೩೫ ಪಂಚಾಯಿತಿ, ೩೭೫ ಸ್ಥಾನಗಳು, ೧,೧೯,೨೨೫ ಮತದಾರರು, ೧೦೭೦ ಮಂದಿ ಕಣದಲ್ಲಿ
![](https://blogger.googleusercontent.com/img/b/R29vZ2xl/AVvXsEjvHvCvDGIr5Eh3hyphenhyphen9H_S4zyy5aF_tj6ubGZ6DPz__rJVKd_eQ0KM804-ORLsJVwMVLAIaQr6DJiK_jwKbanqzT0cfgjWZoEg6o2l0dcmchtv0YXnJMPWtPTc1Faf36YFnNhTRFR_o0CfjF/w400-h233-rw/D20-BDVT-764107.jpg)
ಭದ್ರಾವತಿ ಹಳೇನಗರದ ಸಂಚಿ ಹೊನ್ನಮ್ಮ ಸರ್ಕಾರಿ ಬಾಲಕಿಯರ ಕಾಲೇಜಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಮತದಾನಕ್ಕೆ ಸಕಲ ಸಿದ್ದತೆಗಳನ್ನು ಕೈಗೊಳ್ಳುತ್ತಿದ್ದು, ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್ ಭಾನುವಾರ ಪರಿಶೀಲನೆ ನಡೆಸಿದರು.
* ಅನಂತಕುಮಾರ್
ಭದ್ರಾವತಿ: ತಾಲೂಕಿನಲ್ಲಿ ೩೫ ಗ್ರಾಮ ಪಂಚಾಯಿತಿಗಳ ಚುನಾವಣೆಗೆ ೨ ದಿನ ಮಾತ್ರ ಬಾಕಿ ಉಳಿದಿದ್ದು, ತೆರೆಮರೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ನಡುವೆ ಪೈಪೋಟಿ ಕಂಡು ಬರುತ್ತಿದೆ. ವ್ಯಕ್ತಿ ಪ್ರತಿಷ್ಠೆ ಕಣವಾಗಿರುವ ತಾಲೂಕಿನಲ್ಲಿ ಇದೀಗ ಮಾಜಿ ಶಾಸಕರಾದ ಎಂ.ಜೆ ಅಪ್ಪಾಜಿ ಮತ್ತು ಕರಿಯಣ್ಣ ಕಣ್ಮರೆಯಾಗಿದ್ದು, ಅವರಿಲ್ಲದೆ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ.
ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ತಮ್ಮ ಬೆಂಬಲಿಗರನ್ನು ಗೆಲ್ಲಿಸಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚು ಗಮನ ಹರಿಸಿವೆ. ಕ್ಷೇತ್ರದಲ್ಲಿ ಈ ಹಿಂದಿನ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಹೆಚ್ಚಿನ ಪ್ರಾಬಲ್ಯ ಸಾಧಿಸಿದ್ದರು. ಈ ಹಿನ್ನಲೆಯಲ್ಲಿ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಎರಡರಲ್ಲೂ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾರಣಕರ್ತರಾಗಿದ್ದರು. ಆದರೆ ಇದೀಗ ಅವರಿಲ್ಲದೆ ಪತ್ನಿ ಶಾರದ ಅಪ್ಪಾಜಿ, ಪುತ್ರ ಎಂ.ಎ ಅಜಿತ್, ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಶಾರದಪೂರ‍್ಯಾನಾಯ್ಕ್ ಸೇರಿದಂತೆ ಇನ್ನಿತರರ ನೇತೃತ್ವದಲ್ಲಿ ಚುನಾವಣೆಯನ್ನು ಎದುರಿಸಲಾಗುತ್ತಿದೆ. ಅಪ್ಪಾಜಿಯ ರಾಜಕೀಯ ಒಡನಾಡಿಯಾಗಿರುವ ಕರುಣಾಮೂರ್ತಿ ಈ ಬಾರಿ ಸಹ ಮತದಾರರು ತಮ್ಮ ಪಕ್ಷದ ಬೆಂಬಲಿಗರನ್ನು ಆಯ್ಕೆ ಮಾಡುವ ವಿಶ್ವಾಸವಿದೆ ಎನ್ನುವ ಭರವಸೆ ಹೊಂದಿದ್ದಾರೆ.
ಈ ಬಾರಿ ಚುನಾವಣೆಯ ಬಹಿರಂಗ ಪ್ರಚಾರದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಹೆಚ್ಚಾಗಿ ಪಾಲ್ಗೊಂಡಿಲ್ಲ. ಬದಲಾಗಿ ಅವರ ಸಹೋದರ ಬಿ.ಕೆ ಮೋಹನ್ ನೇತೃತ್ವದಲ್ಲಿ ಪುತ್ರರಾದ ಬಿ.ಎಸ್ ಗಣೇಶ್, ಬಿ.ಎಸ್ ಬಸವೇಶ್, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ ಸೇರಿದಂತೆ ಇನ್ನಿತರರು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಗ್ರಾಮೀಣ ಭಾಗದಲ್ಲಿ ಶಾಸಕರು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸುವ ವಿಶ್ವಾಸವಿದೆ ಎನ್ನುವ ಆಶಾಭಾವನೆ ಟಿ. ಚಂದ್ರೇಗೌಡ ಹೊಂದಿದ್ದಾರೆ. ಈ ನಡುವೆ ಜೆಡಿಎಸ್ ಪಕ್ಷದ ಮುಖಂಡ, ಜಿ.ಪಂ. ಮಾಜಿ ಸದಸ್ಯ ಎಸ್. ಕುಮಾರ್ ತೆರೆಮರೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಬೆಂಬಲಿಸುತ್ತಿದ್ದಾರೆಂಬ ಆರೋಪಗಳು ಸಹ ಕೇಳಿ ಬರುತ್ತಿವೆ.
ಈ ಬಾರಿ ಚುನಾವಣೆಯನ್ನು ಬಿಜೆಪಿ ಗಂಭಿರವಾಗಿ ಪರಿಗಣಿಸಿದ್ದು, ಪಕ್ಷದ ಜಿಲ್ಲಾ ಮತ್ತು ತಾಲೂಕು ಮಟ್ಟದ ಮುಖಂಡರು ಎಡೆಬಿಡದೆ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಎಲ್ಲಾ ಪಂಚಾಯಿತಿಗಳ ವ್ಯಾಪ್ತಿಯಲ್ಲೂ ಪೂರ್ಣ ಪ್ರಮಾಣದಲ್ಲಿ ಪ್ರಚಾರ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ. ಈ ಬಾರಿ ಕ್ಷೇತ್ರದಲ್ಲಿ ವ್ಯಕ್ತಿ ಪ್ರತಿಷ್ಠೆ ಎಂಬುದು ಬದಲಾಗಿದೆ. ದೇಶದ ಎಲ್ಲೆಡೆ ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಮತದಾರರು ಪಕ್ಷವನ್ನು ಬೆಂಬಲಿಸುತ್ತಿದ್ದಾರೆ. ಇದೆ ರೀತಿ ಕ್ಷೇತ್ರದಲ್ಲೂ ನಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಗ್ರಾಮ ಪಂಚಾಯಿತಿ ಆಡಳಿತ ಚುಕ್ಕಾಣಿ ಬಿಜೆಪಿ ಪಕ್ಷದ ಪಾಲಾಗಲಿದೆ ಎನ್ನುವ ನಂಬಿಕೆ ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ಹೊಂದಿದ್ದಾರೆ
ತಾಲೂಕಿನ ಒಟ್ಟು ೪೧ ಗ್ರಾಮ ಪಂಚಾಯಿತಿಗಳ ಪೈಕಿ ಕೊಮಾರನಹಳ್ಳಿ ಮತ್ತು ವೀರಾಪುರ ಈ ಎರಡು ಗ್ರಾಮ ಪಂಚಾಯಿತಿಗಳ ಅವಧಿ ಡಿಸೆಂಬರ್ ನಂತರ ಮುಕ್ತಾಯಗೊಳ್ಳಲಿದ್ದು, ಈ ಹಿನ್ನಲೆಯಲ್ಲಿ ಚುನಾವಣೆ ನಡೆಯುತ್ತಿಲ್ಲ. ಉಳಿದಂತೆ ಸರ್ಕಾರ ಹೊಳೆಹೊನ್ನೂರು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲು ಅಧಿಸೂಚನೆ ಹೊರಡಿಸಿರುವ ಹಿನ್ನಲೆಯಲ್ಲಿ ಹೊಳೆಹೊನ್ನೂರು, ಹನುಮಂತಾಪುರ, ಸಿದ್ಲಿಪುರ ಮತ್ತು ಎಮ್ಮೆಹಟ್ಟಿ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯುತ್ತಿಲ್ಲ. ೩೫ ಗ್ರಾಮ ಪಂಚಾಯಿತಿಗಳಿಗೆ ಡಿ.೨೨ರಂದು ಚುನಾವಣೆ ನಡೆಯುತ್ತಿದೆ.
ಮತದಾರರು, ಮತಗಟ್ಟೆ ವಿವರ:
ಕೋವಿಡ್-೧೯ ಕಾಣಿಸಿಕೊಂಡ ನಂತರ ನಡೆಯುತ್ತಿರುವ ಮೊದಲ ಚುನಾವಣೆಯಾಗಿರುವ ಹಿನ್ನಲೆಯಲ್ಲಿ ಜನಸಾಮಾನ್ಯರ ಆರೋಗ್ಯದ ದೃಷ್ಟಿಯಿಂದ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಈ ಬಾರಿ ಚುನಾವಣೆಯಲ್ಲಿ ಒಟ್ಟು ೧,೧೯,೨೨೫ ಮಂದಿ ಮತದಾನದ ಹಕ್ಕು ಹೊಂದಿದ್ದು, ಈ ಪೈಕಿ ೫೮,೭೮೩ ಪುರುಷ ಹಾಗು ೬೦,೪೪೨ ಮಹಿಳಾ ಮತದಾರರು ಸೇರಿದ್ದಾರೆ. ಈ ಬಾರಿ ೧೦೦೦ಕ್ಕಿಂತ ಹೆಚ್ಚು ಮತದಾರರಿರುವ ಮತಗಟ್ಟೆಗಳಲ್ಲಿ ಪೂರಕ ಮತಗಟ್ಟೆಗಳನ್ನು ರೂಪಿಸಲಾಗಿದ್ದು, ೩೦ ಪೂರಕ ಮತಗಟ್ಟೆಗಳು ಸೇರಿದಂತೆ ಒಟ್ಟು ೧೮೫ ಮತಗಟ್ಟೆಗಳನ್ನು ತೆರೆಯಲಾಗಿದೆ. ೫೮ ಸೂಕ್ಷ, ೨೦ ಅತಿಸೂಕ್ಷ್ಮ ಮತ್ತು ೧೦೭ ಸಾಮಾನ್ಯ ಮತಗಟ್ಟೆಗಳಾಗಿ ಗುರುತಿಸಲಾಗಿದೆ.
ಸಿಬ್ಬಂದಿಗಳ ವಿವರ:
ಈ ಚುನಾವಣೆಯಲ್ಲಿ ೧೦೩೭ ಮಂದಿ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಈ ಪೈಕಿ ೨೦೪ ಪಿಆರ್‌ಓ, ೨೦೪ ಎಪಿಆರ್‌ಓ, ೪೪೪ ಪಿ.ಓ ಮತ್ತು ೧೮೫ ಡಿ' ಗ್ರೂಪ್ ನೌಕರರ ಒಳಗೊಂಡಿದ್ದಾರೆ. ಅಲ್ಲದೆ ೩೫ ಚುನಾವಣಾಧಿಕಾರಿಗಳು, ೩೫ ಸಹಾಯಕ ಚುನಾವಣಾಧಿಕಾರಿಗಳು ಸೇರಿದಂತೆ ಒಟ್ಟು ೭೦ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಾಲೂಕು ಮಟ್ಟದಲ್ಲಿ ೧, ಹೋಬಳಿ ಮಟ್ಟದಲ್ಲಿ ೩ ಮಾದರಿ ನೀತಿ ಸಂಹಿತೆ ತಂಡಗಳು ಕಾರ್ಯನಿರ್ವಹಿಸುತ್ತಿವೆ. ೩೪ ಬಸ್ಸು ಹಾಗು ೬ ಜೀಪುಗಳನ್ನು ಚುನಾವಣಾ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ.
ಒಟ್ಟು ೩೭೫ ಸ್ಥಾನಗಳಿಗೆ ಚುನಾವಣೆ:
ತಾಲೂಕಿನಲ್ಲಿ ಒಟ್ಟು ೧೬೫ ಕ್ಷೇತ್ರಗಳ ಒಟ್ಟು ೪೧೯ ಸ್ಥಾನಗಳ ಪೈಕಿ ೪೪ ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಈ ಹಿನ್ನಲೆಯಲ್ಲಿ ಉಳಿದ ೩೭೫ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಒಟ್ಟು ೧೦೭೦ ಮಂದಿ ಕಣದಲ್ಲಿದ್ದು, ಗೆಲುವಿಗಾಗಿ ತೀವ್ರ ಪೈಪೋಟಿಗೆ ಮುಂದಾಗಿದ್ದಾರೆ.
ಉಪವಿಭಾಗಾಧಿಕಾರಿ ಪರಿಶೀಲನೆ:
ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್ ಮಾರ್ಗದರ್ಶನದಲ್ಲಿ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ನೇತೃತ್ವದಲ್ಲಿ ತಾಲೂಕು ಆಡಳಿತ ಹಳೇನಗರದ ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಸಕಲ ಸಿದ್ದತೆಗಳನ್ನು ಕೈಗೊಂಡಿದೆ. ಭಾನುವಾರ ಟಿ.ವಿ ಪ್ರಕಾಶ್ ಕಾರ್ಯಗಳನ್ನು ಪರಿಶೀಲನೆ ನಡೆಸಿದರು.