Sunday, October 9, 2022

ಪ್ರವಾದಿ ಮಹಮದ್ ಪೈಗಂಬರ್‌ರವರ ಜನ್ಮದಿನ ಈದ್ ಮಿಲಾದ್ ಸಂಭ್ರಮದ ಆಚರಣೆ

ಪ್ರವಾದಿ ಮಹಮದ್ ಪೈಗಂಬರ್‌ರವರ ಜನ್ಮದಿನ ಈದ್ ಮಿಲಾದ್ ಅಂಗವಾಗಿ ಭದ್ರಾವತಿ ಸಿ.ಎನ್ ರಸ್ತೆ ಅನ್ವರ್ ಕಾಲೋನಿ ವೃತ್ತದಿಂದ ಮೆರವಣಿಗೆ ಬೃಹತ್ ಮೆರವಣಿಗೆ ಆರಂಭಗೊಂಡಿತು.
    ಭದ್ರಾವತಿ, ಅ. ೯:  ತಾಲೂಕಿನಾದ್ಯಂತ ಮುಸ್ಲಿಂ ಸಮುದಾಯದವರು ಭಾನುವಾರ ಪ್ರವಾದಿ ಮಹಮದ್ ಪೈಗಂಬರ್‌ರವರ ಜನ್ಮದಿನ ಈದ್ ಮಿಲಾದ್ ವಿಜೃಂಭಣೆಯಿಂದ ಆಚರಿಸಿದರು.  
    ಹಬ್ಬದ ಅಂಗವಾಗಿ ನಗರದ ಸಿ.ಎನ್ ರಸ್ತೆ ಅನ್ವರ್ ಕಾಲೋನಿ ವೃತ್ತದಿಂದ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಬೆಳಿಗ್ಗೆ ಆರಂಭಗೊಳ್ಳಬೇಕಿದ್ದ ಮೆರವಣಿಗೆ ಮಧ್ಯಾಹ್ನ ಆರಂಭಗೊಂಡಿತು. ನಗರದ ವಿವಿಧೆಡೆಗಳಿಂದ ಮಕ್ಕಳು, ಯುವಕರು, ವಯೋವೃದ್ಧರು ವಯಸ್ಸಿನ ಬೇಧ-ಭಾವವಿಲ್ಲದೆ ಮೆರವಣಿಗೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.


ಪ್ರವಾದಿ ಮಹಮದ್ ಪೈಗಂಬರ್‌ರವರ ಜನ್ಮದಿನ ಈದ್ ಮಿಲಾದ್ ಅಂಗವಾಗಿ ಭದ್ರಾವತಿ ಸಿ.ಎನ್ ರಸ್ತೆ ಅನ್ವರ್ ಕಾಲೋನಿ ವೃತ್ತದಲ್ಲಿ ಮುಸ್ಲಿಂ ಸಮುದಾಯದ ಮಕ್ಕಳು, ಯುವಕರು, ವಯೋವೃದ್ಧರು ವಯಸ್ಸಿನ ಬೇಧ-ಭಾವವಿಲ್ಲದೆ ಸಂಭ್ರಮಿಸಿದರು.

    ಮೆರವಣಿಗೆ ಆರಂಭಕ್ಕೂ ಮೊದಲು ಶಿವಮೊಗ್ಗ ಸುಬ್ಬಯ್ಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಹಾಗು ಆಶಾಜ್ಯೋತಿ ಸ್ವಯಂ ಪ್ರೇರಿತ ರಕ್ತ ಕೇಂದ್ರದ ವತಿಯಿಂದ ರಕ್ತದಾನ ಶಿಬಿರ, ಬಡ ಮಹಿಳೆಯರಿಗೆ ಸೀರೆ ವಿತರಣೆ, ಮುಸ್ಲಿಂ ಸಮುದಾಯದ ವಿವಿಧ ಸಂಘಟನೆಗಳಿಂದ ರೋಗಿಗಳಿಗೆ, ವಿಕಲಚೇತನರಿಗೆ ಹಾಲು, ಬ್ರೆಡ್, ಹಣ್ಣು ವಿತರಣೆ ಸೇರಿದಂತೆ ಇನ್ನಿತರ ಸೇವಾ ಕಾರ್ಯಗಳು ಜರುಗಿದವು. ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ ತಂಪು ಪಾನೀಯ, ಮಜ್ಜಿಗೆ ವಿತರಣೆ ಸಹ ನಡೆಯಿತು.


