Sunday, July 17, 2022

ಭದ್ರಾ ನದಿಯಲ್ಲಿ ತಗ್ಗಿದ್ದ ಪ್ರವಾಹ : ೩ ದಿನಗಳಿಂದ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ಸಂತ್ರಸ್ಥರು

ವಿವಿಧ ಸೇವಾ ಕಾರ್ಯಗಳ ಮೂಲಕ ಮಾನವೀಯತೆ ಮೆರೆದ ರಾಜಕೀಯ ಪಕ್ಷಗಳು, ವಿವಿಧ ಸಂಘ-ಸಂಸ್ಥೆಗಳು, ದಾನಿಗಳು

ಭದ್ರಾವತಿ ನ್ಯೂಟೌನ್ ಶ್ರೀ ಸತ್ಯಸಾಯಿ ಸೇವಾ ಟ್ರಸ್ಟ್ ವತಿಯಿಂದ ಸುಮಾರು ೩೫೦ ನೆರೆ ಸಂತ್ರಸ್ಥರಿಗೆ ಒಂದು ವಾರದವರೆಗೆ ಉಚಿತವಾಗಿ ಮಧ್ಯಾಹ್ನದ ಊಟದ ವ್ಯವಸ್ಥೆ ಕೈಗೊಳ್ಳಲಾಗಿದ್ದು, ಡಿ. ಪ್ರಭಾಕರ ಬೀರಯ್ಯ ಸೇವಾ ಕಾರ್ಯಕ್ಕೆ ಚಾಲನೆ ನೀಡಿದರು.
    ಭದ್ರಾವತಿ, ಜು. ೧೭ : ನಗರದ ಹೃದಯ ಭಾಗದಲ್ಲಿ ಕಳೆದ ೨ ದಿನಗಳಿಂದ ಭದ್ರಾ ನದಿಯಿಂದ ಉಂಟಾಗಿರುವ ಪ್ರವಾಹ ಭಾನವಾರ ಸ್ವಲ್ಪಮಟ್ಟಿಗೆ ತಗ್ಗಿದ್ದು, ಪ್ರವಾಹ ಸಂಪೂರ್ಣವಾಗಿ ಉಳಿಮುಖವಾಗುವವರೆಗೂ ಸಂತ್ರಸ್ಥರು ಕಾಳಜಿ ಕೇಂದ್ರಗಳಲ್ಲಿಯೇ ಉಳಿದು ಕೊಳ್ಳುವಂತಾಗಿದೆ. ಈ ನಡುವೆ ವಿವಿಧ ಸಂಘ-ಸಂಸ್ಥೆಗಳು, ರಾಜಕೀಯ ಪಕ್ಷಗಳು, ದಾನಿಗಳು ಸಂತ್ರಸ್ಥರ ನೆರವಿಗೆ ಮುಂದಾಗುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.
      ತಾಲೂಕಿನಲ್ಲಿ ಒಟ್ಟು ೪ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ಒಟ್ಟು ೬೪೪ ಮಂದಿ ಆಶ್ರಯ ಪಡೆದುಕೊಂಡಿದ್ದಾರೆ. ೪ ಕಾಳಜಿ ಕೇಂದ್ರಗಳ ಪೈಕಿ ೩ ನಗರಸಭೆ ವ್ಯಾಪ್ತಿಯಲ್ಲಿದ್ದು, ೫೩೪ ಮಂದಿ ಆಶ್ರಯ ಪಡೆದುಕೊಂಡಿದ್ದಾರೆ. ನಗರಸಭೆ, ತಾಲೂಕು ಪಂಚಾಯಿತಿ ಮತ್ತು ತಾಲೂಕು ಆಡಳಿತದಿಂದ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
      ಶ್ರೀ ಸತ್ಯಸಾಯಿ ಸೇವಾ ಟ್ರಸ್ಟ್ ವತಿಯಿಂದ ಉಚಿತವಾಗಿ ಮಧ್ಯಾಹ್ನದ ಊಟದ ವ್ಯವಸ್ಥೆ:
      ಹಲವಾರು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ನ್ಯೂಟೌನ್ ಶ್ರೀ ಸತ್ಯಸಾಯಿ ಸೇವಾ ಟ್ರಸ್ಟ್ ವತಿಯಿಂದ ಸುಮಾರು ೩೫೦ ನೆರೆ ಸಂತ್ರಸ್ಥರಿಗೆ ಒಂದು ವಾರದವರೆಗೆ ಉಚಿತವಾಗಿ ಮಧ್ಯಾಹ್ನದ ಊಟದ ವ್ಯವಸ್ಥೆ ಕೈಗೊಳ್ಳಲಾಗಿದೆ.
      ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕ ಡಿ. ಪ್ರಭಾಕರ ಬೀರಯ್ಯ ಭಾನುವಾರ ಸಂತ್ರಸ್ಥರಿಗೆ ಊಟ ಬಡಿಸುವ ಮೂಲಕ ಸೇವಾ ಕಾರ್ಯಕ್ಕೆ ಚಾಲನೆ ನೀಡಿದರು.
      ನಗರಸಭೆ ಪೌರಾಯುಕ್ತ ಮನುಕುಮಾರ್, ಪರಿಸರ ಅಭಿಯಂತರ ಪ್ರಭಾಕರ್, ಕಂದಾಯಾಧಿಕಾರಿ ಎಂ.ಎಸ್ ರಾಜ್‌ಕುಮಾರ್ ಸೇರಿದಂತೆ ನಗರಸಭೆ ಸಿಬ್ಬಂದಿಗಳು, ಶ್ರೀ ಸತ್ಯಸಾಯಿ ಸೇವಾ ಟ್ರಸ್ಟ್‌ನ ಪರಮೇಶ್ವರಪ್ಪ ಸೇರಿದಂತೆ ಸೇವಾಕರ್ತರು ಉಪಸ್ಥಿತರಿದ್ದರು.  


ಬಿಜೆಪಿ ಪಕ್ಷದ ವತಿಯಿಂದ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದುಕೊಂಡಿರುವ ನೆರೆ ಸಂತ್ರಸ್ಥರಿಗೆ ಉಚಿತವಾಗಿ ಮಲಗುವ ಹೊದಿಕೆ, ಬಿಸ್ಕೆಟ್, ಬ್ರೆಡ್ ಮತ್ತು ಹಣ್ಣು ವಿತರಿಸಲಾಯಿತು.  
      ಬಿಜೆಪಿ ಪಕ್ಷದ ವತಿಯಿಂದ ಹೊದಿಕೆ, ಬಿಸ್ಕೆಟ್, ಬ್ರೆಡ್, ಹಣ್ಣು ವಿತರಣೆ:
      ಬಿಜೆಪಿ ಪಕ್ಷದ ವತಿಯಿಂದ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದುಕೊಂಡಿರುವ ನೆರೆ ಸಂತ್ರಸ್ಥರಿಗೆ ಉಚಿತವಾಗಿ ಮಲಗುವ ಹೊದಿಕೆ, ಬಿಸ್ಕೆಟ್, ಬ್ರೆಡ್ ಮತ್ತು ಹಣ್ಣು ವಿತರಿಸಲಾಯಿತು.  
      ಪಕ್ಷದ ಪ್ರಮುಖರಾದ ಎಸ್. ಕುಮಾರ್, ವಿ. ಕದಿರೇಶ್, ಎಂ. ಪ್ರಭಾಕರ್, ಚನ್ನೇಶ್, ಕೆ. ಮಂಜುನಾಥ್, ಕರಿಗೌಡ್ರು, ವಿಜಯ್, ಮಂಜುನಾಥ್, ಸತೀಶ್, ರಾಮನಾಥ್ ಬರ್ಗೆ, ರಾಘವೇಂದ್ರ, ಮಂಜುಳಾ, ಕೃಷ್ಣಮೂರ್ತಿ, ಉಮಾ, ಲತಾ, ಪ್ರಭಾಕರ್, ದೇವು, ಅಪ್ಪು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಜೆಡಿಎಸ್ ಪಕ್ಷದ ವತಿಯಿಂದ ಉಚಿತವಾಗಿ ಸ್ವೆಟರ್ ಸೇರಿದಂತೆ ಬೆಚ್ಚನೆ ಹೊದಿಕೆಗಳನ್ನು ವಿತರಿಸಲಾಯಿತು.
            ಜೆಡಿಎಸ್ ಪಕ್ಷದ ವತಿಯಿಂದ ಸ್ಟೆಟ್ಟರ್ ಸೇರಿದಂತೆ ಬೆಚ್ಚನೆ ಹೊದಿಕೆಗಳ ವಿತರಣೆ:
      ಕಾಳಜಿ ಕೇಂದ್ರಗಳಲ್ಲಿ ಉಳಿದುಕೊಂಡಿರುವ ನೆರೆ ಸಂತ್ರಸ್ಥರಿಗೆ ಜೆಡಿಎಸ್ ಪಕ್ಷದ ವತಿಯಿಂದ ಉಚಿತವಾಗಿ ಸ್ವೆಟರ್ ಸೇರಿದಂತೆ ಬೆಚ್ಚನೆ ಹೊದಿಕೆಗಳನ್ನು ವಿತರಿಸಲಾಯಿತು.
      ಸಂತ್ರಸ್ಥರಿಗೆ ಪಕ್ಷದ ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡವುದಾಗಿ ಭರವಸೆ ನೀಡಲಾಯಿತು. ಪಕ್ಷದ ಪ್ರಮುಖರಾದ ಶಾರದ ಅಪ್ಪಾಜಿ, ಆರ್. ಕರುಣಾಮೂರ್ತಿ, ಡಿ.ಟಿ ಶ್ರೀಧರ್, ಮಧುಕುಮಾರ್, ಪ್ರಕಾಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ತುಂಬಿ ಹರಿಯುತ್ತಿರುವ ಭದ್ರೆಗೆ ಬಾಗಿನ ಸಮರ್ಪಣೆ

ಕಳೆದ ೨ ದಿನಗಳಿಂದ ಭದ್ರಾವತಿ ನಗರದ ಹೃದಯ ಭಾಗದಲ್ಲಿ ಭದ್ರಾ ನದಿಯಿಂದ ಉಂಟಾಗಿದ್ದ  ಪ್ರವಾಹ ಸ್ವಲ್ಪಮಟ್ಟಿಗೆ ತಗ್ಗಿದ್ದು, ಈ ನಡುವೆ ಭಾನುವಾರ ಪತಂಜಲಿ ಯೋಗ ಸಂಸ್ಥೆ ಹಾಗು ಪದ್ಮಾಂಭ ಸ್ವಯಂ ಸೇವಾ ಸಂಸ್ಥೆಯ ಮಹಿಳೆಯರಿಂದ ಬಾಗಿನ ಸಮರ್ಪಿಸಲಾಯಿತು.
ಭದ್ರಾವತಿ, ಜು. ೧೭: ಕಳೆದ ೨ ದಿನಗಳಿಂದ ನಗರದ ಹೃದಯ ಭಾಗದಲ್ಲಿ ಭದ್ರಾ ನದಿಯಿಂದ ಉಂಟಾಗಿದ್ದ  ಪ್ರವಾಹ ಸ್ವಲ್ಪಮಟ್ಟಿಗೆ ತಗ್ಗಿದ್ದು, ಈ ನಡುವೆ ಭಾನುವಾರ ಪತಂಜಲಿ ಯೋಗ ಸಂಸ್ಥೆ ಹಾಗು ಪದ್ಮಾಂಭ ಸ್ವಯಂ ಸೇವಾ ಸಂಸ್ಥೆಯ ಮಹಿಳೆಯರಿಂದ ಬಾಗಿನ ಸಮರ್ಪಿಸಲಾಯಿತು.
      ಧಾರ್ಮಿಕ ಆಚರಣೆಗಳನ್ನು ನೆರವೇರಿಸಿ ನಂತರ ಬಾಗಿನ ಸಮರ್ಪಿಸುವ ಮೂಲಕ ರೈತರು, ಕಾರ್ಮಿಕರು ಸೇರಿದಂತೆ ಎಲ್ಲರಿಗೂ ಭದ್ರೆ ಒಳ್ಳೆಯದನ್ನು ಮಾಡಲಿ ಎಂದು ಪ್ರಾರ್ಥಿಸಲಾಯಿತು.


      ಪದ್ಮಾಂಭ ಸ್ವಯಂ ಸೇವಾ ಸಂಸ್ಥೆ ಅಧ್ಯಕ್ಷೆ ಅನ್ನಪೂರ್ಣ ಸತೀಶ್, ಗೌರಮ್ಮ, ಸರ್ವೇಶ್ವರಿ, ಕೋಕಿಲಾ, ವಾಣಿಶ್ರೀ, ಶೋಭಾ, ಅನಿತಾ, ಉಷಾ, ಶೋಭಾ, ಪ್ರತಿಭಾ, ಪ್ರೀತಿ, ಸುಶೀಲಾ, ಅಶ್ವಿನಿ, ಮೋಹನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕುರುಬರ ಸಂಘದ ಚುನಾವಣೆ ಬಿರುಸಿನ ಮತದಾನ : ಎರಡು ಬಣಗಳ ನಡುವೆ ತೀವ್ರ ಪೈಪೋಟಿ

ಭದ್ರಾವತಿ ಹಳೇನಗರದ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ಶ್ರೀ ಕನಕ ವಿದ್ಯಾಸಂಸ್ಥೆ ಆವರಣದಲ್ಲಿ ಭಾನುವಾರ ತಾಲೂಕು ಕುರುಬರ ಸಂಘದ ಚುನಾವಣೆ ನಡೆಯಿತು. ಎರಡು ಬಣಗಳ ನಡುವಿನ ಅಭ್ಯರ್ಥಿಗಳು ಮತಯಾಚನೆ ನಡೆಸಿದರು.
    ಭದ್ರಾವತಿ, ಜು. ೧೭: ತಾಲೂಕು ಕುರುಬರ ಸಂಘದ ಚುನಾವಣೆ ಭಾನುವಾರ ಹಳೇನಗರದ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ಶ್ರೀ ಕನಕ ವಿದ್ಯಾಸಂಸ್ಥೆ ಆವರಣದಲ್ಲಿ ಯಶಸ್ವಿಯಾಗಿ ನಡೆಯಿತು.
       ಒಟ್ಟು ೧೫ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ೨,೧೦೦ಕ್ಕೂ ಹೆಚ್ಚು ಮಂದಿ ಮತದಾನದ ಹಕ್ಕು ಹೊಂದಿದ್ದರು. ಬೆಳಿಗ್ಗೆ ೯ ಗಂಟೆಯಿಂದ ಮತದಾನ ಆರಂಭಗೊಂಡಿತು. ಮಳೆ ಇರದ ಕಾರಣ ಮಧ್ಯಾಹ್ನ ೧೨ ಗಂಟೆವರೆಗೆ ಬಿರುಸಿನ ಮತದಾನ ನಡೆಯಿತು.
      ಹಾಲಿ ಅಧ್ಯಕ್ಷ ಬಿ.ಎಂ ಸಂತೋಷ್ ನೇತೃತ್ವದ ತಂಡ ಪುನಃ ಚುಕ್ಕಾಣಿ ಹಿಡಿಯಲು ೧೨ ಜನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಮಾಲಿ ಸಂಘದ ಅಧ್ಯಕ್ಷ, ಬಿಜೆಪಿ ಮುಖಂಡ ಬಿ.ಎಸ್ ನಾರಾಯಣಪ್ಪ ನೇತೃತ್ವದ ತಂಡ ಈ ಬಾರಿ ಚುಕ್ಕಾಣಿ ಹಿಡಿಯಲು  ೧೫ ಜನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ತೀವ್ರ ಪೈಪೋಟಿಗೆ ಮುಂದಾಗಿರುವುದು ಕಂಡು ಬಂದಿತು.


      ಮತದಾನ ಕೇಂದ್ರದ ಬಳಿ ಎರಡು ತಂಡಗಳ ಬೆಂಬಲಿಗರಿಂದ ಭರ್ಜರಿಯಾಗಿ ಮತಯಾಚನೆ ನಡೆಯಿತು. ಮತದಾನ ಕೇಂದ್ರದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

Saturday, July 16, 2022

ತಾಲೂಕು ಕುರುಬರ ಸಂಘದ ಚುಕ್ಕಾಣಿ ಹಿಡಿಯಲು ಎರಡು ಬಣಗಳ ನಡುವೆ ತೀವ್ರ ಪೈಪೋಟಿ

ಜು.೧೭ರಂದು ಹಳೇನಗರದ ಶ್ರೀ ಕನಕ ವಿದ್ಯಾಸಂಸ್ಥೆ ಆವರಣದಲ್ಲಿ ಚುನಾವಣೆ

ಭದ್ರಾವತಿ ತಾಲೂಕು ಕುರುಬರ ಚುನಾವಣೆಗೆ ಸ್ಪರ್ಧಿಸಿರುವ ಬಿ.ಎಸ್ ನಾರಾಯಣಪ್ಪ ನೇತೃತ್ವದ ೧೫ ಜನರ ತಂಡ.
ಭದ್ರಾವತಿ, ಜು. ೧೬: ನಗರದಲ್ಲಿ ಇತ್ತೀಚಿನ ಕೆಲವು ವರ್ಷಗಳಿಂದ ತಾಲೂಕು ಕುರುಬರ ಸಂಘ ಹೆಚ್ಚಾಗಿ ಮುಂಚೂಣಿಯಲ್ಲಿ ಕಂಡು ಬರುತ್ತಿದ್ದು,  ಈ ಹಿನ್ನಲೆಯಲ್ಲಿ ಜು.೧೭ರಂದು ನಡೆಯುತ್ತಿರುವ ಸಂಘದ ಚುನಾವಣೆ ಹೆಚ್ಚು ಗಮನ ಸೆಳೆಯುತ್ತಿದೆ.
      ತಾಲೂಕು ಕುರುಬರ ಸಂಘ ಹಳೇನಗರದ ಬಸವೇಶ್ವರ ವೃತ್ತದ ಸಮೀಪ ಅಧಿಕೃತ ಕಛೇರಿ ಹೊಂದಿದ್ದು, ಜೊತೆಗೆ ವಿದ್ಯಾಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದೆ.  ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡಿರುವ ಕುರುಬ ಸಮಾಜದ ಪ್ರಮುಖರು ಸಂಘದ ಚುಕ್ಕಾಣಿ ಹಿಡಿದು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಆದರೂ ಈ ನಡುವೆ ೨-೩ ಬಾರಿ ಸಂಘದ ಚುನಾವಣೆ ಸಂಬಂಧ ನ್ಯಾಯಾಲಯ ಮಧ್ಯ ಪ್ರವೇಶಿಸುವ ಮೂಲಕ ಸಮಸ್ಯೆಯನ್ನು ಇತ್ಯರ್ಥಪಡಿಸಿದೆ. ಇದೀಗ ಸಂಘದ ಚುಕ್ಕಾಣಿ ಹಿಡಿಯಲು ಎರಡು ಬಣಗಳು ತೀವ್ರ ಪೈಪೋಟಿಗೆ ಮುಂದಾಗಿವೆ. ವಿಶೇಷ ಎಂದರೆ ಪ್ರಸ್ತುತ ಅಧ್ಯಕ್ಷರಾಗಿರುವ ಬಿ.ಎಂ ಸಂತೋಷ್ ನೇತೃತ್ವದ ತಂಡ ಪುನಃ ಚುಕ್ಕಾಣಿ ಹಿಡಿಯಲು ಮುಂದಾಗಿದೆ.
      ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಮಾಲಿ ಸಂಘದ ಅಧ್ಯಕ್ಷ, ಬಿಜೆಪಿ ಮುಖಂಡ ಬಿ.ಎಸ್ ನಾರಾಯಣಪ್ಪ ನೇತೃತ್ವದ ತಂಡ ಈ ಬಾರಿ ಚುಕ್ಕಾಣಿ ಹಿಡಿಯಲು ತೀವ್ರ ಪೈಪೋಟಿಗೆ ಮುಂದಾಗಿದೆ. ಒಟ್ಟು ೧೫ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಬಿ.ಎಸ್ ನಾರಾಯಣಪ್ಪ ಬಣದಿಂದ ಸಿ.ಎಚ್ ಅರುಣ್‌ಕುಮಾರ್ ಹೆಗ್ಡೆ, ಎಚ್. ಕನಕೆಗೌಡ, ಕೃಷ್ಣಮೂರ್ತಿ, ಜಿ. ಕೃಷ್ಣಮೂರ್ತಿ(ಅಂಗಡಿ ಕಿಟ್ಟಣ್ಣ), ಜಿ.ಎಂ ಕೋಮಲ, ಸಿ. ಗಂಗಾಧರ, ಬಿ.ಎಸ್ ನಾರಾಯಣಪ್ಪ, ಜೆ. ಮಂಜುನಾಥ್, ಟಿ.ಎಚ್. ರಮೇಶ್, ಬಿ.ಕೆ ಲಕ್ಷ್ಮಣ, ಜಿ. ವೀರಣ್ಣ, ಎಚ್.ಜಿ ವೆಂಕಟೇಶ್, ಶಿವಣ್ಣಗೌಡ, ಎಚ್. ಶ್ರೀನಿವಾಸ್ ಮತ್ತು ಹೇಮಾವತಿ ಶಿವಾನಂದ್ ಸ್ಪರ್ಧಿಸಿದ್ದಾರೆ.
      ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಮತ್ತು ತಾಲೂಕು ಶ್ರೀ ಕನಕ ಸಮುದಾಯ ಭವನ ನಿರ್ಮಾಣ ಮತ್ತು ಪಿ.ಯು ಕಾಲೇಜು ಮತ್ತು ನರ್ಸಿಂಗ್ ಕಾಲೇಜ್ ಪ್ರಾರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವುದಾಗಿ ಈ ಬಣ ಭರವಸೆ ನೀಡುವ ಮೂಲಕ ಮತಯಾಚನೆ ನಡೆಸುತ್ತಿದೆ. ಇದಕ್ಕೆ ಬೆಂಬಲವಾಗಿ ಬ್ಲಾಕ್ ಕಾಂಗ್ರೆಸ್ ಕಾರ್ಮಿಕರ ವಿಭಾಗದ ತಾಲೂಕು ಅಧ್ಯಕ್ಷ ಬಿ. ಅಭಿಲಾಶ್, ಹನುಮಂತಪ್ಪ ಮತ್ತು ನಾಗಭೂಷಣ್ ಪ್ರಚಾರ ಕಾರ್ಯದಲ್ಲಿ ತೊಡಗಿಸಿ ಕೊಂಡಿದ್ದಾರೆ.  ಒಟ್ಟಾರೆ ಈ ಚುನಾವಣೆ ಈ ಬಾರಿ ಹೆಚ್ಚು ಗಮನ ಸೆಳೆಯುತ್ತಿದ್ದು, ಸಂಘದ ಚುಕ್ಕಾಣಿ ಯಾರು ಹಿಡಿಯುತ್ತಾರೆಂಬುದನ್ನು ಕಾದು ನೋಡಬೇಕಾಗಿದೆ.
      ಹಳೇನಗರದ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ಶ್ರೀ ಕನಕ ವಿದ್ಯಾಸಂಸ್ಥೆ ಆವರಣದಲ್ಲಿ ಜು.೧೭ರಂದು ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೪ ಗಂಟೆ ವರೆಗೆ ಚುನಾವಣೆ ನಡೆಯುತ್ತಿದ್ದು, ನವೀನ್‌ಕುಮಾರ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಮಳೆಯಿಂದ ೬ ಮನೆಗಳು ನೆಲಸಮ, ೧೩೭ ಮನೆಗಳಿಗೆ ಭಾಗಶಃ ಹಾನಿ

ಮುಂದುವರೆದ ಭದ್ರಾ ನದಿ ಪ್ರವಾಹ : ಆತಂಕದಲ್ಲಿ ತಗ್ಗು ಪ್ರದೇಶದ ನಿವಾಸಿಗಳು

ಭದ್ರಾವತಿ ತಾಲೂಕಿನ ಆನವೇರಿ ವ್ಯಾಪ್ತಿಯಲ್ಲಿ ಮಳೆಯಿಂದ ಮನೆಗಳು ಹಾನಿಗೊಳಗಾಗಿರುವುದು.
ಭದ್ರಾವತಿ, ಜು. ೧೬ : ಕಳೆದ ಕೆಲವು ದಿನಗಳಿಂದ ತಾಲೂಕಿನಾದ್ಯಂತ ಮಳೆಯಾಗುತ್ತಿದ್ದು, ಇದುವೆರೆಗೂ ಒಟ್ಟು ೬ ಮನೆಗಳು ಸಂಪೂರ್ಣವಾಗಿ ನೆಲಸಮಗೊಂಡಿವೆ. ೧೩೭ ಮನೆಗಳು ಭಾಗಶಃ ಹಾನಿಯಾಗಿದ್ದು, ಯಾವುದೇ ಜೀವ ಹಾನಿ ಸಂಭವಿಸಿಲ್ಲ.
      ಈ ಕುರಿತು ತಹಸೀಲ್ದಾರ್ ಆರ್. ಪ್ರದೀಪ್ ಮಾಹಿತಿ ನೀಡಿದ್ದು, ಮಳೆಯಿಂದ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ೨ ಮತ್ತು ಹೊಳೆಹೊನ್ನೂರು ಭಾಗದಲ್ಲಿ ೪ ಮನೆಗಳು ಸಂಪೂರ್ಣವಾಗಿ ಹಾನಿಯಾಗಿವೆ. ಉಳಿದಂತೆ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ೪೫, ಕೂಡ್ಲಿಗೆರೆ ೨೦, ಹೊಳೆಹೊನ್ನೂರು ೨೪, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಆನವೇರಿಯಲ್ಲಿ ೧೬ ಮತ್ತು ಕಲ್ಲಿಹಾಳ್‌ನಲ್ಲಿ ೩೨ ಮನೆಗಳು ಭಾಗಶಃ ಹಾನಿಯಾಗಿವೆ.
      ತಾಲೂಕಿನಲ್ಲಿ ಒಟ್ಟು ೪ ಕಾಳಜಿ ಕೇಂದ್ರ :
       ಭದ್ರಾ ಜಲಾಶಯದಿಂದ ಹೆಚ್ಚುವರಿ ನೀರು ನದಿಗೆ ಬಿಟ್ಟಿರುವ ಹಿನ್ನಲೆಯಲ್ಲಿ ಕಳೆದ ೨ ದಿನಗಳಿಂದ ನಗರಸಭೆ ವ್ಯಾಪ್ತಿ ಹಾಗು ಗ್ರಾಮಾಂತರ ಭಾಗದ ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗಿದ್ದು, ಪ್ರವಾಹ ಪೀಡಿತ ಸಂತ್ರಸ್ಥರನ್ನು ಸುರಕ್ಷಿತ ಸ್ಥಳಗಳಿಗೆ, ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಈ ಸಂಬಂಧ ತಂಡಗಳನ್ನು ರಚನೆ ಮಾಡಲಾಗಿದೆ.
      ನಗರಸಭೆ ವಾರ್ಡ್ ನಂ.೨ರ ವ್ಯಾಪ್ತಿಯ ಕವಲಗುಂದಿ ತಗ್ಗು ಪ್ರದೇಶದ ೪೦ ಕುಟುಂಬದ ಒಟ್ಟು ೧೮೪ ಮಂದಿಯನ್ನು ಅಪ್ಪರ್‌ಹುತ್ತಾದಲ್ಲಿರುವ ಒಕ್ಕಲಿಗರ ಸಮುದಾಯ ಭವನದಲ್ಲಿ ತೆರೆಯಲಾಗಿರುವ ಕಾಳಜಿ ಕೇಂದ್ರಕ್ಕೆ,  ಎಕಿನ್ಷಾ ಕಾಲೋನಿ ಮತ್ತು ಗುಂಡೂರಾವ್ ಶೆಡ್ ತಗ್ಗು ಪ್ರದೇಶದ ೫೦ ಕುಟುಂಬಗಳ ಒಟ್ಟು ೧೨೦ ಮಂದಿಯನ್ನು ನಗರಸಭೆ ಸಮೀಪದ ತರೀಕೆರೆ ರಸ್ತೆಯಲ್ಲಿರುವ ವಳ್ಳುವರ್ ಕಲ್ಯಾಣ ಮಂಟದಲ್ಲಿ ತೆರೆಯಲಾಗಿರುವ ಕಾಳಜಿ ಕೇಂದ್ರಕ್ಕೆ, ಹೊಳೆಹೊನ್ನೂರು ಭಾಗದ ತಗ್ಗು ಪ್ರದೇಶದ ೨೫ ಕುಟುಂಬಗಳ ಒಟ್ಟು ೧೧೦ ಮಂದಿಯನ್ನು ಬಿಸಿಎಂ ವಿದ್ಯಾರ್ಥಿ ನಿಲಯದಲ್ಲಿ ತೆರೆಯಲಾಗಿರುವ ಕಾಳಜಿ ಕೇಂದ್ರಕ್ಕೆ ಹಾಗು ಬಿ.ಎಚ್ ರಸ್ತೆ ಅಂಡರ್ ಬ್ರಿಡ್ಜ್ ಸಮೀಪದ ನಗರಸಭೆ ವಾರ್ಡ್ ನಂ.೩ರ ಅಂಬೇಡ್ಕರ್ ನಗರದ ತಗ್ಗು ಪ್ರದೇಶದ ೬೦ ಕುಟುಂಬಗಳ ಒಟ್ಟು ೨೩೦ ಮಂದಿಯನ್ನು ಹಾಲಪ್ಪ ವೃತ್ತದ ಸಮೀಪದಲ್ಲಿರುವ ಭದ್ರ ಪ್ರೌಢಶಾಲೆಯಲ್ಲಿ ತೆರೆಯಲಾಗಿರುವ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಕಾಳಜಿ ಕೇಂದ್ರಗಳಲ್ಲಿ ಒಟ್ಟು ೧೭೫ ಕುಟುಂಬಗಳ ೬೪೪ ಮಂದಿ ಆಶ್ರಯ ಪಡೆದುಕೊಂಡಿದ್ದಾರೆ.


ಭದ್ರಾ ಜಲಾಶಯದಿಂದ ಹೆಚ್ಚುವರಿ ನೀರು ನದಿಗೆ ಬಿಟ್ಟಿರುವ ಹಿನ್ನಲೆಯಲ್ಲಿ ನಗರದ ಹೃದಯ ಭಾಗದಲ್ಲಿ ಪ್ರವಾಹ ಉಂಟಾಗಿದ್ದು, ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.  

