Thursday, November 25, 2021

ವಿಜೃಂಭಣೆಯಿಂದ ಜರುಗಿದ ಶ್ರೀ ಚಿದಂಬರ ಜಯಂತಿ

ಭದ್ರಾವತಿ ಹಳೆನಗರದ ಶ್ರೀ ರಾಮೇಶ್ವರಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಗುರುವಾರ ೨೫ನೇ ವರ್ಷದ ಶ್ರೀ ಚಿದಂಬರ ಜಯಂತಿ ವಿಜೃಂಭಣೆಯಿಂದ ನೆರವೇರಿತು.
    ಭದ್ರಾವತಿ, ನ. ೨೫: ಹಳೆನಗರದ ಶ್ರೀ ರಾಮೇಶ್ವರಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಗುರುವಾರ ೨೫ನೇ ವರ್ಷದ ಶ್ರೀ ಚಿದಂಬರ ಜಯಂತಿ ವಿಜೃಂಭಣೆಯಿಂದ ನೆರವೇರಿತು.
    ಜಯಂತಿ ಅಂಗವಾಗಿ ಬೆಳಿಗ್ಗೆ ಕಾಕಡಾರತಿ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಸಹಸ್ರನಾಮ ಹಾಗೂ ಶ್ರೀ ಚಿದಂಬರ ಮೂಲಮಂತ್ರ ಹೋಮ, ರಾಜಬೀದಿ ಉತ್ಸವ ಮತ್ತು ಮಹಾಮಂಗಳಾರತಿ, ಪೂರ್ಣಾಹುತಿ, ಶ್ರೀ ಚಿದಂಬರ ತೊಟ್ಟಿಲು ಸೇವೆ ಹಾಗೂ ಹಾಗೂ ಲಲಿತ ಮಹಿಳಾ ಮಂಡಳಿಯಿಂದ ದೀಪೋತ್ಸವ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ  ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.
    ಚಿದಂಬರ ಸೇವಾ ಸಮಿತಿಯ ಅಧ್ಯಕ್ಷ ಶ್ರೀನಿವಾಸ ದೇಶಪಾಂಡೆ, ಪ್ರಧಾನ ಕಾರ್ಯದರ್ಶಿ ಇಂದ್ರಸೇನರಾವ್, ಉಪಾಧ್ಯಕ್ಷ ಮಂಜುನಾಥ್, ಖಜಾಂಚಿ ಜೆ.ಎಂ ಬಾಲಚಂದ್ರ ಗುತ್ತಲ್, ಆನಂದರಾವ್, ಪ್ರಭಾಕರರಾವ್, ರಾಮಚಂದ್ರ, ದತ್ತಾತ್ರಿ, ವಾಸುದೇವ್, ರಾಜಣ್ಣ ಸೇರಿದಂತೆ ಇನ್ನಿತರ ಭಕ್ತಾಧಿಗಳು ಪಾಲ್ಗೊಂಡಿದ್ದರು.

ಒಂದೇ ಕಡೆ ಕರ್ತವ್ಯ ನಿರ್ವಹಿಸುತ್ತಿರುವ ನೌಕರರ ಮೇಲೆ ನಿಗಾವಹಿಸಿ : ಎಸಿಬಿ ಮಹಾನಿರ್ದೇಶಕರಿಗೆ ಮನವಿ

 


ಭದ್ರಾವತಿ: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹಲವಾರು ವರ್ಷಗಳಿಂದ ಒಂದೇ ಕಡೆ  ಕರ್ತವ್ಯ ನಿರ್ವಹಿಸುತ್ತಿರುವ ನೌಕರರ ಮೇಲೆ ನಿಗಾ ವಹಿಸುವಂತೆ ಭ್ರಷ್ಟಾಚಾರ ನಿಗ್ರಹ ದಳದ ಅಪರ ಪೊಲೀಸ್ ಮಹಾನಿರ್ದೇಶಕರಿಗೆ ತಾಲೂಕಿನ ಉಕ್ಕುಂದ ಗ್ರಾಮದ ಸಾಮಾಜಿಕ ಹೋರಾಟಗಾರ ಶಿವಕುಮಾರ್ ಮನವಿ ಮಾಡಿದ್ದಾರೆ. 

ಸರ್ಕಾರದ ಬಹುತೇಕ ಇಲಾಖೆಗಳಲ್ಲಿ ಸುಮಾರು  10 ರಿಂದ 15 ವರ್ಷಗಳವರೆಗೆ ಒಂದೇ ಕಡೆ ಕೆಲವು ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದು,  ಇವರಿಗೆ ಇಲಾಖೆ ಹಾಗೂ ಕಚೇರಿಯ ಸಂಪೂರ್ಣ ಮಾಹಿತಿ ಇದ್ದು, ಅಕ್ರಮವಾಗಿ ಹಣ, ಆಸ್ತಿ  ಸಂಪಾದಿಸಬೇಕೆಂಬ ಉದ್ದೇಶದೊಂದಿಗೆ ತಮ್ಮದೇ ಆದ ಪ್ರಭಾವ ಬಳಸಿಕೊಂಡು ಒಂದೇ ಸ್ಥಳದಲ್ಲಿಯೇ ಉಳಿದುಕೊಂಡು ಬಲಿಷ್ಠರಾಗಿದ್ದಾರೆ.   ಹಣವನ್ನು ಯಾವ ರೀತಿ ಪಡೆಯಬೇಕು. ಯಾರ ಮುಖಾಂತರ ಪಡೆಯಬೇಕು. ಯಾವ ರೀತಿ ಹಣ, ಆಸ್ತಿ ಹೊಂದಬೇಕೆಂಬ  ತಂತ್ರಗಾರಿಕೆಗಳನ್ನು ಅರಿತು ಕೊಂಡಿದ್ದಾರೆ.   

ಅರಣ್ಯ ಇಲಾಖೆ, ಪಂಚಾಯತ್ ರಾಜ್ ಖಾತೆ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ಪ್ರಮುಖ ಇಲಾಖೆಗಳಲ್ಲಿ ಕೆಲವು ನೌಕರರು ತಮ್ಮ ನಿವೃತ್ತಿ ಅವಧಿಯನ್ನು ಸಂಪೂರ್ಣವಾಗಿ ಮುಗಿಸಿರುತ್ತಾರೆ. ಒಂದೇ ಕಡೆ ಕರ್ತವ್ಯ ನಿರ್ವಹಿಸಿರುವ ನೌಕರರ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಸುಮಾರು ೪-೫ ವರ್ಷ ಮೇಲ್ಪಟ್ಟು ಒಂದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರ ಮೇಲೆ ನಿಗಾವಹಿಸಿದ್ದಲ್ಲಿ ಭ್ರಷ್ಟಾಚಾರಗಳು ಕಡಿಮೆಯಾಗುವ ಜೊತೆಗೆ  ಸಾ‍ರ್ವಜನಿಕರಿಗೆ ಲಂಚ ನೀಡುವ ಅನಿವಾರ್ಯತೆ, ಒತ್ತಡಗಳು ಕಡಿಮೆಯಾಗಲಿವೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ತುರ್ತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.  

ಸಾಧು ವೀರಶೈವ ಸಮಾಜದ ಅಧ್ಯಕ್ಷ ಕೆ.ಸಿ ವೀರಭದ್ರಪ್ಪ ನಿಧನ


  ಕೆ.ಸಿ ವೀರಭದ್ರಪ್ಪ
 ಭದ್ರಾವತಿ, ನ. ೨೫: ತಾಲೂಕು ನಗರಸಭೆ ವ್ಯಾಪ್ತಿಯ ಭದ್ರಾ ಕಾಲೋನಿ ಕಣಕಟ್ಟೆ ನಿವಾಸಿ, ಸಾಧು ವೀರಶೈವ ಸಮಾಜದ ಅಧ್ಯಕ್ಷ ಕೆ.ಸಿ ವೀರಭದ್ರಪ್ಪ(೬೯) ಗುರುವಾರ ಮಧ್ಯಾಹ್ನ ನಿಧನ ಹೊಂದಿದರು.
    ಪತ್ನಿ, ಸಹೋದರ, ಸಹೋದರಿಯರನ್ನು ಹೊಂದಿದ್ದರು. ಸದಾಕಾಲ ಕ್ರಿಯಾಶೀಲರಾಗಿದ್ದ ಕೆ.ಸಿ ವೀರಭದ್ರಪ್ಪರವರು ಕಳೆದ ಕೆಲವು ದಿನಗಳ ಹಿಂದೆ ಹೃದಯಾಘಾತಕ್ಕೆ ಒಳಗಾಗಿ ಶಿವಮೊಗ್ಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಆದರೂ ಸಹ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
    ಮೂಲತಃ ಜಮೀನ್ದಾರ್ ಕುಟುಂಬದವರಾದ ವೀರಭದ್ರಪ್ಪ, ಪ್ರಸ್ತುತ ಸಾಧು ವೀರಶೈವ ಸಮಾಜದ ತಾಲೂಕು ಅಧ್ಯಕ್ಷರಾಗಿ, ಭದ್ರಾ ಕಾಲೋನಿ ಶ್ರೀ ರಾಮಾಂಜನೇಯ ಸ್ವಾಮಿ ದೇವಸ್ಥಾನ ಸಮಿತಿ ಅಧ್ಯಕ್ಷರಾಗಿ, ಹಾಲಪ್ಪವೃತ್ತ ಭದ್ರಾ ಪ್ರೌಢಶಾಲೆ ಆಡಳಿತ ಮಂಡಳಿ ನಿರ್ದೇಶಕರಾಗಿ ಹಾಗು ಜನ್ನಾಪುರ ಶ್ರೀ ಬಸವೇಶ್ವರ ವಿದ್ಯಾವರ್ಧಕ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಅಲ್ಲದೆ ೧೯೯೯ ರಿಂದ ೨೦೦೧ರವರೆಗೆ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ) ಅಧ್ಯಕ್ಷರಾಗಿ, ೧೯೮೬ ರಿಂದ ೧೯೯೬ರವರೆಗೆ ವೀರಾಪುರ ರೈತರ ಸಹಕಾರ ಸಂಘ ಬ್ಯಾಂಕ್ ಅಧ್ಯಕ್ಷರಾಗಿ ಮತ್ತು ೨೦೦೫ ರಿಂದ ೨೦೧೭ರವರೆಗೆ ಸೀಗೆಬಾಗಿ ರೈತರ ನೀರು ಬಳಕೆದಾರರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
    ೧೯೮೭ರಿಂದ ಲಯನ್ಸ್ ಕ್ಲಬ್‌ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ವೀರಭದ್ರಪ್ಪನವರು, ಖಜಾಂಚಿಯಾಗಿ, ಅಧ್ಯಕ್ಷರಾಗಿ, ವಲಯಾಧ್ಯಕ್ಷರಾಗಿ, ವಲಯ ಸಲಹೆಗಾರರಾಗಿ, ವಲಯ ರಾಯಬಾರಿಯಾಗಿ, ಡಿ.ಜಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ, ಸಮುದಾಯ ಸೇವೆ, ಜಿಲ್ಲಾ ಗೌರ್‍ನರ್ ಪ್ರತಿನಿಧಿಯಾಗಿ, ಜಿಎಲ್‌ಟಿ ಮತ್ತು ಜಿಎಂಟಿ ಸಂಯೋಜಕರಾಗಿ, ಜಿಲ್ಲಾ ರಾಯಬಾರಿಯಾಗಿ ಹಾಗು ಪ್ರಸ್ತುತ ಲಯನ್ಸ್ ಕ್ಲಬ್ ೩೧೭-ಸಿ ಮೊದಲನೇ ಜಿಲ್ಲಾ ಉಪಗೌರ್‍ನರ್ ಆಗಿ ಸೇವೆ ಸಲ್ಲಿಸುತ್ತಿದ್ದರು.
    ವೀರಶೈವ ಸಮಾಜದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಲಯನ್ಸ್ ಕ್ಲಬ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಗಣ್ಯರು ವೀರಭದ್ರಪ್ಪ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

Wednesday, November 24, 2021

ಆಜಾದಿ ಕ ಅಮೃತ್ ಮಹೋತ್ಸವ ಅಂಗವಾಗಿ ನೇತ್ರದಾನ ಪ್ರತಿಜ್ಞೆ

ನೇತ್ರದಾನ ನೋಂದಾಣಿ ಮಾಡಿಸಿ, ಜಾಗೃತಿ ಮೂಡಿಸಿದ ವಿಐಎಸ್‌ಎಲ್ ಸಮುದಾಯ


ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆಯ ಎಚ್‌ಆರ್‌ಡಿ ಕೇಂದ್ರದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ನೇತ್ರದಾನ ಪ್ರತಿಜ್ಞೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸುಮಾರು ೨೦೨ ಮಂದಿ ನೇತ್ರದಾನ ನೋಂದಾಣಿ ಮಾಡುವ ಮೂಲಕ ವಿಶೇಷವಾಗಿ ಗಮನ ಸೆಳೆದರು. ನೋಂದಾಣಿ ಅರ್ಜಿಗಳನ್ನು  ಕಾರ್ಖಾನೆಯ ಪ್ರಭಾರ ಕಾರ್ಯಪಾಲಕ ನಿರ್ದೇಶಕ ಸುರಜಿತ್ ಮಿಶ್ರಾ ಹಸ್ತಾಂತರಿಸಿದರು.
    ಭದ್ರಾವತಿ, ನ. ೨೪: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಕಾಯಂ ಕಾರ್ಮಿಕರು, ಗುತ್ತಿಗೆ ಹಾಗು ನಿವೃತ್ತ ಕಾರ್ಮಿಕರು ಮತ್ತು ಕುಟುಂಬ ವರ್ಗದವರು ಸಾಮಾಜಿಕ ಕಳಕಳಿಯೊಂದಿಗೆ ಸ್ವಯಂ ಪ್ರೇರಣೆಯಿಂದ ನೇತ್ರದಾನ ನೋಂದಾಣಿಗೆ ಮುಂದಾಗುವ ಮೂಲಕ ಗಮನ ಸೆಳೆದಿದ್ದಾರೆ.
    ಬುಧವಾರ ಕಾರ್ಖಾನೆಯ ಎಚ್‌ಆರ್‌ಡಿ ಕೇಂದ್ರದಲ್ಲಿ ಸಾರ್ವಜನಿಕ ಸಂಪರ್ಕ ಮತ್ತು ಮಾನವ ಸಂಪನ್ಮೂಲ ಇಲಾಖೆ,  ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆ ಮತ್ತು ನಗರದ ನಯನ ಆಸ್ಪತ್ರೆ ಸಹಯೋಗದೊಂದಿಗೆ ಆಜಾದಿ ಕ ಅಮೃತ್ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ನೇತ್ರದಾನ ಪ್ರತಿಜ್ಞೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸುಮಾರು ೨೦೨ ಮಂದಿ ನೇತ್ರದಾನ ನೋಂದಾಣಿ ಮಾಡುವ ಮೂಲಕ ವಿಶೇಷವಾಗಿ ನೇತ್ರದಾನದ ಬಗ್ಗೆ ಸಮಾಜದಲ್ಲಿ ಹೊಂದಿರುವ ತಪ್ಪು ಕಲ್ಪನೆಗಳಿಂದ ಹೊರಬರುವಂತೆ ಜಾಗೃತಿ ಮೂಡಿಸಿದರು.
    ಶಂಕರ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞ ಡಾ. ರಕ್ಷಿತ್ ಮಾತನಾಡಿ, ನೇತ್ರಗಳ ಸಂಗ್ರಹಣೆ, ದಾಸ್ತಾನು ಮತ್ತು ನೇತ್ರ ರಹಿತರಿಗೆ ಬಳಸುವಲ್ಲಿ ಶಂಕರ ಕಣ್ಣಿನ ಆಸ್ಪತ್ರೆಯ ಕಾರ್ಯದ ಬಗ್ಗೆ ಮಾಹಿತಿ ನೀಡಿದರು. ಅಲ್ಲದೆ ನೇತ್ರದಾನ ಮಾಡುವ ಪ್ರತಿಜ್ಞೆ ತೆಗೆದುಕೊಂಡ ಕಾರ್ಖಾನೆಯ ಸಮುದಾಯದ ಸಾಮಾಜಿಕ ಕಳಕಳಿಯನ್ನು ಶ್ಲಾಘಿಸಿದರು.  
