Saturday, December 18, 2021

ದಯಾಸಾಗರ್ ಟ್ರಸ್ಟ್‌ನಿಂದ ರೋಸಯ್ಯ, ಪುನೀತ್ ಪುಣ್ಯಸ್ಮರಣೆ

ಭದ್ರಾವತಿ ನ್ಯೂಟೌನ್ ದಯಾಸಾಗರ್ ಟ್ರಸ್ಟ್ ವತಿಯಿಂದ ಶನಿವಾರ ಟ್ರಸ್ಟ್ ಸಂಸ್ಥಾಪಕ ಎ. ರೋಸಯ್ಯ ಮತ್ತು ಚಲನಚಿತ್ರ ನಟ ಪುನೀತ್ ರಾಜ್‌ಕುಮಾರ್‌ರವರ ಪುಣ್ಯಸ್ಮರಣೆ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಡಿ. ೧೮: ನ್ಯೂಟೌನ್ ದಯಾಸಾಗರ್ ಟ್ರಸ್ಟ್ ವತಿಯಿಂದ ಶನಿವಾರ ಟ್ರಸ್ಟ್ ಸಂಸ್ಥಾಪಕ ಎ. ರೋಸಯ್ಯ ಮತ್ತು ಚಲನಚಿತ್ರ ನಟ ಪುನೀತ್ ರಾಜ್‌ಕುಮಾರ್‌ರವರ ಪುಣ್ಯಸ್ಮರಣೆ ಹಮ್ಮಿಕೊಳ್ಳಲಾಗಿತ್ತು.
    ಸಭೆಯಲ್ಲಿ ರೆವರೆಂಡ್ ಸ್ಟ್ಯಾನ್ಲಿ ಕ್ರಿಸ್‌ಮಸ್ ಸಂದೇಶ ವಾಚಿಸಿದರು. ಕಾರ್ಯದರ್ಶಿ ಬಿ. ಪ್ರಸಾದ್ ಟ್ರಸ್ಟ್ ಕಾರ್ಯಚಟುವಟಿಕೆಗಳ ಕುರಿತು ವಿವರಿಸಿದರು. ಸೇವಾಕರ್ತರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಸಿದ್ದಾರ್ಥ ಅಂಧರ ಕೇಂದ್ರ ವಿಕಲಚೇತನ ಹಾಗು ಅಬಲ ಆಶ್ರಮದ ಮಹಿಳೆಯರಿಗೆ ಸೀರೆ ಮತ್ತು ಟ್ರಸ್ಟ್ ಫಲಾನುಭವಿಗಳಿಗೆ ಟವಲ್ ವಿತರಿಸಲಾಯಿತು.
    ಹಲವಾರು ವರ್ಷಗಳಿಂದ ದಯಾಸಾಗರ್ ಟ್ರಸ್ಟ್ ವತಿಯಿಂದ ದೀನ ದಲಿತರು, ನಿಗರ್ತಿಕರು, ಅಸಹಾಯಕರ ಹಸಿವು ನೀಗಿಸುವ ಕಾರ್ಯದ ಜೊತೆಗೆ ಇನ್ನಿತರ ಸೇವಾ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದ್ದು, ಸಮಾಜಕ್ಕೆ ಮಾದರಿಯಾಗಿದೆ.
    ಟ್ರಸ್ ಅಧ್ಯಕ್ಷ ಆರ್. ಮೋಸಸ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಬಿ.ಕೆ ಸಂಗಮೇಶ್ವರ್, ನಗರಸಭೆ ಉಪಾಧ್ಯಕ್ಷ ಚನ್ನಪ್ಪ, ಸದಸ್ಯರಾದ ಬಿ.ಕೆ ಮೋಹನ್, ಕಾಂತರಾಜ್, ರೆವರೆಂಡ್ ಬಾಬಿರಾಜ್, ಫಾಸ್ಟರ್ ರೈಮಂಡ್, ಯಂಗ್ ಕ್ರಿಶ್ಚಿಯನ್ ಅಸೋಸಿಯೇಷನ್ ಅಧ್ಯಕ್ಷ ಸೆಲ್ವರಾಜ್, ಸವಿತಾ ಸಮಾಜದ ಉಪಾಧ್ಯಕ್ಷ ಕೆ. ಗೋಪಾಲ ಕೃಷ್ಣ, ಟ್ರಸ್ಟ್ ಖಜಾಂಚಿ ಆರ್. ಪುಷ್ಪಲತಾ, ಸದಸ್ಯರಾದ ಮರಿಯಮ್ಮ, ಎಸ್.ಆರ್ ರೇಮಂಡ್, ವಿ. ವಿನೂತ, ಸಂತೋಷ್, ಎಸ್. ಜಾನಿ, ಡಿ. ಪ್ರೇಮ್‌ಕುಮಾರ್, ವಿಜಯ್‌ದಯಾಕರ್, ಕೆವಿನ್ ಸೋಲೋಮನ್, ಅನುಜೀವನ್ ಮತ್ತು ಕಾಂತಮ್ಮ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.



ಸರ್ಕಾರಿ ಭೂಮಿ ಒತ್ತುವರಿ ಮಾಡಿ ಅನಧಿಕೃತ ಕಟ್ಟಡ ನಿರ್ಮಾಣ

ನಗರಸಭೆ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ


ಇತ್ತೀಚೆಗೆ ಭದ್ರಾವತಿ ನಗರಸಭೆ ವ್ಯಾಪ್ತಿಯಲ್ಲಿ ಸರ್ಕಾರಿ ಭೂಮಿ ಒತ್ತುವರಿ ಮಾಡಿ ಅನಧಿಕೃತ ಕಟ್ಟಡ ನಿರ್ಮಾಣ ಮಾಡಲಾಗುತ್ತಿದ್ದು, ಇದಕ್ಕೆ ಸಹಕರಿಸುತ್ತಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಶನಿವಾರ ಪ್ರಜಾ ವಿಮೋಚನಾ ಸಂಘ(ಬಿಪಿಎಲ್)ದ ವತಿಯಿಂದ ಶಾಸಕ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು.
    ಭದ್ರಾವತಿ, ಡಿ. ೧೮: ಇತ್ತೀಚೆಗೆ ನಗರಸಭೆ ವ್ಯಾಪ್ತಿಯಲ್ಲಿ ಸರ್ಕಾರಿ ಭೂಮಿ ಒತ್ತುವರಿ ಮಾಡಿ ಅನಧಿಕೃತ ಕಟ್ಟಡ ನಿರ್ಮಾಣ ಮಾಡಲಾಗುತ್ತಿದ್ದು, ಇದಕ್ಕೆ ಸಹಕರಿಸುತ್ತಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಶನಿವಾರ ಪ್ರಜಾ ವಿಮೋಚನಾ ಸಂಘ(ಬಿಪಿಎಲ್)ದ ವತಿಯಿಂದ ಶಾಸಕ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು.
    ಸರ್ಕಾರಿ ಜಾಗ ಮತ್ತು ಕೆರೆಗಳನ್ನು ಒತ್ತುವರಿ ಮಾಡಿ ಅನಧಿಕೃತ ಬಡಾವಣೆಗಳನ್ನು ರೂಪಿಸಿ ನಿವೇಶನಗಳನ್ನು ನಿರ್ಮಿಸಲಾಗುತ್ತಿದೆ. ಈ ಸಂಬಂಧ ಹಲವಾರು ಬಾರಿ ನಗರಸಭೆಗೆ ವಿವಿಧ ಸಂಘಟನೆಗು ದೂರು ನೀಡಿವೆ. ಆದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿನ್ನಲೆಯಲ್ಲಿ ನಗರಸಭೆ ಪೌರಾಯುಕ್ತರು, ಕಂದಾಯಾಧಿಕಾರಿಗಳು, ಸಹಾಯಕ ಕಾರ್ಯಪಾಲಕ ಅಭಿಯಂತರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಆಗ್ರಹಿಸಿದರು.
    ಪ್ರತಿಭಟನೆಗೆ ಸ್ಪಂದಿಸಿದ ಶಾಸಕ ಬಿ.ಕೆ ಸಂಗಮೇಶ್ವರ್ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಸಂಘದ ಅಧ್ಯಕ್ಷ ಬಿ. ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಸುರೇಶ್, ಶ್ಯಾಮ್, ಮುರಳಿ ಕೃಷ್ಣ, ಎಂ. ರವಿಕುಮಾರ್, ಅಜಂತ್‌ಕುಮಾರ್, ಗೋವಿಂದ, ಸಂಪತ್‌ಕುಮಾರ್, ರವೀಂದ್ರಪ್ಪ, ಜ್ಯೋತಿ ಪ್ರಕಾಶ್,  ಕೆ.ಸಿ ಯುವರಾಜ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.  

ಕೇಂದ್ರ ಸರ್ಕಾರದ ಅಮೃತ್ ೨.೦ ಯೋಜನೆಯಡಿ ಅಭಿವೃದ್ಧಿ ಕಾರ್ಯ ಕೈಗೊಳ್ಳಿ

ಕೆರೆಗಳಿಗೆ ಸರ್.ಎಂ.ವಿ, ಪುನೀತ್ ಹೆಸರು ನಾಮಕರಣಕ್ಕೆ ಮನವಿ


ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಕೇಂದ್ರ ಸರ್ಕಾರದ ಅಮೃತ್ ೨.೦ ಯೋಜನೆಯಡಿ ಭದ್ರಾವತಿ ನಗರಸಭೆ ವ್ಯಾಪ್ತಿಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸ್ ಜನಸ್ಪಂದನ ವೇದಿಕೆ ಮತ್ತು ಸುರ್ವಣ ಮಹಿಳಾ ವೇದಿಕೆ ವತಿಯಿಂದ ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಮತ್ತು ಉಪಾಧ್ಯಕ್ಷ ಚನ್ನಪ್ಪ ಅವರಿಗೆ ಮನವಿಸಲಾಯಿತು.
    ಭದ್ರಾವತಿ, ಡಿ. ೧೮: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಕೇಂದ್ರ ಸರ್ಕಾರದ ಅಮೃತ್ ೨.೦ ಯೋಜನೆಯಡಿ ನಗರಸಭೆ ವ್ಯಾಪ್ತಿಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸ್ ಜನಸ್ಪಂದನ ವೇದಿಕೆ ಮತ್ತು ಸುರ್ವಣ ಮಹಿಳಾ ವೇದಿಕೆ ವತಿಯಿಂದ ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಮತ್ತು ಉಪಾಧ್ಯಕ್ಷ ಚನ್ನಪ್ಪ ಅವರಿಗೆ ಮನವಿಸಲಾಯಿತು.
    ಅಮೃತ್ ೨.೦ ಯೋಜನೆಯಡಿ ಕುಡಿಯುವ ನೀರಿನ ಸಮಗ್ರ ಸರಬರಾಜು ಯೋಜನೆ, ಒಳಚರಂಡಿ ಯೋಜನೆ, ಉದ್ಯಾನವನ ಅಭಿವೃದ್ಧಿ, ಕೆರೆಗಳ ಸಂರಕ್ಷಣೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಜೊತೆಗೆ ನಗರಸಭೆ ವ್ಯಾಪ್ತಿ ಜನ್ನಾಪುರ ಸರ್ವೆ ನಂ.೭೦ರ ೪೫.೨೦ ಎಕರೆ ವಿಸ್ತೀರ್ಣವುಳ್ಳ ಜನ್ನಾಪುರ ಕೆರೆಗೆ 'ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ದೋಣಿವಿಹಾರ ಜನ್ನಾಪುರ ಸರ್ಕಾರಿ ಕೆರೆ' ಎಂಬ ಹೆಸರನ್ನು ಹಾಗು ಹೊಸಮನೆ ತಮ್ಮಣ್ಣ ಕಾಲೋನಿ ಸಮೀಪವಿರುವ ಸುಮಾರು ೫೦.೨೦ ಗುಂಟೆ ವಿಸ್ತೀರ್ಣವುಳ್ಳ ಸರ್ಕಾರಿ ಹಿರೇಕೆರೆಗೆ 'ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ದೋಣಿವಿಹಾರ ಸರ್ಕಾರಿ ಹಿರೇಕೆರೆ' ಎಂಬ ಹೆಸರನ್ನು ನಾಮಕರಣಗೊಳಿಸಲು ಕೋರಲಾಗಿದೆ.
    ನಗರಸಭೆ ವ್ಯಾಪ್ತಿಯಲ್ಲಿರುವ ತಾಲೂಕು ಆಡಳಿತಕ್ಕೆ ಸೇರಿದ ಸುಮಾರು ೧೭ ಕೆರೆಗಳನ್ನು ಹಾಗು ಜಿಲ್ಲಾ ಪಂಚಾಯಿತಿಗೆ ಸೇರಿದ ೧೫ ಕೆರೆಗಳನ್ನು ಅಭಿವೃದ್ಧಿಪಡಿಸಲು ಈಗಾಗಲೇ ನಗರಸಭೆ ಆಡಳಿತಕ್ಕೆ ಹಸ್ತಾಂತರ ಮಾಡಿಕೊಳ್ಳಲಾಗಿದೆ. ಇದೆ ರೀತಿ ಕರ್ನಾಟಕ ನೀರಾವರಿ ನಿಗಮ ನಿಯಮಿತಕ್ಕೆ ಒಳಪಟ್ಟಿರುವ ಸುಮಾರು ೩೬ ಕೆರೆಗಳನ್ನು ಹಾಗು ವಿಐಎಸ್‌ಎಲ್ ಕಾರ್ಖಾನೆ ಆಡಳಿತಕ್ಕೆ ಒಳಪಟ್ಟ ೨ ಕೆರೆಗಳನ್ನು ನಗರಸಭೆಗೆ ಹಸ್ತಾಂತರ ಮಾಡಿಕೊಳ್ಳುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
    ಟ್ರಸ್ಟ್ ಅಧ್ಯಕ್ಷ, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ  ಆರ್. ವೇಣುಗೋಪಾಲ್, ಆಪ್ತ ಸಹಾಯಕ ಮುರುಗನ್ ಉಪಸ್ಥಿತರಿದ್ದರು.

ನೀರಾವರಿ ಇಲಾಖೆಯಲ್ಲೂ ಶೇ.೨೦ರಷ್ಟು ಕಮೀಷನ್ ದಂಧೆ :

ಇಲಾಖೆಯಿಂದ ಚೆಕ್ ನೀಡಿದರೂ, ಗುತ್ತಿಗೆದಾರರಿಗೆ ನೀಡದ ಅಧಿಕಾರಿಗಳು


ಶಿವಮೊಗ್ಗ ಜಿಲ್ಲಾ ಪಿಡಬ್ಲ್ಯೂಡಿ ಕಂಟ್ರಾಕ್ಟರ್ ಅಸೋಸಿಯೇಷನ್ ಉಪಾಧ್ಯಕ್ಷ ಧನಶೇಖರ್ ನೇತೃತ್ವದಲ್ಲಿ ಶನಿವಾರ ಭದ್ರಾವತಿ ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರ ಸಭಾಂಗಣದಲ್ಲಿ ನೀರಾವರಿ ಇಲಾಖೆಯ ಮುಖ್ಯ ಅಭಿಯಂತರ ಶಿವಾನಂದ ಬಣಕಾರ್ ಅವರೊಂದಿಗೆ ಗುತ್ತಿಗೆದಾರರು ಚರ್ಚೆ ನಡೆಸಿದರು.
    ಭದ್ರಾವತಿ, ಡಿ. ೧೮: ಇದೀಗ ನೀರಾವರಿ ಇಲಾಖೆಯಲ್ಲೂ ಶೇ.೨೦ರಷ್ಟು ಕಮೀಷನ್ ದಂಧೆ ವ್ಯಾಪಕವಾಗಿದ್ದು, ಸ್ವಂತ ಹಣದಲ್ಲಿ ಈಗಾಗಲೇ ಕಾಮಗಾರಿಗಳನ್ನು ಸಂಪೂರ್ಣವಾಗಿ ಮುಕ್ತಾಯಗೊಳಿಸಿರುವ ಗುತ್ತಿಗೆದಾರರು ಇಲಾಖೆಯಿಂದ ಹಣ ಪಡೆಯಲು ಅಲೆದಾಡುವಂತಾಗಿದೆ.
    ತಾಲೂಕಿನ ಭದ್ರಾ ಜಲಾಶಯ ವ್ಯಾಪ್ತಿಯಲ್ಲಿ ಕಾಮಗಾರಿಗಳನ್ನು ಕೈಗೊಂಡಿರುವ ಸುಮಾರು ೧೨ ಗುತ್ತಿಗೆದಾರರಿಗೆ ಕಾಮಗಾರಿ ಸಂಪೂರ್ಣವಾಗಿ ಮುಕ್ತಾಯಗೊಳಿಸಿ ಇಲಾಖೆಗೆ ಕಾಮಗಾರಿ ಬಿಲ್ ಪಾವತಿಗೆ ವಿವರಗಳನ್ನು ಸಹ ಸಲ್ಲಿಸಲಾಗಿದೆ. ಅದರಂತೆ ಇಲಾಖೆಯಿಂದ ಚೆಕ್‌ಸಹ ಬಿಡುಗಡೆಯಾಗಿದೆ. ಚೆಕ್ ಬಿಡುಗಡೆಯಾಗಿ ಸುಮಾರು ೧ ತಿಂಗಳು ಕಳೆದರೂ ಸಹ ಗುತ್ತಿಗೆದಾರರಿಗೆ ಬಿಆರ್‌ಎಲ್‌ಬಿಸಿ ಕಾರ್ಯಪಾಲಕ ಅಭಿಯಂತರರು ನೀಡದೆ ತಡೆ ಹಿಡಿದಿದ್ದಾರೆ ಎನ್ನಲಾಗಿದೆ.
    ಬಿಲ್ ತಡೆ ಹಿಡಿದಿರುವ ಕುರಿತು ಪತ್ರಿಕೆಗೆ ಮಾಹಿತಿ ನೀಡಿರುವ ಗುತ್ತಿಗೆದಾರ ಮಹೇಶ ಹಾವೇರಿ, ಸ್ವಂತ ಹಣದಲ್ಲಿ ಕಾಮಗಾರಿ ಮುಕ್ತಾಯಗೊಳಿಸಿ ಇಲಾಖೆಯಿಂದ ಹಣ ಪಡೆಯಲು ಎದುರು ನೋಡುತ್ತಿದ್ದೇನೆ. ಚೆಕ್ ನೀಡುವಂತೆ ಹಲವು ಮನವಿ ಮಾಡಿದರು ಸಹ ನೀಡುತ್ತಿಲ್ಲ. ಶೇ.೨೦ರಷ್ಟು ಕಮೀಷನ್ ಹಣ ನೀಡಿದರೆ ಮಾತ್ರ ಚೆಕ್ ನೀಡುತ್ತೇವೆ ಎಂದು ಅಭಿಯಂತರರು ಹೇಳುತ್ತಿದ್ದಾರೆಂದು ಆರೋಪಿಸಿದ್ದಾರೆ. ಅಲ್ಲದೆ ಶಿವಮೊಗ್ಗ ಜಿಲ್ಲಾ ಪಿಡಬ್ಲ್ಯೂಡಿ ಕಂಟ್ರಾಕ್ಟರ್‍ಸ್ ಅಸೋಸಿಯೇಷನ್‌ಗೂ ದೂರು ನೀಡಿದ್ದಾರೆ.
    ೨ ದಿನದಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ :
ಶಿವಮೊಗ್ಗ ಜಿಲ್ಲಾ ಪಿಡಬ್ಲ್ಯೂಡಿ ಕಂಟ್ರಾಕ್ಟರ್ ಅಸೋಸಿಯೇಷನ್ ಉಪಾಧ್ಯಕ್ಷ ಧನಶೇಖರ್ ನೇತೃತ್ವದಲ್ಲಿ ಶನಿವಾರ ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರ ಸಭಾಂಗಣದಲ್ಲಿ ನೀರಾವರಿ ಇಲಾಖೆಯ ಮುಖ್ಯ ಅಭಿಯಂತರ ಶಿವಾನಂದ ಬಣಕಾರ್ ಅವರೊಂದಿಗೆ ಗುತ್ತಿಗೆದಾರರು ಚರ್ಚೆ ನಡೆಸಿದರು.
    ಗುತ್ತಿಗೆದಾರರಿಗೆ ತಕ್ಷಣ ಚೆಕ್ ನೀಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಲಾಯಿತು. ಈ ಸಂದರ್ಭದಲ್ಲಿ  ಬಣಕಾರ್‌ರವರು ಚೆಕ್ ನೀಡದಿರಲು ಉಂಟಾಗಿರುವ ಸಮಸ್ಯೆ ಬಗ್ಗೆ ಪರಿಶೀಲನೆ ನಡೆಸಿ ಮುಂದಿನ ೨ ದಿನಗಳಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಈ ಹಿನ್ನಲೆಯಲ್ಲಿ ಪ್ರತಿಭಟನೆಗೆ ಮುಂದಾಗಿದ್ದ ಗುತ್ತಿಗೆದಾರರು ಸದ್ಯಕ್ಕೆ ಮೌನ್ಯಕ್ಕೆ ಶರಣಾಗಿದ್ದಾರೆ.

Friday, December 17, 2021

ಬಜರಂಗದಳ ಕಾರ್ಯಕರ್ತರಿಂದ ಯಶಸ್ವಿಯಾಗಿ ಜರುಗಿದ ಸಂಕೀರ್ತನೆ ಶೋಭಾ ಯಾತ್ರೆ

ದತ್ತ ಮಾಲೆ ಅಭಿಯಾನದ ಅಂಗವಾಗಿ ಭದ್ರಾವತಿ ನಗರದಲ್ಲಿ ಬಜರಂಗದಳ ಕಾರ್ಯಕರ್ತರು ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಸಂಕೀರ್ತನೆ ಶೋಭಾ ಯಾತ್ರೆ ಯಶಸ್ವಿಯಾಗಿ ಮುಕ್ತಾಯಗೊಂಡಿತು.
    ಭದ್ರಾವತಿ, ಡಿ. ೧೭: ಈ ಬಾರಿ ದತ್ತ ಮಾಲೆ ಅಭಿಯಾನದ ಅಂಗವಾಗಿ ನಗರದಲ್ಲಿ ಬಜರಂಗದಳ ಕಾರ್ಯಕರ್ತರು ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಸಂಕೀರ್ತನೆ ಶೋಭಾ ಯಾತ್ರೆ ಯಶಸ್ವಿಯಾಗಿ ಮುಕ್ತಾಯಗೊಂಡಿತು.
    ಸಂಜೆ ಹೊಸಮನೆ ಶಿವಾಜಿ ವೃತ್ತದಿಂದ ಆರಂಭಗೊಂಡ ಶೋಭಾ ಯಾತ್ರೆ ಹೊಸಮನೆ ಮುಖ್ಯ ರಸ್ತೆ ಮೂಲಕ ಹಾಲಪ್ಪ ವೃತ್ತ, ಸಿ.ಎನ್ ರಸ್ತೆ, ಮಾಧವಚಾರ್ ವೃತ್ತ, ನಂತರ ಬಿ.ಎಚ್ ರಸ್ತೆ ಹಾಲಪ್ಪ ವೃತ್ತ ಮೂಲಕ ಅಂಬೇಡ್ಕರ್ ವೃತ್ತ, ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದವರೆಗೂ ಸಾಗಿ ರಾತ್ರಿ ಸುಮಾರು ೯.೩೦ಕ್ಕೆ ಅಂತ್ಯಗೊಂಡಿತು.
    ಈ ಬಾರಿ ಸುಮಾರು ೧೫೦ಕ್ಕೂ ಹೆಚ್ಚು ಕಾರ್ಯಕರ್ತರು ಮಾಲಾಧಾರಣೆ ಮಾಡಿದ್ದು, ಶೋಭಾ ಯಾತ್ರೆಯಲ್ಲಿ ನೂತನ ವಿಧಾನಪರಿಷತ್ ಸದಸ್ಯ ಡಿ.ಎಸ್ ಅರುಣ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಇ ಕಾಂತೇಶ್, ವಿಶ್ವ ಹಿಂದೂ ಪರಿಷತ್ ಜಿಲಾಧ್ಯಕ್ಷ ವಾಸುದೇವನ್, ದಕ್ಷಿಣ ಪ್ರಾಂತ್ಯ ಉಪಾಧ್ಯಕ್ಷ ಹಾ. ರಾಮಪ್ಪ, ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ಧರ್ಮಪ್ರಸಾದ್, ಮುಖಂಡರಾದ ಮಂಗೋಟೆ ರುದ್ರೇಶ್, ಎಂ. ಮಂಜುನಾಥ್, ನಗರಸಭಾ ಸದಸ್ಯರಾದ ಅನುಪಮ ಚನ್ನೇಶ್, ಅನಿತಾ ಮಲ್ಲೇಶ್ ಹಾಗು ವಿಶ್ವ ಹಿಂದೂ ಪರಿಷತ್ ಸೇರಿದಂತೆ ಹಿಂದೂಪರ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು ಇನ್ನಿತರರು ಪಾಲ್ಗೊಂಡಿದ್ದರು.  

ಇಬ್ಬರು ಮೊಬೈಲ್ ಕಳ್ಳರ ಬಂಧನ : ಒಟ್ಟು ೧೧ ಲಕ್ಷ ರು. ಮೌಲ್ಯದ ೧೨೦ ಮೊಬೈಲ್ ವಶ

ಹಳೇನಗರ ಠಾಣೆ ಪೊಲೀಸರ ಕಾರ್ಯಾಚರಣೆ


ಇಬ್ಬರು ಮೊಬೈಲ್ ಕಳ್ಳರನ್ನು ಬಂಧಿಸಿ ಸುಮಾರು ಒಟ್ಟು ೧೧ ಲಕ್ಷ ರು. ಮೌಲ್ಯದ ಮೊಬೈಲ್‌ಗಳನ್ನು ವಶಪಡಿಸಿಕೊಳ್ಳುವಲ್ಲಿ ಭದ್ರಾವತಿ ಹಳೇನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
    ಭದ್ರಾವತಿ, ಡಿ. ೧೭: ಇಬ್ಬರು ಮೊಬೈಲ್ ಕಳ್ಳರನ್ನು ಬಂಧಿಸಿ ಸುಮಾರು ಒಟ್ಟು ೧೧ ಲಕ್ಷ ರು. ಮೌಲ್ಯದ ಮೊಬೈಲ್‌ಗಳನ್ನು ವಶಪಡಿಸಿಕೊಳ್ಳುವಲ್ಲಿ ಹಳೇನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
    ಭೋವಿ ಕಾಲೋನಿ ನಿವಾಸಿ ಶ್ರೀನಿವಾಸ್(೨೬) ಮತ್ತು ದುರ್ಗಿನಗರದ ನಿವಾಸಿ ಅಜಾಮ್ ಅಲಿಯಾಸ್ ಬಾಬು(೩೮) ಬಂಧಿತ ಮೊಬೈಲ್ ಕಳ್ಳರಾಗಿದ್ದು, ಈ ಇಬ್ಬರು ಕದ್ದ ಮೊಬೈಲ್‌ಗಳನ್ನು ನಗರದಲ್ಲಿ ಮಾರಾಟ ಮಾಡಲು ಬರುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಹಳೇನಗರ ಠಾಣೆ ಪೊಲೀಸರು ಗುರುವಾರ ಬೆಳಿಗ್ಗೆ ಕಾರ್ಯಾಚರಣೆ ನಡೆಸಿ ಸೀಗೆಬಾಗಿ ಸಮೀಪ ಬಂಧಿಸಿದ್ದಾರೆ.
    ಬಂಧಿತರಿಂದ ಒಟ್ಟು ೧೧ ಲಕ್ಷ ರು. ಮೌಲ್ಯದ ವಿವಿಧ ಕಂಪನಿಗಳ ೧೨೦ ಮೊಬೈಲ್‌ಗಳನ್ನು ಹಾಗು ಡೆಲ್ ಕಂಪನಿಯ ಒಂದು ಲ್ಯಾಪ್‌ಟಾಪ್ ಹಾಗು ಕೃತ್ಯಕ್ಕೆ ಬಳಸಿದ ದ್ವಿಚಕ್ರವಾಹನವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


ಕ್ರೀಡೆಗೆ ಯಾವುದೇ ಧರ್ಮ, ಜಾತಿ ಇಲ್ಲ, ಎಲ್ಲರನ್ನು ಒಗ್ಗೂಡಿಸುವ ಶಕ್ತಿ ಇದೆ : ಬಿ.ಕೆ ಸಂಗಮೇಶ್ವರ್

ರಾಜ್ಯಮಟ್ಟದ ಓಂ ಕಪ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ


ಭದ್ರಾವತಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ೩ ದಿನಗಳ ಕಾಲ ನಗರದ ಓಂ ಕ್ರಿಕೇಟರ್‍ಸ್ ವತಿಯಿಂದ ಯುವ ಮುಖಂಡ ಕೆ.ಪಿ ಗಿರೀಶ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿರುವ ರಾಜ್ಯಮಟ್ಟದ ಓಂ ಕಪ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಶುಕ್ರವಾಗಿ ಶಾಸಕ ಬಿ.ಕೆ ಸಂಗಮೇಶ್ವರ್ ಟಾಸ್ ತೂರಿ ಚಾಲನೆ ನೀಡಿದರು.
    ಭದ್ರಾವತಿ, ಡಿ. ೧೭: ಪ್ರತಿಯೊಬ್ಬರಲ್ಲೂ ಉತ್ಸಾಹ, ಆರೋಗ್ಯ ತಂದುಕೊಡುವ ಕ್ರೀಡೆ ಯಾವುದೇ ಧರ್ಮ, ಜಾತಿಗೆ ಸೀಮಿತವಾಗಿಲ್ಲ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
    ಅವರು ಶುಕ್ರವಾರ ಹಳೇನಗರದ ಕನಕಮಂಟಪ ಮೈದಾನದಲ್ಲಿ ೩ ದಿನಗಳ ಕಾಲ ನಗರದ ಓಂ ಕ್ರಿಕೇಟರ್‍ಸ್ ವತಿಯಿಂದ ಯುವ ಮುಖಂಡ ಕೆ.ಪಿ ಗಿರೀಶ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿರುವ ರಾಜ್ಯಮಟ್ಟದ ಓಂ ಕಪ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
    ಪ್ರಸ್ತುತ ಕ್ರೀಡೆಗಳು ಹೆಚ್ಚು ಹೆಚ್ಚಾಗಿ ನಡೆಯುವಂತಾಗಬೇಕು. ಕ್ರೀಡಾಪಟುಗಳು ಇರುವ ಕಡೆ ಉತ್ತಮ ಪರಿಸರ ರೂಪುಗೊಳ್ಳುತ್ತದೆ. ಜೊತೆಗೆ ಯುವ ಸಮೂಹ ದುಶ್ಚಟಗಳಿಂದ ದೂರು ಉಳಿಯುತ್ತಾರೆ ಎಂದರು.
ಪ್ರಸ್ತುತ ಕ್ರೀಡಾ ಮನೋಭಾವ ಅಗತ್ಯವಿದ್ದು, ಕ್ರೀಡೆಯಲ್ಲಿ ಸೋಲು ಗೆಲುವು ಸಹಜ. ಎರಡನ್ನು ಸಮಾನವಾಗಿ ಸ್ವೀಕರಿಸಿ ಗೆದ್ದವರು, ಸೋತವರು ಸಂಭ್ರಮಿಸಬೇಕು. ಕ್ರೀಡೆಯಲ್ಲಿ ಯಾವುದೇ ಧರ್ಮ, ಜಾತಿ ಇಲ್ಲ. ಕ್ರೀಡೆ ಎಲ್ಲರನ್ನು ಒಗ್ಗೂಡಿಸುವ ಶಕ್ತಿ  ಹೊಂದಿದೆ ಎಂದರು.
    ನಗರಸಭಾ ಸದಸ್ಯ, ಸಮಾಜ ಸೇವಕ ಮಣಿ ಎಎನ್‌ಎಸ್, ತಾಲೂಕು ಬಗರ್‌ಹುಕುಂ ಸಮಿತಿ ಅಧ್ಯಕ್ಷ ನಾಗೇಶ್, ಯುವ ಮುಖಂಡರಾದ ಗಣೇಶ್, ಮಹೇಶ್, ಓಂ ಕ್ರಿಕೇಟರ್‍ಸ್‌ನ ಪ್ರಮುಖರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಕೇಸರಿಪಡೆಯ ಕೆ.ಪಿ ಗಿರೀಶ್ ಅಧ್ಯಕ್ಷತೆ ವಹಿಸಿದ್ದರು.


ಭದ್ರಾವತಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ೩ ದಿನಗಳ ಕಾಲ ನಗರದ ಓಂ ಕ್ರಿಕೇಟರ್‍ಸ್ ವತಿಯಿಂದ ಯುವ ಮುಖಂಡ ಕೆ.ಪಿ ಗಿರೀಶ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿರುವ ರಾಜ್ಯಮಟ್ಟದ ಓಂ ಕಪ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಆಟ ಆಡುವ ಮೂಲಕ ಕ್ರೀಡಾಪಟುಗಳಲ್ಲಿ ಹುಮ್ಮಸ್ಸು ಮೂಡಿಸಿದರು.