ಭದ್ರಾವತಿ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಕನ್ನಡ ವಿಭಾಗದ ಸಹಯೋಗದೊಂದಿಗೆ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ವತಿಯಿಂದ ಸಮಾಜವಾದಿ ನೇತಾರ ಶಾಂತವೇರಿ ಗೋಪಾಲಗೌಡರ ಜನ್ಮ ಶತಮಾನೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಉಪನ್ಯಾಸ ಕಾರ್ಯಕ್ರಮವನ್ನು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಉದ್ಘಾಟಿಸಿದರು.
ಭದ್ರಾವತಿ, ಜು. ೧೬: ಸಮಾಜವಾದಿ ಸಿದ್ದಾಂತಗಳು ಈ ದೇಶದ ಪ್ರತಿಯೊಬ್ಬರ ಬದುಕನ್ನು ರೂಪಿಸುವ ಶಕ್ತಿ ಹೊಂದಿವೆ. ಈ ಹಿನ್ನಲೆಯಲ್ಲಿ ನಮ್ಮೆಲ್ಲರ ಮುಂದೆ ಇಂದಿಗೂ ಶಾಂತವೇರಿ ಗೋಪಾಲಗೌಡರು ಉಳಿದುಕೊಂಡಿದ್ದಾರೆಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ಅವರು ಶನಿವಾರ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಕನ್ನಡ ವಿಭಾಗದ ಸಹಯೋಗದೊಂದಿಗೆ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ವತಿಯಿಂದ ಸಮಾಜವಾದಿ ನೇತಾರ ಶಾಂತವೇರಿ ಗೋಪಾಲಗೌಡರ ಜನ್ಮ ಶತಮಾನೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ರಾಜಕೀಯ ಬೆಳವಣಿಗೆಗಳು ಸಮಾಜವಾದಿ ಸಿದ್ದಾಂತಗಳ ಆಧಾರದ ಮೇಲೆ ರೂಪುಗೊಂಡವು. ಜನರು ಸಹ ಈ ಸಿದ್ದಾಂತಗಳಿಗೆ ಬದ್ಧರಾಗಿದ್ದರು. ಪರಸ್ಪರ ನಡುವೆ ಸಹಕಾರ, ಪ್ರೀತಿ, ಸೌಹಾರ್ದತೆ, ಸಮಾನತೆ ಪರಿಕಲ್ಪನೆ ಮೂಡಿದ್ದವು. ನಂತರದ ದಿನಗಳಲ್ಲಿ ಈ ಸಿದ್ದಾಂತಗಳು ಕಣ್ಮರೆಯಾಗುತ್ತಿದ್ದಂತೆ ಈ ದೇಶದ ಚಿತ್ರಣ ಬದಲಾಗಿದೆ. ಅಸಮಾನತೆ, ಸ್ವಾರ್ಥ, ಜಾತೀಯತೆ, ಧರ್ಮಾಂಧತೆ ಹೆಚ್ಚಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಶಾಂತವೇರಿ ಗೋಪಾಲಗೌಡರು ಇಂದಿಗೂ ನಮ್ಮೆಲ್ಲರ ಮುಂದೆ ಉಳಿದುಕೊಳ್ಳಲು ಈ ಸಿದ್ದಾಂತಗಳು ಕಾರಣವಾಗಿವೆ. ಅನಕ್ಷರಸ್ಥರಿಂದ ಈ ದೇಶ ಹಾಳಾಗುವುದಿಲ್ಲ. ನಮ್ಮ ಹಿಂದಿನ ಸಮಾಜ ಬದುಕಿನ ಮೌಲ್ಯವನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿತ್ತು. ಆದರೆ ಇಂದಿನ ಅಕ್ಷರಸ್ಥರು ಈ ದೇಶಕ್ಕೆ ಕಂಟಕವಾಗುತ್ತಿದ್ದು, ದಾರಿ ತಪ್ಪಿ ಸಾಗುತ್ತಿದ್ದಾರೆ. ನಾವೆಲ್ಲರೂ ಒಳ್ಳೆಯ ಮಾರ್ಗದಲ್ಲಿ ಸಾಗಲು ಸಮಾಜವಾದಿ ಸಿದ್ದಾಂತಗಳು ಅವಶ್ಯಕವಾಗಿವೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ಇಂದಿನ ಸಮಾಜಕ್ಕೆ ಶಾಂತವೇರಿ ಗೋಪಾಲಗೌಡರ ಬದುಕು ಹಾಗು ಸಮಾಜವಾದಿ ಸಿದ್ದಾಂತಗಳು ಅವಶ್ಯಕವಾಗಿವೆ. ಈ ಹಿನ್ನಲೆಯಲ್ಲಿ ಪರಿಷತ್ ವತಿಯಿಂದ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ವಿದ್ಯಾರ್ಥಿಗಳು ಶಾಂತವೇರಿ ಗೋಪಾಲಗೌಡರ ಕುರಿತು ಹೆಚ್ಚಿನ ಮಾಹಿತಿ ಹೊಂದಬೇಕೆಂದರು.
ಕಾಲೇಜಿನ ಪ್ರಾಂಶುಪಾಲ ಡಾ. ಧನಂಜಯ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಬಿ.ಕೆ ಜಗನ್ನಾಥ್, ಹಿರಿಯ ಸಾಹಿತಿ ಜಿ. ಸಂಗಮೇಶ್ವರ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷೆ ಎಂ.ಎಸ್ ಸುಧಾಮಣಿ, ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಕೋಡ್ಲು ಯಜ್ಞಯ್ಯ, ಉಪನ್ಯಾಸಕಿ ಡಾ. ಶೈಲಜಾ ನಿವೃತ್ತ ಮುಖ್ಯ ಶಿಕ್ಷಕ ಸಿ. ಜಯಪ್ಪ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಪನ್ಯಾಸಕ ಎನ್. ರವಿ ಕಾರ್ಯಕ್ರಮ ನಿರೂಪಿಸಿದರು. ಪರಿಷತ್ ಕಾರ್ಯದರ್ಶಿ ಎಚ್. ತಿಮ್ಮಪ್ಪ ಸ್ವಾಗತಿಸಿದರು. ಎಂ.ಈ ಜಗದೀಶ್, ಕಾಲೇಜಿನ ಬೋಧಕ ಹಾಗು ಬೋಧಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
No comments:
Post a Comment