Monday, December 14, 2020

ಡಿ.೧೬ರಂದು ಚುನಾವಣಾ ತರಬೇತಿ

ಜಿ. ಸಂತೋಷ್‌ಕುಮಾರ್
ಭದ್ರಾವತಿ, ಡಿ. ೧೪: ತಾಲ್ಲೂಕಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ ನಿಯೋಜಿಸಲಾಗಿರುವ ಮತಗಟ್ಟೆ ಅಧಿಕಾರಿ(ಪಿಆರ್‌ಓ, ಎಪಿಆರ್‌ಓ), ಸಿಬ್ಬಂದಿಗಳಿಗೆ ಡಿ.೧೬ರಂದು ತರಬೇತಿ ಹಮ್ಮಿಕೊಳ್ಳಲಾಗಿದೆ.
     ಹಳೇನಗರದ ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಬೆಳಿಗ್ಗೆ ೧೦.೩೦ಕ್ಕೆ ತರಬೇತಿ ಆರಂಭಗೊಳ್ಳಲಿದ್ದು, ಮತಗಟ್ಟೆ ಅಧಿಕಾರಿ(ಪಿಆರ್‌ಓ, ಎಪಿಆರ್‌ಓ), ಸಿಬ್ಬಂದಿಗಳು ತಪ್ಪದೇ ಪಾಲ್ಗೊಂಡು ಈ ಬಾರಿ ಗ್ರಾಮ ಪಂಚಾಯಿತಿ ಚುನಾವಣೆ ಯಶಸ್ವಿಗೊಳಿಸಲು ಸಹಕರಿಸುವಂತೆ  ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಕೋರಿದ್ದಾರೆ.

