Tuesday, April 20, 2021

ನಗರಸಭೆ ಚುನಾವಣೆ ವಿವಿಧೆಡೆ ಅಭ್ಯರ್ಥಿಗಳಿಂದ ಬಿರುಸಿನಿಂದ ಮತಯಾಚನೆ

ಭದ್ರಾವತಿ ನಗರಸಭೆ ೨ನೇ ವಾರ್ಡಿನ ಜೆಡಿಎಸ್ ಅಭ್ಯರ್ಥಿ ಶಾಂತ ಮೋಹನರಾವ್ ಮಂಗಳವಾರ ಮನೆ ಮನೆಗೆ ತೆರಳಿ ಕರಪತ್ರ ವಿತರಿಸಿ ಮತಯಾಚನೆ ನಡೆಸಿದರು.
   ಭದ್ರಾವತಿ, ಏ. ೨೦: ಒಂದೆಡೆ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಮತ್ತೊಂದೆಡೆ ನಗರಸಭೆ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ವಿವಿಧ ವಾರ್ಡ್‌ಗಳಲ್ಲಿ ಪ್ರಚಾರ ಕಾರ್ಯ ಬಿರುಸಿನಿಂದ ನಡೆಯುತ್ತಿದೆ.
  ನಗರಸಭೆ ೨ನೇ ವಾರ್ಡಿನ ಜೆಡಿಎಸ್ ಅಭ್ಯರ್ಥಿ ಶಾಂತ ಮೋಹನ್‌ರಾವ್ ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗು ಕುಟುಂಬ ಸದಸ್ಯರೊಂದಿಗೆ ಮಂಗಳವಾರ ವಾರ್ಡ್‌ನ ಪ್ರತಿ ಮನೆಗಳಿಗೆ ಭೇಟಿ ನೀಡಿ ಕರಪತ್ರಗಳನ್ನು ವಿತರಿಸಿ ಮತಯಾಚನೆ ನಡೆಸಿದರು.
     ಈ ವಾರ್ಡ್‌ನಲ್ಲಿ ಈ ಹಿಂದೆ ೨೦೦೭ರ ಚುನಾವಣೆಯಲ್ಲಿ ಎಸ್.ಬಿ ಮೋಹನ್‌ರಾವ್ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ೨೦೧೩ರಲ್ಲಿ ಪುನಃ ಸ್ಪರ್ಧಿಸಿ ಪರಾಭವಗೊಂಡಿದ್ದರು. ಇದೀಗ ಪತ್ನಿಯನ್ನು ಕಣಕ್ಕಿಳಿಸಿದ್ದು, ತಮ್ಮ ಅವಧಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಮತಯಾಚನೆ ನಡೆಸುತ್ತಿದ್ದಾರೆ.
     ಇದೆ ರೀತಿ ೬ನೇ ವಾರ್ಡ್‌ನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸುಕನ್ಯ ಸಹ ಮನೆ ಮನೆಗೆ ಭೇಟಿ ನೀಡಿ ಮತಯಾಚನೆ ನಡೆಸುತ್ತಿದ್ದಾರೆ. ಸುಕನ್ಯ ಸುಮಾರು ೨೦ ವರ್ಷಗಳಿಂದ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದು, ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾಗಿ ಸಹ ನೇಮಕಗೊಂಡಿದ್ದರು. ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ಬೆಂಬಲಿಗರಲ್ಲಿ ಒಬ್ಬರಾಗಿದ್ದರು. ಕುವೆಂಪು ಪ್ರವಾಸಿ ವಾಹನ ಚಾಲಕರ ಹಾಗು ಮಾಲೀಕರ ಸಂಘ ಹಾಗು ವಿವಿಧ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಪತಿ ಡಿ. ರಾಜು ಅವರೊಂದಿಗೆ ತಾವು ಕೈಗೊಂಡಿರುವ ಸಾಮಾಜಿಕ ಸೇವಾ ಕಾರ್ಯಗಳನ್ನು ಮುಂದಿಟ್ಟು ಮತಯಾಚನೆ ನಡೆಸುತ್ತಿದ್ದಾರೆ.


ಭದ್ರಾವತಿ ನಗರಸಭೆ ೬ನೇ ವಾರ್ಡಿನ ಪಕ್ಷೇತರ ಅಭ್ಯರ್ಥಿ ಸುಕನ್ಯ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದರು.

