Thursday, December 17, 2020

ಸರ್ಕಾರಿ ಪಠ್ಯಪುಸ್ತಕದಲ್ಲಿ ಬ್ರಾಹ್ಮಣ ಸಮುದಾಯ ಕುರಿತು ಅವಹೇಳನಕಾರಿ ವಾಕ್ಯ

ತಕ್ಷಣ ತೆಗೆದುಹಾಕಲು ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಮನವಿ

ಬ್ರಾಹ್ಮಣ ಸಮುದಾಯ ಕುರಿತು ರಾಜ್ಯ ಸರ್ಕಾರ ಮುದ್ರಿಸಿರುವ ೬ ಮತ್ತು ೯ನೇ ತರಗತಿ ಪಠ್ಯ ಪುಸ್ತಕದಲ್ಲಿನ ಅವಹೇಳನಕಾರಿ ವಾಕ್ಯಗಳನ್ನು ತೆಗೆದು ಹಾಕಬೇಕೆಂದು ಆಗ್ರಹಿಸಿ ಭದ್ರಾವತಿಯಲ್ಲಿ ತಾಲೂಕು ಬ್ರಾಹ್ಮಣ ಸಭಾ ವತಿಯಿಂದ ಶುಕ್ರವಾರ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಡಿ. ೧೮: ಬ್ರಾಹ್ಮಣ ಸಮುದಾಯ ಕುರಿತು ರಾಜ್ಯ ಸರ್ಕಾರ ಮುದ್ರಿಸಿರುವ ೬ ಮತ್ತು ೯ನೇ ತರಗತಿ ಪಠ್ಯ ಪುಸ್ತಕದಲ್ಲಿನ ಅವಹೇಳನಕಾರಿ ವಾಕ್ಯಗಳನ್ನು ತೆಗೆದು ಹಾಕಬೇಕೆಂದು ಆಗ್ರಹಿಸಿ ತಾಲೂಕು ಬ್ರಾಹ್ಮಣ ಸಭಾ ವತಿಯಿಂದ ಶುಕ್ರವಾರ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
   ಶಾಲಾ ಪಠ್ಯ ಪುಸ್ತಕದಲ್ಲಿ ಬ್ರಾಹ್ಮಣರ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುವ ವಿಷಯವನ್ನು ಸೇರಿಸಿರುವುದು ಬಹಳ ಅಘಾತಕಾರಿಯಾಗಿದೆ. ಬೆಳೆಯುತ್ತಿರುವ ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುವಂತಾಗಿದೆ. ವೇದಗಳ ಕಾಲದಲ್ಲಿ ಆಚರಿಸುತ್ತಿದ್ದ ಯಜ್ಞ ಮತ್ತು ಯಾಗಗಳಲ್ಲಿ ಆಹಾರ ಧಾನ್ಯ, ಹಾಲು, ತುಪ್ಪವನ್ನು ಹವಿಸ್ಸು ಎಂದು ದಹಿಸುತ್ತಿದ್ದರಿಂದ ಆಹಾರದ ಅಭಾವ ಸೃಷ್ಟಿಯಾಯಿತು ಎಂದು ಕಪೋಲಕಲ್ಪಿತವಾಗಿ ಉಲ್ಲೇಖಿಸಿ ಸನಾತನ ಸಂಪ್ರದಾಯ ಆಚರಣೆಗೆ ಅವಮಾನ ಮಾಡಿರುತ್ತಾರೆ. ಅಲ್ಲದೆ ಇದೆಲ್ಲವನ್ನು ಬ್ರಾಹ್ಮಣರೇ ಮಾಡುತ್ತಿದ್ದರೆಂದು ತಪ್ಪು ಅಭಿಪ್ರಾಯ ಮೂಡುವಂತೆ ನಮೂದಿಸಿರುತ್ತಾರೆ. ಇದು ನಮ್ಮ ಸನಾತನ ಧರ್ಮ ಹಾಗು ಸಂಪ್ರದಾಯಕ್ಕೆ ಘೋರ ಅಪರಾಧ, ಅಪಮಾನ ಮಾಡಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ವರ್ಣ ವ್ಯವಸ್ಥೆಯಿಂದ ಸಾಮಾಜಿಕ ವಿಘಟನೆಯಾಯಿತು ಎಂಬ ಸತ್ಯಕ್ಕೆ ದೂರವಾದ ಅಂಶಗಳನ್ನು ಪಠ್ಯದಲ್ಲಿ ಉಲ್ಲೇಖಿಸಿರುವುದು ವಿಷಾದನೀಯ. ಇದು ಬ್ರಾಹ್ಮಣ ಸಮಾಜವನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ಪ್ರತಿಬಿಂಬಿಸುವ ಹಾಗು ನಾಡಿನ ಯುವ ಜನತೆಗೆ ತಪ್ಪು ಸಂದೇಶ ನೀಡುವ ಹೇಯ ಕೆಲಸವಾಗಿದೆ. ಈ ಹಿನ್ನಲೆಯಲ್ಲಿ ಸತ್ಯಕ್ಕೆ ದೂರವಾದ ವಾಕ್ಯಗಳನ್ನು ತೆಗೆದು ಹಾಕಬೇಕೆಂದು ಆಗ್ರಹಿಸಿದರು.
    ಬ್ರಾಹ್ಮಣ ಸಭಾ ತಾಲೂಕು ಅಧ್ಯಕ್ಷ ಎಂ.ಎಸ್ ಜನರ್ಧನ ಅಯ್ಯಂಗಾರ್, ಉಪಾಧ್ಯಕ್ಷರಾದ ಡಿ. ಸತ್ಯನಾರಾಯಣರಾವ್, ಜಿ. ರಮಾಕಾಂತ್, ಪ್ರಧಾನ ಕಾರ್ಯದರ್ಶಿ ಜಿ. ರಮೇಶ್, ಖಜಾಂಚಿ ಕೆ. ಮಂಜುನಾಥ್, ಪ್ರಮುಖರಾದ ಸುರೇಶ್, ರಾಘವೇಂದ್ರಚಾರ್, ಸ್ವರ್ಣ ನಾಗರಾಜ್, ಕೇಶವಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕಾನೂನು ಬಾಹಿರವಾಗಿ ತಂಬಾಕು ಮಾರಾಟ : ದಾಳಿ

ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಭದ್ರಾವತಿ ತಾಲೂಕಿನ ಹೊಳೆಹೊನ್ನೂರಿನಲ್ಲಿ ಕಾನೂನು ಬಾಹಿರವಾಗಿ ತಂಬಾಕು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಲಾಯಿತು.
    ಭದ್ರಾವತಿ, ಡಿ. ೧೭: ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ತಾಲೂಕಿನ ಹೊಳೆಹೊನ್ನೂರಿನಲ್ಲಿ ಕಾನೂನು ಬಾಹಿರವಾಗಿ ತಂಬಾಕು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಲಾಯಿತು.
     ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಹಾಗೂ ರಾಷ್ಟ್ರೀಯ ತಂಬಾಕು ನಿಯಂತ್ರಣ ಮಂಡಳಿ ಕಾರ್ಯಕ್ರಮ ಅಧಿಕಾರಿ ಡಾ. ಬಿ.ಎಫ್ ಶಂಕರಪ್ಪ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್, ಜಿಲ್ಲಾ ಸಲಹೆಗಾರ ಹೇಮಂತ್ ರಾಜ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ. ಜಿ.ಮಂಜುನಾಥ್, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಫರ್ನಾಂಡಿಸ್, ಪಿಎಸ್‌ಐ ಎಂ.ಮೋಹನ್, ರಾಜಸ್ವ ನಿರೀಕ್ಷಕ ವೆಂಕಟಾಚಲ, ತಾಲೂಕು ಹಿರಿಯ ಆರೋಗ್ಯ ಸಹಾಯಕ ನೀಲೇಶ್ ರಾಜ್ ಇನ್ನಿತರರು ಪಾಲ್ಗೊಂಡಿದ್ದರು.

