Saturday, July 3, 2021

ಸರ್ಕಾರ ನಿರ್ದೇಶನದಂತೆ ಸಾಲ ವಸೂಲಾತಿ ಕೈಗೊಳ್ಳಿ : ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ಸೂಚನೆ

    ಭದ್ರಾವತಿ, ಜು. ೩: ಮೈಕ್ರೋ ಫೈನಾನ್ಸ್ ಕಂಪನಿಗಳು ಸಾಲ ವಸೂಲಾತಿಯಲ್ಲಿ ಒತ್ತಡ ಹೇರದೆ ಸರ್ಕಾರದ ನಿರ್ದೇಶನದಂತೆ ನಡೆದುಕೊಳ್ಳಬೇಕೆಂದು ಉಪ ತಹಸೀಲ್ದಾರ್ ಮಂಜನಾಯ್ಕ ಶನಿವಾರ ನಡೆದ ಸಭೆಯಲ್ಲಿ ಕಂಪನಿಗಳ ವ್ಯವಸ್ಥಾಪಕರಿಗೆ ಸೂಚಿಸಿದರು.
    ತಾಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೊರತುಪಡಿಸಿ ಉಳಿದೆಲ್ಲ ಮೈಕ್ರೋ ಫೈನಾನ್ಸ್ ಕಂಪನಿಗಳು ಸಾಲ ವಸೂಲಾತಿಗಾಗಿ ಮಹಿಳೆಯರಿಗೆ ಪೀಡಿಸುತ್ತಿದ್ದು, ಕೊರೋನಾ ಸಂಕಷ್ಟದ ಸಂದರ್ಭದಲ್ಲೂ ಸಾಲ ಮರುಪಾವತಿಗೆ ಕಾಲಾವಕಾಶ ನೀಡದಿರುವುದು ಸರಿಯಲ್ಲ. ಕಂಪನಿಗಳು ಸರ್ಕಾರದ ನಿರ್ದೇಶನಗಳನ್ನು ಪಾಲಿಸುತ್ತಿಲ್ಲ ಎಂದು ಆರೋಪಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸಂಯುಕ್ತ ಜನತಾದಳ ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್ ಗೌಡ ಶುಕ್ರವಾರ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದ್ದರು.
     ಈ ಹಿನ್ನಲೆಯಲ್ಲಿ ಕಂಪನಿಗಳ ಸ್ಥಳೀಯ ವ್ಯವಸ್ಥಾಪಕರೊಂದಿಗೆ ಸಭೆ ನಡೆಸಿ ಸಾಲ ವಸೂಲಾತಿಯಲ್ಲಿ ಕಾನೂನು ಬಾಹಿರವಾಗಿ ಒತ್ತಡ ಹೇರದೆ ಸರ್ಕಾರದ ನಿರ್ದೇಶನದಂತೆ ನಡೆದುಕೊಳ್ಳಬೇಕೆಂದು ತಿಳಿಸಲಾಯಿತು. ಇದಕ್ಕೆ ಕಂಪನಿಗಳ ವ್ಯವಸ್ಥಾಪಕರು ಪೂರಕವಾಗಿ ಸ್ಪಂದಿಸಿದ್ದು, ಸಾಲ ವಸೂಲಾತಿಯಲ್ಲಿ ಸರ್ಕಾರದ ನಿರ್ದೇಶನಗಳನ್ನು ಪಾಲಿಸುವುದಾಗಿ ಭರವಸೆ ನೀಡಿದರು. ಸಭೆಯಲ್ಲಿ ಶಶಿಕುಮಾರ್ ಎಸ್. ಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಭದ್ರಾವತಿಯಲ್ಲಿ ಒಂದಂಕಿಗೆ ಇಳಿದ ಸೋಂಕು

      ಭದ್ರಾವತಿ, ಜು. ೩: ತಾಲೂಕಿನಲ್ಲಿ ಇದೆ ಮೊದಲ ಬಾರಿಗೆ ಸೋಂಕಿನ ಪ್ರಮಾಣ ಒಂದಂಕಿಗೆ ಇಳಿದಿದ್ದು, ಶನಿವಾರ ಕೇವಲ ೭ ಸೋಂಕು ಪತ್ತೆಯಾಗಿದೆ.
     ಒಟ್ಟು ೭೮೦ ಮಂದಿ ಮಾದರಿ ಸಂಗ್ರಹಿಸಲಾಗಿದ್ದು, ೧೭ ಮಂದಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಇದುವರೆಗೂ ಒಟ್ಟು ೭೨೧೩ ಸೋಂಕು ಪ್ರಕರಣಗಳು ದಾಖಲಾಗಿದ್ದು, ೭೧೧೩ ಮಂದಿ ಗುಣಮುಖರಾಗಿದ್ದಾರೆ. ೧೦೦ ಸಕ್ರಿಯ ಪ್ರಕರಣಗಳು ಬಾಕಿ ಉಳಿದಿವೆ. ೭೭ ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
     ನಗರ ವ್ಯಾಪ್ತಿಯಲ್ಲಿ ೫ ಕಂಟೈನ್‌ಮೆಂಟ್ ಜೋನ್‌ಗಳು ಸಕ್ರಿಯವಾಗಿದ್ದು, ಇದುವರೆಗೂ ಒಟ್ಟು ೧೬೩ ಜೋನ್‌ಗಳನ್ನು ತೆರವುಗೊಳಿಸಲಾಗಿದೆ. ಗ್ರಾಮಾಂತರ ವ್ಯಾಪ್ತಿಯಲ್ಲಿ ೧೧ ಜೋನ್‌ಗಳು ಸಕ್ರಿಯಾಗಿದ್ದು, ಇದುವರೆಗೂ ೩೮ ಜೋನ್‌ಗಳನ್ನು ತೆರವುಗೊಳಿಸಲಾಗಿದೆ.

ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಕ್ಷೇತ್ರಗಳ ಮರುವಿಂಗಡಣೆ, ಕ್ಷೇತ್ರಗಳ ಹೆಸರು ಬದಲಾವಣೆ

ಮೀಸಲಾತಿ ಸಂಬಂಧ ಆಕ್ಷೇಪಣೆ, ಕ್ಷೇತ್ರ ಕಳೆದುಕೊಳ್ಳಲಿರುವ ಹಾಲಿ ಸದಸ್ಯರು


     ಭದ್ರಾವತಿ, ಜು. ೩: ರಾಜ್ಯ ಚುನಾವಣಾ ಆಯೋಗ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಸ್ಥಾನಗಳಿಗೆ ಮೀಸಲಾತಿ ಪಟ್ಟಿ ಪ್ರಕಟಿಸಿದ್ದು, ಮೀಸಲಾತಿ ಸಂಬಂಧ ಈಗಾಗಲೇ ಆಕ್ಷೇಪಣೆಗಳು ಕೇಳಿ ಬರುತ್ತಿವೆ.
    ಚುನಾವಣಾ ಆಯೋಗ ಈಗಾಗಲೇ ತಾಲೂಕಿನಲ್ಲಿ ಒಟ್ಟು ೫ ಜಿಲ್ಲಾ ಪಂಚಾಯಿತಿ ಹಾಗು ೧೪ ತಾಲೂಕು ಪಂಚಾಯಿತಿ ಕ್ಷೇತ್ರಗಳನ್ನು ಹೊಸದಾಗಿ ಮರು ವಿಂಗಡಿಸಿದೆ. ಈ ಹಿಂದೆ ವಿಂಗಡಿಸಲಾಗಿದ್ದ ೧೯ ತಾಲೂಕು ಪಂಚಾಯಿತಿ ಕ್ಷೇತ್ರಗಳಲ್ಲಿ ೫ ಕ್ಷೇತ್ರಗಳನ್ನು ಕಡಿತಗೊಳಿಸಲಾಗಿದೆ. ಆದರೆ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ೫ ಕ್ಷೇತ್ರಗಳು ತಾಲೂಕಿನಲ್ಲಿಯೇ ಉಳಿದುಕೊಂಡಿವೆ. ಆದರೆ ಕ್ಷೇತ್ರಗಳ ಹೆಸರು ಬದಲಾಗಿದೆ.
     ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ವ್ಯಾಪ್ತಿಗೆ ಒಳಪಡುವ ಆನವೇರಿ ಕ್ಷೇತ್ರವನ್ನು ಈ ಬಾರಿ ಅಗರದಹಳ್ಳಿ ಕ್ಷೇತ್ರವನ್ನಾಗಿ, ಹೊಳೆಹೊನ್ನೂರು ಕ್ಷೇತ್ರವನ್ನು ಅರಬಿಳಚಿ ಕ್ಷೇತ್ರವನ್ನಾಗಿ ಹೆಸರಿಸಲಾಗಿದೆ. ಭದ್ರಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಕೂಡ್ಲಿಗೆರೆ ಕ್ಷೇತ್ರವನ್ನು ತಡಸ ಕ್ಷೇತ್ರವನ್ನಾಗಿ,  ಹಿರಿಯೂರು ಕ್ಷೇತ್ರವನ್ನು ಯರೇಹಳ್ಳಿ ಕ್ಷೇತ್ರವನ್ನಾಗಿ ಹಾಗು ಸಿಂಗನಮನೆ ಕ್ಷೇತ್ರವನ್ನು ದೊಣಬಘಟ್ಟ ಕ್ಷೇತ್ರವನ್ನಾಗಿ ಹೆಸರಿಲಾಗಿದೆ.
    ಹೊಳೆಹೊನ್ನೂರು ಪಟ್ಟಣ ಪಂಚಾಯಿತಿಯಾಗಿ ರೂಪುಗೊಂಡಿರುವ ಹಿನ್ನಲೆಯಲ್ಲಿ ಈ ಹಿಂದೆ ವಿಂಗಡಿಸಲಾಗಿದ್ದ ೧೯ ತಾಲೂಕು ಪಂಚಾಯಿತಿ ಕ್ಷೇತ್ರಗಳಲ್ಲಿ ೫ ಕ್ಷೇತ್ರಗಳು ಕಡಿತಗೊಳಿಸಲಾಗಿದೆ. ಆನವೇರಿ, ಆಗರದಹಳ್ಳಿ, ಸನ್ಯಾಸಿಕೋಡಮಗ್ಗೆ, ಯಡೇಹಳ್ಳಿ, ತಟ್ಟೆಹಳ್ಳಿ, ಅರಬಿಳಚಿ, ತಡಸ, ಅರಳಿಹಳ್ಳಿ, ಅಂತರಗಂಗೆ, ಯರೇಹಳ್ಳಿ, ಹಿರಿಯೂರು, ಹುಣಸೇಕಟ್ಟೆ, ಸಿಂಗನಮನೆ ಮತ್ತು ದೊಣಬಘಟ್ಟ ಒಟ್ಟು ೧೪ ಕ್ಷೇತ್ರಗಳನ್ನು ಹೊಸದಾಗಿ ಮರು ವಿಂಗಡಿಸಲಾಗಿದೆ.
    ಹೊಸದಾಗಿ ವಿಂಗಡಿಸಲಾಗಿರುವ ಕ್ಷೇತ್ರಗಳ ಮೀಸಲಾತಿ ಸಂಬಂಧ ಈಗಾಗಲೇ ಆಕ್ಷೇಪಣೆಗಳು ಕೇಳಿ ಬರುತ್ತಿವೆ. ಮೀಸಲಾತಿ ಬದಲಾವಣೆಯಿಂದಾಗಿ ಬಹುತೇಕ ಹಾಲಿ ಸದಸ್ಯರು ಕ್ಷೇತ್ರಗಳನ್ನು ಕಳೆದುಕೊಳ್ಳುವಂತಾಗಿದೆ. ಕಳೆದ ಅವಧಿಯಲ್ಲಿ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ನೇತೃತ್ವದಲ್ಲಿ ಜೆಡಿಎಸ್ ಅತಿಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.

