![](https://blogger.googleusercontent.com/img/a/AVvXsEgssB310c2T7_cCwImUqvD-i1JBRkJSck-DZm6GeH8ESyjPgKVMBDp2q1PfFYT0Ue8N9EmrUjS9NGbdFkm8VoMot6eQyQ_axERUneEzMAMIZv31pdNdISVZPoKdIGZK0K4ctUpP6GKN7R6cKtGzjI1UQQuCT05cWqOf4KkVU4hMQoF_7OGXwnS96Y-Kew=w400-h251-rw)
ಭದ್ರಾವತಿ ನಗರದ ಹೃದಯ ಭಾಗದಲ್ಲಿರುವ ಹರಿಯುತ್ತಿರುವ ಭದ್ರಾ ನದಿಯಲ್ಲಿ ಶನಿವಾರ ಮಧ್ಯಾಹ್ನ ನೀರಿನ ಮಟ್ಟ ಏರಿಕೆಯಾಗಿರುವುದು.
ಭದ್ರಾವತಿ, ಆ. ೬: ಭದ್ರಾ ಜಲಾಶಯ ವ್ಯಾಪ್ತಿಯಲ್ಲಿ ಮಳೆ ಹೆಚ್ಚಾಗುತ್ತಿದ್ದು, ಈ ಹಿನ್ನಲೆಯಲ್ಲಿ ಜಲಾಶಯ ಪುನಃ ಭರ್ತಿಯಾಗಿದೆ. ಈ ಹಿನ್ನಲೆಯಲ್ಲಿ ಹೆಚ್ಚುವರಿ ನೀರನ್ನು ನದಿಗೆ ಬಿಡಲಾಗುತ್ತಿದೆ. ಇದರಿಂದಾಗಿ ನಗರದ ಹೃದಯ ಭಾಗದಲ್ಲಿ ಹೊಸ ಸೇತುವೆ ಶನಿವಾರ ಮಧ್ಯಾಹ್ನ ಮುಳುಗಡೆ ಹಂತಕ್ಕೆ ತಲುಪಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗುಲಿದೆ.
ಹವಮಾನ ಇಲಾಖೆ ಮುನ್ಸೂಚನೆಯಂತೆ ತಹಸೀಲ್ದಾರ್ ಆರ್. ಪ್ರದೀಪ್ ಶುಕ್ರವಾರ ತಾಲೂಕಿನಾದಾದ್ಯಂತ ರೆಡ್ ಅಲರ್ಟ್ ಘೋಷಿಸಿದ್ದಾರೆ. ಈ ನಡುವೆ ಜಲಾಶಯದಿಂದ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರ ಬಿಡುವ ಸಾಧ್ಯತೆ ಇದ್ದು, ಒಂದು ನೀರಿನ ಪ್ರಮಾಣ ಹೆಚ್ಚಾದ್ದಲ್ಲಿ ಪ್ರವಾಹ ಭೀತಿ ಎದುರಾಗಲಿದೆ. ನಗರದ ತಗ್ಗು ಪ್ರದೇಶಗಳಾದ ಗುಂಡುರಾವ್ ಶೆಡ್, ಎಕಿನ್ಷಾ ಕಾಲೋನಿ, ಕವಲಗುಂದಿ ವ್ಯಾಪ್ತಿಯಲ್ಲಿ ಮನೆಗಳು ಪುನಃ ಜಲಾವೃತಗೊಳ್ಳಲಿವೆ.
ನಗರಸಭೆ ಮತ್ತು ತಾಲೂಕು ಪಂಚಾಯಿತಿ ಮತ್ತು ತಾಲೂಕು ಆಡಳಿತಗಳು ಪ್ರವಾಹವನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಕಾರ್ಯಾಚರಣೆಗೆ ಮುಂದಾಗಿವೆ. ತಗ್ಗು ಪ್ರದೇಶದ ನಿವಾಸಿಗಳನ್ನು ತಕ್ಷಣ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಬೇಕಾಗಿದೆ.
ಮುಳುಗಿದ ಶ್ರೀ ಸಂಗಮೇಶ್ವರ ದೇವಾಲಯ:
ಹೊಸಸೇತುವೆ ಸಮೀಪ ಭದ್ರಾ ನದಿಯಲ್ಲಿರುವ ಶ್ರೀ ಸಂಗಮೇಶ್ವರ ದೇವಸ್ಥಾನ ಸಂಪೂರ್ಣವಾಗಿ ಮುಳುಗಡೆಯಾಗಿದ್ದು, ಪ್ರತಿ ಬಾರಿ ಮಳೆಗಾಲದಲ್ಲಿ ಈ ದೇವಸ್ಥಾನ ಮುಳುಗಡೆಯಾಗುತ್ತಿದೆ. ವಿಶೇಷ ಎಂದರೆ ಪ್ರತಿ ಬಾರಿ ಮುಳುಗಡೆಯಾದರೂ ಸಹ ದೇವಸ್ಥಾನಕ್ಕೆ ಯಾವುದೇ ರೀತಿ ಹಾನಿಯಾಗುತ್ತಿಲ್ಲ.
ಹೊಸ ಸೇತುವೆ ಮೇಲೆ ಯುವಕರ ಹುಚ್ಚಾಟ :
ಹೊಸೆ ಸೇತುವೆ ಮುಳುಗಡೆಗೆ ಇನ್ನೇನು ಅರ್ಧ ಅಡಿ ಮಾತ್ರ ಬಾಕಿ ಉಳಿದಿದ್ದು, ನದಿಯಲ್ಲಿ ನೀರು ರಭಸದಿಂದ ಉಕ್ಕಿ ಹರಿದಿದೆ. ಈ ನಡುವೆ ಕೆಲವು ಯುವಕರು ಸೇತುವೆಯ ತಡೆಗೋಡೆ ಇಲ್ಲದ ಸ್ಥಳದಲ್ಲಿ ನಿಂತು ಮೊಬೈಲ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುವುದು, ವಿಡಿಯೋ ರೆಕಾರ್ಡ್ ಮಾಡುವುದು ಕಂಡು ಬಂದಿತು. ಸೇತುವೆ ಮುಳುಗಡೆಗೆ ಅರ್ಧ ಅಡಿ ಬಾಕಿ ಇದ್ದರೂ ಸಹ ಸೇತುವೆ ಮೇಲೆ ವಾಹನ ಸಂಚಾರ ಇನ್ನೂ ಬಂದ್ ಮಾಡಿಲ್ಲ. ಎಲ್ಲಾ ವಾಹನಗಳು ಸೇತುವೆ ಮೇಲೆಯೇ ಸಂಚರಿಸುತ್ತಿವೆ. ತಕ್ಷಣ ಸಂಚಾರ ಬಂದ್ ಮಾಡುವ ಮೂಲಕ ಯಾವುದೇ ಅವಘಡಗಳು ನಡೆಯದಂತೆ ಎಚ್ಚರವಹಿಸಬೇಕಾಗಿದೆ.
ಭದ್ರಾವತಿ ನಗರದ ಹೃದಯ ಭಾಗದಲ್ಲಿರುವ ಹರಿಯುತ್ತಿರುವ ಭದ್ರಾ ನದಿಯಲ್ಲಿ ಶನಿವಾರ ಮಧ್ಯಾಹ್ನ ನೀರಿನ ಮಟ್ಟ ಏರಿಕೆಯಾಗಿದ್ದು, ಈ ನಡುವೆ ಕೆಲವು ಯುವಕರು ಸೇತುವೆಯ ತಡೆಗೋಡೆ ಇಲ್ಲದ ಸ್ಥಳದಲ್ಲಿ ನಿಂತು ಮೊಬೈಲ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುವುದು, ವಿಡಿಯೋ ರೆಕಾರ್ಡ್ ಮಾಡುವುದು ಕಂಡು ಬಂದಿತು.