* ಅನಂತಕುಮಾರ್
ಭದ್ರಾವತಿ: ಸುಮಾರು ೨ ವರ್ಷಗಳ ನಂತರ ನಗರಸಭೆಗೆ ಚುನಾವಣೆ ನಡೆಯುತ್ತಿದ್ದು, ಈಗಾಗಲೇ ಚುನಾವಣಾ ಆಯೋಗ ವೇಳಾಪಟ್ಟಿ ಸಹ ಪ್ರಕಟಿಸಿದೆ. ಏ.೮ರಿಂದ ನೀತಿ ಸಂಹಿತೆ ಜಾರಿಗೆ ಬರಲಿದೆ. ಈ ನಡುವೆ ಕಳೆದ ೪-೫ ದಿನಗಳಿಂದ ಚುನಾವಣೆಗೆ ಸಂಬಂಧಿಸಿದಂತೆ ವಿವಿಧ ರಾಜಕೀಯ ಪಕ್ಷಗಳಲ್ಲಿ ತೆರೆಮರೆಯಲ್ಲಿ ಬಿರುಸಿನ ಚಟುವಟಿಕೆಗಳು ಆರಂಭಗೊಂಡಿವೆ.
ಪ್ರಮುಖ ಪಕ್ಷಗಳಲ್ಲಿ ಚುನಾವಣೆಗೆ ಸ್ಪರ್ಧಿಸಲು ಆಕಾಂಕ್ಷಿಗಳು ಪೈಪೋಟಿ ನಡೆಸುತ್ತಿದ್ದು, ಏ.೮ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದೆ. ಯಾವುದೇ ಪಕ್ಷಗಳು ಇದುವರೆಗೂ ಅಭ್ಯರ್ಥಿಗಳನ್ನು ಪ್ರಕಟಿಸಿಲ್ಲ. ಆದರೆ ಕೆಲವು ಆಕಾಂಕ್ಷಿಗಳು ತಾವೇ ಪಕ್ಷದ ಅಧಿಕೃತ ಅಭ್ಯರ್ಥಿ ಎಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್‌ಗಳನ್ನು ಹಂಚಿಕೊಳ್ಳುತ್ತಿವುದು ಕಂಡು ಬರುತ್ತಿದೆ. ಅಲ್ಲದೆ ಕೆಲವು ವಾರ್ಡ್‌ಗಳಲ್ಲಿ ಆಕಾಂಕ್ಷಿಗಳು ಕಳೆದ ೨ ವರ್ಷಗಳಿಂದ ಪಕ್ಷದ ಅಧಿಕೃತ ಅಭ್ಯರ್ಥಿ ನಾನೇ ಎಂದು ಹೇಳಿಕೊಳ್ಳುವ ಮೂಲಕ ವಾರ್ಡ್‌ಗಳಲ್ಲಿನ ಸಣ್ಣಪುಟ್ಟ ಕೆಲಸಗಳಲ್ಲಿ ತೊಡಗಿಸಿಕೊಂಡಿರುವುದು ಗುಟ್ಟಾಗಿ ಉಳಿದಿಲ್ಲ.
ಕೆಲವು ರಾಜಕೀಯ ಪಕ್ಷಗಳಿಂದ ಪ್ರಥಮ ಬಾರಿಗೆ ಅಭ್ಯರ್ಥಿಗಳು ಸ್ಪರ್ಧೆ:
ಈ ಹಿಂದಿನ ಚುನಾವಣೆಗಳಲ್ಲಿ ಪ್ರಮುಖವಾಗಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಅಭ್ಯರ್ಥಿಗಳು ಮಾತ್ರ ಕಂಡು ಬರುತ್ತಿದ್ದರು. ಆದರೆ ಈ ಬಾರಿ ಆಮ್ ಆದ್ಮಿ ಪಾರ್ಟಿ(ಎಎಪಿ), ಜನಾತದಳ(ಸಂಯುಕ್ತ) ಕರ್ನಾಟಕ(ಜೆಡಿಯು) ಪಕ್ಷಗಳು ಸಹ ಅಧಿಕೃತವಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮುಂದಾಗಿವೆ. ಈಗಾಗಲೇ ಎಎಪಿ ಪಕ್ಷದ ಕರ್ನಾಟಕ ರಾಜ್ಯ ಉಸ್ತುವಾರಿ ದೆಹಲಿಯ ರೂಮಿಬಾಟಿ ನಗರಕ್ಕೆ ಆಗಮಿಸಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ಘೋಷಿಸಿದ್ದಾರೆ. ಇದೆ ರೀತಿ ಜನತಾದಳ(ಸಂಯುಕ್ತ) ಕರ್ನಾಟಕ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿ(ಸಂಘಟನೆ) ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಬೇಹಳ್ಳಿ ಡಿ. ನಾಗರಾಜು ಘೋಷಿಸಿದ್ದಾರೆ.
ಉಳಿದಂತೆ ಸ್ನೇಹ ಜೀವಿ ಬಳಗ ಸಹ ಅಧಿಕೃತ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದು, ಈಗಾಗಲೇ ಸ್ನೇಹ ಜೀವಿ ಬಳಗದಿಂದ ಪ್ರಥಮ ಬಾರಿಗೆ ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿತ್ತು. ಪ್ರಥಮ ಪ್ರಯತ್ನದಲ್ಲಿಯೇ ೫ ಅಭ್ಯಥಿಗಳು ಆಯ್ಕೆಯಾಗಿರುವುದು ಗಮನಾರ್ಹ ಸಂಗತಿಯಾಗಿದೆ. ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಈಗಾಗಲೇ ಸ್ಪರ್ಧಿಸುವ ವಾರ್ಡ್‌ಗಳನ್ನು ಘೋಷಿಸಿದೆ.
ತರಾತುರಿಯಲ್ಲಿ ಕಾಮಗಾರಿಗಳಿಗೆ ಚಾಲನೆ :
ಏ.೮ರಿಂದ ನೀತಿ ಸಂಹಿತೆ ಜಾರಿಗೆ ಬರುವ ಹಿನ್ನಲೆಯಲ್ಲಿ ಬಿಡುವಿಲ್ಲದೆ ಶಾಸಕ ಬಿ.ಕೆ ಸಂಗಮೇಶ್ವರ್ ನಗರಸಭೆ ವ್ಯಾಪ್ತಿಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ತರಾತುರಿಯಲ್ಲಿ ಚಾಲನೆ ನೀಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಶಾಸಕರ ಈ ನಡೆಯನ್ನು ಬಿಜೆಪಿ ಆಕ್ಷೇಪಿಸಿದ್ದು, ಈ ಸಂಬಂಧ ದೂರು ಸಹ ನೀಡಿದೆ.
ಸಂಗಮೇಶ್ವರ್‌ಗೆ ಪ್ರತಿಷ್ಠೆಯ ಚುನಾವಣೆ:
ಇತ್ತೀಚೆಗೆ ನಗರದಲ್ಲಿ ಆಯೋಜಿಸಲಾಗಿದ್ದ ಕಬ್ಬಡಿ ಪಂದ್ಯಾವಳಿಯೊಂದರಲ್ಲಿ ನಡೆದಿರುವ ಅಹಿತಕರ ಘಟನೆಗಳ ಹಿನ್ನಲೆಯಲ್ಲಿ ಇಡೀ ಸರ್ಕಾರದ ವಿರುದ್ಧವೇ ತಿರುಗಿ ಬಿದ್ದಿರುವ ಸಂಗಮೇಶ್ವರ್ ಈ ಬಾರಿ ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿಸಿಕೊಂಡಿದ್ದು, ಚುನಾವಣೆಯನ್ನು ಯಶಸ್ವಿಯಾಗಿ ಎದುರಿಸಲು ಎಲ್ಲಾ ರೀತಿಯ ಸಿದ್ದತೆಗಳನ್ನು ರೂಪಿಸಿಕೊಳ್ಳುತ್ತಿದ್ದಾರೆ. ವಿವಿಧ ಜಾತಿ ಸಮುದಾಯಗಳ ಎಲ್ಲಾ ಕಾರ್ಯಕ್ರಮಗಳಲ್ಲೂ ಸಹ ತಪ್ಪದೇ ಪಾಲ್ಗೊಳ್ಳುತ್ತಿದ್ದು, ಅಲ್ಲದೆ ಹಲವಾರು ಭರವಸೆಗಳನ್ನು ನೀಡುತ್ತಿರುವುದು ಕಂಡು ಬರುತ್ತಿದೆ.
ಬಿಜೆಪಿಗೆ ಸವಾಲಿನ ಚುನಾವಣೆ:
ಕಬ್ಬಡಿ ಪಂದ್ಯಾವಳಿಯೊಂದರಲ್ಲಿ ನಡೆದಿರುವ ಅಹಿತಕರ ಘಟನೆಗಳ ಹಿನ್ನಲೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ವಿರುದ್ಧ ತಿರುಗಿ ಬಿದ್ದಿರುವ ಬಿಜೆಪಿ ಪಕ್ಷದ ಸ್ಥಳೀಯ ಘಟಕಕ್ಕೆ ಈ ಚುನಾವಣೆ ಸವಾಲಿನ ಚುನಾವಣೆಯಾಗಿದೆ. ಈ ಬಾರಿ ನಗರಸಭೆ ಅಧಿಕಾರದ ಚುಕ್ಕಾಣಿಯನ್ನು ಹೇಗಾದರೂ ಮಾಡಿ ಹಿಡಿಯಲೇ ಬೇಕಾಗಿದೆ. ಈ ಹಿನ್ನಲೆಯಲ್ಲಿ ಅಭ್ಯರ್ಥಿಗಳ ಗೆಲುವಿಗೆ ಶಕ್ತಿ ಮೀರಿ ಶ್ರಮಿಸುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಪಕ್ಷದ ರಾಜ್ಯ ಹಾಗು ಜಿಲ್ಲಾ ಘಟಕ ಸಹ ನೆರವಿಗೆ ಬರಬೇಕಾಗಿದೆ.
ಜೆಡಿಎಸ್‌ಗೆ ಅಸ್ತಿತ್ವದ ಪ್ರಶ್ನೆ :
ಕಳೆದ ಬಾರಿ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ನೇತೃತ್ವದಲ್ಲಿ ೩೫ ವಾರ್ಡ್‌ಗಳ ಪೈಕಿ ೨೩ ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದ್ದ ಜೆಡಿಎಸ್ ಪಕ್ಷಕ್ಕೆ ಇದೀಗ ಅಸ್ತಿತ್ವ ಉಳಿಸಿಕೊಳ್ಳುವ ಪ್ರಶ್ನೆ ಎದುರಾಗಿದೆ. ಅಪ್ಪಾಜಿ ಇಲ್ಲದೆ ನಡೆಯುತ್ತಿರುವ ಈ ಚುನಾವಣೆಯ ನಾಯಕತ್ವ ವಹಿಸಿಕೊಂಡು ಸಮರ್ಥವಾಗಿ ಎದುರಿಸುವವರು ಯಾರು ಇಲ್ಲದಂತಾಗಿದೆ. ಈ ಹಿನ್ನಲೆಯಲ್ಲಿ ಈ ಬಾರಿ ಜೆಡಿಎಸ್‌ಗೆ ಅಸ್ತಿತ್ವದ ಪ್ರಶ್ನೆ ಎದುರಾಗಿದೆ. ಅಪ್ಪಾಜಿ ಜೊತೆಗಿದ್ದ ಜೆಡಿಎಸ್ ನಾಯಕರೆಲ್ಲರೂ ಒಗ್ಗಟ್ಟಾಗಿ ಚುನಾವಣೆಗೆ ತಂತ್ರಗಾರಿಕೆ ರೂಪಿಸಬೇಕಾಗಿದೆ.
No comments:
Post a Comment