ಡಿ.೨೭ರಂದು ಪ್ರೊ ಕಬಡ್ಡಿ ಪಂದ್ಯಾವಳಿಗೆ ಕ್ರೀಡಾಪಟುಗಳ ಆಯ್ಕೆ

ಭದ್ರಾವತಿ, ಡಿ. ೧೭: ತಾಲೂಕು ಮಟ್ಟದ ಪ್ರೊ ಕಬಡ್ಡಿ ಪಂದ್ಯಾವಳಿ ನಡೆಯಲಿದ್ದು, ಇದರ ಅಂಗವಾಗಿ ಡಿ.೨೭ರಂದು ಹಳೇನಗರದ ಕನಕಮಂಟಪ ಮೈದಾನದಲ್ಲಿ ಕ್ರೀಡಾಪಟುಗಳ ಆಯ್ಕೆ ನಡೆಯಲಿದೆ.
   ಆಯ್ಕೆಯಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಕ್ರೀಡಾಪಟುಗಳು ತಮ್ಮ ಆಧಾರ್ ಕಾರ್ಡ್ ನಕಲು ಪ್ರತಿಯೊಂದಿಗೆ ಬೆಳಿಗ್ಗೆ ೯ ಗಂಟೆಗೆ ಹಾಜರಾಗತಕ್ಕದ್ದು. ಪ್ರತಿ ತಂಡಕ್ಕೆ ೧೦ ಕ್ರೀಡಾಪಟುಗಳು ಒಳಗೊಂಡಂತೆ ಒಟ್ಟು ೮ ತಂಡಗಳ ಆಯ್ಕೆ ನಡೆಯಲಿದೆ.
   ಹೆಚ್ಚಿನ ಮಾಹಿತಿಗೆ ಕಬಡ್ಡಿ ತರಬೇತಿದಾರ ಎಚ್.ಆರ್ ರಂಗನಾಥ್, ಮೊ: ೮೯೭೧೨೫೯೫೯೧, ಅಂತರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ಎಚ್.ಎನ್ ಕೃಷ್ಣೇಗೌಡ, ಮೊ: ೯೯೦೨೨೧೦೩೫೫, ತೀರ್ಪುಗಾರ ಎಂ.ಬಿ ಬಸವರಾಜ್, ಮೊ: ೯೪೪೯೪೭೨೮೬೩ ಮತ್ತು ಅಂತರಾಷ್ಟ್ರೀಯ ತೀರ್ಪುಗಾರ ಎಸ್.ಎನ್ ಸಿದ್ದಯ್ಯ, ಮೊ: ೯೧೬೪೦೪೭೭೭೭ ಸಂಖ್ಯೆಗೆ ಕರೆ ಮಾಡಬಹುದಾಗಿದೆ.


Wednesday, December 16, 2020

ವಿಐಎಸ್‌ಎಲ್ ನಿವೃತ್ತ ಕಾರ್ಮಿಕರಿಗೆ ವಸತಿಗೃಹ ಉಳಿಸಿಕೊಡಲು ಸಂಸದ ಬಿವೈಆರ್ ಭರವಸೆ

ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ಅಧ್ಯಕ್ಷ ಜೆ.ಎಸ್ ನಾಗಭೂಷಣ್ ಸ್ಪಷ್ಟನೆ

ಭದ್ರಾವತಿ ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ಅಧ್ಯಕ್ಷ ಜೆ.ಎಸ್ ನಾಗಭೂಷಣ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಭದ್ರಾವತಿ, ಡಿ. ೧೭: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ನಿವೃತ್ತ ಕಾರ್ಮಿಕರಿಗೆ ವಸತಿ ಗೃಹಗಳನ್ನು ಉಳಿಸಿಕೊಡುವ ಭರವಸೆಯನ್ನು ಸಂಸದ ಬಿ.ವೈ ರಾಘವೇಂದ್ರ ನೀಡಿದ್ದಾರೆಂದು ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ಅಧ್ಯಕ್ಷ ಜೆ.ಎಸ್ ನಾಗಭೂಷಣ್ ತಿಳಿಸಿದರು.
   ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಲ್ಯಾಣ ಕೇಂದ್ರದ ಪದಾಧಿಕಾರಿಗಳು ಸಂಸದರನ್ನು ಭೇಟಿ ಮಾಡಿ ನಿವೃತ್ತ ಕಾರ್ಮಿಕರಿಗೆ ವಸತಿ ಗೃಹಗಳನ್ನು ಉಳಿಸಿಕೊಡುವ ಸಂಬಂಧ ೨,೫೦೦ ನಿವೃತ್ತ ಕಾರ್ಮಿಕರು ಸಹಿ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ನೀಡಲು ಸಿದ್ದಪಡಿಸಲಾಗಿರುವ ಮನವಿ ಪತ್ರದ ಪ್ರತಿಯನ್ನು ನೀಡಿ ನಿವೃತ್ತ ಕಾರ್ಮಿಕರ ಹಲವು ಸಮಸ್ಯೆಗಳನ್ನು ಮನವರಿಕೆ ಮಾಡಿಕೊಡಲಾಯಿತು. ಇದಕ್ಕೆ ಪೂರಕವಾಗಿ ಸ್ಪಂದಿಸಿದ ಸಂಸದರು ಮನೆಗಳನ್ನು ಉಳಿಸಿಕೊಡುವ ಸಂಬಂಧ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಹಾಗು ಸದ್ಯದಲ್ಲಿಯೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.
   ಪ್ರಸ್ತುತ ಕಾರ್ಖಾನೆಯ ವಸತಿ ಗೃಹಗಳಲ್ಲಿ ವಾಸಿಸುತ್ತಿರುವ ನಿವೃತ್ತ ಕಾರ್ಮಿಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹಲವಾರು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ವಾಸಿಸಲು ಸ್ವಂತ ಮನೆ ಇಲ್ಲದ ಕಾರಣ ಕಾರ್ಖಾನೆ ವಸತಿ ಗೃಹಗಳನ್ನು ಅವಲಂಬಿತರಾಗಿ ಬದುಕು ಸಾಗಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಕಾರ್ಖಾನೆ ಗೃಹಗಳನ್ನು ದೀರ್ಘಾವಧಿ ಗುತ್ತಿಗೆ ನೀಡಬೇಕೆಂದು ಸಂಘ ಆಗ್ರಹಿಸುತ್ತದೆ ಎಂದರು.
     ಉಕ್ಕು ಪ್ರಾಧಿಕಾರ ನಿರ್ಲಕ್ಷ್ಯ ಧೋರಣೆ:
   ಕೇಂದ್ರ ಉಕ್ಕು ಪ್ರಾಧಿಕಾರ ಕಾರ್ಖಾನೆಯನ್ನು ತನ್ನ ಅಧೀನಕ್ಕೆ ವಹಿಸಿಕೊಂಡ ನಂತರ ಯಾವುದೇ ರೀತಿ ಅಭಿವೃದ್ಧಿಪಡಿಸಿಲ್ಲ. ಅಗತ್ಯವಿರುವ ಬಂಡವಾಳ ತೊಡಗಿಸಿಲ್ಲ, ಆಧುನೀಕರಣ ಕೈಗೊಂಡಿಲ್ಲ. ತನ್ನ ಅಧೀನದಲ್ಲಿರುವ ಇತರೆ ಕಾರ್ಖಾನೆಗಳಂತೆ ಅಭಿವೃದ್ಧಿಪಡಿಸುವ ಬದಲಾಗಿ ಒಂದು ಹಂತದಲ್ಲಿ ಮುನ್ನಡೆಯುತ್ತಿದ್ದ ಕಾರ್ಖಾನೆಯನ್ನು ಪ್ರಸ್ತುತ ಮುಚ್ಚುವ ಸ್ಥಿತಿಗೆ ಬಂದು ತಲುಪುವಂತೆ ಮಾಡಿದೆ ಎಂದು ಆರೋಪಿಸಿದರು.
      ಖಾಸಗಿಯವರಿಗೆ ವಹಿಸಿಕೊಡಿ:
   ಉಕ್ಕು ಪ್ರಾಧಿಕಾರ ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ತೊಡಗಿಸುವ ಯಾವುದೇ ಲಕ್ಷಣಗಳು ಕಂಡು ಬರುತ್ತಿಲ್ಲ. ಭಾರತರತ್ನ ಸರ್.ಎಂ ವಿಶ್ವೇಶ್ವರಾಯನವರ ಬುದ್ಧಿ ಶಕ್ತಿ, ಕ್ರಿಯಾಶೀಲತೆಯಿಂದ ಸ್ಥಾಪಿಸಲ್ಪಟ್ಟ ಕಾರ್ಖಾನೆ ಭವಿಷ್ಯದಲ್ಲಿ ಉಳಿದುಕೊಳ್ಳಬೇಕು. ಈ ಹಿನ್ನಲೆಯಲ್ಲಿ ಸಮರ್ಪಕವಾಗಿ ಬಂಡವಾಳ ತೊಡಗಿಸಿ ಅಭಿವೃದ್ಧಿಪಡಿಸುವ ಸಾಮರ್ಥ್ಯಹೊಂದಿರುವ ಉತ್ತಮ ಖಾಸಗಿ ಕಂಪನಿಗೆ ವಹಿಸಿಕೊಡುವುದು ಸೂಕ್ತ ಎಂಬುದು ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ನಿಲುವಾಗಿದೆ ಎಂದರು.  ಒಟ್ಟಾರೆ ಕಾರ್ಖಾನೆ ಮುನ್ನಡೆಯಬೇಕು. ಗುತ್ತಿಗೆ ಕಾರ್ಮಿಕರಿಗೆ ನಿರಂತರವಾಗಿ ಕೆಲಸ ಲಭಿಸಬೇಕು. ಗುತ್ತಿಗೆ ಕಾರ್ಮಿಕರು ಬೀದಿ ಪಾಲಾಗುವುದನ್ನು ತಪ್ಪಿಸಬೇಕು. ನಿವೃತ್ತ ಕಾರ್ಮಿಕರ ಹಿತ ಕಾಪಾಡಬೇಕೆಂದು ಆಗ್ರಹಿಸಿದರು.
     ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ಪ್ರಮುಖರಾದ ಹನುಮಂತರಾವ್, ಕೆಂಪಯ್ಯ, ರವೀಂದ್ರ ರೆಡ್ಡಿ, ಮಂಜುನಾಥ್, ರಾಮಲಿಂಗಯ್ಯ, ಶಂಕರ್, ನರಸಿಂಹಯ್ಯ, ಎನ್. ಬಸವರಾಜ್, ನರಸಿಂಹಚಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪ್ರಾಥಮಿಕ ಶಾಲಾ ಶಿಕ್ಷಕರ ಕಾರ್ಯಕಾರಿ ಸಮಿತಿ ಚುನಾವಣೆ ಎಂ.ಎಸ್ ಬಸವರಾಜ್ ತಂಡಕ್ಕೆ ಹೆಚ್ಚಿನ ಸ್ಥಾನ

ಭದ್ರಾವತಿ, ಡಿ. ೧೬ : ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಕಾರ್ಯಕಾರಿ ಸಮಿತಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಎಂ.ಎಸ್ ಬಸವರಾಜ್ ನೇತೃತ್ವದ ತಂಡ ಹೆಚ್ಚಿನ ಸ್ಥಾನಗಳನ್ನು ಪಡೆದುಕೊಂಡಿದೆ.
   ಒಟ್ಟು ೧೮ ಸ್ಥಾನಗಳಿಗೆ ಸಿ.ಎಸ್ ಷಡಾಕ್ಷರಿ ಸಮಾನ ಮನಸ್ಕರ ಶಿಕ್ಷಕರ ಬಳಗ (ಸ್ಪಂದನ ತಂಡ) ಹಾಗು ಹಾಲಿ ಅಧ್ಯಕ್ಷ ಎಂ.ಎಸ್ ಬಸವರಾಜ್ ನೇತೃತ್ವದ ಸಿ.ಎಸ್ ಷಡಾಕ್ಷರಿ ಅಭಿಮಾನಿ ಸಮಸ್ತ ಶಿಕ್ಷಕರ ಬಳಗ ಈ ಎರಡು ಬಣಗಳ ನಡುವೆ ತೀವ್ರ ಪೈಪೋಟಿ ಕಂಡು ಬಂದಿತ್ತು.
    ಈ ಪೈಕಿ ಎಂ.ಎಸ್ ಬಸವರಾಜ್ ನೇತೃತ್ವದ ಬಣದಿಂದ ಎಸ್.ಕೆ ಮೋಹನ್, ಎಂ.ಎಸ್ ಬಸವರಾಜ್, ಟಿ. ಪೃಥ್ವಿರಾಜ್, ವೈ.ಎನ್ ಶ್ರೀಧರಗೌಡ, ಪಿ.ಆರ್ ಭರತ್ ಕುಮಾರ್, ಎಂ.ಸಿ ಆನಂದ್, ಎಸ್ ಪಿ ರಾಜು, ಎಸ್. ಹನುಮಂತಪ್ಪ, ಚಿತ್ರ, ಆಸ್ಮಾಬೇಗಂ, ಎಚ್.ಎಸ್ ಮಾಯಮ್ಮ, ಎಸ್‌ಎಸ್ ನಿರ್ಮಲಾ,ಸುಮತಿ ಕಾರಂತ್ ಗೆಲುವು ಸಾಧಿಸಿದ್ದಾರೆ.
    ಉಳಿದಂತೆ ಸಿ.ಎಸ್ ಷಡಾಕ್ಷರಿ ಸಮಾನ ಮನಸ್ಕರ ಶಿಕ್ಷಕರ ಬಳಗ (ಸ್ಪಂದನ ತಂಡ)ದಿಂದ ಎಂ.ಎಸ್ ಮಲ್ಲಿಕಾರ್ಜುನ್, ಡಿ.ಎಸ್ ಬಸವಂತರಾವ್ ದಾಳೆ, ಎಂ.ಬಿ ಜಯಕುಮಾರ್, ಯು.ಮಹಾದೇವಪ್ಪ,ಎಸ್ ಮತ್ತು ಎನ್ ಜ್ಯೋತಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿ ನಿವೃತ್ತ ಪ್ರಾಂಶುಪಾಲ ಕೆ.ಎಚ್. ಗೋವಿಂದರಾಜು ಕರ್ತವ್ಯ ನಿರ್ವಹಿಸಿದರು.         

ದೇಶ ಸೇವೆ ಪುಣ್ಯದ ಕೆಲಸ : ಕೃಷ್ಣಮೂರ್ತಿ

ಭದ್ರಾವತಿ ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ಭಾರತೀಯ ಸೇನೆ, ಅರೆಸೇನಾಪಡೆ, ಪೊಲೀಸ್ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳ ಹುದ್ದೆಗಳ ಸೇರ್ಪಡೆಗೆ ನೆರವಾಗುವಂತೆ ಗ್ರಾಮೀಣ ಹಾಗೂ ನಗರ ಪ್ರದೇಶದ ಯುವಕರಿಗೆ ನಗರದ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ನೀಡಲಾಗುತ್ತಿರುವ ಉಚಿತ ದೈಹಿಕ ಹಾಗೂ ಲಿಖಿತ ಪರೀಕ್ಷೆ ತರಬೇತಿ ಸ್ಥಳಕ್ಕೆ ಪೊಲೀಸ್ ಉಪಾಧೀಕ್ಷ ಕೃಷ್ಣಮೂರ್ತಿ ಆಗಮಿಸಿ ತರಬೇತಿ ಪಡೆಯುತ್ತಿರುವವರಿಗೆ ಸ್ಫೂರ್ತಿದಾಯಕ ಮಾತುಗಳನ್ನಾಡಿದರು. 
ಭದ್ರಾವತಿ, ಡಿ. ೧೬: ದೇಶ ಸೇವೆ ಪುಣ್ಯದ ಕೆಲಸ, ಇದರಿಂದ ನಮಗೆ ಜನ್ಮ ನೀಡಿದ ತಂದೆ-ತಾಯಿ ಋಣ ತೀರಿಸಿದಂತಾಗುತ್ತದೆ ಎಂದು ಪೊಲೀಸ್ ಉಪಾಧೀಕ್ಷಕ ಕೃಷ್ಣಮೂರ್ತಿ ಹೇಳಿದರು.  
     ಅವರು ಬುಧವಾರ ಮಾಜಿ ಸೈನಿಕರ ಸಂಘದ ವತಿಯಿಂದ ಭಾರತೀಯ ಸೇನೆ, ಅರೆಸೇನಾಪಡೆ, ಪೊಲೀಸ್ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳ ಹುದ್ದೆಗಳ ಸೇರ್ಪಡೆಗೆ ನೆರವಾಗುವಂತೆ ಗ್ರಾಮೀಣ ಹಾಗೂ ನಗರ ಪ್ರದೇಶದ ಯುವಕರಿಗೆ ನಗರದ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ  ನೀಡಲಾಗುತ್ತಿರುವ ಉಚಿತ  ದೈಹಿಕ ಹಾಗೂ ಲಿಖಿತ ಪರೀಕ್ಷೆ ತರಬೇತಿ ಸ್ಥಳಕ್ಕೆ ಆಗಮಿಸಿ ತರಬೇತಿ ಪಡೆಯುತ್ತಿರುವವರಿಗೆ ಸ್ಫೂರ್ತಿದಾಯಕ ಮಾತುಗಳನ್ನಾಡಿದರು.  
     ತಮ್ಮ ಪೊಲೀಸ್  ವೃತ್ತಿಜೀವನದ ಅನುಭವಗಳನ್ನು ವಿವರಿಸಿ ಉಚಿತ ತರಬೇತಿ ಸದುಪಯೋಗ ಎಲ್ಲರೂ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.  
      ಸಂಘದ ಕಾರ್ಯದರ್ಶಿ ವೆಂಕಟ್ ಗಿರಿ,  ಮುದಗಲ ರಾಮರೆಡ್ಡಿ, ಅಭಿಲಾಶ್, ವೆಂಕಟೇಶ್, ಕಮಾಂಡೋ ಗಿರಿ, ಮಹೇಶ್, ರಮೇಶ್, ಚಂದ್ರು, ಶ್ರೀನಿವಾಸ್,  ಮಂಜುನಾಥ್ ಮತ್ತು ಶ್ರೀನಿವಾಸ್  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಗ್ರಾಮೀಣ ಭಾಗದಲ್ಲಿ ಶೇ.೮೦ರಷ್ಟು ಅಭಿವೃದ್ಧಿ ಕಾರ್ಯ: ಬಿ.ಕೆ ಸಂಗಮೇಶ್ವರ್

ಅಭಿವೃದ್ಧಿ ವಿಚಾರದಲ್ಲಿ ಎಂದಿಗೂ ರಾಜಕಾರಣ ಮಾಡಿಲ್ಲ, ಗ್ರಾ.ಪಂ. ಚುನಾವಣೆ ಗೆಲುವು ಖಚಿತ

ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ವರ್ ಬುಧವಾರ ತಮ್ಮ ಗೃಹ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಭದ್ರಾವತಿ, ಡಿ. ೧೬: ಗ್ರಾಮ ಪಂಚಾಯ್ತಿಗಳ ಅಭಿವೃದ್ಧಿ ಹಿನ್ನೆಲೆಯಲ್ಲಿ ಸಮರ್ಥ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಂತೆ ಶಾಸಕ ಬಿ.ಕೆ ಸಂಗಮೇಶ್ವರ್ ಮನವಿ ಮಾಡಿದರು.
    ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯಲ್ಲಿ ಗ್ರಾಮ ಪಂಚಾಯಿತಿಗಳ ಪಾತ್ರ ಬಹಳ ಮುಖ್ಯವಾಗಿದೆ. ನಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಹೆಚ್ಚು ಸಹಕಾರಿಯಾಗಲಿದೆ ಎಂದರು.
ನನ್ನ ಅಧಿಕಾರದ ಅವಧಿಯಲ್ಲಿ ಗ್ರಾಮೀಣ ಭಾಗಗಳಲ್ಲಿ ಶೇ.೮೦ರಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ಯಾವುದೇ ರೀತಿಯ ತಾರತಮ್ಯ ಮಾಡಿಲ್ಲ. ಎಲ್ಲಾ ಗ್ರಾಮಗಳನ್ನು ಅಭಿವೃದ್ಧಿ ದೃಷ್ಟಿಯಿಂದ ನೋಡುತ್ತಿದ್ದೇನೆ ಹೊರತು ಅಭಿವೃದ್ಧಿ ವಿಚಾರದಲ್ಲಿ ಎಂದಿಗೂ ರಾಜಕಾರಣ ಮಾಡಿಲ್ಲ. ಈ ಹಿನ್ನಲೆಯಲ್ಲಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ನಮ್ಮ ಬೆಂಬಲಿತರು ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ಅಲ್ಲದೆ ಉತ್ತಮ ವ್ಯಕ್ತಿಗಳನ್ನು ಮಾತ್ರ ನಾವು ಚುನಾವಣೆಗೆ ಸ್ಪರ್ಧಿಸುವಂತೆ ಸೂಚಿಸಿದ್ದೇವೆ. ಈ ಹಿನ್ನಲೆಯಲ್ಲಿ ಗ್ರಾಮೀಣ ಭಾಗದ ಮತದಾರರು ನಮ್ಮ ಬೆಂಬಲಿಗರನ್ನು ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.  
     ಬಿಜೆಪಿ-ಜೆಡಿಎಸ್ ಅಧಿಕಾರಕ್ಕಾಗಿ ಅಡ್ಡ ದಾರಿ ಹಿಡಿಯುವ ಪಕ್ಷಗಳು:
     ಬಹುಮತವಿರುವ ಕಡೆ ಅಡ್ಡ ದಾರಿ ಮೂಲಕ ಅಧಿಕಾರ ಹಿಡಿದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ವಿರುದ್ಧವಾಗಿ ವರ್ತಿಸುತ್ತಿವೆ. ಮತದಾರರು ಈ ಎರಡು ಪಕ್ಷಗಳ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದಾರೆ. ಈ ದೇಶದಲ್ಲಿ ಎಲ್ಲಾ ಧರ್ಮದ, ಎಲ್ಲಾ ವರ್ಗದ ಜನರ ಹಿತಕಾಪಾಡುವ ಏಕೈಕ ಪಕ್ಷ ಕಾಂಗ್ರೆಸ್ ಎಂಬುದನ್ನು ಯಾರು ಮರೆಯುವಂತಿಲ್ಲ. ೭೦ ವರ್ಷಗಳ ಸುರ್ಧೀಘ ಹಾಗು ಸಮರ್ಥ ಆಡಳಿತ ಪರಿಣಾಮ ಇಂದು ದೇಶದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರಗಳು ಹಾಗು ಜನರು ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ. ಕಾಂಗ್ರೆಸ್ ಪಕ್ಷ ಅನೇಕ ಕೊಡುಗೆಗಳನ್ನು ದೇಶಕ್ಕೆ ನೀಡಿದೆ. ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಸಮಸ್ಯೆಗಳು ಹೆಚ್ಚಾಗಿದ್ದ ಸಂದರ್ಭದಲ್ಲಿ, ಆಧುನಿಕ ತಾಂತ್ರಿಕ ವ್ಯವಸ್ಥೆಗಳಿಲ್ಲದ ಸಂದರ್ಭದಲ್ಲಿ, ಹೆಚ್ಚಿನ ಆದಾಯವಿಲ್ಲದ ಸಂದರ್ಭದಲ್ಲಿ ಹಲವು ಯೋಜನೆಗಳನ್ನು ದೇಶದ ಅಭಿವೃದ್ಧಿಗಾಗಿ ರೂಪಿಸುವಲ್ಲಿ ಕಾಂಗ್ರೆಸ್ ಪಕ್ಷ ಇಂದಿಗೂ ಮಾದರಿಯಾಗಿದೆ. ಈ ಹಿನ್ನಲೆಯಲ್ಲಿ ಗ್ರಾಮೀಣ ಜನರು ಈ ಪಕ್ಷವನ್ನು ಬೆಂಬಲಿಸುತ್ತಾರೆಂಬ ವಿಶ್ವಾಸವಿದೆ ಎಂದರು.
    ಬ್ಲಾಕ್ ಕಾಂಗ್ರೆಸ್ ಸಮಿತಿ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ ಮಾತನಾಡಿ, ಈ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವಿದೆ. ಶಾಸಕರು ಗ್ರಾಮೀಣ ಭಾಗದಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು, ಕೆರೆಗಳ ಅಭಿವೃದ್ಧಿ ಸೇರಿದಂತೆ ಹಲವು ಕಾರ್ಯಗಳನ್ನು ಯಶಸ್ವಿಯಾಗಿ ಕೈಗೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಗ್ರಾಮೀಣ ಜನರು ಬೆಂಬಲಿಸುತ್ತಾರೆಂಬ ನಂಬಿಕೆ ಇದೆ ಎಂದರು.
    ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಹಿರಿಯ ಮುಖಂಡ ಗೋವಿಂದಸ್ವಾಮಿ ಮಾತನಾಡಿದರು. ಚನ್ನಪ್ಪ, ದಶರಥಗಿರಿ ಸೇರಿದಂತೆ ಇನ್ನಿತರರಿದ್ದರು.