ಅಕ್ರಮವಾಗಿ ಪಡಿತರ ಮಾರಾಟಕ್ಕೆ ಯತ್ನಿಸಿ ಸಿಕ್ಕಿ ಬಿದ್ದಿರುವ ಮಾಲೀಕನ ಪರವಾನಗಿ ರದ್ದುಪಡಿಸಿ
ಭದ್ರಾವತಿ ತಾಲೂಕಿನ ನ್ಯಾಯಬೆಲೆ ಅಂಗಡಿಗಳಲ್ಲಿ ನಿಗದಿತ ದಿನಾಂಕ ಹಾಗು ವೇಳೆಯಲ್ಲಿ ಪಡಿತರ ವಿತರಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಆಮ್ ಆದ್ಮಿ ಪಾರ್ಟಿ ವತಿಯಿಂದ ಗುರುವಾರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ಫೆ. ೩: ತಾಲೂಕಿನ ನ್ಯಾಯಬೆಲೆ ಅಂಗಡಿಗಳಲ್ಲಿ ನಿಗದಿತ ದಿನಾಂಕ ಹಾಗು ವೇಳೆಯಲ್ಲಿ ಪಡಿತರ ವಿತರಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಆಮ್ ಆದ್ಮಿ ಪಾರ್ಟಿ ವತಿಯಿಂದ ಗುರುವಾರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
ಕಳೆದ ಕೆಲವು ದಿನಗಳ ಹಿಂದೆ ನಗರಸಭೆ ವ್ಯಾಪ್ತಿಯ ಸಿದ್ದಾಪುರ ತಾಂಡದ ನ್ಯಾಯಬೆಲೆ ಅಂಗಡಿಯೊಂದರಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿ ಮಾರಾಟಕ್ಕೆ ಯತ್ನಿಸುತ್ತಿದ್ದಾಗ ದಾಳಿ ನಡೆಸಿ ವಶಪಡಿಸಿಕೊಂಡಿರುವುದಕ್ಕೆ ಕ್ಷೇತ್ರದ ನಾಗರೀಕರ ಪರವಾಗಿ ಪಕ್ಷ ತಹಸೀಲ್ದಾರ್ ಪ್ರದೀಪ್ ಆರ್ ನಿಕ್ಕಮ್ ಅವರನ್ನು ಅಭಿನಂದಿಸುವ ಜೊತೆಗೆ ಕ್ಷೇತ್ರದಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ನಿಗದಿತ ದಿನಾಂಕ ಹಾಗು ವೇಳೆಯಲ್ಲಿ ಪಡಿತರ ವಿತರಿಸುತ್ತಿಲ್ಲ. ಇದರಿಂದಾಗಿ ನಾಗರೀಕರು ಪಡಿತರ ಪಡೆಯಲು ತೊಂದರೆ ಅನುಭವಿಸುವಂತಾಗಿದೆ. ವಿತರಕರು ನಿಗದಿಪಡಿಸುವ ದಿನಾಂಕ ಹಾಗು ವೇಳೆ ಎದುರು ನೋಡುವಂತೆ ಮತ್ತು ದಿನವಿಡೀ ಸರದಿ ಸಾಲಿನಲ್ಲಿ ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನಲೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.
ಪಕ್ಷದ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್, ತಾಲೂಕು ಸಂಚಾಲಕ ಅಬ್ದುಲ್ ಖದೀರ್ ಮತ್ತು ಜಿಲ್ಲಾ ಮುಖಂಡ ಡಿ.ಎಸ್ ಪರಮೇಶ್ವರಚಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಅಂಗಡಿ ಮಾಲೀಕನ ಪರವಾನಗಿ ರದ್ದು ಮಾಡಿ:
ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಿಸಿ ಮಾರಾಟಕ್ಕೆ ಯತ್ನಿಸಿ ಸಿಕ್ಕಿ ಬಿದ್ದಿರುವ ಸಿದ್ದಾಪುರ ತಾಂಡದ ನ್ಯಾಯಬೆಲೆ ಅಂಗಡಿ ಮಾಲೀಕನ ಪರವಾನಗಿ ತಕ್ಷಣ ರದ್ದುಪಡಿಸುವಂತೆ ಆಗ್ರಹಿಸಿ ಜನತಾದಳ(ಸಂಯುಕ್ತ) ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್ ಗೌಡ ಗುರುವಾರ ತಾಲೂಕು ಕಛೇರಿ ಮಿನಿವಿಧಾನಸೌಧದ ಮುಂಭಾಗ ಹೋರಾಟ ನಡೆಸಿ ತಹಸೀಲ್ದಾರ್ ಮೂಲಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದರು.
ಅಕ್ರಮವಾಗಿ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಲಾಗಿದ್ದ ಅಕ್ಕಿಯನ್ನು ಬುಲೆರೋ ವಾಹನದಲ್ಲಿ ಸಾಗಿಸಲು ಯತ್ನಿಸಿ ಸ್ಥಳೀಯರ ಎದುರು ಸಿಕ್ಕಿಬಿದ್ದಿದ್ದು, ಅಲ್ಲದೆ ನ್ಯಾಯಬೆಲೆ ಅಂಗಡಿ ಮಾಲೀಕ ಯೋಗೇಶ್ ನಾಯ್ಕ ಮತ್ತು ಬುಲೆರೋ ವಾಹನದ ಚಾಲಕ ಪರಾರಿಯಾಗಿದ್ದಾರೆ. ಈ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ. ಇವೆಲ್ಲವನ್ನು ಗಮನಿಸಿದಾಗ ಪಡಿತರ ಚೀಟಿದಾರರಿಗೆ ಉದ್ದೇಶ ಪೂರ್ವಕವಾಗಿ ವಂಚಿಸಿರುವುದು ಕಂಡು ಬರುತ್ತಿದೆ. ಈ ಹಿನ್ನಲೆಯಲ್ಲಿ ತಕ್ಷಣ ಅಂಗಡಿ ಮಾಲೀಕನ ಪರವಾನಗಿ ರದ್ದುಪಡಿಸುವಂತೆ ಆಗ್ರಹಿಸಿದ್ದಾರೆ. ಗ್ರಾಮಸ್ಥರಾದ ರಮೇಶ್, ಮಂಜುನಾಥ್ ಮತ್ತು ನಾಗರಾಜ್ ಉಪಸ್ಥಿತರಿದ್ದರು.
ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಿಸಿ ಮಾರಾಟಕ್ಕೆ ಯತ್ನಿಸಿ ಸಿಕ್ಕಿ ಬಿದ್ದಿರುವ ಭದ್ರಾವತಿ ಸಿದ್ದಾಪುರ ತಾಂಡದ ನ್ಯಾಯಬೆಲೆ ಅಂಗಡಿ ಮಾಲೀಕನ ಪರವಾನಗಿ ತಕ್ಷಣ ರದ್ದುಪಡಿಸುವಂತೆ ಆಗ್ರಹಿಸಿ ಜನತಾದಳ(ಸಂಯುಕ್ತ) ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್ ಗೌಡ ಗುರುವಾರ ತಾಲೂಕು ಕಛೇರಿ ಮಿನಿವಿಧಾನಸೌಧದ ಮುಂಭಾಗ ಹೋರಾಟ ನಡೆಸಿ ತಹಸೀಲ್ದಾರ್ ಮೂಲಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದರು.