ಬಿ.ಜಿ ಲೋಯಿತಾ ನಂಜಪ್ಪ-ಕಾಂಗ್ರೆಸ್ ಅಭ್ಯರ್ಥಿ
ಭದ್ರಾವತಿ, ಆ. ೨೬: ನಗರಸಭೆ ವಾರ್ಡ್ ನಂ.೨೯ರ ಚುನಾವಣೆ ರಂಗೇರಿದ್ದು, ಅಂತಿಮ ಕಣದಲ್ಲಿ ೩ ಅಭ್ಯರ್ಥಿಗಳು ಉಳಿದುಕೊಂಡಿದ್ದಾರೆ.
ಚುನಾವಣೆ ಸ್ಪರ್ಧಿಸಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಅಧಿಕೃತ ಅಭ್ಯರ್ಥಿಗಳು ಮಾತ್ರ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಗುರುವಾರ ಯಾರು ಸಹ ನಾಮಪತ್ರ ಹಿಂಪಡೆಯದ ಕಾರಣ ಅಂತಿಮ ಕಣದಲ್ಲಿ ೩ ಮಂದಿ ಉಳಿದುಕೊಂಡಿದ್ದಾರೆ.
ಆರ್. ನಾಗರತ್ನ ಅನಿಲ್‌ಕುಮಾರ್-ಜೆಡಿಎಸ್ ಅಭ್ಯರ್ಥಿ
ಕಾಂಗ್ರೆಸ್ ಪಕ್ಷದಿಂದ ನ್ಯಾಯವಾದಿ ಬಿ.ಜಿ ಲೋಯಿತಾ ನಂಜಪ್ಪ, ಜೆಡಿಎಸ್ ಪಕ್ಷದಿಂದ ಹಾಲಿ ಸದಸ್ಯ ಅನಿಲ್‌ಕುಮಾರ್ ಅವರ ಪತ್ನಿ ಆರ್. ನಾಗರತ್ನ ಹಾಗು ಬಿಜೆಪಿ ಪಕ್ಷದಿಂದ ಹಲವು ಸಮಾಜಮುಖಿ ಹೋರಾಟಗಳಲ್ಲಿ ಗುರುತಿಸಿಕೊಂಡಿರುವ ರಮಾವೆಂಕಟೇಶ್ ಸ್ಪರ್ಧಿಸಿದ್ದಾರೆ.
ವಾರ್ಡ್ ನಂ.೨೯ರ ಪರಿಚಯ:
ಹೆಚ್ಚಿನ ಪ್ರಮಾಣದಲ್ಲಿ ಶ್ರೀಮಂತ ವರ್ಗದವರು ವಾಸಿಸುತ್ತಿರುವ ಈ ವಾರ್ಡ್ ಜನ್ನಾಪುರ ಭಾಗದಲ್ಲಿದ್ದು, ಕಿತ್ತೂರು ರಾಣಿ ಚನ್ನಮ್ಮ ಬಡಾವಣೆ(ಕೆ.ಸಿ ಬ್ಲಾಕ್), ರಾಜಪ್ಪ ಬಡಾವಣೆ ಹಾಗು ಸಿದ್ದಾಪುರ ಎನ್‌ಟಿಬಿ ಬಡಾವಣೆಯನ್ನು ಈ ವಾರ್ಡ್ ಒಳಗೊಂಡಿದೆ. ಮೂಲ ನಿವಾಸಿಗಳು ಕಡಿಮೆ ಸಂಖ್ಯೆಯಲ್ಲಿದ್ದು, ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ೧೬೮೬ ಪುರುಷ ಹಾಗು ೧೬೮೮ ಮಹಿಳಾ ಮತದಾರರು ಸೇರಿ ಒಟ್ಟು ೩೩೭೪ ಮತದಾರನ್ನು ಒಳಗೊಂಡಿದೆ.
ರಮಾ ವೆಂಕಟೇಶ್-ಬಿಜೆಪಿ ಅಭ್ಯರ್ಥಿ
ಸೆ.೩ರಂದು ಮತದಾನ ನಡೆಯಲಿದ್ದು, ಸೆ.೬ರಂದು ಎಣಿಕೆ ನಡೆದು ಫಲಿತಾಂಶ ಪ್ರಕಟಗೊಳ್ಳಲಿದೆ. ಈಗಾಗಲೇ ಒಟ್ಟು ೩೫ ವಾರ್ಡ್‌ಗಳ ಪೈಕಿ ೧ ಪಕ್ಷೇತರ, ೧೮ ಕಾಂಗ್ರೆಸ್, ೧೧ ಜೆಡಿಎಸ್ ಮತ್ತು ೪ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.