Friday, July 2, 2021

ಹೋರಾಟಗಾರ ಬಿ.ವಿ ಗಿರೀಶ್‌ಗೆ ಶ್ರದ್ದಾಂಜಲಿ

ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್‌ಶೆಟ್ಟಿ ಬಣ) ಭದ್ರಾವತಿ ತಾಲೂಕು ಅಧ್ಯಕ್ಷ, ಸಾಮಾಜಿಕ ಹೋರಾಟಗಾರ ಬಿ.ವಿ ಗಿರೀಶ್ ಇತ್ತೀಚೆಗೆ ನಿಧನಹೊಂದಿದ್ದು, ಇವರಿಗೆ ಶುಕ್ರವಾರ ತಾಲೂಕು ಕಚೇರಿ ಮಿನಿವಿಧಾನಸೌಧ ಆವರಣದಲ್ಲಿ ವಿವಿಧ ಸಂಘಟನೆಗಳಿಂದ ಸಂತಾಪ ಸೂಚಕ ಸಭೆ ನಡೆಸಿ ಶ್ರದ್ದಾಂಜಲಿ ಸಲ್ಲಿಸಲಾಯಿತು.  
    ಭದ್ರಾವತಿ, ಜು. ೨: ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್‌ಶೆಟ್ಟಿ ಬಣ) ತಾಲೂಕು ಅಧ್ಯಕ್ಷ, ಸಾಮಾಜಿಕ ಹೋರಾಟಗಾರ ಬಿ.ವಿ ಗಿರೀಶ್ ಇತ್ತೀಚೆಗೆ ನಿಧನಹೊಂದಿದ್ದು, ಇವರಿಗೆ ಶುಕ್ರವಾರ ತಾಲೂಕು ಕಚೇರಿ ಮಿನಿವಿಧಾನಸೌಧ ಆವರಣದಲ್ಲಿ ವಿವಿಧ ಸಂಘಟನೆಗಳಿಂದ ಸಂತಾಪ ಸೂಚಕ ಸಭೆ ನಡೆಸಿ ಶ್ರದ್ದಾಂಜಲಿ ಸಲ್ಲಿಸಲಾಯಿತು.
   ಎಲ್ಲಾ ಹೋರಾಟಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಬಡವರ ಪರವಾಗಿ, ನ್ಯಾಯದ ಪರವಾಗಿ ಧ್ವನಿಯಾಗಿದ್ದ, ಸ್ನೇಹಮುಖಿಯಾಗಿದ್ದ ಗಿರೀಶ್ ನಿಧನ ತುಂಬಲಾರದ ನಷ್ಟವನ್ನುಂಟು ಮಾಡಿದೆ. ಅವರ ಆತ್ಮಕ್ಕೆ ಭಗವಂತ ಶಾಂತಿ ಕರುಣಿಸಲೆಂದು ಪ್ರಾರ್ಥಿಸಲಾಯಿತು.
   ಪೊಲೀಸ್ ನಗರ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಜೆಡಿಯು ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್. ಗೌಡ, ಸಾಮಾಜಿಕ ಹೋರಾಟಗಾರ ಶಿವಕುಮಾರ್, ಬಿ.ವಿ ಗಿರೀಶ್ ಅಭಿಮಾನಿಗಳ ಸಂಘದ ವಿವೇಕ್ ಪ್ರಶಾಂತ್, ಕರ್ನಾಟಕ ರಕ್ಷಣಾ ವೇದಿಕೆಯ ಸಂದೇಶ್ ಗೌಡ, ನಗರಸಭೆ ಮಾಜಿ ಸದಸ್ಯ ವೆಂಕಟಯ್ಯ, ಸತೀಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಮೊದಲ ಬಾರಿಗೆ ಕ್ಷಿಪ್ರ ಕಾರ್ಯ ಪಡೆ ಘಟಕದಲ್ಲಿ ವೃಕ್ಷಾರೋಹಣ

