Thursday, July 15, 2021

ಸಹಾಯವಾಣಿ ಕೇಂದ್ರದಿಂದ ಬಡ ಮಕ್ಕಳಿಗೆ ದಿನಸಿ ಸಾಮಗ್ರಿ ವಿತರಣೆ, ಜಾಗೃತಿ ಕಾರ್ಯಕ್ರಮ

ಸಂಕಷ್ಟಕ್ಕೆ ಒಳಗಾಗಿರುವ ಮಕ್ಕಳ ರಕ್ಷಣೆಯಲ್ಲಿ ನಿರಂತರವಾಗಿ ತೊಡಗಿರುವ ಶಿವಮೊಗ್ಗದ ಮಕ್ಕಳ ಸಹಾಯವಾಣಿ ೧೦೯೮ ವತಿಯಿಂದ ನಗರಸಭೆ ವ್ಯಾಪ್ತಿಯ ಭದ್ರಾವತಿ ಬೊಮ್ಮನಕಟ್ಟೆಯಲ್ಲಿ ಬಡ ಮಕ್ಕಳಿಗೆ ದಿನಸಿ ಸಾಮಗ್ರಿ ವಿತರಣೆ ಹಾಗು ಜಾಗೃತಿ ಕಾರ್ಯಕ್ರಮ ನಡೆಯಿತು.
    ಭದ್ರಾವತಿ, ಜು. ೧೫: ಸಂಕಷ್ಟಕ್ಕೆ ಒಳಗಾಗಿರುವ ಮಕ್ಕಳ ರಕ್ಷಣೆಯಲ್ಲಿ ನಿರಂತರವಾಗಿ ತೊಡಗಿರುವ ಶಿವಮೊಗ್ಗದ ಮಕ್ಕಳ ಸಹಾಯವಾಣಿ ೧೦೯೮ ವತಿಯಿಂದ ನಗರಸಭೆ ವ್ಯಾಪ್ತಿಯ ಬೊಮ್ಮನಕಟ್ಟೆಯಲ್ಲಿ ಬಡ ಮಕ್ಕಳಿಗೆ ದಿನಸಿ ಸಾಮಗ್ರಿ ವಿತರಣೆ ಹಾಗು ಜಾಗೃತಿ ಕಾರ್ಯಕ್ರಮ ನಡೆಯಿತು.
    ಮಕ್ಕಳು ಯಾವುದೇ ರೀತಿಯಲ್ಲಿ ಸಂಕಷ್ಟಕ್ಕೆ ಒಳಗಾದಲ್ಲಿ ತಕ್ಷಣ ಸಹಾಯವಾಣಿ ೧೦೯೮ ಸಂಖ್ಯೆಗೆ ಕರೆ ಮಾಡುವ ಮೂಲಕ ನೆರವನ್ನು ಪಡೆಯಬಹುದಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಲಾಯಿತು.
   ಕಾರ್ಯಕ್ರಮವನ್ನು ನಗರಸಭಾ ಸದಸ್ಯ ಕೋಟೇಶ್ವರರಾವ್ ಉದ್ಘಾಟಿಸಿದರು. ಶಿವಮೊಗ್ಗ ಶಾಂತಿನಗರದ ಗುರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಎನ್‌ಎಸ್‌ಎಸ್ ನಿರ್ದೇಶಕ ಪಾದರ್ ಅಬ್ರಹಂ, ಸಹ ನಿರ್ದೇಶಕ ಪಾದರ್ ಜೋಸ್, ಯೋಜನಾ ವ್ಯವಸ್ಥಾಪಕಿ ಸಿಸ್ಟರ್ ಸುಪ್ರಿಯಾ, ಅಂಗನವಾಡಿ ಕೇಂದ್ರದ ಮೇಲ್ವಿಚಾರಕಿ ಕವಿತಾ, ಬೊಮ್ಮನಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಎ. ತಿಪ್ಪೇಸ್ವಾಮಿ, ಸಹಾಯವಾಣಿ ಕೇಂದ್ರದ ತಾಲೂಕು ಸಂಯೋಜಕರಾದ ಪ್ರಮೋದ್ ಮತ್ತು ಸುಮಿತ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜನ್ನಾಪುರ-ಹುತ್ತಾ ತೆರಿಗೆದಾರರ ಸಂಘದಿಂದ ಮನವಿ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭದ್ರಾವತಿ ಜನ್ನಾಪುರ-ಹುತ್ತಾ ತೆರಿಗೆದಾರರ ಸಂಘದ ವತಿಯಿಂದ ನಗರಸಭೆ ಪೌರಾಯುಕ್ತ ಕೆ. ಪರಮೇಶ್ ಅವರಿಗೆ ಮನವಿ ಸಲ್ಲಿಸಲಾಯಿತು.