      ಮುಂದುವರೆದ ಪ್ರವಾಹ :
      ಭದ್ರಾ ಜಲಾಶಯದಲ್ಲಿ ಹೆಚ್ಚುವರಿ ನೀರು ನದಿಗೆ ಬಿಟ್ಟ ಹಿನ್ನಲೆಯಲ್ಲಿ ಗುರುವಾರ ರಾತ್ರಿಯಿಂದ ಉಂಟಾಗಿರುವ ಪ್ರವಾಹ ಶನಿವಾರ ಸಹ ಮುಂದುವರೆದಿದ್ದು, ತಗ್ಗು ಪ್ರದೇಶದಲ್ಲಿನ ನಿವಾಸಿಗಳು ಕಾಳಜಿ ಕೇಂದ್ರಗಳಲ್ಲಿ ೨ನೇ ದಿನ ಕಾಲ ಕಳೆಯುವಂತಾಗಿದೆ.
      ೨ ದಿನಗಳಿಂದ ಪ್ರವಾಹ ಎದುರಾಗಿರುವ ಹಿನ್ನಲೆಯಲ್ಲಿ ಮನೆಗಳು ಕುಸಿಯುವ ಭೀತಿ ಒಂದೆಡೆ ಎದುರಾಗಿದೆ. ಮತ್ತೊಂದೆಡೆ ಜಲಾಶಯದಿಂದ ಇನ್ನೂ ಅಧಿಕ ಪ್ರಮಾಣದ ನೀರನ್ನು ಹೊರ ಬಿಟ್ಟಲ್ಲಿ ಪ್ರವಾಹ ಮತ್ತಷ್ಟು ಏರಿಕೆಯಾಗುವ ಲಕ್ಷಣಗಳು ಕಂಡು ಬರುತ್ತಿವೆ. ನಗರಸಭೆ, ತಾಲೂಕು ಪಂಚಾಯಿತಿ ಮತ್ತು ತಾಲೂಕು ಆಡಳಿತಗಳು ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ಯಶಸ್ವಿಯಾಗಿವೆ.
      

ಭದ್ರಾವತಿ ತಾಲೂಕಿನ ಆನವೇರಿ ವ್ಯಾಪ್ತಿಯಲ್ಲಿ ಮಳೆಯಿಂದ ಮನೆಗಳು ಹಾನಿಗೊಳಗಾಗಿರುವುದು.
     

ಸಮಾಜವಾದಿ ಸಿದ್ದಾಂತಗಳು ದೇಶದ ಪ್ರತಿಯೊಬ್ಬರ ಬದುಕು ರೂಪಿಸುವ ಶಕ್ತಿ : ಕಿಮ್ಮನೆ ರತ್ನಾಕರ್

ಭದ್ರಾವತಿ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಕನ್ನಡ ವಿಭಾಗದ ಸಹಯೋಗದೊಂದಿಗೆ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ವತಿಯಿಂದ ಸಮಾಜವಾದಿ ನೇತಾರ ಶಾಂತವೇರಿ ಗೋಪಾಲಗೌಡರ ಜನ್ಮ ಶತಮಾನೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ  ಉಪನ್ಯಾಸ ಕಾರ್ಯಕ್ರಮವನ್ನು ಮಾಜಿ ಸಚಿವ ಕಿಮ್ಮನೆ ರತ್ನಾಕರ್  ಉದ್ಘಾಟಿಸಿದರು.
    ಭದ್ರಾವತಿ, ಜು. ೧೬: ಸಮಾಜವಾದಿ ಸಿದ್ದಾಂತಗಳು ಈ ದೇಶದ ಪ್ರತಿಯೊಬ್ಬರ ಬದುಕನ್ನು ರೂಪಿಸುವ ಶಕ್ತಿ ಹೊಂದಿವೆ. ಈ ಹಿನ್ನಲೆಯಲ್ಲಿ ನಮ್ಮೆಲ್ಲರ ಮುಂದೆ ಇಂದಿಗೂ ಶಾಂತವೇರಿ ಗೋಪಾಲಗೌಡರು ಉಳಿದುಕೊಂಡಿದ್ದಾರೆಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
      ಅವರು ಶನಿವಾರ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಕನ್ನಡ ವಿಭಾಗದ ಸಹಯೋಗದೊಂದಿಗೆ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ವತಿಯಿಂದ ಸಮಾಜವಾದಿ ನೇತಾರ ಶಾಂತವೇರಿ ಗೋಪಾಲಗೌಡರ ಜನ್ಮ ಶತಮಾನೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ  ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
      ದೇಶದಲ್ಲಿ ರಾಜಕೀಯ ಬೆಳವಣಿಗೆಗಳು ಸಮಾಜವಾದಿ ಸಿದ್ದಾಂತಗಳ ಆಧಾರದ ಮೇಲೆ ರೂಪುಗೊಂಡವು. ಜನರು ಸಹ ಈ ಸಿದ್ದಾಂತಗಳಿಗೆ ಬದ್ಧರಾಗಿದ್ದರು. ಪರಸ್ಪರ ನಡುವೆ ಸಹಕಾರ, ಪ್ರೀತಿ, ಸೌಹಾರ್ದತೆ, ಸಮಾನತೆ ಪರಿಕಲ್ಪನೆ ಮೂಡಿದ್ದವು. ನಂತರದ ದಿನಗಳಲ್ಲಿ ಈ ಸಿದ್ದಾಂತಗಳು ಕಣ್ಮರೆಯಾಗುತ್ತಿದ್ದಂತೆ ಈ ದೇಶದ ಚಿತ್ರಣ ಬದಲಾಗಿದೆ. ಅಸಮಾನತೆ, ಸ್ವಾರ್ಥ, ಜಾತೀಯತೆ, ಧರ್ಮಾಂಧತೆ ಹೆಚ್ಚಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
      ಶಾಂತವೇರಿ ಗೋಪಾಲಗೌಡರು ಇಂದಿಗೂ ನಮ್ಮೆಲ್ಲರ ಮುಂದೆ ಉಳಿದುಕೊಳ್ಳಲು ಈ ಸಿದ್ದಾಂತಗಳು ಕಾರಣವಾಗಿವೆ. ಅನಕ್ಷರಸ್ಥರಿಂದ ಈ ದೇಶ ಹಾಳಾಗುವುದಿಲ್ಲ. ನಮ್ಮ ಹಿಂದಿನ ಸಮಾಜ ಬದುಕಿನ ಮೌಲ್ಯವನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿತ್ತು. ಆದರೆ ಇಂದಿನ ಅಕ್ಷರಸ್ಥರು ಈ ದೇಶಕ್ಕೆ ಕಂಟಕವಾಗುತ್ತಿದ್ದು, ದಾರಿ ತಪ್ಪಿ ಸಾಗುತ್ತಿದ್ದಾರೆ. ನಾವೆಲ್ಲರೂ ಒಳ್ಳೆಯ ಮಾರ್ಗದಲ್ಲಿ ಸಾಗಲು ಸಮಾಜವಾದಿ ಸಿದ್ದಾಂತಗಳು ಅವಶ್ಯಕವಾಗಿವೆ ಎಂದರು.
      ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ಇಂದಿನ ಸಮಾಜಕ್ಕೆ ಶಾಂತವೇರಿ ಗೋಪಾಲಗೌಡರ ಬದುಕು ಹಾಗು ಸಮಾಜವಾದಿ ಸಿದ್ದಾಂತಗಳು ಅವಶ್ಯಕವಾಗಿವೆ. ಈ ಹಿನ್ನಲೆಯಲ್ಲಿ ಪರಿಷತ್ ವತಿಯಿಂದ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ವಿದ್ಯಾರ್ಥಿಗಳು ಶಾಂತವೇರಿ ಗೋಪಾಲಗೌಡರ ಕುರಿತು ಹೆಚ್ಚಿನ ಮಾಹಿತಿ ಹೊಂದಬೇಕೆಂದರು.
      ಕಾಲೇಜಿನ ಪ್ರಾಂಶುಪಾಲ ಡಾ. ಧನಂಜಯ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಬಿ.ಕೆ ಜಗನ್ನಾಥ್, ಹಿರಿಯ ಸಾಹಿತಿ ಜಿ. ಸಂಗಮೇಶ್ವರ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷೆ ಎಂ.ಎಸ್ ಸುಧಾಮಣಿ, ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಕೋಡ್ಲು ಯಜ್ಞಯ್ಯ, ಉಪನ್ಯಾಸಕಿ ಡಾ. ಶೈಲಜಾ ನಿವೃತ್ತ ಮುಖ್ಯ ಶಿಕ್ಷಕ ಸಿ. ಜಯಪ್ಪ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
      ಉಪನ್ಯಾಸಕ ಎನ್. ರವಿ ಕಾರ್ಯಕ್ರಮ ನಿರೂಪಿಸಿದರು. ಪರಿಷತ್ ಕಾರ್ಯದರ್ಶಿ ಎಚ್. ತಿಮ್ಮಪ್ಪ ಸ್ವಾಗತಿಸಿದರು. ಎಂ.ಈ ಜಗದೀಶ್, ಕಾಲೇಜಿನ ಬೋಧಕ ಹಾಗು ಬೋಧಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ರೇಣುಕಾಂಬ ಟ್ರಾವೆಲ್ಸ್ ಮಾಲೀಕ ಎಂ.ವಿ ರಮೇಶ್ ನಿಧನ

ಎಂ.ವಿ ರಮೇಶ್
ಭದ್ರಾವತಿ, ಜು. ೧೬: ನಗರದ ರೇಣುಕಾಂಬ ಟ್ರಾವೆಲ್ಸ್ ಮಾಲೀಕ, ಭೂತನಗುಡಿ ನಿವಾಸಿ ಎಂ.ವಿ ರಮೇಶ್(೬೨) ಶುಕ್ರವಾರ ಸಂಜೆ ನಿಧನ ಹೊಂದಿದರು.
      ಪತ್ನಿ, ಓರ್ವ ಪುತ್ರಿ, ಇಬ್ಬರು ಪುತ್ರರನ್ನು ಹೊಂದಿದ್ದರು. ಬಿ.ಎಚ್ ರಸ್ತೆ ಖಾಸಗಿ ಬಸ್ ನಿಲ್ದಾಣ ಸಮೀಪದಲ್ಲಿರುವ ರೇಣುಕಾಂಬ ಟ್ರಾವೆಲ್ಸ್ ಮೂಲಕ ಚಿರಪರಿಚಿತರಾಗಿದ್ದರು. ಇವರ ಅಂತ್ಯಕ್ರಿಯೆ ಶನಿವಾರ ಬೆಳಿಗ್ಗೆ ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. ಇವರ ನಿಧನಕ್ಕೆ ನಗರದ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ.