ಆಕಾಂಕ್ಷಿಗಳಿಂದ ಟಿಕೇಟ್‌ಗಾಗಿ ಮಾತೃ ಪಕ್ಷದಿಂದ ಇತರೆ ಪಕ್ಷಕ್ಕೆ ಜಿಗಿತ
ಭದ್ರಾವತಿ ಜನ್ನಾಪುರ ವಾರ್ಡ್ ನಂ.೨೯ರಲ್ಲಿ ಜೆಡಿಎಸ್ ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಸುಮಾರು ೩ ವಾರಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನಡೆಸಿದ್ದ ಕರ್ನಾಟಕ ಜನಸೈನ್ಯ ಸಂಘಟನೆ ಜಿಲ್ಲಾಧ್ಯಕ್ಷ ಕೆ. ಮಂಜುನಾಥ್ ಪತ್ನಿ ಶೃತಿ ಮಾತೃ ಪಕ್ಷದಲ್ಲಿ ಸ್ಪರ್ಧಿಸಲು ಅವಕಾಶ ಸಿಗದಿರುವುದು ತಿಳಿಯುತ್ತಿದ್ದಂತೆ ಬುಧವಾರ ಶಾಸಕ ಬಿ.ಕೆ ಸಂಗಮೇಶ್ವರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
* ಅನಂತಕುಮಾರ್
ಭದ್ರಾವತಿ: ಸುಮಾರು ೨ ವರ್ಷಗಳ ನಂತರ ನಡೆಯುತ್ತಿರುವ ಇಲ್ಲಿನ ನಗರಸಭೆ ಚುನಾವಣೆಗೆ ಗುರುವಾರದಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಈ ನಡುವೆ ವಿವಿಧ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಘೋಷಣೆಗೆ ಮುಂದಾಗಿವೆ.
ಎಲ್ಲಾ ಪಕ್ಷಗಳಿಗಿಂತ ಮೊದಲು ಭಾರತೀಯ ಜನತಾ ಪಕ್ಷ ೩೫ ವಾರ್ಡ್‌ಗಳ ಪೈಕಿ ೨೧ ವಾರ್ಡ್‌ಗಳಿಗೆ ಅಭ್ಯರ್ಥಿಗಳನ್ನು ಬುಧವಾರ ಘೋಷಿಸಿದೆ. ಉಳಿದ ೧೪ ವಾರ್ಡ್‌ಗಳಿಗೆ ೨ನೇ ಹಂತದಲ್ಲಿ ಘೋಷಣೆ ಮಾಡಲಿದೆ.
ಪ್ರಸ್ತುತ ಘೋಷಣೆ ಮಾಡಿರುವ ಬಹುತೇಕ ಅಭ್ಯರ್ಥಿಗಳು ಪಕ್ಷದ ವಿವಿಧ ಪದಾಧಿಕಾರಿಗಳು, ಅವರ ಸಂಬಂಧಿಕರು, ಕಾರ್ಯಕರ್ತರು ಹಾಗು ಹಿಂದೂಪರ ಸಂಘಟನೆಗಳ ಪ್ರಮುಖರಾಗಿದ್ದಾರೆ. ಪ್ರತಿ ಬಾರಿ ಚುನಾವಣೆಯಲ್ಲೂ ಬಿಜೆಪಿ ಬೂತ್‌ಮಟ್ಟದ ಆಧಾರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿದೆ. ಈ ಬಾರಿ ಸಹ ಬೂತ್‌ಮಟ್ಟದಲ್ಲಿಯೇ ಅಭ್ಯರ್ಥಿಗಳ ಆಯ್ಕೆ ನಡೆದಿದೆ ಎನ್ನಲಾಗಿದೆ.
ಇನ್ನುಳಿದಂತೆ ಯಾವುದೇ ಪಕ್ಷಗಳು ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಆದರೆ ಕೆಲವರು ನಾವೇ ಪಕ್ಷದ ಅಧಿಕೃತ ಅಭ್ಯರ್ಥಿಗಳೆಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರಕ್ಕೆ ಮುಂದಾಗಿದ್ದಾರೆ. ಇನ್ನೂ ಕೆಲವರು ಮಾತೃ ಪಕ್ಷದಲ್ಲಿ ಸ್ಪರ್ಧಿಸಲು ಅವಕಾಶ ಸಿಗದಿರುವುದು ತಿಳಿದು ಬಂದ ತಕ್ಷಣ ಬೇರೆ ಪಕ್ಷಗಳಿಗೆ ಸೇರ್ಪಡೆಗೊಳ್ಳುತ್ತಿದ್ದು, ಜನ್ನಾಪುರ ವಾರ್ಡ್ ನಂ.೨೯ರಲ್ಲಿ ಜೆಡಿಎಸ್ ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಸುಮಾರು ೩ ವಾರಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನಡೆಸಿದ್ದ ಕರ್ನಾಟಕ ಜನಸೈನ್ಯ ಸಂಘಟನೆ ಜಿಲ್ಲಾಧ್ಯಕ್ಷ ಕೆ. ಮಂಜುನಾಥ್ ಪತ್ನಿ ಶೃತಿ ಮಾತೃ ಪಕ್ಷದಲ್ಲಿ ಸ್ಪರ್ಧಿಸಲು ಅವಕಾಶ ಸಿಗದಿರುವುದು ತಿಳಿಯುತ್ತಿದ್ದಂತೆ ಬುಧವಾರ ಶಾಸಕ ಬಿ.ಕೆ ಸಂಗಮೇಶ್ವರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಉಳಿದಂತೆ ಸುಮಾರು ೩-೪ ವರ್ಷಗಳಿಂದ ಆಮ್ ಆದ್ಮಿ ಪಾರ್ಟಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಪ್ರಮುಖರಾದ ಉಪಾಧ್ಯಕ್ಷರಾಗಿದ್ದ ಮುಳ್ಕೆರೆ ಲೋಕೇಶ್, ಪ್ರಧಾನ ಕಾರ್ಯದರ್ಶಿಯಾಗಿದ್ದ ವಿ. ವಿನೋದ್, ಕಾರ್ಯದರ್ಶಿಯಾಗಿದ್ದ ಪ್ರದೀಪ್ ಹಾಗು ಮಹಿಳಾ ಘಟಕದ ತಾಲೂಕು ಅಧ್ಯಕ್ಷೆಯಾಗಿದ್ದ ಕಾಂತ ದಿನೇಶ್ ಪಕ್ಷವನ್ನು ತೊರೆದು ಸ್ನೇಹ ಜೀವಿ ಬಳಗ ಸೇರ್ಪಡೆಗೊಂಡಿದ್ದಾರೆ.
ಉಳಿದಂತೆ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ನಿಧನದ ನಂತರ ಜೆಡಿಎಸ್ ಪಕ್ಷ ಒಡೆದ ಮನೆಯಂತಾಗಿದ್ದು, ಇದೀಗ ಪುನಃ ಶಾರದ ಅಪ್ಪಾಜಿ ನೇತೃತ್ವದಲ್ಲಿ ಒಗ್ಗಟ್ಟು ಪ್ರದರ್ಶಿಸಲಾಗುತ್ತಿದೆ. ಪ್ರಮುಖವಾಗಿ ಗ್ರಾಮ ಪಂಚಾಯಿತಿ ಚುನಾವಣೆ ವೇಳೆ ಪಕ್ಷದಿಂದ ದೂರ ಉಳಿದಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಅಪ್ಪಾಜಿ ರಾಜಕೀಯ ಒಡನಾಡಿಯಾಗಿದ್ದ ಎಸ್. ಕುಮಾರ್ ಶಾಸಕ ಬಿ.ಕೆ ಸಂಗಮೇಶ್ವರ್ ಪರ ಗುರುತಿಸಿಕೊಂಡಿದ್ದರು. ಇದೀಗ ಪುನಃ ಜೆಡಿಎಸ್ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಅಭ್ಯರ್ಥಿಗಳ ಗೆಲುವಿಗೆ ಶಕ್ತಿಮೀರಿ ಶ್ರಮಿಸುವುದಾಗಿ ಇತ್ತೀಚಿಗೆ ಸುದ್ದಿಗೋಷ್ಠಿಯಲ್ಲಿ ಭರವಸೆ ನೀಡಿದ್ದಾರೆ.
೫ ಕಡೆ ನಾಮಪತ್ರ ಸಲ್ಲಿಕೆಗೆ ಅವಕಾಶ:
ತಾಲೂಕು ಚುನಾವಣಾಧಿಕಾರಿಯಾಗಿರುವ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ನಗರಸಭೆ ೩೫ ವಾರ್ಡ್‌ಗಳ ಚುನಾವಣೆ ಹಿನ್ನಲೆಯಲ್ಲಿ ನಾಮಪತ್ರ ಸಲ್ಲಿಸಲು ೫ ಕಡೆ ಕೇಂದ್ರಗಳನ್ನು ತೆರೆದಿದ್ದಾರೆ.
ವಾರ್ಡ್ ನಂ. ೧, ೨, ೩, ೪, ೩೩, ೩೪ ಮತ್ತು ೩೫ರಲ್ಲಿ ಸ್ಪರ್ಧಿಸುವವರು ಸಮಾಜ ಕಲ್ಯಾಣ ಇಲಾಖೆ, ಸಹಾಯಕ ನಿರ್ದೇಶಕರ ಕಛೇರಿಯಲ್ಲಿ ನಾಮಪತ್ರ ಸಲ್ಲಿಸಬಹುದಾಗಿದೆ. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೆ. ನಾಗರಾಜ್ ಚುನವಣಾಧಿಕಾರಿಯಾಗಿ, ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿ ಸಹಾಯಕ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.
ವಾರ್ಡ್ ನಂ. ೫, ೬, ೭, ೮, ೯, ೧೦ ಮತ್ತು ೧೧ರಲ್ಲಿ ಸ್ಪರ್ಧಿಸುವವರು ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿಗಳ ಕಛೇರಿಯಲ್ಲಿ ನಾಮಪತ್ರ ಸಲ್ಲಿಸಬಹುದಾಗಿದೆ. ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಅನ್ಸರ್ ಆಲಿ ಬೇಗ್ ಚುನಾವಣಾಧಿಕಾರಿಯಾಗಿ, ತಾಲೂಕು ಪಂಚಾಯಿತಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಹಾಯಕ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.
ವಾರ್ಡ್ ನಂ. ೧೨, ೧೩, ೧೪, ೧೫, ೧೬, ೧೭ ಮತ್ತು ೧೮ರಲ್ಲಿ ಸ್ಪರ್ಧಿಸುವವರು ನಗರಸಭೆ ಉಪಾಧ್ಯಕ್ಷರ ಕೊಠಡಿಯಲ್ಲಿ ನಾಮಪತ್ರ ಸಲ್ಲಿಸಬಹುದಾಗಿದೆ. ಮೀನುಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಷಡಾಕ್ಷರಿ ಚುನಾವಣಾಧಿಕಾರಿಯಾಗಿ, ತಾಲೂಕು ಪಂಚಾಯಿತಿ ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ಸಹಾಯಕ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.
ವಾರ್ಡ್ ನಂ. ೧೯, ೨೦, ೨೧, ೨೨, ೨೩, ೨೪ ಮತ್ತು ೨೫ರಲ್ಲಿ ಸ್ಪರ್ಧಿಸುವವರು ಕೃಷಿ ಇಲಾಖೆ ಸಹಾಯಕ ನಿರ್ದೇಶಕರ ಕಛೇರಿಯಲ್ಲಿ ನಾಮಪತ್ರ ಸಲ್ಲಿಸಬಹುದಾಗಿದೆ. ಕೃಷಿ ಇಲಾಖೆ ಉಪ ನಿರ್ದೇಶಕ ಡಿ.ಎಂ ಬಸವರಾಜ್ ಚುನಾವಣಾಧಿಕಾರಿಯಾಗಿ, ಸಹಾಯಕ ಕೃಷಿ ನಿರ್ದೇಶಕ ಬಿ.ಸಿ ಶಶಿಧರ್ ಸಹಾಯಕ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.
ವಾರ್ಡ್ ನಂ.೨೬, ೨೭, ೨೮, ೨೯, ೩೦, ೩೧ ಮತ್ತು ೩೨ರಲ್ಲಿ ಸ್ಪರ್ಧಿಸುವವರು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರ ಕಛೇರಿಯಲ್ಲಿ ನಾಮಪತ್ರ ಸಲ್ಲಿಸಬಹುದಾಗಿದೆ. ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರು ಚುನಾವಣಾಧಿಕಾರಿಯಾಗಿ, ಹಿರಿಯ ಸಹಾಯಕ ನಿರ್ದೇಶಕ ಜೆ. ಕಾಂತರಾಜ್ ಸಹಾಯಕ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಅರ್ಜಿ ವಜಾ :
ನಗರಸಭೆ ಚುನಾವಣೆ ತಡೆಯಾಜ್ಞೆ ಸಂಬಂಧ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ಬುಧವಾರ ನಡೆದಿದ್ದು, ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಚುನಾವಣಾ ಪ್ರಕ್ರಿಯೆಗಳು ಯಥಾಸ್ಥಿತಿಯಲ್ಲಿ ಮುಂದುವರೆಯಲಿವೆ.