Sunday, March 20, 2022

ಕ್ರೀಡಾ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದ ಮಹಿಳಾ ಸರ್ಕಾರಿ ನೌಕರರು

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ಭದ್ರಾವತಿ ಹೊಸ ಸೇತುವೆ ರಸ್ತೆಯಲ್ಲಿರುವ ವಿಶ್ವೇಶ್ವರಾಯ ಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಭಾನುವಾರ ಮಹಿಳಾ ಸರ್ಕಾರಿ ನೌಕರರಿಗೆ ವಿವಿಧ ಬಗೆಯ ಕ್ರೀಡಾ ಸ್ಪರ್ಧೆಗಳು ಜರುಗಿದವು. ಬಿ. ಸಿದ್ದಬಸಪ್ಪ ಕ್ರೀಡಾ ಸ್ಪರ್ಧೆಗಳಿಗೆ ಚಾಲನೆ ನೀಡಿದರು.
    ಭದ್ರಾವತಿ, ಮಾ. ೨೦: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ನಗರದ ಹೊಸ ಸೇತುವೆ ರಸ್ತೆಯಲ್ಲಿರುವ ವಿಶ್ವೇಶ್ವರಾಯ ಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಭಾನುವಾರ ಮಹಿಳಾ ಸರ್ಕಾರಿ ನೌಕರರಿಗೆ ವಿವಿಧ ಬಗೆಯ ಕ್ರೀಡಾ ಸ್ಪರ್ಧೆಗಳು ಜರುಗಿದವು.  
    ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ. ಸಿದ್ದಬಸಪ್ಪ  ಕ್ರೀಡಾಸ್ಪರ್ಧೆಗಳಿಗೆ ಚಾಲನೆ ನೀಡಿದರು. ಮಹಿಳಾ ಸರ್ಕಾರಿ ನೌಕರರು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ಸಂಭ್ರಮಿಸಿದರು.
    ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಂದ್ರಪ್ಪ, ವಿದ್ಯಾಸಂಸ್ಥೆ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಡಿ.ಎಸ್ ರಾಜಪ್ಪ,  ಖಜಾಂಚಿ ಎಸ್.ಕೆ ಮೋಹನ್, ಕ್ರೀಡಾ ಕಾರ್ಯದರ್ಶಿಗಳಾದ ಶ್ರೀಕಾಂತ್ ಮತ್ತು ಜಾನ್‌ಪಾಲ್, ದೈಹಿಕ ಶಿಕ್ಷಣ ನಿರ್ದೇಶಕ ಶಿವಲಿಂಗೇಗೌಡ, ರಾಜ್‌ಕುಮಾರ್, ಲೋಹಿತ್, ಪ್ರಭುರವರು, ಮಲ್ಲಿಕಾರ್ಜುನ್  ಎಂ.ಸಿ ಆನಂದ್, ರೇವತಿ, ರವಿ, ಕರಣ್‌ಸಿಂಗ್, ಅಂತೋಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮಾ.೨೧ರಂದು ೬೨೩ನೇ ವಚನ ಮಂಟಪ, ದತ್ತಿ ಕಾರ್ಯಕ್ರಮ

    ಭದ್ರಾವತಿ, ಮಾ. ೨೦: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಮೈಸೂರು ಮತ್ತು ತಾಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದೊಂದಿಗೆ ೬೨೩ನೇ ವಚನ ಮಂಟಪ ಮತ್ತು ದತ್ತಿ ಕಾರ್ಯಕ್ರಮ ಮಾ.೨೧ರಂದು ಬೆಳಿಗ್ಗೆ ೧೧ ಗಂಟೆಗೆ ಹಮ್ಮಿಕೊಳ್ಳಲಾಗಿದೆ.
    ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ  ನಡೆಯಲಿರುವ  ಕವಿ ಸುವರ್ಣಮ್ಮ ಕೆ. ಸದಾಶಿವಪ್ಪ ದತ್ತಿ ಕಾರ್ಯಕ್ರಮವನ್ನು ತಹಸೀಲ್ದಾರ್ ಆರ್. ಪ್ರದೀಪ್ ಉದ್ಘಾಟಿಸಲಿದ್ದು, ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಿ ಧನಂಜಯ ಅಧ್ಯಕ್ಷತೆ ವಹಿಸಲಿದ್ದಾರೆ.
    ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಚ್.ಎನ್ ಮಹಾರುದ್ರ ಆಶಯ ನುಡಿಗಳನ್ನಾಡಲಿದ್ದು, ತಾಲೂಕು ಅಧ್ಯಕ್ಷ ಎಂ. ವಿರುಪಾಕ್ಷಪ್ಪ, ಬಸವಕೇಂದ್ರ ಅಧ್ಯಕ್ಷ ಜಗದೀಶ್ ಕವಿ ಉಪಸ್ಥಿತರಿರುವರು. ವಿದ್ಯಾರ್ಥಿಗಳಿಂದ ವಚನ ವಿಶ್ಲೇಷಣೆ ಮತ್ತು ಶರಣ ಚಿಂತನೆ ಹಾಗು ಕದಳಿ ಮಹಿಳಾ ವೇದಿಕೆ ವತಿಯಿಂದ ಸಮೂಹ ವಚನ ಗಾಯನ ನಡೆಯಲಿದೆ.

ಮಾ.೨೧ರಂದು ಸಿದ್ದ ಕಣ್ಣಿನ ಹನಿ ಕಾರ್ಯಕ್ರಮ

ಭದ್ರಾವತಿ, ಮಾ. ೨೦ : ನಗರದ ತರೀಕೆರೆ ರಸ್ತೆಯ ಶ್ರೀ ಶಿವಸುಬ್ರಹ್ಮಣ್ಯ ಸ್ವಾಮಿ ಆಶ್ರಮದ ವತಿಯಿಂದ ತಮಿಳುನಾಡು ದಿಂಡಿಕಲ್‌ನ ವಂಶಪಾರಂಪರೆ ಸಿದ್ದ ವೈದ್ಯರಾದ ಕೆ. ಮುತ್ತುಕೃಷ್ಣನ್ ಅವರಿಂದ ಮಾ.೨೧ರಂದು ಸಿದ್ದ ಕಣ್ಣಿನ ಹನಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
    ಕಾರ್ಯಕ್ರಮ ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೧ ಗಂಟೆ ವರೆಗೆ ನಡೆಯಲಿದ್ದು, ಕಣ್ಣಿಗೆ ಹನಿ ಹಾಕುವುದರಿಂದ ಕಣ್ಣಿನಲ್ಲಿ ನೀರು ಬರುತ್ತಿರುವುದು, ಕಣ್ಣು ಉರಿ, ಕಣ್ಣು ಕೆಂಪಗಾಗುವುದು, ಕಣ್ಣಿನಲ್ಲಿ ಪೊರೆ ಬರುವ ಹಂತದಲ್ಲಿರುವವರು ಹಾಗು ದೂರ ದೃಷ್ಠಿ ಮತ್ತು ಸಮೀಪ ದೃಷ್ಠಿ ತೊಂದರೆ ಇರುವವರಿಗೆ ಹಾಗು ಸೂಕ್ಷ್ಮ ಕೆಲಸಗಾರರು, ಚಿನ್ನಬೆಳ್ಳಿ, ಕಂಪ್ಯೂಟರ್, ಟೈಲರಿಂಗ್ ಕೆಲಸಗಾರರಿಗೆ ಹೆಚ್ಚಿನ ಅನುಕೂಲವಾಗಲಿದೆ. ಹೆಚ್ಚಿನ ಮಾಹಿತಿಗೆ ಮೊ: ೯೪೮೦೨೮೩೦೩೦ ಅಥವಾ ೯೪೪೮೨೫೫೫೪೪ ಸಂಖ್ಯೆಗೆ ಕರೆ ಮಾಡಬಹುದಾಗಿದೆ.

ರಾಜ್ಯದಲ್ಲಿ ಪುನಃ ಸೇವಾದಳ ಸಂಘಟಿಸುವ ಅಗತ್ಯವಿದೆ : ರಾಮಚಂದ್ರಪ್ಪ

ಭದ್ರಾವತಿ ತರೀಕೆರೆ ರಸ್ತೆಯ ಶ್ರೀ ಶಿವಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ತಾಲೂಕು ಕಾಂಗ್ರೆಸ್ ಸೇವಾದಳ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಭೆಯನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸೇವಾದಳ ಅಧ್ಯಕ್ಷ ರಾಮಚಂದ್ರಪ್ಪ ಉದ್ಘಾಟಿಸಿದರು.
    ಭದ್ರಾವತಿ, ಮಾ. ೨೦: ರಾಜ್ಯದಲ್ಲಿ ಪುನಃ ಸೇವಾದಳ ಸಂಘಟಿಸುವ ಅಗತ್ಯವಿದ್ದು, ಈ ಹಿನ್ನಲೆಯಲ್ಲಿ ಎಲ್ಲಾ ಜಿಲ್ಲೆಗಳಿಗೂ ಭೇಟಿ ನೀಡಲಾಗುತ್ತಿದೆ. ಸೇವಾದಳದ ತತ್ವ, ಸಿದ್ದಾಂತಗಳಿಗೆ ಬದ್ಧರಾಗಿ ಪ್ರತಿಯೊಬ್ಬರು ಮುನ್ನಡೆಯಬೇಕೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸೇವಾದಳ ಅಧ್ಯಕ್ಷ ರಾಮಚಂದ್ರಪ್ಪ ಹೇಳಿದರು.
    ಅವರು ಭಾನುವಾರ ನಗರದ ತರೀಕೆರೆ ರಸ್ತೆಯ ಶ್ರೀ ಶಿವಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ತಾಲೂಕು ಕಾಂಗ್ರೆಸ್ ಸೇವಾದಳ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಭೆ ಉದ್ಘಾಟಿಸಿ ಮಾತನಾಡಿದರು.
    ಪ್ರಸ್ತುತ ರಾಜ್ಯದಲ್ಲಿ ಸೇವಾದಳ ಹೆಚ್ಚು ಸಂಘಟಿತವಾಗಬೇಕಾಗಿದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಸೇವಾದಳದ ಕೊಡುಗೆ ಹೆಚ್ಚಿನದ್ದಾಗಿದ್ದು, ಈ ಹಿನ್ನಲೆಯಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರೊಂದಿಗೆ ಈಗಾಗಲೇ ಚರ್ಚಿಸಲಾಗಿದೆ. ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ನೀಡುವ ಸ್ಥಾನಮಾನಗಳನ್ನು ಸೇವಾದಳದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೂ ನೀಡಬೇಕು ಹಾಗು ಈ ಸಂಬಂಧ ಎಲ್ಲಾ ಜಿಲ್ಲೆಗಳಲ್ಲಿರುವ ಸೇವಾದಳ ಸಂಘಟಕರೊಂದಿಗೆ ಚರ್ಚಿಸಬೇಕೆಂದು ಕೋರಲಾಗಿದೆ. ಇದಕ್ಕೆ ಡಿ.ಕೆ ಶಿವಕುಮಾರ್ ಸಹ ಒಪ್ಪಿಗೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಸೇವಾದಳದಲ್ಲಿ ಸೇವೆ ಸಲ್ಲಿಸುತ್ತಿರುವವರು ಇನ್ನೂ ಹೆಚ್ಚಿನ ಕ್ರಿಯಾಶೀಲರಾಗಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕೆಂದರು.
    ದೇಶದಲ್ಲಿ ಸೇವಾದಳ ಜಾತಿ, ಮತ, ಭಾಷೆ ಬೇಧಭಾವಗಳಿಲ್ಲದ ತನ್ನದೇ ಆದ ತತ್ವ, ಸಿದ್ದಾಂತಗಳನ್ನು ಒಳಗೊಂಡಿರುವ ಸಂಘಟನೆಯಾಗಿದ್ದು, ಇದಕ್ಕೆ ಪ್ರತಿಯೊಬ್ಬರು ಚಿರಋಣಿಯಾಗಿರಬೇಕು. ಒಳ್ಳೆಯ ನಂಬಿಕೆ, ಅಭಿಪ್ರಾಯಗಳಿಗೆ ಬದ್ಧರಾಗಿ ಕೆಲಸ ಮಾಡಬೇಕು. ಆಗ ಮಾತ್ರ ಯಶಸ್ಸು ನಿರೀಕ್ಷಿಸಲು ಸಾಧ್ಯ. ಅಲ್ಲದೆ ಭವಿಷ್ಯದಲ್ಲಿ ಪ್ರತಿಯೊಬ್ಬರಿಗೂ ಒಳ್ಳೆಯದಾಗಲಿದೆ. ಸೇವಾದಳ ಪುನಃ ಸಂಘಟಿಸುವ ನಿಟ್ಟಿನಲ್ಲಿ ಪ್ರತಿಯೊಂದು ಜಿಲ್ಲೆಗಳಲ್ಲಿ ಶಿಬಿರಗಳನ್ನು ಆಯೋಜಿಸಲಾಗುವುದು. ಈ ಶಿಬಿರಕ್ಕೆ ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ನಾಯಕರು ಸಹ ಪಾಲ್ಗೊಳ್ಳಲಿದ್ದಾರೆ. ಸೇವಾದಳ ಬಲಪಡಿಸುವ ನಿಟ್ಟಿನಲ್ಲಿ ತಮ್ಮೊಂದಿಗೆ ಕೈಜೋಡಿಸಲಿದ್ದಾರೆ ಎಂದರು.
    ರಾಜ್ಯ ಮುಖ್ಯ ಸಂಘಟಕಿ ಸ್ಟ್ಯಾನ್ಲಿ ಡಿಸೋಜಾ ಮಾತನಾಡಿ, ತನ್ನದೇ ಆದ ತತ್ವ, ಸಿದ್ದಾಂತಗಳನ್ನು ಹೊಂದಿರುವ ಸೇವಾದಳ ತನ್ನ ಆಶಯಗಳನ್ನು ಈಡೇರಿಸಲು ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಶಕ್ತಿ ತುಂಬುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ದೇಶದಲ್ಲಿ ಮಾಜಿ ಪ್ರಧಾನಿ ರಾಜೀವ್‌ಗಾಂಧಿಯವರ ನಿಧನದ ನಂತರ ಸೇವಾದಳಕ್ಕೆ ನೀಡುತ್ತಿರುವ ಮಾನ್ಯತೆ ಸ್ವಲ್ಪಮಟ್ಟಿಗೆ ಕಡಿಯಾಗಿದೆ. ಈ ಹಿನ್ನಲೆಯಲ್ಲಿ ಇದೀಗ ರಾಜ್ಯಾಧ್ಯಕ್ಷರಾಗಿರುವ ರಾಮಚಂದ್ರಪ್ಪನವರು ಸೇವಾದಳ ಹೆಚ್ಚಿನ ರೀತಿಯಲ್ಲಿ ಸಂಘಟಿಸಲು ಮುಂದಾಗಿದ್ದಾರೆ. ಅವರು ಕೈಗೊಂಡಿರುವ ಕಾರ್ಯ ಯಶಸ್ವಿಯಾಗಲು ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ ಎಂದರು.
    ಕೆಪಿಸಿಸಿ ಸೇವಾದಳ ಉಪಾಧ್ಯಕ್ಷ ವಿನಾಯಕಮೂರ್ತಿ, ಜಿಲ್ಲಾಧ್ಯಕ್ಷ ವೈ.ಎಚ್ ನಾಗರಾಜ್ ಮಾತನಾಡಿದರು. ಕೆಪಿಸಿಸಿ ಮುಖ್ಯ ಸಂಘಟನಾ ಕಾರ್ಯದರ್ಶಿ ಸ್ಟ್ಯಾನ್ಲಿ, ಶ್ರೀ ಕ್ಷೇತ್ರ ಭದ್ರಗಿರಿ ದೇವಸ್ಥಾನ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂದ್ರಘೋಷನ್, ತಾಲೂಕು ಅಧ್ಯಕ್ಷ ಡಿ. ನರಸಿಂಹಮೂರ್ತಿ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
    ಪ್ರಮುಖರಾದ ನಾಗೇಶ್, ರವಿನಾಯ್ಕ ಸೇರಿದಂತೆ ಇನ್ನಿತರರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಜೀವ ಸ್ವಾಗತಿಸಿದರು. ಶಶಿಕಲಾ ವಂದಿಸಿದರು.



Saturday, March 19, 2022

ಸಂಬುದ್ಧ ಧಮ್ಮಾಂಕುರ ಟ್ರಸ್ಟ್ ವತಿಯಿಂದ ಹುಣ್ಣಿಮೆ ದಿನ

ಭದ್ರಾವತಿಯಲ್ಲಿ ಸಂಬುದ್ಧ ಧಮ್ಮಾಂಕುರ ಟ್ರಸ್ಟ್ ವತಿಯಿಂದ ಹೊಸ ನಂಜಾಪುರದ ನಿವೇಶನದಲ್ಲಿ ಪ್ರತಿ ತಿಂಗಳಿನಂತೆ ಈ ತಿಂಗಳು ಸಹ ಹುಣ್ಣಿಮೆ ದಿನ ಸರಳವಾಗಿ ಆಚರಿಸಲಾಯಿತು.
    ಭದ್ರಾವತಿ, ಮಾ. ೧೯: ಸಂಬುದ್ಧ ಧಮ್ಮಾಂಕುರ ಟ್ರಸ್ಟ್ ವತಿಯಿಂದ ಹೊಸ ನಂಜಾಪುರದ ನಿವೇಶನದಲ್ಲಿ ಪ್ರತಿ ತಿಂಗಳಿನಂತೆ ಈ ತಿಂಗಳು ಸಹ ಹುಣ್ಣಿಮೆ ದಿನ ಸರಳವಾಗಿ ಆಚರಿಸಲಾಯಿತು.
    ಬೌದ್ಧ ಧರ್ಮ ಉಪಾಸಕರಾದ ಪ್ರೊ. ಎಚ್. ರಾಚಪ್ಪ ಉಪನ್ಯಾಸ ನಡೆಸಿಕೊಟ್ಟರು. ನಗರಸಭೆ ಉಪಾಧ್ಯಕ್ಷ ಚನ್ನಪ್ಪ, ಕಾರ್ಯಪಾಲಕ ಇಂಜಿನಿಯರ್ ರಂಗರಾಜಪುರೆ, ಸಂಬುದ್ಧ ಧಮ್ಮಾಂಕುರ ಟ್ರಸ್ಟ್ ಆಡಳಿತ ಮಂಡಳಿಯ ಪ್ರಮುಖರಾದ ಸುರೇಶ್, ಬದರಿನಾರಾಯಣ, ನಂಜಾಪುರ ಶ್ರೀನಿವಾಸ್, ಎ. ತಿಪ್ಪೇಸ್ವಾಮಿ, ಎಸ್.ಎಸ್ ಭೈರಪ್ಪ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. ಆರಂಭದಲ್ಲಿ ಗೌತಮ ಬುದ್ಧನ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಲಾಯಿತು.
    ಇತ್ತೀಚೆಗೆ ಸಂಬುದ್ಧ ಧಮ್ಮಾಂಕುರ ಟ್ರಸ್ಟ್ ಅಸ್ತಿತ್ವಕ್ಕೆ ಬಂದಿದ್ದು, ಕ್ರಿಯಾಶೀಲವಾಗಿ ಮುನ್ನಡೆಯುತ್ತಿದೆ. ಟ್ರಸ್ಟ್ ಹೊಸ ನಂಜಾಪುರದಲ್ಲಿ ನಿವೇಶನ ಹೊಂದುವ ಜೊತೆಗೆ ಇದರ ಅಭಿವೃದ್ಧಿಗೆ ಮುಂದಾಗಿದೆ.

ಯುಗಾದಿ ಕವಿಗೋಷ್ಠಿ : ಆಸಕ್ತ ಕವಿಗಳಿಂದ ಕವನ ಆಹ್ವಾನ

    ಭದ್ರಾವತಿ, ಮಾ. ೧೯: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಯುಗಾದಿ ಕವಿಘೋಷ್ಠಿ ಹಮ್ಮಿಕೊಳ್ಳುತ್ತಿದ್ದು, ಆಸಕ್ತ ಕವಿಗಳಿಂದ ಕವನಗಳನ್ನು  ಆಹ್ವಾನಿಸಲಾಗಿದೆ.
    ಉತ್ತಮವಾದ ಯಾವುದೇ ವಿಷಯ ವಸ್ತುವುಳ್ಳ ಕವನಗಳನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಗೆ ಮಾ. ೨೨ರೊಳಗೆ ಕಳುಹಿಸಬಹುದಾಗಿದೆ. ಕೆಲವೇ ಕವಿಗಳಿಗೆ ಮಾತ್ರ ಅವಕಾಶವಿದ್ದು, ಮೊದಲು ಕವನ ಕಳಿಸಿದ ಆಯ್ಕೆ ಯಾದ ಕವಿಗಳಿಗೆ ಮಾತ್ರ ವಾಚಿಸಲು ಅವಕಾಶ ನೀಡಲಾಗುವುದು. ಕಾರ್ಯಕ್ರಮದ ಸಂದರ್ಭದಲ್ಲಿ ಬಂದು ಕೇಳಿದರೆ ಅವಕಾಶ ಇರುವುದಿಲ್ಲ.
    ಹೆಚ್ಚಿನ ವಿವರಗಳಿಗೆ ಪರಿಷತ್ ಅಧ್ಯಕ್ಷರಾದ ಕೋಗಲೂರು ತಿಪ್ಪೇಸ್ವಾಮಿ, ಮೊ: ೯೦೦೮೫೧೫೪೩೨ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ಪರಿಷತ್ ಕಾರ್ಯದರ್ಶಿಗಳಾದ ಎಚ್. ತಿಮ್ಮಪ್ಪ  ಮತ್ತು ಎಂ.ಈ ಜಗದೀಶ್ ಕೋರಿದ್ದಾರೆ.

ರತಿ ಮನ್ಮಥರ ದಹನದೊಂದಿಗೆ ಬಣ್ಣ ಬಣ್ಣದ ರಂಗಿನಾಟಕ್ಕೆ ತೆರೆ

ಭದ್ರಾವತಿ ಹಳೇನಗರದ ವಿವಿಧೆಡೆ ಶನಿವಾರ ಹೋಳಿ ಸಂಭ್ರಮಾಚರಣೆ ನಡೆಸಿ ರತಿ ಮನ್ಮಥರ ದಹನದೊಂದಿಗೆ ಹಬ್ಬಕ್ಕೆ ತೆರೆ ಎಳೆಯಲಾಯಿತು.
    ಭದ್ರಾವತಿ, ಮಾ. ೧೯: ಹಳೇನಗರದ ವಿವಿಧೆಡೆ ಶನಿವಾರ ಹೋಳಿ ಸಂಭ್ರಮಾಚರಣೆ ನಡೆಸಿ ರತಿ ಮನ್ಮಥರ ದಹನದೊಂದಿಗೆ ಹಬ್ಬಕ್ಕೆ ತೆರೆ ಎಳೆಯಲಾಯಿತು.
    ಭೂತನಗುಡಿ ಭಾಗದಲ್ಲಿ ಶುಕ್ರವಾರ ಹೋಳಿ ಹಬ್ಬಕ್ಕೆ ತೆರೆ ಎಳೆಯಲಾಗಿತ್ತು. ಆದರೆ ಹಳೇನಗರ ಭಾಗದ ಕುಂಬಾರರ ಬೀದಿ, ಉಪ್ಪಾರರ ಬೀದಿ ಮತ್ತು ಬ್ರಾಹ್ಮಣ ಬೀದಿಗಳಲ್ಲಿ ಒಂದು ದಿನ ತಡವಾಗಿ ಹಬ್ಬಕ್ಕೆ ತೆರೆಯಲಾಯಿತು.
    ಪ್ರಮುಖ ರಸ್ತೆಗಳಲ್ಲಿ ಬಣ್ಣ ಬಣ್ಣದ ರಂಗಿನಾಟದೊಡನೆ ವಯಸ್ಸಿನ ಬೇಧಭಾವವಿಲ್ಲದೆ ಮಕ್ಕಳು, ಮಹಿಳೆಯರು ಮತ್ತು ಪುರುಷರು ಒಂದೆಡೆ ಸೇರಿ ಸಂಭ್ರಮಿಸಿದರು. ನಂತರ ಧಾರ್ಮಿಕ ಆಚರಣೆಗಳೊಂದಿಗೆ ಪ್ರಮುಖ ರಸ್ತೆಗಳಲ್ಲಿ ರತಿಮನ್ಮಥರ ಮೆರವಣಿಗೆ ನಡೆಸಿ ದಹನದೊಂದಿಗೆ ಹಬ್ಬಕ್ಕೆ ತೆರೆ ಎಳೆಯಲಾಯಿತು. ಈ ಭಾಗದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.