ಮಾಸ್ಕ್ ಧರಿಸದ ವಾಹನ ಸವಾರರಿಗೆ ದಂಡ : ಒಟ್ಟು ೧೨,೮೦೦ ರು. ವಸೂಲಾತಿ


ಕೊರೋನಾ ಸೋಂಕು ೨ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಮಂಗಳವಾರ ಭದ್ರಾವತಿ ನಗರಸಭೆ ವ್ಯಾಪ್ತಿಯಲ್ಲಿ ಮಾಸ್ಕ್ ಬಳಕೆ ಮಾಡದ ವಾಹನ ಸವಾರರಿಗೆ ದಂಡ ವಿಧಿಸಲಾಯಿತು.
   ಭದ್ರಾವತಿ, ಏ. ೨೦: ಕೊರೋನಾ ಸೋಂಕು ೨ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಮಂಗಳವಾರ ನಗರಸಭೆ ವ್ಯಾಪ್ತಿಯಲ್ಲಿ ಮಾಸ್ಕ್ ಬಳಕೆ ಮಾಡದ ವಾಹನ ಸವಾರರಿಗೆ ದಂಡ ವಿಧಿಸಲಾಯಿತು.
   ಸ್ವತಃ ನಗರಸಭೆ ಪೌರಾಯುಕ್ತ ಮನೋಹರ್ ಬೆಳಿಗ್ಗೆ ಬಿ.ಎಚ್ ರಸ್ತೆ ಅಪ್ಪರ್ ಹುತ್ತಾದಲ್ಲಿ ಮಾಸ್ಕ್ ಧರಿಸದ ದ್ವಿಚಕ್ರ ವಾಹನ ಸವಾರರನ್ನು ತಡೆದು ದಂಡ ವಸೂಲಾತಿ ಮಾಡಿದರು. ಅಲ್ಲದೆ ಭದ್ರಾವತಿ-ಶಿವಮೊಗ್ಗ ನಡುವೆ ಸಂಚರಿಸುವ ಮ್ಯಾಕ್ಸಿಕ್ಯಾಬ್, ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಸಹ ತಡೆದು ಮಾಸ್ಕ್ ಧರಿಸದ ಪ್ರಯಾಣಿಕರನ್ನು ಪತ್ತೆ ಮಾಡಿ ಎಚ್ಚರಿಕೆ ನೀಡಲಾಯಿತು.
    ಅಂಬೇಡ್ಕರ್ ವೃತ್ತ, ಮಾಧವಚಾರ್ ವೃತ್ತ, ಗಾಂಧಿ ವೃತ್ತ ಮತ್ತು ರಂಗಪ್ಪ ವೃತ್ತಗಳಲ್ಲಿ ಪೌರಾಯುಕ್ತರ ನೇತೃತ್ವದಲ್ಲಿ ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು ಬೆಳಿಗ್ಗೆಯಿಂದ ಸಂಜೆವರೆಗೂ ಕಾರ್ಯಾಚರಣೆ ನಡೆಸಿ ಒಟ್ಟು ೧೨,೮೦೦ ರು. ದಂಡ ವಸೂಲಾತಿ ಮಾಡಿದ್ದು, ಅಲ್ಲದೆ ಸರಿಯಾಗಿ ಮಾಸ್ಕ್ ಧರಿಸದ ಸವಾರರಿಗೆ ತಿಳುವಳಿಕೆ ನೀಡಿದ್ದಾರೆ.
    ಬುಧವಾರದಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಖಾಸಗಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಮಾರುಕಟ್ಟೆ ಸೇರಿದಂತೆ ವಿವಿಧೆಡೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದವರನ್ನು ಪತ್ತೆ ಮಾಡಿ ದಂಡ ವಸೂಲಾತಿ ಮಾಡುವ ಕಾರ್ಯಾಚರಣೆ ನಡೆಯಲಿದೆ ಎಂದು ಪೌರಾಯುಕ್ತ ಮನೋಹರ್ ತಿಳಿಸಿದ್ದಾರೆ.

Monday, April 19, 2021

ನಗರಸಭೆ ಚುನಾವಣೆಯಲ್ಲಿ ೧,೨೬,೬೧೩ ಮಂದಿಗೆ ಮತದಾನದ ಹಕ್ಕು : ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್

 ಅಂತಿಮ ಕಣದಲ್ಲಿ ೧೭೩ ಅಭ್ಯರ್ಥಿಗಳು, ೨೯ನೇ ವಾರ್ಡ್ ಕಾಂಗ್ರೆಸ್ ಮಹಿಳಾ ಅಭ್ಯರ್ಥಿ ನಿಧನ


ಭದ್ರಾವತಿ ನಗರಸಭೆ ಚುನಾವಣೆ ಹಿನ್ನಲೆಯಲ್ಲಿ ಸೋಮವಾರ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಮಾಹಿತಿ ನೀಡಿದರು.
    ಭದ್ರಾವತಿ, ಏ. ೧೯: ಈ ಬಾರಿ ನಗರಸಭೆ ಚುನಾವಣೆಯಲ್ಲಿ ೧,೨೬,೬೧೩ ಮತದಾರರು ಮತದಾನದ ಹಕ್ಕು ಹೊಂದಿದ್ದಾರೆಂದು ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ತಿಳಿಸಿದರು.
   ಅವರು ಸೋಮವಾರ  ನಗರಸಭೆ ಚುನಾವಣೆ ಸಂಬಂಧ ಸಭೆ ನಡೆಸಿ ಮಾಹಿತಿ ನೀಡಿದರು. ವಿಧಾನಸಭಾ ಚುನಾವಣೆ ಮತದಾರರ ಪಟ್ಟಿಯಂತೆ ೧,೨೫,೫೯೫ ಮತದಾರರನ್ನು ಅಂತಿಮಗೊಳಿಸಲಾಗಿತ್ತು. ನಂತರ ಏ.೭ರ ಅಂತ್ಯಕ್ಕೆ ಒಟ್ಟು ೯೯೯ ಮತದಾರರು ಹೊಸದಾಗಿ ಸೇರ್ಪಡೆಗೊಂಡಿದ್ದು, ಈ ಹಿನ್ನಲೆಯಲ್ಲಿ ಒಟ್ಟು ಮತದಾರರ ಸಂಖ್ಯೆ ೧.೨೬,೬೧೩ ಆಗಿದೆ. ಈ ಪೈಕಿ ೬೧,೩೫೫ ಪುರುಷರು, ೬೫,೨೫೮ ಮಹಿಳೆಯರು ಸೇರಿದ್ದಾರೆ ಎಂದರು.
      ಮತಗಟ್ಟೆಗಳ ಮಾಹಿತಿ:
     ೨೩ ಸೂಕ್ಷ್ಮ, ೫೪ ಅತಿ ಸೂಕ್ಷ್ಮ ಹಾಗು ೬೨ ಸಾಮಾನ್ಯ ಮತಗಟ್ಟೆಗಳನ್ನು ಗುರುತಿಸಲಾಗಿದೆ.  ಒಟ್ಟು ೧೬೭ ಪಿ.ಆರ್.ಓ, ೧೬೭ ಎ.ಪಿ.ಆರ್.ಓ ಮತ್ತು ೩೧೪ ಪಿ.ಓ ಕರ್ತವ್ಯ ನಿರ್ವಹಿಸಲಿದ್ದಾರೆ.
      ೫ ಎಂ.ಸಿ.ಸಿ ತಂಡ ರಚನೆ :
      ಒಟ್ಟು ೫ ಎಂ.ಸಿ.ಸಿ ತಂಡಗಳನ್ನು ರಚಿಸಲಾಗಿದ್ದು, ಚುನಾವಣಾ ನೋಡಲ್  ಅಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್, ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್, ನಗರಸಭೆ ಪೌರಾಯುಕ್ತ ಮನೋಹರ್, ಪೊಲೀಸ್ ಉಪಾಧೀಕ್ಷಕರು ಮತ್ತು ಪೊಲೀಸ್ ನಗರ ವೃತ್ತ ನಿರೀಕ್ಷಕರು ತಂಡಗಳ ಮುಖ್ಯಸ್ಥರಾಗಿದ್ದಾರೆ.
    ವಾರ್ಡ್ ನಂ.೧, ೨, ೩, ೪, ೩೩, ೩೪ ಮತ್ತು ೩೫ ಒಳಗೊಂಡಿರುವ ೧ನೇ ತಂಡದಲ್ಲಿ ಕಿರಿಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕೊಟ್ರಪ್ಪ, ಎಎಸ್‌ಐ ಜಗದೀಶ್ ಮತ್ತು ಅಬಕಾರಿ ಹೆಡ್‌ಕಾನ್ಸ್‌ಸ್ಟೇಬಲ್ ಸುಧಾಮಣಿ, ವಾರ್ಡ್ ನಂ.೫, ೬, ೭, ೮, ೯, ೧೦ ಮತ್ತು ೧೧ ಒಳಗೊಂಡಿರುವ ೨ನೇ ತಂಡದಲ್ಲಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಈರಪ್ಪ, ಎಎಸ್‌ಐ ಶಿವಕುಮಾರ್ ಮತ್ತು ಅಬಕಾರಿ ಕಾನ್ಸ್‌ಸ್ಟೇಬಲ್ ಶಿವಮೂರ್ತಿ ನಾಯ್ಕ, ವಾರ್ಡ್ ನಂ.೧೨, ೧೩, ೧೪, ೧೫, ೧೬, ೧೭ ಮತ್ತು ೧೮ ಒಳಗೊಂಡಿರುವ ೩ನೇ ತಂಡದಲ್ಲಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಚೇತನ್, ಎಎಸ್‌ಐ ವಿಠ್ಠಲ್ ಮತ್ತು ಅಬಕಾರಿ ಕಾನ್ಸ್‌ಸ್ಟೇಬಲ್ ಶಶಿಧರ, ವಾರ್ಡ್ ನಂ.೨೬, ೨೭, ೨೮, ೨೯, ೩೦, ೩೧ ಮತ್ತು ೩೨ ಒಳಗೊಂಡಿರುವ ೪ನೇ ತಂಡದಲ್ಲಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಯತೀಶ್, ಎಎಸ್‌ಐ ಅಶೋಕ್ ಮತ್ತು ಅಬಕಾರಿ ಕಾನ್ಸ್‌ಸ್ಟೇಬಲ್ ಮಲ್ಲಿಕಾರ್ಜುನ, ವಾರ್ಡ್ ನಂ. ೧೯, ೨೦, ೨೧, ೨೨, ೨೩, ೨೪ ಮತ್ತು ೨೫ ಒಳಗೊಂಡಿರುವ ೫ನೇ ತಂಡದಲ್ಲಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಉಮೇಶ್, ಎಎಸ್‌ಐ ಖಲೀಮುಲ್ಲ ಮತ್ತು ಅಬಕಾರಿ ಕಾನ್ಸ್‌ಸ್ಟೇಬಲ್ ಜ್ಞಾನೇಶ್ವರ್ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದರು.
       ಸೆಕ್ಟರ್ ಅಧಿಕಾರಿಗಳ ನೇಮಕ :
    ವಾರ್ಡ್ ನಂ.೧, ೨ ಮತ್ತು ೩ಕ್ಕೆ ಡಾ. ಕೆ ಬಸವರಾಜ್, ವಾರ್ಡ್ ನಂ. ೪,೫ ಮತ್ತು ೬ಕ್ಕೆ ಟಿ.ಎಂ ಸತ್ಯನಾರಾಯಣ, ವಾರ್ಡ್ ನಂ. ೭, ೮ ಮತ್ತು ೯ಕ್ಕೆ ಬಿ.ಸಿ ಸುರೇಶ್, ವಾರ್ಡ್ ನಂ. ೧೦, ೧೧ ಮತ್ತು ೧೨ಕ್ಕೆ ಶಿವಕುಮಾರ್ ಬೀರಣ್ಣನವರ್, ವಾರ್ಡ್ ನಂ. ೧೩, ೧೪ ಮತ್ತು ೧೫ಕ್ಕೆ ಸಚಿನ್, ವಾರ್ಡ್ ನಂ. ೧೬, ೧೭, ೧೮ ಮತ್ತು ೧೯ಕ್ಕೆ ಗಣೇಶ್‌ರಾಜ್. ಡಿ, ವಾರ್ಡ್ ನಂ. ೨೦, ೨೧, ೨೨ ಮತ್ತು ೨೩ಕ್ಕೆ ಎನ್.ಎಸ್ ಜಗದೀಶ್ವರಪ್ಪ, ವಾರ್ಡ್ ನಂ. ೨೪, ೨೫ ಮತ್ತು ೨೬ಕ್ಕೆ ಸುರೇಶ್, ವಾರ್ಡ್ ನಂ. ೨೭, ೨೮, ೨೯ ಮತ್ತು ೩೦ಕ್ಕೆ ಪ್ರದೀಪ್‌ಕುಮಾರ್, ವಾರ್ಡ್ ನಂ. ೩೧, ೩೨ ಮತ್ತು ೩೩ಕ್ಕೆ ವೆಂಕಟೇಶ್ ಹಾಗು ವಾರ್ಡ್ ನಂ. ೩೪ ಮತ್ತು ೩೫ಕ್ಕೆ ಮಹಾವೀರ್ ಅವರನ್ನು ನೇಮಕಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
    ಚುನಾವಣಾ ನೋಡಲ್ ಅಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್, ಪೌರಾಯುಕ್ತ ಮನೋಹರ್, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ ಹಾಗು ಚುನಾವಣಾಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.
      ಚುನಾವಣಾ ಅಂತಿಮ ಕಣದಲ್ಲಿ ಒಟ್ಟು ೧೭೩ ಅಭ್ಯರ್ಥಿಗಳು:
    ಕಾಂಗ್ರೆಸ್-೩೫, ಜೆಡಿಎಸ್-೩೫ ಮತ್ತು ಬಿಜೆಪಿ-೩೪, ಎಎಪಿ-೭, ಎಸ್‌ಡಿಪಿಐ-೩, ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ-೨, ಎಐಎಂಐಎಂ-೨  ಹಾಗು ೫೫ ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ ಒಟ್ಟು ೧೭೩ ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದುಕೊಂಡಿದ್ದಾರೆ. ಕ್ರಮ ಬದ್ಧವಾದ ೧೯೫ ನಾಮಪತ್ರಗಳ ಪೈಕಿ ಓರ್ವ ಅಧಿಕೃತ ಬಿಜೆಪಿ ಅಭ್ಯರ್ಥಿ ಸೇರಿದಂತೆ ಒಟ್ಟು ೨೨ ಮಂದಿ ನಾಮಪತ್ರ ಹಿಂಪಡೆದುಕೊಂಡಿದ್ದಾರೆ.
      ೨೯ನೇ ವಾರ್ಡ್ ಮಹಿಳಾ ಅಭ್ಯರ್ಥಿ ನಿಧನ :
   ಇತ್ತೀಚೆಗೆ ಜೆಡಿಎಸ್  ತೊರೆದು ಕಾಂಗ್ರೆಸ್ ಸೇರ್ಪಡೆಗೊಳ್ಳುವ ಮೂಲಕ ವಾರ್ಡ್ ನಂ. ೨೯ರಲ್ಲಿ ಅಧಿಕೃತ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶೃತಿ ಮಂಜುನಾಥ್ ಸೋಮವಾರ ನಿಧನ ಹೊಂದಿದ್ದಾರೆ.
   ಕಳೆದ ಸುಮಾರು ೧ ವಾರದಿಂದ ಹೆಚ್ಚಿನ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಶೃತಿ ಮಂಜುನಾಥ್ ತುರ್ತು ಅನಾರೋಗ್ಯಕ್ಕೆ ಒಳಗಾಗಿದ್ದು, ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಇವರ ನಿಧನಕ್ಕೆ ನಗರದ ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಗಣ್ಯರು ಸಂತಾಪ ಸೂಚಿಸಿದ್ದಾರೆ.



ಭದ್ರಾವತಿ ನಗರಸಭೆ ೨೯ನೇ ವಾರ್ಡಿನ ಅಧಿಕೃತಿ ಕಾಂಗ್ರೆಸ್ ಅಭ್ಯರ್ಥಿ ಶೃತಿ ಮಂಜುನಾಥ್ ಸೋಮವಾರ ನಿಧನ ಹೊಂದಿದರು.

ಹೊಸಹಳ್ಳಿ ಗ್ರಾಮವೊಂದರಲ್ಲೇ ೫೫ ಮಂದಿಗೆ ಕೊರೋನಾ ಸೋಂಕು

ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಹೋಬಳಿ ಹೊಸಹಳ್ಳಿ ಗ್ರಾಮದಲ್ಲಿ ೫೫ ಮಂದಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿರುವ  ಹಿನ್ನಲೆಯಲ್ಲಿ ಗ್ರಾಮಕ್ಕೆ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
  ಭದ್ರಾವತಿ, ಏ. ೧೯: ತಾಲೂಕಿನ ಕೂಡ್ಲಿಗೆರೆ ಹೋಬಳಿ ಹೊಸಹಳ್ಳಿ ಗ್ರಾಮವೊಂದರಲ್ಲೇ ೫೫ ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ಈ ಹಿನ್ನಲೆಯಲ್ಲಿ ಸೋಮವಾರ ಗ್ರಾಮವನ್ನು ಸಂಪೂರ್ಣವಾಗಿ ಸೀಲ್‌ಡೌನ್ ಮಾಡಲಾಗಿದೆ.
    ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ನೇತೃತ್ವದ ತಂಡ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಹೊಸಹಳ್ಳಿ ಗ್ರಾಮದಲ್ಲಿ ಒಟ್ಟು ೧೯೫ ಮನೆಗಳಿದ್ದು, ೮೧೨ ಜನಸಂಖ್ಯೆ ಹೊಂದಿದೆ. ಏ.೧೪ರಂದು ಗ್ರಾಮದ ೧೮೬ ಮಂದಿಯ ಗಂಟಲು ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ ೫೫ ಮಂದಿಯಲ್ಲಿ ಕೊರೋನ ಸೋಂಕು ದೃಢಪಟ್ಟಿದೆ.
   ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ಕಂದಾಯಾಧಿಕಾರಿ ಪ್ರಶಾಂತ್, ಗ್ರಾಮ ಲೆಕ್ಕಾಧಿಕಾರಿ ಪ್ರೇಮ್‌ಕುಮಾರ್, ಗ್ರಾಮ ಪಂಚಾಯಿತಿ ಅಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಸೇರಿದಂತೆ ಇನ್ನಿತರರು ತಂಡದಲ್ಲಿ ಉಪಸ್ಥಿತರಿದ್ದರು.

ಏ.೨೦ರಂದು ಬಿಜೆಪಿ ಕಾರ್ಯಕರ್ತರ ಸಮಾವೇಶ

ಭದ್ರಾವತಿ, ಏ. ೧೯: ನಗರಸಭೆ ಚುನಾವಣೆ ಹಿನ್ನಲೆಯಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಏ.೨೦ರಂದು ಸಂಜೆ ೪.೩೦ಕ್ಕೆ ಹಳೇನಗರದ ಕನಕಮಂಟಪ ಮೈದಾನದಲ್ಲಿ ಕಾರ್ಯಕರ್ತರ ಸಮಾವೇಶ ಹಮ್ಮಿಕೊಳ್ಳಲಾಗಿದೆ.
      ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ, ಸಂಸದ ಬಿ.ವೈ ರಾಘವೇಂದ್ರ, ಪಕ್ಷದ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ವಿಧಾನಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಎಸ್ ರುದ್ರೇಗೌಡ, ಭಾರತಿಶೆಟ್ಟಿ, ವಿಧಾನಸಭಾ ಸದಸ್ಯ ಕೆ.ಬಿ ಅಶೋಕ್‌ನಾಯ್ಕ್, ಮುಖಂಡರಾದ ಆರ್.ಕೆ ಸಿದ್ದರಾಮಣ್ಣ, ಎಂ.ಬಿ ಭಾನುಪ್ರಕಾಶ್, ಗಿರೀಶ್‌ಪಟೇಲ್, ಪಕ್ಷದ ತಾಲೂಕು ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.
   ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಎಸ್. ಚನ್ನೇಶ್ ಮತ್ತು ಹನುಮಂತನಾಯ್ಕ ಕೋರಿದ್ದಾರೆ.

ನಗರಸಭೆ ಚುನಾವಣೆ : ಮತದಾರರ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ

ಮಾನವ ಹಕ್ಕುಗಳ  ಹೋರಾಟ ಸಮಿತಿ ವತಿಯಿಂದ ಭದ್ರಾವತಿ ನಗರಸಭೆ ಚುನಾವಣೆ ಹಿನ್ನಲೆಯಲ್ಲಿ ೩೫ ವಾರ್ಡ್‌ಗಳ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿರುವ ಜಾಗೃತಿ ಕಾರ್ಯಕ್ರಮಕ್ಕೆ ಸೋಮವಾರ ನಗರಸಭೆ ಪೌರಾಯುಕ್ತ ಮನೋಹರ್ ಚಾಲನೆ ನೀಡಿದರು.
   ಭದ್ರಾವತಿ, ಏ. ೧೯: ನಗರಸಭೆ ಬಗ್ಗೆ ಅರಿವು ಹೊಂದಿರುವ, ನಗರಸಭೆ ಆಸ್ತಿ ರಕ್ಷಣೆ, ಮೂಲ ಸೌಲಭ್ಯಗಳನ್ನು ಕಲ್ಪಿಸುವ, ಜನರ ಸಂಕಷ್ಟಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವ ಕಾಳಜಿ ಹೊಂದಿರುವ ಸಮರ್ಥರನ್ನು ಈ ಬಾರಿ ಚುನಾವಣೆಯಲ್ಲಿ ಆಯ್ಕೆ ಮಾಡುವಂತೆ ಜಾಗೃತಿ ಮೂಡಿಸುವ ಹಿನ್ನಲೆಯಲ್ಲಿ ನಗರದ ಮಾನವ ಹಕ್ಕುಗಳ  ಹೋರಾಟ ಸಮಿತಿ ವತಿಯಿಂದ ೩೫ ವಾರ್ಡ್‌ಗಳ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿರುವ ಜಾಗೃತಿ ಕಾರ್ಯಕ್ರಮಕ್ಕೆ ಸೋಮವಾರ ನಗರಸಭೆ ಪೌರಾಯುಕ್ತ ಮನೋಹರ್ ಚಾಲನೆ ನೀಡಿದರು.
    ನಗರಸಭೆ ವ್ಯಾಪ್ತಿಯಲ್ಲಿ ಆಟೋ ಮೂಲಕ ಏ.೨೬ರವರೆಗೆ ಬೆಳಿಗ್ಗೆ ೮ ರಿಂದ ಸಂಜೆ ೫ ಗಂಟೆವರೆಗೆ ಕರಪತ್ರ ವಿತರಿಸುವ ಜೊತೆಗೆ ಧ್ವನಿ ವರ್ಧಕದ ಮೂಲಕ ಜಾಗೃತಿ ಮೂಡಿಸುವ ಕಾರ್ಯ ಸಮಿತಿ ಕೈಗೊಂಡಿದೆ.
   ಕರಪತ್ರ ಬಿಡುಗಡೆಗೊಳಿಸಿ ಸಾರ್ವಜನಿಕರಿಗೆ ವಿತರಿಸಿದ ಪೌರಾಯುಕ್ತರು, ಮತದಾರರು ಜಾಗೃತಿಗೊಳ್ಳುವಂತೆ ಕೈಗೊಂಡಿರುವ ಕಾರ್ಯಕ್ರಮ ಯಶಸ್ವಿಗೆ ಸಹಕರಿಸುವಂತೆ ಕೋರಿದರು.
ನಗರಸಭೆ ವ್ಯವಸ್ಥಾಪಕಿ ಸುನಿತಾಕುಮಾರಿ, ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಚಂದ್ರಶೇಖರ್, ಬ್ರಹ್ಮಲಿಂಗಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕೊರೋನಾಗೆ ಎಂಪಿಎಂ ಉದ್ಯೋಗಿ ಬಲಿ

ಮಂಜುನಾಥ್  
 ಭದ್ರಾವತಿ, ಏ. ೧೯:  ನಿಯೋಜನೆ ಮೇರೆಗೆ ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಗರದ ಮೈಸೂರು ಕಾಗದ ಕಾರ್ಖಾನೆ ಉದ್ಯೋಗಿ ಮಂಜುನಾಥ್(೫೯) ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.
    ಪತ್ನಿ, ಇಬ್ಬರು ಪುತ್ರರನ್ನು ಹೊಂದಿದ್ದರು. ಸೋಂಕು ತಗುಲಿದ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.
ಮಂಜುನಾಥ್ ಕಾರ್ಮಿಕ ಸಂಘದಲ್ಲಿ ಖಜಾಂಚಿಯಾಗಿ, ಮೈಸೂರು ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಮೃತರ ನಿಧನಕ್ಕೆ ಕಾರ್ಮಿಕ ಮುಖಂಡರು  ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.