ಕುಟುಂಬ ವರ್ಗಕ್ಕೆ ಸಾಂತ್ವಾನ, ೫೦ ಸಾವಿರ ರು. ಚೆಕ್ ವಿತರಣೆ, ಕಾಯಂ ಉದ್ಯೋಗ ಭರವಸೆ

ಇತ್ತೀಚೆಗೆ ಕ್ಷುಲ್ಲಕ ಕಾರಣದಿಂದ ಹತ್ಯೆಯಾದ ಭದ್ರಾವತಿ ಜೈಭೀಮಾ ನಗರದ ನಿವಾಸಿ, ಗುತ್ತಿಗೆ ಪೌರ ನೌಕರ ಸುನಿಲ್ ನಿವಾಸಕ್ಕೆ ಮಂಗಳವಾರ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷ ಎಚ್. ಹನುಮಂತಪ್ಪ ಭೇಟಿ ನೀಡಿದರು. ಈ ಸಂದರ್ಭದಲ್ಲಿ ವಿವಿಧ ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ಜೂ. ೮: ಇತ್ತೀಚೆಗೆ ಕ್ಷುಲ್ಲಕ ಕಾರಣದಿಂದ ಹತ್ಯೆಯಾದ ಜೈಭೀಮಾ ನಗರದ ನಿವಾಸಿ, ಗುತ್ತಿಗೆ ಪೌರ ನೌಕರ ಸುನಿಲ್ ನಿವಾಸಕ್ಕೆ ಮಂಗಳವಾರ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷ ಎಚ್. ಹನುಮಂತಪ್ಪ ಭೇಟಿ ನೀಡಿ ೫೦ ಸಾವಿರ ರು. ಪರಿಹಾರದ ಚೆಕ್ ವಿತರಿಸುವ ಜೊತೆಗೆ ಕುಟುಂಬ ವರ್ಗದವರು ಸ್ವಯಂ ಉದ್ಯೋಗ ಆರಂಭಿಸಲು ನಿಗಮದಿಂದ ಶೂನ್ಯ ಬಡ್ಡಿ ದರದಲ್ಲಿ ೩ ಲಕ್ಷ ರು. ಸಾಲ ಸೌಲಭ್ಯ ಕಲ್ಪಿಸಿಕೊಡುವುದಾಗಿ ಭರವಸೆ ನೀಡುವ ಮೂಲಕ ಸಾಂತ್ವಾನ ತಿಳಿಸಿದರು.
ಗಾಂಜಾ ಮತ್ತಿನಲ್ಲಿದ್ದ ಯುವಕರು ಸುನಿಲ್ ಹತ್ಯೆ ಮಾಡಿರುವುದು ವಿಷಾದನೀಯ ಘಟನೆಯಾಗಿದ್ದು, ಈ ರೀತಿಯ ಘಟನೆಗಳು ಮರುಕಳುಹಿಸಬಾರದು. ಸುನಿಲ್ ಪತ್ನಿ ಸೆಲ್ವಿ ಅವರಿಗೆ ನಗರಸಭೆಯಲ್ಲಿ ಕಾಯಂ ಉದ್ಯೋಗ ನೀಡುವ ಪ್ರಕ್ರಿಯೆ ಜಾಲ್ತಿಯಲ್ಲಿದೆ. ಜೊತೆಗೆ ಇನ್ನೂ ೫೦ ಸಾವಿರ ರು. ಪರಿಹಾರ ನಿಗಮದಿಂದ ನೀಡಲಾಗುವುದು. ಅಲ್ಲದೆ ನಿಗಮದಿಂದ ಲಭಿಸಬಹುದಾದ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದರು.
ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಿ :
ಹನುಮಂತಪ್ಪ ಅವರನ್ನು ಭೇಟಿ ಮಾಡಿದ ಬಿಜೆಪಿ ಪಕ್ಷದ ಸ್ಥಳೀಯ ಮುಖಂಡರು, ಸುನಿಲ್ ಹತ್ಯೆಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಸುನಿಲ್ ಪತ್ನಿಗೆ ಕಾಯಂ ಉದ್ಯೋಗ ನೀಡಬೇಕು. ಹೆಣ್ಣು ಮಗುವಿಗೆ ಉಚಿತ ಶಿಕ್ಷಣ ನೀಡಬೇಕೆಂದು ಆಗ್ರಹಿಸಿದರು.
ಡಿಎಸ್ಎಸ್ ಮುಖಂಡರಾದ ಸತ್ಯ ಭದ್ರಾವತಿ, ಸಫಾಯಿ ಕರ್ಮಚಾರಿ ಆಯೋಗದ ಜಿಲ್ಲಾ ಸದಸ್ಯ ಚಿನ್ನಯ್ಯ, ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ ಶ್ರೀನಾಥ್, ಮುಖಂಡರಾದ ಮಂಗೋಟೆ ರುದ್ರೇಶ್, ನಗರಸಭಾ ಸದಸ್ಯೆ ಅನಿತಾ ಮಲ್ಲೇಶ್, ಚಂದ್ರು ನರಸೀಪುರ ಹಾಗು ನಗರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.