ಪರಿಸರ ಕಾಳಜಿ, ಆಮ್ಲಜನಿಕ ಮಹತ್ವ ಕುರಿತು ಜಾಗೃತಿ  


ಭದ್ರಾವತಿ ನಗರದಲ್ಲಿ ನೂತನವಾಗಿ ಕಾರ್ಯಾರಂಭಗೊಂಡಿರುವ ಕೇಂದ್ರಿಯ ಮೀಸಲು ಪೊಲೀಸ್  ಪಡೆಯ ಕ್ಷಿಪ್ರ ಕಾರ್ಯ ಪಡೆ(ಆರ್‌ಎಎಫ್) ವತಿಯಿಂದ ಮೊದಲ ಬಾರಿಗೆ ಶುಕ್ರವಾರ ವೃಕ್ಷಾರೋಹಣ ಕಾರ್ಯಕ್ರಮ ನೆರವೇರಿತು.
   ಭದ್ರಾವತಿ, ಜು. ೨: ನಗರದಲ್ಲಿ ನೂತನವಾಗಿ ಕಾರ್ಯಾರಂಭಗೊಂಡಿರುವ ಕೇಂದ್ರಿಯ ಮೀಸಲು ಪೊಲೀಸ್  ಪಡೆಯ ಕ್ಷಿಪ್ರ ಕಾರ್ಯ ಪಡೆ(ಆರ್‌ಎಎಫ್) ವತಿಯಿಂದ ಮೊದಲ ಬಾರಿಗೆ ಶುಕ್ರವಾರ ವೃಕ್ಷಾರೋಹಣ ಕಾರ್ಯಕ್ರಮ ನೆರವೇರಿತು.
   ಕೇಂದ್ರ ಗೃಹ ಸಚಿವ ಅಮಿತ್ ಶಾ ನಗರದ ಮಿಲ್ಟ್ರಿಕ್ಯಾಂಪ್‌ನಲ್ಲಿ ಜ.೧೬ರಂದು ೯೭ ಬಿ.ಎನ್ ಕ್ಷಿಪ್ರ ಕಾರ್ಯ ಪಡೆ ಘಟಕಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು. ಇದೀಗ ಕ್ಷಿಪ್ರ ಕಾರ್ಯ ಪಡೆ ತನ್ನ ಸ್ವಾಧೀನದಲ್ಲಿರುವ ಖಾಲಿ ಜಾಗದಲ್ಲಿ ಸಸಿಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಿದೆ. ಅದರಲ್ಲೂ ಆಮ್ಲಜನಕ ಕೊರತೆ ಕಂಡು ಬರುತ್ತಿರುವ ಪ್ರಸ್ತುತ ದಿನಗಳಲ್ಲಿ ಸುತ್ತಮುತ್ತಲಿನ ಜನವಸತಿ ಪ್ರದೇಶಗಳಪರಿಸರದಲ್ಲೂ ಸಸಿಗಳನ್ನು ನೆಡುವ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ಕೆ ಮುಂದಾಗಿದೆ.
     ಕ್ಷಿಪ್ರ ಕಾರ್ಯಪಡೆ ಡೆಪ್ಯೂಟಿ ಕಮಾಂಡೆಂಟ್‌ಗಳಾದ ಬೀನಮ್ಮ ಜೋಸೆಫ್, ಎಂ. ನರೇಶ್‌ಕುಮಾರ್,  ಅಸಿಸ್ಟೆಂಟ್ ಕಮಾಂಡೆಂಟ್‌ಗಳಾದ ಕೆ. ರಮೇಶ್‌ಕುಮಾರ್  ಮತ್ತು ಶಹಜಹಾನ್ ನೇತೃತ್ವದಲ್ಲಿ ಪೊಲೀಸ್ ಉಪಾಧೀಕ್ಷಕ ಐಪಿಎಸ್ ಅಧಿಕಾರಿ ಬಿ. ಸಾಹಿಲ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಂ ಗಾಮನಗಟ್ಟಿ, ವಲಯ ಅರಣ್ಯಾಧಿಕಾರಿ ಕೆ.ಎಂ ಮಂಜುನಾಥ್, ಉಪ ತಹಸೀಲ್ದಾರ್ ನಾರಾಯಣಗೌಡ, ಪೇಪರ್‌ಟೌನ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಇ.ಓ ಮಂಜುನಾಥ್, ಅಗ್ನಿಶಾಮಕ ಠಾಣಾಧಿಕಾರಿ ವಸಂತಕುಮಾರ್, ಮುರಾರ್ಜಿದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ಬಸವರಾಜಪ್ಪ ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವಿದ್ಯಾದಾನಕ್ಕೆ ನೆರವಾಗುವ ದಾನಿಗಳ ಶ್ರಮ ವ್ಯರ್ಥವಾಗದಿರಲಿ : ರಂಗಮ್ಮ

ಭದ್ರಾವತಿ ತಾಲೂಕಿನ ಅರಳಿಹಳ್ಳಿ ಸರ್ಕಾರಿ ಶಾಲೆಯಲ್ಲಿ ಶ್ರೀ ವಿನಾಯಕ ಚಾರಿಟಬಲ್ ಟ್ರಸ್ಟ್ ವತಿಯಿಂದ ಶುಕ್ರವಾರ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.  
    ಭದ್ರಾವತಿ, ಜೂ. ೨: ದಾನಗಳಲ್ಲಿ ವಿದ್ಯಾದಾನ ಶ್ರೇಷ್ಠವಾಗಿದ್ದು, ಉಜ್ವಲ ಭವಿಷ್ಯವನ್ನು ರೂಪಿಸುವ ವಿದ್ಯೆಯನ್ನು ಯಾರಿಂದಲೂ ಕದಿಯಲು ಸಾಧ್ಯವಿಲ್ಲ. ಇಂತಹ ವಿದ್ಯಾದಾನಕ್ಕೆ ನೆರವಾಗುವ ದಾನಿಗಳ ಶ್ರಮ ಸಾರ್ಥಕವಾಗಬೇಕೆಂದು ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಹೇಳಿದರು.
     ಅವರು ಶುಕ್ರವಾರ ತಾಲೂಕಿನ ಅರಳಿಹಳ್ಳಿ ಸರ್ಕಾರಿ ಶಾಲೆಯಲ್ಲಿ ಶ್ರೀ ವಿನಾಯಕ ಚಾರಿಟಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ದಾನಿಗಳ ಶ್ರಮ ಸಾರ್ಥಕವಾಗಬೇಕಾದರೆ ಅವರು ಕಲ್ಪಿಸಿಕೊಡುವ ಸೌಲಭ್ಯಗಳನ್ನು ಮಕ್ಕಳು ಸದ್ಬಳಕೆ ಮಾಡಿಕೊಂಡು ವಿದ್ಯಾಭ್ಯಾಸದಲ್ಲಿ ಗುರಿ ಸಾಧಿಸಬೇಕೆಂದರು.
   ಟ್ರಸ್ಟ್ ಅಧ್ಯಕ್ಷ, ಸಮಾಜ ಸೇವಕ ಎ. ಧರ್ಮೇಂದ್ರ ಮಾತನಾಡಿ, ಈ ಹಿಂದೆ ಬಹಳಷ್ಟು ಜನ ಬಡತನದಲ್ಲಿ ಶಿಕ್ಷಣ ಸಂಪೂರ್ಣವಾಗಿ ಪೂರೈಸಲು ಸಾಧ್ಯವಾಗದೆ ವಂಚಿತರಾಗಿದ್ದಾರೆ. ಆದರೂ ಸಹ ಕೊರಗಿನ ನಡುವೆಯೂ ಶ್ರಮದ ಮೂಲಕ ಕಷ್ಟಪಟ್ಟು ಬದುಕು ಕಟ್ಟಿಕೊಂಡಿದ್ದಾರೆ. ತಮ್ಮ ದುಡಿಮೆಯ ಶ್ರಮ ವ್ಯರ್ಥವಾಗಬಾರದೆಂಬ ಆಶಯದ ಜೊತೆಗೆ ತಾವು ಪೂರೈಸಲು ಸಾಧ್ಯವಾಗದ ಶಿಕ್ಷಣದ ಗುರಿಯನ್ನು ಭವಿಷ್ಯದ ಮಕ್ಕಳು ಪೂರೈಸಬೇಕೆಂಬ ಬಯಕೆ ಹೊಂದಿದ್ದಾರೆ. ಇಂತಹ ವ್ಯಕ್ತಿಗಳಲ್ಲಿ ತಾವು ಸಹ ಒಬ್ಬರಾಗಿದ್ದು, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸೇವಾ ಕಾರ್ಯವನ್ನು ಕಳೆದ ೩ ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ಆರಂಭದಲ್ಲಿ ಕೇವಲ ೫೦೦ ಮಕ್ಕಳಿಗೆ ಮಾತ್ರ ನೋಟ್ ಬುಕ್ ವಿತರಿಸಲು ಸಾಧ್ಯವಾಯಿತು. ನಂತರ ೧೦೦೦ ಮಕ್ಕಳಿಗೆ, ಇದೀಗ ೧೫೦೦ ಮಕ್ಕಳಿಗೆ ನೋಟ್ ಬುಕ್‌ಗಳನ್ನು ವಿತರಿಸಲಾಗುತ್ತಿದೆ. ಮುಂದಿನ ವರ್ಷದಲ್ಲಿ ಸುಮಾರು  ೫೦೦೦ ಮಕ್ಕಳಿಗೆ ನೋಟ್ ಬುಕ್ ವಿತರಿಸಬೇಕೆಂಬ ಗುರಿ ಹೊಂದಲಾಗಿದೆ. ಇಂತಹ ಕಾರ್ಯಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
    ಶಾಲೆಯ ಮುಖ್ಯ ಶಿಕ್ಷಕ ಮೋತಿನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಉಪ ತಹಸೀಲ್ದಾರ್ ಮಂಜಾನಾಯ್ಕ, ಗ್ರಾಮ ಪಂಚಾಯಿತಿ ಸದಸ್ಯ ಪಾರ್ಥಿಬನ್, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಲೋಕೇಶ್, ಜಗದೀಶ್, ರಮೇಶ್, ಸಹಾಯಕ ಪೊಲೀಸ್ ಠಾಣಾಧಿಕಾರಿ ಕುಮಾರ್, ಮಲ್ಲಿಕಾರ್ಜುನ, ಗಣಪತಿಭಟ್, ಶಾಲೆಯ ಶಿಕ್ಷಕರು, ಗ್ರಾಮದ ಮುಖಂಡರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಬಡ ಕುಟುಂಬಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಟ್ಟ ಶಾಸಕ ಬಿ.ಕೆ ಸಂಗಮೇಶ್ವರ್


ಬಹಳ ವರ್ಷಗಳಿಂದ ವಿದ್ಯುತ್ ಸಂಪರ್ಕವಿಲ್ಲದ ಭದ್ರಾವತಿ ನಗರಸಭೆ ೨೨ನೇ ವಾರ್ಡ್ ವ್ಯಾಪ್ತಿಯ ಬಡಕುಟುಂಬವೊಂದಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
      ಭದ್ರಾವತಿ, ಜು. ೨:  ಬಹಳ ವರ್ಷಗಳಿಂದ ವಿದ್ಯುತ್ ಸಂಪರ್ಕವಿಲ್ಲದ ಕುಟುಂಬವೊಂದಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
    ವಾರ್ಡ್ ನಂ. ೨೨ರ ಉಜ್ಜನಿಪುರದಲ್ಲಿ ಬಡ ಕುಟುಂಬವೊಂದು ಸುಮಾರು ೪೦ ವರ್ಷಗಳಿಂದ ವಿದ್ಯುತ್ ಸಂಪರ್ಕವಿಲ್ಲದೆ ವಂಚಿತವಾಗಿದ್ದು, ಈ ಮಾಹಿತಿ ಅರಿತ ತಕ್ಷಣ ಶಾಸಕರು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವ ಜೊತೆಗೆ ಸುಮಾರು ೨೦ ಸಾವಿರ ರು. ಸ್ವಂತ ಹಣದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡುವ ಮೂಲಕ ಬಡ ಕುಟುಂಬಕ್ಕೆ ನೆರವಾಗಿದ್ದಾರೆ.
    ನಗರಸಭಾ ಸದಸ್ಯರಾದ ಬಿ.ಕೆ ಮೋಹನ್, ಸುದೀಪ್‌ಕುಮಾರ್, ನಗರಸಭೆ ಮಾಜಿ  ಸದಸ್ಯ ವೆಂಕಟಯ್ಯ ಸೇರಿದಂತೆ ಸ್ಥಳೀಯ ಮುಖಂಡರು, ನಿವಾಸಿಗಳು ಶಾಸಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.