ಪ್ರವಾದಿ ಮಹಮದ್ ಪೈಗಂಬರ್‌ರವರ ಜನ್ಮದಿನ ಈದ್ ಮಿಲಾದ್ ಅಂಗವಾಗಿ ಭದ್ರಾವತಿ ಸಿ.ಎನ್ ರಸ್ತೆ ಅನ್ವರ್ ಕಾಲೋನಿ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಬಡ ಮಹಿಳೆಯರಿಗೆ ಸೀರೆ ವಿತರಿಸಿದರು.
    ಶಾಸಕ ಬಿ.ಕೆ ಸಂಗಮೇಶ್ವರ್, ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಪೌರಾಯುಕ್ತ ಮನುಕುಮಾರ್, ಪೊಲೀಸ್ ಉಪಾಧೀಕ್ಷಕ ಜಿತೇಂದ್ರ ದಯಾಮ ಸೇರಿದಂತೆ, ವಿವಿಧ ರಾಜಕೀಯಗಳ ಪಕ್ಷಗಳ, ಸಂಘಟನೆಗಳ ಪ್ರಮುಖರು, ಗಣ್ಯರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಮುಸ್ಲಿಂ ಸಮುದಾಯದವರಿಗೆ ಹಬ್ಬದ ಶುಭ ಕೋರಿದರು.  
    ಮೆರವಣಿಗೆ ರಂಗಪ್ಪ ವೃತ್ತ, ಮಾಧವಚಾರ್ ವೃತ್ತ ಮೂಲಕ ತರೀಕೆರೆ ರಸ್ತೆಯ ಮಹಾತ್ಮಗಾಂಧಿ ವೃತ್ತದವರೆಗೂ ಸಾಗಿ ನಂತರ ಸೈಯದ್ ಸಾದತ್ ದರ್ಗಾ ಮೈದಾನದಲ್ಲಿ ವಿವಿಧ ಸಾಮೂಹಿಕ ಪ್ರಾರ್ಥನೆಯೊಂದಿಗೆ ಅಂತ್ಯಗೊಂಡಿತು. ಮೆರವಣಿಗೆಯಲ್ಲಿ ಮೆಕ್ಕಾ, ಮದೀನಾ ಮಾದರಿ ಸ್ತಬ್ಧ ಚಿತ್ರಗಳು ಗಮನ ಸೆಳೆದವು.


ಪ್ರವಾದಿ ಮಹಮದ್ ಪೈಗಂಬರ್‌ರವರ ಜನ್ಮದಿನ ಈದ್ ಮಿಲಾದ್ ಅಂಗವಾಗಿ ಭದ್ರಾವತಿ ಸಿ.ಎನ್ ರಸ್ತೆ ಅನ್ವರ್ ಕಾಲೋನಿ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿದವರಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ಗುಲಾಬಿ ಹೂ ನೀಡಿ ಅಭಿನಂದಿಸಿದರು.
    ಪೊಲೀಸ್ ಇಲಾಖೆ ವತಿಯಿಂದ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ವಿಕ್ರಮ್ ಅಮಟೆ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಉಪವಿಭಾಗದ ಎಲ್ಲಾ ವೃತ್ತ ನಿರೀಕ್ಷಕರು, ವಿವಿಧ ಠಾಣೆಗಳ ಠಾಣಾಧಿಕಾರಿಗಳ ಜೊತೆಗೆ ಹೆಚ್ಚುವರಿಯಾಗಿ ಅಧಿಕಾರಿಗಳು, ಸಿಬ್ಬಂದಿಗಳನ್ನು ನಿಯೋಜನೆಗೊಳಿಸಲಾಗಿತ್ತು.

