Thursday, July 7, 2022

ವರ್ಗಾವಣೆಗೊಂಡ ಉಪವಿಭಾಗಾಧಿಕಾರಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಿಗೆ ಬೀಳ್ಕೊಡುಗೆ


ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಮುಂಬಡ್ತಿ ಹೊಂದಿ ವರ್ಗಾವಣೆಗೊಂಡಿರುವ ಟಿ.ವಿ ಪ್ರಕಾಶ್ ಹಾಗು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾಗಿ ಪ್ರಭಾರ ಕರ್ತವ್ಯ ನಿರ್ವಹಿಸಿ ಮೂಲ ಸ್ಥಾನಕ್ಕೆ ಹಿಂದಿರುಗಿರುವ ಗೋಪಿನಾಥ್ ಅವರಿಗೆ ಭದ್ರಾವತಿ ತಾಲೂಕು ಆಡಳಿತದ ಪರವಾಗಿ ಬೀಳ್ಕೊಡುಗೆ ನೀಡಲಾಯಿತು.
    ಭದ್ರಾವತಿ, ಜು. ೭: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಮುಂಬಡ್ತಿ ಹೊಂದಿ ವರ್ಗಾವಣೆಗೊಂಡಿರುವ ಟಿ.ವಿ ಪ್ರಕಾಶ್ ಹಾಗು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾಗಿ ಪ್ರಭಾರ ಕರ್ತವ್ಯ ನಿರ್ವಹಿಸಿ ಮೂಲ ಸ್ಥಾನಕ್ಕೆ ಹಿಂದಿರುಗಿರುವ ಗೋಪಿನಾಥ್ ಅವರಿಗೆ ತಾಲೂಕು ಆಡಳಿತದ ಪರವಾಗಿ ಬೀಳ್ಕೊಡುಗೆ ನೀಡಲಾಯಿತು.
      ಸುಮಾರು ೪ ವರ್ಷಗಳ ಕಾಲ ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಟಿ.ವಿ ಪ್ರಕಾಶ್‌ರವರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆಂದು ಪ್ರಶಂಸೆ ವ್ಯಕ್ತಪಡಿಸಲಾಯಿತು.
      ಸಮಾಜ ಕಲ್ಯಾಣ ಇಲಾಖೆಯಲ್ಲಿ ಈ ಹಿಂದೆ ಸಹಾಯಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ದೂದ್‌ಪೀರ್ ಅವರು ಮುಂಬಡ್ತಿಹೊಂದಿ ವರ್ಗಾವಣೆಗೊಂಡ ಹಿನ್ನಲೆಯಲ್ಲಿ ತೆರವಾಗಿದ್ದ ಹುದ್ದೆಯಲ್ಲಿ ಗೋಪಿನಾಥ್ ಅವರು ಸುಮಾರು ೧ ವರ್ಷ ಪ್ರಭಾರ ಅಧಿಕಾರ ನಿರ್ವಹಿಸಿ ಹಿಂದಿರುಗಿದ್ದಾರೆ. ತಾಲೂಕು ಆಡಳಿತ ವತಿಯಿಂದ ಇಬ್ಬರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
      ತಹಸೀಲ್ದಾರ್ ಆರ್. ಪ್ರದೀಪ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಗೀತಾರಾಜ್‌ಕುಮಾರ್, ಪೌರಾಯುಕ್ತ ಮನುಕುಮಾರ್, ಕಂದಾಯಾಧಿಕಾರಿ ರಾಜ್‌ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ತಾಲೂಕು ಆರೊಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ಪೊಲೀಸ್ ಇನ್ಸ್‌ಪೆಕ್ಟರ್ ಇ.ಓ ಮಂಜುನಾಥ್ ಹಾಗು ಆಡಳಿತ ಕಛೇರಿ, ನಗರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಶಾಂತಿಯುತ ಬಕ್ರೀದ್ ಆಚರಣೆಗೆ ಪೊಲೀಸ್ ಇಲಾಖೆ ಮನವಿ

ಬಕ್ರೀದ್ ಹಬ್ಬದ ಹಿನ್ನಲೆಯಲ್ಲಿ ಗುರುವಾರ ಭದ್ರಾವತಿ ನ್ಯೂಟೌನ್ ರೋಟರಿ ಕ್ಲಬ್ ಸಭಾಂಗಣದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಮುಸ್ಲಿಂ ಸಮುದಾಯದವರೊಂದಿಗೆ ಶಾಂತಿ ಸಭೆ ನಡೆಸಲಾಯಿತು.
    ಭದ್ರಾವತಿ, ಜು. ೭: ನಗರದಲ್ಲಿ ಬಕ್ರೀದ್ ಹಬ್ಬ ಶಾಂತಿಯುತವಾಗಿ ಆಚರಿಸುವ ಮೂಲಕ ಸೌಹಾರ್ದತೆ ಮೂಡಿಸಬೇಕೆಂದು ಪೊಲೀಸ್ ಇಲಾಖೆ ಮನವಿ ಮಾಡಿದೆ.
      ಬಕ್ರೀದ್ ಹಬ್ಬದ ಹಿನ್ನಲೆಯಲ್ಲಿ ಗುರುವಾರ ನ್ಯೂಟೌನ್ ರೋಟರಿ ಕ್ಲಬ್ ಸಭಾಂಗಣದಲ್ಲಿ ಇಲಾಖೆ ವತಿಯಿಂದ ಮುಸ್ಲಿಂ ಸಮುದಾಯದವರೊಂದಿಗೆ ಶಾಂತಿ ಸಭೆ ನಡೆಸಲಾಯಿತು. ಶಾಂತಿ ಸುವ್ಯವಸ್ಥೆಗೆ ಧಕ್ಕೆ ಉಂಟಾಗದಂತೆ ಮುಸ್ಲಿಂ ಸಮುದಾಯದವರು ಸಡಗರ, ಸಂಭ್ರಮದಿಂದ ಹಬ್ಬ ಆಚರಿಸಬೇಕು. ಯಾವುದೇ ರೀತಿ ಆಶಾಂತಿ ವಾತಾವರಣಕ್ಕೆ ಅವಕಾಶ ಕಲ್ಪಿಸಿಕೊಡಬಾರದು. ಹಬ್ಬದ ಆಚರಣೆಗೆ ಇಲಾಖೆ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದು ಭರವಸೆ ನೀಡಲಾಯಿತು.
        ಮುಸ್ಲಿಂ ಸಮುದಾಯದ ಪ್ರಮುಖರು, ಹಬ್ಬದ ಸಂದರ್ಭದಲ್ಲಿ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಇಲಾಖೆ ಗಮನಕ್ಕೆ ತರುವ ಜೊತೆಗೆ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರದಂತೆ ಹಬ್ಬ ಆಚರಿಸು ವಿಶ್ವಾಸ ವ್ಯಕ್ತಪಡಿಸಿದರು.
      ಮುಸ್ಲಿಂ ಸಮುದಾಯದ ಪ್ರಮುಖರಾದ ಅಂಜುಮಾನ್ ಇಸ್ಲಾಹುಲ್ ಮುಸ್ಲಿಂಮೀನ್ ಅಧ್ಯಕ್ಷ ಮುರ್ತುಜಾಖಾನ್, ನಗರಸಭೆ ಸದಸ್ಯ ಸೈಯದ್ ರಿಜ್ವಾನ್, ಮಾಜಿ ಸದಸ್ಯ ಬಾಬಾಜಾನ್, ಅಮೀರ್‌ಜಾನ್, ಫೀರ್ ಷರೀಫ್, ವಿವಿಧ ಠಾಣೆಗಳ ಠಾಣಾಧಿಕಾರಿಗಳು ಹಾಗು ಸಿಬ್ಬಂದಿ ವರ್ಗದವರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
      ತಹಸೀಲ್ದಾರ್ ಆರ್. ಪ್ರದೀಪ್, ಪೊಲೀಸ್  ಉಪಾಧೀಕ್ಷಕ ಜಿತೇಂದ್ರಕುಮಾರ್ ದಯಾಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ನಗರ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ನ್ಯೂಟೌನ್ ಪೊಲೀಸ್ ಠಾಣಾಧಿಕಾರಿ ದೇವರಾಜ್ ಸ್ವಾಗತಿಸಿದರು.

