ಸುಮಾರು ೪ ದಶಕಗಳಿಂದ ಶಿಕ್ಷಣ ನೀಡುತ್ತಿರುವ ಪ್ರತಿಷ್ಠಿತ ಶಾಲೆ
ಭದ್ರಾವತಿ ಕಾಗದ ನಗರ ಆಂಗ್ಲ ಶಾಲೆ
* ಅನಂತಕುಮಾರ್
ಭದ್ರಾವತಿ: ತಾವು ವಿದ್ಯೆ ಕಲಿತ ಸ್ಥಳ ಭವಿಷ್ಯದ ವಿದ್ಯಾರ್ಥಿಗಳಿಗೆ ಮತ್ತಷ್ಟು ಸ್ಪೂರ್ತಿಯನ್ನು ನೀಡಲಿ. ವಿದ್ಯಾ ಸಂಸ್ಥೆ ಮತ್ತಷ್ಟು ಉನ್ನತ ಮಟ್ಟದಲ್ಲಿ ಸಾಗಲಿ ಎಂಬ ಧ್ಯೇಯದೊಂದಿಗೆ ಕಾಗದ ನಗರ ಆಂಗ್ಲ ಶಾಲೆಯ ಹಳೇಯ ವಿದ್ಯಾರ್ಥಿಗಳು ತಾವು ದುಡಿದ ಹಣದಲ್ಲಿ ಒಂದಿಷ್ಟನ್ನು ವಿದ್ಯಾಸಂಸ್ಥೆಗಾಗಿ ಮೀಸಲಿಡುವ ಜೊತೆಗೆ ಕಟ್ಟಡ ನವೀಕರಣ ಕೈಗೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಶಾಲೆಯಲ್ಲಿ ೧೯೯೨ ರಿಂದ ೨೦೧೪ರವರೆಗಿನ ಅವಧಿಯಲ್ಲಿ ವ್ಯಾಸಂಗ ನಡೆಸಿರುವ ವಿನೂತನ್, ಎಚ್.ಆರ್ ಮಮತ, ಪ್ರೀತಮ್, ಡಾ. ಮಹಾನಂದ, ಅರುಣ್‌ಕುಮಾರ್, ದಿಲೀಪ್ ಮತ್ತು ಶರತ್ ಅವರನ್ನೊಳಗೊಂಡ ತಂಡ ಕಳೆದ ಸುಮಾರು ೨ ತಿಂಗಳಿನಿಂದ ನಿರಂತರವಾಗಿ ಶ್ರಮವಹಿಸಿ ಶಾಲೆಯ ಕಟ್ಟಡ ನವೀಕರಣ ಕಾರ್ಯದಲ್ಲಿ ತೊಡಗಿಸಿಕೊಂಡು ಯಶಸ್ವಿಯಾಗಿದೆ.
ಕಟ್ಟಡ ಹಲವಾರು ವರ್ಷಗಳಿಂದ ಸುಣ್ಣಬಣ್ಣ ಕಾಣದೆ ಜೊತೆಗೆ ಕಟ್ಟಡದ ಸುತ್ತ ಗಿಡಗಂಟಿಗಳು ಆಳೆತ್ತರಕ್ಕೆ ಬೆಳೆದು ಪಾಚಿಯಿಂದ ಆವರಿಸಿಕೊಂಡಿತ್ತು. ಅದರಲ್ಲೂ ಕಳೆದ ಸುಮಾರು ೨ ವರ್ಷಗಳಿಂದ ಕೋವಿಡ್-೧೯ರ ಹಿನ್ನಲೆಯಲ್ಲಿ ಭೌತಿಕವಾಗಿ ಶೈಕ್ಷಣಿಕ ಚಟುವಟಿಕೆಗಳು ಸ್ಥಗಿತಗೊಂಡಿರುವ ಹಿನ್ನಲೆಯಲ್ಲಿ ಪಾಳುಬಿದ್ದ ಕಟ್ಟಡದಂತೆ ಕಂಡು ಬರುತ್ತಿತ್ತು. ಹಳೇ ವಿದ್ಯಾರ್ಥಿಗಳ ಪ್ರಯತ್ನದಿಂದಾಗಿ ಇದೀಗ ಶಾಲೆಯ ಕಟ್ಟಡ ಹಾಗು ಸುತ್ತಲಿನ ಕಾಂಪೌಂಡ್ ಹೊಸದಾಗಿ ಸುಣ್ಣ ಬಣ್ಣದಿಂದ ಆಕರ್ಷಕವಾಗಿ ಕಂಗೊಳಿಸುತ್ತಿದೆ.
ಶಿಕ್ಷಣ ಕಲಿತ ಶಾಲೆಗೆ ಏನಾದರೂ ಕೊಡುಗೆ ನೀಡಬೇಕು ಎನ್ನುವ ಮನೋಭಾವನೆಗಳು ಹಳೇಯ ವಿದ್ಯಾರ್ಥಿಗಳಲ್ಲಿ ಮೂಡಿಬರಲು ಶಾಲಾ ಕಾಲೇಜುಗಳು ನೀಡಿದ ಶಿಕ್ಷಣವೇ ಕಾರಣವಾಗಿದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಈ ಶಾಲೆ ಇನ್ನೂ ಹೆಚ್ಚಿನ ಗುಣಮಟ್ಟದ ಶಿಕ್ಷಣ ನೀಡುವಂತಾಗಲಿ.
-ರವಿಕುಮಾರ್, ಎಂಪಿಎಂ ಶಿಕ್ಷಣ ಸಂಸ್ಥೆ, ಭದ್ರಾವತಿ
ಇದರ ಜೊತೆಗೆ ಆಧುನಿಕ ಶಿಕ್ಷಣ ಪದ್ದತಿಗೆ ಅನುಗುಣವಾಗಿ ತರಗತಿ ನಡೆಸಲು ಅತ್ಯಾಧುನಿಕ ಉಪಕರಣಗಳೊಂದಿಗೆ ಡಿಜಿಟಲ್ ಕೊಠಡಿ ಸೌಲಭ್ಯ ಸಹ ಕಲ್ಪಿಸಿಕೊಡಲಾಗಿದೆ. ಇದರೊಂದಿಗೆ ತಮದೇ ಆದ ರೀತಿಯಲ್ಲಿ ಸಾರ್ಥಕ ಸೇವೆಯನ್ನು ಸಮರ್ಪಿಸಿಕೊಂಡಿದ್ದಾರೆ.
ಎಂಪಿಎಂ ಕಾರ್ಮಿಕರ ಕುಟುಂಬಗಳಿಗಾಗಿ ಆರಂಭಗೊಂಡ ಶಾಲೆ:
ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿಕರ ಕುಟುಂಬಗಳ ಮಕ್ಕಳಿಗಾಗಿ ಈ ಶಾಲೆಯನ್ನು ೧೯೮೧ರಲ್ಲಿ ಆರಂಭಿಸಲಾಯಿತು. ನಂತರದ ದಿನಗಳಲ್ಲಿ ಕಾಗದ ನಗರದ ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗಳು ಸಹ ತಮ್ಮ ಮಕ್ಕಳನ್ನು ಈ ಶಾಲೆಗೆ ದಾಖಲಿಸಲಾರಂಭಿಸಿದರು. ಖಾಸಗಿ ಶಿಕ್ಷಣ ಸಂಸ್ಥೆಗಳ ಪೈಪೋಟಿ ನಡುವೆಯೂ ಕಳೆದ ೪ ದಶಕಗಳಿಂದ ನಿರಂತರವಾಗಿ ಮುನ್ನೆಡೆದುಕೊಂಡು ಬರುತ್ತಿದೆ.
ಕಳೆದ ಸುಮಾರು ೬ ವರ್ಷಗಳಿಂದ ಕಾರ್ಖಾನೆ ಯಂತ್ರಗಳು ಸ್ಥಗಿತಗೊಂಡಿದ್ದು, ಕಾರ್ಮಿಕರ ಸಂಖ್ಯೆ ಶೂನ್ಯಕ್ಕೆ ಇಳಿಸಲಾಗಿದೆ. ಇದರಿಂದಾಗಿ ಕಾರ್ಮಿಕ ಕುಟುಂಬಗಳು ಬೇರೆಡೆಗೆ ಸ್ಥಳಾಂತರಗೊಂಡಿವೆ. ಈ ನಡುವೆ ಕಾರ್ಖಾನೆ ಆಡಳಿತ ಕಾರ್ಖಾನೆ ಅಧೀನಕ್ಕೆ ಒಳಪಟ್ಟಿರುವ ಶಾಲೆಗಳನ್ನು ಎಂಪಿಎಂ ಶಿಕ್ಷಣ ಸಂಸ್ಥೆ ಅಧೀನಕ್ಕೆ ಒಳಪಡಿಸಿದೆ. ಪ್ರಸ್ತುತ ಶಿಕ್ಷಣ ಸಂಸ್ಥೆ ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿದೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಹಳೇ ವಿದ್ಯಾರ್ಥಿಗಳು ಶಾಲೆಯ ನವೀಕರಣ ಕಾರ್ಯ ಕೈಗೊಂಡಿರುವುದು ನಿಜಕ್ಕೂ ಶ್ಲಾಘನೀಯ ಎಂದರೆ ತಪ್ಪಾಗಲಾರದು.
