ಜು.೧೭ರಂದು ಹಳೇನಗರದ ಶ್ರೀ ಕನಕ ವಿದ್ಯಾಸಂಸ್ಥೆ ಆವರಣದಲ್ಲಿ ಚುನಾವಣೆ
ಭದ್ರಾವತಿ ತಾಲೂಕು ಕುರುಬರ ಚುನಾವಣೆಗೆ ಸ್ಪರ್ಧಿಸಿರುವ ಬಿ.ಎಸ್ ನಾರಾಯಣಪ್ಪ ನೇತೃತ್ವದ ೧೫ ಜನರ ತಂಡ.
ಭದ್ರಾವತಿ, ಜು. ೧೬: ನಗರದಲ್ಲಿ ಇತ್ತೀಚಿನ ಕೆಲವು ವರ್ಷಗಳಿಂದ ತಾಲೂಕು ಕುರುಬರ ಸಂಘ ಹೆಚ್ಚಾಗಿ ಮುಂಚೂಣಿಯಲ್ಲಿ ಕಂಡು ಬರುತ್ತಿದ್ದು, ಈ ಹಿನ್ನಲೆಯಲ್ಲಿ ಜು.೧೭ರಂದು ನಡೆಯುತ್ತಿರುವ ಸಂಘದ ಚುನಾವಣೆ ಹೆಚ್ಚು ಗಮನ ಸೆಳೆಯುತ್ತಿದೆ.
ತಾಲೂಕು ಕುರುಬರ ಸಂಘ ಹಳೇನಗರದ ಬಸವೇಶ್ವರ ವೃತ್ತದ ಸಮೀಪ ಅಧಿಕೃತ ಕಛೇರಿ ಹೊಂದಿದ್ದು, ಜೊತೆಗೆ ವಿದ್ಯಾಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದೆ. ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡಿರುವ ಕುರುಬ ಸಮಾಜದ ಪ್ರಮುಖರು ಸಂಘದ ಚುಕ್ಕಾಣಿ ಹಿಡಿದು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಆದರೂ ಈ ನಡುವೆ ೨-೩ ಬಾರಿ ಸಂಘದ ಚುನಾವಣೆ ಸಂಬಂಧ ನ್ಯಾಯಾಲಯ ಮಧ್ಯ ಪ್ರವೇಶಿಸುವ ಮೂಲಕ ಸಮಸ್ಯೆಯನ್ನು ಇತ್ಯರ್ಥಪಡಿಸಿದೆ. ಇದೀಗ ಸಂಘದ ಚುಕ್ಕಾಣಿ ಹಿಡಿಯಲು ಎರಡು ಬಣಗಳು ತೀವ್ರ ಪೈಪೋಟಿಗೆ ಮುಂದಾಗಿವೆ. ವಿಶೇಷ ಎಂದರೆ ಪ್ರಸ್ತುತ ಅಧ್ಯಕ್ಷರಾಗಿರುವ ಬಿ.ಎಂ ಸಂತೋಷ್ ನೇತೃತ್ವದ ತಂಡ ಪುನಃ ಚುಕ್ಕಾಣಿ ಹಿಡಿಯಲು ಮುಂದಾಗಿದೆ.
ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಮಾಲಿ ಸಂಘದ ಅಧ್ಯಕ್ಷ, ಬಿಜೆಪಿ ಮುಖಂಡ ಬಿ.ಎಸ್ ನಾರಾಯಣಪ್ಪ ನೇತೃತ್ವದ ತಂಡ ಈ ಬಾರಿ ಚುಕ್ಕಾಣಿ ಹಿಡಿಯಲು ತೀವ್ರ ಪೈಪೋಟಿಗೆ ಮುಂದಾಗಿದೆ. ಒಟ್ಟು ೧೫ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಬಿ.ಎಸ್ ನಾರಾಯಣಪ್ಪ ಬಣದಿಂದ ಸಿ.ಎಚ್ ಅರುಣ್‌ಕುಮಾರ್ ಹೆಗ್ಡೆ, ಎಚ್. ಕನಕೆಗೌಡ, ಕೃಷ್ಣಮೂರ್ತಿ, ಜಿ. ಕೃಷ್ಣಮೂರ್ತಿ(ಅಂಗಡಿ ಕಿಟ್ಟಣ್ಣ), ಜಿ.ಎಂ ಕೋಮಲ, ಸಿ. ಗಂಗಾಧರ, ಬಿ.ಎಸ್ ನಾರಾಯಣಪ್ಪ, ಜೆ. ಮಂಜುನಾಥ್, ಟಿ.ಎಚ್. ರಮೇಶ್, ಬಿ.ಕೆ ಲಕ್ಷ್ಮಣ, ಜಿ. ವೀರಣ್ಣ, ಎಚ್.ಜಿ ವೆಂಕಟೇಶ್, ಶಿವಣ್ಣಗೌಡ, ಎಚ್. ಶ್ರೀನಿವಾಸ್ ಮತ್ತು ಹೇಮಾವತಿ ಶಿವಾನಂದ್ ಸ್ಪರ್ಧಿಸಿದ್ದಾರೆ.
ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಮತ್ತು ತಾಲೂಕು ಶ್ರೀ ಕನಕ ಸಮುದಾಯ ಭವನ ನಿರ್ಮಾಣ ಮತ್ತು ಪಿ.ಯು ಕಾಲೇಜು ಮತ್ತು ನರ್ಸಿಂಗ್ ಕಾಲೇಜ್ ಪ್ರಾರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವುದಾಗಿ ಈ ಬಣ ಭರವಸೆ ನೀಡುವ ಮೂಲಕ ಮತಯಾಚನೆ ನಡೆಸುತ್ತಿದೆ. ಇದಕ್ಕೆ ಬೆಂಬಲವಾಗಿ ಬ್ಲಾಕ್ ಕಾಂಗ್ರೆಸ್ ಕಾರ್ಮಿಕರ ವಿಭಾಗದ ತಾಲೂಕು ಅಧ್ಯಕ್ಷ ಬಿ. ಅಭಿಲಾಶ್, ಹನುಮಂತಪ್ಪ ಮತ್ತು ನಾಗಭೂಷಣ್ ಪ್ರಚಾರ ಕಾರ್ಯದಲ್ಲಿ ತೊಡಗಿಸಿ ಕೊಂಡಿದ್ದಾರೆ. ಒಟ್ಟಾರೆ ಈ ಚುನಾವಣೆ ಈ ಬಾರಿ ಹೆಚ್ಚು ಗಮನ ಸೆಳೆಯುತ್ತಿದ್ದು, ಸಂಘದ ಚುಕ್ಕಾಣಿ ಯಾರು ಹಿಡಿಯುತ್ತಾರೆಂಬುದನ್ನು ಕಾದು ನೋಡಬೇಕಾಗಿದೆ.
ಹಳೇನಗರದ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ಶ್ರೀ ಕನಕ ವಿದ್ಯಾಸಂಸ್ಥೆ ಆವರಣದಲ್ಲಿ ಜು.೧೭ರಂದು ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೪ ಗಂಟೆ ವರೆಗೆ ಚುನಾವಣೆ ನಡೆಯುತ್ತಿದ್ದು, ನವೀನ್‌ಕುಮಾರ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.
No comments:
Post a Comment