Sunday, September 26, 2021

ಸಾಮಾಜಿಕ ಹೋರಾಟಗಾರರನ್ನು ಗುರುತಿಸಿ ಗೌರವಿಸುವುದು ಎಲ್ಲರ ಕರ್ತವ್ಯ : ಟಿ. ಚಂದ್ರೇಗೌಡ

ಭದ್ರಾವತಿ ಪದ್ಮನಿಲಯ ಹೋಟೆಲ್ ಸುನಂದ ಸಭಾಂಗಣದಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ನಗರಸಭಾ ಮಾಜಿ ಸದಸ್ಯ ಹಾಗು ಜನಪರ ವೇದಿಕೆ ಅಧ್ಯಕ್ಷ ದಿವಂಗತ ರಾಮಕೃಷ್ಣೇಗೌಡರು(ಕ್ಯಾಂಟೀನ್ ಗೌಡರು) ಸವಿ ನೆನಪು ಕಾರ್ಯಕ್ರಮವನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
    ಭದ್ರಾವತಿ, ಸೆ. ೨೯: ಸಾಮಾಜಿಕ ಹೋರಾಟಗಾರರನ್ನು ಗುರುತಿಸಿ ಗೌರವಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದು ನ್ಯಾಯವಾದಿ ಟಿ. ಚಂದ್ರೇಗೌಡ ಹೇಳಿದರು.
    ಅವರು ಭಾನುವಾರ ನಗರದ ಪದ್ಮನಿಲಯ ಹೋಟೆಲ್ ಸುನಂದ ಸಭಾಂಗಣದಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನಗರಸಭಾ ಮಾಜಿ ಸದಸ್ಯ ಹಾಗು ಜನಪರ ವೇದಿಕೆ ಅಧ್ಯಕ್ಷ ದಿವಂಗತ ರಾಮಕೃಷ್ಣೇಗೌಡರು(ಕ್ಯಾಂಟೀನ್ ಗೌಡರು) ಸವಿ ನೆನಪು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಸಾಮಾಜಿಕ ಹೋರಾಟದ ಗುಣಗಳನ್ನು ರೂಢಿಸಿಕೊಂಡವರು ಯಾವುದೇ ಪಕ್ಷದಲ್ಲಿರಲಿ ಅವರನ್ನು ಗೌರವಿಸಬೇಕು. ರಾಮಕೃಷ್ಣೇಗೌಡರು ಒಬ್ಬ ಧೀಮಂತ ಹೋರಾಟಗಾರರಾಗಿದ್ದರು. ಜೊತೆಗೆ ಅವರಲ್ಲಿನ ಸಾಮಾಜಿಕ ಕಾಳಜಿ, ಬದ್ದತೆ ಅಪರೂಪವಾಗಿದೆ. ಅಸಹಾಯಕರು, ದೀನದಲಿತರು, ಶೋಷಿತರು, ಬಡವರ್ಗದವರಿಗಾಗಿ ಅವರು ಸಲ್ಲಿಸುತ್ತಿದ್ದ ಸೇವೆ ಶ್ಲಾಘನೀಯವಾಗಿದೆ. ಇಂತಹ ಅಪರೂಪದ ವ್ಯಕ್ತಿಯ ನೆನಪು ಮಾಡಿಕೊಳ್ಳುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.
    ಪ್ರಮುಖರಾದ ಶಾಸಕ ಬಿ.ಕೆ ಸಂಗಮೇಶ್ವರ್, ನಗರಸಭೆ ಮಾಜಿ ಅಧ್ಯಕ್ಷ ಅಧ್ಯಕ್ಷ ಆರ್. ಕರುಣಾಮೂರ್ತಿ, ಹಿರಿಯ ನಗರಸಭಾ ಸದಸ್ಯ ವಿ. ಕದಿರೇಶ್, ಬಿಸಿಯೂಟ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಹನುಮಮ್ಮ, ನಗರಸಭೆ ಮಾಜಿ ಉಪಾಧ್ಯಕ್ಷ ವೆಂಕಟೇಶ್, ನಗರಸಭೆ ಮಾಜಿ ಸದಸ್ಯ ಗೋವಿಂದಸ್ವಾಮಿ ಸೇರಿದಂತೆ ಇನ್ನಿತರರು ಮಾತನಾಡಿ, ರಾಮಕೃಷ್ಣೇಗೌಡರ ಹೋರಾಟಗಳು ಹಾಗು ಸಾಮಾಜಿಕ ಬದ್ದತೆಗಳನ್ನು ಪ್ರಶಂಸಿಸುವ ಜೊತೆಗೆ ಅವರ ಅವರ ದಾರಿಯಲ್ಲಿ ನಾವೆಲ್ಲರೂ ಸಾಗಬೇಕೆಂದರು.
    ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಸಿದ್ದಲಿಂಗಯ್ಯ, ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಎಂ.ಎಸ್ ಜನಾರ್ಧನ ಅಯ್ಯಂಗಾರ್, ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಎಸ್ ಗೌಡ, ನ್ಯಾಯವಾದಿ ಎಂ. ಶಿವಕುಮಾರ್, ಬಿ. ಗಂಗಾಧರ್, ಪ್ರಕಾಶ್‌ರಾವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ನಗರಸಭಾ ಸದಸ್ಯ ಆರ್. ಶ್ರೇಯಸ್(ಚಿಟ್ಟೆ) ಅಧ್ಯಕ್ಷತೆ ವಹಿಸಿದ್ದರು. ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಪ್ರಾಸ್ತಾವಿಕ ನುಡಿಗಳನ್ನಾಡಿದರು. ರಾಮಕೃಷ್ಣೇಗೌಡರ ಪತ್ನಿ ಜಯಮ್ಮ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.  ಸಮಿತಿಯ ಪ್ರಮುಖರಾದ ಎಂ.ವಿ ಚಂದ್ರಶೇಖರ್, ಬ್ರಹ್ಮಲಿಂಗಯ್ಯ, ಮುಳ್ಕೆರೆ ಲೋಕೇಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.  



ಸೇವೆ, ಸಮರ್ಪಣಾ ಅಭಿಯಾನ : ಉಚಿತ ಆರೋಗ್ಯ ತಪಾಸಣೆ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಸೇವೆ ಮತ್ತು ಸಮರ್ಪಣಾ ಅಭಿಯಾನ ಭಾಗವಾಗಿ ಭಾನುವಾರ ಬಿಜೆಪಿ ಪಕ್ಷದ ತಾಲೂಕು ಮಂಡಲ ವತಿಯಿಂದ ಭಾನುವಾರ ಭದ್ರಾವತಿ ಗಾಂಧಿನಗರದ ಶ್ರೀ ಬಲಮುರಿ ಗಣಪತಿ ದೇವಸ್ಥಾನದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
    ಭದ್ರಾವತಿ, ಸೆ. ೨೬: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಸೇವೆ ಮತ್ತು ಸಮರ್ಪಣಾ ಅಭಿಯಾನ ಭಾಗವಾಗಿ ಭಾನುವಾರ ಬಿಜೆಪಿ ಪಕ್ಷದ ತಾಲೂಕು ಮಂಡಲ ವತಿಯಿಂದ ಭಾನುವಾರ ಗಾಂಧಿನಗರದ ಶ್ರೀ ಬಲಮುರಿ ಗಣಪತಿ ದೇವಸ್ಥಾನದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
    ಶಿವಮೊಗ್ಗ ಮೆಟ್ರೋ ಆಸ್ಪತ್ರೆಯ ನುರಿತ ವೈದ್ಯರು ಮತ್ತು ಸ್ತ್ರೀ ರೋಗ ತಜ್ಞರಿಂದ ತಪಾಸಣೆ ನಡೆಯಿತು. ನೂರಾರು ಮಂದಿ ಶಿಬಿರದಲ್ಲಿ ಪಾಲ್ಗೊಂಡು ಸದುಪಯೋಗಪಡೆದುಕೊಂಡರು. ಶಿಬಿರ ಬೆಳಿಗ್ಗೆ ೯ ಗಂಟೆಯಿಂದ ಮಧ್ಯಾಹ್ನ ೧ ಗಂಟೆವರೆಗೆ ನಡೆಯಿತು.