ಗುಣಮಟ್ಟದ ಶಿಕ್ಷಣ :
ಈ ಶಾಲೆ ಕಳೆದ ೪ ವರ್ಷಗಳಿಂದ ಮುನ್ನಡೆದುಕೊಂಡು ಬರಲು ಪ್ರಮುಖ ಕಾರಣ ಗುಣಮಟ್ಟದ ಶಿಕ್ಷಣ. ಈ ಶಾಲೆಯಲ್ಲಿ ವ್ಯಾಸಂಗ ನಡೆಸಿರುವ ಬಹುತೇಕ ಹಳೇಯ ವಿದ್ಯಾರ್ಥಿಗಳು ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದು, ಅಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಜೊತೆಗೆ ಗುರುತಿಸಿಕೊಂಡಿದ್ದಾರೆ. ಪ್ರತಿ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದುಕೊಳ್ಳುತ್ತಿದೆ. ಜೊತೆ ಕ್ರೀಡೆ ಹಾಗು ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಮುಂಚೂಣಿಯಲ್ಲಿದ್ದು, ಈ ಹಿನ್ನಲೆಯಲ್ಲಿ ನಗರದ ಪ್ರತಿಷ್ಠಿತ ಶಾಲೆಗಳ ಪೈಕಿ ಇದು ಸಹ ಒಂದಾಗಿ ಗುರುತಿಸಿಕೊಂಡಿದೆ.
ಹಳೇಯ ವಿದ್ಯಾರ್ಥಿಗಳು ಶಾಲೆಗೆ ನೀಡಿರುವ ಕೊಡುಗೆ ಅಪಾರ. ಇಂದಿನ ಬಹುತೇಕ ವಿದ್ಯಾರ್ಥಿಗಳು ಶಿಕ್ಷಣ ನೀಡಿದ ಶಿಕ್ಷಕರು ಕಂಡರೂ ಕಾಣದ ರೀತಿಯಲ್ಲಿ ವರ್ತಿಸುತ್ತಾರೆ. ಈ ನಡುವೆ ಹಳೇಯ ವಿದ್ಯಾರ್ಥಿಗಳಲ್ಲಿರುವ ಆಸಕ್ತಿ, ಉತ್ಸುಕತೆ, ಶ್ರದ್ದೆ ನಿಜಕ್ಕೂ ಶಿಕ್ಷಣ ನೀಡಿದ ಗುರುಗಳು ಸಹ ಹೆಮ್ಮೆ ಪಡುವ ವಿಚಾರವಾಗಿದೆ.
- ಸತೀಶ್, ಪ್ರಾಂಶುಪಾಲರು, ಕಾಗದ ನಗರ ಆಂಗ್ಲ ಶಾಲೆ, ಭದ್ರಾವತಿ.
ಸಂಭ್ರಮಿಸಿದ ಹಳೇಯ ವಿದ್ಯಾರ್ಥಿಗಳು:
ನವೀಕರಣ ಕಾರ್ಯ ಯಶಸ್ವಿಗೊಂಡ ಹಿನ್ನಲೆಯಲ್ಲಿ ಹಳೇಯ ವಿದ್ಯಾರ್ಥಿಗಳು ಒಂದೆಡೆ ಸೇರಿ ಸಮಾರಂಭ ಏರ್ಪಡಿಸುವ ಜೊತೆಗೆ ಸಂಭ್ರಮಿಸಿದರು. ತಮ್ಮ ಅನಿಸಿಕೆಗಳನ್ನು ಶಾಲೆಯ ಶಿಕ್ಷಕರು, ಸಿಬ್ಬಂದಿಗಳು ಹಾಗು ಆಡಳಿತ ಸಂಸ್ಥೆಯೊಂದಿಗೆ ಹಂಚಿಕೊಂಡರು.
ಶಿಕ್ಷಣ ಸಂಸ್ಥೆ ಖಜಾಂಚಿ ರವಿಕುಮಾರ್, ಶಾಲೆಯ ಪ್ರಾಂಶುಪಾಲ ಸತೀಶ್, ಉಪಪ್ರಾಂಶುಪಾಲ ನಾಗರಾಜ್, ದೈಹಿಕ ಶಿಕ್ಷಕ ಸಿದ್ದಪ್ಪ ಸೇರಿದಂತೆ ಶಿಕ್ಷಕ ವರ್ಗದವರು, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಭದ್ರಾವತಿ ಕಾಗದ ನಗರದ ಆಂಗ್ಲ ಶಾಲೆಯಲ್ಲಿ ಡಿಜಿಟಲ್ ಕೊಠಡಿ ವ್ಯವಸ್ಥೆ ಕಲ್ಪಿಸಿಕೊಡುವ ಜೊತೆಗೆ ಕಟ್ಟಡ ನವೀಕರಣ ಕಾರ್ಯ ಯಶಸ್ವಿಗೊಳಿಸಿದ ಹಿನ್ನಲೆಯಲ್ಲಿ ಹಳೇ ವಿದ್ಯಾರ್ಥಿಗಳು ಏರ್ಪಡಿಸಿದ್ದ ಸಮಾರಂಭವನ್ನು ಎಂಪಿಎಂ ಶಿಕ್ಷಣ ಸಂಸ್ಥೆ ಖಜಾಂಚಿ ರವಿಕುಮಾರ್ ಉದ್ಘಾಟಿಸಿದರು.