Tuesday, December 14, 2021

ಪರಿಷತ್ ಚುನಾವಣೆ : ಜೆಡಿಯು ಅಭ್ಯರ್ಥಿ ಶಶಿಕುಮಾರ್ ಎಸ್ ಗೌಡಗೆ ೩ ಮತ


ಶಶಿಕುಮಾರ್ ಎಸ್ ಗೌಡ
    ಭದ್ರಾವತಿ, ಡಿ. ೧೪: ಸಮಾಜವಾದಿ ಚಿಂತನೆಗಳ ನೆಲೆಗಟ್ಟಿನ ಮೇಲೆ ಈಗಲೂ ಸಾರ್ವತ್ರಿಕ ಚುನಾವಣೆಗಳನ್ನು ಎದುರಿಸುತ್ತಿರುವ ನಗರದ ಜನ್ನಾಪುರ ಹಾಲಪ್ಪಶೆಡ್ ನಿವಾಸಿ ಶಶಿಕುಮಾರ್ ಎಸ್ ಗೌಡ ಈ ಬಾರಿ ವಿಧಾನ ಪರಿಷತ್ ಚುನಾವಣೆಯಲ್ಲಿ ೩ ಮತಗಳನ್ನು ಪಡೆದುಕೊಂಡಿದ್ದಾರೆ.
    ಸಾರ್ವತ್ರಿಕ ಚುನಾವಣೆಗಳಲ್ಲಿ ನೈತಿಕತೆ, ಪಾರದರ್ಶಕತೆ ಕಾಯ್ದುಕೊಳ್ಳಬೇಕೆಂಬ ಉದ್ದೇಶದೊಂದಿಗೆ ಶಶಿಕುಮಾರ್ ಎಸ್ ಗೌಡ ಲೋಕಸಭೆ, ವಿಧಾನಸಭೆ, ನಗರಸಭೆ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದರು. ಇದೀಗ ವಿಧಾನಪರಿಷತ್ ಚುನಾವಣೆಯಲ್ಲೂ ಸ್ಪರ್ಧಿಸಿ ಗಮನ ಸೆಳೆದಿದ್ದರು.
    ಜನತಾದಳ(ಸಂಯುಕ್ತ) ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶಶಿಕುಮಾರ್ ಎಸ್ ಗೌಡ ಪರವಾಗಿ ಪಕ್ಷದ ರಾಜ್ಯಾಧ್ಯಕ್ಷ ಮಹಿಮಾ ಜೆ. ಪಟೇಲ್, ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣಗೌಡ ಮತ್ತು ಕರ್ನಾಟಕ ರಾಷ್ಟ್ರ ಸಮಿತಿ ರಾಜ್ಯಾಧ್ಯಕ್ಷ ರವಿಕೃಷ್ಣ ರೆಡ್ಡಿ ಪ್ರಚಾರ ನಡೆಸಿದ್ದರು.

ಅಕ್ರಮವಾಗಿ ಕೂಡಿಹಾಕಲಾಗಿದ್ದ ೧೬ ಗೋವುಗಳ ರಕ್ಷಣೆ :