    ಪಕ್ಷದ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ಪ್ರಮುಖರಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ ಶ್ರೀನಾಥ್, ಸೂಡಾ ಸದಸ್ಯ ವಿ. ಕದಿರೇಶ್, ಹಟ್ಟಿ ಚಿನ್ನದ ಕಂಪನಿ ಆಡಳಿತ ಮಂಡಳಿ ನಿರ್ದೇಶಕ ಕೂಡ್ಲಿಗೆರೆ ಹಾಲೇಶ್, ನಗರಸಭಾ ಸದಸ್ಯರಾದ ಶಶಿಕಲಾ, ಅನುಪಮಾ, ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಚನ್ನೇಶ್, ಹನುಮಂತನಾಯ್ಕ, ರೈತ ಮೋರ್ಚಾದ ಚಂದ್ರಪ್ಪ, ಎಸ್.ಸಿ ಮೋರ್ಚಾ ಅಧ್ಯಕ್ಷ ಪಿ. ಗಣೇಶ್‌ರಾವ್, ಬಿ.ಎಸ್. ನಾರಾಯಣಪ್ಪ, ರಾಮನಾಥ್ ಬರ್ಗೆ, ಮಹಿಳಾ ಪ್ರಮುಖರಾದ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಪಾಟೀಲ್, ಹೇಮಾವತಿ ವಿಶ್ವನಾಥ್, ಆರ್.ಎಸ್ ಶೋಭಾ, ನಾಗಮಣಿ, ಅನ್ನಪೂರ್ಣ ಸಾವಂತ್, ಕವಿತಾ ಸುರೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕಟ್ಟಡ ಕಾರ್ಮಿಕರು ಇನ್ನೂ ಹೆಚ್ಚು ಸಂಘಟನೆಯಾಗಲಿ : ಬಿ.ಕೆ ಸಂಗಮೇಶ್ವರ್



ಭದ್ರಾವತಿ ಕಂಚಿನಬಾಗಿಲು ವೃತ್ತದ ಸಮೀಪದ ಅಂಬೇಡ್ಕರ್ ನಗರದ ದುರ್ಗಾಂಬ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ನೂತನ ಶಾಖೆಯನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
    ಭದ್ರಾವತಿ, ಸೆ. ೨೬: ಕಟ್ಟಡ ಕಾರ್ಮಿಕರ ಸಂಘಟನೆ ಇನ್ನೂ ಹೆಚ್ಚಿನ ರೀತಿಯಲ್ಲಿ ಸಂಘಟನೆಯಾಗುವ ಅಗತ್ಯವಿದ್ದು, ಸಂಘಟನೆಗೆ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಶಾಸಕ ಬಿ.ಕೆ ಸಂಗಮೇಶ್ವರ್ ಭರವಸೆ ನೀಡಿದರು.
     ಅವರು ಭಾನುವಾರ ನಗರದ ಕಂಚಿನಬಾಗಿಲು ವೃತ್ತದ ಸಮೀಪದ ಅಂಬೇಡ್ಕರ್ ನಗರದ ದುರ್ಗಾಂಬ ದೇವಸ್ಥಾನ ಆವರಣದಲ್ಲಿ ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ನೂತನ ಶಾಖೆ ಉದ್ಘಾಟಿಸಿ ಮಾತನಾಡಿದರು.      ಕ್ಷೇತ್ರದಲ್ಲಿ ಯೂನಿಯನ್ ಹೆಚ್ಚು ಕ್ರಿಯಾಶೀಲವಾಗಿದ್ದು, ಪ್ರಸ್ತುತ ಯೂನಿಯನ್ ಮುನ್ನಡೆಸಿಕೊಂಡು ಹೋಗುತ್ತಿರುವವರು ಕಟ್ಟಡ ಕಾರ್ಮಿಕರ ಪರವಾಗಿ ಹೆಚ್ಚಿನ ಕಾಳಜಿಯನ್ನು ಹೊಂದಿದ್ದಾರೆ. ಸರ್ಕಾರದಿಂದ ಲಭ್ಯವಾಗುವ ಎಲ್ಲಾ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಕಟ್ಟಡ ಕಾರ್ಮಿಕರಿಗೆ ತಲುಪಿಸುವಲ್ಲಿ ಪ್ರಾಮಾಣಿಕ ಕೈಗೊಂಡಿದ್ದಾರೆಂದು ಪ್ರಶಂಸೆ ವ್ಯಕ್ತಪಡಿಸಿದರು. 