ವಚನ ಸಾಹಿತ್ಯ ಸಾಮಾಜಿಕ ಹೋರಾಟದ ಪರಿಕಲ್ಪನೆ : ಎಂ. ದಿವಾಕರ್

ಭದ್ರಾವತಿಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಿವೃತ್ತ ಪಶು ವೈದ್ಯ ಡಾ. ಜಿ.ಎಂ. ನಟರಾಜ್‌ರವರ ಸಹಕಾರದೊಂದಿಗೆ ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಸೊಮವಾರ ಹಮ್ಮಿಕೊಳ್ಳಲಾಗಿದ್ದ ಶಿವಲಿಂಗಮ್ಮ ಡಾ. ಜಿ.ಎಂ ಮುರುಗೇಂದ್ರಯ್ಯ ದತ್ತಿ ಕಾರ್ಯಕ್ರಮವನ್ನು ಪ್ರಾಂಶುಪಾಲ ಡಾ. ಜಿ.ಎಫ್ ಕುಟ್ರಿ ಉದ್ಘಾಟಿಸಿದರು.  
   ಭದ್ರಾವತಿ, ಡಿ. ೧೪: ೧೨ನೇ ಶತಮಾನದ ವಚನ ಸಾಹಿತ್ಯ ಧರ್ಮ, ಜಾತಿ, ಲಿಂಗಬೇಧ ಸೇರಿದಂತೆ ಸಮಾಜದಲ್ಲಿನ ಎಲ್ಲಾ ರೀತಿಯ ಅಸಮಾನತೆಗಳ ವಿರುದ್ಧದ ಹೋರಾಟದ ಪರಿಕಲ್ಪನೆಯಾಗಿದೆ ಎಂದು ಹಳೇನಗರದ ಸಂಚಿಯ ಹೊನ್ನಮ್ಮ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅಧ್ಯಾಪಕ ಎಂ. ದಿವಾಕರ್ ಹೇಳಿದರು.
   ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಿವೃತ್ತ ಪಶು ವೈದ್ಯ ಡಾ. ಜಿ.ಎಂ. ನಟರಾಜ್‌ರವರ ಸಹಕಾರದೊಂದಿಗೆ ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಸೊಮವಾರ ಹಮ್ಮಿಕೊಳ್ಳಲಾಗಿದ್ದ ಶಿವಲಿಂಗಮ್ಮ ಡಾ. ಜಿ.ಎಂ ಮುರುಗೇಂದ್ರಯ್ಯ ದತ್ತಿ ಕಾರ್ಯಕ್ರಮದಲ್ಲಿ ಅವರು ಸಾಹಿತ್ಯ ಮತ್ತು ಸಾಮಾಜಿಕ ನ್ಯಾಯ ಕುರಿತು ಉಪನ್ಯಾಸ ನೀಡಿದರು.
೧೨ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣ, ಅಕ್ಕಮಹಾದೇವಿ ಸೇರಿದಂತೆ ಅನೇಕ ವಚನಗಾರರು ಅಂದಿನ ವಾಸ್ತವಿಕ ಬದುಕನ್ನು ತಮ್ಮ ವಚನಗಳಲ್ಲಿ ತಿಳಿಸಿದ್ದಾರೆ. ಅನುಭವ ಮಂಟಪದ ಮೂಲಕ ಸಾಮಾಜಿಕ ನ್ಯಾಯದ ಪರಿಕಲ್ಪನೆಗಳನ್ನು ತೋರಿಸಿ ಕೊಟ್ಟಿದ್ದಾರೆ ಎಂದರು.
   ಕಾರ್ಯಕ್ರಮ ಉದ್ಘಾಟಿಸಿದ ಕಾಲೇಜಿನ ಪ್ರಾಂಶುಪಾಲ ಡಾ. ಜಿ.ಎಫ್ ಕುಟ್ರಿ ಮಾತನಾಡಿ, ನಾಡಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹೆಚ್ಚು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ. ಕನ್ನಡ ಸಾಹಿತ್ಯ, ಭಾಷೆ , ಸಂಸ್ಕೃತಿ ಉಳಿಯಬೇಕಾಗಿದೆ. ಪ್ರಸ್ತುತ ನಾವುಗಳು ಕನ್ನಡದಲ್ಲಿ ಮಾತನಾಡಲು ನಿರಾಸಕ್ತಿ ತೋರಿಸುತ್ತಿದ್ದೇವೆ.  ಸಾಹಿತ್ಯದಿಂದ ಭಾಷೆಯ ಬೆಳವಣಿಗೆ ಸಾಧ್ಯ. ಸಾಹಿತ್ಯಕ್ಕೆ ಅಪಾರವಾದ ಶಕ್ತಿ ಇದೆ ಎಂದರು.
    ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅಪೇಕ್ಷ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು.  ನಿವೃತ್ತ ಪಶುವೈದ್ಯ ಡಾ. ಜಿ.ಎಂ ನಟರಾಜ್, ಉಪ ಪ್ರಾಂಶುಪಾಲರಾದ ಟಿ.ಎಸ್ ಸುಮನ, ಅಧ್ಯಾಪಕ ಎಂ.ಬಿ ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
   ಕಸಾಪ ಕಾರ್ಯದರ್ಶಿ ಚನ್ನಪ್ಪ ಆಶಯ ನುಡಿಗಳನ್ನಾಡಿದರು., ಕಾರ್ಯದರ್ಶಿ ವೈ.ಕೆ ಹನುಮಂತಯ್ಯ, ಎ. ತಿಪ್ಪೇಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Sunday, December 13, 2020

ಡಿ.೧೫ರ ಮತಗಟ್ಟೆ ಅಧಿಕಾರಿ, ಸಿಬ್ಬಂದಿಗಳ ಕಾರ್ಯಾಗಾರ ಮುಂದೂಡಿಕೆ

ಭದ್ರಾವತಿ : ತಾಲ್ಲೂಕಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ ನಿಯೋಜಿಸಲಾಗಿರುವ ಮತಗಟ್ಟೆ ಅಧಿಕಾರಿ(ಪಿಆರ್‌ಓ, ಎಪಿಆರ್‌ಓ), ಸಿಬ್ಬಂದಿಗಳಿಗೆ ಡಿ.೧೫ ರಂದು ಹಮ್ಮಿಕೊಳ್ಳಲಾಗಿದ್ದ ತರಬೇತಿ ಕಾರ್ಯಾಗಾರ ಮುಂದೂಡಲಾಗಿದೆ ಎಂದು ತಹಸೀಲ್ದಾರ್ ಜೆ. ಸಂತೋಷ್‌ಕುಮಾರ್ ತಿಳಿಸಿದ್ದಾರೆ.
    ರಾಜ್ಯದ ಎಲ್ಲೆಡೆ ಡಿ.೧೫ರಂದು  ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ ಏಕಕಾಲದಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ತರಬೇತಿ ಕಾರ್ಯಾಗಾರ ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ


ಎಂಪಿಎಂ ನಿವೃತ್ತ ನೌಕರರ ಎ. ಜೋಸೆಫ್ ನಿಧನ

ಎ. ಜೋಸೆಫ್
ಭದ್ರಾವತಿ, ಡಿ. ೧೩: ನಗರದ ಮೈಸೂರು ಕಾಗದ ಕಾರ್ಖಾನೆ ನಿವೃತ್ತ ನೌಕರ, ಹಿರಿಯ ಛಾಯಾಗ್ರಾಹಕ ಎ. ಜೋಸೆಫ್(೬೬) ಭಾನುವಾರ ನಿಧನ ಹೊಂದಿದರು.
     ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಹೊಂದಿದ್ದರು. ತರುಣ ಭಾರತಿ ವಿದ್ಯಾಸಂಸ್ಥೆ, ವಿಕಸಂ ಕಲಾತಂಡ ಸೇರಿದಂತೆ ಇನ್ನಿತರ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಇವರ ನಿಧನಕ್ಕೆ ನಗರದ ಗಣ್ಯರು, ವಿವಿಧ ಸಂಘ ಸಂಸ್ಥೆಗಳು, ಎಂಪಿಎಂ ನಿವೃತ್ತ ನೌಕರರು, ಛಾಯಾಗ್ರಾಹಕರು ಸಂತಾಪ ಸೂಚಿಸಿದ್ದಾರೆ.

