ಸೋಮವಾರ, ಜನವರಿ 31, 2022

ಫೆ.೪ರಂದು ಬಜೆಟ್ ಪೂರ್ವಭಾವಿ ಸಭೆ

    ಭದ್ರಾವತಿ, ಜ. ೩೧: ನಗರಸಭೆ ಬಜೆಟ್ ಪೂರ್ವಭಾವಿ ಸಭೆ ಫೆ.೪ರಂದು ಬೆಳಿಗ್ಗೆ ೧೧ ಗಂಟೆಗೆ ನಗರಸಭೆ ಸಭಾಂಗಣದಲ್ಲಿ ನಡೆಯಲಿದ್ದು, ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ.
    ಈ ಬಾರಿ ಬಜೆಟ್ ಯಶಸ್ವಿಗೊಳಿಸುವ ನಿಟ್ಟಿನಲ್ಲಿ  ನೀಡಲು ಸಭೆಯಲ್ಲಿ ನಗರದ ಹಿರಿಯ ನಾಗರೀಕರು, ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರು ಸಭೆಯಲ್ಲಿ ಪಾಲ್ಗೊಂಡು ಸೂಕ್ತ ಸಲಹೆ-ಸೂಚನ-ಸಹಕಾರ ನೀಡುವಂತೆ ನಗರಸಭೆ ಪೌರಾಯುಕ್ತ ಕೆ. ಪರಮೇಶ್ ಕೋರಿದ್ದಾರೆ.

ಅಕ್ರಮವಾಗಿ ಪಡಿತರ ಅಕ್ಕಿ ಮಾರಾಟಕ್ಕೆ ಯತ್ನ : ತಹಸೀಲ್ದಾರ್ ನೇತೃತ್ವ ತಂಡ ದಾಳಿ

ಬುಲೆರೋ ವಾಹನ, ೩೦ ಚೀಲ ಅಕ್ಕಿ ವಶ : ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು


ಭದ್ರಾವತಿ ಸಿದ್ದಾಪುರ ತಾಂಡದಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ತಹಸೀಲ್ದಾರ್ ಪ್ರದೀಪ್ ಆರ್. ನಿಕ್ಕಮ್ ಮತ್ತು ನಗರ ಆಹಾರ ನಿರೀಕ್ಷಕ ಎ.ಟಿ ಬಸವರಾಜ ನೇತೃತ್ವದ ತಂಡ ದಾಳಿ ನಡೆಸಿರುವುದು.
    ಭದ್ರಾವತಿ, ಜ. ೩೧: ನಗರಸಭೆ ವ್ಯಾಪ್ತಿಯ ಸಿದ್ದಾಪುರ ತಾಂಡದಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ದಾಸ್ತುನು ಮಾಡಿ ಮಾರಾಟಕ್ಕೆ ಯತ್ನಿಸುತ್ತಿದ್ದಾಗ ಗ್ರಾಮಸ್ಥರು ತಡೆದು ಪ್ರತಿಭಟನೆ ನಡೆಸಿರುವ ಘಟನೆ ಸೋಮವಾರ ನಡೆದಿದೆ.
    ನ್ಯಾಯಬೆಲೆ ಅಂಗಡಿ ಮಾಲೀಕ ಯೋಗೇಶ್‌ನಾಯ್ಕ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ನಂತರ ಬೇರೆ ಚೀಲಗಳಿಗೆ ತುಂಬಿ ಮಾರಾಟ ಮಾಡಲು ಯತ್ನಿಸುತ್ತಿದ್ದಾನೆಂಬ ದೂರು ಗ್ರಾಮಸ್ಥರಿಂದ ಬಂದ ಹಿನ್ನಲೆಯಲ್ಲಿ ಸ್ಥಳಕ್ಕೆ ತಹಸೀಲ್ದಾರ್ ಪ್ರದೀಪ್ ಆರ್ ನಿಕ್ಕಮ್ ಮತ್ತು ನಗರ ಆಹಾರ ನಿರೀಕ್ಷಕ ಎ.ಟಿ ಬಸವರಾಜ ನೇತೃತ್ವದ ತಂಡ ದಾಳಿ ನಡೆಸಿದೆ.


    ದಾಳಿ ನಡೆಸಿದ ಸಂದರ್ಭದಲ್ಲಿ ನ್ಯಾಯಬೆಲೆ ಅಂಗಡಿಯಲ್ಲಿ ಒಟ್ಟು ೨೪೮ ಚೀಲ ಅಕ್ಕಿ ಹಾಗು ಅಂಗಡಿ ಮಾಲೀಕ ಯೋಗೇಶ್‌ನಾಯ್ಕ ಮನೆಯಲ್ಲಿ ದಾಸ್ತಾನು ಮಾಡಲಾಗಿದ್ದ ೧೩೬ ಚೀಲ ಅಕ್ಕಿ ಮತ್ತು ಅಕ್ರಮವಾಗಿ ಮಾರಾಟ ಮಾಡಲು ಬುಲೆರೋ ವಾಹನದಲ್ಲಿ ತುಂಬಲಾಗಿದ್ದ ಸುಮಾರು ೩೦ ಚೀಲ ಅಕ್ಕಿ ಪತ್ತೆಯಾಗಿದೆ. ಈ ತಿಂಗಳು ನ್ಯಾಯಬೆಲೆ ಅಂಗಡಿಗೆ ಪಡಿತರ ಚೀಟಿದಾರರಿಗೆ ವಿತರಣೆ ಮಾಡಲು ೧೫೮ ಕ್ವಿಂಟಲ್ ೮೭ ಕೆ.ಜಿ ಅಕ್ಕಿ ( ೫೦ ಕೆ.ಜಿ ತೂಕದ ಒಟ್ಟು ೩೧೮ ಚೀಲ) ಕೆಎಫ್‌ಸಿಎಸ್‌ಸಿ ಗೋದಾಮಿನಿಂದ ಸರಬರಾಜು ಮಾಡಲಾಗಿದೆ. ಜನವರಿ ತಿಂಗಳಿನಲ್ಲಿ ವಿತರಣೆಯಾಗಿ ಉಳಿದಿರುವ ಅಕ್ಕಿ ಮತ್ತು ಸರಬರಾಜು ಮಾಡಲಾಗಿರುವ ಅಕ್ಕಿ ಎರಡನ್ನು ಒಟ್ಟು ಗೂಡಿಸಿ ಲೆಕ್ಕ ಹಾಕಿದಾಗ ವ್ಯತ್ಯಸ ಕಂಡು ಬಂದಿದೆ. ಈ ಹಿನ್ನಲೆಯಲ್ಲಿ ನಗರ ಆಹಾರ ನಿರೀಕ್ಷಕ ಎ.ಟಿ ಬಸವರಾಜ ನ್ಯೂಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
    ದೂರಿನ ಆಧಾರದ ಮೇರೆಗೆ ಪೊಲೀಸರು ಅಕ್ಕಿ ಸಾಗಾಣಿಕೆಗೆ ಬಳಸಿದ್ದ ಬುಲೇರೋ ವಾಹನ ಮತ್ತು ವಾಹನದಲ್ಲಿ ಅಕ್ರಮ ತುಂಬಲಾಗಿದ್ದ ೩೦ ಚೀಲ ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ. ಅಂಗಡಿ ಮಾಲೀಕ ಯೋಗೇಶ್‌ನಾಯ್ಕ ಮತ್ತು ಬುಲೇರೋ ವಾಹನ ಚಾಲಕ ತಲೆ ಮರೆಸಿಕೊಂಡಿದ್ದು, ಅಂಗಡಿ ಮಾಲೀಕ ಯೋಗೇಶ್‌ನಾಯ್ಕ ಸಹೋದರನನ್ನು ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

ಎಂಪಿಎಂ ಬಡಾವಣೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಳ : ಮಹಿಳೆ ಮೇಲೆ ಹಲ್ಲೆ


ಭದ್ರಾವತಿ ಆನೇಕೊಪ್ಪ ಎಂಪಿಎಂ ಬಡಾವಣೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಮಹಿಳೆಯೊಬ್ಬರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿರುವ ಘಟನೆ ಭಾನುವಾರ ನಡೆದಿದೆ.
    ಭದ್ರಾವತಿ, ಜ. ೩೧: ನಗರದ ಆನೇಕೊಪ್ಪ ಎಂಪಿಎಂ ಬಡಾವಣೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಮಹಿಳೆಯೊಬ್ಬರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿರುವ ಘಟನೆ ಭಾನುವಾರ ನಡೆದಿದೆ.
    ಎಂಪಿಎಂ ಬಡಾವಣೆಯಲ್ಲಿ ಕೆಲಸ ಮಾಡಲು ಬಂದಿದ್ದ ಮಹಿಳೆಯ ಮೇಲೆ ಏಕಾಏಕಿ ದಾಳಿ ನಡೆಸಿರುವ ನಾಯಿಗಳು ಮಹಿಳೆಯ ಮುಖ ವಿರೂಪಗೊಳಿಸಿವೆ. ಈ ಭಾಗದಲ್ಲಿ ಸುಮಾರು ೧೦೦ಕ್ಕೂ ಹೆಚ್ಚು ಬೀದಿ ನಾಯಿಗಳಿದ್ದು, ಜನರು ಒಬ್ಬಂಟಿಯಾಗಿ ತಿರುಗಾಡದಂತಹ ವಾತಾವರಣ ನಿರ್ಮಾಣವಾಗಿದೆ.
    ಎಂಪಿಎಂ ಕಾರ್ಖಾನೆ ಸ್ಥಗಿತಗೊಂಡು ಕಾರ್ಮಿಕರ ಸಾವಿರಾರು ವಸತಿ ಗೃಹಗಳು ಪಾಳುಬಿದ್ದಿದ್ದು, ಇದರ ಜೊತೆಗೆ ಈ ಭಾಗದಲ್ಲಿ ಹೊರಭಾಗದಿಂದ ಕೋಳಿ, ಕುರಿ ಮಾಂಸದಂಗಡಿಗಳ ತ್ಯಾಜ್ಯಗಳನ್ನು ತಂದು ಸುರಿಯಲಾಗುತ್ತಿದ್ದು, ಇದರಿಂದಾಗಿ ನಾಯಿಗಳು ಈ ಭಾಗದಲ್ಲಿಯೇ ವಾಸದ ನೆಲೆಗಳನ್ನು ರೂಪಿಸಿಕೊಂಡಿವೆ. ನಾಯಿಗಳ ಸಂತತಿ ಏರಿಕೆಯಾಗುತ್ತಿದ್ದು, ಈ ಬಗ್ಗೆ ಯಾರು ಸಹ ತಲೆ ಕೆಡಿಸಿಕೊಳ್ಳುತ್ತಿಲ್ಲ. ನಗರಸಭೆ ಆಡಳಿತ ತಕ್ಷಣ ಕಾರ್ಯಾಚರಣೆ ನಡೆಸಿ ನಾಯಿಗಳನ್ನು ಹಿಡಿದು ಬೇರೆಡೆಗೆ ಸ್ಥಳಾಂತರಿಸಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಎಲ್ಲಾ ಕ್ಷೇತ್ರಗಳಲ್ಲೂ ಉದ್ಯೋಗ ಸೃಷ್ಟಿ : ಆರ್. ಕರುಣಾಮೂರ್ತಿ

    ಭದ್ರಾವತಿ, ಜ. ೩೧: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಎಲ್ಲಾ ಕ್ಷೇತ್ರಗಳಲ್ಲೂ ಉದ್ಯೋಗ ಸೃಷ್ಟಿಸಿ ಕೊಡುವ ಮೂಲಕ ಸ್ವಾವಲಂಬಿ ಬದುಕು ರೂಪಿಸಿಕೊಡಲಾಗುತ್ತಿದೆ. ಈ ನಿಟ್ಟಿನಲ್ಲಿ ಇದೀಗ ಗ್ರಾಹಕ ಸೇವಾ ಕೇಂದ್ರ ಸಹ ಆರಂಭಗೊಂಡಿದ್ದು, ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ, ನಗರಸಭೆ ಮಾಜಿ ಅಧ್ಯಕ್ಷ ಆರ್. ಕರುಣಾಮೂರ್ತಿ ಹೇಳಿದರು.
    ಅವರು ಸೋಮವಾರ ಹಳೇನಗರದ ಭೂತನಗುಡಿ ಶ್ರೀ ಕೃಷ್ಣರುಕ್ಮಿಣಿ ದೇವಸ್ಥಾನದ ಸಮೀಪ ಯೋಜನೆ ವತಿಯಿಂದ ನೂತನವಾಗಿ ಆರಂಭಿಸಲಾಗಿರುವ ಗ್ರಾಹಕ ಸೇವಾ ಕೇಂದ್ರ ಉದ್ಘಾಟನಾ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.
ಸರ್ಕಾರ ಕೈಗೊಳ್ಳಬೇಕಾಗಿರುವ ಯೋಜನೆಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಕೈಗೊಳ್ಳಲಾಗುತ್ತಿದೆ. ಆ ಮೂಲಕ ಪ್ರತಿಯೊಬ್ಬರು ಸ್ವಾವಲಂಬಿಗಳಾಗಿ ಬದುಕುವ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ. ಕೃಷಿ, ತೋಟಗಾರಿಕೆ, ಹೈನುಗಾರಿಕೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಯೋಜನೆ ವತಿಯಿಂದ ಉದ್ಯೋಗ ಸೃಷ್ಟಿಸಿಕೊಡಲಾಗುತ್ತಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗಡೆಯವರ ಭವಿಷ್ಯದ ಅಲೋಚನೆಗಳು ಅದ್ಭುತವಾಗಿವೆ. ಯಾವುದೇ ಧರ್ಮ, ಜಾತಿಗೆ ಮೀಸಲಾಗಿರದೆ ಎಲ್ಲರ ಅಭಿವೃದ್ಧಿಗೆ ಯೋಜನೆ ಮೂಲಕ ಒತ್ತು ನೀಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರು ಈ ಗ್ರಾಹಕ ಸೇವಾ ಕೇಂದ್ರದ ಸದುಪಯೋಗಪಡೆದುಕೊಳ್ಳಬೇಕೆಂದರು.
    ಸೇವಾ ಕೇಂದ್ರವನ್ನು ಈ ಭಾಗದ ನಗರಸಭಾ ಸದಸ್ಯೆ ಅನುಸುಧಾ ಮೋಹನ್ ಉದ್ಘಾಟಿಸಿ, ಶುಭ ಹಾರೈಸಿದರು. ಯೋಜನೆಯ ಪ್ರಮುಖರಾದ ವಿ.ಎನ್ ಪ್ರಶಾಂತ್ ಹಾಗು ಸೇವಾ ಪ್ರತಿನಿಧಿಗಳು, ಒಕ್ಕೂಟದ ಮಹಿಳಾ ಪ್ರಮುಖರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.



ಭದ್ರಾವತಿ ಹಳೇನಗರದ ಭೂತನಗುಡಿ ಶ್ರೀ ಕೃಷ್ಣರುಕ್ಮಿಣಿ ದೇವಸ್ಥಾನದ ಸಮೀಪ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನೂತನವಾಗಿ ಆರಂಭಿಸಲಾಗಿರುವ ಗ್ರಾಹಕ ಸೇವಾ ಕೇಂದ್ರ ಸೋಮವಾರ ನಗರಸಭಾ ಸದಸ್ಯೆ ಅನುಸುಧಾ ಮೋಹನ್ ಉದ್ಘಾಟಿಸಿದರು.

ಭಾನುವಾರ, ಜನವರಿ 30, 2022

ಉಪ ವಲಯ ಅರಣ್ಯಾಧಿಕಾರಿಗಳು, ಮೋಜಣಿದಾರರ ಸಂಘದಿಂದ ದಿನಚರಿ ಬಿಡುಗಡೆ

ಭದ್ರಾವತಿ ನ್ಯೂಟೌನ್ ಲಯನ್ಸ್ ಕ್ಲಬ್ ಶುಗರ್ ಟೌನ್ ಕಣ್ಣಿನ ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಉಪ ವಲಯ ಅರಣ್ಯಾಧಿಕಾರಿಗಳು ಮತ್ತು ಮೋಜಣಿದಾರರ ಸಂಘದ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿ ಸಹ ೨೦೨೨ನೇ ಸಾಲಿನ ದಿನಚರಿ ಬಿಡುಗಡೆಗೊಳಿಸಲಾಯಿತು.
    ಭದ್ರಾವತಿ, ಜ. ೩೦: ಕರ್ನಾಟಕ ರಾಜ್ಯ ಉಪ ವಲಯ ಅರಣ್ಯಾಧಿಕಾರಿಗಳು ಮತ್ತು ಮೋಜಣಿದಾರರ ಸಂಘದ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿ ಸಹ ೨೦೨೨ನೇ ಸಾಲಿನ ದಿನಚರಿ ಬಿಡುಗಡೆಗೊಳಿಸಲಾಯಿತು.
    ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಂ ಗಾಮನಗಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಭದ್ರಾವತಿ ಅರಣ್ಯ ವಿಭಾಗದ ವ್ಯವಸ್ಥಾಪಕ ಬಸವರಾಜ ಬಿ. ಹೊನ್ನಾರೆಡ್ಡಿ, ಚನ್ನಗಿರಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ವಿ ಸುಬ್ರಹ್ಮಣ್ಯ, ಉಂಬ್ಳೆಬೈಲು ವಲಯ ಅರಣ್ಯಾಧಿಕಾರಿ ಆರ್.ಟಿ ಮಂಜುನಾಥ್, ಅಜ್ಜಂಪುರ ವಲಯ ಅರಣ್ಯಾಧಿಕಾರಿ ಮಹೇಶ್‌ನಾಯ್ಕ್, ಅರಣ್ಯ ಸಂಚಾರಿದಳದ ವಲಯ ಅರಣ್ಯಾಧಿಕಾರಿ ಮಂಜುನಾಥ್ ಮೇಗಳಮನಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆ ಅಧ್ಯಕ್ಷ ಬಿ. ಸಿದ್ದಬಸಪ್ಪ, ಜಂಟಿ ಕಾರ್ಯದರ್ಶಿ ಬಿ.ಆರ್ ದಿನೇಶ್‌ಕುಮಾರ್, ರಾಜ್ಯ ಅರಣ್ಯ ರಕ್ಷಕರು ಮತ್ತು ವೀಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಚ್. ರಶೀದ್ ಬೇಗ್ ಮತ್ತು ಕ್ಷೇಮಾಭಿವೃದ್ಧಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಂ.ಡಿ ಹರೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ರಾಜ್ಯ ಉಪ ವಲಯ ಅರಣ್ಯಾಧಿಕಾರಿಗಳು ಮತ್ತು ಮೋಜಣಿದಾರರ ಸಂಘದ ಗೌರವಾಧ್ಯಕ್ಷ ಎಂ. ವಿಜೇಂದ್ರ ಅಧ್ಯಕ್ಷತೆ ವಹಿಸಿದ್ದರು.

