ಸೋಮವಾರ, ಡಿಸೆಂಬರ್ 28, 2020

ಬಿಪಿಎಲ್ ಕ್ರಿಕೆಟ್ ಪಂದ್ಯಾವಳಿ : ಪ್ರೈಮ್ ಪ್ಯಾಂಟಮ್ಸ್ ತಂಡಕ್ಕೆ ಮೊದಲನೇ ಬಹುಮಾನ

ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಮತ್ತು ಶಾಸಕ ಬಿ.ಕೆ ಸಂಗಮೇಶ್ವರ್ ಸಹಯೋಗದೊಂದಿಗೆ ದಿ ವಾಲ್ ಸಿಸಿ ಕ್ರಿಕೆಟ್ ಕ್ಲಬ್ ತಂಡದ ಮೈಕಲ್ ಮತ್ತು ಬಾಬುರವರು ನ್ಯೂಟೌನ್ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಲೆದರ್ ಬಾಲ್ ಕ್ರಿಕೆಟ್ ಭದ್ರಾವತಿ ಪ್ರೀಮಿಯರ್ ಲೀಗ್(ಬಿಪಿಎಲ್) ಸೀಸನ್-೧ರ ಪಂದ್ಯಾವಳಿಯಲ್ಲಿ  ಪ್ರೈಮ್ ಪ್ಯಾಂಟಮ್ಸ್ ತಂಡ ಮೊದಲನೇ ಬಹುಮಾನ ಪಡೆದುಕೊಂಡಿದೆ.
    ಭದ್ರಾವತಿ, ಡಿ. ೨೮: ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಮತ್ತು ಶಾಸಕ ಬಿ.ಕೆ ಸಂಗಮೇಶ್ವರ್ ಸಹಯೋಗದೊಂದಿಗೆ ದಿ ವಾಲ್ ಸಿಸಿ ಕ್ರಿಕೆಟ್ ಕ್ಲಬ್ ತಂಡದ ಮೈಕಲ್ ಮತ್ತು ಬಾಬುರವರು ನ್ಯೂಟೌನ್ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಲೆದರ್ ಬಾಲ್ ಕ್ರಿಕೆಟ್ ಭದ್ರಾವತಿ ಪ್ರೀಮಿಯರ್ ಲೀಗ್(ಬಿಪಿಎಲ್) ಸೀಸನ್-೧ರ ಪಂದ್ಯಾವಳಿಯಲ್ಲಿ  ಪ್ರೈಮ್ ಪ್ಯಾಂಟಮ್ಸ್ ತಂಡ ಮೊದಲನೇ ಬಹುಮಾನ ಪಡೆದುಕೊಂಡಿದೆ.
    ಪಂದ್ಯಾವಳಿಯಲ್ಲಿ ದಿ ವಾಲ್ ಸಿಸಿ, ವೆಂಕಿ ಇಲೆವೆನ್, ಪ್ರೈಮ್ ಪ್ಯಾಂಟಮ್ಸ್, ರೈಸಿಂಗ್ ಪೋನಿಕ್ಸ್ ಮತ್ತು ಸ್ನೇಹ ಜೀವಿ ಕ್ರಿಕೆಟರ‍್ಸ್ ಒಟ್ಟು ೫ ತಂಡಗಳು ಭಾಗವಹಿಸಿದ್ದವು. ಈ ಪೈಕಿ ಪ್ರೈಮ್ ಪ್ಯಾಂಟಮ್ಸ್ ಮೊದಲನೇ ಬಹುಮಾನದೊಂದಿಗೆ ೩೦,೦೦೦ ರು. ನಗದು ಹಾಗು ಟ್ರೋಫಿ ತನ್ನದಾಗಿಸಿಕೊಂಡಿತು.
ಪಂದ್ಯಾವಳಿಯಲ್ಲಿ ಸ್ನೇಹ ಜೀವಿ ಕ್ರಿಕೆಟರ‍್ಸ್ ತಂಡದ ಅಭ್ಯುದಯ ಉಪಾಧ್ಯಾಯ ಉತ್ತಮ ಆಲ್ ರೌಂಡರ್ ಆಟಗಾರ, ಪ್ರೈಮ್ ಪ್ಯಾಂಟಮ್ಸ್ ತಂಡದ ಅಬು ತಲೀಬ್ ಮತ್ತು ವೆಂಕಿ ಇಲೆವೆನ್ ತಂಡದ ಅದೇಶ್ ಆರ್ ಗೌಡ  ಉತ್ತಮ ಬ್ಯಾಟ್ಸ್‌ಮೆನ್ ಪ್ರಶಸ್ತಿಗೆ ಭಾಜನರಾದರು.
   ಶಾಸಕ ಬಿ.ಕೆ ಸಂಗಮೇಶ್ವರ ವಿಜೇತ ತಂಡಕ್ಕೆ ಬಹುಮಾನ ವಿತರಿಸಿದರು. ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಎಲ್ ದೇವರಾಜ್, ನಿವೃತ್ತ ಕ್ರೀಡಾ ತರಬೇತಿ ಅಧಿಕಾರಿ ವೆಂಕಟೇಶ್, ಕೇಸರಿ ಪಡೆ ಅಧ್ಯಕ್ಷ ಗಿರೀಶ್, ಯುವ ಮುಖಂಡ ಬಿ.ಎಸ್ ಗಣೇಶ್, ಆಯೋಜಕರಾದ ಮೈಕಲ್ ಮತ್ತು ಬಾಬು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.



ವಿಐಎಸ್‌ಎಲ್ ನಿವೃತ್ತ ನೌಕರರ ಕಲ್ಯಾಣ ಕೇಂದ್ರಕ್ಕೆ ನೂತನ ಪದಾಧಿಕಾರಿಗಳು

ಅಧ್ಯಕ್ಷರಾಗಿ ಸೂಡಾ ಸದಸ್ಯ, ಬಿಜೆಪಿ ಮುಖಂಡ ಬಿ.ಜೆ ರಾಮಲಿಂಗಯ್ಯ

ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ನಿವೃತ್ತ ನೌಕರರ ಕಲ್ಯಾಣ ಕೇಂದ್ರಕ್ಕೆ ನೂತನವಾಗಿ ಆಯ್ಕೆಯಾಗಿರುವ ೧೫ ಮಂದಿ ಪದಾಧಿಕಾರಿಗಳು.
     ಭದ್ರಾವತಿ, ಡಿ. ೨೮: ನಗರದ ನ್ಯೂಟೌನ್ ವಿಐಎಸ್‌ಎಲ್ ನಿವೃತ್ತ ನೌಕರರ ಕಲ್ಯಾಣ ಕೇಂದ್ರಕ್ಕೆ ೧೫ ಮಂದಿ ನೂತನ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
     ಕಲ್ಯಾಣ ಕೇಂದ್ರದ ಸರ್ವ ಸದಸ್ಯರ ಸಭೆಯಲ್ಲಿ ಚುನಾವಣಾಧಿಕಾರಿಯಾದ ಹಿರಿಯ ನ್ಯಾಯವಾದಿ ಕೆ.ಎಂ ಸತೀಶ್ ೧೫ ಮಂದಿ ನೂತನ ಪದಾಧಿಕಾರಿಗಳ ಹೆಸರನ್ನು ಘೋಷಿಸಿದರು. ಅಧ್ಯಕ್ಷರಾಗಿ ಬಿ.ಜಿ ರಾಮಲಿಂಗಯ್ಯ, ಉಪಾಧ್ಯಕ್ಷರಾಗಿ ಎಸ್. ಅಡವೀಶಯ್ಯ, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಆರ್ ನಾಗರಾಜ್, ಕಾರ್ಯದರ್ಶಿಗಳಾಗಿ ಎಸ್.ಎಚ್ ಹನುಮಂತರಾವ್ ಮತ್ತು ಡಿ. ನಂಜಪ್ಪ ಹಾಗೂ ಖಜಾಂಚಿಯಾಗಿ ಎಲ್. ಬಸವರಾಜಪ್ಪ, ಗೌರವಾಧ್ಯಕ್ಷರಾಗಿ ಜೆ.ಎಸ್ ನಾಗಭೂಷಣ್ ಹಾಗು ಸದಸ್ಯರಾಗಿ ನರಸಿಂಹಯ್ಯ ಎಚ್. ರಾಮಪ್ಪ, ಕೆಂಪಯ್ಯ, ಜಿ. ಶಂಕರ್, ಎಸ್.ಎಸ್ ಭೈರಪ್ಪ, ಗಂಗಾಧರ, ಮಹೇಶ್ವರಪ್ಪ ಮತ್ತು  ಎಸ್. ನರಸಿಂಹಚಾರ್ ಆಯ್ಕೆಯಾಗಿದ್ದಾರೆ.

ಅಡುಗೆ ಅನಿಲ ದರ ಏರಿಕೆ ಖಂಡಿಸಿ ಏಕಾಂಗಿ ಹೋರಾಟ

ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಸಂಯುಕ್ತ ಜನತಾದಳ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ ಸೋಮವಾರ ಭದ್ರಾವತಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಏಕಾಂಗಿಯಾಗಿ ಉಪವಾಸ ಸತ್ಯಗ್ರಹ ನಡೆಸಿದರು.
   ಭದ್ರಾವತಿ, ಡಿ. ೨೮: ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಸಂಯುಕ್ತ ಜನತಾದಳ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ ಸೋಮವಾರ ನಗರದ ಅಂಬೇಡ್ಕರ್ ವೃತ್ತದಲ್ಲಿ ಏಕಾಂಗಿಯಾಗಿ ಉಪವಾಸ ಸತ್ಯಗ್ರಹ ನಡೆಸಿದರು.
   ಅಡುಗೆ ಅನಿಲ ಬೆಲೆ ಮಾರ್ಚ್ ತಿಂಗಳಿನಲ್ಲಿ ರು.೫೫೦ ಇದ್ದು, ಇದೀಗ ಡಿಸೆಂಬರ್ ತಿಂಗಳಿನಲ್ಲಿ ರು. ೭೦೮ ತಲುಪಿದೆ. ದೇಶದಲ್ಲಿ ಬಡತನ ರೇಖೆಗಿಂತ ಕೆಳಗಿನ ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿ ಹೊಂದಿರುವ ಸುಮಾರು ೨೦ ಕೋಟಿ ಕುಟುಂಬಗಳಿದ್ದು, ಬೆಲೆ ಏರಿಕೆಯಿಂದಾಗಿ ಬಡ ವರ್ಗದವರಿಗೆ ಹೆಚ್ಚಿನ ಹೊರೆಯಾಗುತ್ತಿದೆ ಎಂದು ಅಳಲು ವ್ಯಕ್ತಪಡಿಸಿದರು.
    ಪ್ರಸ್ತುತ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಪ್ರತಿದಿನ ಪರಿಷ್ಕರಣೆಯಾಗುವ ಮಾದರಿಯಲ್ಲಿ ೨೦೨೧ ರಿಂದ ಅಡುಗೆ ಅನಿಲ ಬೆಲೆ ಸಹ ಪರಿಷ್ಕರಣೆ ಮಾಡಲು ಕೇಂದ್ರ ಸರ್ಕಾರ ತೈಲ ಕಂಪನಿಗಳ ಬಂಡವಾಳ ಶಾಹಿಗಳ ಒತ್ತಡಕ್ಕೆ ಮಣಿದು ತೀರ್ಮಾನ ಕೈಗೊಂಡಿದೆ. ಈಗಾಗಲೇ ಕೊರೋನಾ ಮಹಾಮಾರಿಯಿಂದ ದೇಶದ ಬಡವರ್ಗದವರು ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದೀಗ ಕೇಂದ್ರ ಸರ್ಕಾರ ಕೈಗೊಂಡಿರುವ ತೀರ್ಮಾನ ಬಡವರ್ಗದವರ ಮೇಲೆ ಮರಣ ಶಾಸನ ಬರೆದಂತಾಗಿದೆ. ಮುಂದಿನ ದಿನಗಳಲ್ಲಿ ಅಡುಗೆ ಸಿಲಿಂಡರ್ ದರ ರು. ೧,೨೦೦ಕ್ಕೂ ಅಧಿಕ ಹೆಚ್ಚಾಗಬಹುದೆಂದು ಆತಂಕ ವ್ಯಕ್ತಪಡಿಸಿದರು.
   ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಬಡವರ್ಗದವರ ನೆರವಿಗೆ ಮುಂದಾಗಬೇಕು. ಅಡುಗೆ ಅನಿಲ ದರ ಹೆಚ್ಚಾಗದಂತೆ ನಿಯಂತ್ರಿಸಬೇಕೆಂದು ಸಂಯುಕ್ತ ಜನಾತದಳ ಆಗ್ರಹಿಸುತ್ತದೆ ಎಂದರು.

ಭಾನುವಾರ, ಡಿಸೆಂಬರ್ 27, 2020

ಪ್ರೊ ಕಬಡ್ಡಿ ಪಂದ್ಯಾವಳಿಗೆ ೧೨ ತಂಡಗಳ ೯೬ ಕ್ರೀಡಾಪಟುಗಳ ಆಯ್ಕೆ

ಭದ್ರಾವತಿಯಲ್ಲಿ ತಾಲೂಕು ಮಟ್ಟದ ಪ್ರೊ ಕಬಡ್ಡಿ ಪಂದ್ಯಾವಳಿ ನಡೆಯಲಿದ್ದು, ಇದರ ಅಂಗವಾಗಿ ಭಾನುವಾರ ಹಳೇನಗರದ ಕನಕಮಂಟಪ ಮೈದಾನದಲ್ಲಿ ಕ್ರೀಡಾಪಟುಗಳ ಆಯ್ಕೆ ನಡೆಯಿತು.
   ಭದ್ರಾವತಿ, ಡಿ. ೨೭: ತಾಲೂಕು ಮಟ್ಟದ ಪ್ರೊ ಕಬಡ್ಡಿ ಪಂದ್ಯಾವಳಿ ನಡೆಯಲಿದ್ದು, ಇದರ ಅಂಗವಾಗಿ ಭಾನುವಾರ ಹಳೇನಗರದ ಕನಕಮಂಟಪ ಮೈದಾನದಲ್ಲಿ ಕ್ರೀಡಾಪಟುಗಳ ಆಯ್ಕೆ ನಡೆಯಿತು.
     ಒಟ್ಟು ೧೪೬ ಮಂದಿ ಕಬಡ್ಡಿ ಪಟುಗಳು ಪಾಲ್ಗೊಂಡಿದ್ದು, ಈ ಪೈಕಿ ತಲಾ ೮ ಜನರಂತೆ ೧೨ ತಂಡಗಳ ೯೬ ಮಂದಿ ಕಬಡ್ಡಿ ಪಟುಗಳನ್ನು ಆಯ್ಕೆ ಮಾಡಲಾಯಿತು. ನಗರ ನೀರು ಸರಬರಾಜು ಹಾಗು ಒಳಚರಂಡಿ ಮಂಡಳಿ ನಿರ್ದೇಶಕ ಮಂಗೋಟೆ ರುದ್ರೇಶ್, ನಗರಸಭಾ ಸದಸ್ಯ ಮಣಿ ಎ.ಎನ್.ಎಸ್, ಮಾರುತಿ ಮೆಡಿಕಲ್ಸ್ ಆನಂದ್ ಹಾಗು ನಗರಸಭೆ ಮಾಜಿ ಸದಸ್ಯ ಚನ್ನಪ್ಪ ಉಪಸ್ಥಿತರಿದ್ದು, ತಲಾ ಒಂದೊಂದು ತಂಡಗಳನ್ನು ಖರೀದಿಸಿದರು.
   ರಾಜ್ಯಮಟ್ಟದ ಕಬಡ್ಡಿ ಕೇಸರಿ ಪ್ರಶಸ್ತಿ ವಿಜೇತ, ತರಬೇತಿದಾರ ಎಚ್.ಆರ್ ರಂಗನಾಥ್, ಅಂತರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ಎಚ್.ಎನ್ ಕೃಷ್ಣೇಗೌಡ, ತೀರ್ಪುಗಾರ ಎಂ.ಬಿ ಬಸವರಾಜ್, ದೇವರಾಜ್ ಮತ್ತು ಅಂತರಾಷ್ಟ್ರೀಯ ತೀರ್ಪುಗಾರ ಎಸ್.ಎನ್ ಸಿದ್ದಯ್ಯ ನೇತೃತ್ವದಲ್ಲಿ ಆಯ್ಕೆ ನಡೆಯಿತು.
  ಹಿರಿಯ ಕಬಡ್ಡಿ ಪಟು ಚಿನ್ನಯ್ಯ, ಅತ್ತಿಗುಂದ ಕರಿಯಪ್ಪ, ಬೊಮ್ಮನಕಟ್ಟೆ ಸರ್.ಎಂ.ವಿ ವಿಜ್ಞಾನ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ವಸಂತಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಏಕಾಂತಮ್ಮ ನಿಧನ

ಏಕಾಂತಮ್ಮ
ಭದ್ರಾವತಿ, ಡಿ. ೨೭: ನಗರ ರುದ್ರ ಕ್ಲಿನಿಕ್ ವೈದ್ಯ ಡಾ. ರುದ್ರಮೂರ್ತಿರವರ ಪತ್ನಿ ಏಕಾಂತಮ್ಮ  ಭಾನುವಾರ ನಿಧನ ಹೊಂದಿದರು.
ಪತಿ ಡಾ. ರುದ್ರಮೂರ್ತಿ, ಅಬುದಾಬಿಯಲ್ಲಿರುವ ಇಂಜಿನಿಯರ್ ಯತೀಶ್, ಬೆಂಗಳೂರಿನ ಖಾಸಗಿ ಕಂಪನಿಯೊಂದರ ವ್ಯವಸ್ಥಾಪಕ ತಿಪ್ಪೇಶ್ ಸೇರಿದಂತೆ ಇಬ್ಬರು ಗಂಡು ಮಕ್ಕಳು, ಸೊಸೆಯಂದಿರನ್ನು ಹೊಂದಿದ್ದರು.
ಮೃತರ ಅಂತ್ಯಕ್ರಿಯೆ ಡಿ.೨೮ರ ಸೋಮವಾರ ಬೆಳಿಗ್ಗೆ ೧೧ ಗಂಟೆಗೆ ಹಳೇನಗರದ ವೀರಶೈವ ರುದ್ರಭೂಮಿಯಲ್ಲಿ ನೆರವೇರಲಿದ್ದು, ಮೃತರ ನಿಧನಕ್ಕೆ ನಗರದ ವಿವಿಧ ಗಣ್ಯರು ಸಂತಾಪ ಸೂಚಿಸಿದ್ದಾರೆ.



ಹಳೇಯ ವಿದ್ಯಾರ್ಥಿ ಸ್ನೇಹಿತ ನ್ಯಾಯಾಧೀಶ ಎಸ್.ಟಿ ದೇವರಾಜ್‌ಗೆ ಸನ್ಮಾನ, ಅಭಿನಂದನೆ

ಮೈಸೂರಿನ ಜಿಲ್ಲಾ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿರುವ ಎಸ್.ಟಿ ದೇವರಾಜ್‌ರವರು ಕಾರ್ಯ ನಿಮಿತ್ತ ಕುಟುಂಬ ಸಮೇತ ಭದ್ರಾವತಿ ನಗರಕ್ಕೆ ಆಗಮಿಸಿದ ಹಿನ್ನಲೆಯಲ್ಲಿ ಅವರ ವಿದ್ಯಾರ್ಥಿ ಸ್ನೇಹಿತರೆಲ್ಲರೂ ಒಂದೆಡೆ ಸೇರಿ ಸನ್ಮಾನಿಸಿ ಅಭಿನಂದಿಸಿದರು.
ಭದ್ರಾವತಿ, ಡಿ. ೨೭: ಸುಮಾರು ೩೪ ವರ್ಷಗಳ ನಂತರ ವಿದ್ಯಾರ್ಥಿ ಸ್ನೇಹಿತರೊಬ್ಬರು ಉನ್ನತ ಹುದ್ದೆಯನ್ನು ಆಲಂಕರಿಸಿ ನಗರಕ್ಕೆ ಆಗಮಿಸಿದ ಹಿನ್ನಲೆಯಲ್ಲಿ ಸ್ನೇಹಿತರೆಲ್ಲರೂ ಸೇರಿ ಅವರನ್ನು ಸನ್ಮಾನಿಸಿ ಅಭಿನಂದಿಸುವ ಮೂಲಕ ತಮ್ಮ ಹಳೇಯ ನೆನಪಿನೊಂದಿಗೆ ಕೆಲ ಕ್ಷಣ ಸಂಭ್ರಮಿಸಿದ ಘಟನೆ ಭಾನುವಾರ ವಿಐಎಸ್‌ಎಲ್ ಅತಿಥಿ ಗೃಹದಲ್ಲಿ ನಡೆಯಿತು. 
ಮೈಸೂರಿನ ಜಿಲ್ಲಾ ಹೆಚ್ಚುವರಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿರುವ ಎಸ್.ಟಿ ದೇವರಾಜ್‌ರವರು ಕಾರ್ಯ ನಿಮಿತ್ತ ಕುಟುಂಬ ಸಮೇತ ನಗರಕ್ಕೆ ಆಗಮಿಸಿದ ಹಿನ್ನಲೆಯಲ್ಲಿ ಅವರ ವಿದ್ಯಾರ್ಥಿ ಸ್ನೇಹಿತರೆಲ್ಲರೂ ಒಂದೆಡೆ ಸೇರಿ ಸನ್ಮಾನಿಸಿ ಅಭಿನಂದಿಸಿದರು. 
ದೇವರಾಜ್‌ರವರು ೩೪ ವರ್ಷಗಳ ಹಿಂದೆ ನಗರದ ಬೊಮ್ಮನಕಟ್ಟೆ ಸರ್.ಎಂ.ವಿ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಬಿ.ಎಸ್ಸಿ  ವ್ಯಾಸಂಗ ನಡೆಸಿದ್ದರು. ಈ ಸಂದರ್ಭದಲ್ಲಿ ಇವರೊಂದಿಗೆ ವ್ಯಾಸಂಗ ನಡೆಸುತ್ತಿದ್ದ ನಗರದ ವಿಇಎಸ್ ವಿದ್ಯಾಸಂಸ್ಥೆಯ ರಾಷ್ಟ್ರ ಪ್ರಶಸ್ತಿ ಶಿಕ್ಷಕ ಶಿವಲಿಂಗೇಗೌಡ, ಡಾ. ಭುಜಂಗಶೆಟ್ಟಿ, ರವಿಶಂಕರ್, ಬಾಬುಶೇಟ್, ಭುವನೇಶ್ವರ್, ಉಪನ್ಯಾಸಕ ಮಲ್ಲೇಶಪ್ಪ, ಮುಖ್ಯೋಪಾಧ್ಯಾಯ ಜಯಪ್ಪ, ವಕೀಲ ಕಾರಂತ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ವೆಂಕಟೇಶ್, ಹೈಕೋರ್ಟ್ ವಕೀಲ ಲೋಕನಾಥ್ ಹಾಗು ಇನ್ನಿತರರು ತಮ್ಮ ಹಳೇಯ ನೆನಪುಗಳೊಂದಿಗೆ ಕೆಲ ಕ್ಷಣ ಸಂಭ್ರಮಿಸಿದರು. 

ವಿಜೃಂಭಣೆಯಿಂದ ಜರುಗಿದ ಶ್ರೀ ವೀರಾಂಜನೇಯ ಸ್ವಾಮಿ ರಥೋತ್ಸವ

ಕೋವಿಡ್-೧೯ರ ನಡುವೆಯೂ ಪ್ರತಿ ವರ್ಷದಂತೆ ಈ ಬಾರಿ ಸಹ ಭದ್ರಾವತಿ ಹುತ್ತಾ ಕಾಲೋನಿ ಶ್ರೀ ವೀರಾಂಜನೇಯ ಸ್ವಾಮಿ ರಥೋತ್ಸವ ಭಾನುವಾರ ವಿಜೃಂಭಣೆಯಿಂದ ನೆರವೇರಿತು.
ಭದ್ರಾವತಿ, ಡಿ. ೨೭: ಕೋವಿಡ್-೧೯ರ ನಡುವೆಯೂ ಪ್ರತಿ ವರ್ಷದಂತೆ ಈ ಬಾರಿ ಸಹ ನಗರದ ಹುತ್ತಾ ಕಾಲೋನಿ ಶ್ರೀ ವೀರಾಂಜನೇಯ ಸ್ವಾಮಿ ರಥೋತ್ಸವ ಭಾನುವಾರ ವಿಜೃಂಭಣೆಯಿಂದ ನೆರವೇರಿತು.
ಮಧ್ಯಾಹ್ನ ಸುಮಾರು ೧೨.೩೦ಕ್ಕೆ ದೇವಸ್ಥಾನದ ಆವರಣದಿಂದ ಆರಂಭಗೊಂಡ ರಥೋತ್ಸವ ಸರ್.ಎಂ ವಿಶ್ವೇಶ್ವರಾಯ ಆಟೋ ನಿಲ್ದಾಣದವರೆಗೆ ಸಾಗಿತು. ನೂರಾರು ಭಕ್ತಾಧಿಗಳು ರಥೋತ್ಸವ ಆರಂಭವಾಗುತ್ತಿದ್ದಂತೆ ಜೈಕಾರಗಳನ್ನು ಹಾಕಿ ಮುಂದೆ ಸಾಗಿದರು. ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು. ಕಾಂಗ್ರೆಸ್ ಮುಖಂಡ ಎಚ್.ಸಿ ದಾಸೇಗೌಡ ಹಲವಾರು ವರ್ಷಗಳಿಂದ ರಥೋತ್ಸವದಲ್ಲಿ ಭಕ್ತಾಧಿಗಳಿಗೆ ಪ್ರಸಾದ ವ್ಯವಸ್ಥೆ ನೆರವೇರಿಸಿಕೊಂಡು ಬರುತ್ತಿದ್ದು, ಈ ಬಾರಿ ಸಹ ಇವರ ನೇತೃತ್ವದಲ್ಲಿ ಪ್ರಸಾದ ವಿತರಣೆ ನಡೆಯಿತು.
ಶಾಸಕ ಬಿ.ಕೆ ಸಂಗಮೇಶ್ವರ್, ಸಮಾಜ ಸೇವಕ ಸ್ನೇಹ ಜೀವಿ ಬಳಗದ ಪೊಲೀಸ್ ಉಮೇಶ್, ನಗರಸಭಾ ಸದಸ್ಯೆ ಎಂ.ಎಸ್ ಸುಧಾಮಣಿ, ಬಿಜೆಪಿ ಮುಖಂಡ ಎಚ್.ಸಿ ರಮೇಶ್, ಮುಖಂಡರಾದ ದೇವಸ್ಥಾನ ಸೇವಾ ಸಮಿತಿ ಪ್ರಮುಖರಾದ ಕರಿಯಪ್ಪ, ಎ.ಟಿ ರವಿ, ಕಬ್ಬಡಿ ಕೃಷ್ಣೇಗೌಡ, ಸತೀಶ್‌ಗೌಡ, ತಿಮ್ಮೇಗೌಡ, ಆರ್. ವೇಣುಗೋಪಾಲ್ ಸೇರಿದಂತೆ ಇನ್ನಿತರ ಗಣ್ಯರು ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾದರು.
ಕೊವೀಡ್-೧೯ರ ಹಿನ್ನಲೆಯಲ್ಲಿ ದೇವಸ್ಥಾನ ಆಡಳಿತ ಮಂಡಳಿ ಹೆಚ್ಚಿನ ಜಾಗೃತಿ ವಹಿಸಿತ್ತು. ಭಕ್ತಾಧಿಗಳ ಸಂಖ್ಯೆ ನಿಯಂತ್ರಿಸುವ ಹಿನ್ನಲೆಯಲ್ಲಿ ರಥೋತ್ಸವ ಕುರಿತು ಹೆಚ್ಚಿನ ಪ್ರಚಾರ ಕೈಗೊಂಡಿರಲಿಲ್ಲ. ಆದರೂ ಸಹ ಈ ಬಾರಿ ಪ್ರತಿ ವರ್ಷಕ್ಕಿಂತ ಹೆಚ್ಚಿನ ಭಕ್ತಾಧಿಗಳು ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾದರು.
ಮಾಸ್ಕ್-ಸಾಮಾಜಿಕ ಅಂತರ ಕಂಡು ಬರಲಿಲ್ಲ:
ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತಾಧಿಗಳಲ್ಲಿ ಸಾಮಾಜಿಕ ಅಂತರವಾಗಲಿ, ಮಾಸ್ಕ್ ಬಳಕೆಯಾಗಲಿ ಕಂಡು ಬರಲಿಲ್ಲ. ಒಟ್ಟಾರೆ ಕೋವಿಡ್-೧೯ ನಿಯಮಗಳನ್ನು ಪಾಲಿಸದಿರುವುದು ವಿಪರ್ಯಾಸದ ಸಂಗತಿಯಾಗಿದೆ.