     ಭದ್ರಾವತಿ, ಜು. ೧೫: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜನ್ನಾಪುರ-ಹುತ್ತಾ ತೆರಿಗೆದಾರರ ಸಂಘದ ವತಿಯಿಂದ ನಗರಸಭೆ ಪೌರಾಯುಕ್ತ ಕೆ. ಪರಮೇಶ್ ಅವರಿಗೆ ಮನವಿ ಸಲ್ಲಿಸಲಾಯಿತು.
     ಜನ್ನಾಪುರ-ಹುತ್ತಾ ವ್ಯಾಪ್ತಿಯಲ್ಲಿ ಯು.ಜಿ.ಡಿ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದ್ದು, ಇದರಿಂದಾಗಿ ಶೌಚಾಲಯದ ಗುಂಡಿಗಳು ಭರ್ತಿಯಾಗಿ ಸಮಸ್ಯೆಗಳು ಎದುರಾಗಿವೆ. ಈ ಹಿನ್ನಲೆಯಲ್ಲಿ ತಕ್ಷಣ ಯು.ಜಿ.ಡಿ ಕಾಮಗಾರಿ ಪೂರ್ಣಗೊಳಿಸಿ ಸಂಪರ್ಕ ಕಲ್ಪಿಸುವುದು. ಎಲ್ಲರಿಗೂ ಕುಡಿಯುವ ನೀರು ಸಮರ್ಪಕವಾಗಿ ಕಲ್ಪಿಸಿಕೊಡುವುದು. ಅಲ್ಲಲ್ಲಿ ನೀರಿನ ಕೊಳವೆಗಳು ಹಾಳಾಗಿದ್ದು, ಇದರಿಂದಾಗಿ ಕುಡಿಯುವ ನೀರು ಸೋರಿಕೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ತಕ್ಷಣ ಹಾಳಾದ ನೀರಿನ ಕೊಳವೆಗಳನ್ನು ದುರಸ್ತಿಗೊಳಿಸುವುದು. ಜನ್ನಾಪುರ ಕೆರೆ ಶುದ್ಧೀಕರಣ ತ್ವರಿತಗತಿಯಲ್ಲಿ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.
     ಬೀದಿನಾಯಿಗಳ ಕಾಟ, ಸೊಳ್ಳೆಕಾಟ ಹೆಚ್ಚಾಗಿದ್ದು, ತಕ್ಷಣ ಕ್ರಮ ಕೈಗೊಳ್ಳುವುದು. ನಗರಸಭೆ ಎನ್‌ಟಿಬಿ ಶಾಖಾ ಕಛೇರಿಯಲ್ಲಿ ಕಂದಾಯ ಪಾವತಿಸಲು ಕಂಪ್ಯೂಟರ್ ವಿಭಾಗ ತೆರೆಯುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮನವಿ ಮಾಡಲಾಗಿದೆ.
    ಸಂಘದ ಅಧ್ಯಕ್ಷ ಕೆ.ಎಂ ಸತೀಶ್, ಉಪಾಧ್ಯಕ್ಷ ಬಿ. ಯಲ್ಲಪ್ಪ, ಕಾರ್ಯದರ್ಶಿ ಬಿ. ಚಂದ್ರಶೇಖರಯ್ಯ, ಸಹಕಾರ್ಯದರ್ಶಿ ಬಿ.ಎಂ ಚಂದ್ರಪ್ಪ, ಖಜಾಂಚಿ ಭದ್ರಯ್ಯ, ಸದಸ್ಯರಾದ ಜೆಪಿಎಸ್ ಚಂದ್ರಶೇಖರ್, ಪಿ. ಶಿವನ್, ಚಂದು, ಜಿ.ಟಿ ಚಂದ್ರಶೇಖರ್, ಎನ್. ಕೃಷ್ಣಪ್ಪ ಮತ್ತು ರುದ್ರೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಗೃಹರಕ್ಷಕ ದಳದ ಪ್ಲಟೂನ್ ಸಾರ್ಜೆಂಟ್ ಬಿ.ಇ ವಿಜಯೇಂದ್ರಗೆ ಮುಖ್ಯಮಂತ್ರಿ ಪದಕ

ಗೃಹರಕ್ಷಕ ದಳದಲ್ಲಿ ಎರಡು ದಶಕಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಭದ್ರಾವತಿ ಮಹಾತ್ಮಗಾಂಧಿ ವೃತ್ತದ ಸಮೀಪದ ತರೀಕೆರೆ ರಸ್ತೆ ನಿವಾಸಿ ಬಿ.ಇ ವಿಜಯೇಂದ್ರ ಅವರಿಗೆ ಈ ಬಾರಿ ಮುಖ್ಯಮಂತ್ರಿಗಳ ಪದಕ ಲಭಿಸಿದೆ.
    ಭದ್ರಾವತಿ, ಜು. ೧೫: ಗೃಹರಕ್ಷಕ ದಳದಲ್ಲಿ ಎರಡು ದಶಕಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ನಗರದ ಮಹಾತ್ಮಗಾಂಧಿ ವೃತ್ತದ ಸಮೀಪದ ತರೀಕೆರೆ ರಸ್ತೆ ನಿವಾಸಿ ಬಿ.ಇ ವಿಜಯೇಂದ್ರ ಅವರಿಗೆ ಈ ಬಾರಿ ಮುಖ್ಯಮಂತ್ರಿಗಳ ಪದಕ ಲಭಿಸಿದೆ. 
ವಿಧಾನಸೌಧದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ವಿಜಯೇಂದ್ರ ಪದಕ ಸ್ವೀಕರಿಸಿದ್ದು, ಗೃಹರಕ್ಷಕದಳದಲ್ಲಿ ಪ್ರಸ್ತುತ ಪ್ಲಟೂನ್ ಸಾರ್ಜೆಂಟ್ ಆಗಿರುವ ಇವರು ೧೯೯೯ರಲ್ಲಿ ಸ್ವಯಂ ಸೇವಕರಾಗಿ ನೇಮಕಗೊಂಡಿದ್ದರು. ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 
ಗೃಹರಕ್ಷಕ ದಳದ ಸಮವಸ್ತ್ರ ನೀತಿ ನಿಯಮಗಳಿಗನುಸಾರವಾಗಿ ಎಲ್ಲಾ ವಿಧವಾದ ಕರ್ತವ್ಯಗಳಲ್ಲಿ ಲೋಪದೋಷಗಳಿಲ್ಲದೆ ಕರ್ತವ್ಯ ನಿರ್ವಹಿಸಿರುವುದು ಇವರ ಹೆಗ್ಗಳಿಕೆಯಾಗಿದೆ. ಪ್ರತಿ ವರ್ಷ ಕೇಂದ್ರ ಕಛೇರಿ ವತಿಯಿಂದ ಆಯೋಜಿಸುವ ವಿವಿಧ ತರಬೇತಿಯಲ್ಲಿ ಭಾಗವಹಿಸಿ ೨ ಚಿನ್ನ ಹಾಗು ೧ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ. 
ಪತ್ರಿಕೆಯೊಂದಿಗೆ ಮಾತನಾಡಿದ ವಿಜಯೇಂದ್ರ, ಪ್ರಶಸ್ತಿ ಲಭಿಸಿರುವುದು ಸಂತಸದ ವಿಚಾರವಾಗಿದೆ. ಕೃಷಿಕರಾಗಿ ತೋಟದ ಕೆಲಸದ ಜೊತೆಗೆ ಗೃಹ ರಕ್ಷಕದಳದಲ್ಲೂ ಕರ್ತವ್ಯ ನಿರ್ವಹಿಸುತ್ತಿದ್ದು, ಜೊತೆಗೆ ವೈಯಕ್ತಿಕವಾಗಿ ಹಲವಾರು ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದೇನೆ. ಹೊಳೆಯಲ್ಲಿ ಕಂಡು ಬರುವ ಅನಾಥ ಶವಗಳ ಪತ್ತೆ ಕಾರ್ಯ, ಸನ್ಮಾರ್ಗ ಟ್ರಸ್ಟ್ ವತಿಯಿಂದ ಸಂಕಷ್ಟದಲ್ಲಿರುವ ಬಡವರಿಗೆ ನೆರವು, ಡ್ಯಾನ್ಸ್ ಸ್ಕೂಲ್ ವತಿಯಿಂದ ಪ್ರತಿವರ್ಷ ಸ್ವಾತಂತ್ರ್ಯ ದಿನದಂದು ದೇಶ ಭಕ್ತಿ ಗೀತೆ ಮೂಲಕ ಜಾಗೃತಿ ಮೂಡಿಸುವುದು. ಸ್ವಯಂ ಪ್ರೇರಣೆಯಿಂದ ರಕ್ತದಾನ ಸೇರಿದಂತೆ ಆರೋಗ್ಯ ಶಿಬಿರಗಳಲ್ಲಿ ಪಾಲ್ಗೊಳ್ಳುವುದು ಸೇರಿದಂತೆ ಇತ್ಯಾದಿ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದರು. 
ಪ್ರಶಸ್ತಿ ಲಭಿಸಿರುವ ಸಂಭ್ರಮದಲ್ಲಿ ವಿಜಯೇಂದ್ರ ಗುರುಗಳಾದ ವೆಂಕಟರಮಣಯ್ಯ, ರಾಜಣ್ಣ ಜಿಲ್ಲಾ ಸಮಾದೇಷ್ಟರು, ಬೋಧಕರು, ತಾಲೂಕು ಘಟಕಾಧಿಕಾರಿ ಹಾಗು ಗೃಹರಕ್ಷಕ ದಳದ ಎಲ್ಲಾ ಹಿರಿಯರನ್ನು ಮತ್ತು ಸಹದ್ಯೋಗಿಗಳನ್ನು ಸ್ಮರಿಸಿದ್ದಾರೆ.  

Wednesday, July 14, 2021

ಭದ್ರಾವತಿಯಲ್ಲಿ ೧೦ ಮಂದಿಯಲ್ಲಿ ಕೊರೋನಾ ಸೋಂಕು

     ಭದ್ರಾವತಿ, ಜು. ೧೪: ತಾಲೂಕಿನಲ್ಲಿ ಬುಧವಾರ ಒಟ್ಟು ೧೦ ಕೊರೋನಾ ಸೋಂಕು ಪ್ರಕರಣಗಳು ದಾಖಲಾಗಿದ್ದು, ಇಬ್ಬರು ಸೋಂಕಿಗೆ ಬಲಿಯಾಗಿದ್ದಾರೆ. ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ.
     ಒಟ್ಟು ೮೨೨ ಮಂದಿಯ ಮಾದರಿ ಸಂಗ್ರಹಿಸಲಾಗಿದ್ದು, ೧೦ ಸೋಂಕು ದೃಢಪಟ್ಟಿದೆ. ೧೨ ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಇದುವರೆಗೂ ಒಟ್ಟು ೭೪೫೫ ಸೋಂಕು ಪತ್ತೆಯಾಗಿದ್ದು, ೭೩೯೫ ಮಂದಿ ಗುಣಮುಖರಾಗಿದ್ದಾರೆ. ೬೦ ಸಕ್ರಿಯ ಪ್ರಕರಣಗಳು ಇದ್ದು, ಸೋಂಕಿಗೆ ಇಬ್ಬರು ಬಲಿಯಾಗಿದ್ದಾರೆ.
    ತಾಲೂಕಿನಲ್ಲಿ ಸೋಂಕು ಇಳಿಮುಖವಾದರೂ ಸಾವಿನ ಪ್ರಮಾಣ ಇಳಿಮುಖವಾಗುತ್ತಿಲ್ಲ. ಇದರಿಂದಾಗಿ ನಾಗರಿಕರಲ್ಲಿ ಆತಂಕ ಹೆಚ್ಚು ಮಾಡಿದೆ.  

ಕಾರ್ಯದರ್ಶಿಯಾಗಿ ಕೃಷ್ಣೋಜಿರಾವ್

ಕೃಷ್ಣೋಜಿರಾವ್
    ಭದ್ರಾವತಿ, ಜು. ೧೪: ಹೊಸ ಬುಳ್ಳಾಪುರ ವಾಡ್ ನಂ.೨೬ ನಿವಾಸಿ ಕೃಷ್ಣೋಜಿರಾವ್ ಅವರನ್ನು ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಕಾರ್ಯದರ್ಶಿಯಾಗಿ ನೇಮಕಗೊಳಿಸಲಾಗಿದೆ.
   ಕೃಷ್ಣೋಜಿರಾವ್ ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ವರ್ಷಗಳಿಂದ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್ ಸೂಚನೆ ಮೇರೆಗೆ ಸಮಿತಿ ಅಧ್ಯಕ್ಷ ಟಿ. ಚಂದ್ರೇಗೌಡ ನೇಮಕಗೊಳಿಸಿ ಆದೇಶಿಸಿದ್ದಾರೆ. ಪಕ್ಷದ ತತ್ವ ಸಿದ್ದಾಂತಗಳಿಗೆ ಬದ್ದರಾಗಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ನೇಮಕಾತಿ ಆದೇಶದಲ್ಲಿ ಸೂಚಿಸಿದ್ದಾರೆ.
    ಕಾರ್ಯದರ್ಶಿಯಾಗಿ ನೇಮಕಗೊಳ್ಳಲು ಕಾರಣಕರ್ತರಾದ ಶಾಸಕ ಬಿ.ಕೆ ಸಂಗಮೇಶ್ವರ್, ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಎಸ್.ಸಿ ಘಟಕದ ಜಿಲ್ಲಾ ಉಪಾಧ್ಯಕ್ಷರಾದ ಎಸ್.ಎನ್ ಶಿವಪ್ಪ, ಕೆಪಿಸಿಸಿ ಸದಸ್ಯ ಮಹಮದ್ ಸನಾವುಲ್ಲಾ ಹಾಗು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ನ್ಯಾಯಬೆಲೆ ಅಂಗಡಿ ಪಡಿತರ ವಿತರಣೆ ತೂಕದಲ್ಲಿ ಅಕ್ರಮ : ೪೦ ಕೆ.ಜಿ ಅಕ್ಕಿ ವಿತರಣೆಯಲ್ಲಿ ೩ ಕೆ.ಜಿ ವಂಚನೆ

ಜಿಂಕ್‌ಲೈನ್ ಕಾಮಧೇನು ನ್ಯಾಯಬೆಲೆ ಅಂಗಡಿ ಪ್ರಾಧಿಕಾರ ಅಮಾನತ್ತು


ಭದ್ರಾವತಿ, ಜು. ೧೪: ನಗರಸಭೆ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಯೊಂದರಲ್ಲಿ ಪಡಿತರ ಆಹಾರ ವಿತರಣೆ ತೂಕದಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿರುವ ಹಿನ್ನಲೆಯಲ್ಲಿ ಈ ನ್ಯಾಯಬೆಲೆ ಅಂಗಡಿಯ ಪ್ರಾಧಿಕಾರವನ್ನು ಅಮಾನತ್ತುಗೊಳಿಸಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಿಲ್ಲಾ ಜಂಟಿ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
      ನಗರಸಭೆ ೩೧ನೇ ವಾರ್ಡ್ ವ್ಯಾಪ್ತಿಯ ಜಿಂಕ್‌ಲೈನ್‌ನಲ್ಲಿರುವ ವೈ.ವಿ ಮೋಹನ್‌ಕುಮಾರ್ ಎಂಬುವರ ಕಾಮಧೇನು ನ್ಯಾಯಬೆಲೆ ಅಂಗಡಿಯಲ್ಲಿ ತೂಕದಲ್ಲಿ ಅಕ್ರಮ ನಡೆಯುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಕೆಯಾದ ಹಿನ್ನಲೆಯಲ್ಲಿ ಕಾನೂನು ಮಾಪನ ಶಾಸ್ತ್ರ ನಿರೀಕ್ಷಕರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.
    ವಿಶೇಷ ತಂಡ ಜು.೧೨ರಂದು ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ವೇಳೆ ಪಡಿತರ ಚೀಟಿಯೊಂದರ ಕುಟುಂಬಕ್ಕೆ ೪೦ ಕೆ.ಜಿ ಅಕ್ಕಿ ವಿತರಣೆಯಾಗಿದ್ದು, ಇದನ್ನು ಪರಿಶೀಲನೆ ನಡೆಸಿದಾಗ ೩ ಕೆ.ಜಿ ಕಡಿಮೆ ಇರುವುದು ಕಂಡು ಬಂದಿದೆ. ಈ ಹಿನ್ನಲೆಯಲ್ಲಿ ವಿಶೇಷ ತಂಡದ ವರದಿಯನ್ನು ಆಧರಿಸಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಬಿ.ಟಿ ಮಂಜುನಾಥನ್ ಅವರು ಅಂಗಡಿಯ ಪ್ರಾಧಿಕಾರವನ್ನು ಅಮಾನತ್ತುಗೊಳಿಸಿದ್ದಾರೆ.

Tuesday, July 13, 2021

ಭದ್ರಾವತಿಯಲ್ಲಿ ೬ ಕೊರೋನಾ ಸೋಂಕು, ೨ ಬಲಿ

ಭದ್ರಾವತಿ, ಜು. ೧೩: ತಾಲೂಕಿನಲ್ಲಿ ಮಂಗಳವಾರ ೬ ಕೊರೋನಾ ಸೋಂಕು ಪ್ರಕರಣಗಳು ದಾಖಲಾಗಿದ್ದು, ಇಬ್ಬರು ಸೋಂಕಿಗೆ ಬಲಿಯಾಗಿದ್ದಾರೆ.
     ಒಟ್ಟು ೪೮೧ ಮಂದಿಯ ಮಾದರಿ ಸಂಗ್ರಹಿಸಲಾಗಿದ್ದು, ೪ ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಗ್ರಾಮಾಂತರ ಭಾಗದಲ್ಲಿ ಒಬ್ಬರು ಹಾಗು ನಗರ ಭಾಗದಲ್ಲಿ ಒಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ. ಇದುವರೆಗೂ ಒಟ್ಟು ೭೪೪೫ ಸೋಂಕು ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ೭೩೮೩ ಮಂದಿ ಗುಣಮುಖರಾಗಿದ್ದಾರೆ. ಉಳಿದಂತೆ ೬೨ ಸಕ್ರಿಯ ಪ್ರಕರಣ ಬಾಕಿ ಇದ್ದು, ಇದುವರೆಗೂ ಸೋಂಕಿನಿಂದ ಒಟ್ಟು ೧೪೯ ಮಂದಿ ಮೃತಪಟ್ಟಿದ್ದಾರೆ.
    ನಗರ ಭಾಗದಲ್ಲಿ ಒಟ್ಟು ೪ ಕಂಟೈನ್‌ಮೆಂಟ್ ಜೋನ್‌ಗಳು ಸಕ್ರಿಯವಾಗಿದ್ದು, ಇದುವರೆಗೂ ೧೬೬ ಜೋನ್‌ಗಳನ್ನು ತೆರವುಗೊಳಿಸಲಾಗಿದೆ. ಗ್ರಾಮಾಂತರ ಭಾಗದಲ್ಲಿ ೫ ಜೋನ್‌ಗಳು ಸಕ್ರಿಯವಾಗಿದ್ದು, ೪೪ ಜೋನ್‌ಗಳನ್ನು ಇದುವರೆಗೂ ತೆರವುಗೊಳಿಸಲಾಗಿದೆ.