ಜು.೯ರಂದು ೨೦೨ನೇ ಸಾಹಿತ್ಯ ಹುಣ್ಣಿಮೆ


ಭದ್ರಾವತಿ, ಜು. ೭: ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಾಗು ಕಾಗದನಗರದ ಗುರು ಬ್ರದರ್‍ಸ್ ಆರ್ಟ್ಸ್ ವತಿಯಿಂದ ಶ್ರೀಮತಿ ಸರೋಜಮ್ಮನವರ ಮೊದಲ ವರ್ಷದ ಭಾವಸ್ಮರಣೆ ಅಂಗವಾಗಿ ಜು.೯ರಂದು ಸಂಜೆ ೬ ಗಂಟೆಗೆ ಉಜ್ಜನಿಪುರದ ಡಿ.ಜಿ ಹಳ್ಳಿ ಮುಖ್ಯ ರಸ್ತೆಯಲ್ಲಿರುವ ಬಣ್ಣದ ಮನೆ ಆವರಣದಲ್ಲಿ ೨೦೨ನೇ ಸಾಹಿತ್ಯ ಹುಣ್ಣಿಮೆ ತಿಂಗಳ ಮನೆ-ಮನ-ಸಾಹಿತ್ಯ ಕಾರ್ಯಕ್ರಯ ಹಮ್ಮಿಕೊಳ್ಳಲಾಗಿದೆ.
      ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ಮಂಜುನಾಥ್ ಅಧ್ಯಕ್ಷತೆ ವಹಿಸಲಿದ್ದು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ. ಸೀತವ್ವ ಜೋಡಟ್ಟಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
        ಶಾಸಕ ಬಿ.ಕೆ ಸಂಗಮೇಶ್ವರ್, ಜಾತ್ಯಾತೀತ ಜನತಾದಳ ಮುಖಂಡರಾದ ಶಾರದ ಅಪ್ಪಾಜಿ, ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ನಗಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಅಂತರರಾಷ್ಟ್ರೀಯ ಗಾಯಕ ಡಾ. ಕಿಕ್ಕೇರಿ ಕೃಷ್ಣಮೂರ್ತಿ, ಕರ್ನಾಟಕ ರಾಜ್ಯ ನಾಮಫಲಕ ಕಲಾವಿದರ ಸಂಘದ ರಾಜ್ಯಾಧ್ಯಕ್ಷ ಬಿ.ಕೆ ಗುರುರಾಜ್, ಚಿಕ್ಕಮಗಳೂರು ಜಿಲ್ಲಾ ಯೋಜನಾ ನಿರ್ದೇಶಕ ಮನೋಹರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಎನ್. ಹರಿಕುಮಾರ್, ಕೋಗಲೂರು ತಿಪ್ಪೇಸ್ವಾಮಿ, ಕೋಡ್ಲು ಯಜ್ಞಯ್ಯ, ಎಂ.ಎಸ್ ಸುಧಾಮಣಿ, ಎಂ.ಎಸ್ ಶಿವಪ್ರಕಾಶ್, ಬಿ.ಎನ್ ಸುರೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.
      ಹಾಡು-ಹಾಸ್ಯ-ಕವನ-ಹನಿಗವನ-ಕಥೆ-ವಿಚಾರ ಸಾಂಸ್ಕೃತಿಕ ಕಾರ್ಯಕ್ರಮ, ಸರ್ಕಾರಿ ಶಾಲಾ ಮಕ್ಕಳಿಗೆ ಶಾಲಾ ಬ್ಯಾಗ್ ವಿತರಣೆ, ಕರೋನಾ ಯೋಧರಿಗೆ ಅಭಿನಂದನೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಜರುಗಲಿವೆ.

Wednesday, July 6, 2022

ಬೀದಿ ನಾಯಿಗಳ ದಾಳಿಯಿಂದ ತಪ್ಪಿಸಿಕೊಂಡು ಬಂದ ಜಿಂಕೆ ರಕ್ಷಣೆ


ಭದ್ರಾವತಿ ತಾಲೂಕಿನ ಹುಣಸೇಕಟ್ಟೆ ಗ್ರಾಮದಲ್ಲಿ ಬೀದಿ ನಾಯಿಗಳ ದಾಳಿಯಿಂದ ತಪ್ಪಿಸಿಕೊಂಡು ಮನೆ ಆವರಣಕ್ಕೆ ಬಂದ ಜಿಂಕೆಯೊಂದನ್ನು ಪೊಲೀಸ್ ಸಿಬ್ಬಂದಿ ಮಲ್ಲೇಶ್‌ನಾಯ್ಕ್ಕ ಅವರು ರಕ್ಷಿಸಿರುವುದು.
    ಭದ್ರಾವತಿ, ಜು. ೬; ಬೀದಿ ನಾಯಿಗಳ ದಾಳಿಯಿಂದ ತಪ್ಪಿಸಿಕೊಂಡು ಮನೆ ಆವರಣಕ್ಕೆ ಬಂದ ಜಿಂಕೆಯೊಂದನ್ನು ಪೊಲೀಸ್ ಸಿಬ್ಬಂದಿಯೊಬ್ಬರು ರಕ್ಷಿಸಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಿರುವ ಘಟನೆ ಬುಧವಾರ ನಡೆದಿದೆ.
      ತಾಲೂಕಿನ ಹುಣಸೇಕಟ್ಟೆ ಜಂಕ್ಷನ್ ನಿವಾಸಿ, ಪೊಲೀಸ್ ಗುಪ್ತಚರ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಲ್ಲೇಶ್‌ನಾಯ್ಕ ಅವರ ಮನೆ ಆವರಣಕ್ಕೆ ಬೆಳಿಗ್ಗೆ ೬ ಗಂಟೆ ಸಮಯದಲ್ಲಿ ಜಿಂಕೆಯೊಂದು ಬಂದಿದ್ದು, ತಕ್ಷಣ ಮಲ್ಲೇಶ್‌ನಾಯ್ಕ ಅವರು ಅದನ್ನು ರಕ್ಷಿಸಿ ಉಂಬ್ಳೆಬೈಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಜಿಂಕೆಯನ್ನು ಪುನಃ ಅರಣ್ಯಕ್ಕೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ.  

ಪೌರಕಾರ್ಮಿಕರು, ನೀರು ಸರಬರಾಜು ಕಾರ್ಮಿಕರಿಗೆ ಜರ್ಕೀನ್ ವಿತರಣೆ

ಭದ್ರಾವತಿ ನಗರಸಭೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಹಾಗು ನೀರು ಸರಬರಾಜು ಕಾರ್ಮಿಕರಿಗೆ ಪ್ರತಿ ವರ್ಷದಂತೆ ಈ ಬಾರಿ ಸಹ ಬುಧವಾರ ಮಳೆಗಾಲದಲ್ಲಿ ಅನುಕೂಲವಾಗುವಂತೆ ಜರ್ಕೀನ್ ವಿತರಿಸಲಾಯಿತು.
    ಭದ್ರಾವತಿ, ಜು. ೬: ಪ್ರತಿ ವರ್ಷದಂತೆ ಈ ಬಾರಿ ಸಹ ನಗರಸಭೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಹಾಗು ನೀರು ಸರಬರಾಜು ಕಾರ್ಮಿಕರಿಗೆ ಬುಧವಾರ ಮಳೆಗಾಲದಲ್ಲಿ ಅನುಕೂಲವಾಗುವಂತೆ ಜರ್ಕೀನ್ ವಿತರಿಸಲಾಯಿತು.
      ಕಾಯಂ ಹಾಗು ಗುತ್ತಿಗೆ ಒಟ್ಟು ೨೭೫ ಪೌರಕಾರ್ಮಿಕರಿಗೆ ಹಾಗು ೬೫ ನೀರು ಸರಬರಾಜು ಕಾರ್ಮಿಕರಿಗೆ ಜರ್ಕೀನ್ ವಿತರಿಸಲಾಯಿತು. ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಸದಸ್ಯರಾದ ಲತಾ ಚಂದ್ರಶೇಖರ್, ಆರ್. ಶ್ರೇಯಸ್, ಕಾಂತರಾಜ್, ಪೌರಾಯುಕ್ತ ಮನುಕುಮಾರ್, ಅಧಿಕಾರಿಗಳಾದ ಎಸ್.ಆರ್ ಸತೀಶ್, ಆರ್.ಬಿ ಸತೀಶ್, ಹೊರಗುತ್ತಿಗೆ ಪೌರನೌಕರರ ಸಂಘದ ಜಿಲ್ಲಾಧ್ಯಕ್ಷ ಮಹಮದ್ ಗೌಸ್, ಪೌರಕಾರ್ಮಿಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪೊಲೀಸ್ ಕಣ್ಗಾವಲಿನ ಜೊತೆಗೆ ಸಿ.ಸಿ ಕ್ಯಾಮೆರಾ ಅಳವಡಿಕೆ ಅನಿವಾರ್ಯ

ಭದ್ರಾವತಿ ನಗರದ ಪ್ರಮುಖ ಸ್ಥಳಗಳಲ್ಲಿ ಒಂದಾದ ಸಿ.ಎನ್ ರಸ್ತೆಯ ರಂಗಪ್ಪ ವೃತ್ತ.
ಭದ್ರಾವತಿ, ಜು. ೬: ತಾಲೂಕು ಸೂಕ್ಷ್ಮ ಪ್ರದೇಶವಾಗಿದ್ದು, ಇಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ಸಾಮಾನ್ಯವಾಗಿ ಬಿಟ್ಟಿವೆ. ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಹಗಲಿರುಳು ಕಣ್ಣಿಡುವಂತಾಗಿದೆ. ಆದರೂ ಸಹ ನಿಯಂತ್ರಿಸುವುದು ಅಸಾಧ್ಯವಾಗುತ್ತಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಕಣ್ಗಾವಲಿನ ಜೊತೆಗೆ ಸಿ.ಸಿ ಕ್ಯಾಮೆರಾ ಅಳವಡಿಕೆ ಸಹ ಅಗತ್ಯವಾಗಿದೆ.
      ಇತ್ತೀಚಿನ ವರ್ಷಗಳಲ್ಲಿ ನಗರ ಪ್ರದೇಶಗಳಲ್ಲಿ ಕೊಲೆ, ಸುಲಿಗೆ, ದೊಂಬಿ, ಗಲಾಟೆ, ಮಟ್ಕಾ, ಇಸ್ಪೀಟ್ ಜೂಜಾಟ, ಅಲ್ಲದೆ ಗುಂಪು ಘರ್ಷಣೆಗಳು, ರಸ್ತೆ ನಿಯಮ ಉಲ್ಲಂಘನೆ, ಮನೆಗಳ್ಳತನ ಪ್ರಕರಣಗಳು ಸಹ ಹೆಚ್ಚಾಗುತ್ತಿವೆ. ನಗರ ವ್ಯಾಪ್ತಿಯಲ್ಲಿ ಪೇಪರ್‌ಟೌನ್, ನ್ಯೂಟೌನ್, ಹಳೇನಗರ ಹಾಗು ಹೊಸಮನೆಯಲ್ಲಿ ಒಟ್ಟು ೪ ಪೊಲೀಸ್ ಠಾಣೆಗಳಿವೆ. ಅಲ್ಲದೆ ೨ ಪೊಲೀಸ್ ಠಾಣೆಗಳನ್ನು ಇತ್ತೀಚೆಗೆ ಪಿಐ ಠಾಣೆಗಳಾಗಿ ಮೇಲ್ದರ್ಜೆಗೇರಿಸಲಾಗಿದೆ. ಪ್ರಸ್ತುತ ಇರುವ ಸಿಬ್ಬಂದಿಗಳನ್ನು ಬಳಸಿಕೊಂಡು ಶಾಂತಿ ಸುವ್ಯವಸ್ಥೆ ಕೈಗೊಳ್ಳಲಾಗುತ್ತಿದೆ. ಆದರೂ ಸಹ ಕಾನೂನು ಬಾಹಿರ ಕೃತ್ಯಗಳು ಹೆಚ್ಚಾಗುತ್ತಿವೆ. ಪ್ರಸ್ತುತ ಕಾನೂನು ಬಾಹಿರ ಕೃತ್ಯಗಳನ್ನು ನಿಯಂತ್ರಿಸಲು ಪೊಲೀಸ್ ಕಣ್ಗಾವಲಿನ ಜೊತೆಗೆ ಸಿ.ಸಿ ಕ್ಯಾಮೆರಾಗಳ ಅಳವಡಿಕೆ ಅಗತ್ಯವಾಗಿದೆ.
      ನಗರದ ಪ್ರಮುಖ ವೃತ್ತಗಳಲ್ಲಿ ಇನ್ನೂ ಸಿ.ಸಿ ಕ್ಯಾಮೆರಾಗಳು ಸಮರ್ಪಕವಾಗಿ ಅಳವಡಿಕೆಯಾಗಿಲ್ಲ. ಅತಿ ಸೂಕ್ಷ್ಮ ಸ್ಥಳಗಳಾದ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಮಾರುಕಟ್ಟೆಗಳಲ್ಲಿ ಸಿ.ಸಿ ಕ್ಯಾಮೆರಾಗಳು ಅತಿಅವಶ್ಯಕವಾಗಿವೆ. ಉಳಿದಂತೆ ನಗರ ಪ್ರವೇಶಿಸುವ ಪ್ರಮುಖ ಸ್ಥಳಗಳಲ್ಲಿ ಸಿ.ಸಿ ಕ್ಯಾಮೆರಾಗಳ ಅಳವಡಿಕೆಯಾಗಬೇಕಾಗಿದೆ.
      ಪೊಲೀಸ್ ಇಲಾಖೆ ಸಿ.ಸಿ ಕ್ಯಾಮೆರಾಗಳ ಅಳವಡಿಕೆಗೆ ನಗರಸಭೆ ಆಡಳಿತಕ್ಕೆ ಮನವಿ ಸಲ್ಲಿಸಿದ್ದು, ಅಲ್ಲದೆ ತಾಲೂಕು ಬಿಜೆಪಿ ಮಂಡಲವತಿಯಿಂದ ಸಹ ಮನವಿ ಸಲ್ಲಿಸಲಾಗಿದೆ.  ಸಿ.ಸಿ ಕ್ಯಾಮೆರಾ ಅಳವಡಿಕೆಯಿಂದ ಪೊಲೀಸರಿಗೆ ಹೆಚ್ಚಿನ ನೆರವಾಗಲಿದ್ದು, ಈ ಹಿನ್ನಲೆಯಲ್ಲಿ ನಗರಸಭೆ ಆಡಳಿತ ಗಮನ ಹರಿಸಬೇಕಾಗಿದೆ.
      ಈ ನಡುವೆ ಈಗಾಗಲೇ ಪೊಲೀಸ್ ಇಲಾಖೆ ವತಿಯಿಂದ ವಿವಿಧೆಡೆ ಅಳವಡಿಸಲಾಗಿರುವ ಸಿ.ಸಿ ಕ್ಯಾಮೆರಾಗಳ ನಿರ್ವಹಣೆಯನ್ನು ಸಮರ್ಪಕವಾಗಿ ಕೈಗೊಳ್ಳಬೇಕಾಗಿದೆ. ಕೆಲವು ತಾಂತ್ರಿಕ ಸಮಸ್ಯೆಗಳಿಂದಾಗಿ ಕೆಲವು ಸಿ.ಸಿ ಕ್ಯಾಮೆರಾ ಕಾರ್ಯ ನಿರ್ವಹಿಸುತ್ತಿಲ್ಲ. ಈ ಕುರಿತು ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿವೆ. ಪೊಲೀಸ್ ಇಲಾಖೆ ತಕ್ಷಣ ಎಚ್ಚೆತ್ತುಕೊಳ್ಳಬೇಕಾಗಿದೆ.


    ತಾಲೂಕು ಮೂಲತಃ ಸೂಕ್ಷ್ಮ ಪ್ರದೇಶವೆಂಬುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಎಲ್ಲಾ ಸ್ಥಳಗಳಲ್ಲೂ ಪೊಲೀಸರು ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ಪೊಲೀಸ್ ಕಣ್ಗಾವಲಿನ ಜೊತೆಗೆ ಸಿಸಿ ಕ್ಯಾಮೆರಾಗಳನ್ನು ಅತಿ ಸೂಕ್ಷ್ಮಗಳಲ್ಲಿ ಅಳವಡಿಸಬೇಕಾಗಿದೆ. ಇದರಿಂದ ಗಲಭೆಗಳು ಅಥವಾ ಸಮಾಜದಲ್ಲಿ ಆಶಾಂತಿ ವಾತಾವರಣ ಉಂಟು ಮಾಡುವ ಘಟನೆಗಳು ನಡೆದ ತಕ್ಷಣ ತಪ್ಪಿತಸ್ಥರನ್ನು ಪತ್ತೆ ಮಾಡುವ ಜೊತೆಗೆ ನಿಯಂತ್ರಣಕ್ಕೆ ತರಬಹುದಾಗಿದೆ. ಈ ಹಿನ್ನಲೆಯಲ್ಲಿ ನಗರಸಭೆ ಆಡಳಿತ ಅತಿಸೂಕ್ಷ್ಮ ಸ್ಥಳಗಳಲ್ಲಿ ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸಲು ಮುಂದಾಗಬೇಕು.
  - ಎಂ. ಪ್ರಭಾಕರ್, ಅಧ್ಯಕ್ಷ, ಬಿಜೆಪಿ ಮಂಡಲ, ಭದ್ರಾವತಿ.


      ನಗರದ ಅತಿ ಸೂಕ್ಷ್ಮ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವುದು ಅನಿವಾರ್ಯವಾಗಿದೆ. ಈ ಸಂಬಂಧ ಸುಮಾರು ೧೫ ಸ್ಥಳಗಳಲ್ಲಿ ಸಿ.ಸಿ ಕ್ಯಾಮೆರಾ ಅಳವಡಿಸುವಂತೆ ನಗರಸಭೆ ಆಡಳಿತಕ್ಕೆ ಮನವಿ ಸಲ್ಲಿಸಲಾಗಿದೆ. ಸಿ.ಸಿ ಕ್ಯಾಮೆರಾ ಅಳವಡಿಕೆಯಿಂದ ಪೊಲೀಸ್ ಇಲಾಖೆಗೆ ಹೆಚ್ಚಿನ ಅನುಕೂಲವಾಗಲಿದೆ.
                                                    - ರಾಘವೇಂದ್ರ ಕಾಂಡಿಕೆ, ಪೊಲೀಸ್ ನಗರ ವೃತ್ತ ನಿರೀಕ್ಷಕ, ಭದ್ರಾವತಿ.


      ಈ ಹಿಂದೆ ಸುಮಾರು ೧೫ ಲಕ್ಷ ರು. ವೆಚ್ಚದಲ್ಲಿ ಸಿ.ಸಿ ಕ್ಯಾಮೆರಾಗಳನ್ನು ನಗರಸಭೆ ವತಿಯಿಂದ ಅಳವಡಿಸಿಕೊಡಲಾಗಿದೆ. ಇದೀಗ ಪುನಃ ಸುಮಾರು ೧೫ ಸ್ಥಳಗಳಲ್ಲಿ ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಮನವಿ ಪತ್ರಗಳು ಸಲ್ಲಿಕೆಯಾಗಿವೆ. ಸುಮಾರು ೭೦ ರಿಂದ ೮೦ ಲಕ್ಷ ರು. ವ್ಯಯವಾಗಲಿದೆ. ಆದರೆ ಇಷ್ಟೊಂದು ಹಣ ನಮ್ಮ ಬಳಿ ಇಲ್ಲ. ಸದ್ಯಕ್ಕೆ ೧೫ ಲಕ್ಷ ರು. ಇದ್ದು, ಪೊಲೀಸ್ ಇಲಾಖೆ ಸಹ ಯಾವುದಾದರೂ ಅನುದಾನವನ್ನು ನೀಡಿದ್ದಲ್ಲಿ ಸಾಧ್ಯವಾದಷ್ಟು ಹೆಚ್ಚಿನ ಸ್ಥಳಗಳಲ್ಲಿ ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸಬಹುದಾಗಿದೆ.
  - ಮನುಕುಮಾರ್, ಪೌರಾಯುಕ್ತರು, ನಗರಸಭೆ, ಭದ್ರಾವತಿ.



ಭದ್ರಾವತಿ ನಗರದ ಪ್ರಮುಖ ಸ್ಥಳಲ್ಲಿ ಒಂದಾದ ತರೀಕೆರೆ ರಸ್ತೆಯ ಮಹಾತ್ಮಗಾಂಧಿ ವೃತ್ತ.
                                                 

Tuesday, July 5, 2022

ಪ್ರೌಢಶಾಲಾ ಸಹ ಶಿಕ್ಷಕರ ಸಂಘಕ್ಕೆ ಬಿ. ಸಿದ್ದಬಸಪ್ಪ ಸೇರಿದಂತೆ ೧೪ ಮಂದಿ ಅವಿರೋಧ ಆಯ್ಕೆ

ಬಿ. ಸಿದ್ದಬಸಪ್ಪ
ಭದ್ರಾವತಿ, ಜು. ೫ : ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಶಾಖೆಯ ಕಾರ್ಯಕಾರಿ ಸಮಿತಿ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ೧೪ ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
      ಕಾರ್ಯಕಾರಿ ಸಮಿತಿಯಲ್ಲಿ ಒಟ್ಟು ೧೪ ನಿರ್ದೇಶಕ ಸ್ಥಾನಗಳಿದ್ದು, ಹಳೇನಗರದ ಸಂಚಿಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಬಿ. ಸಿದ್ದಬಸಪ್ಪ, ಎಂ. ದಿವಾಕರ್, ಶಿವಾನಾಯ್ಕ, ಹೊಳೆಹೊನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ (ಪ್ರೌಢ ಶಾಲೆ ವಿಭಾಗ) ನಾಗರಾಜಪ್ಪ, ಹುಣಸೇಕಟ್ಟೆ ಸರ್ಕಾರಿ ಪ್ರೌಢಶಾಲೆಯ ಆರ್. ಓಂಕಾರಪ್ಪ, ಅರಳಿಹಳ್ಳಿ ಸರ್ಕಾರಿ ಪ್ರೌಢಶಾಲೆಯ ಶೇಖರನಾಯ್ಕ, ತರೀಕೆರೆ ರಸ್ತೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ(ಪ್ರೌಢಶಾಲೆ ವಿಭಾಗ) ಅಶ್ವಥ್, ಅಂತರಗಂಗೆಯ ಕರ್ನಾಟಕ ಪಬ್ಲಿಕ್ ಶಾಲೆಯ ನವೀನ್‌ಕುಮಾರ್, ಅರಹತೊಳಲು ಸರ್ಕಾರಿ ಪ್ರೌಢಶಾಲೆಯ ಎಚ್.ಬಿ ಶಿವರಾಜ, ಕೂಡ್ಲಿಗೆರೆ ಹರಿಹರೇಶ್ವರ ಪ್ರೌಢಶಾಲೆಯ ಎಚ್. ಉಮೇಶ್, ಹಳೇನಗರದ ಕನಕ ಪ್ರೌಢಶಾಲೆಯ ಸಿ.ಡಿ ಮಂಜುನಾಥ್, ಹೊಸಮನೆ ಅಕ್ಕಮಹಾದೇವಿ ಪ್ರೌಢಶಾಲೆಯ ವೈ.ಕೆ ರಾಜು, ಹುತ್ತಾ ಕಾಲೋನಿ ಸಹ್ಯಾದ್ರಿ ಪ್ರೌಢಶಾಲೆಯ ಡಿ. ಮಂಜಪ್ಪ ಮತ್ತು ಕಾಗದನಗರ ಪೇಪರ್ ಟೌನ್ ಪ್ರೌಢಶಾಲೆಯ ಕೆ. ಬಸವರಾಜಪ್ಪ ಆಯ್ಕೆಯಾಗಿದ್ದಾರೆ.
      ಹೊಸ ಸಿದ್ದಾಪುರ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಆರ್. ಬಸವರಾಜ ಚುನಾವಣಾಧಿಕಾರಿ ಕರ್ತವ್ಯ ನಿರ್ವಹಿಸಿದರು. ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ ಅವರ ಬಣ ಅವಿರೋಧವಾಗಿ ಆಯ್ಕೆಯಾಗಿದೆ. ನೂತನ ನಿರ್ದೇಶಕರನ್ನು ತಾಲೂಕಿನ ಪ್ರೌಢಶಾಲಾ ಶಿಕ್ಷಕರು, ಸಿಬ್ಬಂದಿಗಳು ಅಭಿನಂದಿಸಿದ್ದಾರೆ.


      ಈ ಬಾರಿ ಚುನಾವಣೆಗೆ ಒಟ್ಟು ೨೩ ಮಂದಿ ಆಕಾಂಕ್ಷಿಗಳಿದ್ದರು. ತಾಲೂಕಿನಲ್ಲಿ ಚುನಾವಣೆ ನಡೆಸುವುದು ಬೇಡ. ಒಂದು ವೇಳೆ ಚುನಾವಣೆ ನಡೆದ್ದಲ್ಲಿ ತಪ್ಪು ಸಂದೇಶ ರವಾನೆಯಾಗುತ್ತದೆ ಎಂಬ ಒಮ್ಮತದ ಅಭಿಪ್ರಾಯ ಮೂಡಿಬಂದು ಅಂತಿಮವಾಗಿ ೧೪ ಮಂದಿ ಅವಿರೋಧವಾಗಿ ಆಯ್ಕೆಯಾದರು. ಆಯ್ಕೆಯಾದ ಎಲ್ಲರೂ ಸಹ ನಮ್ಮ ಬಣದವರಾಗಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಇನ್ನೂ ಕ್ರಿಯಾಶೀಲವಾಗಿ ಹೆಚ್ಚಿನ ಚಟುವಟಿಕೆಗಳು ನಡೆಸಲು ಸಾಧ್ಯವಾಗಿದೆ.  
                                                       - ಬಿ. ಸಿದ್ದಬಸಪ್ಪ ಅಧ್ಯಕ್ಷರು, ತಾಲೂಕು ಸರ್ಕಾರಿ ನೌಕರರ ಸಂಘ, ಭದ್ರಾವತಿ.