Thursday, August 26, 2021

ಎನ್‌ಎಂಪಿ ಯೋಜನೆಯಡಿ ದೇಶದ ಆಸ್ತಿ ಮಾರಾಟ : ಕೇಂದ್ರ ಸರ್ಕಾರದ ವಿರುದ್ಧ ರೈಲ್ವೆ ತಡೆ ಚಳುವಳಿ

ತಕ್ಷಣ ಕೇಂದ್ರ ಸರ್ಕಾರ ವಜಾ ಮಾಡಿ, ನಗರ, ಗ್ರಾಮಾಂತರ ಯುವ ಕಾಂಗ್ರೆಸ್ ಆಗ್ರಹ


ರಾಷ್ಟ್ರೀಯ ಹಣಗಳಿಕೆ ನೀತಿ(ಎನ್‌ಎಂಪಿ) ಯೋಜನೆಯಡಿ ದೇಶದ ೬ ಲಕ್ಷ ಕೋಟಿ ಸಾರ್ವಜನಿಕ ಆಸ್ತಿಯನ್ನು ಖಾಸಗಿ ಒಡೆತನಕ್ಕೆ ಮಾರಾಟ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸಿ ಗುರುವಾರ ನಗರದ ರೈಲ್ವೆ ನಿಲ್ದಾಣ ಮುಂಭಾಗ  ತಾಲೂಕು ನಗರ ಮತ್ತು ಗ್ರಾಮಾಂತರ ಯುವ ಕಾಂಗ್ರೆಸ್ ವತಿಯಿಂದ  ರೈಲ್ವೆ ತಡೆ ಚಳುವಳಿ ನಡೆಸಲಾಯಿತು.  
    ಭದ್ರಾವತಿ, ಆ. ೨೬: ರಾಷ್ಟ್ರೀಯ ಹಣಗಳಿಕೆ ನೀತಿ(ಎನ್‌ಎಂಪಿ) ಯೋಜನೆಯಡಿ ದೇಶದ ೬ ಲಕ್ಷ ಕೋಟಿ ಸಾರ್ವಜನಿಕ ಆಸ್ತಿಯನ್ನು ಖಾಸಗಿ ಒಡೆತನಕ್ಕೆ ಮಾರಾಟ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸಿ ಗುರುವಾರ ನಗರದ ರೈಲ್ವೆ ನಿಲ್ದಾಣ ಮುಂಭಾಗ  ತಾಲೂಕು ನಗರ ಮತ್ತು ಗ್ರಾಮಾಂತರ ಯುವ ಕಾಂಗ್ರೆಸ್ ವತಿಯಿಂದ  ರೈಲ್ವೆ ತಡೆ ಚಳುವಳಿ ನಡೆಸಲಾಯಿತು.  
    ದೇಶಕ್ಕೆ ಉಜ್ವಲ ಭವಿಷ್ಯ ಕಲ್ಪಿಸಿಕೊಡುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಕೇಂದ್ರದ ಬಿಜೆಪಿ ಸರ್ಕಾರ ದೇಶದ ಸಾರ್ವಜನಿಕ ವಲಯದ ಆಸ್ತಿಗಳನ್ನು ರಾಷ್ಟ್ರೀಯ ಹಣಗಳಿಕೆಯ ನೀತಿಯಡಿ ಖಾಸಗಿ ಕಂಪನಿಗಳಿಗೆ ಮಾರಾಟ ಮಾಡುವ  ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಲಾಯಿತು.
    ಈಗಾಗಲೇ ಎನ್‌ಎಂಪಿ ಯೋಜನೆಯಡಿಯಲ್ಲಿ ಸುಮಾರು ೨೬,೭೦೦ ರಾಷ್ಟ್ರೀಯ ಹೆದ್ದಾರಿಗಳನ್ನು, ೧೫೦ ರೈಲುಗಳನ್ನು, ೪೦೦ ರೈಲ್ವೆ  ನಿಲ್ದಾಣಗಳನ್ನು, ೨೫ ವಿಮಾನ ನಿಲ್ದಾಣಗಳನ್ನು, ೯ ಬಂದರುಗಳನ್ನು, ೨ ರಾಷ್ಟ್ರೀಯ ಕ್ರೀಡಾಂಗಣಗಳು, ವಿದ್ಯುತ್ ಘಟಕಗಳು, ಟೆಲಿಕಾಂ ನೆಟ್‌ವರ್ಕ್‌ಗಳನ್ನು ಹೀಗೆ ೧೩ ಸಾರ್ವಜನಿಕ ವಲಯಗಳನ್ನು ಖಾಸಗೀಕರಣ ಮಾಡುವ ಮೂಲಕ ದೇಶದ ಜನರನ್ನು ಖಾಸಗಿ ಕಂಪನಿಗಳ ಗುಲಾಮರನ್ನಾಗಿ ಮಾಡಲು ಹೊರಟಿರುವುದು ಕೇಂದ್ರದ ಬಿಜೆಪಿ ಸರ್ಕಾರದ ಸರ್ವಾಧಿಕಾರಿ, ಜನವಿರೋಧಿ ನೀತಿ ಎದ್ದು ಕಾಣುವಂತೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ರಾಷ್ಟ್ರಪತಿಗಳು ತಕ್ಷಣ ದೇಶದ ಸಾರ್ವಜನಿಕ ಆಸ್ತಿಗಳನ್ನು ಮಾಡುವಂತಹ ದೇಶವಿರೋಧಿ ಯೋಜನೆಗಳಿಗೆ ಕಡಿವಾಣ ಹಾಕಿ ಖಾಸಗಿ ಕಂಪನಿಗಳ ಪರವಾಗಿರುವ ಹಾಗು ಜನ ವಿರೋಧಿ ನೀತಿಗಳನ್ನು ಅನುಸರಿಸುತ್ತಿರುವ ಬಿಜೆಪಿ ಸರ್ಕಾರವನ್ನು ವಜಾ ಮಾಡಬೇಕೆಂದು ಆಗ್ರಹಿಸಿದರು.
    ಯುವ ಕಾಂಗ್ರೆಸ್ ನಗರ ಅಧ್ಯಕ್ಷ  ಜಿ.ವಿನೋದ್ ಕುಮಾರ್ ಮತ್ತು ಗ್ರಾಮಾಂತರ ಅಧ್ಯಕ್ಷ ಅಫ್ತಾಬ್ ಮಹಮದ್ ಪ್ರತಿಭಟನೆ ನೇತೃತ್ವ ವಹಿಸಿದ್ದರು. ನಗರ ಉಪಾಧ್ಯಕ್ಷ ತೇಜಸ್ ಗೌಡ, ಪ್ರಧಾನ ಕಾರ್ಯದರ್ಶಿ ಭರತ್ ಕುಮಾರ್, ಗಂಗಾಧರ್, ಐಸಾಕ್, ಶಂಕರ್, ವಾಸಿಂ, ಲಿಯಾಂದರ್, ಜಾವಿದ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

No comments:

Post a Comment