     ಯೂನಿಯನ್ ಇನ್ನೂ ಹೆಚ್ಚು ಸಂಘಟನೆಯಾಗಬೇಕು. ಇದರಿಂದ ನಮ್ಮ ಬೇಡಿಕೆಗಳನ್ನು ತ್ವರಿತಗತಿಯಲ್ಲಿ ಈಡೇರಿಸಿಕೊಳ್ಳಲು ಸಾಧ್ಯ. ಯೂನಿಯನ್ ಕಾರ್ಯನಿರ್ವಹಿಸಲು ಸ್ವಂತ ಕಟ್ಟಡ ಅವಶ್ಯಕತೆ ಇದ್ದು, ಅಲ್ಲದೆ ಕಟ್ಟಡ ಕಾರ್ಮಿಕರ ಹಲವಾರು ಬೇಡಿಕೆಗಳಿದ್ದು, ಮುಂದಿನ ದಿನಗಳಲ್ಲಿ ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. 
     ಪ್ರಾಸ್ತಾವಿಕವಾಗಿ ಮಾತನಾಡಿದ ಯೂನಿಯನ್ ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್ ಬಾಬು, ಯೂನಿಯನ್ ಯಾವುದೇ ಪಕ್ಷಕ್ಕೆ ಸೀಮಿತವಾಗಿಲ್ಲ. ಶಾಸಕ ಬಿ.ಕೆ ಸಂಗಮೇಶ್ವರ್ ಅವರು ಆರಂಭಿಕ ಹಂತದಿಂದ ಇಲ್ಲಿಯವರೆಗೂ ಯೂನಿಯನ್ ಬೆಳೆದುಬರಲು ಪ್ರಮುಖ ಕಾರಣಕರ್ತರಾಗಿದ್ದಾರೆ. ನೂತನ ಶಾಖೆ ಆರಂಭಿಸಿದರೆ ಸಾಲದು ಅದನ್ನು ಮುಂದಿನ ದಿನಗಳಲ್ಲಿ ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುವಂತಾಗಬೇಕು. ಈ ನಿಟ್ಟಿನಲ್ಲಿ ನೂತನ ಪದಾಧಿಕಾರಿಗಳು ಹೆಚ್ಚು ಗಮನ ಹರಿಸಬೇಕೆಂದರು. 
    ಯೂನಿಯನ್ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಅಧ್ಯಕ್ಷತೆವಹಿಸಿದ್ದರು. ನಗರಸಭಾ ಸದಸ್ಯರಾದ ಮಣಿ ಎಎನ್‌ಎಸ್, ಜಾರ್ಜ್, ಬಿ.ಎಂ ಮಂಜುನಾಥ್, ಆರ್. ಶ್ರೇಯಸ್(ಚಿಟ್ಟೆ), ಸುದೀಪ್‌ಕುಮಾರ್, ಯೂನಿಯನ್ ತಾಲೂಕು ತಾಂತ್ರಿಕ ಸಲಹೆಗಾರ ಮನೋಹರ್, ಗೌರವ ಸಲಹೆಗಾರ ಶಿವಣ್ಣಗೌಡ, ನೂತನ ಶಾಖೆಯ ಅಧ್ಯಕ್ಷ ಹನುಮಂತಪ್ಪ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಾಧ್ಯಕ್ಷ ಅಭಿಲಾಷ್ ಸ್ವಾಗತಿಸಿದರು. ನ್ಯಾಯವಾದಿ ಎಂ. ಶಿವಕುಮಾರ್ ನಿರೂಪಿಸಿದರು. ನೂತನ ಶಾಖೆಯ ಪದಾಧಿಕಾರಿಗಳು, ಅಂಬೇಡ್ಕರ್ ನಗರದ ಮುಖಂಡರು, ನಿವಾಸಿಗಳು ಪಾಲ್ಗೊಂಡಿದ್ದರು. 

Saturday, September 25, 2021

ರಾಜೀವ್‌ಗಾಂಧಿ ಮೆಮೆರಿಯಲ್ ಪ್ರೌಢಶಾಲೆಯಲ್ಲಿ ಪೋಷಣ್ ಅಭಿಯಾನ್

ಭದ್ರಾವತಿ, ಸೆ. ೨೫ : ನಗರಸಭೆ ವ್ಯಾಪ್ತಿಯ ಹಳೇಸೀಗೆಬಾಗಿ ರಾಜೀವ್‌ಗಾಂಧಿ ಮೆಮೊರಿಯಲ್ ಪ್ರೌಢಶಾಲೆಯಲ್ಲಿ ಶನಿವಾರ 'ಪೋಷಣ್  ಅಭಿಯಾನ್' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ 'ಪೋಷಣ್ ಅಭಿಯಾನ್' ಮಹತ್ವ ಕುರಿತು ವಿವರಿಸಲಾಯಿತು. ಪೋಷಕಾಂಶ, ಖನಿಜ ಲವಣಗಳು, ನಾರುಪದಾರ್ಥ ಸೇರಿದಂತೆ ಮನುಷ್ಯನ ಆರೋಗ್ಯಕ್ಕೆ ಪೂರಕವಾದ ಅಂಶಗಳನ್ನು ಹೊಂದಿರುವ ಬಗೆ ಬಗೆಯ ಸೊಪ್ಪು, ತರಕಾರಿ, ಹಣ್ಣುಗಳ ಪ್ರದರ್ಶನ ಏರ್ಪಡಿಸಲಾಗಿತ್ತು.
ಹೊಸಮನೆ ಭಾಗದ ಸಂಪನ್ಮೂಲ ವ್ಯಕ್ತಿ ಕೃಷ್ಣಮೂರ್ತಿ, ಬಿ.ಎಡ್ ಕಾಲೇಜಿನ ಪ್ರಾಂಶುಪಾಲ ಹನುಮಂತಪ್ಪ, ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕ ಗಂಗಾಧರಪ್ಪ, ಎಚ್.ಎನ್ ಪವಾರ್,  ಎಸ್. ಶ್ರೀನಿವಾಸಪ್ಪ, ಶಿವಕುಮಾರ್, ಡಾ. ಶಕೀಲ್ ಮಹಮದ್, ಚಂದ್ರಪ್ಪ, ಶಿವಕುಮಾರ್, ಪ್ರಾಥಮಿಕ ಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಪಿ.ಎಸ್ ನಾಗಲಕ್ಷ್ಮಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಎಸ್.ಎಸ್  ನಿರ್ಮಲ, ಗೀತಾಬಾಯಿ, ಅಂಗನವಾಡಿ ಹಾಗು  ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ರಸ್ತೆ ಬದಿ ವಿದ್ಯುತ್ ಕಂಬಗಳಿಗೆ ಕಾರು ಡಿಕ್ಕಿ

ಭದ್ರಾವತಿ, ಸೆ. ೨೫:  ತಾಲೂಕಿನ ಕೂಡ್ಲಿಗೆರೆ ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ಶ್ರೀ ಸುಬ್ರಮಣ್ಯಸ್ವಾಮಿ ದೇವಸ್ಥಾನದ ಬಳಿ ಭದ್ರಾವತಿ ಕಡೆಯಿಂದ ಚನ್ನಗಿರಿ ಮಾರ್ಗವಾಗಿ ಸಂಚರಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ಕಳೆದು ಕೊಂಡು ರಸ್ತೆ ಬದಿಯ ವಿದ್ಯುತ್ ಕಂಬಗಳಿಗೆ ಡಿಕ್ಕಿ ಹೊಡೆದಿರುವ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.  
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಎರಡು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಕಾರಿನ ಮುಂಭಾಗ ಜಖಂಗೊಂಡಿದೆ. ಕಾರಿನ ಚಾಲಕ ಸೀಟ್‌ಬೆಲ್ಟ್ ಧರಿಸಿದ್ದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ.
ಘಟನಾ ಸ್ಥಳದಲ್ಲಿ ಸ್ಥಳೀಯರು ಜಮಾಸಿದ್ದು, ಘಟನೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದಲಿತ ಮುಖಂಡ ಕೆ. ರಂಗನಾಥ್, ಲೋಕೋಪಯೋಗಿ ಇಲಾಖೆಗೆ ಸೇರಿದ ಸ್ಥಳದಲ್ಲಿ ಯಾವುದೇ ಅನುಮತಿ ಇಲ್ಲದೆ ವಿದ್ಯುತ್ ಕಂಬಗಳನ್ನು ಅಳವಡಿಸಿರುವುದು ಅಪಘಾತಕ್ಕೆ ಕಾರಣವಾಗಿದೆ. ತಕ್ಷಣ ಸಂಬಂಧಪಟ್ಟ ಇಲಾಖೆಯವರು ಎಚ್ಚೆತ್ತುಕೊಂಡು ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಿ ಸಾರ್ವಜನಿಕರು, ಶಾಲಾ ಮಕ್ಕಳು ಮತ್ತು ವಾಹನಗಳ ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಒತ್ತಾಯಿಸಿದ್ದಾರೆ.  


ಸೆ.೨೭ರಂದು ಭಾರತ್ ಬಂದ್‌ಗೆ ಬಂಬಲ : ಬೃಹತ್ ಪ್ರತಿಭಟನಾ ಮೆರವಣಿಗೆ

    ಭದ್ರಾವತಿ, ಸೆ. ೨೫: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ, ದಲಿತ, ಕಾರ್ಮಿಕ ಹಾಗು ಜನ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಸೆ.೨೭ರಂದು ಕರೆ ನೀಡಲಾಗಿರುವ ಭರತ್ ಬಂದ್‌ಗೆ ಸಂಯುಕ್ತ ಕಿಸಾನ್ ಮೋರ್ಚಾ ತಾಲೂಕು ಬೆಂಬಲ ವ್ಯಕ್ತಪಡಿಸಿದೆ.
    ರೈತ, ದಲಿತ, ಕಾರ್ಮಿಕ, ಮಹಿಳಾ, ಕನ್ನಡಪರ ಹಾಗು ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಅಂದು ಬೆಳಿಗೆ ೧೦.೩೦ಕ್ಕೆ ನಗರದ ಬಿ.ಎಚ್ ರಸ್ತೆ ಅಂಡ್‌ಬ್ರಿಡ್ಜ್ ಬಳಿ ಡಾ. ಬಿ.ಆರ್ ಅಂಬೇಡ್ಕರ್ ವೃತ್ತದಿಂದ ತಾಲೂಕು ಕಛೇರಿ ವರೆಗೂ ಹಮ್ಮಿಕೊಳ್ಳಲಾಗಿದೆ.
ಸಮಸ್ತ ನಾಗರೀಕರು ಪ್ರತಿಭಟನಾ ಮೆರವಣಿಗೆ ಬೆಂಬಲಿಸುವ ಮೂಲಕ ಯಶಸ್ವಿಗೊಳಿಸುವಂತೆ ರೈತ  ಮುಖಂಡರಾದ ಯಶವಂತರಾವ್ ಘೋರ್ಪಡೆ, ಎಚ್.ಪಿ ಹಿರಿಯಣ್ಣಯ್ಯ ಮತ್ತು ಡಿ.ವಿ ವೀರೇಶ್ ಕೋರಿದ್ದಾರೆ.
        ರೈತ ಹೋರಾಟಕ್ಕೆ ಎಎಪಿ ಬೆಂಬಲ:
    ಕೇಂದ್ರ ಸರ್ಕಾರದ ರೈತವಿರೋಧಿ ಮಸೂದೆಗಳನ್ನು ಖಂಡಿಸಿ ವಿವಿಧ ರೈತ ಸಂಘಟನೆಗಳು ಕರೆ ನೀಡಿರುವ ಸೆ. ೨೭ರ ಹೋರಾಟಕ್ಕೆ  ಆಮ್ ಆದ್ಮಿ ಪಾರ್ಟಿ ಬೆಂಬಲ ನೀಡಲಿದೆ ಎಂದು ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ತಿಳಿಸಿದ್ದಾರೆ.
    ಕೇಂದ್ರ ಸರ್ಕಾರ ಕೃಷಿಗೆ ಸಂಬಂಧಿಸಿದ ಮಸೂದೆಗಳಿಗೆ ತಿದ್ದುಪಡಿ ತಂದು ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿರುವುದನ್ನು ಖಂಡಿಸಿ ನಡೆಯುತ್ತಿರುವ ಹೋರಾಟಕ್ಕೆ ಎಎಪಿ ಸಂಪೂರ್ಣ ಬೆಂಬಲ ನೀಡಲಿದ್ದು, ಜಿಲ್ಲಾ ಹಾಗು ತಾಲೂಕು ಮಟ್ಟದಲ್ಲಿ ನಡೆಯುವ ಹೋರಾಟಕ್ಕೆ ಎಎಪಿ ಮುಖಂಡರು, ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹೋರಾಟ ಯಶಸ್ವಿಗೊಳಿಸುವಂತೆ ಮನವಿ ಮಾಡಿದ್ದಾರೆ.

ಡಾ. ಶ್ರೀ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ನಿಧನಕ್ಕೆ ಸಂತಾಪ

ಡಾ. ಶ್ರೀ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ    
ಭದ್ರಾವತಿ, ಸೆ. ೨೫: ಕುಪ್ಪೂರು ಗದ್ದಿಗೆ ಮಠದ ಡಾ. ಶ್ರೀ ಯತೀಶ್ವರ ಶಿವಾಚಾರ್ಯ ಸ್ವಾಮೀಜಿಯವರ ನಿಧನಕ್ಕೆ ತಾಲೂಕಿನ ಜೇಡಿಕಟ್ಟೆ ಶ್ರೀ ಮರುಳ ಸಿದ್ದೇಶ್ವರ ಜನಕಲ್ಯಾಣ ಟ್ರಸ್ಟ್ ಅಧ್ಯಕ್ಷ ಸಿದ್ದಲಿಂಗಯ್ಯ ಸಂತಾಪ ಸೂಚಿಸಿದ್ದಾರೆ.
    ಶ್ರೀಗಳು ರಾಜ್ಯಾದ್ಯಂತ ಹೆಚ್ಚಿನ ಭಕ್ತರನ್ನು ಹೊಂದಿದ್ದು, ಕುಪ್ಪೂರು ಗದ್ದಿಗೆ ಮಠದ ಅಭಿವೃದ್ಧಿಯಲ್ಲಿ ಹೆಚ್ಚಿನ ಗಮನ ಹರಿಸುವ ಜೊತೆಗೆ ಆಧ್ಯಾತ್ಮಿಕ ಕಾರ್ಯಗಳಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡಿದ್ದರು. ಶ್ರೀಗಳು ಲಿಂಗೈಕ್ಯರಾಗಿರುವುದು ಭಕ್ತ ಸಮೂಹಕ್ಕೆ ನೋವುಂಟು ಮಾಡಿದೆ ಎಂದು ಸಂತಾಪ ಸೂಚಿಸಿದ್ದಾರೆ.