Thursday, February 17, 2022

ಪ್ರತಿಭಟನೆಗೆ ಮುಂದಾದ ವಿದ್ಯಾರ್ಥಿನಿಯರ ಮನವೊಲಿಕೆ : ತರಗತಿಗಳಿಗೆ ಹಾಜರು

ನ್ಯಾಯಾಲಯದ ತೀರ್ಪು ಬರುವವರೆಗೂ ತರಗತಿಗಳಿಗೆ ಹಾಜರಾಗುವುದಿಲ್ಲ


ಭದ್ರಾವತಿ ಹಳೇನಗರದ ಸಂಚಿ ಹೊನ್ನಮ್ಮ ಸರ್ಕಾರಿ ಬಾಲಕಿಯರ ಕಾಲೇಜಿನ ಪ್ರೌಢಶಾಲಾ ವಿಭಾಗದ ಹಿಜಾಬ್ ಧರಿಸಿಕೊಂಡು ಬಂದ ವಿದ್ಯಾರ್ಥಿನಿಯರು ಗುರುವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮುಂಭಾಗ ಪ್ರತಿಭಟನೆಗೆ ಮುಂದಾದ ಘಟನೆ ನಡೆದಿದೆ.

    ಭದ್ರಾವತಿ, ಫೆ. ೧೭: ಹಳೇನಗರದ ಸಂಚಿ ಹೊನ್ನಮ್ಮ ಸರ್ಕಾರಿ ಬಾಲಕಿಯರ ಕಾಲೇಜಿನ ಪ್ರೌಢಶಾಲಾ ವಿಭಾಗದ ಹಿಜಾಬ್ ಧರಿಸಿಕೊಂಡು ಬಂದ ವಿದ್ಯಾರ್ಥಿನಿಯರು ಗುರುವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮುಂಭಾಗ ಪ್ರತಿಭಟನೆಗೆ ಮುಂದಾದ ಘಟನೆ ನಡೆದಿದೆ.
    ಬುಧವಾರ ಹಿಜಾಬ್ ಧರಿಸಿಕೊಂಡು ಕಾಲೇಜಿಗೆ ಬಂದಿದ್ದ ವಿದ್ಯಾರ್ಥಿನಿಯರಿಗೆ ತಹಸೀಲ್ದಾರ್ ಹಾಗು ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪ್ರಾಂಶುಪಾಲರು, ಉಪ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ನ್ಯಾಯಾಲಯದ ಆದೇಶ ಹಾಗು ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸುವ ಜೊತೆಗೆ ಹಿಜಾಬ್ ಧರಿಸದೆ ತರಗತಿಗಳಿಗೆ ಹಾಜರಾಗುವಂತೆ ಮನವೊಲಿಕೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಆದರೆ ಕಾಲೇಜು ವಿಭಾಗದ ವಿದ್ಯಾರ್ಥಿನಿಯರು ತರಗತಿಗಳಿಗೆ ಹಾಜರಾಗದೆ ಮನೆಗಳಿಗೆ ಹಿಂದಿರುಗಿದ್ದರು. ಈ ನಡುವೆ ಗುರುವಾರ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿಯರು ಪುನಃ ಹಿಜಾಬ್ ಧರಿಸಿಕೊಂಡು ಬಂದಿದ್ದು, ಈ ಹಿನ್ನಲೆಯಲ್ಲಿ ಈ ವಿದ್ಯಾರ್ಥಿನಿಯರನ್ನು ಶಾಲಾ ಮುಂಭಾಗದಲ್ಲಿಯೇ ತಡೆಯಲಾಗಿತ್ತು. ಈ ಹಿನ್ನಲೆಯಲ್ಲಿ ಈ ವಿದ್ಯಾರ್ಥಿನಿಯರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ತೆರಳಿ ಪ್ರತಿಭಟನೆಗೆ ಮುಂದಾದರು.
    ಮಾಹಿತಿ ತಿಳಿದು ತಕ್ಷಣ ಸ್ಥಳಕ್ಕೆ ಆಗಮಿಸಿದ ಅಂಜುಮಾನ್ ಇಸ್ಲಾವುಲ್ ಮುಸ್ಲಿಮೀನ್ ಅಧ್ಯಕ್ಷ ಮುರ್ತುಜಾ ಖಾನ್, ಪ್ರಸ್ತುತ ನ್ಯಾಯಾಲಯದ ಆದೇಶ ಹಾಗು ಸರ್ಕಾರದ ನಿಯಮಗಳನ್ನು ಪಾಲಿಸುವುದು ಅನಿವಾರ್ಯವಾಗಿದ್ದು, ಈ ಹಿನ್ನಲೆಯಲ್ಲಿ ವಿದ್ಯಾರ್ಥಿನಿಯರು ಇದಕ್ಕೆ ಪೂರಕವಾಗಿ ಸ್ಪಂದಿಸಿ ತರಗತಿಗಳಿಗೆ ಹಾಜರಾಗುವಂತೆ ಮನವಿ ಮಾಡಿದರು. ಅಲ್ಲದೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗು ಕಛೇರಿ ಸಿಬ್ಬಂದಿಗಳು ಸಹ ವಿದ್ಯಾರ್ಥಿನಿಯರಿಗೆ ಸೂಕ್ತ ತಿಳುವಳಿಕೆ ನೀಡಿದರು. ಈ ಹಿನ್ನಲೆಯಲ್ಲಿ ವಿದ್ಯಾರ್ಥಿನಿಯರು  ಮೂಲಕ ಮನವೊಲಿಸಿ ತರಗತಿಗಳಿಗೆ ಹಾಜರಾದರು.
    ಮನವೊಲಿಕೆ ವಿಫಲ : ಹಿಜಾಬ್ ಮೊದಲು, ನಂತರ ಶಿಕ್ಷಣ
    ನಗರದ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಾಲೇಜಿನಲ್ಲಿ ಕೆಲವು ದಿನಗಳವರೆಗೆ ತಣ್ಣಗಾಗಿದ್ದ ಹಿಜಾಬ್ ವಿವಾದ ಗುರುವಾರ ಪುನಃ ಕಾಣಿಸಿಕೊಂಡಿದೆ. ನಗರದಲ್ಲಿ ಮೊದಲ ಬಾರಿಗೆ ಹಿಜಾಬ್ ವಿವಾದ ಈ ಕಾಲೇಜಿನಿಂದಲೇ ಆರಂಭಗೊಂಡಿದ್ದು, ಆರಂಭದಲ್ಲಿ ಬಿಗುವಿನ ವಾತಾವರಣ ಕಂಡು ಬಂದರೂ ಸಹ ಇದುವರೆಗೂ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ.
    ಹಿಜಾಬ್ ವಿಚಾರಣೆ ಉಚ್ಛ ನ್ಯಾಯಾಲಯದಲ್ಲಿ ಆರಂಭಗೊಂಡ ನಂತರ ಕಾಲೇಜಿನ ಆಡಳಿತ ಮಂಡಳಿ ಎಚ್ಚರಿಕೆ ನಡೆಗಳನ್ನು ಅನುಸರಿಸಿದ ಹಿನ್ನಲೆಯಲ್ಲಿ ವಿವಾದ ತಣ್ಣಗಾಗಿದ್ದು, ಬುಧವಾರ ಕಾಲೇಜು ಆರಂಭಗೊಂಡರೂ ಸಹ ಹಿಜಾಬ್ ಧರಿಸುವ ವಿದ್ಯಾರ್ಥಿನಿಯರು ಕಾಲೇಜಿಗೆ ಆಗಮಿಸದೆ ಮನೆಗಳಿಲ್ಲಿಯೇ ಉಳಿದುಕೊಂಡಿದ್ದರು. ಆದರೆ ಗುರುವಾರ ಏಕಾಏಕಿ ಹಿಜಾಬ್ ಧರಿಸಿಕೊಂಡು ಕಾಲೇಜಿಗೆ ಆಗಮಿಸಿದ್ದು, ಈ ವಿದ್ಯಾರ್ಥಿನಿಯರನ್ನು ಕಾಲೇಜು ಮಂಡಳಿ ತರಗತಿಗಳಿಗೆ ಕಳುಹಿಸದೆ ಸುಮಾರು ೨ ಗಂಟೆಗೂ ಹೆಚ್ಚು ಸಮಯ ನ್ಯಾಯಾಲಯದ ಆದೇಶ ಹಾಗು ಸರ್ಕಾರದ ಕ್ರಮಗಳನ್ನು ವಿವರಿಸುವ ಮೂಲಕ ಮನವೊಲಿಕೆಗೆ ಪ್ರಯತ್ನಿಸಿತು. ಆದರೆ ಇದಕ್ಕೆ ಒಪ್ಪದ ವಿದ್ಯಾರ್ಥಿನಿಯರು ನಮಗೆ ಮೊದಲು ಹಿಜಾಬ್ ಮುಖ್ಯವಾಗಿದ್ದು, ನಂತರ ಶಿಕ್ಷಣ ಮುಖ್ಯವಾಗಿದೆ. ಈ ಹಿನ್ನಲೆಯಲ್ಲಿ ನಾವುಗಳು ನ್ಯಾಯಾಲಯದ ತೀರ್ಪು ಬರುವವರೆಗೂ ಕಾಲೇಜಿಗೆ ಬರುವುದಿಲ್ಲ ಎಂದು ಬಿಗಿಪಟ್ಟು ಹಿಡಿಯುವ ಜೊತೆಗೆ ಈ ಸಂಬಂಧ ವಿದ್ಯಾರ್ಥಿನಿಯರು ಮುಚ್ಚಳಿಕೆ ಪತ್ರ ಬರೆದುಕೊಟ್ಟು ಮನೆಗಳಿಗೆ ಹಿಂದಿರುಗಿದ್ದಾರೆ.

ಆರೋಗ್ಯ ಇಲಾಖೆ ಗುತ್ತಿಗೆ, ಹೊರಗುತ್ತಿಗೆ ನೌಕರರಿಂದ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮುಷ್ಕರ

ಭದ್ರಾವತಿ ಜನ್ನಾಪುರ ನಗರ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುವ ಗುತ್ತಿಗೆ ಮತ್ತು ಹೊರ ಗುತ್ತಿಗೆ ನೌಕರರು ಕಪ್ಪು ಪಟ್ಟಿ ಧರಿಸಿ ಮತ್ತು ರಾಷ್ಟ್ರೀಯ ಕಾರ್ಯಕ್ರಮದ ವರದಿಗಳನ್ನು ನಿಲ್ಲಿಸಿ ಮುಷ್ಕಾರ ನಡೆಸಿದರು

    ಭದ್ರಾವತಿ, ಫೆ. ೧೭: ಶ್ರೀನಿವಾಸಾಚಾರಿ ಸಮಿತಿ ವರದಿ ಅನುಷ್ಠಾನ ಮತ್ತು ಗುತ್ತಿಗೆ ಹಾಗು ಹೊರಗುತ್ತಿಗೆ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗು ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗು ಹೊರಗುತ್ತಿಗೆ ನೌಕರರು ಮೊದಲ ಹಂತದಲ್ಲಿ ಕಳೆದ ೪ ದಿನಗಳಿಂದ ಮುಷ್ಕರ ನಡೆಸುತ್ತಿದ್ದಾರೆ.
    ರಾಜ್ಯ ಸರ್ಕಾರ ತಕ್ಷಣ ಶ್ರೀನಿವಾಸಾಚಾರಿ ಸಮಿತಿ ವರದಿ ಅನುಷ್ಠಾನಗೊಳಿಸುವ ಜೊತೆಗೆ ರಾಷ್ಟ್ರೀಯ ಆರೋಗ್ಯ ಅಭಿಯಾನ(ಎನ್‌ಎಚ್‌ಎಂ) ಹಾಗು ವೈದ್ಯಕೀಯ ಶಿಕ್ಷಣ ಇಲಾಖೆಯ ಅಡಿಯಲ್ಲಿ ರಾಜ್ಯಾದ್ಯಂತ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು ೩೦ ಸಾವಿರ ಗುತ್ತಿಗೆ ಮತ್ತು ಹೊರ ಗುತ್ತಿಗೆ ನೌಕರರಿಗೆ ಸಮಾನ ವೇತನ, ಸೇವಾ ಭದ್ರತೆ, ವರ್ಗಾವಣೆ, ಆರೋಗ್ಯ ಮತ್ತು ಜೀವ ವಿಮೆ, ಎಚ್.ಆರ್ ಪಾಲಿಸಿ ಸೇರಿದಂತೆ ಇನ್ನಿತರ ಒಟ್ಟು ಸುಮಾರು ೧೪ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮೊದಲ ಹಂತದಲ್ಲಿ ಫೆ.೧೪ರಿಂದ ಕಪ್ಪು ಪಟ್ಟಿ ಧರಿಸಿ ಮತ್ತು ರಾಷ್ಟ್ರೀಯ ಕಾರ್ಯಕ್ರಮದ ವರದಿಗಳನ್ನು ನಿಲ್ಲಿಸಿ ಮುಷ್ಕಾರ ನಡೆಸಲಾಗುತ್ತಿದೆ. ಫೆ.೨೩ರ ನಂತರ ೨ನೇ ಹಂತದ ಹೋರಾಟ ನಡೆಯಲಿದೆ.
    ಹಳೇನಗರದ ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿ ಮತ್ತು ಜನ್ನಾಪುರ ನಗರ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುವ ಗುತ್ತಿಗೆ ಮತ್ತು ಹೊರ ಗುತ್ತಿಗೆ ನೌಕರರು ಮುಷ್ಕಾರ ನಡೆಸಿದರು.
    ಜನ್ನಾಪರ ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಕವಿತಾ, ಪ್ರಯೋಗ ಶಾಲಾ ತಂತ್ರಜ್ಞ ಸಚಿನ್, ಸಿಬ್ಬಂದಿ ದೇವರಾಜ್, ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ವಸಂತ, ಗ್ರೇಷಿಯಾ, ನೇತ್ರಾ, ದೇವಿಕಾ ಮತ್ತು ವಿಜಯ್ ಸೇರಿದಂತೆ ಇನ್ನಿತರರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು.


ಭದ್ರಾವತಿ ಹಳೇನಗರದ ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಗುತ್ತಿಗೆ ಮತ್ತು ಹೊರ ಗುತ್ತಿಗೆ ನೌಕರರು ಕಪ್ಪು ಪಟ್ಟಿ ಧರಿಸಿ ಮತ್ತು ರಾಷ್ಟ್ರೀಯ ಕಾರ್ಯಕ್ರಮದ ವರದಿಗಳನ್ನು ನಿಲ್ಲಿಸಿ ಮುಷ್ಕಾರ ನಡೆಸಿದರು

ಆಜಾದಿ ಕ ಆಮೃತ್ ಮಹೋತ್ಸವ ಅಂಗವಾಗಿ ಸೈಲ್-ವಿಐಎಸ್‌ಎಲ್‌ನಲ್ಲಿ ಹೃದಯ ತಪಾಸಣಾ ಶಿಬಿರ

ಆಜಾದಿ ಕ ಆಮೃತ್ ಮಹೋತ್ಸವ ಅಂಗವಾಗಿ ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ೩ನೇ ಬಾರಿಗೆ ಕಾರ್ಖಾನೆಯ ಕಾಯಂ ಹಾಗು ಗುತ್ತಿಗೆ ಕಾರ್ಮಿಕರಿಗೆ ಹೃದಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
    ಭದ್ರಾವತಿ, ಫೆ. ೧೭:  ಆಜಾದಿ ಕ ಆಮೃತ್ ಮಹೋತ್ಸವ ಅಂಗವಾಗಿ ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ೩ನೇ ಬಾರಿಗೆ ಕಾರ್ಖಾನೆಯ ಕಾಯಂ ಹಾಗು ಗುತ್ತಿಗೆ ಕಾರ್ಮಿಕರಿಗೆ ಹೃದಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
    ಶಿಬಿರದಲ್ಲಿ ೩೦ ಮಹಿಳಾ ಕಾರ್ಮಿಕರು ಸೇರಿದಂತೆ ಒಟ್ಟು ೨೮೫ ಕಾಯಂ ಹಾಗು ಗುತ್ತಿಗೆ ಕಾರ್ಮಿಕರು ಪಾಲ್ಗೊಂಡಿದ್ದರು. ಶಿಬಿರದಲ್ಲಿ ರಕ್ತದೊತ್ತಡ, ಮಧುಮೇಹ ಮತ್ತು ಆಮ್ಲಜನಕ ಶುದ್ಧತ್ವ, ಎಕೋ ಮತ್ತು ಇಸಿಜಿ ತಪಾಸಣೆ ನಡೆಸಲಾಯಿತು
    ಶಿವಮೊಗ್ಗ ಸಹ್ಯಾದ್ರಿ ನಾರಾಯಣ ಹೃದಯಾಲಯದ ವೈದ್ಯರು ಮತ್ತು ಸಿಬ್ಬಂದಿಗಳ ಸಹಕಾರದೊಂದಿಗೆ ಕಾರ್ಖಾನೆಯ ಮಾನವ ಸಂಪನ್ಮೂಲ, ವಿಐಎಸ್‌ಎಲ್ ಆಸ್ಪತ್ರೆ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಶಿಬಿರ ಆಯೋಜಿಸಲಾಗಿತ್ತು.  ಹೃದಯ ರೋಗ ತಜ್ಞರಾದ ಡಾ. ಶರತ್ ಸಂಗಣ್ಣ ಗೌಡರ್ ಹಾಗೂ ಡಾ. ಎಸ್.ವಿ. ಸಿದ್ಧಾರ್ಥ್ ಮತ್ತು ಕಾರ್ಖಾನೆಯ ವಿವಿಧ ಇಲಾಖೆಗಳ ಅಧಿಕಾರಿಗಳು, ಕಾಯಂ ಹಾಗು ಗುತ್ತಿಗೆ ಕಾರ್ಮಿಕರ ಮತ್ತು ಅಧಿಕಾರಿಗಳ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

Wednesday, February 16, 2022

ಸಿ.ಎಂ. ಖಾದರ್ ನಿವಾಸದಲ್ಲಿ ನಗದು ಸೇರಿದಂತೆ ೨೩ ಲಕ್ಷ ರು. ಮೌಲ್ಯದ ಸ್ವತ್ತು ಕಳ್ಳತನ

    ಭದ್ರಾವತಿ, ಫೆ. ೧೬: ನಗರದ ಅಮೀರ್ ಜಾನ್ ಕಾಲೋನಿಯಲ್ಲಿರುವ ಸಿ.ಎಂ ಇಬ್ರಾಹಿಂರವರ ಸಹೋದರ ಸಿ.ಎಂ ಖಾದರ್ ನಿವಾಸದಲ್ಲಿ ನಗದು ಹಣ ಸೇರಿದಂತೆ ಒಟ್ಟು ಸುಮಾರು ೨೩ ಲಕ್ಷ ರು. ಮೌಲ್ಯದ ಸ್ವತ್ತು ಕಳ್ಳತನ ಮಾಡಿರುವ ಘಟನೆ ನಡೆದಿದೆ.
    ಸಿ.ಎಂ ಖಾದರ್ ಕುಟುಂಬ ಸದಸ್ಯರೊಂದಿಗೆ ಜ.೫ರಂದು ದುಬೈಗೆ ತೆರಳಿದ್ದು, ಈ ಸಂದರ್ಭದಲ್ಲಿ ಕಳ್ಳತನ ನಡೆದಿದೆ ಎನ್ನಲಾಗಿದೆ. ಖಾದರ್‌ರವರ ಕಾರಿನ ಚಾಲಕ ಕೇಶವ ಹಾಗು ಇವರ ಕಛೇರಿಯಲ್ಲಿ ಕೆಲಸ ಮಾಡುವ ಹುಡುಗ ಮುಬಾರಕ್ ಫೆ.೧೩ರಂದು ಬೆಳಿಗ್ಗೆ ಖಾದರ್‌ರವರಿಗೆ ಮೊಬೈಲ್ ಕರೆ ಮಾಡಿ ನಿವಾಸದಲ್ಲಿ ಕಳ್ಳತನ ನಡೆದಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಈ ಹಿನ್ನಲೆಯಲ್ಲಿ ಸಂಜೆ ವೇಳೆಗೆ ದುಬೈಯಿಂದ ನಗರಕ್ಕೆ ಆಗಮಿಸಿದ ಖಾದರ್‌ರವರು ಪರಿಶೀಲನೆ ನಡೆಸಿದಾಗ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.
    ಮನೆಯ ಕಿಟಕಿಯ ಗ್ರಿಲ್ ಕಿತ್ತು ಹಾಕಿ, ಹಿಂಭಾಗದ ಬಾಗಿಲು ಮೂಲಕ ಪ್ರವೇಶಿಸಿ ಕಳ್ಳತನ ಮಾಡಿರುವುದು ಕಂಡು ಬಂದಿದೆ. ಅಡಕೆ ಮಾರಾಟ ಮಾಡಿ ತಂದಿಡಲಾಗಿದ್ದ ೧೬,೫೦,೦೦೦ ಮತ್ತು ಇವರ ತಮ್ಮನ ಕೊಠಡಿಯಲ್ಲಿದ್ದ ೪೫,೦೦೦ ಸೇರಿ ಒಟ್ಟು ೧೬,೯೫,೦೦೦ ರು. ನಗದು, ಒಟ್ಟು ೪೦ ಸಾವಿರ ರು. ಮೌಲ್ಯದ ೨ ಎಲ್‌ಇಡಿ ಟಿ.ವಿ, ೩೫ ಗ್ರಾಂ ತೂಕದ ಒಟ್ಟು ೧,೭೫,೦೦೦ ರು. ಮೌಲ್ಯದ ಬಂಗಾರದ ಮಾಂಗಲ್ಯ ಸರ, ಒಟ್ಟು ೪,೦೦,೦೦೦ ರು. ಮೌಲ್ಯದ ಒಟ್ಟು ೯೦ ಗ್ರಾಂ ತೂಕದ ೬ ಬಂಗಾರದ ಬಳೆಗಳನ್ನು ಹಾಗು ಒಟ್ಟು ೨೫,೦೦೦ ರು. ಮೌಲ್ಯದ ಒಟ್ಟು ೪ ಮೊಬೈಲ್ ಸೇರಿದಂತೆ ಒಟ್ಟು ೨೩,೩೫,೦೦೦ ರು. ಮೌಲ್ಯದ ಸ್ವತ್ತು ಕಳವು ಮಾಡಲಾಗಿದೆ. ಈ ಸಂಬಂಧ ಹಳೇನಗರ ಪೊಲೀಸ್ ಠಾಣೆಯಲ್ಲಿ ಖಾದರ್ ದೂರು ದಾಖಲಿಸಿದ್ದಾರೆ.


ನಾಡೋಜ ಡಾ. ಚೆನ್ನವೀರ ಕಣವಿಗೆ ನುಡಿನಮನ

ಭದ್ರಾವತಿ ನ್ಯೂಟೌನ್ ಪರಿಷತ್ ಕಚೇರಿಯಲ್ಲಿ ಬುಧವಾರ ಸಂಜೆ ಪರಿಷತ್ ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಅಧ್ಯಕ್ಷತೆಯಲ್ಲಿ ನುಡಿನಮನ ಕಾರ್ಯಕ್ರಮದ ಮೂಲಕ ಡಾ. ಚೆನ್ನವೀರ ಕಣವಿಯವರಿಗೆ ಸಂತಾಪ ಸೂಚಿಸಲಾಯಿತು.  
    ಭದ್ರಾವತಿ, ಫೆ. ೧೬: ನಾಡಿನ ಹಿರಿಯ ಕವಿ, ನಾಡೋಜ ಡಾ. ಚೆನ್ನವೀರ ಕಣವಿಯವರ ನಿಧನಕ್ಕೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಂತಾಪ ಸೂಚಿಸಿದೆ.
    ನ್ಯೂಟೌನ್ ಪರಿಷತ್ ಕಚೇರಿಯಲ್ಲಿ ಬುಧವಾರ ಸಂಜೆ ಪರಿಷತ್ ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಅಧ್ಯಕ್ಷತೆಯಲ್ಲಿ ನುಡಿನಮನ ಕಾರ್ಯಕ್ರಮದ ಮೂಲಕ ಡಾ. ಚೆನ್ನವೀರ ಕಣವಿಯವರಿಗೆ ಸಂತಾಪ ಸೂಚಿಸಲಾಯಿತು.  
    ಪರಿಷತ್ ಕಾರ್ಯದರ್ಶಿ ಎಚ್. ತಿಮ್ಮಪ್ಪ, ಕಾರ್ಯಕಾರಿ ಸಮಿತಿ ಸದಸ್ಯೆ ಇಂದಿರಾ, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ, ಉಪಾಧ್ಯಕ್ಷೆ ಸುಮತಿ ಕಾರಂತ್, ಪ್ರಧಾನ ಕಾರ್ಯದರ್ಶಿ ಪೀಟರ್, ಕಲಾವಿದ ಗುರು ಹಾಗೂ ನಿವೃತ್ತ ನೌಕರರ ಸಂಘದ ಸದಸ್ಯರು ಹಾಗೂ ಸಾಹಿತ್ಯಭಿಮಾನಿಗಳು ಉಪಸ್ಥಿತರಿದ್ದರು.
    ಸಂತಾಪ :
    ಸಮನ್ವಯ ಕವಿ ನಾಡೋಜ ಡಾ. ಚೆನ್ನವೀರ ಕಣವಿಯವರ ನಿಧನಕ್ಕೆ ಶಿವಮೊಗ್ಗ ಜಿಲ್ಲಾ ವೀರಶೈವ ಮಠಾಧಿಪತಿ ಪರಿಷತ್ ಸಂತಾಪ ಸೂಚಿಸಿದೆ.
    ಪರಿಷತ್ ಪರವಾಗಿ ಬಿಳಿಕಿ ಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ಕಣವಿಯವರ ನಿಧನಕ್ಕೆ ಸಂತಾಪ ಸೂಚಿಸಿ ಗೌರವ ಸಲ್ಲಿಸಿದ್ದಾರೆ.

ಸಂಚಿಯ ಹೊನ್ನಮ್ಮ ಸರ್ಕಾರಿ ಕಾಲೇಜಿನಲ್ಲಿ ಹಿಜಾಬ್ ಧರಿಸಿಕೊಂಡು ಬಂದ ವಿದ್ಯಾರ್ಥಿನಿಯರಿಂದ ಪ್ರತಿಭಟನೆ

ಪ್ರೌಢಶಾಲಾ ವಿದ್ಯಾರ್ಥಿನಿಯರ ಮನವೊಲಿಕೆ, ತರಗತಿಗಳಿಗೆ ಹಾಜರಾಗದೆ ಮನೆಗಳಿಗೆ ಹಿಂದಿರುಗಿದ ಕಾಲೇಜು ವಿದ್ಯಾರ್ಥಿನಿಯರು

ಭದ್ರಾವತಿ ಹಳೇನಗರದ ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಕಾಲೇಜು.

    ಭದ್ರಾವತಿ, ಫೆ. ೧೬: ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ವಿವಾದ ನಗರದಲ್ಲಿ ಬುಧವಾರ ಸಹ ಮುಂದುವರೆದಿದ್ದು, ಹಳೇನಗರದ ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಕಾಲೇಜಿನಲ್ಲಿ ಹಿಜಾಬ್ ಧರಿಸಿಕೊಂಡು ಬಂದ ಪ್ರೌಢಶಾಲಾ ವಿಭಾಗದ ೮ ರಿಂದ ೧೦ನೇ ತರಗತಿವರೆಗಿನ ಸುಮಾರು ೭೦ ವಿದ್ಯಾರ್ಥಿನಿಯರು ಕಾಲೇಜಿನ ಆವರಣದಲ್ಲಿ ಸುಮಾರು ೩ ಗಂಟೆಗೂ ಹೆಚ್ಚು ಸಮಯ ಪ್ರತಿಭಟನೆ ನಡೆಸಿದರು.
    ಎಂದಿನಂತೆ ಕಾಲೇಜಿಗೆ ಆಗಮಿಸಿದ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿಯರು ಪ್ರತಿಭಟನೆಗೆ ಮುಂದಾಗಿ ಹಿಜಾಬ್ ಧರಿಸಿಕೊಂಡು ತರಗತಿಗಳಿಗೆ ಹೋಗಲು ಅವಕಾಶ ನೀಡುವಂತೆ ಆಗ್ರಹಿಸಿದರು. ಪ್ರತಿಭಟನೆ ತೀವ್ರಗೊಂಡ ಹಿನ್ನಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಆರ್. ಪ್ರದೀಪ್, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ ಹಾಗು ಇನ್ನಿತರ ಅಧಿಕಾರಿಗಳು ವಿದ್ಯಾರ್ಥಿನಿಯರಿಗೆ ಸೂಕ್ತ ಕಾನೂನು ತಿಳುವಳಿಕೆ ನೀಡುವ ಜೊತೆಗೆ ಅವರ ಮನವೊಲಿಸುವಲ್ಲಿ ಯಶಸ್ವಿಯಾದರು. ಆದರೆ ೧೧ ಕಾಲೇಜು ವಿದ್ಯಾರ್ಥಿನಿಯರು ಮನವೊಲಿಕೆಗೆ ಸ್ಪಂದಿಸದೆ ಮನೆಗಳಿಗೆ ಹಿಂದಿರುಗಿದರು.
    ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ ಪತ್ರಿಕೆಯೊಂದಿಗೆ ಮಾತನಾಡಿ, ತಹಸೀಲ್ದಾರ್ ಅವರೊಂದಿಗೆ ನಾವು ಪ್ರೌಢಶಾಲೆ ವಿಭಾಗದ ವಿದ್ಯಾರ್ಥಿಗಳ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದೇವೆ. ಇದೆ ರೀತಿ ಪಕ್ಕದಲ್ಲಿರುವ ಮೌಲಾನ ಆಜಾದ್ ಶಾಲೆಯಲ್ಲೂ ಕ್ರಮ ಕೈಗೊಳ್ಳಲಾಗುವುದು. ಈ ಶಾಲೆಯಲ್ಲಿ ಹಿಜಾಬ್ ಧರಿಸಿಕೊಂಡು ಬರುವ ಸುಮಾರು ೧೧೫ ವಿದ್ಯಾರ್ಥಿನಿಯರಿದ್ದು, ಎಲ್ಲರೂ ಸಹ ಹಿಜಾಬ್ ತೆಗೆದಿಟ್ಟು ತರಗತಿಗಳಿಗೆ ಹಾಜರಾಗುವಂತೆ ಕ್ರಮ ಕೈಗೊಳ್ಳಲಾಗುವುದು. ತಾಲೂಕಿನ ದೊಣಬಘಟ್ಟ ಸರ್ಕಾರಿ ಶಾಲೆಯಲ್ಲೂ ಇದೆ ರೀತಿ ಕ್ರಮ ಕೈಗೊಳ್ಳಲಾಗುವುದು. ಗುರುವಾರ ವಿದ್ಯಾರ್ಥಿನಿಯರಿಗೆ ಈ ಸಂಬಂಧ ಅವಕಾಶ ನೀಡಲಾಗುವುದು ಎಂದರು.
    ಕಾಲೇಜಿನ ಪ್ರಾಂಶುಪಾಲ ಡಾ. ಸಿದ್ದಲಿಂಗಮೂರ್ತಿ ಮಾತನಾಡಿ, ತಹಸೀಲ್ದಾರ್ ಅವರೊಂದಿಗೆ ನಾವು ಕಾಲೇಜಿಗೆ ಹಿಜಾಬ್ ಧರಿಸಿಕೊಂಡು ಬಂದ ಸುಮಾರು ೧೧ ವಿದ್ಯಾರ್ಥಿನಿಯರ ಮನವೊಲಿಸಲು ಸಾಕಷ್ಟು ಪ್ರಯತ್ನಿಸಲಾಯಿತು. ಆದರೆ ವಿದ್ಯಾರ್ಥಿನಿಯರ ಮನಸ್ಥಿತಿ ವಿಭಿನ್ನವಾಗಿದ್ದು, ಅವರು ಯಾರ ಮಾತನ್ನು ಕೇಳುವ ಸ್ಥಿತಿಯಲ್ಲಿಲ್ಲ. ನಮಗೆ ಶಿಕ್ಷಣಕ್ಕಿಂತ ಹಿಜಾಬ್ ಮುಖ್ಯ ಎನ್ನುವ ಮೂಲಕ ಮನೆಗಳಿಗೆ ಹಿಂದಿರುಗಿದರು. ಈ ವಿದ್ಯಾರ್ಥಿನಿಯರಿಗೆ ನಾಳೆ ಸಹ ಅವಕಾಶ ನೀಡಲಾಗಿದ್ದು, ತಮ್ಮ ತಮ್ಮ ಪೋಷಕರ ಜೊತೆಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಂಡು ಕಾಲೇಜಿಗೆ ಬರಬಹುದಾಗಿದೆ ಎಂದರು.
    ತಹಸೀಲ್ದಾರ್ ಆರ್. ಪ್ರದೀಪ್ ಮಾತನಾಡಿ, ಸಮವಸ್ತ್ರ ವಿವಾದಕ್ಕೆ ಸಂಬಂಧಿಸಿದಂತೆ ಈಗಾಗಲೇ ಶಾಲಾ-ಕಾಲೇಜುಗಳ ಆವರಣದಲ್ಲಿ ನಿಷೇದಾಜ್ಞೆ ಜಾರಿಯಲ್ಲಿದೆ. ಇದುವರೆಗೂ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಸಂಚಿಯ ಹೊನ್ನಮ್ಮ ಕಾಲೇಜಿನ ವಿದ್ಯಾರ್ಥಿಗಳನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದೇವೆ. ತರಗತಿಗಳಿಗೆ ಹಾಜರಾಗದೆ ಹಿಂದಿರುಗಿರುವ ಕೆಲವು ವಿದ್ಯಾರ್ಥಿಗಳ ಮನವೊಲಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ. ಈ ನಿಟ್ಟಿ ಆ ವಿದ್ಯಾರ್ಥಿನಿಯರಿಗೂ ಕಾಲಾವಾಕಾಶ ನೀಡಲಾಗಿದ್ದು, ಪೋಷಕರ ಜೊತೆ ಚರ್ಚಿಸಲು ಸೂಚಿಸಲಾಗಿದೆ ಎಂದರು.
    ಪೊಲೀಸ್ ಉಪಾಧೀಕ್ಷಕ ಉಮೇಶ್ ಈಶ್ವರ್ ನಾಯಕ್, ನಗರ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ ಉಪಸ್ಥಿತರಿದ್ದರು. ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಬಡ ಕುಟುಂಬಕ್ಕೆ ಶಾಸಕರಿಂದ ೧ ಲಕ್ಷ ರು. ಆರ್ಥಿಕ ನೆರವು

ಭದ್ರಾವತಿ ತಾಲೂಕಿನ ಮಾರುತಿ ನಗರದ ಬಳಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಸೇತುವೆ ಬಳಿ ಇತ್ತೀಚಿಗೆ ಅಪಘಾತದಲ್ಲಿ ಮೃತಪಟ್ಟಿದ್ದ ಕಾಗದ ನಗರದ ನಿವಾಸಿ, ವಿಐಎಸ್‌ಎಲ್ ಕಾರ್ಖಾನೆಯ ಗುತ್ತಿಗೆ ಕಾರ್ಮಿಕ ಉಮೇಶ್ ಕುಟುಂಬಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ವೈಯಕ್ತಿಕವಾಗಿ ೧ ಲಕ್ಷ ರು. ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.
    ಭದ್ರಾವತಿ, ಫೆ. ೧೬: ತಾಲೂಕಿನ ಮಾರುತಿ ನಗರದ ಬಳಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಸೇತುವೆ ಬಳಿ ಇತ್ತೀಚಿಗೆ ಅಪಘಾತದಲ್ಲಿ ಮೃತಪಟ್ಟಿದ್ದ ಕಾಗದ ನಗರದ ನಿವಾಸಿ, ವಿಐಎಸ್‌ಎಲ್ ಕಾರ್ಖಾನೆಯ ಗುತ್ತಿಗೆ ಕಾರ್ಮಿಕ ಉಮೇಶ್ ಕುಟುಂಬಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ವೈಯಕ್ತಿಕವಾಗಿ ೧ ಲಕ್ಷ ರು. ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.
    ಬಡ ಕುಟುಂಬಕ್ಕೆ ಗುತ್ತಿಗೆದಾರರಿಂದ ೪ ಲಕ್ಷ ರು. ಪರಿಹಾರ ಕೊಡಿಸುವ ಜೊತೆಗೆ ಶಾಸಕರು ವೈಯಕ್ತಿಕವಾಗಿ ೧ ಲಕ್ಷ ರು. ನೆರವು ನೀಡುವ ಜೊತೆಗೆ ಉಮೇಶ್‌ರವರ ಪತ್ನಿಗೆ ಅಂಗನವಾಡಿ ಕೇಂದ್ರದಲ್ಲಿ ಸೂಕ್ತ ಉದ್ಯೋಗ ಕೊಡಿಸುವ ಭರವಸೆ ನೀಡಿದರು.
    ಮಾಜಿ ನಗರಸಭಾ ಸದಸ್ಯ ಮಹೇಶ್, ಸ್ಥಳೀಯ ಮುಖಂಡರಾದ ಚುಕ್ಕೇಗೌಡ, ಮಹೇಶ್, ಕಾಗದನಗರ ಕಟ್ಟೆ ಬಾಯ್ಸ್‌ನ ಪ್ರಮುಖರು, ಕಾಂಗ್ರೆಸ್ ಪಕ್ಷದ ಸ್ಥಳೀಯ ಮುಖಂಡರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.