Friday, April 2, 2021

೪ನೇ ಪೋಸ್ಟಲ್ ಕ್ರಿಕೆಟ್ ಲೀಗ್ ಪಂದ್ಯಾವಳಿ : ಭದ್ರಾವತಿ ಬ್ಲಾಸ್ಟರ್‍ಸ್ ತಂಡ ಪ್ರಥಮ ಬಹುಮಾನ

ಪ್ರಧಾನ ಅಂಚೆ ಕಛೇರಿ ಮನೋರಂಜನಾ ಕೂಟ ವತಿಯಿಂದ ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ೪ನೇ ಪೋಸ್ಟಲ್ ಕ್ರಿಕೆಟ್ ಲೀಗ್ ೨೦೨೧ ಪಂದ್ಯಾವಳಿಯಲ್ಲಿ ಭದ್ರಾವತಿ ಬ್ಲಾಸ್ಟರ್‍ಸ್ ತಂಡ ಪ್ರಥಮ ಬಹುಮಾನ ಪಡೆದುಕೊಂಡಿತು.
   ಭದ್ರಾವತಿ, ಏ. ೨: ಪ್ರಧಾನ ಅಂಚೆ ಕಛೇರಿ ಮನೋರಂಜನಾ ಕೂಟ ವತಿಯಿಂದ ನಗರದ ನ್ಯೂಟೌನ್ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ೪ನೇ ಪೋಸ್ಟಲ್ ಕ್ರಿಕೆಟ್ ಲೀಗ್ ೨೦೨೧ ಪಂದ್ಯಾವಳಿಯಲ್ಲಿ ಭದ್ರಾವತಿ ಬ್ಲಾಸ್ಟರ್‍ಸ್ ತಂಡ ಪ್ರಥಮ ಬಹುಮಾನ ಪಡೆದುಕೊಂಡಿತು.
    ಅಂತಿಮ ಘಟ್ಟದ ರೋಚಕ ಪಂದ್ಯದಲ್ಲಿ ಭದ್ರಾವತಿ ಬ್ಲಾಸ್ಟರ್‍ಸ್ ಮತ್ತು ಸಾಗರ್ ಸೀ ಬರ್ಡ್ಸ್ ತಂಡ ಪ್ರಶಸ್ತಿಗಾಗಿ ಸೆಣಸಾಟ ನಡೆಸಿದವು. ಕೊನೆಯ ಹಂತದಲ್ಲಿ ಭದ್ರಾವತಿ ಬ್ಲಾಸ್ಟರ್‍ಸ್ ತಂಡ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
    ಬೆಳಿಗ್ಗೆ ೭.೩೦ ರಿಂದ ಸಂಜೆ ೬ ಗಂಟೆವರೆಗೂ ನಡೆದ ಪಂದ್ಯಾವಳಿಯಲ್ಲಿ ಭದ್ರಾವತಿ ಬುಲ್ಸ್, ಯೂನಿಟೆಡ್ ಕ್ರಿಕೆಟರ್‍ಸ್ ಗೋಪಾಲ, ಚನ್ನಗಿರಿ ರೆಬೆಲ್ಸ್, ಕೊಡಚಾದ್ರಿ ಬ್ರದರ್‍ಸ್, ಡಪ್ ಕಬ್ಸ್ ಹೊನ್ನಾಳಿ, ವಿನೋಬನಗರ್, ಮಾಸ್ಟರ್ ಬ್ಲಾಸ್ಟರ್ ಕ್ರಿಕೆಟರ್‍ಸ್, ಶಿಕಾರಿಪೂರ್ ಶೂಟರ್‍ಸ್, ಇಲೆವೆನ್ ಮೇಲ್ಸ್ ಕ್ರಿಕೆಟರ್‍ಸ್, ಭದ್ರಾವತಿ ಬ್ಲಾಸ್ಟರ್‍ಸ್, ಸಾಗರ್ ಸೀ ಬರ್ಡ್ಸ್, ಸಾಗರ್ ಸ್ಟ್ರಿಕರ್‍ಸ್, ಆರ್ ಭಟ್  ಟೀಮ್, ಲೋಸರ್ ಮತ್ತು ಸ್ಟಾರ್ ಇಲೆವೆನ್ ತೀರ್ಥಹಳ್ಳಿ ಸೇರಿದಂತೆ ಒಟ್ಟು ೧೫ ತಂಡಗಳು ಪಾಲ್ಗೊಂಡಿದ್ದವು. ಒಟ್ಟು ೨೧ ಪಂದ್ಯಗಳು ಜರುಗಿದವು. ೪ ಜನ ತೀರ್ಪುಗಾರರಾಗಿ ಪಾಲ್ಗೊಂಡಿದ್ದರು.
     ವಿಜೇತ ತಂಡಗಳಿಗೆ ಪ್ರಶಸ್ತಿಯನ್ನು ಶಿವಮೊಗ್ಗ ಅಂಚೆ ಅಧೀಕ್ಷಕ ಜಿ. ಹರೀಶ್ ಪ್ರಧಾನ ಮಾಡಿದರು. ಅಂಚೆ ಪಾಲಕ ವಿ. ಶಶಿಧರ ಅಧ್ಯಕ್ಷತೆ ವಹಿಸಿದ್ದರು. ವಿಐಎಸ್‌ಎಲ್ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರವೀಣ್‌ಕುಮಾರ್, ಪ್ರಮುಖರಾದ ಶ್ರೀನಿವಾಸ್, ಎಸ್.ಎಸ್ ಮಂಜುನಾಥ್, ಪ್ರಕಾಶ್‌ರಾವ್, ಕೆ.ಆರ್ ಉಷಾ, ಪ್ರಹ್ಲಾದ ನಾಯಕ, ಉದಯ ಆಚಾರ್, ನಾಗರಾಜ ಪೂಜಾರ, ಎಚ್.ವಿ ರಾಜ್‌ಕುಮಾರ್, ಟಿ.ಕೆ ಗೋಪಾಲ್, ಜಿ. ರಾಘವೇಂದ್ರ, ಜೆ. ಮಂಜುನಾಥ್, ಎಚ್.ಆರ್ ಈಶ್ವರಪ್ಪ, ಆರ್. ವೆಂಕಟೇಶ್, ಕೆ. ಪ್ರಹ್ಲಾದ್ ರಾವ್, ಸಿ.ಆಋ ಪಾಟೀಲ್, ಕೆ. ಲಿಂಗರಾಜು  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಮಂಜೂರಾತಿ ಪ್ರಕ್ರಿಯೆಯಲ್ಲಿರುವಾಗಲೇ ಶಾಸಕರಿಂದ ಕಾಮಗಾರಿಗಳಿಗೆ ಗುದ್ದಲಿ ಪೂಜೆ

ಸುದ್ದಿಗೋಷ್ಠಿಯಲ್ಲಿ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ಆರೋಪ

ಭದ್ರಾವತಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ಮಾತನಾಡಿದರು.
    ಭದ್ರಾವತಿ, ಏ. ೨: ನಗರಸಭೆ ಚುನಾವಣೆ ಹಿನ್ನಲೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ತರಾತುರಿಯಲ್ಲಿ ಕಾಮಗಾರಿಗಳ ಗುದ್ದಲಿಪೂಜೆ ನೆರವೇರಿಸಲು ಮುಂದಾಗಿರುವುದು ಖಂಡನೀಯ ಎಂದು ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ಹೇಳಿದರು.
     ಅವರು ಶುಕ್ರವಾರ ಹಳೇನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಡಳಿತಾತ್ಮಕವಾಗಿ ಇನ್ನೂ ಸರಿಯಾಗಿ ಮಂಜೂರಾತಿಯಾಗದೆ ಪ್ರಕ್ರಿಯೆಯಲ್ಲಿರುವ ಕಾಮಗಾರಿಗಳ ಗುದ್ದಲಿ ಪೂಜೆ ನೆರವೇರಿಸಲಾಗುತ್ತಿದೆ. ಇದು ನಗರಸಭೆ ಚುನಾವಣೆ ಹಿನ್ನಲೆಯಲ್ಲಿ ನಡೆಸುತ್ತಿರುವ ರಾಜಕೀಯ ಕುತಂತ್ರ ಎಂದು ಆರೋಪಿಸಿದರು.
     ಸಂಸದ ಬಿ.ವೈ ರಾಘವೇಂದ್ರ ಹಾಗು ಜಿಲ್ಲಾ ಉಸ್ತುವಾರಿ ಸಚಿವರ ಪರಿಶ್ರಮದಿಂದಾಗಿ ರಾಜ್ಯ ಸರ್ಕಾರ ಹಾಗು ನಗರಸಭೆ ಅನುದಾನ ಬಳಸಿಕೊಂಡು ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಸಮೀಪ ನೂತನ ಖಾಸಗಿ ಬಸ್ ನಿಲ್ದಾಣ ಹಾಗು ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಮೃತದೇಹಗಳ ಅಂತ್ಯಕ್ರಿಯೆಗೆ ಅತ್ಯಾಧುನಿಕ ತಂತ್ರಜ್ಞಾನದ ವಿದ್ಯುತ್ ಯಂತ್ರ ಅಳವಡಿಕೆ ಕಾಮಗಾರಿಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಆದರೆ ಕಾಮಗಾರಿಗಳು ಇನ್ನೂ ಮಂಜೂರಾತಿ ಪ್ರಕ್ರಿಯೆಯಲ್ಲಿದ್ದು, ಈ ಹಂತದಲ್ಲಿ ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ಬಾರದಂತೆ ಶಾಸಕರು ಗುದ್ದಲಿ ಪೂಜೆಗೆ ಮುಂದಾಗಿದ್ದಾರೆ. ಅಲ್ಲದೆ ಕಾಮಗಾರಿಗಳಿಗೆ ನಿಗದಿಪಡಿಸಲಾಗಿರುವ ಅನುದಾನಗಳ ಕುರಿತು ಸಹ ತಪ್ಪು ಅಂಕಿ ಅಂಶಗಳನ್ನು ನೀಡುವ ಮೂಲಕ ಕ್ಷೇತ್ರದ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಇದನ್ನು ಪಕ್ಷ ಖಂಡಿಸುವ ಜೊತೆಗೆ ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ, ತಹಸೀಲ್ದಾರ್‌ಗೆ ಹಾಗು ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ ಎಂದರು.
   ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ ಶ್ರೀನಾಥ್ ಮಾತನಾಡಿ, ಕೆಲವೇ ದಿನಗಳಲ್ಲಿ ನಗರಸಭೆ ಚುನಾವಣೆ ನೀತಿ ಸಂಹಿತೆ ಬರಲಿದೆ. ಈ ಹಂತದಲ್ಲಿ ಈ ರೀತಿ ನಡೆಯುತ್ತಿರುವುದು ಸರಿಯಲ್ಲ. ಈ ವಿಚಾರ ಅಧಿಕಾರಿಗಳಿಗೆ ತಿಳಿದಿದ್ದರೂ ಸಹ ಶಾಸಕರ ಅಣತಿಯಂತೆ ವರ್ತಿಸುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
    ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ಧರ್ಮಪ್ರಸಾದ್, ಕರ್ನಾಟಕ ರಾಜ್ಯ ನೀರು ಸರಬರಾಜು, ಒಳಚರಂಡಿ ಮಂಡಳಿ ನಿರ್ದೇಶಕ ಮಂಗೋಟೆ ರುದ್ರೇಶ್, ಸೂಡಾ ಸದಸ್ಯ ವಿ. ಕದಿರೇಶ್, ಜಿ. ಆನಂದಕುಮಾರ್, ರಾಮಚಂದ್ರ, ತಾಲೂಕು ಪ್ರಧಾನ ಕಾರ್ಯದರ್ಶಿ ಚನ್ನೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕುರುಬರ ಸಂಘದ ಮಾಜಿ ಅಧ್ಯಕ್ಷ ಹೊನ್ನೂರಪ್ಪ ನಿಧನ

ಭದ್ರಾವತಿ, ಏ. ೨: ನಿವೃತ್ತ ಸಹಾಯಕ ತಹಸೀಲ್ದಾರ್, ತಾಲೂಕು ಕುರುಬರ ಸಂಘದ ಮಾಜಿ ಅಧ್ಯಕ್ಷ ಹೊನ್ನೂರಪ್ಪ(೭೫) ಶುಕ್ರವಾರ ನಿಧನ ಹೊಂದಿದರು.
ಓರ್ವ ಪುತ್ರಿ, ಇಬ್ಬರು ಪುತ್ರರನ್ನು ಹೊಂದಿದ್ದರು. ನಗರದ ಕನಕನಗರದ ನಿವಾಸಿಯಾಗಿರುವ ಹೊನ್ನೂರಪ್ಪ ಕುರುಬ ಸಮಾಜದ ಹಿರಿಯ ಮುಖಂಡರಾಗಿ ಗುರುತಿಸಿಕೊಳ್ಳುವ ಜೊತೆಗೆ ಸಂಘದ ಅಧ್ಯಕ್ಷರಾಗಿ ಹಾಗೂ ಚನ್ನಗಿರಿ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಮತ್ತು ಇನ್ನಿತರರ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸೇವೆ ಸಲ್ಲಿಸಿದ್ದರು.
ಇವರ ನಿಧನಕ್ಕೆ ತಾಲೂಕು ಕುರುಬರ ಸಂಘದ ಅಧ್ಯಕ್ಷ ಬಿ.ಎಂ ಸಂತೋಷ್ ಹಾಗು ಪದಾಧಿಕಾರಿಗಳು ಮತ್ತು ನಗರದ ವಿವಿಧ ಸಂಘಟನೆಗಳ ಪ್ರಮುಖರು, ಗಣ್ಯರು ಸಂತಾಪ ಸೂಚಿಸಿದ್ದಾರೆ. ಇವರ ಅಂತ್ಯಕ್ರಿಯೆ ಶನಿವಾರ ಬೆಳಿಗ್ಗೆ ಹುತ್ತಾಕಾಲೋನಿ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ.  

ಚಿತ್ರ: ಡಿ೨-ಬಿಡಿವಿಟಿ೧
ಹೊನ್ನೂರಪ್ಪ

ಕೊರೋನಾ ಪರಿಣಾಮದಿಂದ ಆರೋಗ್ಯದ ಮೇಲೆ ಹೆಚ್ಚಿನ ಕಾಳಜಿ : ಮನೋಹರ್

ಭದ್ರಾವತಿ ಜನ್ನಾಪುರ ಬಬ್ಬೂರುಕಮ್ಮೆ ಸಮುದಾಯ ಭವನದಲ್ಲಿ ಶುಕ್ರವಾರ ಹ್ಯಾಪಿ ಲೀವಿಂಗ್ ಲೈಫ್ ಯೋಗ ಕೇಂದ್ರದ ವತಿಯಿಂದ ಯೋಗಪಟುಗಳಿಗೆ ಪ್ರಶಸ್ತಿ ವಿತರಣೆ ಸಮಾರಂಭ ಆಯೋಜಿಸಲಾಗಿತ್ತು.
ಭದ್ರಾವತಿ, ಏ. ೨: ಕಳೆದ ಸುಮಾರು ೧ ವರ್ಷದಿಂದ ಕೊರೋನಾ ಸೋಂಕು ಮನುಷ್ಯನ ಆರೋಗ್ಯದ ಜೊತೆ ಆಟವಾಡುತ್ತಿದ್ದು, ಕೊರೋನಾ ಪರಿಣಾಮದಿಂದಾಗಿ ಮನುಷ್ಯ ತನ್ನ ಆರೋಗ್ಯದ ಕಡೆ ಹೆಚ್ಚು ಗಮನಹರಿಸುವಂತಾಗಿದೆ ಎಂದು ಪೌರಾಯುಕ್ತ ಮನೋಹರ್ ತಿಳಿಸಿದರು.
    ಅವರು ಶುಕ್ರವಾರ ಜನ್ನಾಪರು ಬಬ್ಬೂರುಕಮ್ಮೆ ಸಮುದಾಯ ಭವನದಲ್ಲಿ ಹ್ಯಾಪಿ ಲೀವಿಂಗ್ ಲೈಫ್ ಯೋಗ ಕೇಂದ್ರದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಯೋಗಪಟುಗಳಿಗೆ ಪ್ರಶಸ್ತಿ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
    ಜಂಜಾಟದ ಬದುಕಿನ ನಡುವೆ ಪ್ರಸ್ತುತ ಕೊರೋನಾ ಮನುಷ್ಯನ ಆರೋಗ್ಯಕ್ಕೆ ಸವಾಲಾಗಿ ಪರಿಣಮಿಸಿದೆ. ನಮ್ಮ ಆರೋಗ್ಯದ ರಕ್ಷಣೆಗಾಗಿ ಎಲ್ಲಾ ರೀತಿಯ ಪ್ರಯತ್ಸಗಳಿಗೆ ನಾವುಗಳು ಮುಂದಾಗಿದ್ದೇವೆ. ಇಂತಹ ಸಂದರ್ಭದಲ್ಲಿ ಯೋಗ ಸಹ ನಮ್ಮ ಆರೋಗ್ಯ ರಕ್ಷಣೆಗೆ ಪೂರಕವಾಗಿದೆ. ಈ ಹಿನ್ನಲೆಯಲ್ಲಿ ಯೋಗ ಕಲಿಕೆ ಮೂಲಕ ಆರೋಗ್ಯವಂತರಾಗಲು ಕರೆ ನೀಡಿದರು.
   ಯೋಗ ಗುರು ಮಹೇಶ್ ಮಾತನಾಡಿ, ಪ್ರಶಸ್ತಿಗಾಗಿ ಯೋಗ ಸೀಮಿತವಾಗಿಲ್ಲ. ಯೋಗ ಪ್ರತಿಯೊಬ್ಬರಿಗೂ ಅತ್ಯವಶ್ಯಕವಾಗಿದ್ದು, ಎಲ್ಲಾ ರೀತಿಯ ಕಾಯಿಲೆಗಳಿಗೂ ಯೋಗ ಮೂಲಕ ಪರಿಹಾರ ಕಂಡುಕೊಳ್ಳಲು ಸಾಧ್ಯ. ಬಹುಮುಖ್ಯವಾಗಿ ಮಾನಸಿಕ, ದೈಹಿಕ ಒತ್ತಡಗಳಿಂದ ಹೊರಬರಲು ಯೋಗ ಹೆಚ್ಚಿನ ಸಹಕಾರಿಯಾಗಿದೆ. ಉತ್ತಮ ಮನಸ್ಸು, ದೇಹದಿಂದ ಉತ್ತಮ ಆರೋಗ್ಯ ಸಹ ಸಾಧ್ಯ. ಈ ಹಿನ್ನಲೆಯಲ್ಲಿ ಸಣ್ಣ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರೂ ಸಹ ಯೋಗದಲ್ಲಿ ತೊಡಗಿಸಿಕೊಳ್ಳಬಹುದು ಎಂದರು.
  ಬೆಂಗಳೂರಿನ ಶಿವಜ್ಯೋತಿ ಯೋಗ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ ಯೋಗೋತ್ಸವ-೨೦೨೧ ಸ್ಪರ್ಧೆಯಲ್ಲಿ ಯೋಗ ಕೇಂದ್ರದ ೧೨ ಮಂದಿ  ಭಾಗವಹಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಪ್ರಶಸ್ತಿಗಳನ್ನು ಸ್ವೀಕರಿಸಿದ ಯೋಗಪಟುಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
   ಸ್ಥಳೀಯ ಮುಖಂಡ ಕೆ. ಮಂಜುನಾಥ್, ಶೃತಿ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


Thursday, April 1, 2021

ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸುವವರು, ಕ್ರಿಮಿನಲ್ ಹಿನ್ನಲೆ ಹೊಂದಿರುವವರ ಬಗ್ಗೆ ಮುಂಜಾಗ್ರತೆ ವಹಿಸಿ

ತಹಸೀಲ್ದಾರ್‌ಗೆ ಸಂಯುಕ್ತ ಜನತಾದಳ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್ ಗೌಡ ಮನವಿ



ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿ ಚುನಾವಣೆಗೆ ಸ್ಪರ್ಧಿಸುವವರ ಹಾಗು ಕ್ರಿಮಿನಲ್ ಹಿನ್ನಲೆ ಹೊಂದಿರುವವರ ಬಗ್ಗೆ ಮುಂಜಾಗ್ರತೆ ವಹಿಸುವಂತೆ ಭದ್ರಾವತಿಯಲ್ಲಿ ತಹಸೀಲ್ದಾರ್‌ಗೆ ಸಂಯುಕ್ತ ಜನತಾದಳ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್ ಗೌಡ ಗುರುವಾರ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
  ಭದ್ರಾವತಿ, ಏ. ೧: ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿ ಚುನಾವಣೆಗೆ ಸ್ಪರ್ಧಿಸುವವರ ಹಾಗು ಕ್ರಿಮಿನಲ್ ಹಿನ್ನಲೆ ಹೊಂದಿರುವವರ ಬಗ್ಗೆ ಮುಂಜಾಗ್ರತೆ ವಹಿಸುವಂತೆ ತಹಸೀಲ್ದಾರ್‌ಗೆ ಸಂಯುಕ್ತ ಜನತಾದಳ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್ ಗೌಡ ಗುರುವಾರ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
   ತಹಸೀಲ್ದಾರ್ ಗ್ರೇಡ್-೨ ರಂಗಮ್ಮರಿಗೆ ಮನವಿ ಸಲ್ಲಿಸಿದ ಶಶಿಕುಮಾರ್ ಎಸ್ ಗೌಡ, ನಗರಸಭೆಗೆ ಚುನಾವಣೆ ಘೋಷಣೆಯಾಗಿದ್ದು, ಏ.೮ರಿಂದ ನಾಮಪತ್ರಗಳ ಸಲ್ಲಿಕೆ ಆರಂಭವಾಗಲಿದೆ. ಒಟ್ಟು ೩೫ ವಾರ್ಡ್‌ಗಳ ವ್ಯಾಪ್ತಿಯಲ್ಲಿ ೧೬ ವಾರ್ಡ್‌ಗಳಲ್ಲಿ ಸ್ಪರ್ಧಿಸಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸ್ಥಾನಗಳನ್ನು ಕಲ್ಪಿಸಲಾಗಿದೆ. ಆದರೆ ರಾಜಕೀಯವಾಗಿ, ಆರ್ಥಿಕವಾಗಿ ಪ್ರಬಲರಾಗಿರುವವರು ನಕಲಿ ಜಾತಿ ಪ್ರಮಾಣ ಪತ್ರ ಸೃಷ್ಟಿಸಿ ದುರುದ್ದೇಶದಿಂದ ಸ್ಥಾನಗಳನ್ನು ಕಬಳಿಸುವ ಸಾಧ್ಯತೆಗಳಿವೆ. ಅಲ್ಲದೆ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಸಾಕಷ್ಟು ಉದಾಹರಣೆಗಳಿವೆ. ಇದರಿಂದ ಪ್ರಾಮಾಣಿಕ ಮತ್ತು ನ್ಯಾಯ ಸಮ್ಮತ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತದೆ. ಈ ಕುರಿತು ಅಭ್ಯರ್ಥಿ ವಿರುದ್ಧ ಯಾರಾದರೂ ನ್ಯಾಯಾಲಯದ ಮೆಟ್ಟೆಲೇರಿದರೆ ಮಾತ್ರ ವಿಚಾರಣೆ ನಡೆಯುತ್ತದೆ. ಅಂತಿಮ ತೀರ್ಪು ಬರುವಷ್ಟರಲ್ಲಿ ೪-೫ ವರ್ಷಗಳು ಕಳೆದಿರುತ್ತವೆ. ಅಷ್ಟರಲ್ಲಿ ಚುನಾಯಿತ ಪ್ರತಿನಿಧಿಯ ೫ ವರ್ಷದ ಅವಧಿ ಮುಕ್ತಾಯಗೊಂಡಿರುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು.
    ಈ ಹಿನ್ನಲೆಯಲ್ಲಿ ನಕಲಿ ಜಾತಿ ಪ್ರಮಾಣಪತ್ರ ಪಡೆಯುವವರ ಬಗ್ಗೆ ಎಚ್ಚರವಹಿಸಬೇಕು. ನಾಮಪತ್ರ ಸಲ್ಲಿಸಿದ ದಿನವೇ ಕೂಲಂಕುಷವಾಗಿ ಪರಿಶೀಲಿಸಬೇಕು. ಈ ಸಂಬಂಧ ಯಾರಾದೂರು ದೂರು ಕೊಟ್ಟಲ್ಲಿ ತಕ್ಷಣ ಅವರ ನಾಮಪತ್ರವನ್ನು ವಜಾಮಾಡಬೇಕು. ಅಲ್ಲದೆ ನಕಲಿ ಜಾತಿ ಪ್ರಮಾಣಪತ್ರ ಸಲ್ಲಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಭದ್ರಾವತಿ ತಾಲೂಕು ಪಂಚಾಯಿತಿ ಒಟ್ಟು ೧೪ ಕ್ಷೇತ್ರಗಳು ನಿಗದಿ



   ಭದ್ರಾವತಿ, ಏ. ೧: ಈ ಬಾರಿ ತಾಲೂಕಿನಲ್ಲಿ ಒಟ್ಟು ೧೪ ತಾಲೂಕು ಪಂಚಾಯಿತಿ ಕ್ಷೇತ್ರಗಳನ್ನು ನಿಗದಿಪಡಿಸಿ ರಾಜ್ಯ ಚುನಾವಣಾ ಆಯೋಗ ಕರ್ನಾಟಕ ರಾಜ್ಯ ಪತ್ರದಲ್ಲಿ ಅಧಿಸೂಚನೆ ಹೊರಡಿಸಿದೆ.
ಈ ಹಿಂದೆ ಒಟ್ಟು ೧೯ ತಾಲೂಕು ಪಂಚಾಯಿತಿ ಕ್ಷೇತ್ರಗಳಿದ್ದು, ಈ ಪೈಕಿ ೫ ಕ್ಷೇತ್ರಗಳನ್ನು ಹೊರತುಪಡಿಸಿ ೧೪ ಕ್ಷೇತ್ರಗಳನ್ನು ನಿಗದಿಪಡಿಸಿದೆ. ಈ ಪ್ರಕಾರ ಆನವೇರಿ, ಸಿದ್ದರಹಳ್ಳಿ ಇಟ್ಟಿಗೆಹಳ್ಳಿ, ನಿಂಬೆಗೊಂದಿ, ವಡೇರಪುರ, ಅರಿಶಿನಘಟ್ಟ, ಇಂದಿರಾನಗರ(ಅರಿಶಿನಘಟ್ಟ ತಾಂಡ), ಸೈದರಕಲ್ಲಹಳ್ಳಿ, ಕುರುಬರ ವಿಠಲಾಪುರ, ಆದ್ರಿಹಳ್ಳಿ ಮತ್ತು ದಿಗ್ಗೇನಹಳ್ಳಿ ಒಳಗೊಂಡಂತೆ ಆನವೇರಿ ಕ್ಷೇತ್ರ ಹಾಗು ಮೈದೊಳಲು, ಅಗರದಹಳ್ಳಿ, ಹಂಚಿನಸಿದ್ದಾಪುರ, ಬಸವಾಪುರ, ಭದ್ರಾಪುರ, ಹಾರೋಗುಂಡಿ, ಮಲ್ಲಿಗೇನಹಳ್ಳಿ, ಗುಡುಮಘಟ್ಟ, ತಡಸ, ಜಂಮರಹಳ್ಳಿ ಮತ್ತು ಕಲ್ಲಜ್ಜನಹಾಳ್ ಒಳಗೊಂಡಂತೆ ಅಗರದಹಳ್ಳಿ ಕ್ಷೇತ್ರವನ್ನು ರಚಿಸಲಾಗಿದೆ.
   ಮಂಗೋಟೆ, ನಾಗಸಮುದ್ರ, ಸಿದ್ಲಿಪುರ, ಸನ್ಯಾಸಿಕೋಡಮಗ್ಗೆ, ಕನಸಿನಕಟ್ಟೆ ಮತ್ತು ಮಲ್ಲಾಪುರ ಒಳಗೊಂಡಂತೆ ಸನ್ಯಾಸಿಕೋಡಮಗ್ಗೆ ಕ್ಷೇತ್ರವನ್ನು, ಯಡೇಹಳ್ಳಿ, ಹನುಮಂತಾಪುರ, ಚಂದನಕೆರೆ, ಕಂಗನಾಳು ಮತ್ತು ಅರಹತೊಳಲು ಸೇರಿದಂತೆ ಯಡೇಹಳ್ಳಿ ಕ್ಷೇತ್ರವನ್ನು, ಕಲ್ಲಿಹಾಳ್, ದೊಂಬರಭೈರನಹಳ್ಳಿ, ದಾಸರಕಲ್ಲಹಳ್ಳಿ, ಅಗಸನಹಳ್ಳಿ, ಮಾರಶೆಟ್ಟಿಹಳ್ಳಿ, ತಟ್ಟೆಹಳ್ಳಿ, ಅರದೊಟ್ಲು, ತಿಮ್ಲಾಪುರ ಒಳಗೊಂಡಂತೆ ತಟ್ಟೆಹಳ್ಳಿ ಕ್ಷೇತ್ರವನ್ನು, ಅರಬಿಳಚಿ, ದಾನವಾಡಿ, ಅರಕೆರೆ, ಕಲ್ಲಾಪುರ, ರಂಗಾಪುರ, ನಾಗೋಲಿ, ಹೊಸೂರು ಮತ್ತು ಬೊಮ್ಮನಕಟ್ಟೆ ಒಳಗೊಂಡಂತೆ ಅರಬಿಳಚಿ ಕ್ಷೇತ್ರವನ್ನು ಹಾಗು ಕೂಡ್ಲಿಗೆರೆ, ಕೋಡಿಹಳ್ಳಿ, ಕೊಟ್ಟದಾಳು, ನವಿಲೆಬಸವಾಪುರ, ಹಾಳುಮಲ್ಲಾಪುರ, ಕಲ್ಪನಹಳ್ಳಿ, ಅತ್ತಿಗುಂದ, ಸೀತಾರಾಮಪುರ, ಬಸಲೀಕಟ್ಟೆ, ನಾಗತಿಬೆಳಗಲು, ಹೊಸಹಳ್ಳಿ, ಮತ್ತಿಘಟ್ಟ, ಹಾತಿಕಟ್ಟೆ  ಮತ್ತು ತಡಸ ಒಳಗೊಂಡಂತೆ ತಡಸ ಕ್ಷೇತ್ರವನ್ನು ರಚಿಸಲಾಗಿದೆ.
    ಅರಳಿಹಳ್ಳಿ, ಕೋಮಾರನಹಳ್ಳಿ, ಗುಡ್ಡದನೇರಲೆಕೆರೆ, ದೇವರಹಳ್ಳಿ, ವೀರಾಪುರ, ಮಜ್ಜಿಗೇನಹಳ್ಳಿ, ಗೌಡರಹಳ್ಳಿ, ಕಾಗೇಕೋಡಮಗ್ಗೆ, ಬಾಬಳ್ಳಿ, ತಿಪ್ಲಾಪುರ ಮತ್ತು ತಳ್ಳಿಕಟ್ಟೆ ಒಳಗೊಂಡಂತೆ ಅರಳಿಹಳ್ಳಿ ಕ್ಷೇತ್ರವನ್ನು, ಅಂತರಗಂಗೆ, ಕಾಚಗೊಂಡನಹಳ್ಳಿ, ದೇವರನರಸೀಪುರ, ಉಕ್ಕುಂದ, ಕೆಂಚಮ್ಮನಹಳ್ಳಿ, ಬಂಡಿಗುಡ್ಡ, ಬೆಳ್ಳಿಗೆರೆ, ಬದನೆಹಾಳ್, ನೆಟ್ಟಕಲ್ಲಹಟ್ಟಿ, ದೊಡ್ಡೇರಿ, ಎಮ್ಮೆದೊಡ್ಡಿ, ಗಂಗೂರು, ಬಿಸಿಲಮನೆ, ಬಾಳೆಕಟ್ಟೆ, ಸಿದ್ದರಹಳ್ಳಿ, ಮಳಲಹರವು, ವರವಿನಕೆರೆ, ಕೊರಲಕೊಪ್ಪ ಮತ್ತು ಗುಣಿನರಸೀಪುರ ಒಳಗೊಂಡಂತೆ ಅಂತರಗಂಗೆ ಕ್ಷೇತ್ರವನ್ನು, ಮಾವಿನಕೆರೆ, ಮೊಸರಹಳ್ಳಿ, ಕೆಂಚೇನಹಳ್ಳಿ, ಹಡ್ಲಘಟ್ಟ, ಕಾಳಿಂಗನಹಳ್ಳಿ, ಬಾರಂದೂರು, ಹಳ್ಳಿಕೆರೆ ಮತ್ತು ಯರೇಹಳ್ಳಿ ಒಳಗೊಂಡಂತೆ ಯರೇಹಳ್ಳಿ ಕ್ಷೇತ್ರವನ್ನು ಹಾಗು ಹಿರಿಯೂರು, ನಂಜಾಪುರ, ಅರಳಿಕೊಪ್ಪ, ಗಂಗೂರು, ಬಾಳೆಮಾರನಹಳ್ಳಿ, ತಾರೀಕಟ್ಟೆ, ಚಿಕ್ಕಗೊಪ್ಪೇನಹಳ್ಳಿ, ಕಾರೇಹಳ್ಳಿ ಮತ್ತು ಬೊಮ್ಮೇನಹಳ್ಳಿ ಒಳಗೊಂಡಂತೆ ಹಿರಿಯೂರು ಕ್ಷೇತ್ರವನ್ನು ರಚಿಸಲಾಗಿದೆ.
  ಕಲ್ಲಹಳ್ಳಿ, ಮಜ್ಜಿಗೇನಹಳ್ಳಿ, ಬಿಳಿಕಿ, ಸಿರಿಯೂರು, ಹಾಗಲಮನೆ, ಸೋಮೇನಕೊಪ್ಪ, ಹಳಿಯಾರು ರಾಮೇನಕೊಪ್ಪ, ಸಂಕ್ಲೀಪುರ, ವೀರಾಪುರ, ಕಂಬದಾಳು ಹೊಸೂರು, ಹೊನ್ನೆಹಟ್ಟಿ, ಹುಣಸೇಕಟ್ಟೆ, ತಮ್ಮಡೀಹಳ್ಳಿ ಮತ್ತು ಕಾಳನಕಟ್ಟೆ ಒಳಗೊಂಡಂತೆ ಹುಣಸೇಕಟ್ಟೆ ಕ್ಷೇತ್ರವನ್ನು, ಸಿಂಗನಮನೆ, ವದಿಯೂರು, ತಾವರಘಟ್ಟ, ಗೋಣಿಬೀಡು, ಮಲ್ಲಿಗೇನಹಳ್ಳಿ, ನೆಲ್ಲಿಸರ ಮತ್ತು ಮಾಳೇನಹಳ್ಳಿ ಒಳಗೊಂಡಂತೆ ಸಿಂಗನಮನೆ ಕ್ಷೇತ್ರವನ್ನು ಹಾಗು ದೊಣಬಘಟ್ಟ, ಪದ್ಮೇನಹಳ್ಳಿ, ಕೊಪ್ಪದಾಳು, ನವಿಲೇಬಸವಾಪುರ ಮತ್ತು ಹೊಳೆನೇರಲೆಕೆರೆ ಒಳಗೊಂಡಂತೆ ದೊಣಬಘಟ್ಟ ಕ್ಷೇತ್ರವನ್ನು ರಚಿಸಲಾಗಿದೆ.

೪ನೇ ಪೊಸ್ಟಲ್ ಕ್ರಿಕೆಟ್ ಲೀಗ್

   ಭದ್ರಾವತಿ, ಏ. ೧: ನಗರದ ಪ್ರಧಾನ ಅಂಚೆ ಕಛೇರಿ ಮನೋರಂಜನಾ ಕೂಟ ವತಿಯಿಂದ ಏ.೨ರಂದು ನ್ಯೂಟೌನ್ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಶಿವಮೊಗ್ಗ ವಿಭಾಗೀಯ ಮಟ್ಟದ ೪ನೇ ಪೊಸ್ಟಲ್ ಕ್ರಿಕೆಟ್ ಲೀಗ್ ೨೦೨೧ ಹಮ್ಮಿಕೊಳ್ಳಲಾಗಿದೆ.
   ಬೆಳಿಗ್ಗೆ ೭.೩೦ಕ್ಕೆ ಶಿವಮೊಗ್ಗ ಅಂಚೆ ಅಧೀಕ್ಷಕ ಜಿ. ಹರೀಶ್ ಪಂದ್ಯಾವಳಿ ಉದ್ಘಾಟಿಸಲಿದ್ದು, ಅಂಚೆ ಪಾಲಕ ವಿ. ಶಶಿಧರ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಹಾಯಕ ಅಂಚೆ ಅಧೀಕ್ಷಕಿ ಕೆ.ಆರ್ ಉಷಾ, ಅಂಚೆ ನಿರೀಕ್ಷಕ ಪಹ್ಲಾದ್ ನಾಯಕ ಉಪಸ್ಥಿತರಿರುವರು.
    ಸಂಜೆ ೬ ಗಂಟೆಗೆ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದ್ದು, ಸಹಾಯಕ ಅಂಚೆ ಅಧೀಕ್ಷಕ ಶ್ರೀನಿವಾಸ್, ಎಸ್.ಎಸ್ ಮಂಜುನಾಥ್, ಪ್ರಕಾಶ್‌ರಾವ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.