Saturday, September 10, 2022

ಗಮನ ಸೆಳೆಯುತ್ತಿದೆ ಅಯೋಧ್ಯೆ ಶ್ರೀರಾಮನನ್ನು ಹೋಲುವ ವಿನಾಯಕ ಮೂರ್ತಿ

ಸರ್.ಎಂ ವಿಶ್ವೇಶ್ವರಾಯ ಕನ್ನಡ ಯುವಕರ ಸಂಘದಿಂದ ಪ್ರತಿಷ್ಠಾಪನೆ, ಸೆ.೧೧ರಂದು ವಿಸರ್ಜನೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ಹುತ್ತಾಕಾಲೋನಿ, ಜಿಂಕ್‌ಲೈನ್ ಮತ್ತು ಅಪ್ಟೈರ‍್ಸ್ ಬಿಲ್ಡಿಂಗ್ ಒಳಗೊಂಡ ಪ್ರಮುಖ ವೃತ್ತದಲ್ಲಿ ಈ ಬಾರಿ ಅಯೋಧ್ಯೆ ಶ್ರೀರಾಮನನ್ನು ಹೋಲುವ ವಿಶಿಷ್ಟ ವಿನಾಯಕ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು, ಗಣಹೋಮ, ಅನ್ನಸಂತರ್ಪಣೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಜರುಗಿದವು.
    ಭದ್ರಾವತಿ, ಸೆ. ೧೦: ನಗರಸಭೆ ವ್ಯಾಪ್ತಿಯ ಹುತ್ತಾಕಾಲೋನಿ, ಜಿಂಕ್‌ಲೈನ್ ಮತ್ತು ಅಪ್ಟೈರ‍್ಸ್ ಬಿಲ್ಡಿಂಗ್ ಒಳಗೊಂಡ ಪ್ರಮುಖ ವೃತ್ತದಲ್ಲಿ ಈ ಬಾರಿ ಅಯೋಧ್ಯೆ ಶ್ರೀರಾಮನನ್ನು ಹೋಲುವ ವಿಶಿಷ್ಟ ವಿನಾಯಕ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು, ಈ ವಿನಾಯಕ ಮೂರ್ತಿ ವಿಸರ್ಜನೆ ಸೆ.೧೧ರ ಭಾನುವಾರ ಸಂಜೆ ನಡೆಯಲಿದೆ.
    ಸರ್.ಎಂ ವಿಶ್ವೇಶ್ವರಾಯ ಕನ್ನಡ ಯುವಕರ ಸಂಘದ ವತಿಯಿಂದ ೭ನೇ ವರ್ಷದ ಅಂಗವಾಗಿ ಪ್ರತಿಷ್ಠಾಪಿಸಲಾಗಿರುವ ಸುಮಾರು ೬.೫ ಅಡಿ ಎತ್ತರವಿರುವ ಶ್ರೀ ವಿನಾಯಕ ಮೂರ್ತಿ ಬಿಲ್ಲು, ಬಾಣ ಹಿಡಿದ ಶ್ರೀರಾಮನನ್ನು ಹೋಲುತ್ತಿದ್ದು, ಭಕ್ತರನ್ನು ಆಕರ್ಷಿಸುತ್ತಿದೆ.
    ಕಡದಕಟ್ಟೆ ಪಾವರ್ತಿ ಶಾಮಿಯಾನ ಹಾಗು ಇನ್ನಿತರ ದಾನಿಗಳು, ಸ್ಥಳೀಯ ನಿವಾಸಿಗಳ ಸಹಕಾರದೊಂದಿಗೆ ೧೨ ದಿನಗಳ ಕಾಲ ವಿನಾಯಕ ಮೂರ್ತಿಯನ್ನು ವೈಶಾಕ್, ಚಂದ್ರಶೇಖರ್, ವಿನಾಯಕ, ಪ್ರಮೋದ್, ಸುರೇಶ್, ಪ್ರವೀಣ್ ಸೇರಿದಂತೆ ಇನ್ನಿತರರನ್ನೊಳಗೊಂಡ ಯುವಕರ ತಂಡ ಪ್ರತಿಷ್ಠಾಪಿಸುವಲ್ಲಿ ಯಶಸ್ವಿಯಾಗಿದೆ.


    ಪ್ರತಿಷ್ಠಾಪನೆ ಅಂಗವಾಗಿ ಸ್ವಾಮಿ ಮತ್ತು ದ್ವಾರಕನಾಥ ನೇತೃತ್ವದಲ್ಲಿ ಗಣಹೋಮ ಸೇರಿದಂತೆ ಧಾರ್ಮಿಕ ಆಚರಣೆಗಳು, ಮಹಿಳೆಯರಿಂದ ಕೀರ್ತನೆಗಳು, ಭಜನೆ ಹಾಗು ಸಾವಿರಾರು ಮಂದಿಗೆ ಅನ್ನಸಂತರ್ಪಣೆ ಸಹ ನೆರವೇರಿಸುವ ಮೂಲಕ ಯುವಕರ ತಂಡ ಗಮನ ಸೆಳೆದಿದೆ.
ಭಾನುವಾರ ಸಂಜೆ ೪ ಗಂಟೆಗೆ ಕಲಾತಂಡಗಳೊಂದಿಗೆ ವಿಸರ್ಜನಾ ಪೂರ್ವ ಮೆರವಣಿಗೆ ನಡೆಯಲಿದ್ದು, ರಾತ್ರಿ ವಿಶ್ವೇಶ್ವರಯ ನಗರದ ಬಳಿ ಭದ್ರಾ ಕಾಲುವೆಯಲ್ಲಿ ಮೂರ್ತಿ ವಿಸರ್ಜನೆಗೊಳ್ಳಲಿದೆ.


ಭದ್ರಾವತಿ ನಗರಸಭೆ ವ್ಯಾಪ್ತಿಯ ಹುತ್ತಾಕಾಲೋನಿ, ಜಿಂಕ್‌ಲೈನ್ ಮತ್ತು ಅಪ್ಟೈರ‍್ಸ್ ಬಿಲ್ಡಿಂಗ್ ಒಳಗೊಂಡ ಪ್ರಮುಖ ವೃತ್ತದಲ್ಲಿ ಈ ಬಾರಿ ಅಯೋಧ್ಯೆ ಶ್ರೀರಾಮನನ್ನು ಹೋಲುವ ವಿಶಿಷ್ಟ ವಿನಾಯಕ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.




ವಲಯಮಟ್ಟದ ಕ್ರೀಡಾಕೂಟದಲ್ಲಿ ಅರಬಿಳಚಿ ಸರ್ಕಾರಿ ಶಾಲೆಗೆ ಹಲವು ಬಹುಮಾನ

ಭದ್ರಾವತಿ ತಾಲೂಕಿನ ಕಲ್ಲಿಹಾಳ್ ವಲಯಮಟ್ಟದ ಕ್ರೀಡಾಕೂಟದಲ್ಲಿ ಅರಬಿಳಚಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

    ಭದ್ರಾವತಿ, ಸೆ. ೧೦: ತಾಲೂಕಿನ ಕಲ್ಲಿಹಾಳ್ ವಲಯಮಟ್ಟದ ಕ್ರೀಡಾಕೂಟದಲ್ಲಿ ಅರಬಿಳಚಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
    ಕಬಡ್ಡಿ ಸ್ಪರ್ಧೆಯಲ್ಲಿ ಬಾಲಿಕಿಯರು ಪ್ರಥಮ ಸ್ಥಾನ ಬಾಲಕರು ದ್ವಿತೀಯ ಸ್ಥಾನ ಹಾಗು ಅಥ್ಲೆಟಿಕ್ಸ್ ವಿಭಾಗದಲ್ಲಿ ೧ ಪ್ರಥಮ, ೨ ದ್ವಿತೀಯ ಸ್ಥಾನಗಳಲ್ಲಿ ಗೆಲುವು ಸಾಧಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ.
    ವಿಜೇತ ವಿದ್ಯಾರ್ಥಿಗಳಿಗೆ ಶಾಲೆಯ ಮುಖ್ಯ ಶಿಕ್ಷಕರು ಹಾಗು ಶಿಕ್ಷಕ ಮತ್ತು ಸಿಬ್ಬಂದಿ ವರ್ಗದವರು ಹಾಗು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಹಾಗು ಗ್ರಾಮಸ್ಥರು ಅಭಿನಂದಿಸಿದ್ದಾರೆ.

ಮಾರಿ ಸುರೇಶ್ ನಿಧನ

ಮಾರಿ ಸುರೇಶ್
    ಭದ್ರಾವತಿ, ಸೆ. ೧೦: ನಗರದ ಬಿ.ಎಚ್ ರಸ್ತೆ ೫ನೇ ಕ್ರಾಸ್ ನಿವಾಸಿ ಮಾರಿ ಸುರೇಶ್(೫೬) ಶುಕ್ರವಾರ ನಿಧನ ಹೊಂದಿದರು.
    ಸುರೇಶ್ ಸುಮಾರು ೨೦ಕ್ಕೂ ಹೆಚ್ಚು ವರ್ಷಗಳಿಂದ ನಗರದ ದುರ್ಗಾ ನರ್ಸಿಂಗ್ ಹೋಂನಲ್ಲಿ ಕರ್ತವ್ಯ ನಿರ್ವಹಿಸುವ ಮೂಲಕ ಚಿರಪರಿಚಿತರಾಗಿದ್ದರು. ಇವರ ಅಂತ್ಯಕ್ರಿಯೆ ಶನಿವಾರ ಬೈಪಾಸ್ ರಸ್ತೆಯಲ್ಲಿರುವ ಕ್ರೈಸ್ತರ ಸಮಾಧಿಯಲ್ಲಿ ನೆರವೇರಿತು. ಇವರ ನಗರದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಗರ್ಭಿಣಿ ಸ್ತ್ರೀಯರಿಗೆ ಪೌಷ್ಠಿಕಾಂಶಯುಕ್ತ ಆಹಾರ ಅತ್ಯಗತ್ಯ : ನ್ಯಾ. ವಿ.ಎನ್.ಮಿಲನ


ಶಿಶು ಅಭಿವೃದ್ಧಿ ಇಲಾಖೆ,ಆರೋಗ್ಯ ಇಲಾಖೆ, ಕಾನೂನು ಸೇವಾ ಪ್ರಾಧಿಕಾರಿ,ವಕೀಲರ ಸಂಘ ಸಂಯುಕ್ತವಾಗಿ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ಪೋಷಣ್ ಸಪ್ತಾಹ ಉದ್ಘಾಟನೆಯನ್ನು ಸಿವಿಲ್ ಜಡ್ಜ್ ನ್ಯಾಯಾಧೀಶರಾದ ವಿ.ಎನ್.ಮಿಲನ ಉದ್ಘಾಟಿಸಿದರು.
    ಭದ್ರಾವತಿ, ಸೆ. ೧೦: ಗರ್ಭಿಣಿ ಸ್ತ್ರೀಯರು ಉತ್ತಮ ಪೌಷ್ಟಿಕಾಂಶ ಆಹಾರ ಸೇವನೆ ಮಾಡುವ ಮೂಲಕ ಮಕ್ಕಳ ಆರೋಗ್ಯ ರಕ್ಷಣೆಗೆ ಮುಂದಾಗಬೇಕೆಂದು  ನ್ಯಾಯಾಧೀಶರಾದ ವಿ.ಎನ್.ಮಿಲನ ಹೇಳಿದರು.
ಅವರು ಶಿಶು ಅಭಿವೃದ್ಧಿ ಮತ್ತು ಆರೋಗ್ಯ ಇಲಾಖೆ, ಕಾನೂನು ಸೇವಾ ಪ್ರಾಧಿಕಾರ ಹಾಗು ವಕೀಲರ ಸಂಘ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಪೋಷಣ್ ಸಪ್ತಾಹ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
    ಗರ್ಭಿಣಿ ಮಹಿಳೆಯರು ವೈದ್ಯರ ಸಲಹೆ ಜತೆಗೆ ಮನೆಯ ಹಿರಿಯರ ಸಲಹೆ ಪಡೆದು ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಒಳಿತು ಎಂದರು.
    ತಾಲೂಕು ವೈದ್ಯಾಧಿಕಾರಿ ಡಾ. ಅಶೋಕ್ ಮಾತನಾಡಿ, ಹಲವು ಉತ್ಕೃಷ್ಟ ಮಟ್ಟದ ಆಹಾರಗಳು ನಮ್ಮ ಮನೆಯಲ್ಲಿಯೇ, ಸುತ್ತಮುತ್ತಲ ಪರಿಸರದಲ್ಲಿಯೇ ಲಭ್ಯವಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಳ್ಳುವ ಅಂಗನವಾಡಿ ಆಶಾ ಕಾರ್ಯಕರ್ತೆಯರು ಗರ್ಭಿಣಿ ಮಹಿಳೆಯರಿಗೆ ಅರಿವು ಮೂಡಿಸಬೇಕು. ಮಹಿಳೆಯರು ಗರ್ಭಾವಸ್ಥೆಗೆ ಕಾಲಿಟ್ಟ ತಕ್ಷಣ ನೋಂದಾಣಿ ಮಾಡಿಕೊಳ್ಳುವ ಮೂಲಕ ಆರೋಗ್ಯ ಇಲಾಖೆಯಿಂದ ತಾಯಿ ಮತ್ತು ಮಗುವಿಗೆ ಸಿಗುವ ಸೌಲಭ್ಯ ಪಡೆಯಬೇಕೆಂದರು.
    ಸರ್ಕಾರಿ ಅಭಿಯೋಜಕ ತ್ಯಾಗರಾಜ್, ವಕೀಲರ ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ, ಸಿಡಿಪಿಒ ಸಿ. ಸುರೇಶ್, ಪ್ರೇಮಾ ಸೇರಿದಂತೆ ಇತರರು ಉಪಸ್ಥಿತರಿದ್ದರು. ಇದೇ ವೇಳೆ ಅಂಗನವಾಡಿಗಳಿಗೆ ಅಗತ್ಯ ಇರುವ ಆರೋಗ್ಯ ಕಿಟ್ ವಿತರಣೆ ಮಾಡಲಾಯಿತು.  

ಭದ್ರಾವತಿಯಲ್ಲಿ ಬ್ರಹ್ಮಶ್ರೀ ನಾರಾಯಣ ಜಯಂತಿ

ಭದ್ರಾವತಿ:  168ನೇ ಬ್ರಹ್ಮಶ್ರೀ  ನಾರಾಯಣ ಜಯಂತಿ ಕಾರ್ಯಕ್ರಮ ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಉದ್ಘಾಟಿಸಿದರು. 
     ನಗರಸಭೆ ಅಧ್ಯಕ್ಷ ಚನ್ನಪ್ಪ, ಸದಸ್ಯ ರಿಯಾಜ್ ಅಹಮದ್, ಗ್ರೇಡ್ 2 ತಹಸೀಲ್ದಾರ್ ರಂಗಮ್ಮ, ಭಾಗ್ಯಮ್ಮ ಕೆ ಆರ್ ಪುಟ್ಟಸ್ವಾಮಿಗೌಡ, ಕೆ.ಪಿ ಲಿಂಗೇಶ್  ಇನ್ನಿತರರು ಉಪಸ್ಥಿತರಿದ್ದರು. 
  ತಹಸೀಲ್ದಾರ್ ಆರ್. ಪ್ರದೀಪ್ ಅಧ್ಯಕ್ಷತೆ ವಹಿಸಿದ್ದರು. ಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ವಸಂತ ಬಿ ಪೂಜಾರಿ ಪ್ರಾಸ್ತಾವಿಕ ನುಡಿಗಳ್ನಾಡಿದರು. 
       ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಎನ್ ನಟರಾಜ್ ಸ್ವಾಗತಿಸಿ ಕೋಗಲೂರು ತಿಪ್ಪೇಸ್ವಾಮಿ ನಿರೂಪಿಸಿದರು.
      

Friday, September 9, 2022

ನಿವೃತ್ತ ಶಿಕ್ಷಕಿ ಎನ್. ಶ್ಯಾಮಲ ನಿಧನ

ಎನ್. ಶ್ಯಾಮಲ
    ಭದ್ರಾವತಿ, ಸೆ. ೯: ನಿವೃತ್ತ ಶಿಕ್ಷಕಿ ಎನ್. ಶ್ಯಾಮಲ(೭೯) ನಿಧನ ಹೊಂದಿದ್ದು, ಶುಕ್ರವಾರ ಸಂಜೆ ಇವರ ಅಂತ್ಯಕ್ರಿಯೆ ನಡೆಯಿತು.
    ಪತಿ ಹಾಗು ನಾಲ್ವರು ಪುತ್ರಿಯರನ್ನು ಹೊಂದಿದ್ದರು. ಶ್ಯಾಮಲ ಅವರು ತಾಲೂಕಿನ ವಿವಿಧೆಡೆ ಸರ್ಕಾರಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದರು.
    ಇವರ ನಿಧನಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್, ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಂ.ಎಸ್ ಜನಾರ್ಧನ ಅಯ್ಯಂಗಾರ್, ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಮಂಗೋಟೆ ರುದ್ರೇಶ್, ಜಿ. ಆನಂದ್‌ಕುಮಾರ್ ಸೇರಿದಂತೆ ಇನ್ನಿತರ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಡಿ.ಎಸ್ ಸಂಜನಾ ರಾಷ್ಟಮಟ್ಟದ ಹಲವು ಪ್ರವೇಶ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ

ನೀಟ್ ೪೩೧ನೇ ರ‍್ಯಾಂಕ್, ಕೆವಿಪಿವೈ ೨೨೮ನೇ ರ‍್ಯಾಂಕ್, ಸಿಇಟಿ ೧೬೩ನೇ ರ‍್ಯಾಂಕ್

ಡಿ.ಎಸ್ ಸಂಜನಾ

    ಭದ್ರಾವತಿ, ಸೆ. ೯: ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಹಿರಿಯ ಶಸ್ತ್ರ ಚಿಕಿತ್ಸಕ ಡಾ. ಡಿ.ಎಸ್ ಶಿವಪ್ರಕಾಶ್ ಮತ್ತು ಡಿ.ಎಸ್ ಅಶ್ವಿನಿ ದಂಪತಿಯ ಪುತ್ರಿ ಡಿ.ಎಸ್ ಸಂಜನಾ ರಾಷ್ಟಮಟ್ಟದ ಹಲವು ಪ್ರವೇಶ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.
    ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ರಾಷ್ಟ್ರೀಯ ವೈದ್ಯಕೀಯ ಮಂಡಳಿ ನಡೆಸುವ ರಾಷ್ಟ್ರಮಟ್ಟದ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್)ಯಲ್ಲಿ ೬೮೬ ಅಂಕಗಳೊಂದಿಗೆ ರಾಷ್ಟ್ರಮಟ್ಟದಲ್ಲಿ ೪೩೧ನೇ ರ‍್ಯಾಂಕ್ ಹಾಗು ಸಾಮಾನ್ಯ ವರ್ಗದಲ್ಲಿ ೨೯೭ನೇ ರ‍್ಯಾಂಕ್ ಪಡೆದುಕೊಂಡು ತಮ್ಮ ಮುಂದಿನ ಶೈಕ್ಷಣಿಕ ಸಾಧನೆಗೆ ಮುನ್ನುಡಿ ಬರೆದಿದ್ದಾರೆ.
    ಸಂಜನಾ ಅವರು ಮೇ ತಿಂಗಳಿನಲ್ಲಿ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ವತಿಯಿಂದ ನಡೆದ ಕಿಶೋರ್ ವೈಜ್ಞಾನಿಕ್ ಪ್ರೋತ್ಸಾಹ ಯೋಜನೆ(ಕೆವಿಪಿವೈ) ಪರೀಕ್ಷೆಯಲ್ಲಿ ೨೨೮ನೇ ರ‍್ಯಾಂಕ್ ಪಡೆದುಕೊಂಡಿದ್ದರು. ಅಲ್ಲದೆ ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯದ ಮುಖ್ಯ ಪ್ರವೇಶ ಪರೀಕ್ಷೆ (ಜೆಇಇ ಪರೀಕ್ಷೆ)ಯಲ್ಲಿ ಶೇ.೯೯.೨೦ ಅಂಕಗಳೊಂದಿಗೆ ಉತ್ತಮ ಸಾಧನೆ ಮಾಡಿದ್ದಾರೆ.
ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ)ಯಲ್ಲಿ ರಾಜ್ಯಕ್ಕೆ ೧೬೩ನೇ ರ‍್ಯಾಂಕ್ ಪಡೆದುಕೊಂಡಿದ್ದು, ಪಶು ವೈದ್ಯಕೀಯದಲ್ಲಿ ೧೫ನೇ ರ‍್ಯಾಂಕ್, ಬಿಎಸ್‌ಸಿ ಕೃಷಿಯಲ್ಲಿ ೪೬ನೇ ರ‍್ಯಾಂಕ್ ಮತ್ತು ಬಿ.ಫಾರ್ಮ ೧೯ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.
    ಸಂಜನಾ ಪ್ರಾಥಮಿಕ ಶಿಕ್ಷಣವನ್ನು ತೀರ್ಥಹಳ್ಳಿ ಪೂರೈಸಿದ್ದು, ಪ್ರಸ್ತುತ ಮಂಗಳೂರಿನ ಬಿಜೈ ಕಾಪಿಕಾಡ್ ಸಮೀಪದ ಸಿಎಫ್‌ಎಎಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಸಂಜನಾ ಅವರ ಸಾಧನೆಗೆ ನಗರದ ಅನೇಕ ಗಣ್ಯರು ಪ್ರಶಂಸೆ ವ್ಯಕ್ತಪಡಿಸಿ ಮುಂದಿನ ಸಾಧನೆಗೆ ಶುಭ ಹಾರೈಸಿದ್ದಾರೆ.