹೀಮ್ ಸೇರಿದಂತೆ ಇನ್ನಿತರರನ್ನೊಳಗೊಂಡ ತಂಡ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ, ನಿರ್ಮಲಾ ಆಸ್ಪತ್ರೆ ಒಳ ರೋಗಿಗಳಿಗೆ ಮತ್ತು ನ್ಯೂಟೌನ್ ಸಿದ್ಧಾರ್ಥ ಅಂಧರ ಕೇಂದ್ರದ ವಿಕಲಚೇತನರಿಗೆ ಹಣ್ಣು ಹಂಪಲುಗಳನ್ನು ವಿತರಿಸುವ ಮೂಲಕ ಹಬ್ಬದ ಶುಭಾಶಯ ಕೋರಿತು.
   ಕೊರೋನಾ ಸೋಂಕಿನ ಹಿನ್ನಲೆಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಬಹುತೇಕ ಮುಸ್ಲಿಂ ಸಂಘಟನೆಗಳು ಸರಳವಾಗಿ ಹಬ್ಬವನ್ನು ಆಚರಿಸಿದವು. ಆಯಾ ಭಾಗದಲ್ಲಿರುವ ಮಸೀದಿಗಳಲ್ಲಿ ಗುರುವಾರ ರಾತ್ರಿ ಧರ್ಮಗುರುಗಳ ನೇತೃತ್ವದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.
ಬಹುತೇಕ ಮಸೀದಿಗಳ ಬಳಿ ಮೆಕ್ಕಾ ಮದೀನ ಮಾದರಿಗಳನ್ನು ನಿರ್ಮಿಸಲಾಗಿತ್ತು.  ಮುಸ್ಲಿಂ ಸಮುದಾಯದವರು ಹೆಚ್ಚಾಗಿ ವಾಸಿಸುತ್ತಿರುವ ಪ್ರದೇಶಗಳಲ್ಲಿ ಈ ಬಾರಿ ಹಬ್ಬದ ಸಂಭ್ರಮ ಕ್ಷೀಣಿಸಿರುವುದು ಕಂಡು ಬಂದಿತು.

ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ನ.೨ರಂದು ಸಭೆ


ಭದ್ರಾವತಿ: ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣಕ್ಕೆ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಹೆಸರನ್ನು ನಾಮಕರಣಗೊಳಿಸುವಂತೆ ನಡೆಸುತ್ತಿರುವ ಹೋರಾಟದ ಮುಂದಿನ ಹಂತದ ಬಗ್ಗೆ ಚರ್ಚಿಸಲು ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ನ.೨ರಂದು ಬೆಳಿಗ್ಗೆ 11ಕ್ಕೆ   ಬಿ.ಎಚ್ ರಸ್ತೆ ಪದ್ಮ ನಿಲಯ ಹೋಟೆಲ್ ಸಭಾಂಗಣದಲ್ಲಿ ಸಭೆ ಕರೆಯಲಾಗಿದೆ.
         ಸಭೆಯನ್ನು ಮಾಜಿ ಶಾಸಕ ವೈಎಸ್‌ವಿ ದತ್ತಾ ಉದ್ಘಾಟಿಸಲಿದ್ದು, ಎಂ.ಜೆ ಅಪ್ಪಾಜಿ ಅಭಿಮಾನಿಗಳ ಬಳಗದ ಅಧ್ಯಕ್ಷ ಆರ್. ಕರುಣಾಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ. ಶಾರದ ಅಪ್ಪಾಜಿ, ಮುಖಂಡರಾದ ಕರಿಯಪ್ಪ, ಎಂ.ಎ ಅಜಿತ್ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ. 
      ನಗರದ ಎಲ್ಲಾ ಸಂಘ-ಸಂಸ್ಥೆಗಳ, ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಪಾಲ್ಗೊಂಡು ಸಲಹೆ, ಸೂಚನೆಗಳನ್ನು ನೀಡುವಂತೆ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಕೋರಿದ್ದಾರೆ.

ಪ್ರಧಾನ ಅಂಚೆ ಕಛೇರಿಯಲ್ಲಿ ಜಾಗೃತಿ ಸಪ್ತಾಹ : ಆಶು ಭಾಷಣ ಸ್ಪರ್ಧೆ

ಭದ್ರಾವತಿ ಪ್ರಧಾನ ಅಂಚೆ ಕಛೇರಿಯಲ್ಲಿ ಜಾಗೃತಿ ಸಪ್ತಾಹದ ಅಂಗವಾಗಿ ನೌಕರರ ಜಾಗೃತಿ ಕುರಿತ ವಿಶೇಷ ಆಶು ಭಾಷಣ ಸ್ಪರ್ಧೆ ಆಯೋಜಿಸಲಾಗಿತ್ತು.
ಭದ್ರಾವತಿ: ನಗರದ ಪ್ರಧಾನ ಅಂಚೆ ಕಛೇರಿಯಲ್ಲಿ ಜಾಗೃತಿ ಸಪ್ತಾಹದ ಅಂಗವಾಗಿ ನೌಕರರ ಜಾಗೃತಿ ಕುರಿತ ವಿಶೇಷ ಆಶು ಭಾಷಣ ಸ್ಪರ್ಧೆ ಆಯೋಜಿಸಲಾಗಿತ್ತು.
     ವಿಐಎಸ್‌ಎಸ್‌ಜೆ ಸರ್ಕಾರಿ ಪಾಲಿಟೆಕ್ನಿಕ್ ವಿದ್ಯುತ್ ಮತ್ತು ವಿದ್ಯುನ್ಮಾನ ವಿಭಾಗದ ಅಧಿಕಾರಿ ಎಚ್.ಆರ್ ಶ್ರೀಧರೇಶ್ ಭಾರದ್ವಾಜ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಸದ್ಗುಣಗಳಿಂದ ನಾಗರೀಕ ಸಮಾಜದ ಪ್ರಜ್ಞಾವಂತ ಪ್ರಜೆಗಳಾಗಿ ಬದುಕುವ ಜೊತೆಗೆ ಭ್ರಷ್ಟಾಚಾರ ನಿರ್ಮೂಲನೆಯಲ್ಲಿ ನೌಕರರ ಜವಾಬ್ದಾರಿ ಕುರಿತು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಧಾನ ಅಂಚೆ ಪಾಲಕ ವಿ. ಶಶಿಧರ್ ಮಾತನಾಡಿ, ಅಂಚೆ ಕಛೇರಿಯ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಜೊತೆಗೆ ಸಮಾಜದಲ್ಲಿ ಅಂಚೆ ಇಲಾಖೆಯ ಮಹತ್ವ ವಿವರಿಸಿದರು.  
     ಪಾಲಿಟೆಕ್ನಿಕ್ ಹಿರಿಯ ಶ್ರೇಣಿ ಉಪನ್ಯಾಸಕ ಬಾಲಸುಬ್ರಮಣ್ಯ ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ಸುಮಾರು ೩೫ ಮಂದಿ ಅಂಚೆ ನೌಕರರು ಪಾಲ್ಗೊಂಡಿದ್ದರು. ನೌಕರರಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
     ನಿತ್ಯಾನಂದ ನಾಯಕ್ ಪ್ರಾರ್ಥಿಸಿದರು. ನಾಗರಾಜ್ ಪೂಜಾರ್ ಸ್ವಾಗತಿಸಿದರು. ಉದಯ ಆಚಾರ್ ನಿರೂಪಿಸಿದರು.

ಅಗ್ನಿಶಾಮಕ, ಗೃಹರಕ್ಷಕದಳ ಸಿಬ್ಬಂದಿಗಳಿಂದ ಸ್ವಚ್ಛತಾ ಕಾರ್ಯ

ಭದ್ರಾವತಿ ನಗರಸಭೆ ಸಹಯೋಗದೊಂದಿಗೆ ಗುರುವಾರ ಹೊಸಬುಳ್ಳಾಪುರದ ಅಗ್ನಿಶಾಮಕ ಠಾಣೆ ಆವರಣದ ಸುತ್ತಲೂ ಹಾಗು ಹಿಂಭಾಗದ ರಸ್ತೆ, ಚರಂಡಿಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.
ಭದ್ರಾವತಿ: ನಗರಸಭೆ ಸಹಯೋಗದೊಂದಿಗೆ ಗುರುವಾರ ಹೊಸಬುಳ್ಳಾಪುರದ ಅಗ್ನಿಶಾಮಕ ಠಾಣೆ ಆವರಣದ ಸುತ್ತಲೂ ಹಾಗು ಹಿಂಭಾಗದ ರಸ್ತೆ, ಚರಂಡಿಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.
     ಠಾಣೆಯ ಹಿಂಭಾಗದ ರಸ್ತೆ ಮತ್ತು ಚರಂಡಿಗಳಲ್ಲಿ ಆಳೆತ್ತರಕ್ಕೆ ಬೆಳೆದು ನಿಂತ ಗಿಡ ಗಂಟೆಗಳನ್ನು ತೆಗೆದು ಸ್ವಚ್ಛಗೊಳಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು. ಅಗ್ನಿಶಾಮಕ ಠಾಣಾಧಿಕಾರಿ ಎನ್. ವಸಂತಕುಮಾರ್ ನೇತೃತ್ವದಲ್ಲಿ ಅಗ್ನಿಶಾಮಕ ಹಾಗೂ ಗೃಹರಕ್ಷಕದಳ ಸಿಬ್ಬಂದಿಗಳು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

Wednesday, October 28, 2020

ಯಂತ್ರ ಶ್ರೀ ಯೋಧರ ತರಬೇತಿ ಕಾರ್ಯಾಗಾರ .

ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಹೋಬಳಿ  ಕೃಷಿ ಯಂತ್ರಧಾರೆ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ  ಯಂತ್ರ ಶ್ರೀ ಯೋಧರ ತರಬೇತಿ ಕಾರ್ಯಾಗಾರ ನಡೆಯಿತು.
ಭದ್ರಾವತಿ, ಅ. ೨೮:  ತಾಲೂಕಿನ ಕೂಡ್ಲಿಗೆರೆ ಹೋಬಳಿ  ಕೃಷಿ ಯಂತ್ರಧಾರೆ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ  ಯಂತ್ರ ಶ್ರೀ ಯೋಧರ ತರಬೇತಿ ಕಾರ್ಯಾಗಾರ ನಡೆಯಿತು.
    ಯೋಜನಾಧಿಕಾರಿ ಸುಧೀರ ಜೈನ್ ಕಾರ್ಯಾಗಾರ ಉದ್ಘಾಟಿಸಿದರು. ರೈತರಿಗೆ ಕಡಿಮೆ ಖರ್ಚಿನಲ್ಲಿ ಭತ್ತದ ಬೇಸಾಯ ಯಂತ್ರದ ಮೂಲಕ ಅನುಷ್ಠಾನಗೊಳಿಸುವ ಬಗ್ಗೆ, ಭತ್ತದ ಬೀಜೋಪಚಾರ, ಟ್ರೇಗಳಲ್ಲಿ ಸಸಿಮಡಿ ತಯಾರಿ ಹಾಗೂ ಯಂತ್ರದ ಮೂಲಕ ಭತ್ತ ನಾಟಿ ಸೇರಿದಂತೆ ಇನ್ನಿತರ ಮಾಹಿತಿ ನೀಡಲಾಯಿತು.
     ಕೃಷಿ ಯಂತ್ರಧಾರೆ ಯೋಜನಾಧಿಕಾರಿ ನಿಂಗಪ್ಪ ಅಗಸರ ಯಂತ್ರಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಾಗಾರದಲ್ಲಿ ಭದ್ರಾವತಿ, ತರೀಕೆರೆ, ಕೊಪ್ಪ, ಶೃಂಗೇರಿ ಮತ್ತು ಎನ್.ಆರ್ ಪುರ ತಾಲೂಕಿನ ಆಯ್ದ ೨೦ ಮಂದಿ ಯಂತ್ರ ಶ್ರೀ ಯೋಧರು ಭಾಗವಹಿಸಿದರು. ಯಂತ್ರದ ಮೂಲಕ ಭತ್ತದ ಬೆಳೆ ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವ ಕೃಷಿಕರಾದ ತಾಲೂಕಿನ ದೊಡ್ಡೇರಿ ಶ್ರೀರಾಮು ಮತ್ತು ಬಾಳೆಕಟ್ಟೆ ಅನಸೂಯಮ್ಮ ಪಾಲ್ಗೊಂಡಿದ್ದರು. ವಿವಿಧ ತಾಲೂಕಿನ ಕೃಷಿ ಅಧಿಕಾರಿಗಳು, ಕೃಷಿ ಯಂತ್ರಧಾರೆ ಪ್ರಬಂಧಕರು ಭಾಗವಹಿಸಿದ್ದರು.  ಗೋವಿಂದಪ್ಪ ನಿರೂಪಿಸಿದರು.  ಪ್ರಸನ್ನ ಕುಮಾರ ಸ್ವಾಗತಿಸಿದರು. ಉಮೇಶ ವಂದಿಸಿದರು.