Saturday, January 1, 2022

ಫಲಾಪೇಕ್ಷೆ ರಹಿತವಾದ ಸೇವೆಗೆ ಭಗವಂತ ಪ್ರಸನ್ನ : ಶ್ರಿ ಸತ್ಯಾತ್ಮ ತೀರ್ಥರು.

ಭದ್ರಾವತಿ ನಗರಸಭೆ ವ್ಯಾಪ್ತಿಯ ವಾರ್ಡ್ ನಂ.೨೯ರ ಜನ್ನಾಪುರದ ಶ್ರೀರಾಘವೇಂದ್ರಸ್ವಾಮಿಗಳ ಮಠಕ್ಕೆ ಉತ್ತರಾಧಿಮಠದ ಶ್ರೀಸತ್ಯಾತ್ಮತೀರ್ಥ ಶ್ರೀಗಳು ಭೇಟಿ ನೀಡಿ ಭಕ್ತರಿಗೆ ಆಶೀರ್ವಚನ ನೀಡಿದರು.  
    ಭದ್ರಾವತಿ, ಜ. ೧: ಯಾವುದೇ ಫಲಾಪೇಕ್ಷೆಯಿಲ್ಲದೆ ಭಗವಂತನಲ್ಲಿ ಅಚಲವಾದ ನಂಬಿಕೆ ಹೊಂದಿ ಮಾಡುವ ಕಾರ್ಯಗಳಿಂದ ಭಗವಂತ ಪ್ರಸನ್ನನಾಗಿ ಸದಾ ಸಂರಕ್ಷಿಸುತ್ತಾನೆ ಎಂದು ಉತ್ತರಾಧಿಮಠದ ಶ್ರೀಸತ್ಯಾತ್ಮತೀರ್ಥ ಶ್ರೀಗಳು ಹೇಳಿದರು.
    ಅವರು ನಗರಸಭೆ ವ್ಯಾಪ್ತಿಯ ವಾರ್ಡ್ ನಂ.೨೯ರ ಜನ್ನಾಪುರದ ಶ್ರೀರಾಘವೇಂದ್ರಸ್ವಾಮಿಗಳ ಮಠಕ್ಕೆ ಭೇಟಿ ನೀಡಿ ಭಕ್ತರಿಗೆ ಆಶೀರ್ವಚನ ನೀಡಿದರು.  ಹರಿಸರ್ವೋತ್ತಮ  ತತ್ವದಲ್ಲಿ ನಂಬಿಕೆ ಹೊಂದಿ ಕಾಯಾ, ವಾಚ, ಮನಸ ಮಾಡುವ ತ್ರಿವಿಧ ಸೇವಾಕಾರ್ಯಗಳನ್ನು ಭಗವಂತನಿಗೆ ಅರ್ಪಿಸುವುದೇ ನಿಜವಾದ ಶರಣಾಗತಿ. ಭಗವಂತ ಸರ್ವತಂತ್ರ ಸ್ವತಂತ್ರ, ನಾನು ಪರಾಧಿನ ಎಂಬುದನ್ನು ಸದಾಕಾಲ ನೆನಪಿನಲ್ಲಿಟ್ಟುಕೊಂಡು ಭಗವಂತನ ಸೇವೆ ಎಂದು ಮಾಡುವ ಕಾರ್ಯಗಳಿಂದ ಆ ಭಗವಂತ ಸದಾ ಸಂತುಷ್ಟನಾಗಿ ನಮ್ಮನ್ನು ಕಾಯುತ್ತಾನೆ. ಭಗವಂತನಲ್ಲಿ ಸಂಪೂರ್ಣವಾಗಿ ನಂಬಿಕೆ ಹೊಂದಿ ಯಾವುದೇ ಫಲಪೇಕ್ಷೆರಹಿತವಾಗಿ ಮಾಡುವ ಕಾರ್ಯಗಳಿಗೆ ಅವರವರ ಯೋಗ್ಯತಾನುಸಾರವಾದ ಸ್ಥಾನಮಾನಗಳನ್ನು ಖಂಡಿತ  ನೀಡಿ ರಕ್ಷಿಸುತ್ತಾನೆ. ಶ್ರೀಮಧ್ವಾಚಾರ್ಯಾರ ತತ್ವಸಿದ್ಧಾಂತಗಳಲ್ಲಿನ ಈ ಅಂಶವನ್ನು ಪ್ರತಿಯೊಬ್ಬರೂ ಅರಿತುಕೊಂಡು ಬದುಕುಬೇಕೆಂದರು.
    ಶ್ರೀ ಗುರು ರಾಘವೇಂದ್ರಸ್ವಾಮಿಗಳು ಸೇರಿದಂತೆ ಪಂಚಯತಿಗಳ ಬೃಂದಾವನಕ್ಕೆ ಶ್ರಿಗಳು ಆರತಿಬೆಳಗಿ, ಭಕ್ತಾದಿಗಳಿಗೆ ಫಲಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
    ಮಠದ ಅರ್ಚಕ ಮುರಳೀಧರ್, ಪಂಡಿತರಾದ ಘಂಟಿನಾರಾಯಣಾಚಾರ್. ಗೋಪಾಲಾಚಾರ್, ರಾಮಚಂದ್ರಕಲ್ಲಾಪುರ ಸೇರಿದಂತೆ ಭಕ್ತಾಧಿಗಳು ಉಪಸ್ಥಿತರಿದ್ದರು.

ಅಮರ ಶಿಲ್ಪಿ ಜಕಣಾಚಾರಿ ಸಂಸ್ಮರಣೆ ದಿನಾಚರಣೆ

ಅಮರ ಶಿಲ್ಪಿ ಜಕಣಾಚಾರಿ ಸಂಸ್ಮರಣೆ ದಿನಾಚರಣೆ ಶನಿವಾರ ಭದ್ರಾವತಿ ತಾಲೂಕು ಕಛೇರಿ ಸಭಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಅಖಿಲ ಭಾರತ ವಿಶ್ವಕರ್ಮ ಪರಿಷತ್ ತಾಲೂಕು ಶಾಖೆ ಸಹಕಾರದೊಂದಿಗೆ ಸರಳವಾಗಿ ಆಚರಿಸಲಾಯಿತು.
    ಭದ್ರಾವತಿ, ಜ. ೧: ಅಮರ ಶಿಲ್ಪಿ ಜಕಣಾಚಾರಿ ಸಂಸ್ಮರಣೆ ದಿನಾಚರಣೆ ಶನಿವಾರ ತಾಲೂಕು ಕಛೇರಿ ಸಭಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಅಖಿಲ ಭಾರತ ವಿಶ್ವಕರ್ಮ ಪರಿಷತ್ ತಾಲೂಕು ಶಾಖೆ ಸಹಕಾರದೊಂದಿಗೆ ಸರಳವಾಗಿ ಆಚರಿಸಲಾಯಿತು.
    ಜಕಣಾಚಾರಿಯವರ ಭಾವಚಿತ್ರಕ್ಕೆ ಪುಷ್ಪ ನಮನದೊಂದಿಗೆ ಪೂಜೆ ಸಲ್ಲಿಸಿ ತಹಸೀಲ್ದಾರ್ ಆರ್. ಪ್ರದೀಪ್ ಮಾತನಾಡಿದರು. ಅಖಿಲ ಭಾರತ ವಿಶ್ವಕರ್ಮ ಪರಿಷತ್ ರಾಜ್ಯ ಕಾರ್ಯಾಧ್ಯಕ್ಷ ಡಾ. ಸಿ. ರಾಮಾಚಾರಿ, ರುದ್ರಚಾರ್, ಮಂಜುನಾಥ್ ಆಚಾರ್, ಬಿ. ಮಂಜೇಶ್ ಆಚಾರ್, ಖುಗ್ವೇದಚಾರ್, ವೆಂಕಟೇಶಚಾರ್, ಸುಭಾಷ್ ಆಚಾರ್, ಪ್ರಸನ್ನ ಆಚಾರ್, ರಮೇಶ್ ಆಚಾರ್, ಪ್ರಕಾಶ್ ಆಚಾರ್, ಸಿಂಗಚಾರ್ ಹಾಗು ತಾಲೂಕು ಕಚೇರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಹೊಸ ವರ್ಷಕ್ಕೆ ಹೊಸತನದೊಂದಿಗೆ ಕಂಗೊಳಿಸುತ್ತಿದೆ ಮಿನಿವಿಧಾನಸೌಧ

ಅಧಿಕಾರಿಗಳು, ಸಿಬ್ಬಂದಿಗಳ ಸ್ವಂತ ಹಣದಲ್ಲಿಯೇ ಕಛೇರಿ, ಸಭಾಂಗಣ ನವೀಕರಣ..!

ಭದ್ರಾವತಿ ತಾಲೂಕು ಕಛೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು.
   
   * ಅನಂತಕುಮಾರ್
    ಭದ್ರಾವತಿ, ಜ. ೧: ತಾಲೂಕಿನ ಶಕ್ತಿ ಕೇಂದ್ರ ಮಿನಿ ವಿಧಾನಸೌಧ ಹೊಸ ವರ್ಷಕ್ಕೆ ಹೊಸತನದೊಂದಿಗೆ ಕಂಗೊಳಿಸುತ್ತಿದ್ದು, ತಾಲೂಕು ಕಛೇರಿ ಅಧಿಕಾರಿಗಳು ಹಾಗು ಸಿಬ್ಬಂದಿಗಳ ಪರಿಶ್ರಮ ಇದೀಗ ಮಾದರಿಯಾಗಿ ಪರಿಣಮಿಸಿದೆ.
    ನಾವು ಕರ್ತವ್ಯ ನಿರ್ವಹಿಸುವ ಸ್ಥಳ ಸಹ ಇತರರಿಗೆ ಮಾದರಿಯಾಗಬೇಕು. ತಮ್ಮ ಸೇವಾ ಅವಧಿಯಲ್ಲಿ ಒಂದಿಷ್ಟು ಏನಾದರೂ ಕೊಡುಗೆ ನೀಡಬೇಕೆಂಬ ಆಶಯ ಕೆಲವು ವ್ಯಕ್ತಿಗಳು ಹೊಂದಿರುತ್ತಾರೆ. ಇಂತಹ ವ್ಯಕ್ತಿಗಳಲ್ಲಿ ಪ್ರಸ್ತುತ ತಾಲೂಕು ದಂಡಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಆರ್. ಪ್ರದೀಪ್ ಅವರು ಹೊಂದಿದ್ದಾರೆ. ಈ ಕಾರಣದಿಂದಲ್ಲಿಯೇ ಕೆಲವೇ ಕೆಲವು ತಿಂಗಳಲ್ಲಿ ತಾಲೂಕು ಕಛೇರಿ ಚಿತ್ರಣವೇ ಬದಲಾಗಿದೆ.
    ತಾಲೂಕಿನಲ್ಲಿ ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಒಟ್ಟು ೧೧೦ ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಈ ಪೈಕಿ ೨೮ ಜನ ಗ್ರಾಮ ಲೆಕ್ಕಾಧಿಕಾರಿಗಳು ಹಾಗು ೪೦ ಜನ ಗ್ರಾಮ ಸಹಾಯಕರು, ೩ ಜನ ರಾಜಸ್ವ ನಿರೀಕ್ಷಕರು, ಉಳಿದಂತೆ ತಹಸೀಲ್ದಾರ್, ತಹಸೀಲ್ದಾರ್ ಗ್ರೇಡ್-೧, ಉಪತಹಸೀಲ್ದಾರ್, ಪ್ರಥಮ ದರ್ಜೆ, ದ್ವಿತೀಯ ದರ್ಜೆ ಗುಮಾಸ್ತರು ಹಾಗು 'ಡಿ' ದರ್ಜೆ ನೌಕರರು ಸೇರಿ ಒಟ್ಟು ೪೫ ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರೆಲ್ಲರೂ ಒಟ್ಟಾಗಿ ತಮ್ಮ ಸ್ವಂತ ಹಣದಲ್ಲಿ ಹಾಗು ಸರ್ಕಾರದ ಇತರೆ ಇಲಾಖೆಗಳ ನೆರವು ಹಾಗು ದಾನಿಗಳ ಸಹಕಾರದೊಂದಿಗೆ ಪ್ರಥಮ ಹಂತವಾಗಿ ತಹಸೀಲ್ದಾರ್ ಕಛೇರಿ ಮಿನಿವಿಧಾನ ನವೀಕರಣ ಕಾರ್ಯಕ್ಕೆ ಮುಂದಾಗಿದ್ದಾರೆ.


ಭದ್ರಾವತಿ ಮಿನಿವಿಧಾನಸೌಧದ ತಾಲೂಕು ಕಛೇರಿ ಸಭಾಂಗಣ ಕಛೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸ್ವಂತ ಹಣದಲ್ಲಿ ನವೀಕರಣಗೊಂಡಿರುವುದು.

    ಇದೀಗ ಸುಮಾರು ೭-೮ ಲಕ್ಷ ರು. ವೆಚ್ಚದಲ್ಲಿ ತಹಸೀಲ್ದಾರ್‌ರವರ ಕಛೇರಿ ಹಾಗು ಸಭಾಂಗಣ ನವೀಕರಣಗೊಳಿಸಲಾಗಿದ್ದು, ಹೊಸದಾಗಿ ಅತ್ಯಾಧುನಿಕ ಪೀಠೋಪಕರಣಗಳು, ಸಿ.ಸಿ ಕ್ಯಾಮೆರಾ, ಮೈಕ್, ಸ್ಪೀಕರ್ ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ಬಣ್ಣ ಲೇಪನ ಸೇರಿದಂತೆ ಹಲವು ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಇವುಗಳ ಜೊತೆಗೆ ಹೊರಭಾಗದಲ್ಲಿ ಹೊಸದಾಗಿ ಕಛೇರಿ ನಾಮಫಲಕ ಅಳವಡಿಸಲಾಗಿದೆ. ನವೀಕರಣ ಕಾರ್ಯ ಸಂಪೂರ್ಣವಾಗಿ ಮುಕ್ತಾಯಗೊಂಡಿದ್ದು, ಶನಿವಾರ ತಹಸೀಲ್ದಾರ್ ಆರ್. ಪ್ರದೀಪ್, ತಹಸೀಲ್ದಾರ್ ಗ್ರೇಡ್-೨ ರಂಗಮ್ಮ, ಉಪತಹಸೀಲ್ದಾರ್‌ಗಳಾದ ಅರಸು, ನಾರಾಯಣಗೌಡ, ಮಂಜಾನಾಯ್ಕ, ರಾಜಸ್ವ ನಿರೀಕ್ಷಕ ಪ್ರಶಾಂತ್, ರಾಧಕೃಷ್ಣಭಟ್ ಸೇರಿದಂತೆ ಕಛೇರಿಯ ಅಧಿಕಾರಿಗಳು, ಸಿಬ್ಬಂದಿಗಳು ಸಂಭ್ರಮ ತಮ್ಮ ಸಂಭ್ರಮ ಹಂಚಿಕೊಂಡರು.
    ಈಗಾಗಲೇ ಮಿನಿವಿಧಾನಸೌಧದಲ್ಲಿ ಸರ್ಕಾರದಿಂದ ಬಿಡುಗಡೆಯಾದ ಸುಮಾರು ೫೦ ಲಕ್ಷ ರು. ಹಣದಲ್ಲಿ ಲಿಫ್ಟ್ ಅಳವಡಿಸಲಾಗಿದೆ. ಅಲ್ಲದೆ ದಾನಿಗಳ ನೆರವಿನಿಂದ ಹೊರಭಾಗದಲ್ಲಿ ಧ್ವಜಾ ಸ್ತಂಭ ಹಾಗು ಮುಖ್ಯದ್ವಾರದ ಎರಡು ಬದಿ ಕಬ್ಬಿಣದ ಗ್ರಿಲ್‌ಗಳನ್ನು ಅಳವಡಿಸಲಾಗಿದೆ. ಒಟ್ಟಾರೆ ಅಭಿವೃದ್ದಿಗೆ ಪೂರಕವಾದ ಸಂಪನ್ಮೂಲಗಳನ್ನು ಸರ್ಕಾರದ ಅನುದಾನ ನಿರೀಕ್ಷಿಸದೆ ಕ್ರೋಢಿಕರಿಸಿಕೊಂಡು ಮಿನಿವಿಧಾನಸೌಧವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಕಾರ್ಯ ಇತರ ಇಲಾಖೆಗಳಿಗೆ ಸಹ ಮಾದರಿಯಾಗಿ ಕಂಡು ಬರುತ್ತಿದೆ.


ನಾನು ತಹಸೀಲ್ದಾರ್ ಆಗಿ ವರ್ಗಾವಣೆಯಾಗಿ ಬರುವವರೆಗೂ ಮಿನಿವಿಧಾನಸೌಧದ ಮುಂಭಾಗ ಧ್ವಜಾಸ್ತಂಭ ಇರಲಿಲ್ಲ. ಇದನ್ನು ಮನಗಂಡು ಕಂದಾಯ ಇಲಾಖೆಯಿಂದ ನೆರವು ಪಡೆದುಕೊಳ್ಳುತ್ತಿರುವ ಸರ್ಕಾರದ ಇತರ ಇಲಾಖೆಗಳ ಹಾಗು ದಾನಿಗಳ ಸಹಕಾರದಿಂದ ಧ್ವಜಾಸ್ತಂಭ ನಿರ್ಮಾಣ ಮಾಡಲಾಯಿತು. ಇದರಿಂದ ಸ್ಪೂರ್ತಿಗೊಂಡು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರೂ ಸಹ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ತಮ್ಮ ಸ್ವಂತ ಹಣದಲ್ಲಿ ಸುಮಾರು ೭-೮ ಲಕ್ಷ ರು. ವೆಚ್ಚದಲ್ಲಿ ಕಛೇರಿ ಹಾಗು ಸಭಾಂಗಣ ಆಧುನೀಕರಣಗೊಳಿಸಲಾಗಿದೆ. ಒಟ್ಟಾರೆ ಸುಮಾರು ೩೫ ಲಕ್ಷ ರು. ಗಳಷ್ಟು ಹಣ ಸರ್ಕಾರಕ್ಕೆ ಉಳಿತಾಯವಾಗಿದೆ. ಈಗಾಗಲೇ ಈ ಸಂಬಂಧ ಸರ್ಕಾರಕ್ಕೆ ಸಲ್ಲಿಸಲಾಗಿರುವ ೧೦ ಲಕ್ಷ ರು. ಗಳ ಪ್ರಸ್ತಾವನೆಗೂ ಶಾಸಕರು ಅನುಮೋದನೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಅನುದಾನವನ್ನು ಮಿನಿವಿಧಾನಸೌಧ ಹಿಂಭಾಗದ ಕಟ್ಟಡ ನವೀಕರಣ ಕಾರ್ಯಕ್ಕೆ ಬಳಸಿಕೊಳ್ಳಲಾಗುವುದು. ಅಲ್ಲದೆ ೧೦ ಲಕ್ಷ ರು. ವೆಚ್ಚದ ಜನರೇಟ್ ಅಳವಡಿಕೆಗೂ ಸಹ ಅನುಮೋದನೆ ಲಭಿಸಿದೆ. ಉದ್ಯಮಿಗಳು, ಸೇವಾ ಸಂಸ್ಥೆಗಳು ತಮ್ಮ ಸಿಎಸ್‌ಆರ್ ಹಣದಲ್ಲಿ ಈ ರೀತಿಯ ಕಾರ್ಯಗಳನ್ನು ಕೈಗೊಳ್ಳಲು ನೆರವಾಗುವುದರಿಂದ ಸರ್ಕಾರಿ ಕಛೇರಿಗಳು ಸಹ ಅಭಿವೃದ್ಧಿಗೊಳ್ಳುತ್ತವೆ.
                                                                        - ಆರ್. ಪ್ರದೀಪ್, ತಹಸೀಲ್ದಾರ್, ಭದ್ರಾವತಿ.



Friday, December 31, 2021

ತಾವರಘಟ್ಟ ಗ್ರಾಮ ಪಂಚಾಯಿತಿ ಮೊದಲ ಗ್ರಾಮ ಸಭೆ

ಭದ್ರಾವತಿ ತಾಲೂಕಿನ ತಾವರಘಟ್ಟ ಗ್ರಾಮ ಪಂಚಾಯಿತಿಯ ಮೊದಲ ಗ್ರಾಮ ಸಭೆ ಯಶಸ್ವಿಯಾಗಿ ಜರುಗಿತು.
ಭದ್ರಾವತಿ, ಡಿ. ೩೧: ತಾಲೂಕಿನ ತಾವರಘಟ್ಟ ಗ್ರಾಮ ಪಂಚಾಯಿತಿಯ ಮೊದಲ ಗ್ರಾಮ ಸಭೆ ಯಶಸ್ವಿಯಾಗಿ ಜರುಗಿತು.
ಪಂಚಾಯಿತಿ ಅಧ್ಯಕ್ಷ ಜಿ.ಎಸ್ ಮಹೇಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ನಿವೇಶನ ಹಂಚಿಕೆ, ಕೃಷಿ ಹಾಗು ಆರೋಗ್ಯ ಇಲಾಖೆಯಿಂದ ಸಿಗುವ ಸೌಲಭ್ಯಗಳ ಕುರಿತು ಹಾಗು ಕುಂದು ಕೊರತೆ ಬಗ್ಗೆ ಚರ್ಚೆ ನಡೆಸಲಾಯಿತು.


    ಗ್ರಾಮದ ಹಿರಿಯ ಮುಖಂಡ ತ್ಯಾಗರಾಜ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಖಾಲಿ ಇರುವ ಗ್ರಾಮ ಠಾಣಾ ಜಾಗಗಳನ್ನು ಸಂಘ-ಸಂಸ್ಥೆಗಳಿಗೆ ನೀಡಬಾರದು. ಬದಲಿಗೆ ನಿವೇಶನಗಳನ್ನು ನಿರ್ಮಿಸಿ ಗ್ರಾಮದ ನಿವೇಶನ ರಹಿತ ಅರ್ಹ ಬಡವರಿಗೆ ಹಂಚುವಂತೆ ಮನವಿ ಸಲ್ಲಿಸಿದರು. ಇದಕ್ಕೆ ಸಭೆಯಲ್ಲಿ ಪೂರಕ ಪ್ರತಿಕ್ರಿಯೆ ವ್ಯಕ್ತವಾಯಿತು. ಸಭೆಯಲ್ಲಿ ಪಂಚಾಯಿತಿ ಉಪಾಧ್ಯಕ್ಷರು, ಸದಸ್ಯರು, ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿಗಳು ಹಾಗು ಗ್ರಾಮಸ್ಥರು ಪಾಲ್ಗೊಂಡಿದ್ದರು.

ನಗರಸಭೆ ಆವರಣದಲ್ಲಿಯೇ ಶ್ರೀ ಚಾಮುಂಡೇಶ್ವರಿ ದೇವಿ ಪ್ರತಿಮೆ ಪ್ರತಿಷ್ಠಾಪನೆ



ನಾಡಹಬ್ಬ ದಸರಾ ಆಚರಣೆಗಾಗಿ ಭದ್ರಾವತಿ ನಗರಸಭೆ ವತಿಯಿಂದ ಕೆಲವು ವರ್ಷಗಳ ಹಿಂದೆ ಖರೀದಿಸಲಾಗಿದ್ದ ತಾಯಿ ಶ್ರೀ ಚಾಮುಂಡೇಶ್ವರಿ ದೇವಿ ಪ್ರತಿಮೆಯನ್ನು ಕೊನೆಗೂ ನಗರಸಭಾ ಆವರಣದಲ್ಲಿಯೇ ಪ್ರತಿಷ್ಠಾಪನೆ ಮಾಡಲಾಯಿತು.
    ಭದ್ರಾವತಿ, ಡಿ. ೩೧: ನಾಡಹಬ್ಬ ದಸರಾ ಆಚರಣೆಗಾಗಿ ನಗರಸಭೆ ವತಿಯಿಂದ ಕೆಲವು ವರ್ಷಗಳ ಹಿಂದೆ ಖರೀದಿಸಲಾಗಿದ್ದ ತಾಯಿ ಶ್ರೀ ಚಾಮುಂಡೇಶ್ವರಿ ದೇವಿ ಪ್ರತಿಮೆಯನ್ನು ಕೊನೆಗೂ ನಗರಸಭಾ ಆವರಣದಲ್ಲಿಯೇ ಪ್ರತಿಷ್ಠಾಪನೆ ಮಾಡಲಾಯಿತು.
    ಈ ಹಿಂದೆ ನಾಡಹಬ್ಬ ದಸರಾ ಆಚರಣೆಗಾಗಿ ತಾಯಿ ಶ್ರೀ ಚಾಮುಂಡೇಶ್ವರಿ ದೇವಿ ಪ್ರತಿಮೆಯನ್ನು ಬಾಡಿಗೆ ಆಧಾರದಲ್ಲಿ ಪಡೆಯಲಾಗುತ್ತಿತ್ತು. ಇದರಿಂದ ನಗರಸಭೆಗೆ ಹೆಚ್ಚಿನ ಹೊರೆ ಕಂಡು ಬರುತ್ತಿತ್ತು. ಈ ಹಿಂದಿನ ಪೌರಾಯುಕ್ತರಾಗಿದ್ದ ಮನೋಹರ್‌ರವರು ಸದಸ್ಯರ ಒತ್ತಾಯದ ಮೇರೆಗೆ ನಗರಸಭೆ ವತಿಯಿಂದ ಪ್ರತಿಮೆಯನ್ನು ಖರೀದಿಸಿದ್ದರು. ಆದರೆ ಪ್ರತಿಮೆ ಪ್ರತಿಷ್ಠಾಪಿಸಲು ಸೂಕ್ತ ಸ್ಥಳವಕಾಶವಿರಲಿಲ್ಲ. ಇದರಿಂದಾಗಿ ಕೆಲವು ದಿನಗಳವರೆಗೆ ಗ್ರಾಮ ದೇವತೆ ಹಳೇನಗರದ ಶ್ರೀ ಹಳದಮ್ಮ ದೇವಿ ದೇವಸ್ಥಾನದಲ್ಲಿ ಪ್ರತಿಮೆ ಇಡಲಾಗಿತ್ತು. ನಂತರ ದಿನಗಳಲ್ಲಿ ಪ್ರತಿಮೆಯನ್ನು ನಗರಸಭೆ ಆವರಣಕ್ಕೆ ಸ್ಥಳಾಂತರಿಸಿ ಸ್ಥಾಯಿ ಸಮಿತಿ ಅಧ್ಯಕ್ಷರ ಕೊಠಡಿಯಲ್ಲಿಯೇ ಇಡಲಾಗಿತ್ತು. ಇದೀಗ ಪ್ರತಿಮೆಗೆ ಪ್ರತ್ಯೇಕವಾಗಿ ಕೊಠಡಿ ನಿರ್ಮಿಸಿ ಶಾಶ್ವತ ನೆಲೆ ಕಲ್ಪಿಸಿಕೊಡಲಾಗಿದೆ.
    ಶುಕ್ರವಾರ ಪ್ರತಿಷ್ಠಾಪನೆ ಅಂಗವಾಗಿ ತಾಲೂಕು ಕಛೇರಿ ರಸ್ತೆಯಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಅರ್ಚಕ ಪವನ್‌ಕುಮಾರ್ ಉಡುಪ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು.
    ನಗರಸಭೆ ಅಧ್ಯಕ್ಷೆ ಗೀತಾರಾಜ್, ಉಪಾಧ್ಯಕ್ಷ ಚನ್ನಪ್ಪ, ಪೌರಾಯುಕ್ತ ಕೆ. ಪರಮೇಶ್, ಪೌರ ಕಾರ್ಮಿಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ನಗರಸಭಾ ಸದಸ್ಯರು, ಸಿಬ್ಬಂದಿಗಳು, ಪೌರಕಾರ್ಮಿಕರು, ರಮಾಕಾಂತ್, ನರಸಿಂಹಚಾರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಹೊರ ರಾಜ್ಯಗಳಿಂದ ಕದ್ದು ತಂದ ಮೊಬೈಲ್‌ಗಳ ಮಾರಾಟ : ಓರ್ವನ ಸೆರೆ


ಹೊರ ರಾಜ್ಯಗಳಿಂದ ಕದ್ದು ತಂದ ಮೊಬೈಲ್‌ಗಳನ್ನು ಮಾರಾಟ ಮಾಡುತ್ತಿದ್ದ ಅಡ್ಡೆಯೊಂದರ ಮೇಲೆ ಭದ್ರಾವತಿ ಹೊಸಮನೆ ಶಿವಾಜಿ ಸರ್ಕಲ್ ಠಾಣೆ ಪೊಲೀಸರು ದಾಳಿ ನಡೆಸಿದ್ದು, ಓರ್ವನನ್ನು ಬಂಧಿಸಿ ಕದ್ದ ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಒಟ್ಟು ೬,೬೮,೪೦೦ ರು. ಮೌಲ್ಯದ ವಿವಿಧ ಕಂಪನಿಗಳ ಒಟ್ಟು ೫೫ ಮೊಬೈಲ್‌ಗಳು ವಶ

     ಭದ್ರಾವತಿ, ಡಿ. ೩೧: ಹೊರ ರಾಜ್ಯಗಳಿಂದ ಕದ್ದು ತಂದ ಮೊಬೈಲ್‌ಗಳನ್ನು ಮಾರಾಟ ಮಾಡುತ್ತಿದ್ದ ಅಡ್ಡೆಯೊಂದರ ಮೇಲೆ ನಗರದ ಹೊಸಮನೆ ಶಿವಾಜಿ ಸರ್ಕಲ್ ಠಾಣೆ ಪೊಲೀಸರು ದಾಳಿ ನಡೆಸಿರುವ ಘಟನೆ ನಡೆದಿದೆ.
      ಅನ್ವರ್ ಕಾಲೋನಿ ನಿವಾಸಿ ಸಯ್ಯದ್ ಅಲ್ವಿ (೨೫) ಎಂಬ ಯುವಕನನ್ನು ಸೆರೆ ಹಿಡಿಯಲಾಗಿದ್ದು, ಒಟ್ಟು ೬,೬೮,೪೦೦ ರು. ಮೌಲ್ಯದ ವಿವಿಧ ಕಂಪನಿಗಳ ಒಟ್ಟು ೫೫ ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
      ಮಹಾರಾಷ್ಟ್ರದ ವಿವಿಧೆಡೆ ಮೊಬೈಲ್‌ಗಳನ್ನು ಕದ್ದು ತಂದು ನಗರದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಆಧಾರದ ಮೇರೆಗೆ ಹೊಸಮನೆ ಸಂತೆ ಮೈದಾನದಲ್ಲಿ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಮೂವರ ಪೈಕಿ ಇಬ್ಬರು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಪೊಲೀಸ್ ಉಪಾಧೀಕ್ಷಕ ಗಜಾನನ ಸುತಾರಾ ಮಾರ್ಗದರ್ಶನದಲ್ಲಿ ಠಾಣಾಧಿಕಾರಿ ಶಾಂತಲಾ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಮೌನೇಶ್, ಮಂಜುನಾಥ್, ರಾಜು, ಕಲ್ಲೇಶ್ ಉಪಸ್ಥಿತರಿದ್ದರು.


ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಶಾಸಕರಿಗೆ ಮನವಿ

ರಾಜ್ಯ ಸರ್ಕಾರಿ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಕೋರಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಭದ್ರಾವತಿಯಲ್ಲಿ ಶುಕ್ರವಾರ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಡಿ. ೩೧: ರಾಜ್ಯ ಸರ್ಕಾರಿ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಕೋರಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಶುಕ್ರವಾರ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಮನವಿ ಸಲ್ಲಿಸಲಾಯಿತು.
    ಮಧ್ಯಾಹ್ನ ೧ ಗಂಟೆಗೆ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿದ ಸರ್ಕಾರಿ ನೌಕರರು, ಕೇಂದ್ರ ಸರ್ಕಾರಿ ನೌಕರರಿಗೆ ಸರಿಸಮಾನವಾದ ವೇತನ ಹಾಗು ಭತ್ಯೆ ಜಾರಿಗೊಳಿಸುವುದು. ನೂತನ ಪಿಂಚಣಿ ಯೋಜನೆ ರದ್ದುಪಡಿಸಿ ಹಳೇ ಪಿಂಚಣಿ ಯೋಜನೆ ಜಾರಿಗೊಳಿಸುವುದು. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡುವುದು ಹಾಗೂ ಪ್ರಾಥಮಿಕ/ಪ್ರೌಢಶಾಲಾ ಶಿಕ್ಷಕರು ಮತ್ತು ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಲಾಯಿತು.
    ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಿದ್ದಬಸಪ್ಪ ನೇತೃತ್ವ ವಹಿಸಿದ್ದರು. ಸಂಘದ ಗೌರವಾಧ್ಯಕ್ಷ ಎ.ಜೆ ರಂಗನಾಥ ಪ್ರಸಾದ್, ಕಾರ್ಯದರ್ಶಿ ಡಿ.ಎಸ್ ರಾಜಪ್ಪ, ಉಪಾಧ್ಯಕ್ಷರಾದ ಎಂ.ಎಸ್ ಬಸವರಾಜ, ಆರ್. ಅಶೋಕ್‌ರಾವ್, ಸಿ. ಮಂಜಾನಾಯ್ಕ ಮತ್ತು ರಾಜ್‌ಕುಮಾರ್, ಜಂಟಿ ಕಾರ್ಯದರ್ಶಿಗಳಾದ ಎಂ. ಪುಟ್ಟಲಿಂಗಮೂರ್ತಿ, ಜೆ. ಕಾಂತರಾಜ್ ಮತ್ತು ಬಿ.ಆರ್ ದಿನೇಶ್‌ಕುಮಾರ್, ಸಂಘಟನಾ ಕಾರ್ಯದರ್ಶಿಗಳಾದ ಆರ್. ಜನಾರ್ಧನ, ಡಿ. ನಾಗರತ್ನ ಮತ್ತು ಎ. ರಂಗನಾಥ, ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಆರ್. ಶಿವಾಜಿರಾವ್ ಮತ್ತು ಕೃಷ್ಣ, ಕ್ರೀಡಾ ಕಾರ್ಯದರ್ಶಿಗಳಾದ ಶ್ರೀಕಾಂತ್ ಮತ್ತು ಜಾನ್ ನಿರ್ಮಲ್  ಹಾಗು ಆಂತರಿಕ ಲೆಕ್ಕ ಪರಿಶೋಧಕ ಎಚ್.ಎಂ ನಾಗರಾಜಪ್ಪ , ಯು. ಮಹಾದೇವಪ್ಪ, ಬಸವಂತರಾವ್‌ದಾಳೆ, ಎಸ್.ಕೆ ಮೋಹನ್, ರೇವಣಪ್ಪ, ಎ. ತಿಪ್ಪೇಸ್ವಾಮಿ, ಪ್ರಕಾಶ್, ಡಾ.ಜಿ.ಎಂ ನಟರಾಜ್, ಸಿ. ಜಯಪ್ಪ, ಡಾ. ಶಿವಪ್ರಸಾದ್ ಸೇರಿದಂತೆ ವಿವಿಧ ಇಲಾಖೆಗಳ ಸರ್ಕಾರಿ ನೌಕರರು ಪಾಲ್ಗೊಂಡಿದ್ದರು.