ಡಾ. ರಾಜ್‌ಕುಮಾರರ ದೇಗುಲ, ಪುನೀತ್ ರಾಜ್‌ಕುಮಾರ್ ಪುತ್ಥಳಿ ಅನಾವರಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಬಿ.ವೈ ರಾಘವೇಂದ್ರ ಪ್ರಶಂಸೆ
ಭದ್ರಾವತಿ ನಗರಸಭೆ ೩ನೇ ವಾರ್ಡ್ ವ್ಯಾಪ್ತಿಯ ಬಿ.ಎಚ್ ರಸ್ತೆ ಚಾಮೇಗೌಡ ಏರಿಯಾದಲ್ಲಿರುವ ಡಾ. ರಾಜ್‌ಕುಮಾರ್ ಅಭಿಮಾನಿಗಳ ಬಳಗ ಹಾಗು ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ರಾಜ್‌ಕುಮಾರರ ದೇಗುಲ ಹಾಗು ಪುತ್ಥಳಿ ಆನಾವರಣಕ್ಕೆ ಬುಧವಾರ ಸಂಸದ ಬಿ.ವೈ ರಾಘವೇಂದ್ರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಭದ್ರಾವತಿ, ಫೆ. ೨೩: ಕರ್ನಾಟಕ ರತ್ನ, ವರನಟ ಡಾ. ರಾಜ್‌ಕುಮಾರ್ ಕುಟುಂಬದವರು ತಮ್ಮ ಇಡೀ ಬದುಕನ್ನು ಕೇವಲ ಚಿತ್ರರಂಗ ಹಾಗು ಸಮಾಜ ಸೇವೆಗೆ ಮಾತ್ರ ಮೀಸಲಿಡುವ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆಂದು ಸಂಸದ ಬಿ.ವೈ ರಾಘವೇಂದ್ರ ಪ್ರಶಂಸೆ ವ್ಯಕ್ತಪಡಿಸಿದರು.
ಅವರು ಬುಧವಾರ ನಗರಸಭೆ ೩ನೇ ವಾರ್ಡ್ ವ್ಯಾಪ್ತಿಯ ಬಿ.ಎಚ್ ರಸ್ತೆ ಚಾಮೇಗೌಡ ಏರಿಯಾದಲ್ಲಿರುವ ಡಾ. ರಾಜ್‌ಕುಮಾರ್ ಅಭಿಮಾನಿಗಳ ಬಳಗ ಹಾಗು ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ರಾಜ್‌ಕುಮಾರರ ದೇಗುಲ ಹಾಗು ಪುತ್ಥಳಿ ಆನಾವರಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಡಾ. ರಾಜ್‌ಕುಮಾರ್ ಕುಟುಂಬದವರು ಚಿತ್ರರಂಗದಲ್ಲಿಯೇ ಎಲ್ಲವನ್ನು ಕಂಡು ಕೊಂಡಿದ್ದಾರೆ. ಆ ಮೂಲಕ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡಿದ್ದಾರೆ. ಹಲವಾರು ಸಮಾಜಮುಖಿ ಸೇವಾ ಕಾರ್ಯಗಳನ್ನು ಕೈಗೊಂಡಿದ್ದಾರೆ. ಆದರ್ಶತನದ ಬದುಕನ್ನು ಈ ನಾಡಿಗೆ ನೀಡಿದ್ದಾರೆ. ರಾಜ್‌ಕುಮಾರ್‌ರವರು ಒಂದು ವೇಳೆ ರಾಜಕೀಯಕ್ಕೆ ಪ್ರವೇಶಿಸಿದ್ದರೇ ಅವರನ್ನು ನಾವೆಲ್ಲರೂ ಮುಖ್ಯಮಂತ್ರಿ ಸ್ಥಾನದಲ್ಲಿ ನೋಡಬೇಕಾಗಿರುತ್ತಿತ್ತು. ಆದರೆ ಈ ಕುಟುಂಬದವರು ಯಾವುದಕ್ಕೂ ಆಸೆ ಪಡದೆ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಇಂತಹ ಕುಟುಂಬದ ಪುನೀತ್‌ರಾಜ್‌ಕುಮಾರ್‌ರವರ ಪುತ್ಥಳಿ ಜಿಲ್ಲೆಯಲ್ಲಿ ಅದರಲ್ಲೂ ಭದ್ರಾವತಿಯಲ್ಲಿ ನಿರ್ಮಾಣಗೊಳ್ಳುತ್ತಿರುವುದು ತುಂಬಾ ಸಂತಸದ ಸಂಗತಿಯಾಗಿದೆ ಎಂದರು.
ಒಟ್ಟು ೨೦ ಲಕ್ಷ ರು. ಅಂದಾಜು ವೆಚ್ಚದಲ್ಲಿ ದೇಗುಲ ಮತ್ತು ಪುತ್ಥಳಿ ನಿರ್ಮಿಸಲಾಗುತ್ತಿದೆ. ಕಂಚು ಸೇರಿದಂತೆ ಇನ್ನಿತರ ಲೋಹ ಬಳಸಿ ಸುಮಾರು ೬.೫ ಲಕ್ಷ ರು. ವೆಚ್ಚದಲ್ಲಿ ೩ ಅಡಿ ಎತ್ತರ, ೨ ಅಡಿ ಅಗಲ ಹೊಂದಿರುವ ಪುತ್ಥಳಿಯನ್ನು ನಗರದ ಉಜ್ಜನಿಪುರದ ವಿಷ್ಣು ಆರ್ಟ್ಸ್‌ರವರು ನಿರ್ಮಿಸುತ್ತಿದ್ದಾರೆ. ಈ ಕಾರ್ಯಕ್ಕೆ ಸಂಸದರು ರು. ೫೧,೦೦೦ ದೇಣಿಗೆ ನೀಡಿದ್ದು, ಇದೆ ರೀತಿ ಹಲವು ಮಂದಿ ಗಣ್ಯರು, ದಾನಿಗಳು, ಅಭಿಮಾನಿಗಳು ದೇಣಿಗೆ ನೀಡಿದ್ದಾರೆ.
- ಅಪ್ಪು, ಅಧ್ಯಕ್ಷರು, ಕರ್ನಾಟಕ ರತ್ನ ಪುನೀತ್‌ರಾಜ್‌ಕುಮಾರ್ ಅಭಿಮಾನಿಗಳ ಸಂಘ
ನಗರಸಭಾ ಸದಸ್ಯ ಬಿ.ಕೆ ಮೋಹನ್ ಮಾತನಾಡಿ, ಕಳೆದ ೫-೬ ದಶಕಗಳಿಂದ ಡಾ. ರಾಜ್‌ಕುಮಾರ್ ಅಭಿಮಾನಿಗಳ ಬಳಗ ಯಾವುದೇ ರಾಜಕೀಯ ಹಿತಾಸಕ್ತಿಗೆ ಒಳಗಾಗದೆ ಮುನ್ನಡೆದುಕೊಂಡು ಬರುತ್ತಿರುವುದು ಜಿಲ್ಲೆಯಲ್ಲಿಯೇ ವಿಶೇಷವಾಗಿದೆ. ಎಲ್ಲಾ ಧರ್ಮ, ಜಾತಿ, ಪಂಗಡ, ಎಲ್ಲಾ ರಾಜಕೀಯ ಪಕ್ಷಗಳ, ವಿವಿಧ ಸಂಘಟನೆಗಳು ಒಟ್ಟಾಗಿ ಅಭಿಮಾನಿ ಬಳಗ ರೂಪಿಸಿಕೊಂಡಿರುವುದು ಸಮಾಜಕ್ಕೆ ಮಾದರಿಯಾಗಿದೆ. ಈ ಸಂಘಟನೆ ಇದೀಗ ರಾಜ್‌ಕುಮಾರ್‌ರವರ ದೇಗುಲ ಪುನೀತ್‌ರಾಜ್‌ಕುಮಾರ್‌ರವರ ಪುತ್ಥಳಿ ನಿರ್ಮಾಣಕ್ಕೆ ಮುಂದಾಗಿರುವುದು ಒಳ್ಳೆಯ ಬೆಳೆವಣಿಗೆಯಾಗಿದೆ ಎಂದರು.
ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್, ಬಿಜೆಪಿ ಮುಖಂಡ ಬಿ.ಕೆ ಶ್ರೀನಾಥ್, ನಗರಸಭಾ ಸದಸ್ಯರಾದ ವಿ. ಕದಿರೇಶ್, ಜಾರ್ಜ್, ಡಾ. ರಾಜ್‌ಕುಮಾರ್ ಹಾಗು ಪುನೀತ್‌ರಾಜ್‌ಕುಮಾರ್ ಅಭಿಮಾನಿ ಬಳಗದ ಪದಾಧಿಕಾರಿಗಳು, ಪ್ರಮುಖರು, ಸ್ಥಳೀಯ ಮುಖಂಡರು ಸೇರಿದಂತೆ ಇನ್ನಿತರರು ಉಪಸ್ಥಿರಿದ್ದರು.
ಭದ್ರಾವತಿ ನಗರಸಭೆ ೩ನೇ ವಾರ್ಡ್ ವ್ಯಾಪ್ತಿಯ ಬಿ.ಎಚ್ ರಸ್ತೆ ಚಾಮೇಗೌಡ ಏರಿಯಾದಲ್ಲಿರುವ ಡಾ. ರಾಜ್‌ಕುಮಾರ್ ಅಭಿಮಾನಿಗಳ ಬಳಗ ಹಾಗು ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ರಾಜ್‌ಕುಮಾರರ ದೇಗುಲ ಹಾಗು ಪುತ್ಥಳಿ ಆನಾವರಣಕ್ಕೆ ಬುಧವಾರ ಸಂಸದ ಬಿ.ವೈ ರಾಘವೇಂದ್ರ ಗುದ್ದಲಿ ಪೂಜೆ ನೆರವೇರಿಸಿದರು.