ರೈತ ಮುಖಂಡ ಟಿ. ಮಂಜಪ್ಪ ನಿಧನ

ಟಿ. ಮಂಜಪ್ಪ
    ಭದ್ರಾವತಿ, ಜ. ೩೦: ಜೇಡಿಕಟ್ಟೆ ಗ್ರಾಮದ ಹಿರಿಯ ರೈತ ಮುಖಂಡ, ಶ್ರೀ ಮರುಳ ಸಿದ್ದೇಶ್ವರ ಜನ ಕಲ್ಯಾಣ ಟ್ರಸ್ಟ್ ಗೌರವ ಸಲಹೆಗಾರ ಟಿ. ಮಂಜಪ್ಪ ಶನಿವಾರ ನಿಧನ ಹೊಂದಿದರು.
    ಮೂವರು ಗಂಡು, ಇಬ್ಬರು ಹೆಣ್ಣು ಮಕ್ಕಳನ್ನು ಹೊಂದಿದ್ದರು. ಮಂಜಪ್ಪ ಅವರು ಸಾಮಾಜಿಕ ಹೋರಾಟಗಾರರಾಗಿ ಸಹ ಗುರುತಿಸಿಕೊಂಡಿದ್ದರು. ಇವರ ನಿಧನಕ್ಕೆ ಬಿಳಿಕಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಮರುಳ ಸಿದ್ದೇಶ್ವರ ಜನ ಕಲ್ಯಾಣ ಟ್ರಸ್ಟ್ ಅಧ್ಯಕ್ಷ ಸಿದ್ದಲಿಂಗಯ್ಯ ಹಾಗು ಪದಾಧಿಕಾರಿಗಳು, ಶಾಸಕ ಬಿ.ಕೆ ಸಂಗಮೇಶ್ವರ್, ನಗರಸಭಾ ಸದಸ್ಯೆ ರೇಖಾ ಪ್ರಕಾಶ್, ಮಾಜಿ ಸದಸ್ಯರಾದ ಕೆ.ಬಿ ಗಂಗಾಧರ್, ಎಂ.ಎ ಅಜಿತ್ ಸೇರಿದಂತೆ ಇನ್ನಿತರರ ಗಣ್ಯರು ಸಂತಾಪ ಸೂಚಿಸಿದ್ದಾರೆ.  

ರೋಜ್ಗಾರ್ ದಿನಾಚರಣೆ : ನರೇಗಾ ಕೂಲಿ ಕಾರ್ಮಿಕರಿಗೆ ಮಾಹಿತಿ ಕಾರ್ಯಕ್ರಮ

ಭದ್ರಾವತಿ ತಾಲೂಕಿನ ಅರಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆ(ನರೇಗಾ)ಯಡಿ ದುಡಿಯುತ್ತಿರುವ ಕೂಲಿ ಕಾರ್ಮಿಕರಿಗೆ ವಿಶೇಷ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಜ. ೩೦: ತಾಲೂಕಿನ ಅರಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆ(ನರೇಗಾ)ಯಡಿ ದುಡಿಯುತ್ತಿರುವ ಕೂಲಿ ಕಾರ್ಮಿಕರಿಗೆ ವಿಶೇಷ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ರೋಜ್ಗಾರ್ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೆಶ್ ಕಾರ್ಮಿಕರಿಗೆ ಮಾಹಿತಿ ನೀಡಿದರು.
    ಉದ್ಯೋಗ ಖಾತ್ರಿ ಫಲಾನುಭವಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು ಕೊರೋನಾ ಸಂದರ್ಭದಲ್ಲಿ ಎದುರಾದ ಸಂಕಷ್ಟಗಳಿಂದ ಹೊರಬರಲು ನರೇಗಾ ಯೋಜನೆ ಹೆಚ್ಚು ಸಹಕಾರಿಯಾಗುವ ಜೊತೆಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ಸಹ ನಡೆದಿವೆ ಎಂದರು.
    ಕಾರ್ಯಕ್ರಮದಲ್ಲಿ ಕರಪತ್ರಗಳನ್ನು ವಿತರಿಸಿ ಹಿರಿಯ ನಾಗರೀಕರ ಸಹಾಯವಾಣಿ ಕುರಿತು ಮಾಹಿತಿ ನೀಡಲಾಯಿತು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಚ್. ಸುರೇಶ್, ಎಸ್‌ಡಿಎ ಭಾಸ್ಕರ್, ಡಿಇಓ ಬೈರೇಶ್ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.