ಭದ್ರಾವತಿ ಹಳೇನಗರ ಠಾಣೆ ಪೊಲೀಸರ ಕಾರ್ಯಾಚರಣೆ

ಅಕ್ರಮವಾಗಿ ಕೂಡಿಹಾಕಲಾಗಿದ್ದ ಸುಮಾರು ೧೬ ಗೋವುಗಳನ್ನು ಭದ್ರಾವತಿ ಹಳೇನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದು ರಕ್ಷಿಸಿರುವುದು.  
     ಭದ್ರಾವತಿ, ಡಿ. ೧೪: ಅಕ್ರಮವಾಗಿ ಕೂಡಿಹಾಕಲಾಗಿದ್ದ ಸುಮಾರು ೧೬ ಗೋವುಗಳನ್ನು ಇಲ್ಲಿನ ಹಳೇನಗರ ಠಾಣೆ ಪೊಲೀಸರು ವಶಕ್ಕೆ ಪಡೆದು ರಕ್ಷಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
    ನಗರಸಭೆ ವ್ಯಾಪ್ತಿಯ ಅನ್ವರ್ ಕಾಲೋನಿಯಲ್ಲಿ ತಬ್ರೇಜ್ ಎಂಬುವವರಿಗೆ ಸೇರಿದ ಒಂದು ಮನೆಯಲ್ಲಿ ಕೂಡಿ ಹಾಕಲಾಗಿದ್ದ ಒಟ್ಟು ೧೦ ಗೋವುಗಳನ್ನು ಹಾಗು ಈತನಿಗೆ ಸೇರಿದ ಮತ್ತೊಂದು ಮನೆಯಲ್ಲಿ ಕೂಡಿ ಹಾಕಲಾಗಿದ್ದ ೩ ಗೋವುಗಳನ್ನು ಹಾಗು ಜಾಫರ್ ಸಾಧಿಕ್ ಎಂಬುವರ ಮನೆಯಲ್ಲಿ ಕೂಡಿ ಹಾಕಲಾಗಿದ್ದ ೩ ಗೋವುಗಳನ್ನು ಒಟ್ಟು ೧೬ ಗೋವುಗಳನ್ನು ಪೊಲೀಸರು ರಕ್ಷಿಸಿದ್ದಾರೆ.
    ಗೋ ಮಾಂಸದ ಉದ್ದೇಶಕ್ಕಾಗಿ ಗೋವುಗಳನ್ನು ಕೂಡಿಹಾಕಲಾಗಿತ್ತು ಎನ್ನುವ ಮಾಹಿತಿಗಳ ಆಧಾರದ ಮೇರೆಗೆ ಪೊಲೀಸರು ದಾಳಿ ನಡೆಸಿ ಗೋವುಗಳನ್ನು ರಕ್ಷಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತಬ್ರೇಜ್ ಮತ್ತು ಜಾಫರ್ ಸಾಧಿಕ್ ತಲೆ ಮರೆಸಿಕೊಂಡಿದ್ದಾರೆ.

Monday, December 13, 2021

ನ್ಯಾಯಬೆಲೆ ಅಂಗಡಿ ಸಿಬ್ಬಂದಿ ದಿನೇಶ್ ನಿಧನ

ದಿನೇಶ್
    ಭದ್ರಾವತಿ, ಡಿ. ೧೩: ನಗರಸಭೆ ವ್ಯಾಪ್ತಿಯ ಹೊಸಸಿದ್ದಾಪುರ ಗ್ರಾಮದ ನ್ಯಾಯಬೆಲೆ ಅಂಗಡಿಯೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ದಿನೇಶ್(೪೮) ಸೋಮವಾರ ನಿಧನ ಹೊಂದಿದರು.
    ಪತ್ನಿ, ಇಬ್ಬರು ಪುತ್ರಿಯರನ್ನು ಹೊಂದಿದ್ದರು. ದಿನೇಶ್ ಕೆಲವು ತಿಂಗಳುಗಳಿಂದ ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಇವರ ಅಂತ್ಯಕ್ರಿಯೆ ಬೈಪಾಸ್ ರಸ್ತೆ ಬುಳ್ಳಾಪುರದಲ್ಲಿರುವ ಹಿಂದೂ ರುದ್ರ ಭೂಮಿಯಲ್ಲಿ ನೆರವೇರಲಿದೆ. ಮೃತರ ನಿಧನಕ್ಕೆ ಸರ್ಕಾರಿ ಪಡಿತರ ವಿತರಕರ ಸಂಘದ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗಯ್ಯ ಸೇರಿದಂತೆ ಪಡಿತರ ವಿತರಕರು ಸಂತಾಪ ಸೂಚಿಸಿದ್ದಾರೆ.

ಕಟ್ಟಡ ಕಾರ್ಮಿಕರಿಗೆ ಸುರಕ್ಷತಾ, ಪ್ರತಿರೋಧಕ ಕಿಟ್ ವಿತರಣೆ


ಕಾರ್ಮಿಕ ಇಲಾಖೆಯಿಂದ ಅಸಂಘಟಿತ ಕಾರ್ಮಿಕರಿಗೆ ನೀಡಲಾಗುವ ಸುರಕ್ಷಾ ಮತ್ತು ಪ್ರತಿರೋಧಕ ಕಿಟ್‌ಗಳನ್ನು ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ಗ್ರಾಮಾಂತರ ಶಾಖೆ ವತಿಯಿಂದ ಭದ್ರಾವತಿ ತಾಲೂಕಿನ ದೊಡ್ಡೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸೋಮವಾರ ವಿತರಿಸಲಾಯಿತು.
    ಭದ್ರಾವತಿ, ಡಿ. ೧೩: ಕಾರ್ಮಿಕ ಇಲಾಖೆಯಿಂದ ಅಸಂಘಟಿತ ಕಾರ್ಮಿಕರಿಗೆ ನೀಡಲಾಗುವ ಸುರಕ್ಷಾ ಮತ್ತು ಪ್ರತಿರೋಧಕ ಕಿಟ್‌ಗಳನ್ನು ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ಗ್ರಾಮಾಂತರ ಶಾಖೆ ವತಿಯಿಂದ ತಾಲೂಕಿನ ದೊಡ್ಡೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸೋಮವಾರ ವಿತರಿಸಲಾಯಿತು.
    ದೊಡ್ಡೇರಿ, ಎಮ್ಮೆದೊಡ್ಡಿ, ಗಂಗೂರು, ಬದನೇಹಾಳ್, ಬಂಡಿಗುಡ್ಡ, ಸಿಕಂದರ್ ಕ್ಯಾಂಪ್, ಬಾಳೆಕಟ್ಟೆ  ಮತ್ತು ಬಿಸಿಲು ಮನೆ ಇನ್ನಿತರ ಗ್ರಾಮಗಳಲ್ಲಿ ಕಟ್ಟಡ ಕಾರ್ಮಿಕರಿಗೆ ಯುವ ಮುಖಂಡ ಬಿ.ಎಸ್ ಗಣೇಶ್,  ಗ್ರಾಮ ಪಂಚಾಯಿತಿ ಅಧ್ಯಕ್ಷ ಷರೀಫ್ ಮತ್ತು ಉಪಾಧ್ಯಕ್ಷೆ  ಹೇಮಾವತಿ ಶ್ರೀನಿವಾಸ್ ನೇತೃತ್ವದಲ್ಲಿ ಕಿಟ್‌ಗಳನ್ನು ವಿತರಿಸಿದರು.
    ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್‌ಬಾಬು, ತಾಲೂಕು ಅಧ್ಯಕ್ಷ ಚಂದ್ರಶೇಖರ್, ತಾಲ್ಲೂಕು ಕಾರ್ಯಾಧ್ಯಕ್ಷ ಅಭಿಲಾಷ್, ಗೌರವ ಸಲಹೆಗಾರ ಶಿವಣ್ಣಗೌಡ, ಪಿಡಿಒ ಶಿವಶಂಕರ್, ಧನಂಜಯ, ಕೃಷ್ಣಮೂರ್ತಿ, ಹರಿಯಪ್ಪ ಸೇರಿದಂತೆ ಗ್ರಾಮಾಂತರ ಶಾಖೆಯ ಪದಾಧಿಕಾರಿಗಳು,  ಗ್ರಾಮದ ಮುಖಂಡರು, ಕಾರ್ಮಿಕರು ಉಪಸ್ಥಿತರಿದ್ದರು.

ದಯಾನಂದ ನಿಧನ


ದಯಾನಂದ
    ಭದ್ರಾವತಿ, ಡಿ. ೧೩: ತಾಲೂಕಿನ ಕಾಳಿಂಗನಹಳ್ಳಿ ನಿವಾಸಿ, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಬದರಿನಾರಾಯಣ ಅವರ ಸಹೋದರ ದಯಾನಂದ(೪೭) ಭಾನುವಾರ ನಿಧನ ಹೊಂದಿದರು.
    ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಹೊಂದಿದ್ದರು. ಅನಾರೋಗ್ಯಕ್ಕೆ ಒಳಗಾಗಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇವರ ಅಂತ್ಯಕ್ರಿಯೆ ಗ್ರಾಮದ ಸ್ಮಶಾನದಲ್ಲಿ ಸೋಮವಾರ ಬೆಳಿಗ್ಗೆ ನೆರವೇರಿಸಲಾಯಿತು. ತಾಲೂಕು ಛಲವಾದಿ ಸಮಾಜ(ಪ.ಜಾ) ಹಾಗು ಛಲವಾದಿ ಮಹಾಸಭಾ ಸಂತಾಪ ಸೂಚಿಸಿವೆ.  

Sunday, December 12, 2021

ಇಬ್ಬರು ಯುವಕರ ಮೇಲೆ ಗುಂಪೊಂದು ಗಾಂಜಾ ಅಮಲಿನಲ್ಲಿ ಹಲ್ಲೆ ಆರೋಪ : ಪ್ರತಿಭಟನೆ

ನ್ಯೂಟೌನ್ ಪೊಲೀಸರಿಂದ ಕಠಿಣ ಕ್ರಮ ಕೈಗೊಳ್ಳುವ ಭರವಸೆ


ಭದ್ರಾವತಿ ಗರದ ಬೈಪಾಸ್ ರಸ್ತೆಯ ನಗರಸಭೆ ವ್ಯಾಪ್ತಿಯ ಹೊಸಸಿದ್ದಾಪುರ ಗ್ರಾಮದಲ್ಲಿ ಭಾನುವಾರ ರಾತ್ರಿ ಯುವಕರ ಗುಂಪೊಂದು ಏಕಾಏಕಿ ಇಬ್ಬರು ಯುವಕರ ಮೇಲೆ ಹಲ್ಲೆ ನಡೆಸಿದ್ದು, ಹಲ್ಲೆಗೆ ಗಾಂಜಾ ಅಮಲು ಕಾರಣವಾಗಿದೆ. ತಕ್ಷಣ ಹಲ್ಲೆ ನಡೆಸಿರುವವರನ್ನು ಬಂಧಿಸುವಂತೆ ಒತ್ತಾಯಿಸಿ ನಗರಸಭೆ ಮಾಜಿ ಸದಸ್ಯ ಅನಿಲ್‌ಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
    ಭದ್ರಾವತಿ, ಡಿ. ೧೨:  ನಗರದ ಬೈಪಾಸ್ ರಸ್ತೆಯ ನಗರಸಭೆ ವ್ಯಾಪ್ತಿಯ ಹೊಸಸಿದ್ದಾಪುರ ಗ್ರಾಮದಲ್ಲಿ ಭಾನುವಾರ ರಾತ್ರಿ ಯುವಕರ ಗುಂಪೊಂದು ಏಕಾಏಕಿ ಇಬ್ಬರು ಯುವಕರ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
    ಹಳೇನಂಜಾಪುರ ಗ್ರಾಮದ ನಿವಾಸಿಗಳಾದ ವಿನೋದ್ ಮತ್ತು ರಾಜೇಶ್ ಗಂಭೀರವಾಗಿ ಹಲ್ಲೆಗೊಳಗಾಗಿದ್ದು, ಈ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿನೋದ್ ಮತ್ತು ರಾಜೇಶ್ ಹೊಸಸಿದ್ದಾಪುರದ ಕಟಿಂಗ್‌ಶಾಪ್ ಬಳಿ ನಿಂತುಕೊಂಡಿದ್ದಾಗ ಯುವಕರ ಗುಂಪೊಂದು ಏಕಾಏಕಿ ಹಲ್ಲೆ ನಡೆಸಿದ್ದು, ಈ ಸಂದರ್ಭದಲ್ಲಿ ಹಲ್ಲೆ ತಪ್ಪಿಸಲು ಹೋದ ನಗರಸಭಾ ಮಾಜಿ ಸದಸ್ಯ ಅನಿಲ್‌ಕುಮಾರ್‌ರವರ ತಂದೆಯ ಮೇಲೆ ಸಹ ಹಲ್ಲೆ ನಡೆಸಲಾಗಿದೆ. ಗಾಂಜಾ ಅಮಲಿನಲ್ಲಿ ಹಲ್ಲೆ ನಡೆಸಲಾಗಿದೆ ಎನ್ನಲಾಗಿದ್ದು, ಇದರಿಂದಾಗಿ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ.
        ರಸ್ತೆ ತಡೆ ನಡೆಸಿ ಪ್ರತಿಭಟನೆ :
   ಈ ಭಾಗದಲ್ಲಿ ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಸೇವನೆ ಹೆಚ್ಚಾಗುತ್ತಿದ್ದು, ಇದಕ್ಕೆ ಯುವ ಸಮುದಾಯ ಬಲಿಯಾಗುತ್ತಿದೆ. ಇದನ್ನು ಪ್ರಶ್ನಿಸಲು ಮುಂದಾದವರ ಮೇಲೆ ಹಲ್ಲೆ ನಡೆಸಲಾಗುತ್ತಿದೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ತೇಜೋವಧೆ ಮಾಡಲಾಗುತ್ತಿದೆ. ಪುಂಡ ಪೋಕರಿಗಳ ಹಾವಳಿ ಹೆಚ್ಚಾಗಿದೆ. ಗ್ರಾಮಸ್ಥರು ಪ್ರತಿ ದಿನ ಆತಂಕದಲ್ಲಿ ಕಾಲ ಕಳೆಯುವಂತಾಗಿದೆ. ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆಂದು ಆರೋಪಿಸಿ ಸ್ಥಳೀಯರು ನಗರಸಭೆ ಮಾಜಿ ಸದಸ್ಯ ಅನಿಲ್‌ಕುಮಾರ್ ನೇತೃತ್ವದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
    ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ನ್ಯೂಟೌನ್ ಠಾಣೆ ಪೊಲೀಸರು ಹಲ್ಲೆ ನಡೆಸಿರುವ ಯುವಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.


ಅನುಭವಿ ಕಲಾವಿದರಿಂದ ಮಾತ್ರ ಬೀದಿ ನಾಟಕ ಯಶಸ್ವಿಗೊಳಿಸಲು ಸಾಧ್ಯ : ಹೊನ್ನಾಳಿ ಚಂದ್ರಶೇಖರ್


ಭದ್ರಾವತಿ ಹಳೇನಗರದ ಬಸವೇಶ್ವರ ವೃತ್ತದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಸಹಯೋಗದೊಂದಿಗೆ ನಗರದ ಜನ್ನಾಪುರ ಅಪರಂಜಿ ಅಭಿನಯ ಶಾಲೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ  'ಬಾರಿಸು ಕನ್ನಡ ಡಿಂಡಿಮವ' ವಿಶೇಷ ಬೀದಿ ನಾಟಕಕ್ಕೆ ಹಿರಿಯ ಪತ್ರಕರ್ತ ಹೊನ್ನಾಳಿ ಚಂದ್ರಶೇಖರ್ ಚಾಲನೆ ನೀಡಿದರು.
    ಭದ್ರಾವತಿ, ಡಿ. ೧೨: ಬೀದಿನಾಟಕಗಳ ಮೂಲಕ ಜನರನ್ನು ಆಕರ್ಷಿಸುವುದು ಸವಾಲಿನ ಕೆಲಸವಾಗಿದ್ದು, ಅನುಭವಿ ಕಲಾವಿದರಿಂದ ಮಾತ್ರ ಬೀದಿ ನಾಟಕಗಳನ್ನು ಯಶಸ್ವಿಗೊಳಿಸಲು ಸಾಧ್ಯ ಎಂದು ಹಿರಿಯ ಪತ್ರಕರ್ತ ಹೊನ್ನಾಳಿ ಚಂದ್ರಶೇಖರ್ ಹೇಳಿದರು.
    ಅವರು ಭಾನುವಾರ ಹಳೇನಗರದ ಬಸವೇಶ್ವರ ವೃತ್ತದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಸಹಯೋಗದೊಂದಿಗೆ ನಗರದ ಜನ್ನಾಪುರ ಅಪರಂಜಿ ಅಭಿನಯ ಶಾಲೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ  'ಬಾರಿಸು ಕನ್ನಡ ಡಿಂಡಿಮವ' ವಿಶೇಷ ಬೀದಿ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು.
    ವಿಭಿನ್ನ ಮನಸ್ಥಿತಿಯ ಜನರ ಗಮನವನ್ನು ಒಂದೆಡೆ ಸೆಳೆದು ಆ ನಂತರ ನಾಟಕದಲ್ಲಿನ ವಿಚಾರಧಾರೆಗಳನ್ನು ತಿಳಿಸುವ ಕೆಲಸ ನಿಜಕ್ಕೂ ಸವಾಲಾಗಿದೆ. ಬೀದಿ ನಾಟಕಗಳು ತನ್ನದೇ ವಿಶಿಷ್ಟತೆಯನ್ನು ಹೊಂದಿವೆ. ಬೀದಿ ನಾಟಕಗಳು ಜನರನ್ನು ಹೋರಾಟಗಳಲ್ಲಿ, ಚಳುವಳಿಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡುವ ಜೊತೆಗೆ ಸಾಮಾಜಿಕ ಕಾಳಜಿ, ಜಾಗೃತಿ ಮೂಡಿಸಲು ಸಹಕಾರಿಯಾಗಿವೆ. ಇಂತಹ ಬೀದಿ ನಾಟಕಗಳು ಇಂದಿನ ಸಮಾಜಕ್ಕೆ ಅವಶ್ಯಕವಾಗಿವೆ. ಬೀದಿ ನಾಟಕ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈ ರೀತಿಯ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯುವಂತಾಗಬೇಕೆಂದರು.
    ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
    ರಂಗಕರ್ಮಿ, ಕಿರುತೆರೆ ನಟ ಅಪರಂಜಿ ಶಿವರಾಜ್ ರಚನೆ, ನಿರ್ದೇಶನದ 'ಬಾರಿಸು ಕನ್ನಡ ಡಿಂಡಿಮವ' ವಿಶೇಷ ಬೀದಿ ನಾಟಕ ಪ್ರದರ್ಶನ ಅಪರಂಜಿ ಅಭಿನಯ ಶಾಲೆಯ ಕಲಾವಿದರು ನಡೆಸಿಕೊಟ್ಟರು.