ನಯನ ಆಸ್ಪತ್ರೆಯ ನೇತ್ರ ತಜ್ಞ ಡಾ. ಕುಮಾರಸ್ವಾಮಿ ನೇತ್ರದಾನದ ಬಗ್ಗೆ ಇರುವ ತಪ್ಪು ಅಭಿಪ್ರಾಯಗಳ ಕುರಿತು ಮಾತನಾಡಿದರು. ಜೊತೆಗೆ ಭದ್ರಾವತಿಯ ಸುತ್ತಮುತ್ತಲಿನ ದಾನಿಗಳಿಂದ ನೇತ್ರಗಳನ್ನು ಸಂಗ್ರಹಿಸಿ, ಅದನ್ನು ಶಂಕರ ಕಣ್ಣಿನ ಆಸ್ಪತ್ರೆಗೆ ತಲುಪಿಸುವಲ್ಲಿ ನಯನ ಆಸ್ಪತ್ರೆಯ ಪಾತ್ರದ ಬಗ್ಗೆ ಮಾಹಿತಿ ನೀಡಿದರು.  
    ನೇತ್ರದಾನ ನೋಂದಾಣಿ ಅರ್ಜಿಗಳನ್ನು ಶಂಕರ ಕಣ್ಣಿನ ಆಸ್ಪತ್ರೆಗೆ ಹಸ್ತಾಂತರಿಸಿ ಮಾತನಾಡಿದ ಕಾರ್ಖಾನೆಯ ಪ್ರಭಾರ ಕಾರ್ಯಪಾಲಕ ನಿರ್ದೇಶಕ ಸುರಜಿತ್ ಮಿಶ್ರಾ,  ಸಮುದಾಯದ ಉದಾತ್ತ ಕಾರ್ಯವಾದ ನೇತ್ರದಾನ ಮಾಡುವುದರ ಬಗ್ಗೆ ಕೈಗೊಂಡ ಪ್ರತಿಜ್ಞೆಗೆ ಪ್ರಶಂಸೆ ವ್ಯಕ್ತಪಡಿಸಿದರು. ಈ ರೀತಿಯ ಕಾರ್ಯಕ್ರಮಗಳಿಂದ ಮುಂದಿನ ದಿನಗಳಲ್ಲಿ ದೇಶದಲ್ಲಿ ಅಂಧತ್ವ ನಿರ್ಮೂಲನೆ ಮಾಡಬಹುದೆಂಬ ವಿಶ್ವಾಸವಿದೆ ಎಂದರು.  ವಿಐಎಸ್‌ಎಲ್ ವತಿಯಿಂದ ಮುಂದಿನ ದಿನಗಳಲ್ಲಿ ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಆರಂಭದಲ್ಲಿಯೇ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಲು ನೆರವಾಗುವಂತೆ ಉಚಿತ ನೇತ್ರ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
    ಸಿಬ್ಬಂದಿ ಮತ್ತು ಆಡಳಿತ ವಿಭಾಗದ ಪ್ರಭಾರ ಮಹಾಪ್ರಬಂಧಕ ಪಿ.ಪಿ. ಚಕ್ರವರ್ತಿ,  ವಿಐಎಸ್‌ಎಲ್ ಆಸ್ಪತ್ರೆಯ ವೈಧ್ಯಕೀಯ ಮುಖ್ಯಸ್ಥ ಡಾ. ಎಂ.ವೈ. ಸುರೇಶ್, ವಿಐಎಸ್‌ಎಲ್ ಕಾರ್ಮಿಕರ ಸಂಘದ ಅಧ್ಯಕ್ಷ ಜೆ. ಜಗದೀಶ್, ಅಧಿಕಾರಿಗಳ ಅಧ್ಯಕ್ಷ ಲೋಕನಾಥ್, ಕಾರ್ಖಾನೆಯ ಸಾರ್ವಜನಿಕ ಸಂಪರ್ಕ ಇಲಾಖೆ ಮಹಾಪ್ರಬಂಧಕ ಎಲ್. ಪ್ರವೀಣ್ ಕುಮಾರ್, ವಿವಿಧ ವಿಭಾಗಗಳ ಅಧಿಕಾರಿಗಳು, ಕಾರ್ಮಿಕ ಹಾಗು ಅಧಿಕಾರಿಗಳ ಸಂಘ ಮತ್ತು ಗುತ್ತಿಗೆ ಕಾರ್ಮಿಕರ ಸಂಘದ ಪದಾಧಿಕಾರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಎನ್.ಎಸ್ ರಮೇಶ್ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ

ಭದ್ರಾವತಿ, ನ. 24:  ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಬಳಕೆದಾರರ ಸಹಕಾರ ಸಂಘಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಪಶು ವೈದ್ಯಕೀಯ ಇಲಾಖೆಯ   ಎನ್.ಎಸ್ ರಮೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.    ಈಗಾಗಲೇ ಸಂಘದ ಅಧ್ಯಕ್ಷರಾಗಿ ಶಿಕ್ಷಣ ಇಲಾಖೆಯ ಸುಧೀಂದ್ರರೆಡ್ಡಿ ಆಯ್ಕೆಯಾಗಿದ್ದರು. ಉಪಾಧ್ಯಕ್ಷರ ಸ್ಥಾನ ತೆರವಾದ ಹಿನ್ನೆಲೆಯಲ್ಲಿ ಚುನಾವಣೆ ನಡೆಯಿತು. ಚುನಾವಣಾಧಿಕಾರಿಯಾಗಿ ಸೋನಾಲ್ ಜಾಧವ್ ಕರ್ತವ್ಯ ನಿರ್ವಹಿಸಿದರು. 
    ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಿದ್ದಬಸಪ್ಪ, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎಸ್ ಬಸವರಾಜ್, ಎ.ಜಿ ರಂಗನಾಥಪ್ರಸಾದ್, ರಾಜಪ್ಪ, ಎ. ತಿಪ್ಪೇಸ್ವಾಮಿ, ಮಂಜುನಾಥ್, ಪ್ರಕಾಶ್, ಹನುಮಂತಪ್ಪ ಮತ್ತು ಪುಟ್ಟಲಿಂಗಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ಮಧುಮೇಹಕ್ಕೆ ನಮ್ಮ ತಪ್ಪು ಜೀವನ ಶೈಲಿಯೇ ಕಾರಣ : ಡಾ. ವೀಣಾ ಎಸ್ ಭಟ್

ಭಾರತೀಯ ವೈದ್ಯಕೀಯ ಸಂಘ(ಐಎಂಎ) ತಾಲೂಕು ಶಾಖೆ, ಮಹಿಳಾ ಘಟಕ, ಶಿವಮೊಗ್ಗ ಮಲ್ನಾಡ್ ಆಫ್ತಾಲ್‌ಮಿಕ್ ಅಸೋಸಿಯೇಷನ್, ಸ್ತ್ರೀ ರೋಗ ತಜ್ಞರ ಸಂಘ, ಐತಾಳ್ ಚಾರಿಟೇಬಲ್ ಟ್ರಸ್ಟ್ ಮತ್ತು ಮಹಿಳಾ ಆರೋಗ್ಯ ವೇದಿಕೆ ವತಿಯಿಂದ ಭದ್ರಾವತಿ ತರೀಕೆರೆ ರಸ್ತೆಯ ನಯನ ಆಸ್ಪತ್ರೆ ಸಭಾಂಗಣದಲ್ಲಿ ವಿಶ್ವ ಮಧುಮೇಹ ದಿನಚರಣೆ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ನ. ೨೪: ಹೆಚ್ಚುತ್ತಿರುವ ಮಧುಮೇಹಕ್ಕೆ ನಮ್ಮ ತಪ್ಪು ಜೀವನ ಶೈಲಿಯೇ ಕಾರಣವಾಗಿದ್ದು, ಪ್ರಸ್ತುತ ಆಹಾರದಲ್ಲಿ ಹೆಚ್ಚುತ್ತಿರುವ ಅಧಿಕ ಶರ್ಕರ ಪಿಷ್ಠ(ಕಾರ್ಬೋಹೈಡ್ರೇಟ್) ಬಳಕೆಯನ್ನು ಕಡಿಮೆಮಾಡಿ ಬದಲಾಗಿ ಬೇಳೆಕಾಳುಗಳು, ತರಕಾರಿ, ಮೊಳಕೆಕಾಳು, ಹಸಿರು ಸೊಪ್ಪುಗಳನ್ನು ಸೇವಿಸುವುದು ಮತ್ತು ನಿಯಮಿತ ವ್ಯಾಯಾಮ ಹಾಗು ವೈದ್ಯರ ಸಲಹೆ ಮೇರೆಗೆ ಸೂಕ್ತಚಿಕಿತ್ಸೆ, ಇವೆಲ್ಲವುಗಳಿಂದ ಮಧುಮೇಹ ನಿಯಂತ್ರಣ ಸಾಧ್ಯ ಎಂದು ಮಹಿಳಾ ವೇದಿಕೆ ಅಧ್ಯಕೆ ಡಾ. ವೀಣಾ ಎಸ್ ಭಟ್ ಹೇಳಿದರು.
    ಅವರು ವಿಶ್ವ ಮಧುಮೇಹ ದಿನಚರಣೆಯ ಅಂಗವಾಗಿ ಭಾರತೀಯ ವೈದ್ಯಕೀಯ ಸಂಘ(ಐಎಂಎ) ತಾಲೂಕು ಶಾಖೆ, ಮಹಿಳಾ ಘಟಕ, ಶಿವಮೊಗ್ಗ ಮಲ್ನಾಡ್ ಆಫ್ತಾಲ್‌ಮಿಕ್ ಅಸೋಸಿಯೇಶನ್, ಸ್ತ್ರೀ ರೋಗ ತಜ್ಞರ ಸಂಘ, ಐತಾಳ್ ಚಾರಿಟೇಬಲ್ ಟ್ರಸ್ಟ್ ಮತ್ತು ಮಹಿಳಾ ಆರೋಗ್ಯ ವೇದಿಕೆ ವತಿಯಿಂದ ನಗರದ ತರೀಕೆರೆ ರಸ್ತೆಯ ನಯನ ಆಸ್ಪತ್ರೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ರಕ್ತದಲ್ಲಿನ ಗ್ಲೂಕೋಸ್ ಅಂಶದ ಪರೀಕ್ಷೆ, ಕಣ್ಣಿನ ಅಕ್ಷಿಪಟ್ಟಲದ ಬೇನೆ ತಪಾಸಣೆ ಹಾಗೂ ಮಧುಮೇಹ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.
    ಮಧುಮೇಹ ನಿಯಂತ್ರಣದಿಂದ ಕಣ್ಣು, ಹೃದಯ, ನರವ್ಯೂಹ, ಮೂತ್ರಪಿಂಡ, ಕಾಲಿನ ರಕ್ತನಾಳ ಹೀಗೆ ಬಹುಅಂಗಾಗಳಮೇಲೆ ಉಂಟುಮಾಡುವ ದುಷ್ಪರಿಣಾಮಗಳನ್ನು ತಡೆಗಟ್ಟಬಹುದಾಗಿದೆ ಎಂದರು.
    ಐಎಂಎ ಕಾರ್ಯದರ್ಶಿ, ಮೂಳೆ ರೋಗ ತಜ್ಞ ಡಾ. ರಾಮಚಂದ್ರ ಕಾಮತ್ ಮಾತನಾಡಿ, ಮಧುಮೇಹ ಕಾಣಿಸಿಕೊಂಡವರಲ್ಲಿ ಸ್ನಾಯು ಹಾಗೂ ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ. ಬೊಜ್ಜು ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡುವ  ಪ್ರಮುಖ ವೈರಿಯಾಗಿದ್ದು, ಈ ಹಿನ್ನಲೆಯಲ್ಲಿ ದೇಹದ ಸಮತೂಕ ನಿರ್ವಹಣೆಗೆ ಹೆಚ್ಚಿನ ಗಮನ ಹರಿಸಬೇಕೆಂದರು.
    ಐಎಂಎ ಉಪಾಧ್ಯಕ್ಷೆ ಡಾ. ಕವಿತಾಭಟ್ ಮಾತನಾಡಿ, ಸದ್ದಿಲ್ಲದೇ ನಮ್ಮನ್ನು ಆಕ್ರಮಿಸುವ ಮಧುಮೇಹ ಪತ್ತೆ ಹಚ್ಚಲು ಪ್ರತಿಯೊಬ್ಬರು ೨೫ ವರ್ಷಗಳ ನಂತರ ವಷಕ್ಕೊಮ್ಮೆಯಾದರೂ ರಕ್ತದಲ್ಲಿ ಸಕ್ಕರೆ ಪ್ರಮಾಣ ಪರೀಕ್ಷಿಸಿಕೊಳ್ಳುತ್ತಿರಬೇಕು. ಜೀವನಶೈಲಿ ಬದಲಿಸಿಕೊಳ್ಳದ್ದಿದ್ದರೆ ಬಹಳಷ್ಟು ಆರೋಗ್ಯ ಸಮಸ್ಯೆಯನ್ನು ಮುಂದಿನ ಪೀಳಿಗೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
    ಮಕ್ಕಳ ತಜ್ಞ ಡಾ. ಮಲ್ಲಿಕಾರ್ಜುನ್ ಸಾಲೇರ ಮಾತನಾಡಿ, ಪ್ರಸ್ತುತ  ಚಿಕ್ಕ ಮಕ್ಕಳಲ್ಲಿ ಸಹ ಮಧುಮೇಹ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.  
ಐಎಂಎ ತಾಲೂಕು ಅಧ್ಯಕ್ಷ, ನೇತ್ರ ತಜ್ಞ  ಡಾ. ಕುಮಾರ ಸ್ವಾಮಿ ಮಾತನಾಡಿದರು. ಮಹಿಳಾ ಆರೋಗ್ಯ ವೇದಿಕೆ ಕಾರ್ಯದರ್ಶಿ     ಡಾ. ಆಶಾ ಸ್ವಾಗತಿಸಿ ವಂದಿಸಿದರು. ೫೦ಕ್ಕೂ ಹೆಚ್ಚು ಜನರಿಗೆ ಉಚಿತ ಅಕ್ಷಿಪಟಲ ತಪಾಸಣೆ ಹಾಗೂ ರಕ್ತ ತಪಾಸಣೆ ನಡೆಸಲಾಯಿತು. ಅಲ್ಲದೆ ಸೂಕ್ತ ಸಲಹೆ ಸೂಚನೆ ನೀಡಲಾಯಿತು.

Tuesday, November 23, 2021

ಕೆಸರಿನ ಗದ್ದೆಯಂತಾದ ರಸ್ತೆ : ಗ್ರಾಮಸ್ಥರ ಸಂಚಾರಕ್ಕೆ ತೊಂದರೆ


ಭದ್ರಾವತಿ ತಾಲೂಕಿನ ಸಂಜೀವ ನಗರದಿಂದ ಕೊಮಾರನಹಳ್ಳಿ ಗ್ರಾಮ ಪಂಚಾಯಿತಿಗೆ ಸಂಪರ್ಕಗೊಂಡಿರುವ ರಸ್ತೆ ಸುಮಾರು ೫ ವರ್ಷಗಳಿಂದ ಹಾಳಾಗಿದ್ದು, ಮಳೆಗಾಲದಲ್ಲಿ ಕೆಸರಿನ ಗದ್ದೆಯಂತಾಗಿ ಗ್ರಾಮಸ್ಥರ ಸಂಚಾರಕ್ಕೆ ತೊಂದರೆಯಾಗಿದೆ.
    ಭದ್ರಾವತಿ, ನ. ೨೩: ತಾಲೂಕಿನ ಸಂಜೀವ ನಗರದಿಂದ ಕೊಮಾರನಹಳ್ಳಿ ಗ್ರಾಮ ಪಂಚಾಯಿತಿಗೆ ಸಂಪರ್ಕಗೊಂಡಿರುವ ರಸ್ತೆ ಸುಮಾರು ೫ ವರ್ಷಗಳಿಂದ ಹಾಳಾಗಿದ್ದು, ಮಳೆಗಾಲದಲ್ಲಿ ಕೆಸರಿನ ಗದ್ದೆಯಂತಾಗಿ ಗ್ರಾಮಸ್ಥರ ಸಂಚಾರಕ್ಕೆ ತೊಂದರೆಯಾಗಿದೆ.
    ಸಂಜೀವ ನಗರದಿಂದ ಕೊಮಾರನಹಳ್ಳಿಗೆ ಸಂಚರಿಸಲು ಇರುವ ಪ್ರಮುಖ ರಸ್ತೆ ಇದಾಗಿದ್ದು, ತುಂಬಾ ಹಾಳಾಗಿ ಅಲ್ಲಲ್ಲಿ ಬಾರಿ ಗಾತ್ರದ ಗುಂಡಿಗಳು ಬಿದ್ದಿವೆ. ಜೊತೆಗೆ ಜಲ್ಲಿಕಲ್ಲು ಕಿತ್ತುಕೊಂಡು ಹೊರಬಂದಿವೆ. ಮಳೆಯಿಂದಾಗಿ ರಸ್ತೆ ಸಂಪೂರ್ಣವಾಗಿ ಕೆಸರುಮಯವಾಗುತ್ತಿದೆ.
    ಈ ರಸ್ತೆಯನ್ನು ತಕ್ಷಣ ದುರುಸ್ತಿಪಡಿಸುವಂತೆ ಸಂಬಂಧಪಟ್ಟ ಇಲಾಖೆಯವರಿಗೆ, ಸ್ಥಳೀಯ ಪಂಚಾಯಿತಿ ಸದಸ್ಯರಿಗೆ ಹಾಗು ಶಾಸಕರಿಗೆ ಹಲವು ಬಾರಿ ಮನವಿ ಮಾಡಲಾಗಿದೆ. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.