Sunday, December 13, 2020

ಸಂವಿಧಾನ ಬದ್ಧ ಬೇಡಿಕೆಗಳಿಗಾಗಿ ಹೋರಾಟ ನಡೆಸುವುದು ನೌಕರರ ಹಕ್ಕು : ಟಿ. ಚಂದ್ರೇಗೌಡ

ಸರ್ಕಾರಿ ನೌಕರರು ಎಂದು ಪರಿಗಣಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರು ಭಾನುವಾರ ಭದ್ರಾವತಿ ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತದಲ್ಲಿ ನಡೆಸಿದ ೩ನೇ ದಿನದ ಮುಷ್ಕರದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ ಮಾತನಾಡಿದರು.
ಭದ್ರಾವತಿ, ಡಿ. ೧೩: ಸಂವಿಧಾನ ಬದ್ಧ ಬೇಡಿಕೆಗಳಿಗಾಗಿ ನೌಕರರು ಹೋರಾಟ ನಡೆಸುವುದು ಅವರ ಹಕ್ಕು. ಇದನ್ನು ಮೊಟಕುಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬ್ಲಾಕ್ ಕಾಂಗ್ರೆಸ್ ಸಮಿತಿ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ ಹೇಳಿದರು.
   ಸರ್ಕಾರಿ ನೌಕರರು ಎಂದು ಪರಿಗಣಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರು ಭಾನುವಾರ ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತದಲ್ಲಿ ನಡೆಸಿದ ೩ನೇ ದಿನದ ಮುಷ್ಕರದಲ್ಲಿ ಅವರು ಪಾಲ್ಗೊಂಡು ಕಾಂಗ್ರೆಸ್ ಪಕ್ಷದ ವತಿಯಿಂದ ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು.
    ನಮ್ಮ ಹಕ್ಕಗಳನ್ನು ಪಡೆದುಕೊಳ್ಳಲು ಹೋರಾಟ ನಡೆಸುವುದು ಅನಿವಾರ್ಯ. ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನೌಕರರು ನ್ಯಾಯಯುತವಾಗಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹೋರಾಟ ನಡೆಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಈ ಹೋರಾಟಕ್ಕೆ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಬೆಂಬಲ ವ್ಯಕ್ತಪಡಿಸಿದೆ ಎಂದರು.
   ಈ ಹಿಂದೆ ಅಸ್ತಿತ್ವದಲ್ಲಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯನ್ನು ವಿಭಜಿಸಿ ನಿಗಮಗಳನ್ನಾಗಿ ಮಾಡುವ ಮೂಲಕ ನೌಕರರನ್ನು ಅತಂತ್ರರನ್ನಾಗಿಸಲಾಗಿದೆ. ನೌಕರರನ್ನು ಕಾಯಂಗೊಳಿಸದೆ ಇದೀಗ ಹೋರಾಟ ನಡೆಸುತ್ತಿರುವ ನೌಕರರನ್ನು ಎಸ್ಮಾ ಕಾಯ್ದೆ ಮೂಲಕ ಬೆದರಿಸುವ ಕುತಂತ್ರ ನಡೆಸಲಾಗುತ್ತಿದೆ. ಇದಕ್ಕೆ ನೌಕರರು ಬೆದರುವ ಅಗತ್ಯವಿಲ್ಲ. ಸರ್ಕಾರ ಪೊಲೀಸರ ಮೂಲಕ ನಿಮ್ಮ ಮೇಲೆ ದೌರ್ಜನ್ಯ ನಡೆಸಲು ಮುಂದಾದಲ್ಲಿ ನಿಮ್ಮ ಯಾವುದೇ ರೀತಿಯ ಹೋರಾಟಕ್ಕೂ ನಾವು ಬೆಂಬಲ ನೀಡಲಿದ್ದೇವೆ ಎಂದರು.
    ನಗರಸಭಾ ಸದಸ್ಯ ಎಂ ಎ ಅಜಿತ್ ಸೇರಿದಂತೆ ಇನ್ನಿತರರು ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು. ಭದ್ರಾವತಿ ಘಟಕದ ಎಲ್ಲಾ ಕೆಎಸ್‌ಆರ್‌ಟಿಸಿ ನೌಕರರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು.

No comments:

Post a Comment