ಸಂವಿಧಾನ ಬದ್ಧ ಬೇಡಿಕೆಗಳಿಗಾಗಿ ಹೋರಾಟ ನಡೆಸುವುದು ನೌಕರರ ಹಕ್ಕು : ಟಿ. ಚಂದ್ರೇಗೌಡ

ಸರ್ಕಾರಿ ನೌಕರರು ಎಂದು ಪರಿಗಣಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರು ಭಾನುವಾರ ಭದ್ರಾವತಿ ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತದಲ್ಲಿ ನಡೆಸಿದ ೩ನೇ ದಿನದ ಮುಷ್ಕರದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ ಮಾತನಾಡಿದರು.
ಭದ್ರಾವತಿ, ಡಿ. ೧೩: ಸಂವಿಧಾನ ಬದ್ಧ ಬೇಡಿಕೆಗಳಿಗಾಗಿ ನೌಕರರು ಹೋರಾಟ ನಡೆಸುವುದು ಅವರ ಹಕ್ಕು. ಇದನ್ನು ಮೊಟಕುಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬ್ಲಾಕ್ ಕಾಂಗ್ರೆಸ್ ಸಮಿತಿ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ ಹೇಳಿದರು.
   ಸರ್ಕಾರಿ ನೌಕರರು ಎಂದು ಪರಿಗಣಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರು ಭಾನುವಾರ ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತದಲ್ಲಿ ನಡೆಸಿದ ೩ನೇ ದಿನದ ಮುಷ್ಕರದಲ್ಲಿ ಅವರು ಪಾಲ್ಗೊಂಡು ಕಾಂಗ್ರೆಸ್ ಪಕ್ಷದ ವತಿಯಿಂದ ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು.
    ನಮ್ಮ ಹಕ್ಕಗಳನ್ನು ಪಡೆದುಕೊಳ್ಳಲು ಹೋರಾಟ ನಡೆಸುವುದು ಅನಿವಾರ್ಯ. ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನೌಕರರು ನ್ಯಾಯಯುತವಾಗಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹೋರಾಟ ನಡೆಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಈ ಹೋರಾಟಕ್ಕೆ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಬೆಂಬಲ ವ್ಯಕ್ತಪಡಿಸಿದೆ ಎಂದರು.
   ಈ ಹಿಂದೆ ಅಸ್ತಿತ್ವದಲ್ಲಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯನ್ನು ವಿಭಜಿಸಿ ನಿಗಮಗಳನ್ನಾಗಿ ಮಾಡುವ ಮೂಲಕ ನೌಕರರನ್ನು ಅತಂತ್ರರನ್ನಾಗಿಸಲಾಗಿದೆ. ನೌಕರರನ್ನು ಕಾಯಂಗೊಳಿಸದೆ ಇದೀಗ ಹೋರಾಟ ನಡೆಸುತ್ತಿರುವ ನೌಕರರನ್ನು ಎಸ್ಮಾ ಕಾಯ್ದೆ ಮೂಲಕ ಬೆದರಿಸುವ ಕುತಂತ್ರ ನಡೆಸಲಾಗುತ್ತಿದೆ. ಇದಕ್ಕೆ ನೌಕರರು ಬೆದರುವ ಅಗತ್ಯವಿಲ್ಲ. ಸರ್ಕಾರ ಪೊಲೀಸರ ಮೂಲಕ ನಿಮ್ಮ ಮೇಲೆ ದೌರ್ಜನ್ಯ ನಡೆಸಲು ಮುಂದಾದಲ್ಲಿ ನಿಮ್ಮ ಯಾವುದೇ ರೀತಿಯ ಹೋರಾಟಕ್ಕೂ ನಾವು ಬೆಂಬಲ ನೀಡಲಿದ್ದೇವೆ ಎಂದರು.
    ನಗರಸಭಾ ಸದಸ್ಯ ಎಂ ಎ ಅಜಿತ್ ಸೇರಿದಂತೆ ಇನ್ನಿತರರು ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು. ಭದ್ರಾವತಿ ಘಟಕದ ಎಲ್ಲಾ ಕೆಎಸ್‌ಆರ್‌ಟಿಸಿ ನೌಕರರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು.

ಬಿಜೆಪಿ ಮಾಧ್ಯಮ ವಿಭಾಗದ ರಾಜ್ಯ ಸಮಿತಿ ಸದಸ್ಯರಾಗಿ ಅವಿನಾಶ್ ನೇಮಕ

ಅವಿನಾಶ್
ಭದ್ರಾವತಿ, ಡಿ. ೧೩: ಹಲವಾರು ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಗುರುತಿಸಿಕೊಂಡಿರುವ ನಗರದ ನಿವಾಸಿ ಅವಿನಾಶ್‌ರವರನ್ನು ರಾಜ್ಯ ಬಿಜೆಪಿ ಮಾಧ್ಯಮ ವಿಭಾಗದ ರಾಜ್ಯ ಸಮಿತಿ ಸದಸ್ಯರನ್ನಾಗಿ ನೇಮಕಗೊಳಿಸಲಾಗಿದೆ.
      ಎಂಬಿಎ ಪದವಿಧರರಾಗಿರುವ ಅವಿನಾಶ್ ಸಾಮಾಜಿಕ ಜಾಲತಾಣಗಳ ನಿರ್ವಹಣೆಯಲ್ಲೂ ಹೆಚ್ಚಿನ ಅನುಭವ ಹೊಂದಿದ್ದು, ಈಗಾಗಲೇ ಶಿವಮೊಗ್ಗ ಜಿಲ್ಲಾ ಸಾಮಾಜಿಕ ಜಾಲತಾಣ ವಿಭಾಗದ ಸಂಚಾಲಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
     ಇದೀಗ ರಾಜ್ಯ ಮಾಧ್ಯಮ ವಿಭಾಗದ ರಾಜ್ಯ ಸಮಿತಿ ಸದಸ್ಯರನ್ನಾಗಿ ಸಂಚಾಲಕ ಕರುಣಾಕರ ಖಾಸಲೆ ಹಾಗು ಸಹ ಸಂಚಾಲಕ ರಾಘವೇಂದ್ರ ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ. ಅವಿನಾಶ್‌ರವರಿಗೆ ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ವಿವಿಧ ಮೋರ್ಚಾ, ಶಕ್ತಿ ಕೇಂದ್ರಗಳ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಅಭಿನಂದಿಸಿದ್ದಾರೆ.

ಸಂಘಟನೆ ಕೆಲಸ ಸಮಾಜ ಸೇವೆ ಎಂದು ಭಾವಿಸಿಕೊಳ್ಳಿ : ಡಾ. ಅನುರಾಧ ಪಟೇಲ್


ಭದ್ರಾವತಿ ಅಪ್ಪರ್ ಹುತ್ತಾದಲ್ಲಿರುವ ಕೆಂಪೇಗೌಡ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಚುಂಚಾದ್ರಿ ಮಹಿಳಾ ವೇದಿಕೆಯ ವಾರ್ಷಿಕ ಸಭೆ ಹಾಗೂ ೬೫ನೇ ಕನ್ನಡ ರಾಜ್ಯೋತ್ಸವ ಮತ್ತು ಮಾಜಿ ಶಾಸಕ ಎಂ.ಜೆ ಅಪ್ಪಾಜಿಯವರಿಗೆ ಭಾವಪೂರ್ಣ ನುಡಿನಮನ ಕಾರ್ಯಕ್ರಮದಲ್ಲಿ ವೇದಿಕೆ ಗೌರವಾಧ್ಯಕ್ಷೆ ಡಾ. ಅನುರಾಧ ಪಟೇಲ್‌ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
     ಭದ್ರಾವತಿ, ಡಿ. ೧೩: ಯಾವುದೇ ಸಂಘಟನೆಯಲ್ಲಿ ಭಿನ್ನಾಭಿಪ್ರಾಯವಿರಬಾರದು. ಎಲ್ಲರೂ ಒಗ್ಗಟ್ಟಿನಿಂದ ಮುನ್ನಡೆಯಬೇಕು. ಆಗ ಮಾತ್ರ ಸಂಘಟನೆ ಹೆಚ್ಚು ಶಕ್ತಿಯುತವಾಗಿ ರೂಪುಗೊಳ್ಳಲು ಸಾಧ್ಯ ಎಂದು ನಗರದ ಚುಂಚಾದ್ರಿ ಮಹಿಳಾ ವೇದಿಕೆ ಗೌರಾವಾಧ್ಯಕ್ಷೆ, ಡಿ. ದೇವರಾಜ ಅರಸು ಸಂಶೋಧನ ಸಂಸ್ಥೆ ನಿರ್ದೇಶಕಿ ಡಾ. ಅನುರಾಧ ಪಟೇಲ್ ಹೇಳಿದರು.
    ಅವರು ಭಾನುವರ ಅಪ್ಪರ್ ಹುತ್ತಾದಲ್ಲಿರುವ ಕೆಂಪೇಗೌಡ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ವೇದಿಕೆಯ ವಾರ್ಷಿಕ ಸಭೆ ಹಾಗೂ ೬೫ನೇ ಕನ್ನಡ ರಾಜ್ಯೋತ್ಸವ ಮತ್ತು ಮಾಜಿ ಶಾಸಕ ಎಂ.ಜೆ ಅಪ್ಪಾಜಿಯವರಿಗೆ ಭಾವಪೂರ್ಣ ನುಡಿನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
   ಸಂಘಟನೆಗಾಗಿ ಯಾರನ್ನು ಸಹ ಬೇಡಿಕೊಳ್ಳುವ ಮನಸ್ಥಿತಿ ರೂಪುಗೊಳ್ಳಬಾರದು. ಸಂಘಟನೆಯಲ್ಲಿರುವವರು ಸಂಘಟನೆ ಕೆಲಸ ಸಮಾಜ ಸೇವೆ ಎಂದು ಭಾವಿಸಿಕೊಳ್ಳಬೇಕು. ಸಮಾಜ ಸೇವೆಯಲ್ಲಿ ತೊಡಗಿರುವವರು ಮಾನಸಿಕವಾಗಿ ಸನ್ನದ್ಧರಾಗಿರಬೇಕು. ಯಾರಲ್ಲೂ ಸ್ವಾರ್ಥ ಮನೋಭಾವವಿರಬಾರದು ಎಂದರು.
    ಮಹಿಳೆಯರಿಗೆ ಸ್ವಾಭಿಮಾನದಿಂದ ಬದುಕುವ ಕಲೆಗಾರಿಕೆ ಇಂದು ಬಹಳ ಮುಖ್ಯವಾಗಿದೆ. ಈ ಹಿನ್ನಲೆಯಲ್ಲಿ ವೇದಿಕೆ ವತಿಯಿಂದ ಮಹಿಳೆಯರಿಗೆ ಹಲವು ತರಬೇತಿಗಳನ್ನು ನೀಡಲಾಗುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು. ಮಾಜಿ ಶಾಸಕ ಎಂ.ಜೆ ಅಪ್ಪಾಜಿಯವರು ಸಂಘಟನೆ ಸ್ಪೂರ್ತಿದಾಯಕ ಮತ್ತು ಆದರ್ಶ ವ್ಯಕ್ತಿಯಾಗಿದ್ದರು. ಅವರ ಆದರ್ಶತನಗಳನ್ನು ಮೈಗೂಡಿಸಿಕೊಳ್ಳಬೇಕೆಂದರು.
    ನಗರಸಭಾ ಸದಸ್ಯ ಎಂ.ಎ ಅಜಿತ್ ಮಾತನಾಡಿ, ವೇದಿಕೆ ಕಾರ್ಯ ಚಟುವಟಿಕೆಗಳಿಗೆ ನಮ್ಮ ತಂದೆಯವರು ನೀಡುತ್ತಿದ್ದ ಪ್ರೋತ್ಸಾಹ ಮುಂದಿನ ದಿನಗಳಲ್ಲೂ ಮುಂದುವರೆಯಲಿದೆ. ಈ ನಿಟ್ಟಿನಲ್ಲಿ ನಾನು ಮತ್ತು ನನ್ನ ತಾಯಿಯವರು ಎಲ್ಲಾ ರೀತಿಯ ಸಹಕಾರ ನೀಡಲು ಬದ್ಧರಾಗಿದ್ದೇವೆ. ಪ್ರತಿಯೊಬ್ಬರು ಕನ್ನಡ ಭಾಷೆ ಪ್ರೋತ್ಸಾಹಿಸಬೇಕು. ಭಾಷೆ ಆರಂಭ ಮೊದಲು ಮನೆಗಳಿಂದ ಆರಂಭಗೊಳ್ಳಬೇಕು. ಈ ನಿಟ್ಟಿನಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ ಎಂದರು.
   ಶಾರದಾ ಅಪ್ಪಾಜಿ, ವೇದಿಕೆ ಉಪಾಧ್ಯಕ್ಷೆ ಎಂ.ಎಸ್ ಸುಧಾಮಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಭಾರತಿ ಜಯರಾಮ್ ವಾರ್ಷಿಕ ವರದಿ ಮಂಡಿಸಿದರು. ಖಜಾಂಚಿ ಲತಾ ಪ್ರಭಾಕರ್ ಲೆಕ್ಕಪತ್ರ ಮಂಡಿಸಿದರು. ಸಂಘದ ಅಧ್ಯಕ್ಷೆ ಪ್ರಭಾವತಿ ರಾಜು ಅಧ್ಯಕ್ಷತೆ ವಹಿಸಿದ್ದರು.
    ವೇದಿಕೆ ಸದಸ್ಯರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. ಜಾನಪದ ಕಲಾವಿದರಾದ ತಮಟೆ ಜಗದೀಶ್, ದಿವಾಕರ್ ಮತ್ತು ರವಿಕುಮಾರ್ ತಂಡದಿಂದ ಗಾಯನ ಕಾರ್ಯಕ್ರಮ ನಡೆಯಿತು.