ವಾಲ್ಮೀಕಿ ಸಮುದಾಯದವರ ಏಳಿಗೆಗೆ ಬದ್ಧ : ಬಿ.ಕೆ ಸಂಗಮೇಶ್ವರ್

ಭದ್ರಾವತಿಯಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ನಗರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆ ಹಾಗು ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ  ತಹಸೀಲ್ದಾರ್ ಕಛೇರಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಪಾಲ್ಗೊಂಡು ಮಾತನಾಡಿದರು. 
    ಭದ್ರಾವತಿ, ಅ. ೯: ಕ್ಷೇತ್ರದಲ್ಲಿ ವಾಲ್ಮೀಕಿ ಸಮುದಾಯದವರ ಏಳಿಗೆಗೆ ಬದ್ಧವಾಗಿದ್ದು, ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಶಾಸಕ ಬಿ.ಕೆ ಸಂಗಮೇಶ್ವರ್ ಭರವಸೆ ನೀಡಿದರು.
    ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ನಗರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆ ಹಾಗು ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ  ತಹಸೀಲ್ದಾರ್ ಕಛೇರಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ವಾಲ್ಮೀಕಿ ಸಮುದಾಯ ಸೇರಿದಂತೆ ಪರಿಶಿಷ್ಟ ಜಾತಿ ಹಾಗು ಪಂಗಡದ ಮೀಸಲಾತಿ ಹೆಚ್ಚಳ ಮಾಡಿರುವುದಕ್ಕೆ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಕ್ಷೇತ್ರದಲ್ಲಿ ವಾಲ್ಮೀಕಿ ಸಮುದಾಯದವರ ಸಮಸ್ಯೆಗಳು ಸಾಕಷ್ಟಿವೆ. ಅಧಿಕಾರಿಗಳ ಜೊತೆ ಸೇರಿ ಈ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ವಾಲ್ಮೀಕಿ ಸಮುದಾಯ ಭವನ ಪೂರ್ಣಗೊಳ್ಳಲು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
    ವಾಲ್ಮೀಕಿ ಮಹರ್ಷಿ ಅವರ ಆದರ್ಶತನಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡು ಮುನ್ನಡೆದಾಗ ಮಾತ್ರ ಅವರ ಜನ್ಮದಿನ ಆಚರಣೆ ಸಾರ್ಥಕಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಹೆಚ್ಚು ಗಮನ ಹರಿಸಬೇಕೆಂದರು.
    ಕ್ಷೇತ್ರ ಶಿಕ್ಷಣಾಧಿಕಾರಿಗಳು ಎ.ಕೆ ನಾಗೇಂದ್ರಪ್ಪ ಮಾತನಾಡಿ, ಜಗಜ್ಯೋತಿ ಬಸವಣ್ಣ, ಮಹರ್ಷಿ ವಾಲ್ಮೀಕಿ ಹಾಗು ಡಾ. ಬಿ.ಆರ್ ಅಂಬೇಡ್ಕರ್‌ರವರು ಸಮಾಜಕ್ಕೆ ನೀಡಿರುವ ಕೊಡುಗೆ ಅಪಾರವಾಗಿದೆ. ಉತ್ತಮ ಸಮಾಜ ನಿರ್ಮಾಣಕ್ಕೆ ಇವರೆಲ್ಲರ ಬದುಕು, ಆದರ್ಶತನಗಳು, ಚಿಂತನೆಗಳು ಪೂರಕವಾಗಿವೆ ಎಂದರು.  
    ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಪೌರಾಯುಕ್ತ ಮನುಕುಮಾರ್ ಹಾಗು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ. ಸಿದ್ದಬಸಪ್ಪ, ತಹಸೀಲ್ದಾರ್ ಆರ್. ಪ್ರದೀಪ್,  ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಎಸ್. ರಮೇಶ್, ವಾಲ್ಮೀಕಿ ಸಮಾಜದ ಪ್ರಮುಖರಾದ ಬಸವರಾಜ ಬಿ ಆನೇಕೊಪ್ಪ, ಎಂ.ಎಸ್ ಬಸರಾಜಪ್ಪ, ನಗರಸಭಾ ಸದಸ್ಯರಾದ ಬಿ.ಕೆ ಮೋಹನ್, ಜಯಶೀಲ, ರೇಖಾಪ್ರಕಾಶ್, ರಿಯಾಜ್ ಅಹಮದ್, ಎಎಪಿ ಎಚ್ ರವಿಕುಮಾರ್  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ವಾಲ್ಮೀಕಿ ಸಮುದಾಯ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು, ತಾಲೂಕು ಕಛೇರಿ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎನ್. ಗೋಪಾಲಪ್ಪ ನಿರೂಪಿಸಿದರು.

ಸಾಂಸ್ಕೃತಿಕ ವಿಭಿನ್ನತೆ ಕೇರಳ ಸಮಾಜದವರ ವಿಶಿಷ್ಟತೆ : ಬಿ.ವೈ ರಾಘವೇಂದ್ರ

ಭದ್ರಾವತಿ ಬಿ.ಎಚ್ ರಸ್ತೆ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಕೇರಳ ಸಮಾಜಂ ಮತ್ತು ಮಹಿಳಾ ವಿಭಾಗಂ ಹಾಗು ಯೂತ್ ವಿಂಗ್ಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೧೦ನೇ ವರ್ಷದ ಓಣಂ ದಿನಾಚರಣೆ ಸಂಸದ ಬಿ.ವೈ ರಾಘವೇಂದ್ರ, ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ ಇನ್ನಿತರರು ಅಕಿಉದ್ಘಾಟಿಸಿದರು.
    ಭದ್ರಾವತಿ, ಅ. ೯: ಕೇರಳ ಸಮಾಜದವರು ಸಾಂಸ್ಕೃತಿಕವಾಗಿ ವಿಭಿನ್ನತೆಯನ್ನು ಹೊಂದಿದ್ದು, ಆ ಮೂಲಕ ದೇಶದೆಲ್ಲೆಡೆ ಗುರುತಿಸಿಕೊಂಡಿದ್ದಾರೆಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.
    ಅವರು ಭಾನುವಾರ ಬಿ.ಎಚ್ ರಸ್ತೆ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಕೇರಳ ಸಮಾಜಂ ಮತ್ತು ಮಹಿಳಾ ವಿಭಾಗಂ ಹಾಗು ಯೂತ್ ವಿಂಗ್ಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೧೦ನೇ ವರ್ಷದ ಓಣಂ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
    ಓಣಂ ದಿನಾಚರಣೆ ಮೂಲಕ ಅವರ ಸಂಸ್ಕೃತಿ, ಕಲೆ, ವಿಭಿನ್ನತೆಗಳು ಅನಾವರಣಗೊಳಿಸುವ ಮೂಲಕ ವಿಶಿಷ್ಟತೆಯನ್ನು ಕಾಯ್ದುಕೊಂಡು ಬರುತ್ತಿದ್ದಾರೆ. ಸಮಾಜದಲ್ಲಿ ಎಲ್ಲರೊಂದಿಗೆ ವಿಶ್ವಾಸಾರ್ಹತೆ ಕಾಯ್ದುಕೊಂಡಿದ್ದಾರೆ. ಈ ಸಮಾಜಕ್ಕೆ ಅಗತ್ಯವಿರುವ ನಿವೇಶನ ಕೊಡಿಸಲು ಬದ್ಧವಾಗಿರುವುದಾಗಿ ಭರವಸೆ ನೀಡಿದರು.
    ಕಾರ್ಯಕ್ರಮದ ನೇತೃತ್ವವಹಿಸಿದ್ದ ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ಕೇರಳ ಸಮಾಜದವರು ಎಲ್ಲಾ ರಂಗದಲ್ಲೂ ಮುಂಚೂಣಿಯಲ್ಲಿದ್ದಾರೆ. ಛಲ ಹಾಗು ಶ್ರಮದ ಬದುಕಿನಿಂದ ದೇಶದ ಮೂಲೆ ಮೂಲೆಗಳಲ್ಲಿ ಹಾಗು ಪ್ರಪಂಚದಾದ್ಯಂತ ತಮ್ಮ ಅಸ್ತಿತ್ವ ಕೊಂಡಿದ್ದಾರೆಂದು ಪ್ರಶಂಸೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಆಹಾರ ಆರೋಗ್ಯ ಕುರಿತು ಡಾ. ಪ್ರವೀಣ್ ಉಪನ್ಯಾಸ ನೀಡಿದರು. ಅತಿಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಕೇರಳ ಸಮಾಜಂ ಅಧ್ಯಕ್ಷ ಗಂಗಾಧರ ಅಧ್ಯಕ್ಷತೆ ವಹಿಸಿದ್ದರು.
    ಅರಣ್ಯ ಅಭಿವೃದ್ಧಿ ನಿಗಮದ ನಿರ್ದೇಶಕ ಎನ್.ಡಿ ಸತೀಶ್, ಬಿಜೆಪಿ ಮುಖಂಡರಾದ ಎಸ್. ಕುಮಾರ್, ಜಿ. ಧರ್ಮಪ್ರಸಾದ್, ಕೇರಳ ಸಮಾಜಂ ಪ್ರಮುಖರಾದ ಉಡುಪಿ ಸುಗುಣ ಕುಮಾರ್, ಇಬ್ರಾಹಿಂ, ಕೇರಳ ಸಮಾಜಂ ಮಹಿಳಾ ವಿಭಾಗಂ ಅಧ್ಯಕ್ಷೆ ವಿಜಯಲಕ್ಷ್ಮೀ, ಯೂತ್ ವಿಂಗ್ಸ್ ಅಧ್ಯಕ್ಷ ಪ್ರಸನ್ನ ಕುಮಾರ್, ಕೇರಳ ಸಮಾಜಂ ಪ್ರಧಾನ ಕಾರ್ಯದರ್ಶಿ ಸುರೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ತಾಲೂಕಿನ ವಿವಿಧೆಡೆಗಳಿಂದ ಜಾತಿ, ಬೇಧ-ಭಾವವಿಲ್ಲದೆ ಹಿಂದೂ, ಕ್ರೈಸ್ತ, ಮುಸ್ಲಿಂ ಸಮುದಾಯದ ಮಲಯಾಳಿ ಭಾಷಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗಮನ ಸೆಳೆದರು.


ಭದ್ರಾವತಿ ಬಿ.ಎಚ್ ರಸ್ತೆ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಕೇರಳ ಸಮಾಜಂ ಮತ್ತು ಮಹಿಳಾ ವಿಭಾಗಂ ಹಾಗು ಯೂತ್ ವಿಂಗ್ಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೧೦ನೇ ವರ್ಷದ ಓಣಂ ದಿನಾಚರಣೆಯಲ್ಲಿ ಅತಿಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು

Saturday, October 8, 2022

ಛಾಯಾಗ್ರಾಹಕರ ಕುಟುಂಬ ಸಮ್ಮಿಲನ, ೨೦ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ

ಭದ್ರಾವತಿ ತಾಲೂಕು ಛಾಯಾಗ್ರಾಹಕರ ಸಂಘ, ಛಾಯಾಗ್ರಾಹಕರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ವತಿಯಿಂದ ನಗರದ ಜನ್ನಾಪುರ ಮಲ್ಲೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಛಾಯಾಗ್ರಾಹಕರ ಕುಟುಂಬ ಸಮ್ಮಿಲನ ಹಾಗು ೨೦ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಹಿರಿಯ ಛಾಯಾಗ್ರಾಹಕರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಅ. ೮: ತಾಲೂಕು ಛಾಯಾಗ್ರಾಹಕರ ಸಂಘ, ಛಾಯಾಗ್ರಾಹಕರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ವತಿಯಿಂದ ನಗರದ ಜನ್ನಾಪುರ ಮಲ್ಲೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಛಾಯಾಗ್ರಾಹಕರ ಕುಟುಂಬ ಸಮ್ಮಿಲನ ಹಾಗು ೨೦ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
    ಹಿರಿಯ ಛಾಯಾಗ್ರಾಹಕರಿಗೆ ಸನ್ಮಾನ, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ, ಛಾಯಾ ಗ್ರಾಹಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಜರುಗಿದವು.
    ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಎಚ್. ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಪಿ. ಸುರೇಶ್, ಛಾಯಾಗ್ರಾಹಕರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ಅಧ್ಯಕ್ಷ ಮಂಜುನಾಥ್, ಅಭಿನಂದನ್, ಎಚ್.ಎಂ ಮಂಜುನಾಥಗೌಡ, ಮೋಹನ್ ಕುಮಾರ್ ಮತ್ತು ಕಾರ್ಯಕಾರಿ ಮಂಡಳಿ ಪದಾಧಿಕಾರಿಗಳು, ನಿರ್ದೇಶಕರು ಸೇರಿದಂತೆ ಉಪಸ್ಥಿತರಿದ್ದರು.

ನಾಗರತ್ನಮ್ಮ ನಿಧನ

ನಾಗರತ್ನಮ್ಮ
    ಭದ್ರಾವತಿ, ಅ. ೮: ತಾಲೂಕು ವಕೀಲರ ಸಂಘದ ಉಪಾಧ್ಯಕ್ಷ ಡಿ.ಎಂ ವಿಶ್ವನಾಥ್‌ರವರ ಮಾತೃಶ್ರೀ ನಾಗರತ್ನಮ್ಮ(೮೦) ಶನಿವಾರ ನಿಧನ ಹೊಂದಿದರು. 
ತಾಲೂಕಿನ ದೊಡ್ಡಗೊಪ್ಪೇನಹಳ್ಳಿ ಗ್ರಾಮದ ನಿವಾಸಿಯಾದ ದಿವಂಗತ ಪಟೇಲ್ ಮಹೇಶ್ವರಪ್ಪನವರ ಧರ್ಮಪತ್ನಿಯಾದ ನಾಗರತ್ನಮ್ಮ ಅವರಿಗೆ ಡಿ.ಎಂ ವಿಶ್ವನಾಥ್ ಸೇರಿದಂತೆ ಇಬ್ಬರು ಗಂಡು ಹಾಗು ಇಬ್ಬರು ಹೆಣ್ಣು ಮಕ್ಕಳಿದ್ದರು. ಇವರ ಅಂತ್ಯಕ್ರಿಯೆ ಅ.೯ರ ಭಾನುವಾರ ಮಧ್ಯಾಹ್ನ ಗ್ರಾಮದಲ್ಲಿರುವ ಇವರ ತೋಟದಲ್ಲಿ ನಡೆಯಲಿದೆ. 
ತಾಲೂಕು ವಕೀಲರ ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು, ಗ್ರಾಮದ ಮುಖಂಡರು ಸೇರಿದಂತೆ ಗಣ್ಯರು ನಾಗರತ್ನಮ್ಮ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. 

ಅ.೯ರಂದು ೧೦ನೇ ವರ್ಷದ ಓಣಂ ದಿನಾಚರಣೆ

    ಭದ್ರಾವತಿ, ಅ. ೮ : ನಗರದ ಕೇರಳ ಸಮಾಜಂ ಮತ್ತು ಮಹಿಳಾ ವಿಭಾಗಂ ಹಾಗು ಯೂತ್ ವಿಂಗ್ಸ್ ವತಿಯಿಂದ ಅ.೯ರ ಭಾನುವಾರ ಬೆಳಿಗ್ಗೆ ೧೦ ಗಂಟೆಗೆ ಬಿ.ಎಚ್ ರಸ್ತೆ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ೧೦ನೇ ವರ್ಷದ ಓಣಂ ದಿನಾಚರಣೆ ಹಮ್ಮಿಕೊಳ್ಳಲಾಗಿದೆ.
    ಕೇರಳ ಸಮಾಜಂ ವತಿಯಿಂದ ಪ್ರತಿ ವರ್ಷ ಓಣಂ ಆಚರಣೆ ವಿಜೃಂಭಣೆಯಿಂದ ನಡೆಯುತ್ತಿದ್ದು, ಜನಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಗಣ್ಯರು ಉಪಸ್ಥಿತರಿರುವರು. ಕೇರಳ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಪ್ರಧಾನ ಕಾರ್ಯದಶಿಶ ಜಿ. ಸುರೇಶ್ ಕೋರಿದ್ದಾರೆ.  

ಅ.೯ರಂದು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ

    ಭದ್ರಾವತಿ, ಅ. ೮: ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ನಗರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆ ಹಾಗು ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಅ. ೯ರಂದು ಬೆಳಿಗ್ಗೆ ೧೦.೩೦ ತಹಸೀಲ್ದಾರ್ ಕಛೇರಿ ಸಭಾಂಗಣದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಹಮ್ಮಿಕೊಳ್ಳಲಾಗಿದೆ.
    ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಲಿದ್ದು, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಬಿ ಅಶೋಕನಾಯ್ಕ ಉದ್ಘಾಟಿಸುವರು. ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್ ಹಾಗು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ. ಸಿದ್ದಬಸಪ್ಪ, ತಹಸೀಲ್ದಾರ್ ಆರ್. ಪ್ರದೀಪ್, ಪೊಲೀಸ್ ಉಪಾಧೀಕ್ಷಕ ಜಿತೇಂದ್ರ ದಯಾಮ, ಪೌರಾಯುಕ್ತ ಮನುಕುಮಾರ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಎಸ್. ರಮೇಶ್ ಮತ್ತು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎನ್. ಗೋಪಾಲಪ್ಪ  ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಉಪನ್ಯಾಸ ನೀಡಲಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ.